Showing posts with label Bread Dishes / ಬ್ರೆಡ್. Show all posts
Showing posts with label Bread Dishes / ಬ್ರೆಡ್. Show all posts

Thursday, July 30, 2009

Sabbakki Shyavige Payasa /ಸಬ್ಬಕ್ಕಿ-ಶ್ಯಾವಿಗೆ ಪಾಯಸ

ಸಬ್ಬಕ್ಕಿ-ಶ್ಯಾವಿಗೆ ಪಾಯಸ:

ಸಾಮಗ್ರಿಗಳು:

ಸಬ್ಬಕ್ಕಿ - ಒಂದು ಕಪ್
ಶ್ಯಾವಿಗೆ - ಅರ್ಧ ಕಪ್
ಹಾಲು - ಒಂದು ಕಪ್
ಸಕ್ಕರೆ ಅಥವ ಬೆಲ್ಲ ರುಚಿಗೆ
ದ್ರಾಕ್ಷಿ ಮತ್ತು ಗೋಡಂಬಿ
ತುಪ್ಪ
ಏಲಕ್ಕಿ ಪುಡಿ

ತಯಾರಿಸುವ ರೀತಿ:

ಒಂದೆರಡು ಚಮಚ ತುಪ್ಪವನ್ನು ಕಾಯಿಸಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ. ಅದೇ ತುಪ್ಪದಲ್ಲಿ ಶ್ಯಾವಿಗೆಯನ್ನು ಹಾಕಿ ಚೆನ್ನಾಗಿ ಹುರಿದಿಡಿ. ಅದಕ್ಕೆ ಸಬ್ಬಕ್ಕಿಯನ್ನು ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಅರ್ಧ ಬೆಂದಿದೆ ಎನಿಸಿದಾಗ ಹಾಲು ಮತ್ತು ಸಕ್ಕರೆ ಸೇರಿಸಿ ಕುದಿಸಿ. ಸಬ್ಬಕ್ಕಿ ಮತ್ತು ಶ್ಯಾವಿಗೆ ಎರಡು ಚೆನ್ನಾಗಿ ಬೇಯಿಸಿ, ಅದಕ್ಕೆ ಏಲಕ್ಕಿ ಪುಡಿ,ಮತ್ತೆ ಒಂದೆರಡು ಚಮಚ ತುಪ್ಪ ಸೇರಿಸಿ.ಬೆರೆಸಿ. ಸಬ್ಬಕ್ಕಿಯು ದುಂಡಾಗಿ ಆಗಿ ಬೆಂದಿದೆ ಎನಿಸಿದ ಮೇಲೆ ಇಳಿಸಿ. ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ. ಕೇಸರಿ ದಳಗಳನ್ನು ಹಾಲಿನಲ್ಲಿ ನೆನೆಸಿ ಹಾಕಬಹುದು ಬೇಕಾದರೆ. ಅಥವ ನಿಮಗೆ ಇಷ್ಟವಾದ ಎಸೆನ್ಸ್ ಹಾಕಿಕೊಳ್ಳಬಹುದು. ಬರೀ ಶ್ಯಾವಿಗೆ ಪಾಯಸ ತಯಾರಿಸುವ ಬದಲು,ಈ ತರಹ ಬೇರೆ ರೀತಿಯಲ್ಲಿ ತಯಾರಿಸಬಹುದು. ಸಬ್ಬಕ್ಕಿ-ಶ್ಯಾವಿಗೆ ಪಾಯಸ ತಯಾರ್.
* ಸಬ್ಬಕ್ಕಿ ಮತ್ತು ಶ್ಯಾವಿಗೆಯನ್ನು ಮೊದಲೇ ಬೇಯಿಸಿ ಕೂಡ ಇಟ್ಟುಕೊಳ್ಳಬಹುದು.
* ಸಬ್ಬಕ್ಕಿಯಲ್ಲಿ ಕೆಲವು ತರ ಇದೆ. ನೀವು ಉಪಯೋಗಿಸುವ ಸಬ್ಬಕ್ಕಿ ಯಾವುದೆಂದು ತಿಳಿದು,ಅದಕ್ಕೆ ಯಾವ ರೀತಿ ತಯಾರಿಸಬೇಕೋ. ಆ ರೀತಿ ತಯಾರಿಸಿ.ಸಬ್ಬಕ್ಕಿ ಬೇಗ ಬೇಯುತ್ತದೆ. ಬೆಂದ ಮೇಲೆ ನೋಡಲು ಚೆನ್ನಾಗಿ ಕಾಣುತ್ತದೆ.

Saturday, May 2, 2009

Mint / Pudina Chutney - ಪುದೀನ ಸೊಪ್ಪಿನ ಚಟ್ನಿ:

ಪುದೀನ ಸೊಪ್ಪಿನ ಚಟ್ನಿ:

ಸಾಮಗ್ರಿಗಳು:

ಪುದೀನ ಸೊಪ್ಪು
ಹಸಿಮೆಣಸಿನಕಾಯಿ
ಕೊತ್ತುಂಬರಿಸೊಪ್ಪು
ಉಪ್ಪು
ವಿನಿಗರ್ ಒಂದು ಚಮಚ

ವಿಧಾನ:


ಪುದೀನ,ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ವಿನಿಗರ್ ಮತ್ತು ಉಪ್ಪು ರುಬ್ಬಿಕೊಳ್ಳಿ.
ಇದನ್ನು ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಫ್ರಿಡ್ಜ್ ನಲ್ಲಿ ಕೆಲವು ದಿನ ಹಾಳಾಗದೆ ಇರುತ್ತದೆ.

Tuesday, February 10, 2009

Bread Uppittu-ಬ್ರೆಡ್ ಉಪ್ಪಿಟ್ಟು:

ಬ್ರೆಡ್ ಉಪ್ಪಿಟ್ಟು:

ಸಾಮಗ್ರಿಗಳು:
ಬ್ರೆಡ್
ಈರುಳ್ಳಿ
ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು
ಉದ್ದಿನಬೇಳೆ, ಕಡ್ಲೆಬೇಳೆ
ಟಮೋಟ ಹಣ್ಣು
ಉಪ್ಪು ರುಚಿಗೆ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ

ವಿಧಾನ:
ಬ್ರೆಡ್ ಅನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ.
ಪಾತ್ರೆಗೆ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಕರಿಬೇವು ಹಾಕಿ,ನಂತರ ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ, ಮೂರ್ನಾಲ್ಕು ನಿಮಿಷ ಬಾಡಿಸಿ. ಈರುಳ್ಳಿಯ ಬಣ್ಣ ಸ್ವಲ್ಪ ಬದಲಾದ ನಂತರ ಹೆಚ್ಚಿದ ಟಮೋಟ ಹಾಕಿ, ಒಂದೆರಡು ನಿಮಿಷ ಹುರಿದು,ಉಪ್ಪು,ನಿಂಬೆರಸ, ಸ್ವಲ್ಪ ಕೊತ್ತುಂಬರಿಸೊಪ್ಪು ಹಾಕಿ,ಜೊತೆಯಲ್ಲಿಯೇ ಬ್ರೆಡ್ ಚೂರುಗಳನ್ನು ಹಾಕಿ,ಎಲ್ಲಾ ಒಗ್ಗರಣೆ ಬೆರೆಯುವಂತೆ ಸರಿಯಾಗಿ ಬೆರೆಸಿ. ಕಾಯಿತುರಿ ಸಹ ಬೆರೆಸಿ. ಇಳಿಸಿ.ಇದು ಬ್ರೆಡ್ ಇದ್ದ ತಕ್ಷಣ ತಯಾರಿಸಬಹುದು. ಬೇಗ ಆಗುತ್ತದೆ ಮತ್ತು ಸರಳವಾಗಿಯೂ ಇದೆ. ಬ್ರೆಡ್ ಉಪ್ಪಿಟ್ಟು ತಯಾರಿಸದ ತಕ್ಷಣ ತಿನ್ನಬೇಕು. ಇಲ್ಲ ಅಂದರೆ ಒಂಥರ ಮೆತ್ತಗೆ ಆಗುತ್ತದೆ ಬೇಗ. ಆಗ ತಿನ್ನಲು ರುಚಿ ಅಷ್ಟಾಗಿ ಚೆನ್ನಾಗಿರುವುದಿಲ್ಲ.

Wednesday, January 14, 2009

Dosa/Masala Dose - ದೋಸೆ ಮತ್ತು ಮಸಾಲೆದೋಸೆ


ದೋಸೆ:

ಸಾಮಗ್ರಿಗಳು:
ಅಕ್ಕಿ - ನಾಲ್ಕು ಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ

ವಿಧಾನ;

ಅಕ್ಕಿಯನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ,ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ /ಎಣ್ಣೆ ಹಾಕಿ ಸವರಿ,ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ,ಬೇಯಿಸಿ ತೆಗೆಯಿರಿ. ಇದೇ ರೀತಿ ಎಷ್ಟು ಬೇಕೋ ತಯಾರಿಸಿಕೊಳ್ಳಿ. ಈ ದೋಸೆಗಳ ಜೊತೆ ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯನ್ನು ಕೊಡಿ.ದೋಸೆಯೊಂದಿಗೆ ಸಾಗು ಕೂಡ ತುಂಬಾ ಚೆನ್ನಾಗಿರುತ್ತದೆ.

ಮಸಾಲೆದೋಸೆ:

ತವಾ ಮೇಲೆ ದೋಸೆಯನ್ನು ಮಾಡಿ, ಸ್ವಲ್ಪ ತುಪ್ಪ ಹಾಕಿ ಬೇಯಿಸಿ.ಅದರ ಮಧ್ಯ ಭಾಗದಲ್ಲಿ ಆಲೂಗೆಡ್ಡೆ ಪಲ್ಯವನ್ನು ತುಂಬಿ,ಬೇಕಾದ ಆಕಾರಕ್ಕೆ ಮಡಿಸಿ, ಮೇಲೆ ಬೆಣ್ಣೆಯನ್ನು ಹಾಕಿ ಕೊಡಿ.
* ದೋಸೆಗೆ ಮೊದಲು ಚಟ್ನಿಯನ್ನು ಸವರಿ ನಂತರ ಪಲ್ಯವನ್ನು ತುಂಬಬಹುದು.
* ಖಾರಚಟ್ನಿ ತಯಾರಿಸಿ ಕೂಡ ಮೊದಲು ಅದನ್ನು ಹಚ್ಚಿ, ಪಲ್ಯವನ್ನು ತುಂಬಿ ಮಸಾಲೆ ದೋಸೆ ತಯಾರಿಸಿ.

****************************************

ಖಾರಚಟ್ನಿ/ಕೆಂಪು ಚಟ್ನಿ:

ಕೆಂಪುಮೆಣಸಿನಕಾಯಿ / ಒಣಮೆಣಸಿನಕಾಯಿ
ಉಪ್ಪು
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ ಸ್ವಲ್ಪ

ವಿಧಾನ:

ಇವೆಲ್ಲವನ್ನು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿ, ಕೆಂಪು ಚಟ್ನಿ ಅಥವ ಖಾರ ಚಟ್ನಿ ತಯಾರಾಗುತ್ತದೆ.

*****************************************
ಆಲೂಗೆಡ್ಡೆ ಪಲ್ಯ:

ಸಾಮಗ್ರಿಗಳು:
ಆಲೂಗೆಡ್ಡೆ
ಎಣ್ಣೆ
ಸಾಸಿವೆ
ಜೀರಿಗೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:
ಮೊದಲಿಗೆ ಆಲೂಗೆಡ್ಡೆಯನ್ನು ಸಿಪ್ಪೆ ಸಮೇತ ಬೇಯಿಸಿಕೊಳ್ಳಿ,ನಂತರ ತಣ್ಣಗಾದ ಮೇಲೆ ಸಿಪ್ಪೆ ತೆಗೆದು,ಪುಡಿ ಅಂದರೆ ಅದನ್ನು ಕೈನಲ್ಲಿಯೇ ಅದುಮಿದರೆ ಸಾಕು ಪುಡಿಯಾಗುತ್ತದೆ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿದ ಸಾಸಿವೆ,ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಹಾಕಿ, ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಮತ್ತು ಅರಿಶಿನ ಹಾಕಿ,ಪುಡಿ ಮಾಡಿದ ಆಲೂಗೆಡ್ಡೆಯನ್ನು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಅದನ್ನು ಬೆರೆಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ದೋಸೆಗೆ,ಚಪಾತಿಗೆ ಮತ್ತು ಪೂರಿಗೆ ಜೊತೆಯಾಗಿ ತಿನ್ನಲು ಉಪಯೋಗಿಸಬಹುದು.

***************************************

ಕಾಯಿಚಟ್ನಿ:

ಸಾಮಗ್ರಿಗಳು;
ಕಾಯಿತುರಿ
ಕಡ್ಲೆ
ಹಸಿಮೆಣಸಿನಕಾಯಿ
ಹುಣಸೇಹಣ್ಣು ಚೂರು
ಹಸಿಶುಂಠಿ
ಉಪ್ಪು
ಕೊತ್ತುಂಬರಿಸೊಪ್ಪು
ಪುದೀನ
ವಿಧಾನ:
ಚಟ್ನಿಗೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ನಂತರ ತೆಳ್ಳಗೆ ಬೇಕಾದರೆ ಮತ್ತೆ ಸ್ವಲ್ಪ ನೀರು ಸೇರಿಸ ಬಹುದು. ಚಟ್ನಿ ತಯಾರಾಗುತ್ತದೆ. ಬೇಕೆನಿಸಿದರೆ, ಸಾಸಿವೆ, ಕರಿಬೇವು ಮತ್ತು ಉದ್ದಿನಬೇಳೆಯ ಒಗ್ಗರಣೆ ಕೊಡಬಹುದು.

Tuesday, December 2, 2008

Avalakki / Poha Uppittu -ಅವಲಕ್ಕಿ ಉಪ್ಪಿಟ್ಟು /ಅವಲಕ್ಕಿ:

ಅವಲಕ್ಕಿ ಉಪ್ಪಿಟ್ಟು /ಅವಲಕ್ಕಿ:

ಬೇಕಾಗುವ ಸಾಮಗ್ರಿಗಳು;
ಅವಲಕ್ಕಿ - ಅರ್ಧ ಕೆಜಿ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ ರುಚಿಗೆ
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ


ತಯಾರಿಸುವ ವಿಧಾನ:
ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು,ಒಳ್ಳೆಯ ನೀರಿನಲ್ಲಿ ಎರಡು ನಿಮಿಷ ನೆನೆಸಿ,ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು ,ಕಡ್ಲೆಬೇಳೆ, ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಅವಲಕ್ಕಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ನಿಂಬೆರಸ ಹಾಕಿ.ಇದೆಲ್ಲವನ್ನು ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಚೆನ್ನಾಗಿ ಕಲೆಸಿಡಿ. ಒಲೆಯಿಂದ ಇಳಿಸಿ. ಬಿಸಿಬಿಸಿ ಅವಲಕ್ಕಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಇದು ತುಂಬಾ ಹಗುರವಾದ ತಿಂಡಿ. ಬೇಸಿಗೆಯಲ್ಲಿ ಒಳ್ಳೆಯದು.
* ಅವಲಕ್ಕಿಯಲ್ಲಿ ವಿವಿಧ ಬಗೆ ಇದೆ. ತೆಳು ಅವಲಕ್ಕಿ,ಗಟ್ಟಿ ಅವಲಕ್ಕಿ,ದಪ್ಪ ಮತ್ತು ಮೀಡೀಯಂ ಅಂತ,ಈ ತಿಂಡಿಗೆ ಗಟ್ಟಿ ಅವಲಕ್ಕಿಯಾದರೆ ಚೆನ್ನಾಗಿರುತ್ತದೆ.

Saturday, February 23, 2008

Puri Upma-ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ

ಕಡ್ಲೆಪುರಿಯನ್ನು ಒಂದೊಂದು ಕಡೆ ಬೇರೆ ಬೇರೆ ರೀತಿ ಕರೆಯುತ್ತಾರೆ. ಪುರಿ,ಮಂಡಕ್ಕಿ, ಮಂಡಾಳ, ಮುರಿ, ಕಡ್ಲೆಪುರಿ ಹೀಗೆ ಕರೆಯುವುದು ಹಲವು ಹೆಸರಲ್ಲೆ ಆದರೂ ಒಂದೇ. ಈ ತಿಂಡಿಯನ್ನು ಸಹ ಹಲವರು ಹಲವು ಬಗೆ ಕರೆಯುತ್ತಾರೆ.

ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ

ಬೇಕಾಗುವ ಸಾಮಗ್ರಿಗಳು;
ಕಡ್ಲೆಪುರಿ - ಒಂದು ಕೆಜಿ
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ(ಬೇಕಾದರೆ)
ಕೊತ್ತುಂಬರಿಸೊಪ್ಪು ,ಕಾಯಿತುರಿ
ಹುರಿಗಡಲೆ ಪುಡಿ - ಎರಡು ಚಮಚ

ತಯಾರಿಸುವ ವಿಧಾನ:
ಪುರಿ/ಮಂಡಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಳ್ಳೆಯ ನೀರಿನಲ್ಲಿ ಒಂದು ನಿಮಿಷ ಬಿಟ್ಟು,ನೀರಿನಿಂದ ತೆಗೆದು ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಡ್ಲೆಕಾಯಿಬೀಜಗಳನ್ನು ಹಾಕಿ, ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು , ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಮಂಡಕ್ಕಿ ಅಥವ ಪುರಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಕಡ್ಲೆಪುಡಿಯನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ.ಒಲೆಯಿಂದ ಇಳಿಸಿ. ಬಿಸಿಬಿಸಿ ಮಂಡಕ್ಕಿ/ಪುರಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಈ ತಿಂಡಿಯ ಜೊತೆ ಒಂದು ಲೋಟ ಬಿಸಿಯಾದ ಕಾಫಿ ಇದ್ದರಂತೂ ಇನ್ನೂ ಚೆನ್ನ.

Friday, February 15, 2008

Bread Pudding

ಬ್ರೆಡ್ ಪುಡ್ಡಿಂಗ್

ಬೇಕಾಗುವ ಸಾಮಗ್ರಿಗಳು:
1 ಪೌಂಡ್ ಬ್ರೆಡ್ ಅಥವ 12 ಪೀಸಸ್, ಅಂಚು ಕತ್ತರಿಸಿಟ್ಟುಕೊಳ್ಳಿ.
1 ಲೀಟರ್ ಹಾಲು
7-8 ಮೊಟ್ಟೆ - ಒಡೆದು, ಬಟ್ಟಲಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿಡಿ (ಬ್ಲೆಂಡ್ ಮಾಡಿ)
1/4 ಕೆಜಿ ಸಕ್ಕರೆ
50 ಗ್ರಾಂ ಬೆಣ್ಣೆ
1/2 ಚಮಚ ಜಾಯಿಕಾಯಿ ರಸ (ತೇದಿದ್ದು)
ಸ್ವಲ್ಪ ಗೋಡಂಬಿ - ದ್ರಾಕ್ಷಿ
ಬಾದಾಮಿ ಬೇಕಾದರೆ
1ಚಮಚ ತುಪ್ಪ ( ಇದರಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಇಟ್ಟುಕೊಳ್ಳಿ)

ತಯಾರಿಸುವ ವಿಧಾನ:
ಹಾಲು ಚೆನ್ನಾಗಿ ಕಾಯಿಸಿ,ಅದಕ್ಕೆ ಸಕ್ಕರೆ,ಬೀಟ್ ಮಾಡಿದ ಮೊಟ್ಟೆ ಹಾಕಿ,ಕೈ ಬಿಡದೇ ತಳ ಹತ್ತದಂತೆ ಚೆನ್ನಾಗಿ ತಿರುವುತ್ತಿರಿ,ಮದ್ಯೆ ಜಾಯಿಕಾಯಿ ರಸ ಹಾಕಿ,ತಿರುವಿ. ಹಾಲಿನ ಮಿಶ್ರಣ ಅರ್ಧ ಭಾಗದಷ್ಟು ಆದಾಗ ಅದನ್ನು ಕೆಳಗಿಳಿಸಿ.ಕಾವಲಿ ಅಥವ ಒಂದು ಅಗಲವಾದ ಬಟ್ಟಲಿಗೆ ಬೆಣ್ಣೆಯನ್ನು ಸವರಿ ಅದರಲ್ಲಿ ತುಪ್ಪದಲ್ಲಿ ಕರಿದ ಬ್ರೆಡ್ ತುಂಡುಗಳನ್ನು ಜೋಡಿಸಿಟ್ಟು, ಅದರ ಮೇಲೆ ಈ ಹಾಲಿನ ಮಿಶ್ರಣವನ್ನು ಸುರಿದು ಸಮನಾಗಿ ಹರಡಿ, ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿಯಿಂದ ಅಲಂಕರಿಸಿ, ನಂತರ ತಣ್ಣಗಾದ ಮೇಲೆ ತಿನ್ನಲು ರೆಡಿಯಾಗಿರಿ. ಇದು ತುಂಬಾ ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟ ವಾಗುತ್ತದೆ ಮತ್ತು ಪೌಷ್ಠಿಕವಾಗಿಯೂ ಇರುತ್ತದೆ.

Tuesday, November 20, 2007

Bread Custard Pudding -ಬ್ರೆಡ್ ಕಸ್ಟರ್ಡ್ ಪುಡ್ಡಿಂಗ್:


ಬ್ರೆಡ್ ಕಸ್ಟರ್ಡ್ ಪುಡ್ಡಿಂಗ್:

ಸಾಮಗ್ರಿಗಳು:
ಬ್ರೆಡ್ - 5-6
ಸಕ್ಕರೆ ರುಚಿಗೆ - ಕಾಲು ಕಪ್
ಕಸ್ಟರ್ಡ್ ಪೌಡರ್ - ಎರಡು ದೊಡ್ಡ ಚಮಚ
ಹಾಲು ಅಗತ್ಯವಿದ್ದಷ್ಟು- ಅರ್ಧ ಲೀಟರ್
ಏಲಕ್ಕಿ ಪುಡಿ
ತುಪ್ಪ ಕರಿಯಲು
ಗುಲಾಬಿ ನೀರು (ರೋಸ್ ವಾಟರ್)
ದ್ರಾಕ್ಷಿ ಮತ್ತು ಗೋಡಂಬಿ

ತಯಾರಿಸುವ ವಿಧಾನ:


ಮೊದಲು ಬ್ರೆಡ್ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು, ತುಪ್ಪದಲ್ಲಿ ಹೊಂಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವಂತೆ ಕರಿದಿಟ್ಟುಕೊಳ್ಳಿ.
ನಂತರ ಹಾಲನ್ನು ಕಾಯಲು ಇಟ್ಟು,ಅದು ಕುದಿಯುವ ಹಂತಕ್ಕೆ ಬಂದಾಗ ಸಕ್ಕರೆಯನ್ನು ಹಾಕಿ ಬೆರೆಸಿ. ಆಮೇಲೆ ಕಸ್ಟರ್ಡ್ ಪೌಡರ್ ಅನ್ನು ಸ್ವಲ್ಪ ಹಾಲಿನಲ್ಲಿ ಗಂಟಿಲ್ಲದಂತೆ ಕಲೆಸಿ,ಈ ಮಿಶ್ರಣವನ್ನು ಕುದಿಯುತ್ತಿರುವ ಹಾಲಿಗೆ ಹಾಕಿ,ಕೈ ಬಿಡದೇ ತಿರುಗಿಸುತ್ತಿರಿ,ತಳ ಹತ್ತುತ್ತದೆ. ಆಗಾಗಿ ಸರಿಯಾಗಿ ಎಲ್ಲಾ ಮಿಶ್ರಣವೂ ಚೆನ್ನಾಗಿ ಬೆರೆಯುವಂತೆ ಎರಡು ಅಥವಾ ಮೂರು ನಿಮಿಷಗಳವರೆಗೆ / ಸ್ವಲ್ಪ ಗಟ್ಟಿಯಾಗುವವರೆಗೆ ತಿರುಗಿಸುತ್ತಲೇ ಇರಬೇಕು. ಅದು ಸರಿಯಾಗಿದೆ ಎನಿಸಿದ ತಕ್ಷಣ ಕೆಳಗಿಳಿಸಿ,ಅದಕ್ಕೆ ಏಲಕ್ಕಿ ಪುಡಿ ಮತ್ತು ಗುಲಾಬಿನೀರು ಹಾಕಿ ಬೆರೆಸಿ.
ಕರಿದಿರುವ ಬ್ರೆಡ್ ಅನ್ನು ಅಗಲವಾದ ತಟ್ಟೆ / ಪಾತ್ರೆಗೆ ಜೋಡಿಸಿ, ಅದರ ಮೇಲೆ ಹಾಲು ಮತ್ತು ಕಸ್ಟರ್ಡ್ ಮಿಶ್ರಣವನ್ನು ಸುರಿಯಿರಿ, ಎಲ್ಲಾ ಬ್ರೆಡ್ ಮೇಲೆ ಸಮನಾಗಿ ಬರುವಂತೆ ಹಾಕಿ, ಅದರ ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಅಲಂಕರಿಸಿ,ಅರ್ಧ/ಒಂದು ಗಂಟೆ ಬಿಟ್ಟು ತಿನ್ನಲು ಕೊಡಿ. ಅಷ್ಟರಲ್ಲಿ ಅದು ಚೆನ್ನಾಗಿ ನೆಂದಿರುತ್ತದೆ. ಬಿಸಿಯಾಗಿಯೂ ಕೊಡಬಹುದು. ಆದರೆ ಇನ್ನೂ ಬ್ರೆಡ್ ನೆಂದಿರುವುದಿಲ್ಲ. ನೆನೆದರೆ ತುಂಬಾ ರುಚಿಯಾಗಿರುತ್ತದೆ. ಈ ಪುಡ್ಡಿಂಗ್ ಮಕ್ಕಳಿಗೆ ತುಂಬ ಪ್ರಿಯವಾಗುತ್ತದೆ. ಸದ್ದಿಲ್ಲದೇ ಇಷ್ಟಪಟ್ಟು ತಿನ್ನುತ್ತಾರೆ.
* ತುಪ್ಪ ತುಂಬಾ ಜಾಸ್ತಿಯಾಯ್ತು ಎನ್ನುವವರು, ಎಣ್ಣೆಯಲ್ಲಿ ಬ್ರೆಡ್ ಕರಿಯಬಹುದು.
* ಅದು ಹೆವಿ ಅಂದರೆ ತುಪ್ಪದಲ್ಲಿ ತವಾ ಮೇಲೆ ಫ್ರೈ ಮಾಡಿಕೊಳ್ಳಬಹುದು. ಆದರೆ ಇದು ಸ್ವಲ್ಪ ರುಚಿ ಕಮ್ಮಿಯಾಗುತ್ತದೆ. ಅಷ್ಟೇನು ಚೆನ್ನಾಗಿ ಬರಲ್ಲ.ok,ಪರವಾಗಿಲ್ಲ.

Fenugreek dosa/ Menthe dose-ಮೆಂತ್ಯದ ದೋಸೆ


ಮೆಂತ್ಯದ ದೋಸೆ:

ಸಾಮಗ್ರಿಗಳು:
ಅಕ್ಕಿ - ಒಂದು ಕಪ್
ಮೆಂತ್ಯ - ಎರಡು ದೊಡ್ಡ ಚಮಚ
ಚಿಟಿಕೆ ಉಪ್ಪು
ಚಿಟಿಕೆ ಸೋಡ

ವಿಧಾನ;
ಅಕ್ಕಿ ಮತ್ತು ಮೆಂತ್ಯೆಯನ್ನು ಮೂರ್ನಾಲ್ಕು ಗಂಟೆ ನೆನೆಸಿ, ಅದನ್ನು ಮೆಂತ್ಯದೊಂದಿಗೆ ರುಬ್ಬಿಕೊಳ್ಳಿ. ಉಪ್ಪು ಮತ್ತು ಸೋಡ ಸೇರಿಸಿ, ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು, ಕಾಯಿಸಿ, ತುಪ್ಪ / ಎಣ್ಣೆ ಹಾಕಿ ಸವರಿ, ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ, ಬೇಯಿಸಿ , ತೆಗೆಯಿರಿ. ತುಪ್ಪ ಹಾಕಿ ತಿನ್ನಲು ಕೊಡಿ. ಇದು ತಿನ್ನಲು ರುಚಿಯಾಗಿರುತ್ತದೆ. ಮೆಂತ್ಯದ ಪರಿಮಳ ತುಂಬಾ ಚೆನ್ನಾಗಿರುತ್ತದೆ. ಇದಕ್ಕೆ ತೆಂಗಿನಕಾಯಿ ಅಥವ ಯಾವ ಚಟ್ನಿಯ ಜೊತೆಗಾದರು ತಿನ್ನಲು ನೀಡಬಹುದು.
* ಇದು ಸಕ್ಕರೆ ಖಾಯಿಲೆಯವರಿಗೆ ತುಂಬಾ ಉಪಯುಕ್ತ.
* ಮೆಂತ್ಯೆಯನ್ನು ಇನ್ನು ಜಾಸ್ತಿ ಸೇರಿಸಿಕೊಳ್ಳಬಹುದು.

Popular Posts