Showing posts with label Chutney / ಚಟ್ನಿ. Show all posts
Showing posts with label Chutney / ಚಟ್ನಿ. Show all posts

Wednesday, March 2, 2016

ಈರುಳ್ಳಿ ಟಮೋಟ ಚಟ್ನಿ: Onion Tomato chutney

ಈರುಳ್ಳಿ  ಟಮೋಟ ಚಟ್ನಿ:

ಬೇಕಾಗುವ ಸಾಮಗ್ರಿಗಳು:

1. ಈರುಳ್ಳಿ- 2
 2. ಟೊಮೆಟೊ- 4-5
3. ಹಸಿಮೆಣಸಿನ ಕಾಯಿ- 2
4. ಉಪ್ಪು- ರುಚಿಗೆ ತಕ್ಕಷ್ಟು
5. ಅಚ್ಚ ಖಾರದ ಪುಡಿ- 1 ಟೀಚಮಚ
6. ಎಣ್ಣೆ- 1 ಟೀಚಮಚ
7. ಸಾಸಿವೆ- 1 ಟೀಚಮಚ

ಮಾಡುವ ವಿಧಾನ :

1. ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
2. ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.
3. ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಉಪ್ಪು ಮತ್ತು ಖಾರದ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
 4. ಟೊಮೆಟೊ ನೀರು ಬಿಟ್ಟುಕೊಳ್ಳುವುದರಿಂದ ನೀರು ಹಾಕುವ ಅಗತ್ಯವಿಲ್ಲ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.
5. ನಂತರ ಪಾತ್ರೆಗೆ ಹಾಕಿಕೊಳ್ಳಿ.
6. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಹಾಕಿ ಇದನ್ನು ಚಟ್ನಿಗೆ ಹಾಕಿ ಕಲಸಿ. ಈರುಳ್ಳಿ ಟೊಮೆಟೊ ಚಟ್ನಿಯನ್ನು ದೋಸೆ, ಚಪಾತಿ ಅಥವ ಅನ್ನದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

Sunday, September 18, 2011

Tomato Chutni - ಟಮೋಟ ಚಟ್ನಿ:

ಟಮೋಟ ಚಟ್ನಿ:

ಬೇಕಾಗುವ ಸಾಮಗ್ರಿಗಳು:

ಟಮೋಟ - ಅರ್ಧ ಕೆ.ಜಿ
ಈರುಳ್ಳಿ - ಎರಡು
ಬೆಳ್ಳುಳ್ಳಿ - ಹತ್ತು ಎಸಳು
ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು
ಹುಣಸೆಹಣ್ಣು - ಚಿಕ್ಕ ಗೋಲಿ ಗಾತ್ರ
ಉಪ್ಪು ರುಚಿಗೆ
ಕೊತ್ತುಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ

ಒಗ್ಗರಣೆಗೆ:
ಎಣ್ಣೆ - ಎರಡು/ನಾಲ್ಕು ಚಮಚ
ಸಾಸಿವೆ,ಜೀರಿಗೆ,ಇಂಗು
ಉದ್ದಿನಬೇಳೆ - ಒಂದು ಚಮಚ

ತಯಾರಿಸುವ ವಿಧಾನ:
ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ,ಕಾದ ನಂತರ ಈರುಳ್ಳಿ,ಬೆಳ್ಳುಳ್ಳಿ ಮತ್ತು ಒಣಮೆಣಸಿನಕಾಯಿಗಳನ್ನು ಹಾಕಿ ಎರಡು ನಿಮಿಷ ಹುರಿಯಿರಿ,ಅದಕ್ಕೆ ಹೆಚ್ಚಿದ ಟಮೋಟಗಳನ್ನು ಹಾಕಿ,ಸ್ವಲ್ಪ ಮೆತ್ತಗಾಗುವಂತೆ ಬೇಯಿಸಿ,ಬೆಂದ ಮೇಲೆ ಒಲೆಯಿಂದ ಇಳಿಸಿ,ಅದರ ಜೊತೆಗೆ ಕೊತ್ತುಂಬರಿಸೊಪ್ಪು,ಕರಿಬೇವು,ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ,ಮಿಕ್ಸಿಗೆ ಹಾಕಿ ಅರೆಯಿರಿ.ನೀರು ಅವಶ್ಯಕತೆ ಇಲ್ಲ,ತುಂಬಾ ನುಣ್ಣಗೆ ರುಬ್ಬಬೇಕಾಗಿಲ್ಲ.
ನಂತರ ಒಗ್ಗರಣೆ ಹಾಕಿ, ಅರೆದಿರುವ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ,ಹಸಿವಾಸನೆ ಹೋಗುವವರೆಗೂ, ಸ್ವಲ್ಪ ಗಟ್ಟಿಯಾಗುವವರೆಗೂ ಚೆನ್ನಾಗಿ ಕುದಿಸಿ,ಮಧ್ಯೆ ತಿರುಗಿಸುತ್ತಿರಿ,ತಳಹತ್ತದಂತೆ ನೋಡಿಕೊಂಡು ಗಟ್ಟಿಯಾದ ನಂತರ ಇಳಿಸಿ.
ಇದು ದೋಸೆ,ಇಡ್ಲಿ,ಚಪಾತಿ ಮತ್ತು ಪಕೋಡಗಳಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
ಬ್ರೆಡ್ ಸ್ಲೈಸ್ ಮಧ್ಯೆ ಹಚ್ಚಿಕೊಂಡು ಟೋಸ್ಟ್ ಮಾಡಿಕೊಂಡು ಸಹ ತಿನ್ನಬಹುದು. ಟೋಸ್ಟ್ ಮಾಡದೆಯೂ ತಿನ್ನಬಹುದು.

Wednesday, January 12, 2011

Snakegourd chutney - ಪಡುವಲಕಾಯಿ ತಿರುಳಿನ ಚಟ್ನಿ:

ಕೆಲವು ತರಕಾರಿಗಳ ಕಾಯಿಯ ತಿರುಳನ್ನು ಸಹ ಎಸೆಯದೆ ನಾವು ಅದನ್ನು ಅಡಿಗೆಯಲ್ಲಿ ಉಪಯೋಗಿಸಬಹುದು. ತಿರುಳಿನಲ್ಲು ಸಹ ಒಳ್ಳೆಯ ಅಂಶಗಳಿರುತ್ತವೆ. ಕೆಲವು ತರಕಾರಿಗಳ ಸಿಪ್ಪೆ, ತಿರುಳು ಮತ್ತು ಸೊಪ್ಪು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುತ್ತದೆ.  ಆಗಾಗಿ ಉಪಯೋಗಿಸಬಹುದಾದಂತ ತರಕಾರಿಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಪಡುವಲ ಕಾಯಿಯಲ್ಲಿ ಯಾವುದನ್ನು ಬಿಸಾಡುವಂತಿಲ್ಲ. ಪಡುವಲಕಾಯಿಯನ್ನು ದಿನನಿತ್ಯದ ಅಡಿಗೆಯಲ್ಲಿ ಬಳಸಿದರೆ ಬಿ.ಪಿ ಇರುವವರಿಗೆ ತುಂಬಾ ಉಪಯುಕ್ತವಾಗುತ್ತದೆ. ಅದರಲ್ಲಿ ತಿರುಳಿನಲ್ಲಿ ಚಟ್ನಿ. ಸಿಪ್ಪೆಯಲ್ಲಿ ಸಹ ಮತ್ತು ಒಳಗಿನ ಕಾಯಿಯಿಂದ ಹುಳಿ,ಸಾರು ಮತ್ತು ಪಲ್ಯವನ್ನು ತಯಾರಿಸುತ್ತೇವೆ. ಈಗ ಇಲ್ಲಿ ಪಡುವಲಕಾಯಿಯ ತಿರುಳಿನ ಚಟ್ನಿಯನ್ನು ತಯಾರಿಸೋಣ.

ಪಡುವಲಕಾಯಿ ತಿರುಳಿನ ಚಟ್ನಿ:

ಪಡುವಲಕಾಯಿ ತಿರುಳು
ಸ್ವಲ್ಪ ಕಾಯಿತುರಿ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ
ಉದ್ದಿನಬೇಳೆ - ಒಂದು ಚಮಚ
ಉಪ್ಪು ರುಚಿಗೆ
ಒಗ್ಗರಣೆಗೆ;
ಎಣ್ಣೆ, ಜೀರಿಗೆ,ಸಾಸಿವೆ,ಕರಿಬೇವು

ತಯಾರಿಸುವ ರೀತಿ:

ಉದ್ದಿನಬೇಳೆಯನ್ನು ಸ್ವಲ್ಪ ಹುರಿದುಕೊಂಡು ಅದಕ್ಕೆ ತೆಂಗಿನತುರಿ,ಉಪ್ಪು,ಹುಣಸೇಹಣ್ಣು,ಹಸಿಮೆಣಸಿನಕಾಯಿ ಮತ್ತು ಉದ್ದಿನಕಾಳು ಹಾಕಿ ನುಣ್ಣಗೆ ರುಬ್ಬಿ.
ಒಗ್ಗರಣೆಗೆ ಎಣ್ಣೆ ಹಾಕಿ ಕಾದಬಳಿಕ ಜೀರಿಗೆ, ಸಾಸಿವೆ ಮತ್ತು ಕರಿಬೇವು ಹಾಕಿ, ಒಗ್ಗರಣೆಯನ್ನು ರುಬ್ಬಿದ ಚಟ್ನಿಗೆ ಸೇರಿಸಿ, ಬೆರೆಸಿ. ಇದು ತುಂಬಾ ರುಚಿಯಾಗಿರುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು.

Thursday, January 28, 2010

Chutney / Coconut Chutney - ಕಾಯಿಚಟ್ನಿ:


ಚಟ್ನಿ / ಕಾಯಿಚಟ್ನಿ:
ಬೇಕಾಗುವ ಸಾಮಗ್ರಿಗಳು:

ತೆಂಗಿನಕಾಯಿ ತುರಿ -ಒಂದು ಬಟ್ಟಲು
ಕಡ್ಲೆ - ಸ್ವಲ್ಪ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ ರುಚಿಗೆ
ಉಪ್ಪು ರುಚಿಗೆ
ಶುಂಠಿ ತುಂಡು ಒಂದು ಚೂರು
ಬೆಳ್ಳುಳ್ಳಿ ೪-೫
ಜೀರಿಗೆ - ಅರ್ಧ ಚಮಚ
ಕೊತ್ತುಂಬರಿಸೊಪ್ಪು ಸ್ವಲ್ಪ

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಹಾಕಿ, ರುಬ್ಬಿ. ಕಾಯಿ ಚಟ್ನಿ ತಯಾರಾಗುತ್ತದೆ. ಒಗ್ಗರಣೆ ಇಷ್ಟಪಡುವವರು ಅದನ್ನು ಸೇರಿಸಬಹುದು್.
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ, ಚಟಪಟಾಯಿಸಿ, ತಣ್ಣಗಾದ ಮೇಲೆ ಚಟ್ನಿಗೆ ಬೆರೆಸಿ. ಈ ಚಟ್ನಿಯೂ ಇಡ್ಲಿ,ದೋಸೆ,ಚಪಾತಿ,ರೊಟ್ಟಿಗಳು,ಬಜ್ಜಿ ಮತ್ತು ಪೂರಿ ಹಾಗು ಕೆಲವೊಮ್ಮೆ ಅನ್ನಕ್ಕೂ ರುಚಿಯಾಗಿರುತ್ತದೆ. ಇಡ್ಲಿಗಾದರೆ ಚಟ್ನಿಯನ್ನು ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ.

Tuesday, January 19, 2010

Aloo Paratha - ಆಲೂ ಪರೋಟ

ಆಲೂ ಪರೋಟ:

ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು:

ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು
ಅಚ್ಚ ಖಾರದ ಪುಡಿ-ಕಾಲು ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಚಾಟ್ ಮಸಾಲಾ-ಕಾಲು ಚಮಚ
ಜೀರಿಗೆ ಪುಡಿ-ಅರ್ಧ ಚಮಚ
ಧನಿಯ ಪುಡಿ - ಅರ್ಧ ಚಮಚ

ಕಣಕದ ಸಾಮಗ್ರಿಗಳು:

ಮೈದಾಹಿಟ್ಟು
ಚಿಟಿಕೆ ಅರಿಸಿನ
ಕಾಲು ಚಮಚ ಉಪ್ಪು
ಒಂದು ಚಮಚ ಡಾಲ್ಡ

ತಯಾರಿಸುವ ವಿಧಾನ:

ಕಣಕಕ್ಕೆ ತಿಳಿಸಿರುವ ಸಾಮಗ್ರಿಗಳನ್ನು ಬೆರೆಸಿ, ಪೂರಿ ಹಿಟ್ಟಿನ ಹದಕ್ಕೆ ಕಲೆಸಿ, ಕಾಲು ಗಂಟೆ ನೆನೆಯಲು ಬಿಡಿ.
ಬೇಯಿಸಿದ ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ (ಮ್ಯಾಶ್), ಸಾಮಾನ್ಯವಾಗಿ ನುಣ್ಣಗೆ ಮಾಡಿಕೊಳ್ಳಿ, ಅದಕ್ಕೆ ಕಾರದಪುಡಿ, ಉಪ್ಪು,ಚಾಟ್ ಮಸಾಲಾ, ಜೀರಿಗೆ ಪುಡಿ ಮತ್ತು ಧನಿಯ ಪುಡಿಯನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತು ಕೊಳ್ಳುವಂತೆ, ಕಲೆಸಿ, ಜೊತೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ ಸರಿಯಾಗಿ ಕಲೆಸಿ ಪುಟ್ಟ ಪುಟ್ಟ ಉಂಡೆ ತಯಾರಿಸಿಡಿ.
ಕಣಕವನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ. ಒಂದೊಂದಾಗಿ ಚಿಕ್ಕ ಮೈದಾ ಹಿಟ್ಟಿನ ಉಂಡೆ ತೆಗೆದುಕೊಂಡು ಅದನ್ನು ಎಣ್ಣೆ ಹಚ್ಚಿದ ಪ್ಲಾಸ್ಟಿಕ ಹಾಳೆ/ಅಲ್ಯುಮಿನಿಯಂ ಫಾಯಿಲ್/ಬಾಳೆದೆಲೆಯ ಮೇಲೆ ಇಟ್ಟು ಚಿಕ್ಕ ಪೂರಿಯಂತೆ ಒತ್ತಿ ಅದರಲ್ಲಿ ಆಲೂ ಮಸಾಲ ಮಿಶ್ರಣವನ್ನು(ಹೂರಣವನ್ನು) ಇಟ್ಟು ಪೂರ್ತಿ ಕಣಕದಿಂದ ಮುಚ್ಚಿ.

ಕಣಕದಿಂದ ಆಲೂ ಮಸಾಲಾ ಮಿಶ್ರಣವನ್ನು (ಹೂರಣವನ್ನು) ಮುಚ್ಚಿ ತಯಾರಿಸಿದ ಉಂಡೆಗೆ ಎಣ್ಣೆ ಸವರಿಕೊಂಡು ಮೆಲ್ಲಗೆ ಪೂರಿಗಿಂತ ಸ್ವಲ್ಪ ದೊಡ್ಡದಾಗಿ ತಟ್ಟಿ {ದಪ್ಪ ಮತ್ತು ಅಳತೆ ನಿಮಗೆ ಬೇಕಾದಂತೆ ತಟ್ಟಿಕೊಳ್ಳಬಹುದು}, ಅದನ್ನು ಕಾದಿರುವ ತವಾ ಮೇಲೆ ಹಾಕಿ, ಎಣ್ಣೆ ಹಾಕಿ ಎರಡು ಬದಿ ಬೇಯಿಸಿ. ಚಪಾತಿ ತರಹ ಬೇಯಿಸಿ. ತೆಗೆಯಿರಿ, ಇದೇ ರೀತಿ ಮಿಕ್ಕ ಎಲ್ಲಾ ಉಂಡೆಗಳಿಂದ ಪರೋಟ ತಯಾರಿಸಿ. ಆಲೂಗೆಡ್ಡೆ ಪರೋಟ ತಿನ್ನಲು ತಯಾರಾಗುತ್ತದೆ. ಬೇಕೆನಿಸಿದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು. ಇಲ್ಲವೆಂದರೆ ಹಾಗೆ ತಿನ್ನಬಹುದು. ಮಕ್ಕಳು ಕೆಚಪ್ ಮತ್ತು ಸಾಸ್ ಜೊತೆ ಇಷ್ಟಪಡುತ್ತಾರೆ. ಇದನ್ನು ಮಕ್ಕಳಿಗೆ ಬಿಸಿಬಿಸಿಯಾಗಿ ಮಾಡಿಕೊಟ್ಟಾಗ ಖುಷಿಯಿಂದ ತಿನ್ನುತ್ತಾರೆ. ಇದರಲ್ಲಿ ಈರುಳ್ಳಿ ಉಪಯೋಗಿಸಿಲ್ಲ ಆಗಾಗಿ ಈರುಳ್ಳಿ ಸಿಗುತ್ತೆ ಅನ್ನುವಂತ ಮಕ್ಕಳಿಗೆ ಇದರಲ್ಲಿ ಈರುಳ್ಳಿ ಸಿಗದೇ ಇರುವುದರಿಂದ ತೊಂದರೆ ಇಲ್ಲದೆ ತಿನ್ನುತ್ತಾರೆ. ಕಾಯಿಚಟ್ನಿ ಜೊತೆ ತುಂಬಾ ಚೆನ್ನಾಗಿರುತ್ತದೆ.



* ಆಲೂಗೆಡ್ಡೆಯನ್ನು ಮ್ಯಾಶ್ ಮಾಡುವಾಗ ತುಂಬಾ ದಪ್ಪ ಬಿಟ್ಟರೆ,ಅದು ತಟ್ಟುವಾಗ ಹಿಟ್ಟಿನಿಂದ ಆಚೆ ಬರುತ್ತದೆ. ಅದಕ್ಕೆ ಸ್ವಲ್ಪ ಚೆನ್ನಾಗಿ ಮ್ಯಾಶ್ ಮಾಡಿ.
* ಪರೋಟ ಸ್ವಲ್ಪ ದಪ್ಪ ಬೇಕೆನಿಸಿದರೆ, ಹಿಟ್ಟು ಮತ್ತು ಹೂರಣವನ್ನು ಜಾಸ್ತಿ ತೆಗೆದುಕೊಂಡು ತಯಾರಿಸಿ. ತೆಳು ಅಥವ ದಪ್ಪ ಹೇಗೆ ತಯಾರಿಸಿದರು ಚೆನ್ನಾಗಿರುತ್ತದೆ.

Tuesday, January 12, 2010

Brinjal bajji - ಬದನೆಕಾಯಿ ಬಜ್ಜಿ:

ಬದನೆಕಾಯಿ ಬಜ್ಜಿ:

ಬೇಕಾಗುವ ಸಾಮಗ್ರಿಗಳು:
ಬದನೆಕಾಯಿ

ಕಡ್ಲೆಹಿಟ್ಟು - ಒಂದು ಬಟ್ಟಲು

ಅಕ್ಕಿಹಿಟ್ಟು - ಎರಡು ಚಮಚ

ಅಚ್ಚಖಾರದ ಪುಡಿ

ಉಪ್ಪು

ಓಮಕಾಳು

ಕಾದ ಎಣ್ಣೆ - ಒಂದು ಚಮಚ

ಚಿಟಿಕೆ ಸೋಡ

ಕಲೆಸಲು ಬೇಕಾಗುವಷ್ಟು ನೀರು

ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಬದನೆಕಾಯಿಯನ್ನು ತೆಳುವಾಗಿ ಹೆಚ್ಚಿಕೊಂಡು ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿಡಿ.

ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಮಕಾಳು,ಉಪ್ಪು, ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಕಾದಿರುವ ಎಣ್ಣೆ ಹಾಕಿ, ಜೊತೆಯಲ್ಲಿ ನೀರು ಹಾಕಿ, ಕಲೆಸಿಕೊಳ್ಳಿ, ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ/ಬಜ್ಜಿಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ, ಹೆಚ್ಚಿರುವ ಬದನೆಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ, ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಬದನೆಕಾಯಿ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಬೇಕಾದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು.

Thursday, January 7, 2010

Idli - Sambar- Chutney

ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ.
ನಮ್ಮ ಅಜ್ಜಿ ಮಿಕ್ಸಿ ಇದ್ದರೂ ಸಹ ಒರಳು ಕಲ್ಲಿನಲ್ಲಿ ಹಿಟ್ಟನ್ನು ರುಬ್ಬುತ್ತಿದ್ದರು,ಅವರು ತಯಾರಿಸುತ್ತಿದ್ದ ಇಡ್ಲಿ ಅಥವಾ ದೋಸೆಗಳ ರುಚಿಯಂತೂ ಈಗಲೂ ಮರೆಯಲು ಸಾಧ್ಯವಿಲ್ಲ. ಅದೆಷ್ಟು ಚೆನ್ನಾಗಿ ಹದವಾಗಿ,ರುಬ್ಬಿ ತಯಾರಿಸುತ್ತಿದ್ದರು. ಈಗ ನಾವುಗಳು ಸೋಮಾರಿಗಳಂತೆ ಅದೇನೋ ಗ್ರೈಂಡರ್ ಮತ್ತು ಮಿಕ್ಸಿ ಅಂತ ಉಪಯೋಗಿಸುತ್ತ ಇರುತ್ತೇವೆ. ಇದು ಸಾಲದೆಂದು ರೆಡಿಮೇಡ್ ರವೆ ಅಂತ ಬೇರೆ ತಂದು ಉಪಯೋಗಿಸುತ್ತೇವೆ. ಅದಂತೂ ಇದ್ದಿದ್ದು ಕೆಲಸ ಕಮ್ಮಿ. ಇಡ್ಲಿಯಲ್ಲಿ ಈಗಂತೂ ಬಹಳ ತರವಾಗಿ,ವಿವಿಧವಾಗಿ ತಯಾರಿಸುತ್ತೇವೆ. ಕೆಲವು ಸಾರಿ ಇಡ್ಲಿ -ಸಾಂಬಾರ್ ಜೊತೆ ರುಚಿ ಎನಿಸಿದರೆ,ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಆಗ ಕೈನಲ್ಲಿ ರುಬ್ಬುತ್ತಿದ್ದು ಮಾಡುತ್ತಿದ್ದ ಅಡುಗೆಗಳ ರುಚಿನೇ ರುಚಿ.ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.

ಇಡ್ಲಿ:

ಬೇಕಾಗುವ ಸಾಮಗ್ರಿಗಳು:

ಅಕ್ಕಿ - ಮೂರು ಕಪ್
ಕುಸುಬಲಕ್ಕಿ (ಬಾಯಲ್ಡ್ ರೈಸ್)- ಒಂದು ಕಪ್
ಉದ್ದಿನಬೇಳೆ - ಒಂದು ಕಪ್
ಅವಲಕ್ಕಿ, ಸಬ್ಬಕ್ಕಿ - ಒಂದೊಂದು ಚಮಚ
ಮೆಂತ್ಯಕಾಳು - ಒಂದು ದೊಡ್ಡ ಚಮಚ
ಉಪ್ಪು


ತಯಾರಿಸುವ ರೀತಿ:

ಅಕ್ಕಿ + ಮೆಂತ್ಯ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು,ಬೇರೆ ಬೇರೆಯಾಗಿ ಐದರಿಂದ ಆರು ಗಂಟೆಗಳವರೆಗೂ ನೆನೆಸಿಡಿ. ನಂತರ ಉದ್ದಿನಬೇಳೆಯನ್ನು ಚೆನ್ನಾಗಿ ಹುದುಗು ಬರುವಂತೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದರ ಜೊತೆಗೆ ಅಕ್ಕಿಯನ್ನು ಬೆರೆಸಿ ಅಗತ್ಯವಿದ್ದಷ್ಟು ನೀರು ಹಾಕಿ ರುಬ್ಬಿಕೊಳ್ಳಿ.ಅವಲಕ್ಕಿ ಮತ್ತು ಸಬ್ಬಕ್ಕಿಯನ್ನು ಹಾಕುವುದಾದರೆ, ಅವಲಕ್ಕಿಯನ್ನು ಮತ್ತು ಸಬ್ಬಕ್ಕಿಯನ್ನು ನೆನೆಸಿಟ್ಟು( ಅರ್ಧ ಗಂಟೆ),ಅಕ್ಕಿಯೊಂದಿಗೆ ರುಬ್ಬುವಾಗ ಹಾಕಿ, ರುಬ್ಬಿಕೊಳ್ಳಿ. ಅಕ್ಕಿಯೂ ಸ್ವಲ್ಪ ಕೈಗೆ ತರಿತರಿಯಾಗಿ ಸಿಗುವಂತೆ ರುಬ್ಬಿ. ಮುಚ್ಚಿಡಿ.ರಾತ್ರಿಯೆಲ್ಲಾ ಅದೇರೀತಿ ಇದ್ದಾಗ,ಅದು ಹಿಟ್ಟು ಬೆಳಗ್ಗೆ ಹುದುಗು/ಹುಳಿ/ಉಬ್ಬಿ ಬಂದಿರುತ್ತದೆ. ಮಾರನೇದಿನ ಹುದುಗು ಬಂದ ಹಿಟ್ಟಿಗೆ ರುಚಿಗೆ ಸ್ವಲ್ಪ ಉಪ್ಪು ಬೆರೆಸಿ,ತುಂಬಾ ಜೋರಾಗಿ ತಿರುಗಿಸದೇ ಮೆಲ್ಲಗೆ ತಿರುಗಿಸಿ. ಈ ಹಿಟ್ಟನ್ನು ಇಡ್ಲಿಯ ತಟ್ಟೆ/ಪಾತ್ರೆ/ ಮೋಲ್ಡ್ ಗಳಿಗೆ ಹಾಕಿ ಹಬೆಯಲ್ಲಿ ಏಳೆಂಟು ನಿಮಿಷಗಳವರೆಗೆ ಬೇಯಿಸಿ. ತೆಗೆಯಿರಿ. ಇಡ್ಲಿಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸವಿಯಲು ನೀಡಿ.


ಚಟ್ನಿ / ಕಾಯಿಚಟ್ನಿ:

ಬೇಕಾಗುವ ಸಾಮಗ್ರಿಗಳು:

ತೆಂಗಿನಕಾಯಿ ತುರಿ -ಒಂದು ಬಟ್ಟಲು
ಕಡ್ಲೆ - ಸ್ವಲ್ಪ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ ರುಚಿಗೆ
ಉಪ್ಪು ರುಚಿಗೆ
ಶುಂಠಿ ತುಂಡು ಒಂದು ಚೂರು
ಬೆಳ್ಳುಳ್ಳಿ ೪-೫
ಜೀರಿಗೆ - ಅರ್ಧ ಚಮಚ
ಕೊತ್ತುಂಬರಿಸೊಪ್ಪು ಸ್ವಲ್ಪ

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಹಾಕಿ, ರುಬ್ಬಿ. ಕಾಯಿ ಚಟ್ನಿ ತಯಾರಾಗುತ್ತದೆ. ಒಗ್ಗರಣೆ ಇಷ್ಟಪಡುವವರು ಅದನ್ನು ಸೇರಿಸಬಹುದು್.
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ, ಚಟಪಟಾಯಿಸಿ, ತಣ್ಣಗಾದ ಮೇಲೆ ಚಟ್ನಿಗೆ ಬೆರೆಸಿ. ಈ ಚಟ್ನಿಯೂ ಇಡ್ಲಿ,ದೋಸೆ,ಚಪಾತಿ,ರೊಟ್ಟಿಗಳು,ಬಜ್ಜಿ ಮತ್ತು ಪೂರಿ ಹಾಗು ಕೆಲವೊಮ್ಮೆ ಅನ್ನಕ್ಕೂ ರುಚಿಯಾಗಿರುತ್ತದೆ. ಇಡ್ಲಿಗಾದರೆ ಚಟ್ನಿಯನ್ನು ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ.

ಸಾಂಬಾರ್: (ಇಡ್ಲಿ ಸಾಂಬಾರ್)

ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ,ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-

ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು
ಮೊಗ್ಗು - ಒಂದು ಚಿಕ್ಕದು

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು,ಪುಡಿ ಮಾಡಿಕೊಳ್ಳಿ,ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಬೇಯಿಸಲು ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ,(ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು


ತಯಾರಿಸುವ ರೀತಿ:

ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ,ಹೆಚ್ಚಿದ ಪಾಲಕ್ ಎಲೆಗಳು ಮತ್ತು ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ,ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ,ಕುದಿಯುವಾಗ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪು ಹಾಕಿ,ಎಲ್ಲ ಚೆನ್ನಾಗಿ ಕುದಿಸಿ,ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ,ಇಳಿಸಿ.
ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.

ಒಗ್ಗರಣೆಗೆ -

ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ,ಜೀರಿಗೆ,ಇಂಗು,ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ,ಹೇಗೆ ಹಾಕಲಿ,ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಇಡ್ಲಿಯ ಹಿಟ್ಟು ದೋಸೆ ಹಿಟ್ಟಿಗಿಂತ ಗಟ್ಟಿಯಿರಲಿ. ಹಿಟ್ಟು ರುಬ್ಬಿಟ್ಟು ಮಾರನೇದಿನ ಅಥವಾ ಏಳೆಂಟು ಗಂಟೆಗಳ ನಂತರ ಇಡ್ಲಿಯನ್ನು ತಯಾರಿಸಿ. ಹಿಟ್ಟು ಹುದುಗು ಬಂದಿದ್ದರೆ ಮಾತ್ರ ಇಡ್ಲಿಗಳು ಚೆನ್ನಾಗಿ ಬರುತ್ತವೆ.

Saturday, December 19, 2009

Dose/Dosa Saagu- ದೋಸೆ ಸಾಗು:


ದೋಸೆ ಸಾಗು:
ಸಾಮಗ್ರಿಗಳು:
ಅಕ್ಕಿ - ನಾಲ್ಕು ಕಪ್
ಕುಸುಬಲಕ್ಕಿ- ಅರ್ಧಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ

ವಿಧಾನ:

ಅಕ್ಕಿಯನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ,ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ /ಎಣ್ಣೆ ಹಾಕಿ ಸವರಿ,ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ,ಬೇಯಿಸಿ ತೆಗೆಯಿರಿ. ಇದೇ ರೀತಿ ಎಷ್ಟು ಬೇಕೋ ತಯಾರಿಸಿಕೊಳ್ಳಿ. ದೋಸೆಯೊಂದಿಗೆ ಸಾಗು ತುಂಬಾ ಚೆನ್ನಾಗಿರುತ್ತದೆ.
***********************************
ಸಾಗು ತಯಾರಿಸುವ ಬಗೆ;

ತರಕಾರಿ ಸಾಗು:

ಸಾಮಗ್ರಿಗಳು:

ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು, ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು

ವಿಧಾನ:

ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು, ಹೆಚ್ಚಿದ ತರಕಾರಿಗಳನ್ನು ಹಾಕಿ, ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ, ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ, ಚೆನ್ನಾಗಿ ತಿರುಗಿಸಿ, ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ, ಗರಂಮಸಾಲ ಸಹ ಹಾಕಿ ತಿರುಗಿಸಿ. ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು. ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ.

ಈ ದೋಸೆಗಳ ಜೊತೆ ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯನ್ನು ಕೊಡಿ.

Sunday, July 12, 2009

Ragi Roti / Rotti - ರಾಗಿರೊಟ್ಟಿ:

ರಾಗಿರೊಟ್ಟಿ:

ಸಾಮಗ್ರಿಗಳು:

ರಾಗಿಹಿಟ್ಟು - ಎರಡು ಬಟ್ಟಲು
ಗೋಧಿಹಿಟ್ಟು - ನಾಲ್ಕು ಚಮಚ
ಉಪ್ಪು ಸ್ವಲ್ಪ
ಬಿಸಿನೀರು

ವಿಧಾನ:

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ, ಬಿಸಿನೀರು ಹಾಕಿ ರೊಟ್ಟಿಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
ಕಿತ್ತಳೆ ಗಾತ್ರದಲ್ಲಿ ಉಂಡೆಗಳನ್ನು ತೆಗೆದುಕೊಂಡು, ರೊಟ್ಟಿ ತಟ್ಟಿ ತವಾ ಮೇಲೆ ಹಾಕಿ ಬೇಯಿಸಿ. ಎರಡು ಬದಿ ಸರಿಯಾಗಿ ಬೇಯಿಸಿ, ರಾಗಿರೊಟ್ಟಿ ತಯಾರಾಗುತ್ತದೆ. ಇದನ್ನು ಚಟ್ನಿಯೊಂದಿಗೆ ಸರ್ವ್ ಮಾಡಿ. ಬೆಣ್ಣೆ ಮತ್ತು ಖಾರಚಟ್ನಿ ಜೊತೆ ಸಹ ಕೊಡಬಹುದು.ಕೊತ್ತುಂಬರಿಸೊಪ್ಪಿನ ಚಟ್ನಿಯೂ ಹೊಂದುತ್ತದೆ. ಈ ಚಟ್ನಿಗೆ ಕೆಲವರು ಗೊಡ್ಡುಖಾರ ಅಂತ ಕರೆಯುತ್ತಾರೆ. ಈ ರಾಗಿರೊಟ್ಟಿ ಮತ್ತು ಗೊಡ್ಡುಖಾರ ಜೊತೆ ತಿಂದರೆ ಗಂಟಲು ನೋವಿಗೆ ಸ್ವಲ್ಪ ಉಪಶಮನ ಸಿಗುತ್ತದೆ.

* ರೊಟ್ಟಿ ತಟ್ಟುವಾಗ ಮತ್ತು ಬೇಯಿಸುವಾಗ ಎಣ್ಣೆ ಹಾಕಿಕೊಳ್ಳಬಹುದು.
* ಕಲೆಸಿಕೊಳ್ಳುವಾಗ ಅನ್ನವನ್ನು ಸಹ ಚೆನ್ನಾಗಿ ಮಿದ್ದು (ಪೇಸ್ಟ್) ಸೇರಿಸಬಹುದು.

Thursday, June 11, 2009

Coriander leaves Chutney- ಕೊತ್ತುಂಬರಿಸೊಪ್ಪಿನ ಚಟ್ನಿ

ಕೊತ್ತುಂಬರಿಸೊಪ್ಪಿನ ಚಟ್ನಿ:

ಸಾಮಗ್ರಿಗಳು:
ಕೊತ್ತುಂಬರಿಸೊಪ್ಪು
ಹಸಿಮೆಣಸಿನಕಾಯಿ
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ - ನಾಲ್ಕು ಎಸಳು
ಉಪ್ಪು ರುಚಿಗೆ

ವಿಧಾನ:


ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ಬೆಳ್ಳುಳ್ಳಿ,ಹುಣಸೇಹಣ್ಣು ಮತ್ತು ಉಪ್ಪು ಸೇರಿಸಿ,ರುಬ್ಬಿಕೊಳ್ಳಿ.
ಇದನ್ನು ಸಹ ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಇದು ರಾಗಿರೊಟ್ಟಿಗೆ ತುಂಬಾ ಚೆನ್ನಾಗಿರುತ್ತದೆ.

Saturday, May 2, 2009

Mint / Pudina Chutney - ಪುದೀನ ಸೊಪ್ಪಿನ ಚಟ್ನಿ:

ಪುದೀನ ಸೊಪ್ಪಿನ ಚಟ್ನಿ:

ಸಾಮಗ್ರಿಗಳು:

ಪುದೀನ ಸೊಪ್ಪು
ಹಸಿಮೆಣಸಿನಕಾಯಿ
ಕೊತ್ತುಂಬರಿಸೊಪ್ಪು
ಉಪ್ಪು
ವಿನಿಗರ್ ಒಂದು ಚಮಚ

ವಿಧಾನ:


ಪುದೀನ,ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ವಿನಿಗರ್ ಮತ್ತು ಉಪ್ಪು ರುಬ್ಬಿಕೊಳ್ಳಿ.
ಇದನ್ನು ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಫ್ರಿಡ್ಜ್ ನಲ್ಲಿ ಕೆಲವು ದಿನ ಹಾಳಾಗದೆ ಇರುತ್ತದೆ.

Friday, May 1, 2009

Moolangi chutni/Radish chutney

ಮೂಲಂಗಿ ಚಟ್ನಿ:

ಮೂಲಂಗಿ ಜಜ್ಜಿದ್ದು ಅರ್ಧ ಬಟ್ಟಲು
ಕಾಯಿತುರಿ ಒಂದು ಬಟ್ಟಲು
ಹಸಿಮೆಣಸಿನಕಾಯಿ
ಜೀರಿಗೆ
ಉಪ್ಪು
ಕೊತ್ತುಂಬರಿ ಸೊಪ್ಪು

ತಯಾರಿಸುವ ವಿಧಾನ:

ಕಾಯಿತುರಿ,ಉಪ್ಪು,ಹಸಿಮೆಣಸಿನಕಾಯಿ,ಜೀರಿಗೆ ಮತ್ತು ಕೊತ್ತುಂಬರಿ ಸೊಪ್ಪು ಎಲ್ಲಾ ಹಾಕಿ,ಚಟ್ನಿಯಂತೆ ರುಬ್ಬಿ.ಇದಕ್ಕೆ ಜಜ್ಜಿದ ಮೂಲಂಗಿಯನ್ನು ಬೆರೆಸಿ. ಇದು ರುಚಿಕರವಾಗಿರುತ್ತದೆ. ಯಾವ ಊಟಕ್ಕಾದರೂ ನೆಂಚಿಕೊಳ್ಳಬಹುದು.

Sunday, April 19, 2009

Red Chutney-ಖಾರಚಟ್ನಿ/ಕೆಂಪು ಚಟ್ನಿ:

ಖಾರಚಟ್ನಿ/ಕೆಂಪು ಚಟ್ನಿ:

ಸಾಮಗ್ರಿಗಳು:

ಕೆಂಪುಮೆಣಸಿನಕಾಯಿ / ಒಣಮೆಣಸಿನಕಾಯಿ
ಉಪ್ಪು
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ ಸ್ವಲ್ಪ

ವಿಧಾನ:

ಇವೆಲ್ಲವನ್ನು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿ, ಕೆಂಪು ಚಟ್ನಿ ಅಥವ ಖಾರ ಚಟ್ನಿ ತಯಾರಾಗುತ್ತದೆ.

Wednesday, August 13, 2008

ಸೌತೆಕಾಯಿ ಚಟ್ನಿ/ Cucumber chutney

ಸೌತೆಕಾಯಿ ಚಟ್ನಿ:

ಸಾಮಗ್ರಿಗಳು:

ಸೌತೆಕಾಯಿ - ಒಂದು
ಕಾಯಿತುರಿ - ಒಂದು ಬಟ್ಟಲು
ಹುರಿಗಡಲೆ ಸ್ವಲ್ಪ
ಹುಣಸೆಹಣ್ಣು ಚೂರು
ಕೊತ್ತುಂಬರಿಸೊಪ್ಪು
ಹಸಿರು/ಒಣಮೆಣಸಿನಕಾಯಿಗಳು ರುಚಿಗೆ
ಉಪ್ಪು ರುಚಿಗೆ

ವಿಧಾನ:

ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ಬಿಡಿಸಿ, ತೊಳೆದು ಇಡಿ. ಸೌತೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ಅದಕ್ಕೆ ಕಾಯಿತುರಿ,ಹುರಿಗಡಲೆ,ಹುಣಸೆಹಣ್ಣು,ಒಣ ಅಥವಾ ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ಹಾಕಿ,ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.

Sunday, July 20, 2008

Upma / Uppittu- ಉಪ್ಪಿಟ್ಟು:


ಉಪ್ಪಿಟ್ಟು:
ಸಾಮಗ್ರಿಗಳು:

ರವೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೇ ಉಪ್ಪಿಟ್ಟನ್ನು ತಿನ್ನಬೇಕು ಇಲ್ಲವೆಂದರೆ ಹೆಸರಿಗೆ ತಕ್ಕಂತೆ ಕಾಂಕ್ರೀಟ್ ತರ ಗಟ್ಟಿಯಾಗುತ್ತದೆ.

Wednesday, March 12, 2008

ಕೊತ್ತುಂಬರಿಸೊಪ್ಪಿನ ಚಟ್ನಿ/ Coriander chutney



ಕೊತ್ತುಂಬರಿಸೊಪ್ಪಿನ ಚಟ್ನಿ:

ಸಾಮಗ್ರಿಗಳು:
ಕೊತ್ತುಂಬರಿಸೊಪ್ಪು - ಒಂದು ಕಟ್ಟು
ಹಸಿರುಮೆಣಸಿನಕಾಯಿಗಳು ರುಚಿಗೆ
ಉಪ್ಪು ರುಚಿಗೆ

ವಿಧಾನ:
ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ಬಿಡಿಸಿ, ತೊಳೆದು ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ.

Wednesday, December 12, 2007

ಪುದೀನ ಸೊಪ್ಪಿನ ಚಟ್ನಿ/ಗೊಜ್ಜು / Mint chutney

ಸಾಮಗ್ರಿಗಳು:

ಪುದೀನಸೊಪ್ಪು - ಒಂದು ಕಟ್ಟು
ಕೊತ್ತುಂಬರಿಸೊಪ್ಪು ಸ್ವಲ್ಪ
ಒಣಮೆಣಸಿನಕಾಯಿಗಳು ರುಚಿಗೆ
ಎಣ್ಣೆ, ಸಾಸಿವೆ, ಜೀರಿಗೆ
ಕಡ್ಲೆಬೇಳೆ, ಉದ್ದಿನಬೇಳೆ
ಹುಣಸೆ ಹಣ್ಣು - ಒಂದಿಂಚು ಚೂರು
ಉಪ್ಪು ರುಚಿಗೆ
ನಿಂಬೆರಸ ಸ್ವಲ್ಪ

ವಿಧಾನ:
ಮೊದಲು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಒಣಮೆಣಸಿನಕಾಯಿ ಮತ್ತು ಹುಣಸೆಹಣ್ಣನ್ನು ಎಲ್ಲವನ್ನು ಒಂದೊಂದಾಗಿ ಹಾಕಿ,ಹುರಿದಿಟ್ಟುಕೊಂಡು ತೆಗೆದಿಡಿ. ಅದೇ ಬಾಣಲೆಗೆ ಪುದೀನ ಸೊಪ್ಪನ್ನು ಹಾಕಿ ಹುರಿದುಕೊಳ್ಳಿ.ನಂತರ ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬ ಬೇಕು ಅಂತೇನು ಇಲ್ಲ. ಸ್ವಲ್ಪ ತರಿತರಿಯಾಗಿ ರುಬ್ಬಿಕೊಂಡರೆ ಸಾಕು,ಇದು ಅನ್ನ/ಚಪಾತಿ/ಪೂರಿ ಎಲ್ಲಕ್ಕು ಚೆನ್ನಾಗಿರುತ್ತದೆ.

Saturday, May 26, 2007

Tomato Gojju/ palya / ಟೊಮೆಟೋ ಗೊಜ್ಜು

ಟೊಮೊಟೊ ಹಣ್ಣಿನಿಂದ ತುಂಬಾ ಡಿಶಸ್‌ ಮಾಡಬಹುದು, ಅದರಲ್ಲಿ ಇದು ಒಂದು. ಇದು ಚಪಾತಿಗೆ ನೆಂಚಿಕೊಳ್ಳಲು ಬಲು ಚೆಂದ. ಬೇಗ ತಯಾರಿಸಬಹುದು.

ಟೊಮೆಟೋ ಗೊಜ್ಜು :

ಬೇಕಾಗುವ ಪದಾರ್ಥಗಳು :
ಹಣ್ಣಾಗಿರುವ ಟೊಮೊಟೊ 4ರಿಂದ 5,
ಈರುಳ್ಳಿ 2
ಹಸಿಮೆಣಸಿನಕಾಯಿ 2
ಕರಿಬೇವು(ಬೇಕಾದರೆ),
ಎಣ್ಣೆ,
ಸಾಸಿವೆ
ಉದ್ದಿನಬೇಳೆ,
ಕಡಲೆಬೇಳೆ ,
ಕೆಂಪು ಮೆಣಸಿನ ಪುಡಿ ,
ಉಪ್ಪು,
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :

ಮೊದಲಿಗೆ ಈರುಳ್ಳಿ, ಹಸಿಮೆಣಸಿನಕಾಯಿ , ಕೊತ್ತುಂಬರಿ ಹೆಚ್ಚಿಕೊಳ್ಳಿ.
ಒಗ್ಗರಣೆಗೆ ಪಾತ್ರೆ ಇಟ್ಟು ಎಣ್ಣೆ ಹಾಕಿ, ಕಾದ ಬಳಿಕ ಸಾಸಿವೆ,ಉದ್ದಿನಬೇಳೆ, ಕರಿಬೇವು, ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಹಾಕಿ ಬಾಡಿಸಿ, ನಂತರ ಟೊಮೊಟೊ ಹಾಕಿ ಚೆನ್ನಾಗಿ ತಿರುವಿ. ಟೊಮೊಟೊ ಬೇಯಲು ಬಿಡಿ.ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಬೆಂದ ನಂತರ ತೆಳುವಾಗಿ, ಹೆಚ್ಚಾಗಿ ಬೇಕಾಗಿದ್ದರೆ ಸ್ವಲ್ಪ ನೀರು ಹಾಕಿ, ಉಪ್ಪು ಮತ್ತು ಕೆಂಪುಮೆಣಸಿನಪುಡಿ ಹಾಕಿ ಚೆನ್ನಾಗಿ ತಿರುವಿ. ಸ್ವಲ್ಪ ಹೊತ್ತು ಹಾಗೆ ಬಿಟ್ಟು ನಂತರ ಕೊತ್ತುಂಬರಿ ಉದುರಿಸಿ. ಇದಕ್ಕೆ ಬೇಕಾದರೆ ಕೊಬ್ರಿ ತುರಿ ಇಲ್ಲಾ ಹಸಿಕಾಯಿತುರಿ ಹಾಕಿ ಬೆರಸಿ. ಇದು ಚಪಾತಿ ಮತ್ತು ಬ್ರೆಡ್‌ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಬೇಗ ಕೂಡಾ ಆಗುತ್ತದೆ. ಉಪ್ಪು , ಖಾರ ಹೆಚ್ಚಾಗಿ ಹಾಕಿದರೆ ಅನ್ನಕ್ಕೂ ಕಲಸಿಕೊಂಡು ತಿನ್ನಬಹುದು.

Sunday, April 22, 2007

ಪುದೀನ ಸೊಪ್ಪಿನ ಚಟ್ನಿ/ Mint chutney

ಪುದೀನ ಸೊಪ್ಪಿನ ಚಟ್ನಿ:

ಸಾಮಗ್ರಿಗಳು:
ಪುದೀನಸೊಪ್ಪು - ಒಂದು ಕಟ್ಟು
ಕೊತ್ತುಂಬರಿಸೊಪ್ಪು ಸ್ವಲ್ಪ
ಹಸಿರುಮೆಣಸಿನಕಾಯಿಗಳು ರುಚಿಗೆ
ಉಪ್ಪು ರುಚಿಗೆ
ನಿಂಬೆರಸ ಸ್ವಲ್ಪ

ವಿಧಾನ:
ಪುದೀನ ಮತ್ತು ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ಬಿಡಿಸಿ, ತೊಳೆದು ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ನಿಂಬೆರಸ ಹಾಕಿ ಬೆರೆಸಿ. ಪುದೀನ ಚಟ್ನಿ ತಯಾರಾಗುತ್ತದೆ.

Popular Posts