Sunday, May 20, 2007

Kodubale / Spicy Rings - ಕೋಡುಬಳೆ

ಕೋಡುಬಳೆ:

ಕುರುಕಲು ತಿಂಡಿ ಎಂದರೆ ನೆನಪಾಗೋದೇ ಅಮ್ಮ ಮಾಡುತ್ತಿದ್ದ ತಿಂಡಿಗಳು. ಈಗ ನಾವುಗಳು ಎಷ್ಟೇ ತಿಂಡಿ ಅವರು ತಯಾರಿಸುತ್ತಿದ ರೀತಿಯೇ ಮನೆಯಲ್ಲಿ ಮಾಡಿದರು ಸಹ ಮತ್ತು ಈಗೆಲ್ಲಾ ಬೇಕರಿಗಳಲ್ಲೂ ತುಂಬಾ ಚೆನ್ನಾಗಿ ಅದೇ ತರಹ ತಿಂಡಿಗಳು ಸಿಕ್ಕುತ್ತವೆ, ಅದನ್ನು ತಗೊಂಡು ಬಂದು ತಿಂದರು ಕೂಡ ಅಜ್ಜಿ ಮತ್ತು ಅಮ್ಮ ಮಾಡಿದ ತಿಂಡಿಗಳ ನೆನಪು ಮರೆಯಲಾಗದು ಅಂತ ನನಗನ್ನಿಸುತ್ತೆ. ನಮ್ಮ ಅಮ್ಮಂದಿರು ಕುರುಕಲು ತಿಂಡಿ ತಯಾರಿಸುವಾಗ ಅದಕ್ಕೆ ಹೆಚ್ಚು ಗಮನ ಕೊಟ್ಟು ತಯಾರಿಸುತ್ತಿದ್ದರು,ಅಕ್ಕಿಯಿಂದ ತಯಾರಿಸುವ ತಿಂಡಿಗಳಿಗಂತೂ ಅದಕ್ಕೆಂದೇ ಅಕ್ಕಿಯನ್ನು ತೊಳೆದು,ನೆರಳಲ್ಲಿ ಒಣಗಿಸಿ,ಮಿಲ್ ನಲ್ಲಿ ನೀಟಾಗಿ ಹಿಟ್ಟು ಹಾಕಿಸಿಕೊಂಡು ಬರುತ್ತಿದ್ದರು. ಆ ರೀತಿ ಅಕ್ಕಿಹಿಟ್ಟಿನಿಂದ ತಯಾರಿಸಿದ ತಿಂಡಿಗಳಂತೂ ಬಹಳ ರುಚಿ. ನಾವುಗಳೋ ಈಗ ರೆಡಿಮೇಡ್ ಅಕ್ಕಿ ಹಿಟ್ಟು ತಂದು ತಯಾರಿಸುವುದು. ಅದರಲ್ಲಿ ತಯಾರಿಸೋದೇ ಕಷ್ಟ. ಇನ್ನು ತೊಳೆದು,ಒಣಗಿಸಿ,ಮಿಷನ್ ಗೆ ಹಾಕಿಸಿಕೊಂಡು ಬರುವಷ್ಟು ತಾಳ್ಮೆ ನಮಗೆಲ್ಲಿ ಬರಬೇಕು ಅಲ್ವಾ? ಆದರೂ ಹೇಗೋ ಈಗ ಸಧ್ಯ ನಮ್ಮಂತವರಿಗೆ ಅಂತ ಈ ರೀತಿ ಒಳ್ಳೆಯ ಅಕ್ಕಿಹಿಟ್ಟು ಸಿಗುವುದು ನಮ್ಮ ಪುಣ್ಯ. ಆದರೂ ಅಮ್ಮ ತಯಾರಿಸಿದ ಕುರುಕಲು ತಿಂಡಿ ತಿನ್ನುವಾಗ ತುಂಬಾ ರುಚಿ,ಈಗ ನಾವು ತಯಾರಿಸುವಾಗ ಹಿಟ್ಟು ಮಾಡಿಸುವ ಕೆಲಸ ಒಂದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ಎಲ್ಲಾ ಕೆಲಸಗಳು ಮಾಮುಲಿ. ಕುರುಕಲು ಅಥವಾ ಯಾವುದೇ ಎಣ್ಣೆ ತಿಂಡಿಗಳನ್ನು ತಯಾರಿಸುವಾಗ ಸ್ವಲ್ಪ ಕಷ್ಟನೇ,ಒಂದೇ ಒಂದು ದಿನ ಕಷ್ಟಪಟ್ಟರೆ ರುಚಿಯಾದ ತಿಂಡಿ ತಯಾರುಮಾಡಿಟ್ಟುಕೊಂಡು ಬೇಕಾದಾಗ ಉಪಯೋಗಿಸಬಹುದು. ಈಗ ಇಲ್ಲಿ ಕೋಡುಬಳೆ ತಯಾರಿಸೋಣ.ಕೋಡುಬಳೆಯನ್ನು ತಯಾರಿಸುವುದರಲ್ಲೂ ಅನೇಕ ವಿಧಗಳಿವೆ,ಅವುಗಳಲ್ಲಿ ಇದು ಒಂದು.

ಬೇಕಾಗುವ ಸಾಮಾಗ್ರಿಗಳು:

೪ ಕಪ್ ಅಕ್ಕಿಹಿಟ್ಟು
೧ ಕಪ್ ಮೈದಾ ಹಿಟ್ಟು
೧ ಕಪ್ ಚಿರೋಟಿ ರವೆ
೧ ಕಪ್ ಹುರಿಗಡಲೆ ಹಿಟ್ಟು /ಪುಡಿ
ಜೀರಿಗೆ ೧ ಟೇಬಲ್ ಸ್ಪೂನ್
ಎಳ್ಳು ೧ ಟೇಬಲ್ ಸ್ಪೂನ್
ಇಂಗಿನ ಪುಡಿ ೧ ಟೀ ಸ್ಪೂನ್
೪ ಟೇಬಲ್ ಸ್ಪೂನ್ ಕಾಯಿಸಿದ ಎಣ್ಣೆ
ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು (ಬೇಕಿದ್ದರೆ)
ಅಚ್ಚಖಾರದ ಪುಡಿ ಮತ್ತು ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ಎಲ್ಲಾ ಸಾಮಾಗ್ರಿಗಳನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ,ಎಷ್ಟು ಅಗತ್ಯವೊ ಅಷ್ಟು ಮಾತ್ರ ನೀರನ್ನು ಹಾಕಿಕೊಂಡು ಹಿಟ್ಟನ್ನು ಗಟ್ಟಿಯಾಗಿ ಕಲೆಸಿಕೊಳ್ಳಿ, ಸ್ವಲ್ಪ ಮೆದುವಾಗಿರುವಂತೆ ಕಲೆಸಿಕೊಳ್ಳಿ, ತುಂಬಾ ಗಟ್ಟಿಯಾಗಿರಬಾರದು. ನಂತರ ಅದರಿಂದ ಚಿಕ್ಕಚಿಕ್ಕ ಉಂಡೆ ತೆಗೆದುಕೊಂಡು,ಮಣೆಯ ಮೇಲೆ ಅದನ್ನು ಕೋಡುಬಳೆ ಆಕಾರದಲ್ಲಿ ರಿಂಗ್ ತರಹ ಮಾಡಿಕೊಂಡು ಕಾದಿರುವ ಎಣ್ಣೆಯಲ್ಲಿ ಕರಿಯಿರಿ, ಉರಿ ತುಂಬಾ ಇರಬಾರದು,ಒಳಗೆ ಹಿಟ್ಟು ಬೇಯುವುದಿಲ್ಲ, ಮೀಡಿಯಂ ಅಥವಾ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗು ಗರಿಗರಿಯಾಗಿ ಕರಿಯಿರಿ, ಇದೇ ರೀತಿ ಎಲ್ಲಾ ಕರಿದಿಟ್ಟು,ಚೆನ್ನಾಗಿ ತಣ್ಣಗಾದ ಮೇಲೆ ಗಾಳಿ ಆಡದ ಡಬ್ಬದಲ್ಲಿ ತುಂಬಿಡಿ,ಇದು ಸುಮಾರು ದಿನ ಚೆನ್ನಾಗಿ ಇರುತ್ತದೆ. ಈ ಕುರುಕು ತಿಂಡಿ ಕಾಫಿ ,ಟೀ,ಎಲ್ಲದಕ್ಕೂ ಸೈ.

No comments:

Popular Posts