Showing posts with label Rice Varieties. Show all posts
Showing posts with label Rice Varieties. Show all posts

Friday, March 11, 2011

Tomato Chitranna Gojju:ಟೊಮೋಟೊ ಚಿತ್ರಾನ್ನ ಗೊಜ್ಜು:





ಟೊಮೋಟೊ ಚಿತ್ರಾನ್ನ ಗೊಜ್ಜು:

ಬೇಕಾಗುವ ಸಾಮಗ್ರಿಗಳು:


ಟೊಮೋಟೊ- ನಾಲ್ಕು ಮಧ್ಯಮ ಗಾತ್ರದ್ದು
ಈರುಳ್ಳಿ - ಒಂದೆರಡು
ಹಸಿಮೆಣಸಿನಕಾಯಿ - ಎರಡು
ಎಣ್ಣೆ - ಒಗ್ಗರಣೆಗೆ
ಕಡ್ಲೆಬೇಳೆ - ಒಂದು ಚಮಚ
ಉದ್ದಿನ ಬೇಳೆ - ಒಂದು ಚಮಚ
ಸಾಸಿವೆ - ಕಾಲು ಚಮಚ
ಜೀರಿಗೆ - ಕಾಲು ಚಮಚ
ಅರಿಶಿಣ - ಚಿಟಿಕೆ
ಕರಿಬೇವು ಸ್ವಲ್ಪ
ಕೊತ್ತುಂಬರಿ ಸೊಪ್ಪು
ಅಚ್ಚ ಕಾರದ ಪುಡಿ ಮತ್ತು ಉಪ್ಪು - ರುಚಿಗೆ ತಕ್ಕಷ್ಟು


ತಯಾರಿಸುವ ವಿಧಾನ:

ಟೊಮೋಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಕೊಳ್ಳಿ. ಕೊತ್ತುಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ.
ಒಗ್ಗರಣೆಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಕ್ರಮವಾಗಿ ಹಾಕಿ. ನಂತರ ಈರುಳ್ಳಿ,ಕರಿಬೇವು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಈರುಳ್ಳಿ ಬೇಯುವವರೆಗೂ ತಿರುಗಿಸಿ.ಹೆಚ್ಚಿದ ಟೊಮೆಟೊ ಅನ್ನು ಹಾಕಿ,ಬೆರೆಸಿ. ನಾಲ್ಕರಿಂದ ಐದು ನಿಮಿಷ ಬೇಯಿಸಿ. ನಂತರ ಅದಕ್ಕೆ ಅರಿಶಿಣ, ಕಾರದಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ, ಒಂದೆರಡು ನಿಮಿಷದ ನಂತರ ಒಲೆಯಿಂದ ಇಳಿಸಿ. ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.
ಈ ಒಗ್ಗರಣೆ ಗೊಜ್ಜನ್ನು ಅನ್ನಕ್ಕೆ ಕಲಸಿ, ಚೆನ್ನಾಗಿ ಬೆರೆಸಿ, ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸಹ ಬೆರೆಸಿದರೆ. ಟೊಮೋಟೊ ಚಿತ್ರಾನ್ನ ತಯಾರಾಗುತ್ತದೆ.

Sunday, March 28, 2010

Firni - ಫಿರಣಿ /ಫಿರನಿ/ಫಿರ್ನಿ ( Rice Pudding )

ಫಿರಣಿ /ಫಿರನಿ:

ಬೇಕಾಗುವ ಸಾಮಗ್ರಿಗಳು:

ಅಕ್ಕಿಹಿಟ್ಟು - ಎರಡು ದೊಡ್ಡ ಚಮಚ
ಹಾಲು - ಒಂದು ಬಟ್ಟಲು
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ಕೋವಾ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಕೇಸರಿ ದಳಗಳು ಸ್ವಲ್ಪ (ಬೇಕಾದರೆ)
ಸಕ್ಕರೆ ರುಚಿಗೆ ತಕ್ಕಷ್ಟು
ಡ್ರೈ ಫ್ರೂಟ್ಸ್ (ಬಾದಾಮಿ,ಗೋಡಂಬಿ,ಪಿಸ್ತ)

ತಯಾರಿಸುವ ವಿಧಾನ:

ಮೊದಲು ಹಾಲು ಕಾಯಿಸಿ,ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಮತ್ತು ಸಕ್ಕರೆಯನ್ನು ಸೇರಿಸಿ,ತಿರುಗಿಸಿ. ಮೂರ್ನಾಲ್ಕು ಚಮಚ ಹಾಲಿನೊಂದಿಗೆ ಅಕ್ಕಿಹಿಟ್ಟನ್ನು ಗಂಟಿಲ್ಲದಂತೆ ಕಲೆಸಿಕೊಂಡು ಅದನ್ನು ಕುದಿಯುತ್ತಿರುವ ಹಾಲಿಗೆ ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸಿ. ಬೇಗ ತಳಹತ್ತುತ್ತದೆ,ಕೈ ಬಿಡದೆ ತಿರುಗಿಸುತ್ತಿರಬೇಕು. ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಕೋವಾವನ್ನು ಬೆರೆಸಿ,ಏಲಕ್ಕಿ ಪುಡಿ,ಡ್ರೈ ಫ್ರೂಟ್ಸ್ ಮತ್ತು ಕೇಸರಿ ದಳಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸುತ್ತಿದ್ದು,ಅದು ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ಗಟ್ಟಿಯಾದಂತೆ ಎನಿಸಿದಾಗ ಇಳಿಸಿ. ಇದನ್ನು ಒಂದೆರಡು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿ ಅಥವಾ ತಣ್ಣಗಾದ ಮೇಲೆ ತಿನ್ನಲು ಕೊಡಿ. ಇದು ತುಂಬಾ ರುಚಿಯಾಗಿರುತ್ತದೆ.

* ಅಕ್ಕಿ ಹಿಟ್ಟಿನ ಬದಲು ಅಕ್ಕಿ ರವೆಯನ್ನು ಉಪಯೋಗಿಸಬಹುದು. ಇದನ್ನು ಪೂರ್ತಿ ಹಾಲಿನಲ್ಲಿಯೇ ಬೇಯಿಸಬೇಕು.
* ಕೇಸರಿ ದಳಗಳನ್ನು ಬಳಸುವಾಗ ಯಾವಾಗಲೂ ಒಂದೆರಡು ಚಮಚ ಹಾಲಿನಲ್ಲಿ ನೆನೆಸಿಡಿ.

Friday, February 12, 2010

Heerekaayi huli / Ridge gourd samber

ಹೀರೆಕಾಯಿ ಹುಳಿ:
ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ
ಹೀರೆಕಾಯಿ ಹೆಚ್ಚಿದ್ದು
ಟಮೋಟ ಹಣ್ಣು
ಈರುಳ್ಳಿ ಸ್ವಲ್ಪ
ಕಾಯಿತುರಿ ಸ್ವಲ್ಪ
ಸಾರಿನ ಪುಡಿ
ಹುಣಸೇರಸ - ೧ ಚಮಚ
ಅರಿಶಿಣದ ಪುಡಿ
ಎಣ್ಣೆ
ಉಪ್ಪು
ಜೊತೆಗೆ ಬೇಕಾದರೆ ಆಲೂಗೆಡ್ಡೆ/ಮೂಲಂಗಿ/ಹುರುಳಿಕಾಯಿ ಸೇರಿಸಿಕೊಳ್ಳಬಹುದು.

ತಯಾರಿಸುವ ವಿಧಾನ:

ತೊಗರಿಬೇಳೆಗೆ ಅರಿಶಿಣ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೀರೆಕಾಯಿ ಮತ್ತು ಟಮೋಟ ಹಾಕಿ,(ಇತರೆ ತರಕಾರಿ ಬಳಸುವುದಾದರೆ ಅದನ್ನು ಸೇರಿಸಿ)ತರಕಾರಿ ಬೇಯುವವರೆಗೂ ಬೇಯಿಸಿ,ನಂತರ ಸಾರಿನಪುಡಿ,ಹುಣಸೇರಸ,ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿ,ಚೆನ್ನಾಗಿ ಕುದಿಸಿ.ನಂತರ ಅದಕ್ಕೆ ಒಗ್ಗರಣೆ ಸೇರಿಸಿ.ಇಳಿಸಿ.
* ರುಬ್ಬಲು - ಕಾಯಿತುರಿ, ಈರುಳ್ಳಿ ಮತ್ತು ಸಾರಿನಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
* ಒಗ್ಗರಣೆ - ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಮತ್ತು ಚುಟುಕ ಈರುಳ್ಳಿ ಹಾಕಿ ಬಾಡಿಸಿ.
* - ರುಬ್ಬಿಕೊಳ್ಳಲು ವೇಳೆ/ಬಿಡುವು ಇಲ್ಲದವರು ಕಾಯಿತುರಿ ರುಬ್ಬಿಕೊಳ್ಳದೆ ಆಗೆ ಕೂಡ ಸಾಂಬಾರ್ ತಯಾರಿಸಿಕೊಳ್ಳಬಹುದು. ಆಗ ಸಾರಿಗೆ ರುಬ್ಬಿದ ಮಿಶ್ರಣದ ಹಾಕುವ ಬದಲು ಬರೀ ಸಾರಿನ ಪುಡಿ ಹಾಕಿ ಕುದಿಸಿದರೆ ಆಯಿತು. ಈ ಸಾಂಬಾರ್ ಕೂಡ ರುಚಿಯಾಗಿಯೇ ಇರುತ್ತದೆ.
* ಈಗ ರುಬ್ಬಿ ತಯಾರಿಸುವ ಸಾಂಬಾರ್ ಗಿಂತ ಪುಡಿ ಉದುರಿಸಿ ತಯಾರಿಸುವ ಸಾರುಗಳೂ ಸಾಮಾನ್ಯವಾಗಿದೆ. ಇದು ಲೈಟ್ ಆಗಿರುತ್ತದೆ.
* ಹುರುಳಿಕಾಯಿ/ಆಲೂಗೆಡ್ಡೆ/ಕ್ಯಾರೆಟ್/ಬದನೆಕಾಯಿ ಸಹ ಸೇರಿಸಿ ತಯಾರಿಸಬಹುದು. ತರಕಾರಿಗಳು ಒಂದೇ ಹಾಕಿ ತಯಾರಿಸಿದಾಗ ಅದು ಅದರದ್ದೇ ಹೆಸರಿನ ಹುಳಿ ಆಗಿರುತ್ತದೆ. ಜೊತೆಗೆ ಬೇರೆ ಹಾಕಿದಾಗ ಅದು ಕಾಂಬಿನೇಷನ್ ಸಾರು ಆಗುತ್ತದೆ,ಅಷ್ಟೇ. ನಮಗೆ ಯಾವ ತರಕಾರಿ ಬಳಸಲು ಇಷ್ಟವೋ ಆ ತರಕಾರಿ ಬಳಸಿದರೆ ಆಯಿತು.
* ಕುಕ್ಕರ್ ನಲ್ಲಿ ತಯಾರಿಸುವುದು ಸುಲಭ. ಅದನ್ನು ತಯಾರಿಸುವ ಬಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಅಲ್ವಾ. ಆಗಾಗಿ ಅದರ ವಿವರ ಬೇಡ ಎನಿಸುತ್ತೆ.
* ಯಾವುದೇ ಸಾಂಬಾರ್ ಅಥವಾ ಹುಳಿ ತಯಾರಿಸಿದರೂ, ಪುಡಿ ಚೆನ್ನಾಗಿದ್ದು,ರುಚಿಯಾಗಿದ್ದರೆ ಮಾತ್ರ ಸಾರು ರುಚಿಯಾಗಿರುತ್ತದೆ.

Wednesday, December 17, 2008

Tamarind Rice / ಹುಳಿ ಚಿತ್ರಾನ್ನ:

ಹುಳಿ ಚಿತ್ರಾನ್ನ:


ಬೇಕಾಗುವ ಸಾಮಗ್ರಿಗಳು;
ಅನ್ನ- ಎರಡು ಬಟ್ಟಲು,
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ತಯಾರಿಸುವ ವಿಧಾನ:

ಉದುರು ಉದುರಾಗಿ ಮಾಡಿಕೊಂಡಿರುವ ಅನ್ನವನ್ನು ಅಗಲವಾದ ಪಾತ್ರೆಗೆ ಹಾಕಿ,ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಜೀರಿಗೆ, ಕರಿಬೇವು ,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ಹುಣಸೇಹುಳಿಯ ಚಿತ್ರಾನ್ನ ತಯಾರಾಗುತ್ತದೆ.

Wednesday, December 3, 2008

Cardamom Rice - ಏಲಕ್ಕಿ ಅನ್ನ:

ಏಲಕ್ಕಿ ಅನ್ನ:

ಬಾಸುಮತಿ ಅಕ್ಕಿ - ಒಂದು ಬಟ್ಟಲು
ಜೀರಿಗೆ - ಒಂದು ಚಮಚ
ಏಲಕ್ಕಿ - ಎರಡು
ಲವಂಗ -ಎರಡು
ತುಪ್ಪ/ಬೆಣ್ಣೆ
ಉಪ್ಪು ರುಚಿಗೆ

ವಿಧಾನ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆ ಹಾಕಿಡಿ.
ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಮಾಡಿ ಜೀರಿಗೆ ಏಲಕ್ಕಿ ಮತ್ತು ಲವಂಗ ಹಾಕಿ ಹುರಿದು, ಅದಕ್ಕೆ ನೆನೆಸಿದ ಅಕ್ಕಿ ಹಾಕಿ, ಉಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ, ಒಂದೆರಡು ನಿಮಿಷ ಹುರಿಯಿರಿ. ನಂತರ ಅಳತೆಗೆ ತಕ್ಕ ನೀರು ಸೇರಿಸಿ ,ಬೆರೆಸಿ. ಬೇಯಿಸಿ. ಅನ್ನವನ್ನು ತಯಾರಿಸಿ. ಏಲಕ್ಕಿ ಅನ್ನ ತಯಾರಾಗುತ್ತದೆ. ಈ ಅನ್ನವೂ ವೆಜ್ ಮತ್ತು ನಾನ್ ವೆಜ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯಾವುದಾದರೂ ಸಾಗು /ಕೂಟು ಜೊತೆ ಮತ್ತು ರಾಯತದೊಂದಿಗೆ ಕೊಡಿ.

Sunday, February 17, 2008

Jeera Rice / ಜೀರಿಗೆ ಅನ್ನ

ಜೀರಿಗೆ ಅನ್ನ:

ಬಾಸುಮತಿ ಅಕ್ಕಿ - ಒಂದು ಬಟ್ಟಲು
ಜೀರಿಗೆ - ಒಂದು ಚಮಚ
ಏಲಕ್ಕಿ - ಎರಡು
ತುಪ್ಪ/ಬೆಣ್ಣೆ
ಉಪ್ಪು ರುಚಿಗೆ

ವಿಧಾನ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆ ಹಾಕಿಡಿ.
ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಮಾಡಿ ಏಲಕ್ಕಿ,ಜೀರಿಗೆ ಹಾಕಿ ಹುರಿದು,ಅದಕ್ಕೆ ನೆನೆಸಿದ ಅಕ್ಕಿ ಹಾಕಿ,ಉಪ್ಪು ಸೇರಿಸಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಹುರಿಯಿರಿ. ನಂತರ ಅಳತೆಗೆ ತಕ್ಕ ನೀರು ಸೇರಿಸಿ ,ಬೆರೆಸಿ.ಬೇಯಿಸಿ.ಅನ್ನವನ್ನು ತಯಾರಿಸಿ.ಜೀರಿಗೆ ಅನ್ನ ತಯಾರಾಗುತ್ತದೆ. ಈ ಅನ್ನವೂ ವೆಜ್ ಮತ್ತು ನಾನ್ ವೆಜ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯಾವುದಾದರೂ ಸಾಗು /ಕೂಟು ಜೊತೆ ಮತ್ತು ರಾಯತದೊಂದಿಗೆ ಕೊಡಿ.

Saturday, November 17, 2007

Tamarind Chitranna - ಹುಳಿ ಚಿತ್ರಾನ್ನ

ಹುಳಿ ಚಿತ್ರಾನ್ನ ತಯಾರಿಸಿದಂತೆ ತಯಾರಿಸಿ,ಹುರಿದು ಪುಡಿ ಮಾಡಿದ ಮಸಾಲೆ ಹಾಕಿ ತಯಾರಿಸುವುದು-ಈ ಚಿತ್ರಾನ್ನ. ಇದು ಎಲ್ಲಾ ಚಿತ್ರಾನ್ನಗಳಿಗಿಂತ ತುಂಬಾ ರುಚಿಯಾಗಿರುತ್ತದೆ. ಸ್ವಲ್ಪ ಜಾಸ್ತಿ ತಿಂದರೂ ಗೊತ್ತಾಗಲ್ಲ. ನನ್ನ ಅಜ್ಜಿ ತುಂಬಾ ಚೆನ್ನಾಗಿ ಮಾಡುತ್ತಿದ್ದರು ಇದನ್ನು.ಅಮ್ಮ ಸಹ. ಆಗಿನ ಕಾಲದ ರುಚಿಗಳು ಈಗ ಇಲ್ಲ.ಅವರು ಕಡ್ಲೆಕಾಯಿಬೀಜದ ಬದಲಿಗೆ ಕಡ್ಲೆಕಾಳು ಹಾಕುತ್ತಿದ್ದರು.ತಿನ್ನುವಾಗ ಕಡ್ಲೆಕಾಳು ಸಿಕ್ಕಿದಾಗ ಅದೊಂಥರ ತುಂಬಾ ರುಚಿಯಾಗಿರುತ್ತಿತ್ತು. ಅಜ್ಜಿ ಮತ್ತು ಅಮ್ಮನ ನೆನಪಿನೊಂದಿಗೆ ಈ ರೆಸಿಪಿ ಬರೆದಿರುವೆ.
ಮಸಾಲೆ ಹುಳಿ ಚಿತ್ರಾನ್ನ:

ಬೇಕಾಗುವ ಸಾಮಗ್ರಿಗಳು;
ಅನ್ನ- ಎರಡು ಬಟ್ಟಲು,
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್)-ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ಹುರಿದು ಪುಡಿ ಮಾಡಿಕೊಳ್ಳಲು ಪದಾರ್ಥಗಳು:

ಜೀರಿಗೆ - ಎರಡು ಚಮಚ
ಮೆಂತ್ಯ- ಅರ್ಧ ಚಮಚ
ಸಾಸಿವೆ- ಒಂದು ಚಮಚ
ಎಳ್ಳು- ಎರಡು ಚಮಚ

ಇದಿಷ್ಟನ್ನು ಎಣ್ಣೆ ಹಾಕದೆ ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ. ಎಳ್ಳನ್ನು ತರಿತರಿಯಾಗಿ ಪುಡಿ ಮಾಡಿ.

ತಯಾರಿಸುವ ವಿಧಾನ:ಉದುರು ಉದುರಾಗಿ ಮಾಡಿಕೊಂಡಿರುವ ಅನ್ನವನ್ನು ಅಗಲವಾದ ಪಾತ್ರೆಗೆ ಹಾಕಿ,ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು , ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ, ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಪದಾರ್ಥಗಳನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ. ಇದನ್ನು ತಯಾರಿಸದ ತಕ್ಷಣವೇ ತಿನ್ನುವುದಕ್ಕಿಂತ ಸ್ವಲ್ಪ ಸಮಯದ ನಂತರ ತಿಂದರೆ ಒಂದು ರೀತಿ ರುಚಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ಮಸಾಲೆ ಹುಳಿ ಚಿತ್ರಾನ್ನ ತಯಾರಾಗುತ್ತದೆ.

Tuesday, September 25, 2007

BisiBeleBath -Bcube / ಬಿಸಿಬೇಳೆಭಾತ್

ಬಿಸಿಬೇಳೆಬಾತ್ ತಯಾರಿಸುವಾಗಲೆಲ್ಲ ನನ್ನ ಅಮ್ಮನ ನೆನಪು ಬರುತ್ತದೆ. ಅವರು ಇದನ್ನು ತಯಾರಿಸುತ್ತಿದ್ದಂತ ರೀತಿ,ಅದಕ್ಕಾಗಿಯೇ ಎಷ್ಟು ಆಸಕ್ತಿಯಿಂದ ತಯಾರಿ ಮಾಡುತ್ತಿದ್ದರು. ಅದಕ್ಕೆ ಬೇಕಾದ ಪದಾರ್ಥಗಳನ್ನೆಲ್ಲಾ ಹದವಾಗಿ ಹುರಿದು. ಎಲ್ಲಾ ಸರಿಯಾಗಿ ರೆಡಿಮಾಡಿಕೊಂಡು,ತಯಾರಿಸುತ್ತಿದ್ದರು. ಬಿಸಿಬೇಳೆಬಾತ್ ತಿನ್ನುವುದಕ್ಕೆ ಕಾಯುತ್ತಿದ್ದೆವು. ಸದಾ ಅದು ಒಂದು ತಿಂಡಿ ಲಿಸ್ಟ್ ನಲ್ಲಿ ಸೇರಿಕೊಂಡಿದ್ದರು ಸಹ,ಅದೇನೋ ಅಮ್ಮ ತಯಾರಿಸುತ್ತಿದ್ದುದರಿಂದ ಆ ರುಚಿಗೆ ತಿನ್ನಲು ಕಾಯುತ್ತಿದ್ದೆವು. ಜೊತೆಗೆ ಮೊದಲೇ ತಂದ ಚಿಪ್ಸ್ ಮತ್ತು ಖಾರಬೂಂದಿ ಜೊತೆ ಅದರ ಗಮ್ಮತ್ತೇ ಬೇರೆ. ಇದಲ್ಲದೇ ಯಾವುದಾದರು ಸಣ್ಣ ಪುಟ್ಟ ಪಾರ್ಟಿಗಳಿಗೆ ಬೇರೆ ಅಡಿಗೆ ಮತ್ತು ಸಿಹಿ ಜೊತೆ ಇದು ಖಾಯಂ,ಜೊತೆಗೆ ಮೆಣಸಿನಕಾಯಿ ಬಜ್ಜಿ ಕೂಡ. ಅಮ್ಮನಿಗೆ ಎಲ್ಲವು ಚೆನ್ನಾಗಿರಬೇಕು. ಅವರು ತಯಾರಿಸುತ್ತಿದ್ದ ಎಲ್ಲಾ ಅಡಿಗೆಗಳು ಸೂಪರ್ಬ್!! ಅವರಿಗೆ ಚೆನ್ನಾಗಿತ್ತು ಎಂದರೆ ಸಾಕು ಅಷ್ಟಕ್ಕೆ ಅದೇನು ಸಂತಸಪಡುತ್ತಿದ್ದರು. ಅಜ್ಜಿ ಮತ್ತು ಅಮ್ಮಗಳ ಅಡಿಗೆಯೇ ನಾವಿಂದು ಸುಮಾರು ತಯಾರಿಸುತ್ತೇವೆ. ಅವರ ಕೈರುಚಿ ತುಂಬಾ ಚೆನ್ನಾಗಿರುತ್ತಿತ್ತು. ಅದು ಹೇಳಲು ಮಾತೇ ಇಲ್ಲ ಎನಿಸುತ್ತೆ. ನಾವೇ ಧನ್ಯರು!! ಈಗ ಇಲ್ಲಿ ನಾನು ಅದೇ ರೀತಿ ತಯಾರಿಸುವ ಬಿಸಿಬೇಳೆಬಾತ್ ತಿಳಿಸಿರುವೆ. ಅದೇ ರುಚಿಗೆ ಮೋಸ ಇಲ್ಲ ಅನ್ಕೊತಿನಿ, ಸ್ವಲ್ಪ ಪರವಾಗಿಲ್ಲವೇನೋ. ಅವರಷ್ಟು ಅಲ್ಲದಿದ್ದರು ಒಕೆ. ಹೇಗಿದೆ ಅಂತ ನೀವು ತಯಾರಿಸಿ ನಂತರ ತಿಳಿಸಿ.

ಬಿಸಿಬೇಳೆಭಾತ್:
ಬೇಕಾಗುವ ಸಾಮಗ್ರಿಗಳು:

ಅಕ್ಕಿ - ಒಂದು ಬಟ್ಟಲು
ತೊಗರಿಬೇಳೆ - ಒಂದು ಬಟ್ಟಲು
ತರಕಾರಿ ಉಪಯೋಗಿಸುವುದಾದರೆ-
ಕ್ಯಾರೆಟ್,ಬೀನ್ಸ್,ಆಲೂಗೆಡ್ಡೆ,ಟಮೋಟ ಮತ್ತು ಬಟಾಣಿ
ಈರುಳ್ಳಿ ಸ್ವಲ್ಪ ಹೆಚ್ಚಿದ್ದು
ಹುಣಸೇರಸ
ಬೆಲ್ಲ ಚೂರು
ಅರಿಶಿನ
ಉಪ್ಪು

ಬಿಸಿಬೇಳೆ ಭಾತಿನ ಪುಡಿ ತಯಾರಿಸಲು ಸಾಮಗ್ರಿಗಳು

ಒಣಮೆಣಸಿನಕಾಯಿ -ಹತ್ತು /ರುಚಿಗೆ
ಧನಿಯ- ಎರಡು ಚಮಚ
ಮೆಂತ್ಯ -ಅರ್ಧ ಚಮಚ
ಜೀರಿಗೆ-ಒಂದು ಚಮಚ
ಗಸಗಸೆ-ಅರ್ಧ ಚಮಚ
ಏಲಕ್ಕಿ-
ಲವಂಗ
ಚೆಕ್ಕೆ
ಮೆಣಸು ಮತ್ತು
ಒಣಕೊಬ್ಬರಿ

ಒಗ್ಗರಣೆಗೆ ಸಾಮಗ್ರಿಗಳು:
ಎಣ್ಣೆ,ತುಪ್ಪ,ಸಾಸಿವೆ,ಜೀರಿಗೆ,ಇಂಗು,ಕರಿಬೇವು
ಒಣಮೆಣಸಿನಕಾಯಿ
ಗೋಡಂಬಿ

ತಯಾರಿಸುವ ವಿಧಾನ:

• ತರಕಾರಿಗಳನ್ನು ಉಪಯೋಗಿಸುವುದಾದರೆ, ಸಣ್ಣಗೆ ಹೆಚ್ಚಿಕೊಳ್ಳಿ.
• ಬಟಾಣಿ ಮತ್ತು ಹೆಚ್ಚಿದ ತರಕಾರಿಗಳನ್ನು , ಅಕ್ಕಿ ಮತ್ತು ತೊಗರಿಬೇಳೆಯನ್ನು ,ನೀರು,ಒಂದು ಚಮಚ ಎಣ್ಣೆ, ಅರಿಶಿನ ಮತ್ತು ಸ್ವಲ್ಪ ಉಪ್ಪು ಹಾಕಿ ಎಲ್ಲವನ್ನು ಸೇರಿಸಿ. ಕುಕ್ಕರ್ ನಲ್ಲಿ ಇಟ್ಟು ಕುಕ್ ಮಾಡಿಕೊಳ್ಳಿ. ನೀರನ್ನು ಮಾಮುಲಿಗಿಂತ ಸ್ವಲ್ಪ ಜಾಸ್ತಿ ಹಾಕಿ.

• ಪುಡಿ ಮಾಡಿಕೊಳ್ಳಲು ತಿಳಿಸಿರುವ ಸಾಮಗ್ರಿಗಳನ್ನು ಒಂದು ಚಮಚ ಎಣ್ಣೆ ಹಾಕಿ,ಒಂದೊಂದಾಗಿ ಹುರಿದುಕೊಂಡು,ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿ ಮಾಡಿಟ್ಟು ಕೊಳ್ಳಿ. ಬಿಸಿಬೇಳೆಭಾತ್ ಪುಡಿ ರೆಡಿಯಾಗುತ್ತದೆ.

• ಬೇಯಿಸಿರುವ ಅಕ್ಕಿ ಮತ್ತು ಬೇಳೆ ಮಿಶ್ರಣವನ್ನು ತೆಗೆದು. ಸ್ವಲ್ಪ ಲಘುವಾಗಿ ಚೆನ್ನಾಗಿ ಬೆರೆಸಿಡಿ. ನೀರು ಹಾಕಿ ಸ್ವಲ್ಪ ತೆಳುವಾಗಿರಲಿ.
• ಈಗ ಕೊನೆಯ ಹಂತ ಒಂದು ಅಗಲ ಪಾತ್ರೆಗೆ ಒಗ್ಗರಣೆಗೆ ಸಾಕಾಗುವಷ್ಟು ಎಣ್ಣೆ ಮತ್ತು ತುಪ್ಪವನ್ನು ಹಾಕಿ ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಇಂಗು, ಒಣಮೆಣಸಿನಕಾಯಿ ಮುರಿದು ಹಾಕಿ, ನಂತರ ಕರಿಬೇವಿನ ಸೊಪ್ಪು ಹಾಕಿದ ಮೇಲೆ ಸ್ವಲ್ಪ ನೀರು ಹಾಕಿ, ಅದಕ್ಕೆ ಪುಡಿ ಮಾಡಿಟ್ಟುಕೊಂಡಿರುವ ಮಸಾಲ ಪುಡಿಯನ್ನು ಹಾಕಿ. ಒಂದೆರಡು ನಿಮಿಷ ಕುದಿಸಿ. ನಂತರ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ, ಅಕ್ಕಿ-ಬೇಳೆ ಮಿಶ್ರಣವನ್ನು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ತಿರುಗಿಸಿ. ತುಪ್ಪದಲ್ಲಿ ಕರಿದ ಗೋಡಂಬಿಗಳನ್ನು ಸೇರಿಸಿ. ಉಪ್ಪು,ಕಾರ ಮತ್ತು ಭಾತಿನ ಹದ ನಿಮ್ಮ ಇಷ್ಟದಂತೆ ತಯಾರಿಸಿಕೊಳ್ಳಿ.
• ಎಲ್ಲವನ್ನು ಬೆರೆಸಿದ ಮೇಲೆ ಒಂದು ಕುದಿ ಕುದಿಸಿ, ಇಳಿಸಿ.

• ರುಚಿರುಚಿಯಾದ ಬಿಸಿಬೇಳೆಭಾತ್ ತಿನ್ನಲು ತಯಾರಾಗುತ್ತದೆ. ಈ ಭಾತ್ ಗೆ ಖಾರಬೂಂದಿ ಚೌ-ಚೌ ಮತ್ತು ಆಲೂಗೆಡ್ಡೆ ಚಿಪ್ಸ್ ಚೆನ್ನಾಗಿರುತ್ತದೆ. ಅಲ್ಲದೇ ರಾಯತ, ತರಕಾರಿ ಸಲಾಡ್ ಮತ್ತು ಬಜ್ಜಿಗಳನ್ನು ಜೊತೆಯಲ್ಲಿ ನೀಡಬಹುದು.ಬಿಸಿಯಾದ ಭಾತ್ ಮೇಲೆ ತುಪ್ಪವನ್ನು ಹಾಕಿಕೊಂಡರೆ ರುಚಿ ಹೆಚ್ಚುತ್ತದೆ.
* ಒಣ ಮೆಣಸಿನಕಾಯಿಗಳನ್ನು ಖಾರಕ್ಕೆ ತಕ್ಕಂತೆ ಹಾಕಿ. ಇಲ್ಲವೆಂದರೆ ಕೆಂಪುಕಾರದ ಪುಡಿಯನ್ನಾದರೂ ಮೆಣಸಿನಕಾಯಿ ಬದಲಿಗೆ ಹಾಕಬಹುದು.ಧನಿಯಬೀಜದ ಬದಲು,ಧನಿಯಪುಡಿ ಸಹ ಬಳಸಬಹುದು. ಆದರೂ ಮೆಣಸಿನಕಾಯಿ ಮತ್ತು ಧನಿಯವನ್ನು ಪ್ರೆಶ್ ಆಗಿ ಹುರಿದು ಪುಡಿ ಮಾಡಿಕೊಂಡರೆ,ರುಚಿ ಮತ್ತು ಪರಿಮಳ ಚೆನ್ನಾಗಿರುತ್ತದೆ.ಮಸಾಲೆ ಪುಡಿ ಮತ್ತು ಬಾತ್ ಕೂಡ ಘಮ ಘಮ ವಾಸನೆ ಬರುತ್ತದೆ.
* ಅಕ್ಕಿ ಮತ್ತು ಬೇಳೆಯನ್ನು ಬೇರೆಯಾಗಿ ಬೇಯಿಸಿಕೊಂಡು ಸಹ ಸೇರಿಸಬಹುದು.
* ತರಕಾರಿಗಳು ಇಷ್ಟಪಡುವವರು ಇದಕ್ಕೆ ಸೇರಿಸಿಕೊಳ್ಳಬಹುದು. ಇಲ್ಲವೆಂದರೆ ಬೇಡಾ! ಹಾಕಲೇ ಬೇಕು ಅಂತ ಏನಿಲ್ಲ.
* ಬಿಸಿಬೇಳೆಭಾತಿನ ಪುಡಿಯನ್ನು ಮೊದಲೇ ಹೆಚ್ಚಾಗಿ ತಯಾರಿಸಿ,ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡಿದ್ದರೆ, ಯಾವಾಗ ಬೇಕೋ ಆಗ ಭಾತ್ ತಯಾರಿಸುವುದು ತುಂಬಾ ಸುಲಭ. ಆದರೂ ಪುಡಿಯನ್ನು ಬೇಕಾದಾಗ ತಯಾರಿಸಿ, ಹಾಕಿದರೆ ಹೆಚ್ಚು ರುಚಿ ಮತ್ತು ಪರಿಮಳವೂ ಆಗಿರುತ್ತದೆ.
* ಈ ರೀತಿ ಅಡಿಗೆಗಳಿಗೆ ಫ್ರೆಶ್ ಆಗಿ ತಯಾರಿಸಿಕೊಂಡ ಪುಡಿಗಳು ಉತ್ತಮ.
* ಈ ಭಾತ್ ತಣ್ಣಗಾದಾಗ ಬೇಗ ಗಟ್ಟಿಯಾಗುತ್ತದೆ. ಆಗಾಗಿ ಬಿಸಿ ಇದ್ದಾಗ ತಿಂದರೆ ತುಂಬಾ ಚೆನ್ನಾಗಿರುತ್ತದೆ. ತಣ್ಣಗೆ ಗಟ್ಟಿಯಾದಾಗ ಅದಕ್ಕೆ ಮತ್ತೆ ಒಂದು ಲೋಟ ಬಿಸಿಯಾದ ನೀರು ಹಾಕಿ, ಚೆನ್ನಾಗಿ ಬೆರೆಸಿ, ಕುದಿಸಿ.

Thursday, June 21, 2007

Tomato Peas Pulao/ಟೊಮೆಟೊ ಬಟಾಣಿ ಭಾತ್‌



ಟೊಮೆಟೊ ಬಟಾಣಿ ಭಾತ್‌ :

ಬೇಕಾಗುವ ಸಾಮಗ್ರಿಗಳು:

1ಕಪ್‌ ಅಕ್ಕಿ
4-5 ಚೆನ್ನಾಗಿ ಹಣ್ಣಾಗಿರುವ ಟೊಮೆಟೊ
1/2 ಕಪ್‌ ಹಸಿ ಬಟಾಣಿ
2 ಈರುಳ್ಳಿ
2-3 ಹಸಿ ಮೆಣಸಿನಕಾಯಿ
1 ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್‌
ಎಲೆಎಣ್ಣೆ ಸಾಸಿವೆ, ಜೀರಿಗೆ, ಕರಿಬೇವುಇಂಗು ( ಬೇಕಿದ್ದರೆ)
ಬೆಳ್ಳುಳ್ಳಿ ಮತ್ತು ಶುಂಠಿಪೇಸ್ಟ್‌
1/4 ಚಮಚ ಕಾರದ ಪುಡಿ
1/2 ಚಮಚ ಧನಿಯಾ ಪುಡಿ
1/4 ಚಮಚ ಗರಮ್‌ ಮಸಾಲ,
ಉಪ್ಪು2 ಕಪ್‌ ನೀರು,
ಹೆಚ್ಚಿದ ಕೊತ್ತಂಬರಿ ಸೊಪ್ಪು
ಕಾಯಿ ಅಥವಾ ಕೊಬ್ರಿ
1 ಚಮಚ ನಿಂಬೆರಸ
ಮಾಡುವ ವಿಧಾನ :
ಅಕ್ಕಿ ತೊಳೆದು ನೆನೆಹಾಕಿ. ಟೊಮೆಟೊ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹೆಚ್ಚಿಕೊಳ್ಳಿ.

ಕುಕ್ಕರ್‌ ಅಥವಾ ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿ, ಎಲೆ ಹಾಕಿ, ಕರಿಬೇವು, ಇಂಗು ಹಾಕಿ ಆಮೇಲೆ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ ಹಾಕಬೇಕು.

ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿದ ನಂತರ 2 ನಿಮಿಷ ಬಿಟ್ಟು ಅರಿಶಿನ, ಟೊಮೆಟೊ ಹಾಕಿ ಚೆನ್ನಾಗಿ ಬೆರೆಸಿ. ಬಟಾಣಿ ಬೆರೆಸಿ 5 ನಿಮಿಷದ ನಂತರ ನೀರು ಮತ್ತು ಉಪ್ಪು ಹಾಕಿ ಜೊತೆಯಲ್ಲಿಯೇ ಪುಡಿಗಳನ್ನೆಲ್ಲ ಹಾಕಿ ಕೈಯಾಡಿಸಿ.

ನೀರು ಕುದಿ ಬಂದ ನಂತರ ನೆನೆಸಿಟ್ಟುಕೊಂಡ ಅಕ್ಕಿ ಹಾಕಿ, ಬೇಕಾದರೆ ನಿಂಬೆರಸ ಹಿಂಡಿ. ಕಾಯಿತುರಿ ಹಾಕಿ ಮುಚ್ಚಳ ಮುಚ್ಚಿ. ಅಡುಗೆ ತಯಾರಾಗುತ್ತೆ.


Tuesday, June 12, 2007

Lemon Rice/ Nimbehannina chitranna



ನಿಂಬೆಹಣ್ಣಿನ ಚಿತ್ರಾನ್ನ:

ಬೇಕಾಗುವ ಸಾಮಗ್ರಿಗಳು;

ಅನ್ನ ಎರಡು ಬಟ್ಟಲು
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ತಯಾರಿಸುವ ವಿಧಾನ:
ಅನ್ನ ಮಾಡಿದ ನಂತರ ಅದನ್ನು ಅಗಲವಾದ ಪಾತ್ರೆಗೆ ಹಾಕಿ , ಅದಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ, ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಡ್ಲೆಕಾಯಿಬೀಜಗಳನ್ನು ಹಾಕಿ, ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು , ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಹಾಕಿ, ಒಂದು ನಿಮಿಷ ಹುರಿದು, ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ, ಅರಿಶಿಣ ಮತ್ತು ಉಪ್ಪು ಹಾಕಿ, ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ, ಇದು ತಣ್ಣಗಾದ ಮೇಲೆ ಅದಕ್ಕೆ ನಿಂಬೆರಸ ಹಿಂಡಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ, ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ನಿಂಬೆಹಣ್ಣಿನ ಚಿತ್ರಾನ್ನ ತಯಾರ್.

Popular Posts