Tuesday, May 29, 2007

Gulab Jamun / ಗುಲಾಬ್ ಜಾಮೂನು:

"ಜಾಮೂನು" ಎಂದರೆ ಎಲ್ಲರಿಗೂ ಇಷ್ಟವಾಗುವ ಸಿಹಿ. ಏನೇ ಪಾರ್ಟಿಗಳನ್ನು ಮಾಡುವಾಗ ಏನು ಸ್ವೀಟ್ ಮಾಡೋದು ಅಂತ ಯೋಚಿಸುವಾಗ ಮೊದಲು ತಲೆಗೆ ಹೊಳೆಯುವುದು ಜಾಮೂನು. ಹೀಗೆ ಇದಕ್ಕೆ ಸಿಹಿಗಳಲ್ಲೆ ಮೊದಲ ಸ್ಥಾನ ಎನಿಸುತ್ತೆ. ಜಾಮೂನುಗಳನ್ನು ವಿವಿಧ ರೀತಿಯಾಗಿ ತಯಾರಿಸುತ್ತೇವೆ. ರೆಡಿಮೇಡ್ ಕಂಪನಿಗಳಂತೂ ಸುಮಾರು ಬಂದಿದೆ ಈಗ. ನಾವು ಚಿಕ್ಕವರಿದ್ದಾಗ ಒಂದೆರಡು ಮಾತ್ರ ಹೆಸರಾಂತ ಬ್ರಾಂಡ್ ಮಾತ್ರ ಇತ್ತು. ಆಗ ನಮ್ಮಮ್ಮ ಮಾಡುತ್ತಿದ್ದ ಜಾಮೂನ್ ಈಗಲೂ ನಾನು ಜಾಮೂನು ತಯಾರಿಸುವಾಗಲೆಲ್ಲ ನೆನಪು ಬರುತ್ತದೆ. ಅದೊಂಥರ ಚೆನ್ನ ಆಗ. ಜಾಮೂನು ನೆನೆದ ತಕ್ಷಣ ತಿನ್ನುವ ಆಸೆ, ಕಾಯುತ್ತಿದ್ದೆವು. ಇವರ ಮನೇಲಿ ಜಾಮೂನು ಇವತ್ತು ಅಂತ ಗೊತ್ತಾಗುತ್ತಿತ್ತು ಆಗ. ಅಷ್ಟು ಜಾಮೂನಿನ ಸುವಾಸನೆ ಮನೆಯೆಲ್ಲಾ ಹರಡಿರುತ್ತಿತ್ತು. ಅಮ್ಮ ರಾತ್ರಿ ಜಾಮೂನು ಮಾಡಿಟ್ಟರೆ, ಬೆಳಗ್ಗೆ ಯಾವಾಗಾಗುತ್ತೋ ಅಂತ ಆಸೆ.ಅಮ್ಮ ಬೌಲ್ ನಲ್ಲಿ ಜಾಮೂನುಗಳನ್ನು ಹಾಕಿ ಕೊಟ್ಟಾಗ ಅದನ್ನು ತಿನ್ನುವಾಗಿನ ಖುಷಿನೇ ಒಂದು ತರಹ, ಅದೆಲ್ಲ ಈಗ ಎಲ್ಲ ನೆನಪು ಅಷ್ಟೇ. ಈಗ ಇಲ್ಲಿ ಜಾಮೂನು ಪ್ಯಾಕೆಟ್ ತಂದು ತಯಾರಿಸುವ ಬದಲು ಮನೆಯಲ್ಲಿಯೇ ಜಾಮೂನು ಮಾಡುವ ಬಗೆ ಇದೆ. ನೀವು ತಯಾರಿಸಿ.


ಗುಲಾಬ್ ಜಾಮೂನು:

ಬೇಕಾಗುವ ಸಾಮಗ್ರಿಗಳು:

ಮೈದಾಹಿಟ್ಟು - ಮೂರು ದೊಡ್ಡ ಚಮಚ
ಕೋವಾ - ಒಂದು ಬಟ್ಟಲು
ಮಿಲ್ಕ್ ಪೌಡರ್ - ಎರಡು ದೊಡ್ಡ ಚಮಚ
ಚಿಟಿಕೆ ಅಡಿಗೆ ಸೋಡ

ಸಕ್ಕರೆ ಪಾಕಕ್ಕೆ:
ಸಕ್ಕರೆ - ಐದು ಕಪ್
ಏಲಕ್ಕಿ ಪುಡಿ
ಗುಲಾಬಿ ನೀರು - ಅರ್ಧ ಚಮಚ
ಕೇಸರಿ ದಳಗಳು ಸ್ವಲ್ಪ

ಎಣ್ಣೆ ಅಥವಾ ತುಪ್ಪ ಕರಿಯಲು

ಸಕ್ಕರೆ ಪಾಕ ತಯಾರಿಸುವ ವಿಧಾನ:
ಸಕ್ಕರೆಯನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ, ಎರಡು ಕಪ್ ನೀರು ಹಾಕಿ,ಚೆನ್ನಾಗಿ ಕುದಿಸಿ,ಅದು ಸಕ್ಕರೆ ಕರಗಿ ಎಳೆಪಾಕ ಬರುವವರೆಗೂ ಕುದಿಸಿ ಅಥವಾ ಹತ್ತು ನಿಮಿಷ ಕುದಿಸಿ. ತುಂಬಾ ಗಟ್ಟಿಯಾಗಿರಬಾರದು ಪಾಕ. ಸರಿಯಾಗಿ ನೋಡಿಕೊಂಡು ಪಾಕ ಇಳಿಸಿ. ಏಲಕ್ಕಿಪುಡಿ,ಮಿಕ್ಕಿರುವ ಕೇಸರಿ ಮತ್ತು ಗುಲಾಬಿ ನೀರು ಹಾಕಿ ಪಾಕಕ್ಕೆ ಹಾಕಿ ಬೆರೆಸಿಡಿ.ಸಕ್ಕರೆಪಾಕ ತಯಾರಾಯಿತು,ಇದು ಸ್ವಲ್ಪ ಬಿಸಿಯಾಗಿಯೇ ಇರಲಿ.

• ಮಿಲ್ಕ್ ಪೌಡರ್ ಮತ್ತು ಕೋವಾ ಎರಡನ್ನು ಸೇರಿಸಿ,ಚೆನ್ನಾಗಿ ಮಸೆಯಿರಿ/ ಕೈನಲ್ಲಿ ನಾದಿಕೊಳ್ಳಿ. ಇದಕ್ಕೆ ಮೈದಾಹಿಟ್ಟು,ಚೂರು ಕೇಸರಿ ದಳಗಳು, ಸೋಡಾ ಮತ್ತು ಚಿಟಿಕೆ ಏಲಕ್ಕಿ ಪುಡಿ ಹಾಕಿ. ಚೆನ್ನಾಗಿ ಬೆರೆಸಿ,ಸ್ವಲ್ಪ ನೀರು ಹಾಕಿ ಮೃದುವಾಗಿ ಹಿಟ್ಟಿನಂತೆ ಕಲೆಸಿಕೊಳ್ಳಿ. ಇದನ್ನು ತುಂಬಾ ಗಟ್ಟಿಯಾಗಿ ನಾದಿಕೊಳ್ಳಬೇಡಿ. ಸರಿಯಾಗಿ ಗಂಟಿಲ್ಲದಂತೆ ಕಲೆಸಿ,ಹತ್ತರಿಂದ-ಹದಿನೈದು ನಿಮಿಷ ನೆನೆಯಲು ಬಿಡಿ.
• ನಂತರ ಕಲೆಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಗೋಲಿ ಗಾತ್ರದಲ್ಲಿ ಉಂಡೆ ಮಾಡಿಕೊಂಡು,ಅದನ್ನು ಅಂಗೈನಲ್ಲಿ ಇಟ್ಟುಕೊಂಡು ಮೆತ್ತಗೆ ಅದುಮಿ ಉಂಡೆ ಮಾಡಿಕೊಳ್ಳಿ.


• ಈ ರೀತಿ ಮಾಡಿಕೊಂಡ ಉಂಡೆಗಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ಕರಿಯಿರಿ. ತುಂಬಾ ಎಚ್ಚರಿಕೆಯಿಂದ ಕರಿಯಬೇಕು. ಎಣ್ಣೆ ತುಂಬಾ ಕಾಯಿಸಿದರೆ / ಕಾಯಿಸಿದೇ ಇದ್ದರೆ ಕೂಡ ಜಾಮೂನು ಚೆನ್ನಾಗಿ ಬರುವುದಿಲ್ಲ. ಆದ್ದರಿಂದ ಎಣ್ಣೆಯನ್ನು ಕಾಯಿಸಿ, ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಇಟ್ಟು ಅದರಲ್ಲಿ ಉಂಡೆಗಳನ್ನು ಅದರಲ್ಲಿ ಹಾಕಿ,ತೆಳು ಕಂದು ಬಣ್ಣ ಅಥವಾ ಹೊಂಬಣ್ಣ ಬರುವವರೆಗೂ ಕರಿಯಿರಿ.
• ತಕ್ಷಣವೇ ಕರಿದಿರುವ ಜಾಮೂನುಗಳನ್ನು ಮೊದಲೇ ತಯಾರಿಸಿ ಇಟ್ಟುಕೊಂಡಿರುವ ಬಿಸಿ ಸಕ್ಕರೆ ಪಾಕದಲ್ಲಿ ಹಾಕಿಡಿ. ಅದನ್ನು ಕಲಕಬೇಡಿ. ಸುಮಾರು ಒಂದು ಗಂಟೆಯಾದರೂ ನೆನೆಯಲು ಬಿಡಿ. ಅಥವಾ ರಾತ್ರಿ ಮಾಡಿಟ್ಟು ಮಾರನೇದಿನ ಉಪಯೋಗಿಸಿದರೆ ಇನ್ನೂ ಚೆನ್ನಾಗಿರುತ್ತದೆ.

* ಮಕ್ಕಳಿಂದ-ಮುದುಕರವರೆಗೆ ಇಷ್ಟವಾಗುವ ಜಾಮೂನು ತಯಾರಾಗುತ್ತದೆ.
• ಜಾಮೂನುಗಳನ್ನು ಸಕ್ಕರೆ ಪಾಕ ಸ್ವಲ್ಪ ಹಾಕಿ ತಿನ್ನಲು ನೀಡಿ,ಈ ಜಾಮೂನು ಅನ್ನು ಬಿಸಿ ಅಥವ ತಣ್ಣಗೆ ಕೂಡ ಸೇವಿಸಬಹುದು.
• ಇನ್ನೂ ಹೆಚ್ಚಿನ ರುಚಿ ಬೇಕೆನಿಸಿದವರೂ ಜಾಮೂನು ಜೊತೆ ಐಸ್ ಕ್ರೀಮ್ ಅಥವಾ ರೆಡಿಮೇಡ್ ಕ್ರೀಮ್ ಸಹ ಹಾಕಿ ಕೊಡಬಹುದು

No comments:

Popular Posts