Saturday, April 26, 2014

ಈರುಳ್ಳಿ ಬೆಂಡೆಕಾಯಿ ಪಕೋಡ: Onion Okra Pakoda: Bendekaayi pakoda


ಈರುಳ್ಳಿ ಬೆಂಡೆಕಾಯಿ ಪಕೋಡ:

ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ - 7-8
ಈರುಳ್ಳಿ - ಎರಡು ದೊಡ್ಡದು
ಕಡ್ಲೆಹಿಟ್ಟು - ಒಂದು ಕಪ್
ಖಾರದ ಪುಡಿ ( ಅಚ್ಚ ಮೆಣಸಿನ ಪುಡಿ) - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಓಮಕಾಳು - ಅರ್ಧ ಚಮಚ( ಬೇಕಾದರೆ)
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಉದ್ದಕ್ಕೆ ಹೆಚ್ಚಿಕೊಳ್ಳಿ ಅಥವಾ ಮಧ್ಯಕ್ಕೆ ಕತ್ತರಿಸಿ ಸ್ಲೈಸ್ ಮಾಡಿಕೊಂಡು ಅದನ್ನು ಬೇರ್ಪಡಿಸಿಟ್ಟುಕೊಳ್ಳಿ.
ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ, ಅದನ್ನು ಸಣ್ಣಗೆ ತುಂಬಾ (ದಪ್ಪ ಹೋಳುಗಳನ್ನಾಗಿ ಹೆಚ್ಚದೆ) ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ(ಥಿನ್ ಸ್ಲ್ಯೆಸ್ ತರಹ)
ನಂತರ ಒಂದು ಪಾತ್ರೆಗೆ ಕಡ್ಲೆಹಿಟ್ಟು, ಖಾರದ ಪುಡಿ, ಓಮಕಾಳು  ಮತ್ತು ಉಪ್ಪು ಹಾಕಿ ಬೆರೆಸಿ, ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮತ್ತು ಹೆಚ್ಚಿದ ಬೆಂಡೆಕಾಯಿಯ ಸಣ್ಣ ಹೋಳುಗಳು  ಸೇರಿಸಿ, ಅಕ್ಕಿಹಿಟ್ಟು ಸ್ವಲ್ಪ ಒಂದು / ಎರಡು ಚಮಚದಷ್ಟು, ಕಡ್ಲೆಹಿಟ್ಟು ಹೇಗೆ  ತಗೋತಿರೋ ಅದರ ಅಳತೆ ನೋಡಿಕೊಂಡು ಹಾಕಿ. ಹಾಗೂ ಒಂದೆರಡು ಚಮಚ ಕಾದ ಎಣ್ಣೆಯನ್ನು ಹಾಕಿ, ಚೆನ್ನಾಗಿ ಕಲೆಸಿ. ನೀರು ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಹಾಕಿಕೊಳ್ಳಿ, ಯಾಕೆಂದರೆ ಈರುಳ್ಳಿಯು ಕಲೆಸಿದಾಗ ನೀರು ಬಿಡುತ್ತದೆ. ತುಂಬಾ ತೆಳ್ಳಗೆ ಹಿಟ್ಟನ್ನು ಕಲೆಸಬೇಡಿ, ಗಟ್ಟಿಯಾಗಿ ಇರಲಿ. ಕೈ ಅಥವ ಚಮಚದಲ್ಲಿ ತೆಗೆದುಕೊಳ್ಳುವಷ್ಟು ಕಲೆಸಿಕೊಳ್ಳಿ. ನಂತರ ಈ ಕಲೆಸಿದ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಸ್ವಲ್ಪ ತೆಳುವಾಗಿ ಸ್ವಲ್ಪ ಸ್ವಲ್ಪವೇ ಹಿಟ್ಟು ಪಕೋಡಾ ತರಹ ಹಾಕಿ ಕರಿಯಿರಿ. ತುಂಬಾ ದಪ್ಪ ಮಿಶ್ರಣ ಹಾಕಿದರೆ ಒಳಗೆ ಹಿಟ್ಟು ಬೇಯುವುದಿಲ್ಲ, ಅದಕ್ಕೆ ತೆಳುವಾಗಿ ಹಾಕಿ. ಗೊಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವವರೆಗೂ ಕರಿದು, ಪೇಪರ್ ಟವಲ್ ಮೇಲೆ ಹಾಕಿ, ಹೆಚ್ಚುವರಿ ಎಣ್ಣೆ ಕಮ್ಮಿ ಆಗುತ್ತದೆ, ನಂತರ ತಿನ್ನಲು ನೀಡಿ. ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಊಟಕ್ಕೆ ನೆಂಚಿಕೊಳ್ಳಲು / ಕಾಫಿ ಹೊತ್ತಿಗೆ ಅಥವ ಯಾರಾದರೂ ಅತಿಥಿಗಳಿಗೆ ನೀಡಲು ತಕ್ಷಣ ತಯಾರಿಸಿಕೊಳ್ಳಬಹುದು. ಇದಕ್ಕೆ ಚಟ್ನಿಯ ಅವಶ್ಯಕತೆ ಇಲ್ಲ, ಬೇಕಾದರೆ ತಯಾರಿಸಿಕೊಳ್ಳಬಹುದು.

*ಟಮೋಟೊ ಸಾಸ್ ನೊಂದಿಗೆ ಸವಿಯಲು ಕೊಡಿ.

* ಸಾಮಾನ್ಯವಾಗಿ ಮಕ್ಕಳು ಬೆಂಡೆಕಾಯಿಯನ್ನು ತಿನ್ನಲು ಇಷ್ಟಪಡುವುದಿಲ್ಲ. ಬೆಂಡೆಕಾಯಿ ಕೆಲವು ಮಕ್ಕಳಿಗೆ ಇಷ್ಟವಾಗುತ್ತದೆ . ತಿನ್ನದೆ ಇರುವ ಮಕ್ಕಳಿಗೆ ಈ ರೀತಿ ಪಕೋಡ ತರಹ ತಯಾರಿಸಿಕೊಟ್ಟರೆ ಸುಮ್ಮನೆ ತಿನ್ನುತ್ತಾರೆ. ಅಲ್ಲದೇ ಅದಕ್ಕೆ ಬೆಂಡೆಕಾಯಿ ಸೇರಿಸಿದಿವಿ ಅಂತ ಹೇಳಿದರೆ ಮಾತ್ರ ಗೊತ್ತಾಗುತ್ತದೆ. ಇಲ್ಲ ಅಂದರೆ ಗೊತ್ತಾಗುವುದಿಲ್ಲ.
* ಎಲ್ಲರಿಗೂ ತಿಳಿದಿರುವಂತೆ ಬೆಂಡೆಕಾಯಿ ಆರೋಗ್ಯಕ್ಕೆ ಅತ್ತ್ಯುತ್ತಮವಾದ ತರಕಾರಿ, ಇದರಲ್ಲಿ ನಾರಿನ ಅಂಶ ಹೆಚ್ಚಾಗಿದೆ, ಬುದ್ಧಿಶಕ್ತಿಗೆ, ಮೆಮೋರಿಗೆ ಒಳ್ಳೆಯದು.

Popular Posts