Showing posts with label Pakoda / ಪಕೋಡ. Show all posts
Showing posts with label Pakoda / ಪಕೋಡ. Show all posts

Saturday, April 26, 2014

ಈರುಳ್ಳಿ ಬೆಂಡೆಕಾಯಿ ಪಕೋಡ: Onion Okra Pakoda: Bendekaayi pakoda


ಈರುಳ್ಳಿ ಬೆಂಡೆಕಾಯಿ ಪಕೋಡ:

ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ - 7-8
ಈರುಳ್ಳಿ - ಎರಡು ದೊಡ್ಡದು
ಕಡ್ಲೆಹಿಟ್ಟು - ಒಂದು ಕಪ್
ಖಾರದ ಪುಡಿ ( ಅಚ್ಚ ಮೆಣಸಿನ ಪುಡಿ) - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಓಮಕಾಳು - ಅರ್ಧ ಚಮಚ( ಬೇಕಾದರೆ)
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಉದ್ದಕ್ಕೆ ಹೆಚ್ಚಿಕೊಳ್ಳಿ ಅಥವಾ ಮಧ್ಯಕ್ಕೆ ಕತ್ತರಿಸಿ ಸ್ಲೈಸ್ ಮಾಡಿಕೊಂಡು ಅದನ್ನು ಬೇರ್ಪಡಿಸಿಟ್ಟುಕೊಳ್ಳಿ.
ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ, ಅದನ್ನು ಸಣ್ಣಗೆ ತುಂಬಾ (ದಪ್ಪ ಹೋಳುಗಳನ್ನಾಗಿ ಹೆಚ್ಚದೆ) ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ(ಥಿನ್ ಸ್ಲ್ಯೆಸ್ ತರಹ)
ನಂತರ ಒಂದು ಪಾತ್ರೆಗೆ ಕಡ್ಲೆಹಿಟ್ಟು, ಖಾರದ ಪುಡಿ, ಓಮಕಾಳು  ಮತ್ತು ಉಪ್ಪು ಹಾಕಿ ಬೆರೆಸಿ, ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮತ್ತು ಹೆಚ್ಚಿದ ಬೆಂಡೆಕಾಯಿಯ ಸಣ್ಣ ಹೋಳುಗಳು  ಸೇರಿಸಿ, ಅಕ್ಕಿಹಿಟ್ಟು ಸ್ವಲ್ಪ ಒಂದು / ಎರಡು ಚಮಚದಷ್ಟು, ಕಡ್ಲೆಹಿಟ್ಟು ಹೇಗೆ  ತಗೋತಿರೋ ಅದರ ಅಳತೆ ನೋಡಿಕೊಂಡು ಹಾಕಿ. ಹಾಗೂ ಒಂದೆರಡು ಚಮಚ ಕಾದ ಎಣ್ಣೆಯನ್ನು ಹಾಕಿ, ಚೆನ್ನಾಗಿ ಕಲೆಸಿ. ನೀರು ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಹಾಕಿಕೊಳ್ಳಿ, ಯಾಕೆಂದರೆ ಈರುಳ್ಳಿಯು ಕಲೆಸಿದಾಗ ನೀರು ಬಿಡುತ್ತದೆ. ತುಂಬಾ ತೆಳ್ಳಗೆ ಹಿಟ್ಟನ್ನು ಕಲೆಸಬೇಡಿ, ಗಟ್ಟಿಯಾಗಿ ಇರಲಿ. ಕೈ ಅಥವ ಚಮಚದಲ್ಲಿ ತೆಗೆದುಕೊಳ್ಳುವಷ್ಟು ಕಲೆಸಿಕೊಳ್ಳಿ. ನಂತರ ಈ ಕಲೆಸಿದ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಸ್ವಲ್ಪ ತೆಳುವಾಗಿ ಸ್ವಲ್ಪ ಸ್ವಲ್ಪವೇ ಹಿಟ್ಟು ಪಕೋಡಾ ತರಹ ಹಾಕಿ ಕರಿಯಿರಿ. ತುಂಬಾ ದಪ್ಪ ಮಿಶ್ರಣ ಹಾಕಿದರೆ ಒಳಗೆ ಹಿಟ್ಟು ಬೇಯುವುದಿಲ್ಲ, ಅದಕ್ಕೆ ತೆಳುವಾಗಿ ಹಾಕಿ. ಗೊಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವವರೆಗೂ ಕರಿದು, ಪೇಪರ್ ಟವಲ್ ಮೇಲೆ ಹಾಕಿ, ಹೆಚ್ಚುವರಿ ಎಣ್ಣೆ ಕಮ್ಮಿ ಆಗುತ್ತದೆ, ನಂತರ ತಿನ್ನಲು ನೀಡಿ. ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಊಟಕ್ಕೆ ನೆಂಚಿಕೊಳ್ಳಲು / ಕಾಫಿ ಹೊತ್ತಿಗೆ ಅಥವ ಯಾರಾದರೂ ಅತಿಥಿಗಳಿಗೆ ನೀಡಲು ತಕ್ಷಣ ತಯಾರಿಸಿಕೊಳ್ಳಬಹುದು. ಇದಕ್ಕೆ ಚಟ್ನಿಯ ಅವಶ್ಯಕತೆ ಇಲ್ಲ, ಬೇಕಾದರೆ ತಯಾರಿಸಿಕೊಳ್ಳಬಹುದು.

*ಟಮೋಟೊ ಸಾಸ್ ನೊಂದಿಗೆ ಸವಿಯಲು ಕೊಡಿ.

* ಸಾಮಾನ್ಯವಾಗಿ ಮಕ್ಕಳು ಬೆಂಡೆಕಾಯಿಯನ್ನು ತಿನ್ನಲು ಇಷ್ಟಪಡುವುದಿಲ್ಲ. ಬೆಂಡೆಕಾಯಿ ಕೆಲವು ಮಕ್ಕಳಿಗೆ ಇಷ್ಟವಾಗುತ್ತದೆ . ತಿನ್ನದೆ ಇರುವ ಮಕ್ಕಳಿಗೆ ಈ ರೀತಿ ಪಕೋಡ ತರಹ ತಯಾರಿಸಿಕೊಟ್ಟರೆ ಸುಮ್ಮನೆ ತಿನ್ನುತ್ತಾರೆ. ಅಲ್ಲದೇ ಅದಕ್ಕೆ ಬೆಂಡೆಕಾಯಿ ಸೇರಿಸಿದಿವಿ ಅಂತ ಹೇಳಿದರೆ ಮಾತ್ರ ಗೊತ್ತಾಗುತ್ತದೆ. ಇಲ್ಲ ಅಂದರೆ ಗೊತ್ತಾಗುವುದಿಲ್ಲ.
* ಎಲ್ಲರಿಗೂ ತಿಳಿದಿರುವಂತೆ ಬೆಂಡೆಕಾಯಿ ಆರೋಗ್ಯಕ್ಕೆ ಅತ್ತ್ಯುತ್ತಮವಾದ ತರಕಾರಿ, ಇದರಲ್ಲಿ ನಾರಿನ ಅಂಶ ಹೆಚ್ಚಾಗಿದೆ, ಬುದ್ಧಿಶಕ್ತಿಗೆ, ಮೆಮೋರಿಗೆ ಒಳ್ಳೆಯದು.

Sunday, May 9, 2010

Aambode / ಕಡ್ಲೆಬೇಳೆ ಆಂಬೋಡೆ



ಕಡ್ಲೆಬೇಳೆ ಆಂಬೋಡೆ:

ಬೇಕಾಗುವ ಸಾಮಗ್ರಿಗಳು:

ಕಡ್ಲೆಬೇಳೆ - ಒಂದು ಬಟ್ಟಲು

ಹಸಿಮೆಣಸಿನಕಾಯಿ

ಒಂದು ಚೆಕ್ಕೆ, ಲವಂಗ

ಶುಂಠಿ - ಒಂದು ಇಂಚು

ಕೊತ್ತುಂಬರಿ ಸೊಪ್ಪು

ಸಣ್ಣಗೆ ಹೆಚ್ಚಿದ ಈರುಳ್ಳಿ

ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪು

ಉಪ್ಪು ರುಚಿಗೆ



ತಯಾರಿಸುವ ವಿಧಾನ:

ಮೊದಲಿಗೆ ಕಡ್ಲೆಬೇಳೆಯನ್ನು ಮೂರು ಗಂಟೆ ನೆನೆಸಿ.

ನೆನೆದ ಕಡ್ಲೆಬೇಳೆಯನ್ನು, ನೀರು ಸೋಸಿಕೊಂಡು ಅದನ್ನು ಹಸಿಮೆಣಸಿನಕಾಯಿ,ಚೆಕ್ಕೆ,ಲವಂಗ,ಶುಂಠಿ,ಉಪ್ಪು ಮತ್ತು ಕೊತ್ತುಂಬರಿಸೊಪ್ಪು ಹಾಕಿ ಗಟ್ಟಿಯಾಗಿ ಮತ್ತು ತರಿತರಿಯಾಗಿ ರುಬ್ಬಿಕೊಳ್ಳಿ. ಈ ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ.ಕಲೆಸುವಾಗ ನೀರು ಹಾಕಬೇಡಿ,ಈರುಳ್ಳಿಯನ್ನು ಮತ್ತು ಸೊಪ್ಪಿನಲ್ಲಿ ನೀರಿನ ಅಂಶ ಇರುವುದರಿಂದ ಅದೇ ಸಾಕಾಗುತ್ತದೆ. ಕಲೆಸಲು, ಎಲ್ಲವನ್ನೂ ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ. ಸಣ್ಣ ಸಣ್ಣ ಉಂಡೆ ಮಾಡಿಕೊಂಡು, ಅದನ್ನು ಅಂಗೈನಲ್ಲಿ ಸ್ವಲ್ಪ ದಪ್ಪವಾಗಿ ತಟ್ಟಿಕೊಂಡು ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ಹಾಕಿ, ಬೇಯಿಸಿ. ಎಣ್ಣೆಗೆ ಹಾಕಿದ ತಕ್ಷಣ ಅಲ್ಲಾಡಿಸಬೇಡಿ. ವಡೆಯ ಬಣ್ಣ ಸ್ವಲ್ಪ ಬದಲಾದ ನಂತರ ತಿರುವಿ ಹಾಕಿ, ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ಇದೇ ರೀತಿ ಮಿಕ್ಕ ಎಲ್ಲಾ ವಡೆಗಳನ್ನು ತಯಾರಿಸಿ. ರುಚಿಯಾದ ಸಬ್ಬಸ್ಸಿಗೆ ಕಡ್ಲೆಬೇಳೆ ಆಂಬೋಡೆ ತಿನ್ನಲು ಸಿದ್ಧವಾಗುತ್ತದೆ. ಇದನ್ನು ಬಿಸಿಬಿಸಿಯಾಗಿಯೂ / ತಣ್ಣಗೂ ತಿನ್ನಬಹುದು. ಜೊತೆಗೆ ಏನು ಇಲ್ಲದಿದ್ದರೂ ಚೆನ್ನಾಗಿರುತ್ತೆ, ಅದರ ಜೊತೆ ಚಟ್ನಿ/ಸಾಸ್/ಕೆಚಪ್ ಕೂಡ ಸರ್ವ್ ಮಾಡಬಹುದು.

Saturday, October 31, 2009

Onion Pakoda / Erulli pakoda-ಈರುಳ್ಳಿ ಪಕೋಡ:

ಈರುಳ್ಳಿ ಪಕೋಡ:



ಬೇಕಾಗುವ ಸಾಮಗ್ರಿಗಳು:

ಈರುಳ್ಳಿ - ಎರಡು ದೊಡ್ಡದು
ಕಡ್ಲೆಹಿಟ್ಟು - ಒಂದು ಕಪ್
ಖಾರದ ಪುಡಿ ( ಅಚ್ಚ ಮೆಣಸಿನ ಪುಡಿ) - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಓಮಕಾಳು - ಅರ್ಧ ಚಮಚ( ಬೇಕಾದರೆ)
ಚಿಟಿಕೆ ಅಡಿಗೆ ಸೋಡಾ
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಉದ್ದಕ್ಕೆ ಹೆಚ್ಚಿಕೊಳ್ಳಿ ಅಥವಾ ಮಧ್ಯಕ್ಕೆ ಕತ್ತರಿಸಿ ಸ್ಲೈಸ್ ಮಾಡಿಕೊಂಡು ಅದನ್ನು ಬೇರ್ಪಡಿಸಿಟ್ಟುಕೊಳ್ಳಿ.
ನಂತರ ಒಂದು ಪಾತ್ರೆಗೆ ಕಡ್ಲೆಹಿಟ್ಟು, ಖಾರದ ಪುಡಿ, ಓಮಕಾಳು, ಸೋಡಾ ಮತ್ತು ಉಪ್ಪು ಹಾಕಿ ಬೆರೆಸಿ, ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮತ್ತು ಒಂದೆರಡು ಚಮಚ ಕಾದ ಎಣ್ಣೆಯನ್ನು ಹಾಕಿ, ಚೆನ್ನಾಗಿ ಕಲೆಸಿ. ನೀರು ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಹಾಕಿಕೊಳ್ಳಿ, ಯಾಕೆಂದರೆ ಈರುಳ್ಳಿಯು ಕಲೆಸಿದಾಗ ನೀರು ಬಿಡುತ್ತದೆ. ತುಂಬಾ ತೆಳ್ಳಗೆ ಹಿಟ್ಟನ್ನು ಕಲೆಸಬೇಡಿ, ಕೈ ಅಥವ ಚಮಚದಲ್ಲಿ ತೆಗೆದುಕೊಳ್ಳುವಷ್ಟು ಕಲೆಸಿಕೊಳ್ಳಿ. ನಂತರ ಈ ಕಲೆಸಿದ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಸ್ವಲ್ಪ ತೆಳುವಾಗಿ ಸ್ವಲ್ಪ ಸ್ವಲ್ಪವೇ ಹಿಟ್ಟು ಪಕೋಡಾ ತರಹ ಹಾಕಿ ಕರಿಯಿರಿ. ತುಂಬಾ ದಪ್ಪ ಮಿಶ್ರಣ ಹಾಕಿದರೆ ಒಳಗೆ ಹಿಟ್ಟು ಬೇಯುವುದಿಲ್ಲ, ಅದಕ್ಕೆ ತೆಳುವಾಗಿ ಹಾಕಿ. ಗೊಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವವರೆಗು ಕರಿದು, ಪೇಪರ್ ಟವಲ್ ಮೇಲೆ ಹಾಕಿ, ಹೆಚ್ಚುವರಿ ಎಣ್ಣೆ ಕಮ್ಮಿ ಆಗುತ್ತದೆ, ನಂತರ ತಿನ್ನಲು ನೀಡಿ. ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಊಟಕ್ಕೆ ನೆಂಚಿಕೊಳ್ಳಲು / ಕಾಫಿ ಹೊತ್ತಿಗೆ ಅಥವ ಯಾರಾದರೂ ಅತಿಥಿಗಳಿಗೆ ನೀಡಲು ತಕ್ಷಣ ತಯಾರಿಸಿಕೊಳ್ಳಬಹುದು. ಇದಕ್ಕೆ ಚಟ್ನಿಯ ಅವಶ್ಯಕತೆ ಇಲ್ಲ, ಬೇಕಾದರೆ ತಯಾರಿಸಿಕೊಳ್ಳಬಹುದು.

Sunday, October 11, 2009

Kadlepuri Churumuri - ಕಡ್ಲೆಪುರಿ ಚುರುಮುರಿ:

ಚುರುಮುರಿ /ಕಡ್ಲೆಪುರಿ ಚುರುಮುರಿ:

ಕಡ್ಲೆಪುರಿ ಚುರುಮುರಿಯನ್ನು ನಮ್ಮ ಅಜ್ಜಿ ತುಂಬಾ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಚುರುಮುರಿ ಮಾಡಿದರೆ ಮನೆಯೆಲ್ಲಾ ಘಂ ಎನ್ನುವ ವಾಸನೆ ಬರುತ್ತಿತ್ತು. ಅಷ್ಟು ರುಚಿಯಾಗಿ ಮಾಡುತ್ತಿದ್ದರು. ನಾವು ತಯಾರಿಸೋದು ಅದೇ ತರಹ ಇದ್ದರೂ ಸಹ ಅವರ ಕೈನಲ್ಲಿ ತಯಾರಿಸುತ್ತಿದ್ದ ರುಚಿಯೇ ಒಂಥರ ಚೆನ್ನ. ಅಜ್ಜಿ ಕೈರುಚಿ, ಅಮ್ಮನ ಕೈ ರುಚಿ ಅಂತಾರಲ್ಲ ಆಗೇ.ಈಗಲೂ ಅದೇ ಚುರುಮುರಿ ನೆನಪು ಬರುತ್ತದೆ. ಅದೆಷ್ಟು ಹದವಾಗಿ ತಯಾರಿಸುತ್ತಿದ್ದರು ಆಗಿನ ಕಾಲದಲ್ಲಿ. ತಯಾರಾದ ತಕ್ಷಣ ತಟ್ಟೆ ತುಂಬಾ ಹಾಕಿಕೊಂಡು ತಿನ್ನುವುದೇ ದೊಡ್ಡ ಕೆಲಸ ಆಗ. ಅದರ ಹಿಂದೆ ಎಷ್ಟು ಕೆಲಸ ಇರುತ್ತೆ ಅಂತ ಗೊತ್ತಾಗುತ್ತೆ ಈಗ. ಕಾರವಾಗಿದ್ದರಂತೂ ಇನ್ನು ಚೆಂದ. ಕಡ್ಲೆಪುರಿ ಚುರುಮುರಿಗೆ ಚಳಿ ಮತ್ತು ಮಳೆಗಾಲದಲ್ಲಿ ತುಂಬಾ ಡಿಮ್ಯಾಂಡ್. ಈಗಂತೂ ಹೇಗೇ ತಯಾರು ಮಾಡಿದರು ಅಜ್ಜಿ ಮಾಡುತ್ತಿದ್ದ ಚುರುಮುರಿ ಚೆನ್ನಾಗಿತ್ತೇನೋ ಎನಿಸುತ್ತೆ. ಓಕೆ ಈಗ ಇಲ್ಲಿ ನಾವು ಚುರುಮುರಿ ತಯಾರಿಸೋಣ.

ಬೇಕಾಗುವ ಸಾಮಾಗ್ರಿಗಳು:

ಕಡ್ಲೆಪುರಿ - 1 ಕೆಜಿ

ಕಡ್ಲೆಕಾಯಿಬೀಜ - 2 ಕಪ್

ಕಡ್ಲೆ-1 ಕಪ್

ಬೆಳ್ಳುಳ್ಳಿ - ಸಿಪ್ಪೆ ಸಮೇತ 1 ಹಿಡಿ

ಕೊಬ್ರಿ ಸಣ್ಣದಾಗಿ ಕತ್ತರಿಸಿದ್ದು - 1 ಕಪ್

ಕರಿಬೇವು ಸ್ವಲ್ಪ

ಅರಿಶಿಣ - 1/2 ಚಮಚ

ಅಚ್ಚಖಾರದ ಪುಡಿ - 1 ಟೀ ಚಮಚ ಅಥವ ರುಚಿಗೆ ತಕ್ಕಷ್ಟು

ಉಪ್ಪು ರುಚಿಗೆ

ಎಣ್ಣೆ 2ಟೇಬಲ್ ಚಮಚ

ಚಿಟಿಕೆ ಸಾಸಿವೆ

ತಯಾರಿಸುವ ವಿಧಾನ:

ದೊಡ್ಡದಾದ ಅಗಲವಿರುವ ಪಾತ್ರೆಯಲ್ಲಿ ಮೊದಲು ಎಣ್ಣೆಯನ್ನು ಹಾಕಿ,ಸಾಸಿವೆ ಹಾಕಿ ಸಣ್ಣ ಉರಿಯಲ್ಲಿಯೇ ಇರಲಿ, ಅದಕ್ಕೆ ಕಡ್ಲೆಕಾಯಿಬೀಜವನ್ನು ಹಾಕಿ ಅದನ್ನು ಸರಿಯಾಗಿ ಚೆನ್ನಾಗಿ ಹುರಿದುಕೊಳ್ಳಿ, ಬೆಳ್ಳುಳ್ಳಿ ಹಾಕಿ ಅದು ಸ್ವಲ್ಪ ನಸುಗೆಂಪು ಬಂದ ನಂತರ ಕೊಬ್ರಿಯನ್ನು ಹಾಕಿ ಅದು ತಿಳಿಕಂದು ಬಣ್ಣ ಬರುವವರೆಗೂ ಹುರಿದು, ತಕ್ಷಣವೇ ಕಡ್ಲೆಯನ್ನು ಹಾಕಿ ಹಾಗೆ ಸ್ವಲ್ಪ ಒಂದು ನಿಮಿಷ ಹುರಿದು, ಕರಿಬೇವು ಹಾಕಿ ಅದು ಗರಿಗರಿಯಾದ ಮೇಲೆ ಅರಿಶಿಣ, ಅಚ್ಚಖಾರದ ಪುಡಿ ಮತ್ತು ಉಪ್ಪು ಹಾಕಿ, ಚೆನ್ನಾಗಿ ಬೆರೆಸಿದ ನಂತರ ಕಡ್ಲೆಪುರಿಯನ್ನು ಹಾಕುತ್ತಾ ತಿರುಗಿಸುತ್ತಿರಿ. ಅದೇ ಸಣ್ಣ ಉರಿಯಲ್ಲಿಯೇ ಪುರಿಯನ್ನು ಚೆನ್ನಾಗಿ ಬೆರೆಸುತ್ತಾ ಇದ್ದರೆ ಮಸಾಲೆ ಸರಿಯಾಗಿ ಹೊಂದಿಕೊಳ್ಳುತ್ತದೆ ಹಾಗು ಪುರಿ ಕೂಡ ಗರಿಗರಿಯಾಗಿ ಆಗುತ್ತದೆ. ಉಪ್ಪು ಮತ್ತು ಖಾರ ನಿಮಗೆ ಸರಿ ಎನಿಸುವಷ್ಟು ಮತ್ತೆ ಸೇರಿಸಿಕೊಳ್ಳಬಹುದು ಈ ಸಮಯದಲ್ಲಿ. ಪುರಿ ಗರಿಗರಿಯಾದ ನಂತರ ಒಲೆ ಆರಿಸಿ, ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ. ಬೇಕಾದಾಗ ತಿನ್ನಬಹುದು ಅಥವಾ ಸಂಜೆ ಕಾಫಿಯೊಂದಿಗೆ ಸೊಗಸಾಗಿರುತ್ತದೆ.

ಟಿಪ್ಸ್:-* ಇನ್ನು ಹೆಚ್ಚಿನ ಕಡ್ಲೆಬೀಜವನ್ನು ಸೇರಿಸಿಕೊಳ್ಳಬಹುದು, ಹೆಚ್ಚು ಹಾಕಿದರೆ ಕೂಡ ಚೆನ್ನಾಗಿರುತ್ತದೆ.

*ಕಡ್ಲೆಬೀಜ, ಕೊಬ್ರಿ ಮತ್ತು ಬೆಳ್ಳುಳ್ಳಿ ಮೆತ್ತಗೆ ಹುರಿಯಬೇಡಿ ಅದು ಗರಿಗರಿಯಾಗಿ ಇರಬೇಕು, ಇಲ್ಲ ಅಂದರೆ ಪುರಿ ಕೂಡ ಬೇಗ ಮೆತ್ತಗೆ ಆಗುತ್ತದೆ.

Monday, September 21, 2009

GoLibaje - ಗೋಳಿ ಬಜೆ:



ಗೋಳಿ ಬಜೆ:

ಬೇಕಾಗುವ ಸಾಮಗ್ರಿಗಳು:

ಮೈದಾ ಹಿಟ್ಟು - ಒಂದು ಬಟ್ಟಲು
ಮೊಸರು - ಒಂದು ಬಟ್ಟಲು/ ಕಲೆಸಲು ಬೇಕಾಗುವಷ್ಟು
ತೆಂಗಿನಕಾಯಿ ಚೂರು- ಸ್ವಲ್ಪ
ಹಸಿಮೆಣಸಿನ ಕಾಯಿ- ರುಚಿಗೆ ತಕ್ಕಷ್ಟು
ಕೊತ್ತುಂಬರಿ ಸೊಪ್ಪು ಸ್ವಲ್ಪ
ಈರುಳ್ಳಿ-1
ಓಂ ಕಾಳು - ಅರ್ಧ ಚಮಚ
ಸೋಡ- ಚಿಟಿಕೆ
ಉಪ್ಪು- ರುಚಿಗೆ ಬೇಕಾಗುವಷ್ಟು
ಎಣ್ಣೆ - ಕರಿಯಲು

ತಯಾರಿಸುವ ವಿಧಾನ:

ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.
ಬಟ್ಟಲಿಗೆ ಮೈದಾ ಹಿಟ್ಟು, ತೆಂಗಿನಚೂರು, ಈರುಳ್ಳಿ, ಹಸಿಮೆಣಸಿನಕಾಯಿ,ಕೊತ್ತುಂಬರಿ ಸೊಪ್ಪು, ಓಂ ಕಾಳು, ಉಪ್ಪು ಮತ್ತು ಸೋಡ ಎಲ್ಲವನ್ನೂ ಚೆನ್ನಾಗಿ ಬೆರೆಸಿ, ಅದಕ್ಕೆ ಮೊಸರು ಹಾಕಿ, ಎಲ್ಲವನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ. ಈ ಮಿಶ್ರಣವೂ ಹೆಚ್ಚು ಗಟ್ಟಿ ಅಥವಾ ತುಂಬಾ ತೆಳ್ಳಗೂ ಇರಬಾರದು. ಬಜ್ಜಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿ ಇರಲಿ. ಕೈನಲ್ಲಿ ಅಥವಾ ಚಮಚದಲ್ಲಿ ನೇರವಾಗಿ ಕಾದ ಎಣ್ಣೆಗೆ ಚಿಕ್ಕ ಚಿಕ್ಕ ಉಂಡೆಯಂತೆ ಬಿಡಿ. ಹೊಂಬಣ್ಣ ಬರುವವರೆಗೂ ಕರಿದು, ಪೇಪರ್ ಮೇಲೆ ಹಾಕಿ. ಈಗ ಗೋಳಿಬಜೆ ತಿನ್ನಲು ರೆಡಿ,ಇದನ್ನು ಬಿಸಿ-ಬಿಸಿಯಾಗಿ ತಿಂದರೆ ರುಚಿ ಹೆಚ್ಚು. ಪುದೀನ ಚಟ್ನಿ ಅಥವಾ ಟಮೋಟ ಸಾಸ್ ಜೊತೆ ತಿನ್ನಲು ನೀಡಬಹುದು.

Sunday, February 1, 2009

Dil leaves Pakoda-ಸಬ್ಬಸ್ಸಿಗೆ ಸೊಪ್ಪಿನ ಪಕೋಡ:



ಸಬ್ಬಸ್ಸಿಗೆ ಸೊಪ್ಪಿನ ಪಕೋಡ:

ಬೇಕಾಗುವ ಸಾಮಗ್ರಿಗಳು:

ಕಡ್ಲೆಹಿಟ್ಟು - ಒಂದು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ -ಪೇಸ್ಟ್/ಹೆಚ್ಚಿದ್ದು
ಸಬ್ಬಸ್ಸಿಗೆ ಸೊಪ್ಪು -ಸ್ವಲ್ಪ/ನಿಮಗೆ ಬೇಕಾದಂತೆ
ಚಿಟಿಕೆ ಸೋಡ
ಕಾಯಿಸಿದ ಎಣ್ಣೆ - ಒಂದು ಚಮಚ
ಕಾರದ ಪುಡಿ
ಉಪ್ಪು
ಕೊತ್ತುಂಬರಿಸೊಪ್ಪು
ಎಣ್ಣೆ-ಕರಿಯಲು ಬೇಕಾಗುವಷ್ಟು

ತಯಾರಿಸುವ ವಿಧಾನ:

ಸಬ್ಬಸ್ಸಿಗೆ ಸೊಪ್ಪನ್ನು ಶುಚಿಗೊಳಿಸಿ, ಚೆನ್ನಾಗಿ ತೊಳೆದು,ಸಣ್ಣಗೆ ಹೆಚ್ಚಿ. ನಂತರ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಗಂಟಿಲ್ಲದಂತೆ ಕಲೆಸಿ. ತುಂಬಾ ತೆಳುವಾಗಿರಬಾರದು. ಈ ಪಕೋಡಕ್ಕೆ ಸ್ವಲ್ಪ ಗಟ್ಟಿಯಾಗಿ ಕಲೆಸಿ ಕೈನಲ್ಲಿ ಸ್ವಲ್ಪ ತೆಗೆದುಕೊಂಡು ಅದರಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಹಾಗೇ ನೇರವಾಗಿ ಕಾದಿರುವ ಎಣ್ಣೆಗೆ ಒಂದೊಂದಾಗಿ ಬಿಡಿ. ಉಂಡೆ ಅಂದರೆ ಉಂಡೆ ರೀತಿ ಗುಂಡಾಗಿ ಮಾಡಿ ಹಾಕಬೇಡಿ,ಆಗೇ ತೆಗೆದು ಎಣ್ಣೆಗೆ ಹಾಕಬೇಕು.ಅಥವಾ ಒಂದು ಚಮಚದಿಂದ ಸಹ ತೆಗೆದುಕೊಂಡು ಪುಟ್ಟ ಪುಟ್ಟದಾಗಿ ನೇರವಾಗಿ ಎಣ್ಣೆಗೆ ಹಾಕಿ,ಅವುಗಳನ್ನು ಹದವಾದ ಉರಿಯಲ್ಲಿ ಚೆನ್ನಾಗಿ ಬೇಯಿಸಿ,ತೆಗೆಯಿರಿ.ಸಬ್ಬಸ್ಸಿಗೆ ಸೊಪ್ಪಿನಪಕೋಡ ರೆಡಿಯಾಗುತ್ತದೆ.ಇದರ ಪರಿಮಳ ತುಂಬಾ ಚೆನ್ನಾಗಿರುತ್ತದೆ ರುಚಿ ಕೂಡ. ಬಿಸಿಕಾಫಿಯೊಂದಿಗೆ ಸವಿಯಿರಿ.


* ಸೊಪ್ಪು ಜಾಸ್ತಿ ಹಾಕಿದರೂ ಚೆನ್ನಾಗಿರುತ್ತದೆ.
* ಈ ರೀತಿ ಪಕೋಡಗಳು ಕರಿದ ಮೇಲೆ ಬಿಸಿ-ಬಿಸಿಯಾಗಿ ಸವಿದರೆ ರುಚಿ ಹೆಚ್ಚು. ಸಬ್ಬಸ್ಸಿಗೆ ಪಕೋಡ ತಣ್ಣಗಾದ ಮೇಲೆ ಸಹ ರುಚಿಯಾಗಿರುತ್ತದೆ.
* ಸೊಪ್ಪು ತಿನ್ನದ ಮಕ್ಕಳಿಗೆ ಈ ರೀತಿ ಪಕೋಡ ತಯಾರಿಸಿಕೊಟ್ಟರೆ, ಇಷ್ಟಪಟ್ಟು ತಿನ್ನುತ್ತಾರೆ.

Friday, April 6, 2007

Seemebadanekaayi bajji-ಸೀಮೆಬದನೆಕಾಯಿ ಬಜ್ಜಿ:


ಸೀಮೆಬದನೆಕಾಯಿ ಬಜ್ಜಿ:

ಬೇಕಾಗುವ ಸಾಮಗ್ರಿಗಳು:

ಸೀಮೆಬದನೆಕಾಯಿ
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಅಚ್ಚಖಾರದ ಪುಡಿ
ಉಪ್ಪು
ಕಾದ ಎಣ್ಣೆ - ಒಂದು ಚಮಚ
ಚಿಟಿಕೆ ಸೋಡ
ಕಲೆಸಲು ಬೇಕಾಗುವಷ್ಟು ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಸೀಮೆಬದನೆಕಾಯಿ ಸಿಪ್ಪೆ ತೆಗೆದು, ತೆಳುವಾಗಿ ಹೆಚ್ಚಿಕೊಂಡು ಇಟ್ಟುಕೊಳ್ಳಿ.ಕಾಯಿ ಹೇಗಿದೆಯೋ ಅದೇ ರೀತಿಯಲ್ಲಿ ಸ್ಲೈಸ್ ಮಾಡಿಕೊಂಡರೆ ನೋಡಲು ಚೆನ್ನಾಗಿ ಕಾಣುತ್ತದೆ. ಅದನ್ನು ಉದ್ದವಾಗಿ/ಗುಂಡಾಗಿಯೂ ಸ್ಲೈಸ್ ಮಾಡಿಕೊಳ್ಳಬಹುದು.
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ,ಉಪ್ಪು, ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಕಾದಿರುವ ಎಣ್ಣೆ ಹಾಕಿ, ಜೊತೆಯಲ್ಲಿ ನೀರು ಹಾಕಿ, ಕಲೆಸಿಕೊಳ್ಳಿ, ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ, ಹೆಚ್ಚಿರುವ ಸೀಮೆಬದನೆಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಒಂದೊಂದಾಗಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ, ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಸೀಮೆಬದನೆಕಾಯಿ ಬಜ್ಜಿ ತಯಾರ್. ಇದನ್ನು ಬಿಸಿ-ಬಿಸಿಯಾಗಿ ತಿಂದರೆ ರುಚಿ ತುಂಬಾ ಚೆನ್ನಾಗಿ ಇರುತ್ತದೆ. ತಣ್ಣಗಾದ ಮೇಲೆ ಸ್ವಲ್ಪ ಮೆತ್ತಗೆ ಆಗುತ್ತದೆ. ಚಟ್ನಿ/ಸಾಸ್ ನೊಂದಿಗೆ ಸರ್ವ್ ಮಾಡಬಹುದು.

Popular Posts