Thursday, March 19, 2009

Palak Potato Curry-ಆಲೂ-ಪಾಲಕ್ ಗೊಜ್ಜು,

ಆಲೂ-ಪಾಲಕ್ ಮಸಾಲೆ:

ಬೇಕಾಗುವ ಸಾಮಗ್ರಿಗಳು;ಪಾಲಕ್ ಸೊಪ್ಪು
ಆಲೂಗೆಡ್ಡೆಯನ್ನು ಹೆಚ್ಚಿಕೊಳ್ಳಿ
ಹೆಚ್ಚಿದ ಈರುಳ್ಳಿ
ಒಂದು ಹಸಿಮೆಣಸಿನಕಾಯಿ
ಅಚ್ಚಖಾರದಪುಡಿ
ಧನಿಯ
ಜೀರಿಗೆಪುಡಿ
ಗರಂಮಸಾಲಾ
ಬೆಣ್ಣೆ - ಎರಡು ಚಮಚ
ಕೊತ್ತುಂಬರಿಸೊಪ್ಪು
ಎಣ್ಣೆ, ಜೀರಿಗೆ, ಕರಿಬೇವು
ಉಪ್ಪು ರುಚಿಗೆ

ವಿಧಾನ;
ಮೊದಲು ಪಾಲಕ್ ಸೊಪ್ಪನ್ನು ಶುಚಿಗೊಳಿಸಿ,ಚೆನ್ನಾಗಿ ಉಪ್ಪು ಮತ್ತು ವಿನಿಗರ್ ನೀರಿನಲ್ಲಿ ತೊಳೆದು,ಅದನ್ನು ಐದು ನಿಮಿಷ ಸ್ವಲ್ಪ ಬಿಸಿನೀರಿನಲ್ಲಿ ಬೇಯಿಸಿಕೊಂಡು ಪೇಸ್ಟ್ ತರಹ ರುಬ್ಬಿಕೊಳ್ಳಿ
ಪಾತ್ರೆಗೆ ಎಣ್ಣೆಯನ್ನು ಹಾಕಿ, ಜೀರಿಗೆ ಹಾಕಿ ಚಟಪಟ ಅಂದಾಗ ಕರಿಬೇವು,ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ. ಎರಡು ನಿಮಿಷದ ನಂತರ ಆಲೂಗೆಡ್ಡೆಯನ್ನು ಹಾಕಿ. ಒಂದೆರಡು ನಿಮಿಷ ಹುರಿದು ರುಬ್ಬಿದ ಪಾಲಕ್ ಪೇಸ್ಟ್ ಅನ್ನು ಹಾಕಿ,ಅದರ ಜೊತೆಗೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಐದಾರು ನಿಮಿಷ ಹುರಿದು,ಕಾರದಪುಡಿ,ಧನಿಯ ಮತ್ತು ಜೀರಿಗೆಪುಡಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ. ಎಷ್ಟು ಅಗತ್ಯವೋ ಅಷ್ಟು ಮಾತ್ರ ನೀರನ್ನು ಹಾಕಿ,ಆಲೂಗೆಡ್ಡೆ ಬೇಯುವವರೆಗೆ ಬೇಯಿಸಿ, ಕೊನೆಯಲ್ಲಿ ಕೊತ್ತುಂಬರಿಸೊಪ್ಪು ಮತ್ತು ಗರಂಮಸಾಲ ಬೆರೆಸಿ.ಬೆಣ್ಣೆಯನ್ನು ಬೆರೆಸಿ, ಒಂದು ನಿಮಿಷದ ನಂತರ ಇಳಿಸಿ,ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ,ಈ ಮಸಾಲೆಯನ್ನು ಚಪಾತಿ ಮತ್ತು ಪರೋಟದೊಂದಿಗೆ ನೀಡಬಹುದು.

Monday, March 16, 2009

Simple Salads / ದಿಡೀರ್ ಸಲಾಡ್

ದಿಡೀರ್ ಸಲಾಡ್:

ಟಮೋಟ ಸಲಾಡ್:

ಟಮೋಟ ಸಣ್ಣಗೆ ಕತ್ತರಿಸಿ,ಅದಕ್ಕೆ ಹೆಚ್ಚಿದ ಈರುಳ್ಳಿ,ಉಪ್ಪು,ಕರಿ ಮೆಣಸಿನ ಪುಡಿ,ಕೊತ್ತುಂಬರಿಸೊಪ್ಪು ಬೆರೆಸಿ.
*********************************

ಕ್ಯಾರೆಟ್ ಸಲಾಡ್:

ಕ್ಯಾರೆಟ್ ಅನ್ನು ತುರಿದುಕೊಂಡು ಅದಕ್ಕೆ ಕಾರ,ಮೆಣಸಿನಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ನಂತರ ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಹಾಕಿ.
*********************************

ಈರುಳ್ಳಿ ಸಲಾಡ್:

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು,ಅದಕ್ಕೆ ಹೆಚ್ಚಿದ ಕೊತ್ತುಂಬರಿ,ಕಾಯಿತುರಿ,ಉಪ್ಪು ಮತ್ತು ಮೆಣಸಿನಕಾರ ಹಾಕಿ ಕಲೆಸಿ. ನಿಂಬೆರಸ ಸಹ ಹಾಕಬಹುದು.

Potato Wedges - ಆಲೂ ಟಿಕ್ಕಿ/ಆಲೂ ವೆಡ್ಜಸ್:


ಆಲೂಗೆಡ್ಡೆಯಿಂದ ತಯಾರಿಸದ ತಿಂಡಿಗಳೇ ಇಲ್ಲ. ಆಲೂ ಮನೆಯಲ್ಲಿ ಸಾಮಾನ್ಯವಾಗಿ ಸದಾ ಸ್ಟಾಕ್ ಇದ್ದೇಇರುತ್ತದೆ. ಸಾಮಾನ್ಯವಾಗಿ ಇದನ್ನು ಜಾಸ್ತಿ ಅಡಿಗೆಗಳಿಗೆ ಬಳಸುತ್ತೇವೆ. ಆಲೂಗೆಡ್ಡೆಯಿಂದ ಯಾವುದೇ ಪದಾರ್ಥ ತಯಾರಿಸಿದರೂ,ಅದು ರುಚಿಯಾಗಿಯೇ ಇರುತ್ತದೆ. ಮಕ್ಕಳಿಗಂತೂ ಪೊಟ್ಯಾಟೋ ಅಂದರೆ ಒಂದು ಖುಷಿ. ಅದರಲ್ಲೂ ಎಲ್ಲಕ್ಕಿಂತ ಹೆಚ್ಚಾಗಿ ಫ್ರೆಂಚ್ ಫ್ರೈಸ್ ಮತ್ತು ಆಲೂಗೆಡ್ಡೆ ಬಜ್ಜಿ ಎಂದರೆ ಯಾವ ಸಮಯದಲ್ಲಾದರೂ ಸರಿ ತಿನ್ನುತ್ತಾರೆ. ಈ ರೀತಿ ಫ್ರೈಸ್ ನಲ್ಲಿ ಎಣ್ಣೆಯ ಅಂಶ ಜಾಸ್ತಿ ಇರುತ್ತದೆ. ಅದಕ್ಕಾಗಿ ಆಲೂ ವೆಡ್ಜಸ್ ತಯಾರಿಸಿ ಕೊಡಿ. ಇದು ಹೆಚ್ಚು ಎಣ್ಣೆ ತೆಗೆದುಕೊಳ್ಳುವುದಿಲ್ಲ.ಮಕ್ಕಳು ಕೂಡ ತಿನ್ನಲು ಬೇಡಾ ಎನ್ನುವುದಿಲ್ಲ.ಜೊತೆಲಿ ದೊಡ್ಡವರು ಸಹ! ಇದನ್ನು ತಯಾರಿಸಲು ಸಮಯ ತುಂಬಾ ಬೇಕಾಗಿಲ್ಲ.

ಆಲೂ ಟಿಕ್ಕಿ/ಆಲೂ ವೆಡ್ಜಸ್:

ಬೇಕಾಗುವ ಸಾಮಗ್ರಿಗಳು:

ಆಲೂಗೆಡ್ಡೆಯನ್ನು ಉದ್ದಕ್ಕೆ ಹೆಚ್ಚಿಕೊಳ್ಳಿ
ಮೆಣಸಿನಪುಡಿ
ಧನಿಯಾ ಪುಡಿ
ಅರಿಶಿನ ಸ್ವಲ್ಪ
ಗರಂ ಮಸಾಲಾ ಸ್ವಲ್ಪ
ಉಪ್ಪು ರುಚಿಗೆ
ಎಣ್ಣೆ

ವಿಧಾನ:

ಪ್ಯಾನ್ ಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ, ಅದಕ್ಕೆ ಆಲೂಗೆಡ್ಡೆ ಹೋಳುಗಳನ್ನು ಹಾಕಿ,ಹಾಗೇ ಹುರಿಯುತ್ತಿರಿ. ಆಲೂ ಬಣ್ಣ ಬದಲಾಗುವವರೆಗೂ ಅಂದರೆ ಅದು ಚೆನ್ನಾಗಿ ಎಣ್ಣೆಯಲ್ಲಿಯೇ ಹೊಂಬಣ್ಣ ಬರುವವರೆಗು ಹುರಿದುಕೊಂಡು, ಆಮೇಲೆ ಅರಿಶಿನ ಮತ್ತು ಉಪ್ಪು ಹಾಕಿ ಬೆರೆಸಿ . ನಂತರ ಅದಕ್ಕೆ ಅಚ್ಚಮೆಣಸಿನಪುಡಿ, ಧನಿಯಾಪುಡಿ ಮತ್ತು ಗರಂಮಸಾಲ ಹಾಕಿ ಚೆನ್ನಾಗಿ ಬೆರೆಸಿ,ಪೂರ್ತಿ ಎಲ್ಲಾ ಹೋಳುಗಳಿಗೂ ಮಸಾಲೆ ಹತ್ತಿದ ಮೇಲೆ ಕೆಳಗಿಳಿಸಿ. ಇದನ್ನು ಸ್ನಾಕ್ಸ್ ತರಹ/ಊಟಕ್ಕೆ ನೆಂಜಿಕೊಳ್ಳಲು/ಊಟಕ್ಕೆ ಮೊದಲು ನೀಡಬಹುದು. ಮಕ್ಕಳಿಗಂತೂ ತುಂಬಾ ಪ್ರಿಯವಾಗುತ್ತದೆ. ಫ್ರೆಂಚ್ ಫ್ರೈ ಗಳಿಗಿಂತ ಇದು ಉತ್ತಮ. ಎಣ್ಣೆಯಲ್ಲಿ ಕರಿಯದೇ ಇರುವುದರಿಂದ ಮಕ್ಕಳಿಗೆ ಒಳ್ಳೆಯದು.

Saturday, March 14, 2009

Snake Gourd Sabji-PaduvalaKaayi Palya

ಪಡವಲಕಾಯಿ ಪಲ್ಯ:

ಸಾಮಗ್ರಿಗಳು:
ಪಡವಲಕಾಯಿ
ಈರುಳ್ಳಿ
ಹಸಿಮೆಣಸಿನಕಾಯಿ
ಕರಿಬೇವು
ಚಿಟಿಕೆ ಸಕ್ಕರೆ/ಬೆಲ್ಲ
ಕಾಯಿತುರಿ
ಕೊತ್ತುಂಬರಿಸೊಪ್ಪು
ಉಪ್ಪು
ಜೀರಿಗೆ
ಎಣ್ಣೆ

ತಯಾರಿಸುವ ರೀತಿ:
ಮೊದಲು ಪಡವಲ ಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ,ಹಸಿಮೆಣಸಿನಕಾಯಿ,ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ, ಬಾಡಿಸಿ. ಈರುಳ್ಳಿ ಸ್ವಲ್ಪ ಬೇಯುವವರೆಗು ಹುರಿದು,ಪಡುವಲಕಾಯಿ ಹಾಕಿ ಹಾಗೇ ಹುರಿಯಿರಿ. ನಂತರ ಅದಕ್ಕೆ ಬೆಲ್ಲ ಮತ್ತು ಉಪ್ಪು ಹಾಕಿ ಒಂದೆರಡು ಚಮಚ ನೀರು ಹಾಕಿ, ಮುಚ್ಚಿಡಿ.
ಇದು ಬೇಗ ಬೇಯುತ್ತದೆ. ಬೆಂದ ನಂತರ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎರಡನ್ನು ಬೆರೆಸಿ. ಒಲೆಯಿಂದ ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಅಥವ ಚಪಾತಿ ಜೊತೆಯಲ್ಲಿ ತಿನ್ನಲು ಕೊಡಬಹುದು. ಪಡುವಲಕಾಯಿ ಆರೋಗ್ಯಕ್ಕೆ ಉತ್ತಮ.

Thursday, March 5, 2009

Vangibath - ವಾಂಗೀಭಾತ್:

ವಾಂಗೀಭಾತ್:

ಸಾಮಗ್ರಿಗಳು:

ಬದನೆಕಾಯಿ
ಅನ್ನ- ಎರಡು ಬಟ್ಟಲು
ಉದ್ದಕ್ಕೆ ಹೆಚ್ಚಿದ ಈರುಳ್ಳಿ
ಒಣಮೆಣಸಿನಕಾಯಿ-ರುಚಿಗೆ
ಧನಿಯ-ಎರಡು ಚಮಚ
ಮೆಣಸು-ಸ್ವಲ್ಪ
ಕಡ್ಲೆಬೇಳೆ-ಒಂದು ಚಮಚ
ಉದ್ದಿನಬೇಳೆ-ಅರ್ಧ ಚಮಚ
ಇಂಗು ಸ್ವಲ್ಪ,ಅರಿಶಿನ
ತುಪ್ಪ ಮತ್ತು ಎಣ್ಣೆ, ಸಾಸಿವೆ
ಕರಿಬೇವು,ಇಂಗು ಚಿಟಿಕೆ
ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ
ಉಪ್ಪು ರುಚಿಗೆ
ಹುಣಸೇರಸ -ಅರ್ಧಚಮಚ
ಕಾಯಿತುರಿ ಮತ್ತು ಕೊಬ್ಬರಿ ಸ್ವಲ್ಪ
ಕೊತ್ತುಂಬರಿ ಸೊಪ್ಪು


ತಯಾರಿಸುವ ವಿಧಾನ:

ಮೊದಲು ಉದುರುಉದುರಾಗಿ ಅನ್ನ ಮಾಡಿಟ್ಟಿರುವುದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬೆರೆಸಿ,ತಣ್ಣಗಾಗಲು ಬಿಡಿ.

ವಾಂಗೀಭಾತ್ ಮಸಾಲ ಪುಡಿ:

ಒಣಮೆಣಸಿನಕಾಯಿ,ಧನಿಯ,ಮೆಣಸು,ಕಡ್ಲೆಬೇಳೆ,ಉದ್ದಿನಬೇಳೆ ಎಲ್ಲವನ್ನು ಹುರಿದುಕೊಂಡು ಇಂಗು ಮತ್ತು ಕೊಬ್ಬರಿ ತುರಿಯೊಂದಿಗೆ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ.
ಬದನೆಕಾಯಿ ಹೆಚ್ಚಿಕೊಂಡು ಉಪ್ಪು ನೀರಿಗೆ ಹಾಕಿಡಿ.
ಒಂದು ಪಾತ್ರೆಗೆ ಸಾಕಾಷ್ಟು ಎಣ್ಣೆ ಹಾಕಿ,ಅದಕ್ಕೆ ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ,ಕರಿಬೇವು,ಇಂಗು ಎಲ್ಲವನ್ನು ಹಾಕಿ ಒಂದು ನಿಮಿಷ ಹುರಿಯಿರಿ.ಈರುಳ್ಳಿಯನ್ನು ಹಾಕಿ,ಒಂದೆರಡು ನಿಮಿಷ ಹುರಿದು,ನಂತರ ಅದಕ್ಕೆ ಬದನೆಕಾಯಿ ಹಾಕಿ,ಅದರಲ್ಲಿಯೇ ಹುರಿಯಿರಿ,ಎಲ್ಲಾ ಬದನೆಕಾಯಿ ಹೋಳುಗಳು ಚೆನ್ನಾಗಿ ಫ್ರೈ ಮಾಡಿಕೊಂಡು,ಅದು ಬೆಂದಿದೆ ಎನಿಸಿದ ಮೇಲೆ,ಅದಕ್ಕೆ ಅರಿಶಿನ,ಹುರಿದು ಪುಡಿ ಮಾಡಿದ ಮಸಾಲೆಯನ್ನು ಮತ್ತು ಹುಣಸೇರಸ ಹಾಕಿ,ಬಾಡಿಸಿ.ಉಪ್ಪು ಹಾಕಿ. ನೀರು ಹಾಕಬಾರದು. ಎಲ್ಲ ಮಸಾಲೆ ಚೆನ್ನಾಗಿ ಬೆರೆಯುವಂತೆ ಕೆದಕುತ್ತಿರಿ. ನಂತರ ಅದನ್ನು ಇಳಿಸಿ. ಎಷ್ಟು ಬೇಕೋ ಅಷ್ಟು ಮಾತ್ರ ಮಸಾಲೆ ತೆಗೆದುಕೊಂಡು ಅನ್ನಕ್ಕೆ ಹಾಕಿ,ಚೆನ್ನಾಗಿ ಕಲೆಸಿ,ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಎಲ್ಲವೂ ಸರಿಯಾಗಿ ಬೆರೆಯುವಂತೆ ಕಲೆಸಿ. ವಾಂಗೀಭಾತ್ ತಯಾರಾಗುತ್ತದೆ. ಇದನ್ನು ರಾಯಿತ/ಚಟ್ನಿ ಜೊತೆ ಸರ್ವ್ ಮಾಡಿ.

* ಬದನೆಕಾಯಿ ಬೇಯಲು ನೀರು ಹಾಕಬಾರದು.
* ಒಗ್ಗರಣೆಗೆ ಎಣ್ಣೆ ಜಾಸ್ತಿ ಹಾಕಿ, ಅದರಲ್ಲಿಯೇ ಬದನೆ ಬೇಯುತ್ತದೆ.
* ಕಲೆಸುವಾಗ ಉಪ್ಪು-ಕಾರ ನೋಡಿಕೊಳ್ಳಿ.
* ತಕ್ಷಣ ತಿನ್ನುವುದಕ್ಕಿಂತ ಸ್ವಲ್ಪ ಹೊತ್ತಿನ ಬಳಿಕ ತಿಂದರೆ ಹೆಚ್ಚು ರುಚಿಯಾಗಿರುತ್ತದೆ. ಇದನ್ನು ತಿಂಡಿ/ಊಟ ಯಾವುದಕ್ಕಾದರೂ ಬಳಸಬಹುದು.
* ವಾಂಗೀಭಾತ್ ಮಸಾಲೆ ಎಷ್ಟು ಬೇಕೋ ಅಷ್ಟು ಮಾತ್ರ ಕಲೆಸಿ, ಮಿಕ್ಕಿದ್ದು ಎತ್ತಿಡಬಹುದು. ಯಾವಾಗ ಬೇಕಾದರೂ ಉಪಯೋಗಿಸಬಹುದು.

Popular Posts