Friday, December 26, 2008

sihikadubu

Wednesday, December 17, 2008

Tamarind Rice / ಹುಳಿ ಚಿತ್ರಾನ್ನ:

ಹುಳಿ ಚಿತ್ರಾನ್ನ:


ಬೇಕಾಗುವ ಸಾಮಗ್ರಿಗಳು;
ಅನ್ನ- ಎರಡು ಬಟ್ಟಲು,
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ತಯಾರಿಸುವ ವಿಧಾನ:

ಉದುರು ಉದುರಾಗಿ ಮಾಡಿಕೊಂಡಿರುವ ಅನ್ನವನ್ನು ಅಗಲವಾದ ಪಾತ್ರೆಗೆ ಹಾಕಿ,ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಜೀರಿಗೆ, ಕರಿಬೇವು ,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ಹುಣಸೇಹುಳಿಯ ಚಿತ್ರಾನ್ನ ತಯಾರಾಗುತ್ತದೆ.

Tuesday, December 16, 2008

ಹುರುಳಿಕಾಳಿನ ಮಸಾಲೆ ಸಾರು / Horse Gram Curry


ಹುರುಳಿಕಾಳು ಎಂದರೆ ಕೆಲವರು ಮೂಗು ಮುರಿಯುವುದುಂಟು! ಏಕೆಂದರೆ ಇದನ್ನು ಕುದುರೆ ಮತ್ತು ಹಸುಗಳಿಗೆ ಹಾಕಲು ಉಪಯೋಗಿಸುತ್ತಾರೆ.ಅವುಗಳಿಗೆ ಇದು ದಿನನಿತ್ಯದ ಆಹಾರ.ಇದರ ಹೆಸರೇ ಇಂಗ್ಲಿಷಿನಲ್ಲಿ Horse Gram ಎಂದು ಕರೆಯುತ್ತಾರೆಂದು ಎಲ್ಲರಿಗು ತಿಳಿದಿರುವ ವಿಷಯ.ಈ ಹುರುಳಿಕಾಳುಗಳನ್ನು ಕುದುರೆಗೆ ತಿನ್ನಿಸಲು ಹೆಚ್ಚಾಗಿ ಬಳಸುತ್ತಾರೆ. ಈ ಕಾಳುಗಳು ತುಂಬಾ ಪೌಷ್ಠಿಕವಾಗಿವೆ. ಇದು ತುಂಬಾ ಶಕ್ತಿ ಉಳ್ಳದ್ದಾಗಿದೆ. ಕೆಲವರು ಇದರಿಂದ ಸುಮಾರು ರೀತಿ ಅಡಿಗೆ ತಯಾರಿಸುತ್ತಾರೆ. ಇಲ್ಲಿ ತಿಳಿಸಿರುವುದು ನಾವು ತಯಾರಿಸುವಂತ ರುಚಿಯಾದ ಮೊಳಕೆ ಹುರುಳಿಕಾಳಿನ ಸಾರು.

ಹುರುಳಿಕಾಳಿನ ಮಸಾಲೆ ಸಾರು:

ಬೇಕಾಗುವ ಸಾಮಗ್ರಿಗಳು:

ಹುರುಳಿಕಾಳು- ಒಂದು ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ತೆಂಗಿನಕಾಯಿ -ಅರ್ಧ ಬಟ್ಟಲು
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು
ಟಮೋಟೊ - ಎರಡು, ಹೆಚ್ಚಿಕೊಳ್ಳಿ
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ -ಕ್ಯಾರೆಟ್
ಆಲೂಗೆಡ್ಡೆ
ಬದನೆಕಾಯಿ
ನವಿಲುಕೋಸು
ಹೂಕೋಸು
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

*ಮೊಳಕೆ ಕಾಳು,ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.ಮೊಳಕೆ ಕಾಳು ತಯಾರಿಸುವ ಬಗೆ;

ಹುರುಳಿಕಾಳನ್ನು ಚೆನ್ನಾಗಿ ತೊಳೆದು, ಇವತ್ತು ಕಾಳುಗಳು ಬೇಕೆಂದರೆ ಅದನ್ನು ಎರಡು ದಿನದ ಹಿಂದಿನ ರಾತ್ರಿ ನೆನೆಸಿ, ಮಾರನೆ ದಿನ ಮತ್ತೆ ಚೆನ್ನಾಗಿ ತೊಳೆದು ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಅಥವ ಜಾಲರಿಗೆ ಹಾಕಿ ಮುಚ್ಚಿಟ್ಟರೆ ಸಹ ಮೊಳಕೆ ಬರುತ್ತದೆ. ನಮ್ಮ ಅಜ್ಜಿ,ಅಮ್ಮ ಮಾಡುತ್ತಿದ್ದ ತರಹ ಒಂದು ಕಾಟನ್ ಬಟ್ಟೆಯಲ್ಲಿ ಕಾಳನ್ನು ಹಾಕಿ ಗಂಟು ಕಟ್ಟಿ ಇಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ). ಈಗ ಮೊಳಕೆ/ಮೊಳೆತ ಕಾಳು ರೆಡಿ.


ಮಸಾಲೆ ತಯಾರಿಸಲು:

ಒಂದು ಚಮಚ ಎಣ್ಣೆಯನ್ನು ಪ್ಯಾನ್ ಗೆ ಹಾಕಿ ,ಈರುಳ್ಳಿಯನ್ನು, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು, ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಅಚ್ಚಖಾರದ ಪುಡಿ, ಧನಿಯಾಪುಡಿ,ಗಸಗಸೆ,ಹುರಿಗಡಲೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ಹೆಚ್ಚಿದ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು,ಕಾಳುಗಳನ್ನು ಹಾಕಿ ಅದನ್ನು ಐದು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ನೀರು ಹಾಕಿ ಬೆರೆಸಿ ಮುಚ್ಚಿಟ್ಟು ಬೇಯಿಸಿ. ಕಾಳುಗಳು ಬೇಯುವವರೆಗು ಬೇಯಿಸಿ. ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ಇಳಿಸಿ. ಹುರುಳಿಕಾಳು ಸಾರು ತಯಾರಾಗುತ್ತದೆ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಚಪಾತಿ &ಪರೋಟ ಯಾವುದರೊಂದಿಗಾದರೂ ಸರ್ವ್ ಮಾಡಿ.
* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಈ ರೀತಿಯ ಸಾರುಗಳು ಮಾರನೆ ದಿನ ಹೆಚ್ಚು ರುಚಿಯಾಗಿರುತ್ತವೆ. ಹುರುಳೀಕಾಳು ತುಂಬಾ ಶಕ್ತಿದಾಯಕ ಮತ್ತು ಉಷ್ಣ . ಮೊಳಕೆ ಬರಿಸಿ ಉಪಯೋಗಿಸಿದರೆ ಸ್ವಲ್ಪ ತಂಪು. ಈ ಕಾಳುಗಳನ್ನು ತಿನ್ನುವುದರಿಂದ ಯಾವ ತೊಂದರೆಯು ಇಲ್ಲ. ಆರೋಗ್ಯಕ್ಕೂ ಒಳ್ಳೆಯದು.

Wednesday, December 3, 2008

Cardamom Rice - ಏಲಕ್ಕಿ ಅನ್ನ:

ಏಲಕ್ಕಿ ಅನ್ನ:

ಬಾಸುಮತಿ ಅಕ್ಕಿ - ಒಂದು ಬಟ್ಟಲು
ಜೀರಿಗೆ - ಒಂದು ಚಮಚ
ಏಲಕ್ಕಿ - ಎರಡು
ಲವಂಗ -ಎರಡು
ತುಪ್ಪ/ಬೆಣ್ಣೆ
ಉಪ್ಪು ರುಚಿಗೆ

ವಿಧಾನ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆ ಹಾಕಿಡಿ.
ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಮಾಡಿ ಜೀರಿಗೆ ಏಲಕ್ಕಿ ಮತ್ತು ಲವಂಗ ಹಾಕಿ ಹುರಿದು, ಅದಕ್ಕೆ ನೆನೆಸಿದ ಅಕ್ಕಿ ಹಾಕಿ, ಉಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ, ಒಂದೆರಡು ನಿಮಿಷ ಹುರಿಯಿರಿ. ನಂತರ ಅಳತೆಗೆ ತಕ್ಕ ನೀರು ಸೇರಿಸಿ ,ಬೆರೆಸಿ. ಬೇಯಿಸಿ. ಅನ್ನವನ್ನು ತಯಾರಿಸಿ. ಏಲಕ್ಕಿ ಅನ್ನ ತಯಾರಾಗುತ್ತದೆ. ಈ ಅನ್ನವೂ ವೆಜ್ ಮತ್ತು ನಾನ್ ವೆಜ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯಾವುದಾದರೂ ಸಾಗು /ಕೂಟು ಜೊತೆ ಮತ್ತು ರಾಯತದೊಂದಿಗೆ ಕೊಡಿ.

Tuesday, December 2, 2008

Avalakki / Poha Uppittu -ಅವಲಕ್ಕಿ ಉಪ್ಪಿಟ್ಟು /ಅವಲಕ್ಕಿ:

ಅವಲಕ್ಕಿ ಉಪ್ಪಿಟ್ಟು /ಅವಲಕ್ಕಿ:

ಬೇಕಾಗುವ ಸಾಮಗ್ರಿಗಳು;
ಅವಲಕ್ಕಿ - ಅರ್ಧ ಕೆಜಿ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ ರುಚಿಗೆ
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ


ತಯಾರಿಸುವ ವಿಧಾನ:
ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು,ಒಳ್ಳೆಯ ನೀರಿನಲ್ಲಿ ಎರಡು ನಿಮಿಷ ನೆನೆಸಿ,ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು ,ಕಡ್ಲೆಬೇಳೆ, ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಅವಲಕ್ಕಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ನಿಂಬೆರಸ ಹಾಕಿ.ಇದೆಲ್ಲವನ್ನು ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಚೆನ್ನಾಗಿ ಕಲೆಸಿಡಿ. ಒಲೆಯಿಂದ ಇಳಿಸಿ. ಬಿಸಿಬಿಸಿ ಅವಲಕ್ಕಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಇದು ತುಂಬಾ ಹಗುರವಾದ ತಿಂಡಿ. ಬೇಸಿಗೆಯಲ್ಲಿ ಒಳ್ಳೆಯದು.
* ಅವಲಕ್ಕಿಯಲ್ಲಿ ವಿವಿಧ ಬಗೆ ಇದೆ. ತೆಳು ಅವಲಕ್ಕಿ,ಗಟ್ಟಿ ಅವಲಕ್ಕಿ,ದಪ್ಪ ಮತ್ತು ಮೀಡೀಯಂ ಅಂತ,ಈ ತಿಂಡಿಗೆ ಗಟ್ಟಿ ಅವಲಕ್ಕಿಯಾದರೆ ಚೆನ್ನಾಗಿರುತ್ತದೆ.

Popular Posts