Wednesday, May 16, 2007

Puliyogare - ಪುಳಿಯೋಗರೆ:

ಪುಳಿಯೋಗರೆ ಎಂದರೆ ದೇವಸ್ಥಾನದಲ್ಲಿ ಕೊಡುವ ಪ್ರಸಾದದ ನೆನಪೇ ಬರುತ್ತದೆ. ಪ್ರಸಾದದ ಪುಳಿಯೋಗರೆ ರುಚಿಯೇ ಬೇರೆ. ಅದು ಹೇಳಲು ಆಗುವುದಿಲ್ಲ . ಅದನ್ನು ತಿಂದವರೆ ಬಲ್ಲರು. ದೇವಸ್ಥಾನದ ಪ್ರಸಾದದ ಲಿಸ್ಟ್ ನಲ್ಲಿ ಪುಳಿಯೋಗರೆಗೆ ಮೊದಲ ಸ್ಥಾನ ಎನಿಸುತ್ತೆ. ಅಲ್ಲಿ ದೇವರ ದರ್ಶನಕ್ಕಾಗಿ ಕಾದು ನಿಂತು,ಸುಸ್ತಾಗಿ,ದರ್ಶನ ಮಾಡಿದ ಮೇಲೆ ಪ್ರಸಾದವೇ ಪರಮಾನ್ನ. ಅದೇನೋ ಗೊತ್ತಿಲ್ಲ ಪ್ರಸಾದ ಒಂದೆರಡು ತುತ್ತು ತಿನ್ನುತ್ತಿದ್ದಂತೆಯೇ ಅಷ್ಟೊತ್ತಿನವರೆಗಿನ ಆಯಾಸ, ಸುಸ್ತು ಎಲ್ಲವೂ ಮಾಯವಾಗುತ್ತದೆ. ಏನೋ ತುಂಬ ಊಟವನ್ನೆ ಮಾಡಿದಿವೆನೋ ಎನಿಸುತ್ತೆ ಅಲ್ಲವೇ? ನನಗಂತೂ ಅನಿಸುತ್ತೆ. ದೇವಸ್ಥಾನದಲ್ಲಿ ದೇವರಿಗೆ ಇಟ್ಟ ಪ್ರಸಾದದ ಪುಳಿಯೋಗರೆಯು ತುಂಬಾ ಚೆನ್ನಾಗಿರುತ್ತದೆ. ಇದು ನಾನು ಬರೆದಿರುವ ರೆಸಿಪಿ ನನ್ನ ಅಮ್ಮ ಮಾಡುತ್ತಿರುತ್ತಾರೆ. ಅವರು ತುಂಬಾ ಚೆನ್ನಾಗಿ ಪುಳಿಯೋಗರೆ ತಯಾರಿಸುತ್ತಾರೆ. ಅವರು ತಯಾರಿಸುವ ರುಚಿ ಬಹಳ ಚೆನ್ನಾಗಿರುತ್ತದೆ. ನಾನು ಅವರು ತಯಾರಿಸುವಾಗ ನೋಡಿ ಕಲಿತಿದ್ದು ಅಷ್ಟೇ. ಆಗ ಪುಳಿಯೋಗರೆ ಮಾಡಿ, ಅದನ್ನು ಬಾಟಲ್ ಗೆ ಹಾಕಿ ತುಂಬಿಡುವವರೆಗೆ ಮನೆಯಲ್ಲಿ ಅದೇ ದೊಡ್ಡ ಕೆಲಸ ಅವತ್ತಿನ ದಿನ. ಆದರೆ ಒಂದು ದಿನ ಕಷ್ಟಪಟ್ಟರೆ ಬೇಕಾದಾಗ ಪುಳಿಯೋಗರೆ ಮಾಡಿಕೊಂಡು ತಿನ್ನುವುದು ಬಲು ಸುಲಭ. ಈಗೆಲ್ಲಾ ರೆಡಿಮೇಡ್ ಪೌಡರ್ ಹಾಕಿ ಮಾಡುವುದೇ ಸರ್ವೇಸಾಮಾನ್ಯವಾಗಿದೆ. ಆದರೆ ಅದು ಈ ನಮ್ಮ ಸಂಪ್ರದಾಯದಂತೆ ತಯಾರಿಸಿದ ರುಚಿ ಬರುವುದಿಲ್ಲ. ಅದಕ್ಕೆ ನಾನು ಕಲಿತಿರುವ ರೆಸಿಪಿಯನ್ನು ಬರೆದಿರುವೆ. ಇದು ಕೂಡ ಅಮ್ಮನ ಪುಳಿಯೋಗರೆಯ ರುಚಿಗೆ ಸ್ವಲ್ಪ ಹತ್ತಿರ ಬರುತ್ತದೆ. ನಾನೇ ತಯಾರಿಸಿ ಕಲಿತಿರುವ ಈ ಪುಳಿಯೋಗರೆಯ ರೆಸಿಪಿಯನ್ನು ಬರೆದಿರುವೆ. ತಯಾರಿಸುವ ಬಗೆಯನ್ನು ನೀವು ತಿಳಿಯಿರಿ.


ಪುಳಿಯೋಗರೆ:

*ಮೊದಲು ಪುಳಿಯೋಗರೆ ಗೊಜ್ಜನ್ನು ತಯಾರಿಸಿಕೊಳ್ಳಿ.

ಪುಡಿ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು:
ಒಣಮೆಣಸಿನಕಾಯಿ ರುಚಿಗೆ
ಧನಿಯಾ - ಎರಡು ಚಮಚ
ಜೀರಿಗೆ - ಎರಡು ಚಮಚ
ಮೆಣಸು - ಒಂದು ಚಮಚ
ಕಡ್ಲೆಬೇಳೆ ಮತ್ತು ಉದ್ದಿನಬೇಳೆ- ಒಂದೊಂದು ಚಮಚ
ಚೆಕ್ಕೆ,ಲವಂಗ ಸ್ವಲ್ಪ

ಒಗ್ಗರಣೆಗೆ:
ಎಣ್ಣೆ - ಒಂದು ಬಟ್ಟಲು
ಸಾಸಿವೆ,
ಮತ್ತು ಇಂಗು ಚಿಟಿಕೆ


ಗೊಜ್ಜಿಗೆ:
ಹುಣಸೇಹಣ್ಣು ಅಥವಾ ಹುಣಸೇಹಣ್ಣಿನ ಪೇಸ್ಟ್
ಬೆಲ್ಲ ಸ್ವಲ್ಪ / ಬೆಲ್ಲದ ಪುಡಿ - ಒಂದು ಚಮಚ
ಕಾಲು ಚಮಚ ಅರಿಶಿನ
ಉಪ್ಪು
ಎಣ್ಣೆ ಸಾಕಾಗುವಷ್ಟು

ತಯಾರಿಸುವ ರೀತಿ:
• ಹುಣಸೇಹಣ್ಣನ್ನು ಉಪಯೋಗಿಸುವುದಾದರೆ, ಹುಣಸೇಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಹಾಕಿ ಸುಮಾರು ಹೊತ್ತು. ನಂತರ ಅದರಿಂದ ರಸವನ್ನು ತೆಗೆದುಕೊಳ್ಳಿ. ಈ ರಸವೂ ತುಂಬಾ ಗಟ್ಟಿಯಾಗಿರಬೇಕು. ಹೀಗೆ ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಂಡಿಕೊಂಡು ರಸ ತೆಗೆದು. ಅದನ್ನು ಸೋಸಿಕೊಳ್ಳಿ. ಆ ಕಡೆ ಇಡಿ.
• ಪುಡಿ ಮಾಡಿಕೊಳ್ಳಲು ಹೇಳಿರುವ ಸಾಮಗ್ರಿಗಳನ್ನು ಒಂದು ಪ್ಯಾನ್ ಗೆ ಒಂದು ಚಮಚ ಎಣ್ಣೆ ಹಾಕಿ ಅದೆಲ್ಲವನ್ನು ಒಂದೊಂದಾಗಿ ಹುರಿದಿಟ್ಟುಕೊಳ್ಳಿ.
• ಬೇರೆ ಸ್ವಲ್ಪ ದಪ್ಪ ತಳದ ಪಾತ್ರೆಗೆ ಐದಾರು ಚಮಚ ಎಣ್ಣೆಯನ್ನು ಹಾಕಿ, ಸಾಸಿವೆ ಮತ್ತು ಇಂಗು ಹಾಕಿ, ಅದಕ್ಕೆ ಹುಣಸೇಹಣ್ಣಿನ ರಸವನ್ನು ಹಾಕಿ, ಕುದಿಯಲು ಇಡಿ. ಅದರ ನೀರಿನ ಅಂಶವೆಲ್ಲಾ ಹೋದ ಮೇಲೆ ಪುಡಿ ಮಾಡಿಟ್ಟುಕೊಂಡಿರುವ ಮಸಾಲೆ ಪುಡಿಯನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರಸಿ, ಕೈ ಬಿಡದೇ ತಿರುಗಿಸುತ್ತಿರಿ. ಅರಿಶಿನ,ಉಪ್ಪು ಮತ್ತು ಬೆಲ್ಲ ಸೇರಿಸಿ, ಮತ್ತೆರಡು ಚಮಚ ಎಣ್ಣೆ ಹಾಕಿ. ಈ ಸಮಯದಲ್ಲಿ ನಿಮಗೆ ಬೇಕಾದಂತೆ ಉಪ್ಪು ಮತ್ತು ಕಾರವನ್ನು ಸರಿಯಾಗಿದೆಯಾ ಎಂದು ನೋಡಿ, ಏನು ಬೇಕೋ ಅದನ್ನು ಹಾಕಿ. ಉಪ್ಪು ಮತ್ತು ಕಾರ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು. ಆಮೇಲೆ ಅನ್ನಕ್ಕೆ ಕಲಸುವಾಗ ಸಪ್ಪೆ ಬರುತ್ತೆ ಇಲ್ಲ ಅಂದರೆ. ಅದಕ್ಕೆ ಈಗ ಜಾಸ್ತಿ ಹಾಕಿಕೊಳ್ಳಬೇಕು. ಮಧ್ಯೆ-ಮಧ್ಯೆ ತಿರುಗಿಸುತ್ತಿರಿ. ಎಲ್ಲಾ ಮಸಾಲೆ ಮತ್ತು ಹುಣಸೇರಸವು ಚೆನ್ನಾಗಿ ಬೆಂದ ನಂತರ ಪಾತ್ರೆಗೆ ಅಂಟಿಕೊಳ್ಳದೇ ಎಣ್ಣೆಯಿಂದ ಬೇರ್ಪಟ್ಟ ಮೇಲೆ ಗೊಜ್ಜಿನ ರೀತಿ ಹದ ಬಂದಾಗ ಉರಿಯಿಂದ ಇಳಿಸಿ. ಇದು "ಪುಳಿಯೋಗರೆ ಗೊಜ್ಜು".

• ಗೊಜ್ಜು ತಯಾರಿಸುವಾಗ ತುಂಬಾ ಹೆಚ್ಚಾಗಿ ತಯಾರಿಸಿಕೊಂಡರೆ, ಅದನ್ನು ತಣ್ಣಗಾದ ಮೇಲೆ ಗಾಳಿಯಾಡದ ಬಾಟಲ್ ನಲ್ಲಿ ತುಂಬಿಡಬಹುದು.
• ಈ ಗೊಜ್ಜನ್ನು ತಿಂಗಳುಗಟ್ಟಲೆ ಇಟ್ಟುಕೊಳ್ಳಬಹುದು. ಹೆಚ್ಚಾಗಿ ಎಣ್ಣೆಯನ್ನು ಹಾಕಿ, ಎಣ್ಣೆ ಗೊಜ್ಜಿನ ಮೇಲೆ ತೇಲುತ್ತಿರಬೇಕು.
• ಗೊಜ್ಜನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಇನ್ನೂ ಹೆಚ್ಚುಕಾಲ ಇರುತ್ತದೆ. ಬೇಕಾದಾಗ ತೆಗೆದು ಉಪಯೋಗಿಸಿಕೊಳ್ಳಬಹುದು.
• ಫ್ರೆಶ್ ಆಗಿ ತಯಾರಿಸಿಕೊಂಡರೆ ಹೆಚ್ಚು ರುಚಿ. ಇದನ್ನು ತಯಾರಿಸುವುದು ಸ್ವಲ್ಪ ಕಷ್ಟವಾಗಿರುವುದರಿಂದ ಗೊಜ್ಜನ್ನು ಮಾಡಿಟ್ಟುಕೊಂಡರೆ ಸುಲಭವಾಗುತ್ತದೆ.

** ಈಗ ಪುಳಿಯೋಗರೆ ತಯಾರಿಸೋಣ :
ಪುಳಿಯೋಗರೆ ಅನ್ನಕ್ಕೆ ಸಾಮಾಗ್ರಿಗಳು:

ಎಣ್ಣೆ, ಸಾಸಿವೆ, ಇಂಗು
ಕಡ್ಲೆಬೇಳೆ, ಉದ್ದಿನಬೇಳೆ
ಒಣಮೆಣಸಿನಕಾಯಿ
ಕಡ್ಲೆಕಾಯಿಬೀಜ
ಕರಿಬೇವು
ಗೋಡಂಬಿ (ಬೇಕಾದರೆ)
ಅನ್ನ - ಅನ್ನವನ್ನು ಉದುರುಉದುರಾಗಿ ತಯಾರಿಸಿ, ತಣ್ಣಗಾಗಲು ಬಿಡಿ.

ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ, ಅದರಲ್ಲಿ ಕಡ್ಲೆಕಾಯಿಬೀಜಗಳನ್ನು ಹದವಾಗಿ,ಹುರಿದು ತೆಗೆದಿಡಿ.
ಅದೇ ಪ್ಯಾನ್ ನಲ್ಲಿ ಸಾಸಿವೆ,ಇಂಗು,ಕಡ್ಲೆಬೇಳೆ, ಉದ್ದಿನಬೇಳೆ,ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಂದೆರಡು ನಿಮಿಷ ಬಾಡಿಸಿ.
ತಣ್ಣಗಾದ ಅನ್ನಕ್ಕೆ, ಒಗ್ಗರಣೆ ಮತ್ತು ಒಂದೆರಡು ಚಮಚ ಪುಳಿಯೋಗರೆ ಗೊಜ್ಜು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿಕೊಂಡು ಚೆನ್ನಾಗಿ ಕಲೆಸಿ . ಗೊಜ್ಜು ಹಾಕುವ ಪ್ರಮಾಣವು ನೀವು ತೆಗೆದುಕೊಂಡಿರುವ ಅನ್ನದ ಮೇಲೆ ಅವಲಂಬಿಸಿರುತ್ತದೆ. ಆಗಾಗಿ ಅನ್ನ ನೋಡಿ ಗೊಜ್ಜು ಹಾಕಿಕೊಂಡು ಕಲೆಸಿ, ಹುರಿದ ಕಡ್ಲೆಕಾಯಿಬೀಜಗಳನ್ನು, ಒಣಕೊಬ್ಬರಿತುರಿ,ಮತ್ತು ಹುರಿದು ಕುಟ್ಟಿದ ಎಳ್ಳು ಮತ್ತು ಜೀರಿಗೆಯನ್ನು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ. ಉಪ್ಪು ಮತ್ತು ಕಾರ ನೋಡಿ ಹಾಕಿಕೊಳ್ಳಿ.ಅನ್ನಕ್ಕೆ,ಒಗ್ಗರಣೆ,ಗೊಜ್ಜು ಮತ್ತು ಪುಡಿಗಳು ಎಲ್ಲವೂ ಸರಿಯಾಗಿ ಬೆರೆಯುವಂತೆ ಕಲೆಸಿ.ಈಗ ಪುಳಿಯೋಗರೆಯೂ ತಯಾರಾದಂತೆ. ತಿನ್ನಲು ಸಿದ್ಧ. ಕರಿದ ಗೋಡಂಬಿಗಳನ್ನು ಹಾಕಿ ಅಲಂಕರಿಸಿ.
• ಪುಳಿಯೋಗರೆಯು ಕಲೆಸಿದ ತಕ್ಷಣ ತಿನ್ನುವುದಕ್ಕಿಂತ, ಸ್ವಲ್ಪ ಹೊತ್ತಾದ ಮೇಲೆ ತಿನ್ನುವುದರಿಂದ ರುಚಿ ಹೆಚ್ಚುತ್ತದೆ.
• ಮತ್ತೆ ಇನ್ನೊಂದು - ಅನ್ನ ಕಲೆಸುವಾಗ ಗೊಜ್ಜು ಯಾವಾಗಲೂ ಜಾಸ್ತಿ ಹಾಕಬೇಕು,ಉಪ್ಪು ಮತ್ತು ಗೊಜ್ಜನ್ನು ಕಮ್ಮಿ ಹಾಕಿದರೆ ಅದು ನೆನೆದ ನಂತರ ಸಪ್ಪೆಯಾಗುತ್ತದೆ.
ಇದನ್ನು ಬೇಕೆನಿಸಿದರೆ ರಾಯತ ಮತ್ತು ಹಪ್ಪಳದೊಂದಿಗೆ ಸರ್ವ್ ಮಾಡಬಹುದು.
*ಪುಳಿಯೋಗರೆ ಗೊಜ್ಜನ್ನು ತಯಾರಿಸಿಟ್ಟುಕೊಂಡರೆ,ತಕ್ಷಣಕ್ಕೆ ಬೇಗ ಬರೀ ಒಗ್ಗರಣೆ ಮಾತ್ರ ಹಾಕಿಕೊಂಡು ಅನ್ನಕ್ಕೆ ಬೆರೆಸಿ,ತಯಾರಿಸಬಹುದು. ಎಷ್ಟು ಬೇಕೋ ಅಷ್ಟು ಮಾತ್ರ ಉಪಯೋಗಿಸಿ,ತೆಗೆದಿಡಿ. ಒದ್ದೆ ಚಮಚಗಳನ್ನು ಬಳಸಬೇಡಿ. ನೀರು ಬಿದ್ದರೆ ಬೂಸ್ಟ್ ಬರುತ್ತದೆ.
*ಪುಳಿಯೋಗರೆ ಮಾಡುವುದು ಸುಲಭ,ಆದರೆ ಗೊಜ್ಜು ತಯಾರಿಸುವುದೇ ಕಷ್ಟ.
*ತುಂಬಾ ಅರ್ಜೆಂಟ್ ಇದ್ದರೆ ಆಗೆ ಕಲೆಸಿ ತಿನ್ನಬಹುದು.

No comments:

Popular Posts