Showing posts with label Gojju / Curry / ಗೊಜ್ಜು. Show all posts
Showing posts with label Gojju / Curry / ಗೊಜ್ಜು. Show all posts

Wednesday, January 12, 2011

Snakegourd chutney - ಪಡುವಲಕಾಯಿ ತಿರುಳಿನ ಚಟ್ನಿ:

ಕೆಲವು ತರಕಾರಿಗಳ ಕಾಯಿಯ ತಿರುಳನ್ನು ಸಹ ಎಸೆಯದೆ ನಾವು ಅದನ್ನು ಅಡಿಗೆಯಲ್ಲಿ ಉಪಯೋಗಿಸಬಹುದು. ತಿರುಳಿನಲ್ಲು ಸಹ ಒಳ್ಳೆಯ ಅಂಶಗಳಿರುತ್ತವೆ. ಕೆಲವು ತರಕಾರಿಗಳ ಸಿಪ್ಪೆ, ತಿರುಳು ಮತ್ತು ಸೊಪ್ಪು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುತ್ತದೆ.  ಆಗಾಗಿ ಉಪಯೋಗಿಸಬಹುದಾದಂತ ತರಕಾರಿಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಪಡುವಲ ಕಾಯಿಯಲ್ಲಿ ಯಾವುದನ್ನು ಬಿಸಾಡುವಂತಿಲ್ಲ. ಪಡುವಲಕಾಯಿಯನ್ನು ದಿನನಿತ್ಯದ ಅಡಿಗೆಯಲ್ಲಿ ಬಳಸಿದರೆ ಬಿ.ಪಿ ಇರುವವರಿಗೆ ತುಂಬಾ ಉಪಯುಕ್ತವಾಗುತ್ತದೆ. ಅದರಲ್ಲಿ ತಿರುಳಿನಲ್ಲಿ ಚಟ್ನಿ. ಸಿಪ್ಪೆಯಲ್ಲಿ ಸಹ ಮತ್ತು ಒಳಗಿನ ಕಾಯಿಯಿಂದ ಹುಳಿ,ಸಾರು ಮತ್ತು ಪಲ್ಯವನ್ನು ತಯಾರಿಸುತ್ತೇವೆ. ಈಗ ಇಲ್ಲಿ ಪಡುವಲಕಾಯಿಯ ತಿರುಳಿನ ಚಟ್ನಿಯನ್ನು ತಯಾರಿಸೋಣ.

ಪಡುವಲಕಾಯಿ ತಿರುಳಿನ ಚಟ್ನಿ:

ಪಡುವಲಕಾಯಿ ತಿರುಳು
ಸ್ವಲ್ಪ ಕಾಯಿತುರಿ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ
ಉದ್ದಿನಬೇಳೆ - ಒಂದು ಚಮಚ
ಉಪ್ಪು ರುಚಿಗೆ
ಒಗ್ಗರಣೆಗೆ;
ಎಣ್ಣೆ, ಜೀರಿಗೆ,ಸಾಸಿವೆ,ಕರಿಬೇವು

ತಯಾರಿಸುವ ರೀತಿ:

ಉದ್ದಿನಬೇಳೆಯನ್ನು ಸ್ವಲ್ಪ ಹುರಿದುಕೊಂಡು ಅದಕ್ಕೆ ತೆಂಗಿನತುರಿ,ಉಪ್ಪು,ಹುಣಸೇಹಣ್ಣು,ಹಸಿಮೆಣಸಿನಕಾಯಿ ಮತ್ತು ಉದ್ದಿನಕಾಳು ಹಾಕಿ ನುಣ್ಣಗೆ ರುಬ್ಬಿ.
ಒಗ್ಗರಣೆಗೆ ಎಣ್ಣೆ ಹಾಕಿ ಕಾದಬಳಿಕ ಜೀರಿಗೆ, ಸಾಸಿವೆ ಮತ್ತು ಕರಿಬೇವು ಹಾಕಿ, ಒಗ್ಗರಣೆಯನ್ನು ರುಬ್ಬಿದ ಚಟ್ನಿಗೆ ಸೇರಿಸಿ, ಬೆರೆಸಿ. ಇದು ತುಂಬಾ ರುಚಿಯಾಗಿರುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು.

Monday, November 2, 2009

Capsicum Aloo Masala / ಆಲೂಗೆಡ್ಡೆ ಮಸಾಲೆ:

ದಪ್ಪಮೆಣಸಿನಕಾಯಿ ಮತ್ತು ಆಲೂಗೆಡ್ಡೆ ಮಸಾಲೆ:

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - ಸಣ್ಣಗೆ ಹೆಚ್ಚಿದ್ದು
ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ - 1 ಚಮಚ
ಆಲೂಗೆಡ್ಡೆ ಮತ್ತು ದಪ್ಪ ಮೆಣಸಿನಕಾಯಿ - ಹೆಚ್ಚಿಕೊಳ್ಳಿ( ಸ್ವಲ್ಪ ದಪ್ಪ ಇರಲಿ-ಪೀಸ್ ಗಳು)
ಟೋಮೋಟೋ ಪ್ಯೂರಿ -2 ಚಮಚ
ಗೋಡಂಬಿ ಪೇಸ್ಟ್ ಸ್ವಲ್ಪ
ದಪ್ಪ ಮೆಣಸಿನಕಾಯಿ ಹೋಳುಗಳು ಸ್ವಲ್ಪ
ಧನಿಯಾಪುಡಿ - 2 ಚಮಚ
ಅಚ್ಚಕಾರದ ಪುಡಿ
ಗರಂ ಮಸಾಲ - 1 ಚಮಚ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು
ಉಪ್ಪು
ಎಣ್ಣೆ - 2ಚಮಚ

ತಯಾರಿಸುವ ರೀತಿ:

ಮೊದಲು ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಕಾದ ಮೇಲೆ ಈರುಳ್ಳಿ ಹಾಕಿ ಬಾಡಿಸಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಒಂದೆರಡು ನಿಮಿಷ ಹುರಿದು ಧನಿಯಾಪುಡಿ,ಗರಂಮಸಾಲಾ ಮತ್ತು ಟಮೋಟ ಫ್ಯೂರಿ ಹಾಕಿ ಬಾಡಿಸಿ, ಆಲೂಗೆಡ್ಡೆ ತುಂಡುಗಳನ್ನು ಹಾಕಿ, ಐದಾರು ನಿಮಿಷ ಚೆನ್ನಾಗಿ ಬಾಡಿಸಿ ಮತ್ತು ಗೋಡಂಬಿ ಪೇಸ್ಟ್, ದಪ್ಪ ಮೆಣಸಿನಕಾಯಿ ಹಾಕಿ ಒಂದೆರಡು ನಿಮಿಷ ಹುರಿದು ನಂತರ ಅಚ್ಚಮೆಣಸಿನಪುಡಿ,ಉಪ್ಪು, ಕೊತ್ತುಂಬರಿ ಸೊಪ್ಪು ಸ್ವಲ್ಪ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ, ಕಾಲು ಕಪ್ ನೀರು ಹಾಕಿ ಬೇಯಲು ಬಿಡಿ. ಆಲೂ ಮತ್ತು ಮೆಣಸಿನಕಾಯಿ ಬೆಂದು ಅದರ ನೀರು ಎಲ್ಲಾ ಡ್ರೈ ಆದ ಮೇಲೆ ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ, ಚೆನ್ನಾಗಿ ಬೆರೆಸಿ.ಇದನ್ನು ಚಪಾತಿ,ಪೂರಿ,ಪರೋಟ ಅಥವಾ ಊಟಕ್ಕೆ ನೆಂಚಿಕೊಳ್ಳಲು ನೀಡಬಹುದು.

* ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಂತೆ ಬೆರೆಸಿಕೊಳ್ಳಿ.
* ಈ ಮಸಾಲ ತುಂಬಾ ತೆಳ್ಳಗೆ ಇರುವುದಿಲ್ಲ. ಮಸಾಲೆ ಸ್ವಲ್ಪ ಗಟ್ಟಿಯಾಗಿದ್ದರೆ ಚೆನ್ನಾಗಿರುತ್ತದೆ.
* ತರಕಾರಿಗಳನ್ನು ಬಹಳ ಬೇಯಿಸಬಾರದು.

Sunday, October 11, 2009

Bengalgram kootu -ಕಡ್ಲೆಬೇಳೆ ಕಾಳು /ಕಡಲೆಬೇಳೆ ತಾಳು:

ಕಡ್ಲೆಬೇಳೆ ಕಾಳು /ಕಡಲೆಬೇಳೆ ತಾಳು:

ಸಾಮಾಗ್ರಿಗಳು:

ಕಡ್ಲೆಬೇಳೆ - ಒಂದು ಬಟ್ಟಲು
ವಿವಿಧರೀತಿಯ ಹೆಚ್ಚಿದ ತರಕಾರಿಗಳು-ಕ್ಯಾರೆಟ್, ಆಲೂಗೆಡ್ಡೆ, ಪಡವಲಕಾಯಿ, ಹೂಕೋಸು, ಸೋರೆಕಾಯಿ, ಟಮೋಟೋ
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಒಂದು ಹಸಿಮೆಣಸಿನ ಕಾಯಿ ಮದ್ಯಕ್ಕೆ ಸೀಳಿದ್ದು
ಎಣ್ಣೆ, ಸಾಸಿವೆ, ಕರಿಬೇವು
ಅರಿಶಿಣದ ಪುಡಿ
ಧನಿಯಾಪುಡಿ
ಖಾರದಪುಡಿ
ಸಾಂಬಾರ್ ಪುಡಿ (ಸಾರಿನ ಪುಡಿ)
ಉಪ್ಪು
ತೆಂಗಿನತುರಿ ಬೇಕಾದರೆ
ಕೊತ್ತುಂಬರಿಸೊಪ್ಪು
ವಿಧಾನ:

ಕಡ್ಲೆಬೇಳೆಯನ್ನು,ಎಣ್ಣೆ ಒಂದು ಚಮಚ,ಸ್ವಲ್ಪ ಅರಿಶಿಣ ಹಾಕಿ,ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು(ಕಡ್ಲೆಬೇಳೆಯನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ತರಕಾರಿಗಳು,ಸಾರಿನಪುಡಿ,ಖಾರದಪುಡಿ,ಧನಿಯಾಪುಡಿ,ಉಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ,ಚೆನ್ನಾಗಿ ಬೆರೆಸಿ,ತರಕಾರಿಗಳು ಬೇಯುವವರೆಗೂ ಬೇಯಿಸಿಕೊಳ್ಳಿ.ಈ ಸಮಯದಲ್ಲಿ ಬೇಳೆ ಹದವಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಕುದಿಸಿ,ಇಳಿಸಿ. ಇದನ್ನು ಊಟಕ್ಕೆ ಅಥವಾ ಚಪಾತಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ. ಈ ಕಾಳು ಅಥವಾ ತಾಳನ್ನು ಹಬ್ಬದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.

* ಒಗ್ಗರಣೆ - ಎಣ್ಣೆಯನ್ನು ಬಿಸಿಮಾಡಿ, ಸಾಸಿವೆ, ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ.
*ಕುಕ್ಕರ್ ನಲ್ಲಿ ತಯಾರಿಸುವುದಾದರೆ ಬೇಳೆಯನ್ನು ಮೊದಲು 5-10 ನಿಮಿಷ ಬೇಯಿಸಿಕೊಂಡು, ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.

Sunday, July 12, 2009

Ragi Roti / Rotti - ರಾಗಿರೊಟ್ಟಿ:

ರಾಗಿರೊಟ್ಟಿ:

ಸಾಮಗ್ರಿಗಳು:

ರಾಗಿಹಿಟ್ಟು - ಎರಡು ಬಟ್ಟಲು
ಗೋಧಿಹಿಟ್ಟು - ನಾಲ್ಕು ಚಮಚ
ಉಪ್ಪು ಸ್ವಲ್ಪ
ಬಿಸಿನೀರು

ವಿಧಾನ:

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ, ಬಿಸಿನೀರು ಹಾಕಿ ರೊಟ್ಟಿಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
ಕಿತ್ತಳೆ ಗಾತ್ರದಲ್ಲಿ ಉಂಡೆಗಳನ್ನು ತೆಗೆದುಕೊಂಡು, ರೊಟ್ಟಿ ತಟ್ಟಿ ತವಾ ಮೇಲೆ ಹಾಕಿ ಬೇಯಿಸಿ. ಎರಡು ಬದಿ ಸರಿಯಾಗಿ ಬೇಯಿಸಿ, ರಾಗಿರೊಟ್ಟಿ ತಯಾರಾಗುತ್ತದೆ. ಇದನ್ನು ಚಟ್ನಿಯೊಂದಿಗೆ ಸರ್ವ್ ಮಾಡಿ. ಬೆಣ್ಣೆ ಮತ್ತು ಖಾರಚಟ್ನಿ ಜೊತೆ ಸಹ ಕೊಡಬಹುದು.ಕೊತ್ತುಂಬರಿಸೊಪ್ಪಿನ ಚಟ್ನಿಯೂ ಹೊಂದುತ್ತದೆ. ಈ ಚಟ್ನಿಗೆ ಕೆಲವರು ಗೊಡ್ಡುಖಾರ ಅಂತ ಕರೆಯುತ್ತಾರೆ. ಈ ರಾಗಿರೊಟ್ಟಿ ಮತ್ತು ಗೊಡ್ಡುಖಾರ ಜೊತೆ ತಿಂದರೆ ಗಂಟಲು ನೋವಿಗೆ ಸ್ವಲ್ಪ ಉಪಶಮನ ಸಿಗುತ್ತದೆ.

* ರೊಟ್ಟಿ ತಟ್ಟುವಾಗ ಮತ್ತು ಬೇಯಿಸುವಾಗ ಎಣ್ಣೆ ಹಾಕಿಕೊಳ್ಳಬಹುದು.
* ಕಲೆಸಿಕೊಳ್ಳುವಾಗ ಅನ್ನವನ್ನು ಸಹ ಚೆನ್ನಾಗಿ ಮಿದ್ದು (ಪೇಸ್ಟ್) ಸೇರಿಸಬಹುದು.

Friday, May 8, 2009

JavaLikaayiGorikaayi Palya-ಜವಳಿಕಾಯಿ/ಗೋರಿಕಾಯಿಪಲ್ಯ:

ಜವಳಿಕಾಯಿ/ಗೋರಿಕಾಯಿಪಲ್ಯ:

ಸಾಮಗ್ರಿಗಳು:


ಜವಳಿಕಾಯಿ/ಗೋರಿಕಾಯಿ
ಈರುಳ್ಳಿ
ಹಸಿಮೆಣಸಿನಕಾಯಿ
ಕರಿಬೇವು
ಚಿಟಿಕೆ ಸಕ್ಕರೆ/ಬೆಲ್ಲ
ಕಾಯಿತುರಿ
ಕೊತ್ತುಂಬರಿಸೊಪ್ಪು
ಉಪ್ಪು
ಜೀರಿಗೆ
ಎಣ್ಣೆ

ತಯಾರಿಸುವ ರೀತಿ:

ಮೊದಲು ಜವಳಿಕಾಯಿಯನ್ನು ಬಿಡಿಸಿಕೊಂಡು,ಅದನ್ನು ಸಣ್ಣಗೆ ಹೆಚ್ಚಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ,ಹಸಿಮೆಣಸಿನಕಾಯಿ,ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ,ಬಾಡಿಸಿ. ಈರುಳ್ಳಿ ಸ್ವಲ್ಪ ಬೇಯುವವರೆಗು ಹುರಿದು,ಜವಳಿಕಾಯಿ ಹಾಕಿ ಹಾಗೇ ಹುರಿಯಿರಿ. ನಂತರ ಅದಕ್ಕೆ ಬೆಲ್ಲ ಮತ್ತು ಉಪ್ಪು ಹಾಕಿ ಕಾಲು ಲೋಟ ನೀರು ಹಾಕಿ,ನಂತರ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎರಡನ್ನು ಬೆರೆಸಿ. ಗೋರಿಕಾಯಿ ಬೇಯುವವರೆಗು ಬೇಯಿಸಿ. ಕುಕ್ಕರ್ ನಲ್ಲಿಯಾದರೆ ಒಂದು ವಿಷ್ಹಲ್ ಸಾಕು.ಒಲೆಯಿಂದ ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಅಥವ ಚಪಾತಿ ಮತ್ತು ರೊಟ್ಟಿ ಜೊತೆಯಲ್ಲಿ ತಿನ್ನಲು ಕೊಡಬಹುದು. ರೊಟ್ಟಿಗೆ ತುಂಬಾ ಚೆನ್ನಾಗಿರುತ್ತದೆ. ಕಾಯಿತುರಿಯನ್ನು ಬೇಯಿಸುವಾಗಲೇ ಹಾಕುವುದರಿಂದ ಅದರ ರಸ ಬಿಡುವುದರಿಂದ ರುಚಿ ಹೆಚ್ಚುತ್ತದೆ. ಮೇಲೆ ಮತ್ತೆ ಬೇಕಾದರೆ ಕೊತ್ತುಂಬರಿ ಮತ್ತು ಕಾಯಿತುರಿಯನ್ನು ಸೇರಿಸಬಹುದು.

Saturday, April 18, 2009

Plain Pulao Rice / ಪಲಾವ್

ಪಲಾವ್:

ಸಾಮಗ್ರಿಗಳು:

ಈರುಳ್ಳಿ ಹೆಚ್ಚಿದ್ದು
ಹಸಿಮೆಣಸಿನಕಾಯಿ
ಅಚ್ಚಖಾರದ ಪುಡಿ
ಜೀರಿಗೆ
ಅರಿಶಿಣದ ಪುಡಿ
ಚೆಕ್ಕೆ, ಲವಂಗ,ಏಲಕ್ಕಿ ಮತ್ತು ಪತ್ರೆ
ಕಾಯಿತುರಿ
ಅಕ್ಕಿ - ನೆನೆಸಿದ್ದು
ಕೊತ್ತುಂಬರಿ ಸೊಪ್ಪು
ನಿಂಬೆರಸ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಕಾದ ಮೇಲೆ ಜೀರಿಗೆ,ಚೆಕ್ಕೆ,ಲವಂಗ,ಪತ್ರೆ ಮತ್ತು ಏಲಕ್ಕಿ ಹಾಕಿ,ಕೆದಕಿ,ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಈರುಳ್ಳಿ ಸ್ವಲ್ಪ ಕೆಂಪಾಗುವವರೆಗೂ ಬಾಡಿಸಿ,ಅದನ್ನು ಒಂದೆರಡು ನಿಮಿಷ ಹುರಿದು,ಅದಕ್ಕೆ ಅರಿಶಿಣ,ಕಾರದಪುಡಿ,ಉಪ್ಪು,ಕಾಯಿತುರಿ ಮತ್ತು ನೀರನ್ನು ಹಾಕಿ,ನೆನೆಸಿದ ಅಕ್ಕಿಯನ್ನು ಹಾಕಿ,ನಿಂಬೆರಸ ಮತ್ತು ಕೊತ್ತುಂಬರಿ ಸೊಪ್ಪು ಹಾಕಿ,ಚೆನ್ನಾಗಿ ಬೆರೆಸಿ,ಮುಚ್ಚಿಟ್ಟು ಒಂದು ವಿಷ್ಹಲ್ ಕೂಗಿಸಿ ಒಲೆಯಿಂದ ಇಳಿಸಿ. ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ. ಮೊಸರಿನ ರಾಯತದೊಂದಿಗೆ ಬಡಿಸಿ.

Thursday, March 19, 2009

Palak Potato Curry-ಆಲೂ-ಪಾಲಕ್ ಗೊಜ್ಜು,

ಆಲೂ-ಪಾಲಕ್ ಮಸಾಲೆ:

ಬೇಕಾಗುವ ಸಾಮಗ್ರಿಗಳು;ಪಾಲಕ್ ಸೊಪ್ಪು
ಆಲೂಗೆಡ್ಡೆಯನ್ನು ಹೆಚ್ಚಿಕೊಳ್ಳಿ
ಹೆಚ್ಚಿದ ಈರುಳ್ಳಿ
ಒಂದು ಹಸಿಮೆಣಸಿನಕಾಯಿ
ಅಚ್ಚಖಾರದಪುಡಿ
ಧನಿಯ
ಜೀರಿಗೆಪುಡಿ
ಗರಂಮಸಾಲಾ
ಬೆಣ್ಣೆ - ಎರಡು ಚಮಚ
ಕೊತ್ತುಂಬರಿಸೊಪ್ಪು
ಎಣ್ಣೆ, ಜೀರಿಗೆ, ಕರಿಬೇವು
ಉಪ್ಪು ರುಚಿಗೆ

ವಿಧಾನ;
ಮೊದಲು ಪಾಲಕ್ ಸೊಪ್ಪನ್ನು ಶುಚಿಗೊಳಿಸಿ,ಚೆನ್ನಾಗಿ ಉಪ್ಪು ಮತ್ತು ವಿನಿಗರ್ ನೀರಿನಲ್ಲಿ ತೊಳೆದು,ಅದನ್ನು ಐದು ನಿಮಿಷ ಸ್ವಲ್ಪ ಬಿಸಿನೀರಿನಲ್ಲಿ ಬೇಯಿಸಿಕೊಂಡು ಪೇಸ್ಟ್ ತರಹ ರುಬ್ಬಿಕೊಳ್ಳಿ
ಪಾತ್ರೆಗೆ ಎಣ್ಣೆಯನ್ನು ಹಾಕಿ, ಜೀರಿಗೆ ಹಾಕಿ ಚಟಪಟ ಅಂದಾಗ ಕರಿಬೇವು,ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ. ಎರಡು ನಿಮಿಷದ ನಂತರ ಆಲೂಗೆಡ್ಡೆಯನ್ನು ಹಾಕಿ. ಒಂದೆರಡು ನಿಮಿಷ ಹುರಿದು ರುಬ್ಬಿದ ಪಾಲಕ್ ಪೇಸ್ಟ್ ಅನ್ನು ಹಾಕಿ,ಅದರ ಜೊತೆಗೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಐದಾರು ನಿಮಿಷ ಹುರಿದು,ಕಾರದಪುಡಿ,ಧನಿಯ ಮತ್ತು ಜೀರಿಗೆಪುಡಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ. ಎಷ್ಟು ಅಗತ್ಯವೋ ಅಷ್ಟು ಮಾತ್ರ ನೀರನ್ನು ಹಾಕಿ,ಆಲೂಗೆಡ್ಡೆ ಬೇಯುವವರೆಗೆ ಬೇಯಿಸಿ, ಕೊನೆಯಲ್ಲಿ ಕೊತ್ತುಂಬರಿಸೊಪ್ಪು ಮತ್ತು ಗರಂಮಸಾಲ ಬೆರೆಸಿ.ಬೆಣ್ಣೆಯನ್ನು ಬೆರೆಸಿ, ಒಂದು ನಿಮಿಷದ ನಂತರ ಇಳಿಸಿ,ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ,ಈ ಮಸಾಲೆಯನ್ನು ಚಪಾತಿ ಮತ್ತು ಪರೋಟದೊಂದಿಗೆ ನೀಡಬಹುದು.

Wednesday, November 12, 2008

Tamarind gojju / ಹುಣಸೆಗೊಜ್ಜು


ಹುಣಸೆಹಣ್ಣಿನ ಹುಳಿಗೊಜ್ಜು:

ಸಾಮಗ್ರಿಗಳು:

ಹುಣಸೆಹಣ್ಣಿನರಸ - ಒಂದು ಬಟ್ಟಲು
ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ
ಹಸಿಮೆಣಸಿನಕಾಯಿ -ಒಂದು ಉದ್ದಕ್ಕೆ ಹೆಚ್ಚಿ
ಕಾರದ ಪುಡಿ ರುಚಿಗೆ
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು

ವಿಧಾನ:
ಹುಣಸೆಹಣ್ಣಿನ ರಸವನ್ನು ಸ್ವಲ್ಪ ನೀರು ಹಾಕಿ ಬೆರೆಸಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ,ಕಾರದ ಪುಡಿ,ಉಪ್ಪು ಮತ್ತು ಕೊತ್ತುಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಿವುಚಿ. ಸ್ವಲ್ಪ ಸಾರಿನ ಪುಡಿ ಬೇಕಾದರೂ ಹಾಕಬಹುದು. ಹುಣಸೆಗೊಜ್ಜು ರೆಡಿ. ಇದು ಉಪ್ಪಿಟ್ಟಿನ ಜೊತೆ ಒಳ್ಳೆಯ ಜೊತೆ. ಅದಕ್ಕೆ ಕಲಸಿಕೊಂಡು ತಿನ್ನಬಹುದು. ಅನ್ನಕ್ಕೂ ಸೈ. ಅರುಚಿ ಆದವರಿಗೂ ಮತ್ತು ಪಿತ್ತಕ್ಕೂ ಒಳ್ಳೆಯದು.

Thursday, June 19, 2008

Vegetable Curry/Saagu - ತರಕಾರಿ ಸಾಗು:


ತರಕಾರಿ ಸಾಗು:

ಸಾಮಗ್ರಿಗಳು:

ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು,ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ಼್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು

ವಿಧಾನ:

ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು,ಹೆಚ್ಚಿದ ತರಕಾರಿಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ,ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ,ಚೆನ್ನಾಗಿ ತಿರುಗಿಸಿ,ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ,ಗರಂಮಸಾಲ ಸಹ ಹಾಕಿ ತಿರುಗಿಸಿ.ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು.ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ. ಇದನ್ನು ಚಪಾತಿ,ಪೂರಿ,ಪರೋಟ ಮತ್ತು ದೋಸೆಯೊಂದಿಗೆ ಸಹ ತಿನ್ನಬಹುದು. ಅನ್ನಕ್ಕು ತುಂಬಾ ಚೆನ್ನಾಗಿರುತ್ತದೆ. ಮಕ್ಕಳಿಗೆ ಸಾಗು ಅನ್ನ ಇಷ್ಟವಾಗುತ್ತದೆ. ಯಾವುದಕ್ಕಾದರೂ ಸರಿ ಇಲ್ಲವೆಂದರೆ ಊಟಕ್ಕೂ ಕೂಡ ನೆಂಚಿಕೊಳ್ಳಬಹುದು.

*ಎಲ್ಲಾ ತರಕಾರಿಗಳು ಬೇಕೇಬೇಕು ಅಂತ ಏನು ಇಲ್ಲ. ಕೆಲವು ನಿಮಗೆ ಬೇಕೆನಿಸಿದಂತೆ ಹಾಕಿಕೊಳ್ಳಬಹುದು.

Thursday, April 17, 2008

GreenChillies Paste - ಹಸಿಮೆಣಸಿನಕಾಯಿಕಾರ

ಹಸಿಮೆಣಸಿನಕಾರ ತಯಾರಿಸಲು-

ಸಾಮಗ್ರಿಗಳು:

ಹಸಿಮೆಣಸಿನಕಾಯಿ
ಕೊತ್ತುಂಬರಿಸೊಪ್ಪು
ಉಪ್ಪು
ವಿನಿಗರ್ ಒಂದು ಚಮಚ

ವಿಧಾನ:

ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ವಿನಿಗರ್ ಮತ್ತು ಉಪ್ಪು ರುಬ್ಬಿಕೊಳ್ಳಿ.
ಇದನ್ನು ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಫ್ರಿಡ್ಜ್ ನಲ್ಲಿ ಕೆಲವು ದಿನ ಕೆಡದೆ ಇರುತ್ತದೆ.

Saturday, November 17, 2007

Tamarind Chitranna - ಹುಳಿ ಚಿತ್ರಾನ್ನ

ಹುಳಿ ಚಿತ್ರಾನ್ನ ತಯಾರಿಸಿದಂತೆ ತಯಾರಿಸಿ,ಹುರಿದು ಪುಡಿ ಮಾಡಿದ ಮಸಾಲೆ ಹಾಕಿ ತಯಾರಿಸುವುದು-ಈ ಚಿತ್ರಾನ್ನ. ಇದು ಎಲ್ಲಾ ಚಿತ್ರಾನ್ನಗಳಿಗಿಂತ ತುಂಬಾ ರುಚಿಯಾಗಿರುತ್ತದೆ. ಸ್ವಲ್ಪ ಜಾಸ್ತಿ ತಿಂದರೂ ಗೊತ್ತಾಗಲ್ಲ. ನನ್ನ ಅಜ್ಜಿ ತುಂಬಾ ಚೆನ್ನಾಗಿ ಮಾಡುತ್ತಿದ್ದರು ಇದನ್ನು.ಅಮ್ಮ ಸಹ. ಆಗಿನ ಕಾಲದ ರುಚಿಗಳು ಈಗ ಇಲ್ಲ.ಅವರು ಕಡ್ಲೆಕಾಯಿಬೀಜದ ಬದಲಿಗೆ ಕಡ್ಲೆಕಾಳು ಹಾಕುತ್ತಿದ್ದರು.ತಿನ್ನುವಾಗ ಕಡ್ಲೆಕಾಳು ಸಿಕ್ಕಿದಾಗ ಅದೊಂಥರ ತುಂಬಾ ರುಚಿಯಾಗಿರುತ್ತಿತ್ತು. ಅಜ್ಜಿ ಮತ್ತು ಅಮ್ಮನ ನೆನಪಿನೊಂದಿಗೆ ಈ ರೆಸಿಪಿ ಬರೆದಿರುವೆ.
ಮಸಾಲೆ ಹುಳಿ ಚಿತ್ರಾನ್ನ:

ಬೇಕಾಗುವ ಸಾಮಗ್ರಿಗಳು;
ಅನ್ನ- ಎರಡು ಬಟ್ಟಲು,
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್)-ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ಹುರಿದು ಪುಡಿ ಮಾಡಿಕೊಳ್ಳಲು ಪದಾರ್ಥಗಳು:

ಜೀರಿಗೆ - ಎರಡು ಚಮಚ
ಮೆಂತ್ಯ- ಅರ್ಧ ಚಮಚ
ಸಾಸಿವೆ- ಒಂದು ಚಮಚ
ಎಳ್ಳು- ಎರಡು ಚಮಚ

ಇದಿಷ್ಟನ್ನು ಎಣ್ಣೆ ಹಾಕದೆ ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ. ಎಳ್ಳನ್ನು ತರಿತರಿಯಾಗಿ ಪುಡಿ ಮಾಡಿ.

ತಯಾರಿಸುವ ವಿಧಾನ:ಉದುರು ಉದುರಾಗಿ ಮಾಡಿಕೊಂಡಿರುವ ಅನ್ನವನ್ನು ಅಗಲವಾದ ಪಾತ್ರೆಗೆ ಹಾಕಿ,ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು , ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ, ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಪದಾರ್ಥಗಳನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ. ಇದನ್ನು ತಯಾರಿಸದ ತಕ್ಷಣವೇ ತಿನ್ನುವುದಕ್ಕಿಂತ ಸ್ವಲ್ಪ ಸಮಯದ ನಂತರ ತಿಂದರೆ ಒಂದು ರೀತಿ ರುಚಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ಮಸಾಲೆ ಹುಳಿ ಚಿತ್ರಾನ್ನ ತಯಾರಾಗುತ್ತದೆ.

Tuesday, July 3, 2007

Bittergourd /ಹಾಗಲಕಾಯಿ ಗೊಜ್ಜು

ಹಾಗಲಕಾಯಿ ಎಷ್ಟೇ ಕಹಿ ಆಗಿದ್ದರೂ ಅದು ತುಂಬಾ ಹೆಸರುವಾಸಿಯಾಗಿದೆ. ಇದು ಮಧುಮೇಹ ರೋಗಕ್ಕೆ ರಾಮಬಾಣವಾದ್ದರಿಂದ ಎಲ್ಲರಿಗೂ ಹತ್ತಿರವಾಗುತ್ತಿದೆ. ಇದರಿಂದ ಅನೇಕ ಅಡಿಗೆಗಳನ್ನು ಮಾಡಬಹುದು. ಈ ಕಾಯಿಯ ರಸವನ್ನು ಪ್ರತಿದಿನ ಶುಗರ್ ಇರುವವರು ಕುಡಿದರೆ ಉಪಯುಕ್ತ. ಕಹಿಯಾಗಿದ್ದರೂ ಒಂದು ವಿಚಿತ್ರ ರೀತಿಯ ರುಚಿ ಕೊಡುವ ಹಾಗಲಕಾಯಿ ನೋಡಲು ಚೆಂದ. ಅದು ಬಳ್ಳಿಯಲ್ಲಿ ಕಾಯಿ ಬಿಟ್ಟಿದ್ದಾಗ ಅದೊಂದು ತರಹ ಸೊಗಸಾಗಿ ಕಾಣುತ್ತದೆ. ಕಹಿಯಾದರೂ ಅದು ಅಮೃತವಿದ್ದಂತೆ. ಈಗ ಇಲ್ಲಿ ಹಾಗಲಕಾಯಿ ಗೊಜ್ಜು ಬಗ್ಗೆ ತಿಳಿಸಿದೆ. ನೀವು ತಯಾರಿಸಿ ನೋಡಿ.


ಹಾಗಲಕಾಯಿ ಗೊಜ್ಜು:

ಬೇಕಾಗುವ ಸಾಮಗ್ರಿಗಳು:

ಹೆಚ್ಚಿದ ಹಾಗಲಕಾಯಿ - ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಅರಿಶಿಣದ ಪುಡಿ
ಬೆಲ್ಲ ಸ್ವಲ್ಪ
ಹುಣೆಸೇರಸ ಒಂದೆರಡು ಚಮಚ
ಕರಿಬೇವು
ಕಾಯಿತುರಿ ಸ್ವಲ್ಪ
ಒಂದು ಸಣ್ಣ ಈರುಳ್ಳಿ
ಅಚ್ಚ ಮೆಣಸಿನ ಪುಡಿ
ಧನಿಯಾ ಪುಡಿ
ಹೆಚ್ಚಿದ ಕೊತ್ತುಂಬರಿ ಸೊಪ್ಪು
ಉಪ್ಪು
ಎಣ್ಣೆ

ವಿಧಾನ:

ಮೊದಲು ಸಣ್ಣ ಈರುಳ್ಳಿ, ತೆಂಗಿನಕಾಯಿತುರಿ, ಕಾರದಪುಡಿ,ಧನಿಯಾಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕಾದ ಬಳಿಕ,ಸಾಸಿವೆ,ಕರಿಬೇವು,ಅರಿಶಿಣ,ಹೆಚ್ಚಿದ ಈರುಳ್ಳಿ ಹಾಕಿ,ಬಾಡಿಸಿ. ಹಾಗಲಕಾಯಿಗಳನ್ನು ಹಾಕಿ ಒಗ್ಗರಣೆಯಲ್ಲಿಯೇ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಅದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ, ಉಪ್ಪು ಮತ್ತು ಬೆಲ್ಲ ಹಾಕಿ, ನೀರು ಎಷ್ಟು ಬೇಕೋ ಅಷ್ಟನ್ನು ಹಾಕಿ, ಬೇಯಲು ಬಿಡಿ. ಬೆಂದ ನಂತರ ಇಳಿಸಿ,ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.ಮನೆಯಲ್ಲಿ ಎಲ್ಲರು ತಿನ್ನಬಹುದಾದಂತ ಹಾಗಲಕಾಯಿ ಗೊಜ್ಜು ತಯಾರಾಗಿದೆ. ಇದನ್ನು ಅನ್ನ,ಚಪಾತಿ,ರೊಟ್ಟಿಗಳೊಂದಿಗೆ ಬಡಿಸಬಹುದು. ಅನ್ನಕ್ಕೂ ತುಂಬಾ ರುಚಿಯಾಗಿರುತ್ತದೆ ಅಥವಾ ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.ಈ ಗೊಜ್ಜು ಸ್ವಲ್ಪ ದೊಡ್ಡ ಮಕ್ಕಳಿಗೆ ಸಹ ಇಷ್ಟವಾಗುತ್ತದೆ.

Saturday, May 26, 2007

Tomato Gojju/ palya / ಟೊಮೆಟೋ ಗೊಜ್ಜು

ಟೊಮೊಟೊ ಹಣ್ಣಿನಿಂದ ತುಂಬಾ ಡಿಶಸ್‌ ಮಾಡಬಹುದು, ಅದರಲ್ಲಿ ಇದು ಒಂದು. ಇದು ಚಪಾತಿಗೆ ನೆಂಚಿಕೊಳ್ಳಲು ಬಲು ಚೆಂದ. ಬೇಗ ತಯಾರಿಸಬಹುದು.

ಟೊಮೆಟೋ ಗೊಜ್ಜು :

ಬೇಕಾಗುವ ಪದಾರ್ಥಗಳು :
ಹಣ್ಣಾಗಿರುವ ಟೊಮೊಟೊ 4ರಿಂದ 5,
ಈರುಳ್ಳಿ 2
ಹಸಿಮೆಣಸಿನಕಾಯಿ 2
ಕರಿಬೇವು(ಬೇಕಾದರೆ),
ಎಣ್ಣೆ,
ಸಾಸಿವೆ
ಉದ್ದಿನಬೇಳೆ,
ಕಡಲೆಬೇಳೆ ,
ಕೆಂಪು ಮೆಣಸಿನ ಪುಡಿ ,
ಉಪ್ಪು,
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :

ಮೊದಲಿಗೆ ಈರುಳ್ಳಿ, ಹಸಿಮೆಣಸಿನಕಾಯಿ , ಕೊತ್ತುಂಬರಿ ಹೆಚ್ಚಿಕೊಳ್ಳಿ.
ಒಗ್ಗರಣೆಗೆ ಪಾತ್ರೆ ಇಟ್ಟು ಎಣ್ಣೆ ಹಾಕಿ, ಕಾದ ಬಳಿಕ ಸಾಸಿವೆ,ಉದ್ದಿನಬೇಳೆ, ಕರಿಬೇವು, ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಹಾಕಿ ಬಾಡಿಸಿ, ನಂತರ ಟೊಮೊಟೊ ಹಾಕಿ ಚೆನ್ನಾಗಿ ತಿರುವಿ. ಟೊಮೊಟೊ ಬೇಯಲು ಬಿಡಿ.ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಬೆಂದ ನಂತರ ತೆಳುವಾಗಿ, ಹೆಚ್ಚಾಗಿ ಬೇಕಾಗಿದ್ದರೆ ಸ್ವಲ್ಪ ನೀರು ಹಾಕಿ, ಉಪ್ಪು ಮತ್ತು ಕೆಂಪುಮೆಣಸಿನಪುಡಿ ಹಾಕಿ ಚೆನ್ನಾಗಿ ತಿರುವಿ. ಸ್ವಲ್ಪ ಹೊತ್ತು ಹಾಗೆ ಬಿಟ್ಟು ನಂತರ ಕೊತ್ತುಂಬರಿ ಉದುರಿಸಿ. ಇದಕ್ಕೆ ಬೇಕಾದರೆ ಕೊಬ್ರಿ ತುರಿ ಇಲ್ಲಾ ಹಸಿಕಾಯಿತುರಿ ಹಾಕಿ ಬೆರಸಿ. ಇದು ಚಪಾತಿ ಮತ್ತು ಬ್ರೆಡ್‌ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಬೇಗ ಕೂಡಾ ಆಗುತ್ತದೆ. ಉಪ್ಪು , ಖಾರ ಹೆಚ್ಚಾಗಿ ಹಾಕಿದರೆ ಅನ್ನಕ್ಕೂ ಕಲಸಿಕೊಂಡು ತಿನ್ನಬಹುದು.

Sunday, May 6, 2007

Puliyogaregojju- ಪುಳಿಯೋಗರೆ ಗೊಜ್ಜು:

ಪುಳಿಯೋಗರೆ ಗೊಜ್ಜು :


ಪುಡಿ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು:

ಒಣಮೆಣಸಿನಕಾಯಿ ರುಚಿಗೆ
ಧನಿಯಾ - ಎರಡು ಚಮಚ
ಜೀರಿಗೆ - ಎರಡು ಚಮಚ
ಮೆಣಸು - ಒಂದು ಚಮಚ
ಕಡ್ಲೆಬೇಳೆ ಮತ್ತು ಉದ್ದಿನಬೇಳೆ- ಒಂದೊಂದು ಚಮಚ
ಚೆಕ್ಕೆ,ಲವಂಗ ಸ್ವಲ್ಪ

ಒಗ್ಗರಣೆಗೆ:

ಎಣ್ಣೆ - ಒಂದು ಬಟ್ಟಲು
ಸಾಸಿವೆ,
ಮತ್ತು ಇಂಗು ಚಿಟಿಕೆ


ಗೊಜ್ಜಿಗೆ:

ಹುಣಸೇಹಣ್ಣು ಅಥವಾ ಹುಣಸೇಹಣ್ಣಿನ ಪೇಸ್ಟ್
ಬೆಲ್ಲ ಸ್ವಲ್ಪ / ಬೆಲ್ಲದ ಪುಡಿ - ಒಂದು ಚಮಚ
ಕಾಲು ಚಮಚ ಅರಿಶಿನ
ಉಪ್ಪು
ಎಣ್ಣೆ ಸಾಕಾಗುವಷ್ಟು

ತಯಾರಿಸುವ ರೀತಿ:

• ಹುಣಸೇಹಣ್ಣನ್ನು ಉಪಯೋಗಿಸುವುದಾದರೆ, ಹುಣಸೇಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಹಾಕಿ ಸುಮಾರು ಹೊತ್ತು. ನಂತರ ಅದರಿಂದ ರಸವನ್ನು ತೆಗೆದುಕೊಳ್ಳಿ. ಈ ರಸವೂ ತುಂಬಾ ಗಟ್ಟಿಯಾಗಿರಬೇಕು. ಹೀಗೆ ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಂಡಿಕೊಂಡು ರಸ ತೆಗೆದು. ಅದನ್ನು ಸೋಸಿಕೊಳ್ಳಿ. ಆ ಕಡೆ ಇಡಿ.
• ಪುಡಿ ಮಾಡಿಕೊಳ್ಳಲು ಹೇಳಿರುವ ಸಾಮಗ್ರಿಗಳನ್ನು ಒಂದು ಪ್ಯಾನ್ ಗೆ ಒಂದು ಚಮಚ ಎಣ್ಣೆ ಹಾಕಿ ಅದೆಲ್ಲವನ್ನು ಒಂದೊಂದಾಗಿ ಹುರಿದಿಟ್ಟುಕೊಳ್ಳಿ.
• ಬೇರೆ ಸ್ವಲ್ಪ ದಪ್ಪ ತಳದ ಪಾತ್ರೆಗೆ ಐದಾರು ಚಮಚ ಎಣ್ಣೆಯನ್ನು ಹಾಕಿ, ಸಾಸಿವೆ ಮತ್ತು ಇಂಗು ಹಾಕಿ, ಅದಕ್ಕೆ ಹುಣಸೇಹಣ್ಣಿನ ರಸವನ್ನು ಹಾಕಿ, ಕುದಿಯಲು ಇಡಿ. ಅದರ ನೀರಿನ ಅಂಶವೆಲ್ಲಾ ಹೋದ ಮೇಲೆ ಪುಡಿ ಮಾಡಿಟ್ಟುಕೊಂಡಿರುವ ಮಸಾಲೆ ಪುಡಿಯನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರಸಿ, ಕೈ ಬಿಡದೇ ತಿರುಗಿಸುತ್ತಿರಿ. ಅರಿಶಿನ,ಉಪ್ಪು ಮತ್ತು ಬೆಲ್ಲ ಸೇರಿಸಿ, ಮತ್ತೆರಡು ಚಮಚ ಎಣ್ಣೆ ಹಾಕಿ. ಈ ಸಮಯದಲ್ಲಿ ನಿಮಗೆ ಬೇಕಾದಂತೆ ಉಪ್ಪು ಮತ್ತು ಕಾರವನ್ನು ಸರಿಯಾಗಿದೆಯಾ ಎಂದು ನೋಡಿ, ಏನು ಬೇಕೋ ಅದನ್ನು ಹಾಕಿ. ಉಪ್ಪು ಮತ್ತು ಕಾರ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು. ಆಮೇಲೆ ಅನ್ನಕ್ಕೆ ಕಲಸುವಾಗ ಸಪ್ಪೆ ಬರುತ್ತೆ ಇಲ್ಲ ಅಂದರೆ. ಅದಕ್ಕೆ ಈಗ ಜಾಸ್ತಿ ಹಾಕಿಕೊಳ್ಳಬೇಕು. ಮಧ್ಯೆ-ಮಧ್ಯೆ ತಿರುಗಿಸುತ್ತಿರಿ. ಎಲ್ಲಾ ಮಸಾಲೆ ಮತ್ತು ಹುಣಸೇರಸವು ಚೆನ್ನಾಗಿ ಬೆಂದ ನಂತರ ಪಾತ್ರೆಗೆ ಅಂಟಿಕೊಳ್ಳದೇ ಎಣ್ಣೆಯಿಂದ ಬೇರ್ಪಟ್ಟ ಮೇಲೆ ಗೊಜ್ಜಿನ ರೀತಿ ಹದ ಬಂದಾಗ ಉರಿಯಿಂದ ಇಳಿಸಿ. ಇದು "ಪುಳಿಯೋಗರೆ ಗೊಜ್ಜು".

• ಗೊಜ್ಜು ತಯಾರಿಸುವಾಗ ತುಂಬಾ ಹೆಚ್ಚಾಗಿ ತಯಾರಿಸಿಕೊಂಡರೆ,ಅದನ್ನು ತಣ್ಣಗಾದ ಮೇಲೆ ಗಾಳಿಯಾಡದ ಬಾಟಲ್ ನಲ್ಲಿ ತುಂಬಿಡಬಹುದು.
• ಈ ಗೊಜ್ಜನ್ನು ತಿಂಗಳುಗಟ್ಟಲೆ ಇಟ್ಟುಕೊಳ್ಳಬಹುದು. ಹೆಚ್ಚಾಗಿ ಎಣ್ಣೆಯನ್ನು ಹಾಕಿ,ಎಣ್ಣೆ ಗೊಜ್ಜಿನ ಮೇಲೆ ತೇಲುತ್ತಿರಬೇಕು.
• ಗೊಜ್ಜನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಇನ್ನೂ ಹೆಚ್ಚುಕಾಲ ಇರುತ್ತದೆ. ಬೇಕಾದಾಗ ತೆಗೆದು ಉಪಯೋಗಿಸಿಕೊಳ್ಳಬಹುದು.
• ಫ್ರೆಶ್ ಆಗಿ ತಯಾರಿಸಿಕೊಂಡರೆ ಹೆಚ್ಚು ರುಚಿ. ಇದನ್ನು ತಯಾರಿಸುವುದು ಸ್ವಲ್ಪ ಕಷ್ಟವಾಗಿರುವುದರಿಂದ ಗೊಜ್ಜನ್ನು ಮಾಡಿಟ್ಟುಕೊಂಡರೆ ಸುಲಭವಾಗುತ್ತದೆ.

Popular Posts