Showing posts with label Masala/kurma/ಕುರ್ಮಾ/ಮಸಾಲೆ. Show all posts
Showing posts with label Masala/kurma/ಕುರ್ಮಾ/ಮಸಾಲೆ. Show all posts

Monday, December 21, 2009

Saagu/Vegetable masala-ಮಸಾಲಾ/ಕುರ್ಮಾ



ತರಕಾರಿ ಸಾಗು ಅಥವ ಕೂಟು ಎಲ್ಲವುದಕ್ಕು ಹೊಂದಿಕೊಳ್ಳುವಂತಹದ್ದು. ಅಂದರೆ ಇದನ್ನು ದೋಸೆ, ಚಪಾತಿ,ಪರೋಟ,ರೊಟ್ಟಿ,ಪೂರಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಜೊತೆಯಲ್ಲಿ ಪೌಷ್ಠಿಕವಾಗಿಯೂ ಆರೋಗ್ಯಕ್ಕೆ ಉತ್ತಮವಾಗಿಯೂ ಇರುತ್ತದೆ.

ಸಾಗು ರೆಸಿಪಿಯನ್ನು ಮಸಾಲಾ/ಕುರ್ಮಾ ಲೇಬಲ್ ನಲ್ಲಿ ನೋಡಬಹುದು.

palakpaneer

ಪಾಲಕ್ ಪನ್ನೀರು ಮಕ್ಕಳಿಗೆ ಇಷ್ಟವಾಗುವಂತದ್ದು, ಸೊಪ್ಪು ಪೇಸ್ಟ್ ಮಾಡುವುದರಿಂದ ಸೊಪ್ಪು ತಿನ್ನಲು ಹಿಂಜರಿಯುವ ಮಕ್ಕಳಿಗೆ ಹೀಗೆ ತಯಾರಿಸಿ ಕೊಡುವುದರಿಂದ ಖುಷಿಯಿಂದ ತಿನ್ನುತ್ತಾರೆ. ಅದರ ಜೊತೆ ಪನ್ನೀರು ಒಂದು ರುಚಿ ಕೊಡುತ್ತದೆ. ಇದು ಚಪಾತಿ, ಪರೋಟ, ನಾನ್,ಕುಲ್ಚ, ಬಟರ್ ನಾನ್, ತಂದೂರಿ ರೋಟಿ ಮತ್ತು ಪೂರಿ ಎಲ್ಲಕ್ಕೂ ಸೈ.

Monday, November 30, 2009

Nuggekaayi saaru/ Drumstick samber


ನುಗ್ಗೆಕಾಯಿ ಸಾರು/ಸಾಂಬಾರ್:

ಬೇಕಾಗುವ ಸಾಮಗ್ರಿಗಳು:

ನುಗ್ಗೆಕಾಯಿ - 2 ಅಥವ 3 ಇಂಚಿನಷ್ಟು ಕತ್ತರಿಸಿಕೊಳ್ಳಿ
ತೊಗರಿಬೇಳೆ - 1 ಬಟ್ಟಲು
ಈರುಳ್ಳಿ ಹೆಚ್ಚಿದ್ದು ಸ್ವಲ್ಪ
ಟಮೋಟ ಹೆಚ್ಚಿದ್ದು ಸ್ವಲ್ಪ
ಹುಣಸೆರಸ ಒಂದು ಚಮಚ
ಸಾಂಬಾರ್ / ಸಾರಿನ ಪುಡಿ ರುಚಿಗೆ
ಉಪ್ಪು ರುಚಿಗೆ
ಎಣ್ಣೆ, ಸಾಸಿವೆ
ಅರಿಶಿಣ
ಇಂಗು ಕರಿಬೇವಿನ ಸೊಪ್ಪು
ತಯಾರಿಸುವ ರೀತಿ:
ಮೊದಲು ತೊಗರಿಬೇಳೆಯನ್ನು ನೀರು ,ಅರಿಶಿಣ ಮತ್ತು ಒಂದು ಚಮಚ ಎಣ್ಣೆ ಹಾಕಿ,ಬೇಯಿಸಿಕೊಂಡು ಅದಕ್ಕೆ ನುಗ್ಗೆಕಾಯಿ, ಟಮೋಟ, ಹುಣಸೆರಸ, ಸಾಂಬಾರ್ ಪುಡಿ ಮತ್ತು ಉಪ್ಪು ಹಾಕಿ ನುಗ್ಗೆಕಾಯಿ ಬೇಯುವವರೆಗೂ ಬೇಯಿಸಿ, ಸಾರಿನ ಹದಕ್ಕೆ ತಕ್ಕಂತೆ ನೀರು ಬೆರೆಸಿಕೊಳ್ಳಿ. ಕಾಯಿ ಸ್ವಲ್ಪ ಗಟ್ಟಿಯಾಗಿರುವಾಗಲೆ ಇಳಿಸಿ. ಇದಕ್ಕೆ ಒಗ್ಗರಣೆ ಹಾಕಿ ಬೆರೆಸಿ.
ಒಗ್ಗರಣೆಗೆ- ಪುಟ್ಟ ಪಾತ್ರೆಯಲ್ಲಿ ಒಂದೆರಡು ಚಮಚ ಎಣ್ಣೆಯನ್ನು ಬಿಸಿಮಾಡಿ ಸಾಸಿವೆ ಹಾಕಿ ಚಟಪಟ ಸಿಡಿದ ನಂತರ ಕರಿಬೇವು, ಇಂಗು ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಬೆರೆಸಿ. ಒಂದೆರಡು ನಿಮಿಷ ಬಾಡಿಸಿದ ನಂತರ ಅದನ್ನು ಸಾರಿಗೆ ಬೆರೆಸಿ. ನುಗ್ಗೆಕಾಯಿ ಸಾರು ಸಿದ್ಧ. ಇದನ್ನು ಅನ್ನದ ಜೊತೆ ಕೊಡಿ.

*-ನುಗ್ಗೆಕಾಯಿಯನ್ನು ಮೊದಲೆ ಬೇರೆ ಪಾತ್ರೆಯಲ್ಲಿ ಬೇಯಿಸಿ ಕೂಡ ಹಾಕಬಹುದು, ಇದು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೈಕ್ರೋವೆವ್ ಇರುವವರು ಅದರಲ್ಲಿ ಬೇಯಿಸಿಕೊಳ್ಳಬಹುದು, ಇದು ಬಹಳ ಸುಲಭ ಮತ್ತು ಬೇಗ ಆಗುತ್ತದೆ. ತುಂಬಾ ಕುಕ್ ಮಾಡಿದರೆ ನುಗ್ಗೆಕಾಯಿಗಳು ಒಡೆದು ಹೋಗುತ್ತವೆ. ನೋಡಿಕೊಂಡು ಬೇಯಿಸಿಕೊಳ್ಳಿ.
*- ಕಾಯಿ ಬೇಯಿಸಿ ಹಾಕಿದರೆ ಬೇಳೆ ಜೊತೆ ಹಾಕಿದಾಗ ಒಂದೆರಡು ಕುದಿ ಕುದ್ದ ಮೇಲೆ ಸ್ಟೌವ್ ಆಫ್ ಮಾಡಿ.

Monday, November 2, 2009

Capsicum Aloo Masala / ಆಲೂಗೆಡ್ಡೆ ಮಸಾಲೆ:

ದಪ್ಪಮೆಣಸಿನಕಾಯಿ ಮತ್ತು ಆಲೂಗೆಡ್ಡೆ ಮಸಾಲೆ:

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - ಸಣ್ಣಗೆ ಹೆಚ್ಚಿದ್ದು
ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ - 1 ಚಮಚ
ಆಲೂಗೆಡ್ಡೆ ಮತ್ತು ದಪ್ಪ ಮೆಣಸಿನಕಾಯಿ - ಹೆಚ್ಚಿಕೊಳ್ಳಿ( ಸ್ವಲ್ಪ ದಪ್ಪ ಇರಲಿ-ಪೀಸ್ ಗಳು)
ಟೋಮೋಟೋ ಪ್ಯೂರಿ -2 ಚಮಚ
ಗೋಡಂಬಿ ಪೇಸ್ಟ್ ಸ್ವಲ್ಪ
ದಪ್ಪ ಮೆಣಸಿನಕಾಯಿ ಹೋಳುಗಳು ಸ್ವಲ್ಪ
ಧನಿಯಾಪುಡಿ - 2 ಚಮಚ
ಅಚ್ಚಕಾರದ ಪುಡಿ
ಗರಂ ಮಸಾಲ - 1 ಚಮಚ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು
ಉಪ್ಪು
ಎಣ್ಣೆ - 2ಚಮಚ

ತಯಾರಿಸುವ ರೀತಿ:

ಮೊದಲು ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಕಾದ ಮೇಲೆ ಈರುಳ್ಳಿ ಹಾಕಿ ಬಾಡಿಸಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಒಂದೆರಡು ನಿಮಿಷ ಹುರಿದು ಧನಿಯಾಪುಡಿ,ಗರಂಮಸಾಲಾ ಮತ್ತು ಟಮೋಟ ಫ್ಯೂರಿ ಹಾಕಿ ಬಾಡಿಸಿ, ಆಲೂಗೆಡ್ಡೆ ತುಂಡುಗಳನ್ನು ಹಾಕಿ, ಐದಾರು ನಿಮಿಷ ಚೆನ್ನಾಗಿ ಬಾಡಿಸಿ ಮತ್ತು ಗೋಡಂಬಿ ಪೇಸ್ಟ್, ದಪ್ಪ ಮೆಣಸಿನಕಾಯಿ ಹಾಕಿ ಒಂದೆರಡು ನಿಮಿಷ ಹುರಿದು ನಂತರ ಅಚ್ಚಮೆಣಸಿನಪುಡಿ,ಉಪ್ಪು, ಕೊತ್ತುಂಬರಿ ಸೊಪ್ಪು ಸ್ವಲ್ಪ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ, ಕಾಲು ಕಪ್ ನೀರು ಹಾಕಿ ಬೇಯಲು ಬಿಡಿ. ಆಲೂ ಮತ್ತು ಮೆಣಸಿನಕಾಯಿ ಬೆಂದು ಅದರ ನೀರು ಎಲ್ಲಾ ಡ್ರೈ ಆದ ಮೇಲೆ ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ, ಚೆನ್ನಾಗಿ ಬೆರೆಸಿ.ಇದನ್ನು ಚಪಾತಿ,ಪೂರಿ,ಪರೋಟ ಅಥವಾ ಊಟಕ್ಕೆ ನೆಂಚಿಕೊಳ್ಳಲು ನೀಡಬಹುದು.

* ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಂತೆ ಬೆರೆಸಿಕೊಳ್ಳಿ.
* ಈ ಮಸಾಲ ತುಂಬಾ ತೆಳ್ಳಗೆ ಇರುವುದಿಲ್ಲ. ಮಸಾಲೆ ಸ್ವಲ್ಪ ಗಟ್ಟಿಯಾಗಿದ್ದರೆ ಚೆನ್ನಾಗಿರುತ್ತದೆ.
* ತರಕಾರಿಗಳನ್ನು ಬಹಳ ಬೇಯಿಸಬಾರದು.

Saturday, April 18, 2009

Plain Pulao Rice / ಪಲಾವ್

ಪಲಾವ್:

ಸಾಮಗ್ರಿಗಳು:

ಈರುಳ್ಳಿ ಹೆಚ್ಚಿದ್ದು
ಹಸಿಮೆಣಸಿನಕಾಯಿ
ಅಚ್ಚಖಾರದ ಪುಡಿ
ಜೀರಿಗೆ
ಅರಿಶಿಣದ ಪುಡಿ
ಚೆಕ್ಕೆ, ಲವಂಗ,ಏಲಕ್ಕಿ ಮತ್ತು ಪತ್ರೆ
ಕಾಯಿತುರಿ
ಅಕ್ಕಿ - ನೆನೆಸಿದ್ದು
ಕೊತ್ತುಂಬರಿ ಸೊಪ್ಪು
ನಿಂಬೆರಸ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಕಾದ ಮೇಲೆ ಜೀರಿಗೆ,ಚೆಕ್ಕೆ,ಲವಂಗ,ಪತ್ರೆ ಮತ್ತು ಏಲಕ್ಕಿ ಹಾಕಿ,ಕೆದಕಿ,ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಈರುಳ್ಳಿ ಸ್ವಲ್ಪ ಕೆಂಪಾಗುವವರೆಗೂ ಬಾಡಿಸಿ,ಅದನ್ನು ಒಂದೆರಡು ನಿಮಿಷ ಹುರಿದು,ಅದಕ್ಕೆ ಅರಿಶಿಣ,ಕಾರದಪುಡಿ,ಉಪ್ಪು,ಕಾಯಿತುರಿ ಮತ್ತು ನೀರನ್ನು ಹಾಕಿ,ನೆನೆಸಿದ ಅಕ್ಕಿಯನ್ನು ಹಾಕಿ,ನಿಂಬೆರಸ ಮತ್ತು ಕೊತ್ತುಂಬರಿ ಸೊಪ್ಪು ಹಾಕಿ,ಚೆನ್ನಾಗಿ ಬೆರೆಸಿ,ಮುಚ್ಚಿಟ್ಟು ಒಂದು ವಿಷ್ಹಲ್ ಕೂಗಿಸಿ ಒಲೆಯಿಂದ ಇಳಿಸಿ. ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ. ಮೊಸರಿನ ರಾಯತದೊಂದಿಗೆ ಬಡಿಸಿ.

Friday, January 23, 2009

Peas Curry - ಬಟಾಣಿ ಸಾರು:



ಬಟಾಣಿ ಸಾರು:

ಬೇಕಾಗುವ ಸಾಮಗ್ರಿಗಳು:

ಬಟಾಣಿ- ಎರಡು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ-
ಆಲೂಗೆಡ್ಡೆ,ಬದನೆಕಾಯಿ,
ಹುರುಳಿಕಾಯಿ,ಹೂಕೋಸು
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ
ತಯಾರಿಸುವ ವಿಧಾನ:

ಬಟಾಣಿ ತಾಜಾ ಅಥವ ಟಿನ್ ಅಥವ ಫ್ರೋಜ಼ನ್ ಕಾಳುಗಳಾದರೆ, ಆಗೇ ತಯಾರಿಸಬಹುದು, ಆದರೆ ಒಣಗಿದ ಕಾಳುಗಳಾದರೆ, ಹಿಂದಿನ ರಾತ್ರಿಯೇ ನೆನೆಸಿಡಬೇಕು.

ಮಸಾಲೆ ತಯಾರಿಸಲು:

ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ,ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಬಟಾಣಿಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ ಬಟಾಣಿಕಾಳು ಸಾರು ತಯಾರಾಗುತ್ತದೆ. ಇದನ್ನು ಬಿಳಿಅನ್ನ,ಜೀರಾ ರೈಸ್ ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.ಈ ಮಸಾಲೆ ಸಾರಿಗೆ ರಾಗಿಮುದ್ದೆ ಕೂಡಾ ಚೆನ್ನಾಗಿರುತ್ತದೆ.

* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ. ಈ ಬಟಾಣಿ ಸಾರು ಬಟಾಣಿ ಇಷ್ಟ ಪಡುವ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

Wednesday, November 19, 2008

Seemebadanekaayi Sabji - ಸೀಮೆಬದನೆಕಾಯಿ ಪಲ್ಯ

ಸೀಮೆಬದನೆಕಾಯಿ ಪಲ್ಯ:

ಸಾಮಗ್ರಿಗಳು:
ಸೀಮೆಬದನೆಕಾಯಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ಮೊದಲು ಸೀಮೆಬದನೆಕಾಯಿಯನ್ನು ತುರಿದುಕೊಳ್ಳಿ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಸೀಮೆಬದನೆಕಾಯಿತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಇದು ಬೇಗ ಬೇಯುವುದರಿಂದ ಒಂದೆರಡು ಚಮಚ ಮಾತ್ರ ನೀರು ಚಿಮುಕಿಸಿ. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Wednesday, December 19, 2007

Cabbage-Bengalgram kurma-ಎಲೆಕೋಸು ಕಡ್ಲೆಬೇಳೆ ಕೂಟು:


ಎಲೆಕೋಸು ಕಡ್ಲೆಬೇಳೆ ಕೂಟು:

ಸಾಮಾಗ್ರಿಗಳು:
ಕಡ್ಲೆಬೇಳೆ - ಒಂದು ಬಟ್ಟಲು
ಹೆಚ್ಚಿದ ಎಲೆಕೋಸು - ಒಂದು ಬಟ್ಟಲು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಒಂದು ಹಸಿಮೆಣಸಿನ ಕಾಯಿ ಮದ್ಯಕ್ಕೆ ಸೀಳಿದ್ದು
ಎಣ್ಣೆ, ಸಾಸಿವೆ, ಕರಿಬೇವು
ಚೆಕ್ಕೆ,ಲವಂಗ
ಅರಿಶಿಣದ ಪುಡಿ
ಧನಿಯಾಪುಡಿ
ಖಾರದಪುಡಿ
ಸಾಂಬಾರ್ ಪುಡಿ (ಸಾರಿನ ಪುಡಿ)
ಉಪ್ಪು
ತೆಂಗಿನತುರಿ ಬೇಕಾದರೆ
ಕೊತ್ತುಂಬರಿಸೊಪ್ಪು

ವಿಧಾನ:

ಕಡ್ಲೆಬೇಳೆಯನ್ನು,ಎಣ್ಣೆ ಒಂದು ಚಮಚ,ಸ್ವಲ್ಪ ಅರಿಶಿಣ ಹಾಕಿ,ನೀರು ಹಾಕಿ ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು,(ಕಡ್ಲೆಬೇಳೆಯನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ಎಲೆಕೋಸು,ಸಾರಿನಪುಡಿ,ಖಾರದಪುಡಿ,ಧನಿಯಾಪುಡಿ,ಉಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ, ಚೆನ್ನಾಗಿ ಬೆರೆಸಿ, ಎಲೆಕೋಸು ಬೇಯುವವರೆಗೂ ಬೇಯಿಸಿಕೊಳ್ಳಿ.ಕೋಸು ಬೇಗ ಬೇಯುವುದು.ಈ ಸಮಯದಲ್ಲಿ ಬೇಳೆ ಹದವಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಕುದಿಸಿ,ಇಳಿಸಿ. ಇದನ್ನು ಊಟಕ್ಕೆ ಅಥವಾ ಚಪಾತಿ,ರೊಟ್ಟಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ.

* ಒಗ್ಗರಣೆ - ಎಣ್ಣೆಯನ್ನು ಬಿಸಿಮಾಡಿ,ಸಾಸಿವೆ,ಚೆಕ್ಕೆ,ಲವಂಗ,ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ.

*ಕುಕ್ಕರ್ ನಲ್ಲಿ ತಯಾರಿಸುವುದಾದರೆ ಬೇಳೆಯನ್ನು ಮೊದಲು 5-10 ನಿಮಿಷ ಬೇಯಿಸಿಕೊಂಡು, ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.ಒಗ್ಗರಣೆ ಬೆರೆಸಿ,ಸರಿಯಾಗಿ ಕಲೆಸಿ,ಕಡ್ಲೆಬೇಳೆ ಎಲೆಕೋಸುಕೂಟು ರೆಡಿಯಾಗುತ್ತದೆ.

Friday, November 2, 2007

Massoppu Saaru - ಕಾಳು ಮಸ್ಸೊಪ್ಪು ಸಾರು:

* ಈ ಮಸ್ಸೊಪ್ಪು ಸಾರು ತುಂಬಾ ರುಚಿಯಾಗಿರುತ್ತದೆ. ವಿವಿಧ ಕಾಳುಗಳು ಅದರಲ್ಲೂ ಮೊಳಕೆ ಕಾಳುಗಳು ಸೇರಿರುವುದರಿಂದ ಬಹಳ ಪೌಷ್ಟಿಕವಾಗಿಯೂ, ಆರೋಗ್ಯಕರವಾಗಿಯೂ ತುಂಬಾನೇ ಸೊಗಸಾಗಿರುತ್ತದೆ. ನಮ್ಮ ಅಜ್ಜಿ ಇದನ್ನು ನಾನು ಚಿಕ್ಕವಳಿದ್ದಾಗ ಹೆಚ್ಚಾಗಿ ತಯಾರಿಸುತ್ತಿದ್ದರು. ಇದಕ್ಕೆ ರೊಟ್ಟಿ ತುಂಬಾ ಚೆನ್ನಾಗಿ ಹೊಂದುತ್ತದೆ. ಮುದ್ದೆ ಸಹ. ಆಗ ಅಜ್ಜಿ ಮಾಡುತ್ತಿದ್ದ ರುಚಿ ಈಗ ಬರಲ್ಲ. ಈಗಿನ ಕಾಳುಗಳೆಲ್ಲಾ ಹೈಬ್ರೀಡ್ ಆಗಿರುವುದರಿಂದ ಅಜ್ಜಿ ತಯಾರಿಸುತ್ತಿದ್ದ ಅಡುಗೆಗಳು ಈಗ ನಾವು ಹೇಗೆ ತಯಾರಿಸಿದರು ಪರವಾಗಿಲ್ಲ ಎನಿಸುತ್ತೆ. ಆಗಿನ ಕಾಲದಲ್ಲಿ ಎಲ್ಲಾ ನಾಟಿ ಬೆಳೆಗಳನ್ನು ಬೆಳೆಯುತ್ತಿದ್ದುದರಿಂದ ಅದರಲ್ಲಿ ಪೌಷ್ಠಿಕಾಂಶಗಳು,ಖನಿಜ,ಲವಣ,ವಿಟಮಿನ್ ಗಳು ಎಲ್ಲಾ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಇರುತ್ತಿತ್ತು. ಅದಕ್ಕೆ ನಮ್ಮಗಳಿಗೆ ಆಗಿನ ಕಾಲದ ಅಡುಗೆಗಳೇ ಹೆಚ್ಚು ಇಷ್ಟವಾಗುತ್ತವೆ ಏನೋ ಅನಿಸುತ್ತೆ. ಇಷ್ಟೆಲ್ಲಾ ಒಂದೇ ಅಡುಗೆಗಳಿಗೆ ಹಾಕಿ ಆಗಿನ ಕಾಲದಲ್ಲಿ ಅಡುಗೆಗಳನ್ನು ತಯಾರಿಸುತ್ತಿದ್ದುದಕ್ಕೆ ಇರಬೇಕು ಅವರುಗಳು ಅಷ್ಟು ವಯಸ್ಸಾದರೂ ಏನು ಕಾಯಿಲೆಗಳು ಬರದೇ,ಓಡಾಡಿಕೊಂಡು ಗಟ್ಟಿಮುಟ್ಟಾಗಿ ಚೆನ್ನಾಗಿದ್ದರೇನೋ ಅಲ್ವಾ!! ಈ ಮಸ್ಸೊಪ್ಪಿಗೂ ನಾವು ಒಂದು ಚೂರು ಬೇಳೆಗೆ ಒಂದು ರೀತಿದು ಯಾವುದೋ ಒಂದು ಸೊಪ್ಪು ಹಾಕಿ,ತಯಾರಿಸಿದ ಮಸ್ಸೊಪ್ಪು ರುಚಿಗೂ ಬಹಳ ವ್ಯತ್ಯಾಸವಿದೆ. ಬೇಯಿಸಿದ ಕಾಳುಗಳನ್ನು ಮಸೆದು ತಯಾರಿಸಿದಾಗ ಅದು ಇನ್ನು ರುಚಿ ಹೆಚ್ಚು. ತಯಾರಿಸಿ ನೋಡಿ,ಈಗಿನ ದೀಡೀರ್ ಮಸ್ಸೊಪ್ಪಿನ ಸಾರಿಗೂ ,ನಮ್ಮ ಅಜ್ಜಿ ಕಾಲದ ಮಸ್ಸೊಪ್ಪು ಸಾರಿಗೂ ಇರುವ ವ್ಯತ್ಯಾಸವನ್ನು!!!! ಈ ಮಸ್ಸೊಪ್ಪು ಸಾರು ಕುದಿಸಿದಷ್ಟು,ಅಂದರೆ ಹಳೆಯದಾದರೆ ರುಚಿ ಇನ್ನೂ ಜಾಸ್ತಿಯಾಗುತ್ತದೆ. ಮಾರನೇದಿನಕ್ಕೆ ತುಂಬಾ ರುಚಿ.

ಕಾಳು ಮಸ್ಸೊಪ್ಪು ಸಾರು:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಒಂದು ಕಪ್
ಮೊಳಕೆ ಕಡ್ಲೆಕಾಳು
ಮೊಳಕೆ ಹುರುಳಿಕಾಳು
ಹೆಸರುಕಾಳು
ಹಲಸಂದೆಕಾಳು
ಹರಿವೆ ಸೊಪ್ಪು
ದಂಟುಸೊಪ್ಪು
ಬೆರೆಕೆ ಸೊಪ್ಪು
ಸಾರಿನಪುಡಿ /ಸಾಂಬಾರ್ ಪುಡಿ
ಈರುಳ್ಳಿ
ಬೆಳ್ಳುಳ್ಳಿ
ಅರಿಸಿನ
ಇಂಗು
ಕರಿಬೇವು
ಎಣ್ಣೆ,ಸಾಸಿವೆ
ಉಪ್ಪು
ಕಾಯಿತುರಿ
ಹುಣಸೇರಸ

ತಯಾರಿಸುವ ರೀತಿ:

ಎಲ್ಲಾ ಕಾಳುಗಳನ್ನು ಕ್ರಮವಾಗಿ ಕಾಲು ಬಟ್ಟಲು ತೆಗೆದುಕೊಳ್ಳಿ, ಎಲ್ಲಾ ಕಾಳುಗಳನ್ನು ನೀರು,ಉಪ್ಪು,ಅರಿಸಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ಇದರ ಜೊತೆಗೆ ತೊಗರಿಬೇಳೆಯನ್ನು ಬೇಯಿಸಿಕೊಂಡು ಅದಕ್ಕೆ ತೊಳೆದು,ಕತ್ತರಿಸಿದ ಎಲ್ಲಾ ಸೊಪ್ಪುಗಳನ್ನು ಹಾಕಿ, ಅದಕ್ಕೆ ಒಂದೆರಡು ಅಳಕು ಬೆಳ್ಳುಳ್ಳಿಯನ್ನು ಹಾಕಿ,ಟಮೋಟ ಕೂಡ ಹಾಕಿ ಸೊಪ್ಪು ಬೇಯುವವರೆಗು ಬೇಯಿಸಿ. ಬೆಂದ ನಂತರ ಕಾಳು-ಬೇಳೆ-ಸೊಪ್ಪಿನ ಮಿಶ್ರಣವನ್ನು ಸ್ವಲ್ಪ ಮಸೆದುಕೊಳ್ಳಿ.
ಈ ಕಡೆ ಕಾಯಿತುರಿ,ಸ್ವಲ್ಪ ಈರುಳ್ಳಿ,ಸಾರಿನಪುಡಿ,ಒಂದು ಅಳಕುಬೆಳ್ಳುಳ್ಳಿಯನ್ನು ಸೇರಿಸಿ ಒಟ್ಟಿಗೆ ರುಬ್ಬಿಕೊಳ್ಳಿ.
ನಂತರ ಪಾತ್ರೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ,ಸಾಸಿವೆ,ಕರಿಬೇವು,ಇಂಗು ಜಜ್ಜಿದ ಬೆಳ್ಳುಳ್ಳಿ ಮತ್ತು ರುಬ್ಬಿದ ಮಿಶ್ರಣ ಹಾಕಿ,ಕುದಿಸಿ,ಉಪ್ಪು ಸೇರಿಸಿ,ಮಸೆದಿರುವ ಕಾಳು,ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಹಾಕಿ,ಹುಣಸೇಹುಳಿ ಸೇರಿಸಿ,ಒಂದು ಬಾರಿ ಕುದಿಸಿ.ಕೆಳಗಿಳಿಸಿ.ಈ ಸಾರನ್ನು ಮುದ್ದೆ ಮತ್ತು ಅನ್ನದೊಂದಿಗೆ ನೀಡಬೇಕು. ಇದು ಚಪಾತಿ ಮತ್ತು ರೊಟ್ಟಿಗೂ ಚೆನ್ನಾಗಿರುತ್ತದೆ. ಆದರೆ ಗಟ್ಟಿಯಾಗಿ ತಯಾರಿಸಬೇಕು.
* ಕಾಳು ಮತ್ತು ಸೊಪ್ಪುಗಳನ್ನು ನಿಮಗೆ ಬೇಕಾದ ಅಳತೆಯಲ್ಲಿ ಹಾಕಿಕೊಳ್ಳಿ. ಎಲ್ಲಾ ಹಾಕುವುದು ಕಷ್ಟ ಎನಿಸಿದರೆ,ನಿಮಗೆ ಬೇಕಾದ ಕಾಳು ಮತ್ತು ಸೊಪ್ಪನ್ನು ಹಾಕಿಕೊಳ್ಳಿ.

Tuesday, October 16, 2007

Aloo Peas Curry /ಆಲೂ-ಬಟಾಣಿ ಮಸಾಲೆ:


ಆಲೂ-ಬಟಾಣಿ ಮಸಾಲೆ:
ಬೇಕಾಗುವ ಸಾಮಗ್ರಿಗಳು;
ಬಟಾಣಿ
ಆಲೂಗೆಡ್ಡೆಯನ್ನು ಹೆಚ್ಚಿಕೊಳ್ಳಿ
ಹೆಚ್ಚಿದ ಈರುಳ್ಳಿ
ಒಂದು ಹಸಿಮೆಣಸಿನಕಾಯಿ
ಅಚ್ಚಖಾರದಪುಡಿ
ಧನಿಯ
ಜೀರಿಗೆಪುಡಿ
ಗರಂಮಸಾಲಾ
ಕೊತ್ತುಂಬರಿಸೊಪ್ಪು
ಎಣ್ಣೆ, ಜೀರಿಗೆ, ಕರಿಬೇವು
ಉಪ್ಪು ರುಚಿಗೆ

ವಿಧಾನ;
ಪಾತ್ರೆಗೆ ಎಣ್ಣೆಯನ್ನು ಹಾಕಿ, ಜೀರಿಗೆ ಹಾಕಿ ಚಟಪಟ ಅಂದಾಗ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ. ಎರಡು ನಿಮಿಷದ ನಂತರ ಆಲೂಗೆಡ್ಡೆಯನ್ನು ಹಾಕಿ. ಒಂದೆರಡು ನಿಮಿಷ ಹುರಿದು ಬಟಾಣಿ ಕಾಳುಗಳನ್ನು ಹಾಕಿ,ಅದರ ಜೊತೆಗೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಐದಾರು ನಿಮಿಷ ಹುರಿದು,ಕಾರದಪುಡಿ,ಧನಿಯ ಮತ್ತು ಜೀರಿಗೆಪುಡಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ. ಎಷ್ಟು ಅಗತ್ಯವೋ ಅಷ್ಟು ಮಾತ್ರ ನೀರನ್ನು ಹಾಕಿ,ಬಟಾಣಿ ಮತ್ತು ಆಲೂಗೆಡ್ಡೆ ಬೇಯುವವರೆಗೆ ಬೇಯಿಸಿ, ಕೊನೆಯಲ್ಲಿ ಕೊತ್ತುಂಬರಿಸೊಪ್ಪು ಮತ್ತು ಗರಂಮಸಾಲ ಬೆರೆಸಿ. ಒಂದು ನಿಮಿಷದ ನಂತರ ಇಳಿಸಿ,ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ,ಈ ಮಸಾಲೆಯನ್ನು ಚಪಾತಿ ಮತ್ತು ಪರೋಟದೊಂದಿಗೆ ನೀಡಬಹುದು.
* ಹಸಿಬಟಾಣಿ ಉಪಯೋಗಿಸುವವರು ನೇರವಾಗಿ ಒಗ್ಗರಣೆಗೆ ಸೇರಿಸಿ.
* ಒಣಗಿದ ಬಟಾಣಿ ಉಪಯೋಗಿಸುವವರು ನಾಲ್ಕು-ಐದು ಗಂಟೆ ನೆನೆಸಿ.

Thursday, July 12, 2007

Brinjal Sabji - ಬದನೆಕಾಯಿ ಮಸೆದ ಪಲ್ಯ/ಮಸ್ಕಾಯಿ ಪಲ್ಯ:


ಬದನೆಕಾಯಿ ಮಸೆದ ಪಲ್ಯ/ಮಸ್ಕಾಯಿ ಪಲ್ಯ:
ಸಾಮಗ್ರಿಗಳು:

ಬದನೆಕಾಯಿ - ಅರ್ಧಕೆಜಿ
ಈರುಳ್ಳಿ-ಹೆಚ್ಚಿದ್ದು
ಹಸಿಮೆಣಸಿನಕಾಯಿಗಳು - ಉದ್ದಕ್ಕೆ ಹೆಚ್ಚಿಕೊಳ್ಳಿ
ಎಣ್ಣೆ, ಸಾಸಿವೆ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ನಿಂಬೆರಸ
ಕೊತ್ತುಂಬರಿ ಸೊಪ್ಪು

ತಯಾರಿಸುವ ರೀತಿ:

ಮೊದಲು ಎಣ್ಣೆಯನ್ನು ಕಾಯಿಸಿ,ಸಾಸಿವೆ,ಕರಿಬೇವು,ಕಡ್ಲಬೇಳೆ,ಉದ್ದಿನಬೇಳೆ ಹಾಕಿ,ನಂತರ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಐದು ನಿಮಿಷ ಬಾಡಿಸಿ. ಬದನೆಕಾಯಿ ಹಾಕಿ,ಒಗ್ಗರಣೆಯಲ್ಲಿಯೇ ಕೆಲವು ನಿಮಿಷ ಬಾಡಿಸಿ. ಅದು ಸ್ವಲ್ಪ ಬೆಂದಿದೆ ಎನಿಸಿದ ತಕ್ಷಣ ಸ್ವಲ್ಪ ನೀರು ಮತ್ತು ರುಚಿಗೆ ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ. ನಿಂಬೆರಸ ಮತ್ತು ಕೊತ್ತುಂಬರಿಸೊಪ್ಪು ಸೇರಿಸಿ.ನಂತರ ಹಾಗೇ ಸ್ವಲ್ಪ ಮಸೆಯಿರಿ, ಇದೀಗ ತಯಾರಾಗುತ್ತದೆ,ಮಸ್ಕಾಯಿ ಪಲ್ಯ.
* ಕಾಯಿ ತುರಿ ಬೇಕಾದವರು,ಬದನೆ ಬೇಯಿಸುವಾಗಲೇ ಸೇರಿಸಿ.
* ಈ ಮಸ್ಕಾಯಿ ಪಲ್ಯವು ರೊಟ್ಟಿ ಮತ್ತು ಚಪಾತಿಗೆ ತುಂಬಾ ರುಚಿಯಾಗಿ ಚೆನ್ನಾಗಿರುತ್ತದೆ.
* ಇದಕ್ಕೆ ಇನ್ನ್ಯಾವುದೆ ಮಸಾಲೆ ಹಾಕುವುದಿಲ್ಲ. ಹಸಿಮೆಣಸಿನಕಾಯಿ ರುಚಿಗೆ ತಕ್ಕಷ್ಟು ಹಾಕಿ.
* ಹಸಿರು ಬದನೆಕಾಯಿಯಲ್ಲಿ ತಯಾರಿಸಿದರೆ ರುಚಿ ಹೆಚ್ಚು.

Tuesday, July 3, 2007

Bittergourd /ಹಾಗಲಕಾಯಿ ಗೊಜ್ಜು

ಹಾಗಲಕಾಯಿ ಎಷ್ಟೇ ಕಹಿ ಆಗಿದ್ದರೂ ಅದು ತುಂಬಾ ಹೆಸರುವಾಸಿಯಾಗಿದೆ. ಇದು ಮಧುಮೇಹ ರೋಗಕ್ಕೆ ರಾಮಬಾಣವಾದ್ದರಿಂದ ಎಲ್ಲರಿಗೂ ಹತ್ತಿರವಾಗುತ್ತಿದೆ. ಇದರಿಂದ ಅನೇಕ ಅಡಿಗೆಗಳನ್ನು ಮಾಡಬಹುದು. ಈ ಕಾಯಿಯ ರಸವನ್ನು ಪ್ರತಿದಿನ ಶುಗರ್ ಇರುವವರು ಕುಡಿದರೆ ಉಪಯುಕ್ತ. ಕಹಿಯಾಗಿದ್ದರೂ ಒಂದು ವಿಚಿತ್ರ ರೀತಿಯ ರುಚಿ ಕೊಡುವ ಹಾಗಲಕಾಯಿ ನೋಡಲು ಚೆಂದ. ಅದು ಬಳ್ಳಿಯಲ್ಲಿ ಕಾಯಿ ಬಿಟ್ಟಿದ್ದಾಗ ಅದೊಂದು ತರಹ ಸೊಗಸಾಗಿ ಕಾಣುತ್ತದೆ. ಕಹಿಯಾದರೂ ಅದು ಅಮೃತವಿದ್ದಂತೆ. ಈಗ ಇಲ್ಲಿ ಹಾಗಲಕಾಯಿ ಗೊಜ್ಜು ಬಗ್ಗೆ ತಿಳಿಸಿದೆ. ನೀವು ತಯಾರಿಸಿ ನೋಡಿ.


ಹಾಗಲಕಾಯಿ ಗೊಜ್ಜು:

ಬೇಕಾಗುವ ಸಾಮಗ್ರಿಗಳು:

ಹೆಚ್ಚಿದ ಹಾಗಲಕಾಯಿ - ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಅರಿಶಿಣದ ಪುಡಿ
ಬೆಲ್ಲ ಸ್ವಲ್ಪ
ಹುಣೆಸೇರಸ ಒಂದೆರಡು ಚಮಚ
ಕರಿಬೇವು
ಕಾಯಿತುರಿ ಸ್ವಲ್ಪ
ಒಂದು ಸಣ್ಣ ಈರುಳ್ಳಿ
ಅಚ್ಚ ಮೆಣಸಿನ ಪುಡಿ
ಧನಿಯಾ ಪುಡಿ
ಹೆಚ್ಚಿದ ಕೊತ್ತುಂಬರಿ ಸೊಪ್ಪು
ಉಪ್ಪು
ಎಣ್ಣೆ

ವಿಧಾನ:

ಮೊದಲು ಸಣ್ಣ ಈರುಳ್ಳಿ, ತೆಂಗಿನಕಾಯಿತುರಿ, ಕಾರದಪುಡಿ,ಧನಿಯಾಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕಾದ ಬಳಿಕ,ಸಾಸಿವೆ,ಕರಿಬೇವು,ಅರಿಶಿಣ,ಹೆಚ್ಚಿದ ಈರುಳ್ಳಿ ಹಾಕಿ,ಬಾಡಿಸಿ. ಹಾಗಲಕಾಯಿಗಳನ್ನು ಹಾಕಿ ಒಗ್ಗರಣೆಯಲ್ಲಿಯೇ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಅದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ, ಉಪ್ಪು ಮತ್ತು ಬೆಲ್ಲ ಹಾಕಿ, ನೀರು ಎಷ್ಟು ಬೇಕೋ ಅಷ್ಟನ್ನು ಹಾಕಿ, ಬೇಯಲು ಬಿಡಿ. ಬೆಂದ ನಂತರ ಇಳಿಸಿ,ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.ಮನೆಯಲ್ಲಿ ಎಲ್ಲರು ತಿನ್ನಬಹುದಾದಂತ ಹಾಗಲಕಾಯಿ ಗೊಜ್ಜು ತಯಾರಾಗಿದೆ. ಇದನ್ನು ಅನ್ನ,ಚಪಾತಿ,ರೊಟ್ಟಿಗಳೊಂದಿಗೆ ಬಡಿಸಬಹುದು. ಅನ್ನಕ್ಕೂ ತುಂಬಾ ರುಚಿಯಾಗಿರುತ್ತದೆ ಅಥವಾ ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.ಈ ಗೊಜ್ಜು ಸ್ವಲ್ಪ ದೊಡ್ಡ ಮಕ್ಕಳಿಗೆ ಸಹ ಇಷ್ಟವಾಗುತ್ತದೆ.

Popular Posts