Showing posts with label Palya / Sabji / ಪಲ್ಯ. Show all posts
Showing posts with label Palya / Sabji / ಪಲ್ಯ. Show all posts

Thursday, August 28, 2014

ಹಲಸಂದೆಕಾಳು ಉಸಲಿ: Halasande Kaalu usali:

ಹಲಸಂದೆಕಾಳು ಉಸಲಿ:

ಸಾಮಗ್ರಿಗಳು:

ಹಲಸಂದೆಕಾಳು ಒಂದು ಬಟ್ಟಲು

ಹೆಚ್ಚಿದ ಈರುಳ್ಳಿ ಸ್ವಲ್ಪ

ಹೆಚ್ಚಿದ ಹಸಿಮೆಣಸಿನಕಾಯಿ

ಎಣ್ಣೆ, ಸಾಸಿವೆ

ಕರಿಬೇವು

ಉಪ್ಪು ರುಚಿಗೆ

ಕೊತ್ತುಂಬರಿಸೊಪ್ಪು

ಕಾಯಿತುರಿ

ನೀರು ಬೇಯಿಸಲು ಬೇಕಾಗುವಷ್ಟು

ವಿಧಾನ:

ಹಲಸಂದೆಕಾಳುಗಳನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ ಅರ್ಧ ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ, ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.

ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ , ಬೇಯಿಸಿರುವ ಕಾಳನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ, ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ, ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.
*ಹಲ್ಸಂದೆ ಕಾಳುಗಳು ಎರಡು ಬಣ್ಣಗಳಲ್ಲಿ ಸಿಗುತ್ತದೆ, ಕೆಂಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಹೈಬ್ರೀಡ್ ಕಾಳುಗಳು ಅಷ್ಟು ರುಚಿ ಇರುವುದಿಲ್ಲ.  ಇಂಗ್ಲೀಷ್ ನಲ್ಲಿ ಬ್ಲಾಕ್ ಐ ಬೀನ್ ಎಂದು  ಕರೆಯುತ್ತಾರೆ. ಈ ಕಾಳುಗಳು ಆರೋಗ್ಯಕ್ಕೂ ಉತ್ತಮ. ಇದನ್ನು ಮೊಳಕೆ ತೆಗೆದು ಸಾರಿಗೆ ಬಳಸಬಹುದು, ಇಲ್ಲವೆಂದರೆ ಹಾಗೆ ನೇರವಾಗಿಯೇ ಕಾಳುಗಳನ್ನು ಬೇಯಿಸಿಕೊಂಡು ಸಾರನ್ನು ತಯಾರಿಸಬಹುದು. ಅನ್ನ, ಮುದ್ದೆ, ಚಪಾತಿ,ರೊಟ್ಟಿಗಳಿಗೆ ಚೆನ್ನಾಗಿರುತ್ತದೆ.

Wednesday, April 20, 2011

Beans Palya - ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಹುರುಳಿಕಾಯಿ /ಬೀನ್ಸ್ ನಲ್ಲಿ ಬಲಿತಿರುವ ಕಾಯಿ ತೆಗೆದುಕೊಂಡರೆ ಅದರಲ್ಲಿ ನಾರು ಹೆಚ್ಚಾಗಿರುತ್ತದೆ,ಅದು ಚೆನ್ನಾಗಿರುವುದಿಲ್ಲ. ಆದ್ದರಿಂದ ನೋಡಿ ಎಳೆಯ ಮತ್ತು ಹಸಿರಾಗಿರುವ ಕಾಯಿಯನ್ನು ತೆಗೆದುಕೊಳ್ಳಿ. ಹುರುಳಿಕಾಯಿಯಲ್ಲಿ ನಾರಿನ ಅಂಶವಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಲ್ಯ,ಸಾರು,ಸಾಗು ಯಾವುದಕ್ಕೆ ಬೇಕಾದರೂ ಇದನ್ನು ಬಳಸಬಹುದು. ಇದು ಎಲ್ಲದಕ್ಕು ಹೊಂದಿಕೊಳ್ಳುತ್ತದೆ. ಇಲ್ಲಿ ಬರೆದಿರುವ ಸಿಂಪಲ್ ಪಲ್ಯದಲ್ಲಿಯೇ ತುಂಬಾ ರುಚಿ ಜಾಸ್ತಿಯಾಗಿರುತ್ತದೆ. ಈ ಪಲ್ಯ ಸೈಡ್ ಡಿಶ್ ಅಥವಾ ಚಪಾತಿ,ಪೂರಿ,ಪರೋಟ ಮತ್ತು ಬ್ರೆಡ್ ಜೊತೆ ಸಹ ಚೆನ್ನಾಗಿರುತ್ತದೆ. ಮಕ್ಕಳಿಗೂ ಇಷ್ಟವಾಗುವ ಪಲ್ಯ. ಎಲ್ಲರಿಗೂ ತಿಳಿದಿರುವಂತೆ ಹುರುಳಿಕಾಯಿ ಪಲ್ಯದ ಪಫ್ ನಲ್ಲಿ ಅಂತೂ ಹೆಚ್ಚಿನ ರುಚಿ ಇರುತ್ತದೆ. ಪಫ್ ತಯಾರಿಸುವಾಗ ಆಲೂಗೆಡ್ಡೆ ಪಲ್ಯದ ಬದಲು, ಈ ಪಲ್ಯಕ್ಕೆ ಸ್ವಲ್ಪ ಮಸಾಲೆ ಹಾಕಿ ಬಳಸಬಹುದು.

ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಬೇಕಾಗುವ ಪದಾರ್ಥಗಳು;

ಹುರುಳಿಕಾಯಿ - ಅರ್ಧ ಕಿಲೋ
ಈರುಳ್ಳಿ - ಒಂದು, ಸಣ್ಣಗೆ ಹೆಚ್ಚಿ,
ಹಸಿಮೆಣಸಿನಕಾಯಿ -ರುಚಿಗೆ, ಉದ್ದಕ್ಕೆ ಸೀಳಿಕೊಂಡರೆ ಉತ್ತಮ
ಎಣ್ಣೆ - ಅವಶ್ಯಕತೆ ಇದ್ದಷ್ಟು
ಸಾಸಿವೆ ಸ್ವಲ್ಪ
ಕರಿಬೇವು- ಒಂದು ಗರಿ, ಆಗೇ ಕೈಯಲ್ಲಿ ಮುರಿದುಕೊಳ್ಳಿ.
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದು ಚಮಚ
ಅರಿಶಿನ ಚಿಟಿಕೆ
ಉಪ್ಪು ರುಚಿಗೆ
ಕಾಯಿತುರಿ ಸ್ವಲ್ಪ ಜಾಸ್ತಿ ಇರಲಿ
ಕೊತ್ತುಂಬರಿಸೊಪ್ಪು ಸಣ್ಣಗೆ ಹೆಚ್ಚಿದ್ದು.

ವಿಧಾನ:

ಮೊದಲು ಹುರುಳಿಕಾಯಿಯನ್ನು ಚೆನ್ನಾಗಿ ತೊಳೆದು, ನಾರು ತೆಗೆದು ಬಿಡಿಸಿಕೊಂಡು, ಕಾಯಿಯನ್ನು ಸಣ್ಣಗೆ ಒಂದೇ ಸಮನಾಗಿ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ, ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಬಾಡಿಸಿ, ಕರಿಬೇವು, ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹೆಚ್ಚಿದ ಹುರುಳಿಕಾಯಿಯನ್ನು ಸೇರಿಸಿ, ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ಸ್ವಲ್ಪ ನೀರು ಚಿಮುಕಿಸಿ,ಮುಚ್ಚಿಟ್ಟು, ಕಾಯಿ ಬೇಯುವವರೆಗು ಬೇಯಿಸಿ. ಇದು ಸ್ವಲ್ಪ ಬೇಗ ಬೇಯುತ್ತದೆ. ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಎಳೆಯದಾಗಿದ್ದರೆ ಬೇಗ ಬೇಯುವುದು, ಬಲಿತಿದ್ದರೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಚಪಾತಿ ಮಧ್ಯೆ ಸ್ಯಾಂಡ್ ವಿಚ್ ತರಹ ರೋಲ್ ಮಾಡಿಕೊಂಡು ತಿನ್ನಲು ಕೂಡ ಚೆನ್ನಾಗಿರುತ್ತದೆ. ಎರಡು ಬ್ರೆಡ್ ಗಳ ಮಧ್ಯೆಯೂ ಪಲ್ಯ ಇಟ್ಟು ತಿನ್ನಬಹುದು, ಪಫ್ ತರಹ ರುಚಿಯಾಗಿರುತ್ತದೆ.

* ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಬೇಯಿಸುವುದು ಕಷ್ಟ ಮತ್ತು ಬೇಯಲು ಬಹಳ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ.

Wednesday, January 12, 2011

Snakegourd chutney - ಪಡುವಲಕಾಯಿ ತಿರುಳಿನ ಚಟ್ನಿ:

ಕೆಲವು ತರಕಾರಿಗಳ ಕಾಯಿಯ ತಿರುಳನ್ನು ಸಹ ಎಸೆಯದೆ ನಾವು ಅದನ್ನು ಅಡಿಗೆಯಲ್ಲಿ ಉಪಯೋಗಿಸಬಹುದು. ತಿರುಳಿನಲ್ಲು ಸಹ ಒಳ್ಳೆಯ ಅಂಶಗಳಿರುತ್ತವೆ. ಕೆಲವು ತರಕಾರಿಗಳ ಸಿಪ್ಪೆ, ತಿರುಳು ಮತ್ತು ಸೊಪ್ಪು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುತ್ತದೆ.  ಆಗಾಗಿ ಉಪಯೋಗಿಸಬಹುದಾದಂತ ತರಕಾರಿಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಪಡುವಲ ಕಾಯಿಯಲ್ಲಿ ಯಾವುದನ್ನು ಬಿಸಾಡುವಂತಿಲ್ಲ. ಪಡುವಲಕಾಯಿಯನ್ನು ದಿನನಿತ್ಯದ ಅಡಿಗೆಯಲ್ಲಿ ಬಳಸಿದರೆ ಬಿ.ಪಿ ಇರುವವರಿಗೆ ತುಂಬಾ ಉಪಯುಕ್ತವಾಗುತ್ತದೆ. ಅದರಲ್ಲಿ ತಿರುಳಿನಲ್ಲಿ ಚಟ್ನಿ. ಸಿಪ್ಪೆಯಲ್ಲಿ ಸಹ ಮತ್ತು ಒಳಗಿನ ಕಾಯಿಯಿಂದ ಹುಳಿ,ಸಾರು ಮತ್ತು ಪಲ್ಯವನ್ನು ತಯಾರಿಸುತ್ತೇವೆ. ಈಗ ಇಲ್ಲಿ ಪಡುವಲಕಾಯಿಯ ತಿರುಳಿನ ಚಟ್ನಿಯನ್ನು ತಯಾರಿಸೋಣ.

ಪಡುವಲಕಾಯಿ ತಿರುಳಿನ ಚಟ್ನಿ:

ಪಡುವಲಕಾಯಿ ತಿರುಳು
ಸ್ವಲ್ಪ ಕಾಯಿತುರಿ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ
ಉದ್ದಿನಬೇಳೆ - ಒಂದು ಚಮಚ
ಉಪ್ಪು ರುಚಿಗೆ
ಒಗ್ಗರಣೆಗೆ;
ಎಣ್ಣೆ, ಜೀರಿಗೆ,ಸಾಸಿವೆ,ಕರಿಬೇವು

ತಯಾರಿಸುವ ರೀತಿ:

ಉದ್ದಿನಬೇಳೆಯನ್ನು ಸ್ವಲ್ಪ ಹುರಿದುಕೊಂಡು ಅದಕ್ಕೆ ತೆಂಗಿನತುರಿ,ಉಪ್ಪು,ಹುಣಸೇಹಣ್ಣು,ಹಸಿಮೆಣಸಿನಕಾಯಿ ಮತ್ತು ಉದ್ದಿನಕಾಳು ಹಾಕಿ ನುಣ್ಣಗೆ ರುಬ್ಬಿ.
ಒಗ್ಗರಣೆಗೆ ಎಣ್ಣೆ ಹಾಕಿ ಕಾದಬಳಿಕ ಜೀರಿಗೆ, ಸಾಸಿವೆ ಮತ್ತು ಕರಿಬೇವು ಹಾಕಿ, ಒಗ್ಗರಣೆಯನ್ನು ರುಬ್ಬಿದ ಚಟ್ನಿಗೆ ಸೇರಿಸಿ, ಬೆರೆಸಿ. ಇದು ತುಂಬಾ ರುಚಿಯಾಗಿರುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು.

Monday, December 21, 2009

palakpaneer

ಪಾಲಕ್ ಪನ್ನೀರು ಮಕ್ಕಳಿಗೆ ಇಷ್ಟವಾಗುವಂತದ್ದು, ಸೊಪ್ಪು ಪೇಸ್ಟ್ ಮಾಡುವುದರಿಂದ ಸೊಪ್ಪು ತಿನ್ನಲು ಹಿಂಜರಿಯುವ ಮಕ್ಕಳಿಗೆ ಹೀಗೆ ತಯಾರಿಸಿ ಕೊಡುವುದರಿಂದ ಖುಷಿಯಿಂದ ತಿನ್ನುತ್ತಾರೆ. ಅದರ ಜೊತೆ ಪನ್ನೀರು ಒಂದು ರುಚಿ ಕೊಡುತ್ತದೆ. ಇದು ಚಪಾತಿ, ಪರೋಟ, ನಾನ್,ಕುಲ್ಚ, ಬಟರ್ ನಾನ್, ತಂದೂರಿ ರೋಟಿ ಮತ್ತು ಪೂರಿ ಎಲ್ಲಕ್ಕೂ ಸೈ.

Monday, November 2, 2009

Kidney Beans Sabji - ಹುರುಳೀಕಾಯಿಕಾಳು ಉಸಲಿ:

ಹುರುಳೀಕಾಯಿಕಾಳು ಉಸಲಿ:
ನಮ್ಮ ದೇಶದಲ್ಲಿ ಹುರುಳೀಕಾಯಿಕಾಳು ಸುಮಾರು ಬಣ್ಣಗಳಲ್ಲಿ ಬರುತ್ತದೆ. ಇದು ಹುರುಳಿಕಾಯಿಯಲ್ಲಿ ಸಿಗುತ್ತದೆ, ಇದು ಸಿಪ್ಪೆ ಸಮೇತ ಸಿಗುತ್ತದೆ. ಅಲ್ಲದೇ ಒಣಗಿದ ಕಾಳುಗಳು ಸಿಗುತ್ತವೆ ಮತ್ತು ಈಗ ಕ್ಯಾನ್ ನಲ್ಲಿ ಸಹ ಸಿಗುತ್ತದೆ.ಎಲ್ಲಕ್ಕಿಂತ ಹಸಿಕಾಳಿನಕಾಯಿ ತಂದು ಕಾಳು ಬಿಡಿಸಿ ಮಾಡುವುದು ಹೆಚ್ಚು ರುಚಿಯಾಗಿರುತ್ತದೆ ಮತ್ತು ಬೇಗ ಬೇಯುತ್ತದೆ. ಕ್ಯಾನ್ ನಲ್ಲಿ ಕೂಡ ಬಿಳಿ ಕಿಡ್ನಿ ಬೀನ್ಸ್ ಮತ್ತು ಕೆಂಪು ಕಿಡ್ನಿ ಬೀನ್ಸ್ ಗಳು ಸಿಗುತ್ತವೆ.

ಸಾಮಗ್ರಿಗಳು:

ಹುರುಳೀಕಾಯಿಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ

ವಿಧಾನ:

ಹುರುಳೀಕಾಳನ್ನು ಬಿಡಿಸಿಕೊಂಡು ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ.ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ,ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ,ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.

Sunday, October 11, 2009

Hesarubele Kosumbari / Moongdal salad-ಹೆಸರುಬೇಳೆ ಕೋಸುಂಬರಿ:

ಹೆಸರುಬೇಳೆ ಕೋಸುಂಬರಿ:

ಸಾಮಾಗ್ರಿಗಳು:

ಹೆಸರುಬೇಳೆ - 1/4 ಕಪ್
ಸೌತೆಕಾಯಿ - ಒಂದು, ಸಣ್ಣಗೆ ಹೆಚ್ಚಿಕೊಳ್ಳಿ
ಎಣ್ಣೆ - ಒಂದು ಚಮಚ
ಸಾಸಿವೆ
ಹಸಿಮೆಣಸಿನಕಾಯಿ ರುಚಿಗೆ,ಹೆಚ್ಚಿಕೊಳ್ಳಿ
ಒಣಮೆಣಸಿನಕಾಯಿ ಒಂದೆರಡು
ಕರಿಬೇವಿನ ಸೊಪ್ಪು
ಕೊತ್ತುಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ತೆಂಗಿನತುರಿ
ಕ್ಯಾರೆಟ್ ತುರಿ (ಬೇಕಾದರೆ)

ತಯಾರಿಸುವ ವಿಧಾನ:

ಮೊದಲಿಗೆ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು,ಒಂದೆರಡು ಗಂಟೆ ನೆನೆಸಿಡಿ. ನಂತರ ಒಗ್ಗರಣೆ ಮಾಡಿಕೊಳ್ಳಿ, ಎಣ್ಣೆ ಕಾಯಿಸಿಕೊಂಡು ಅದು ಬಿಸಿಯಾದ ಮೇಲೆ ಸಾಸಿವೆ, ಮೆಣಸಿನಕಾಯಿಗಳು ಮತ್ತು ಕರಿಬೇವು ಹಾಕಿ ಒಂದು ನಿಮಿಷ ಹುರಿದು ತೆಗೆದಿಡಿ. ನೆನೆಸಿರುವ ಹೆಸರುಬೇಳೆಯನ್ನು ನೀರು ಇಲ್ಲದಂತೆ ಸೋಸಿಕೊಂಡು, ಅದಕ್ಕೆ ಈ ಒಗ್ಗರಣೆ, ಉಪ್ಪು,ಕೊತ್ತುಂಬರಿ, ಸೌತೆಕಾಯಿ ಮತ್ತು ತೆಂಗಿನತುರಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಕ್ಯಾರೆಟ್ ತುರಿ ಬೆರೆಸುವವರು ಅದನ್ನು ಬೆರೆಸಿ. ಇದನ್ನು ಯಾವ ಊಟಕ್ಕಾದರೂ ಸರ್ವ್ ಮಾಡಬಹುದು, ಯಾವಾಗ ಬೇಕಾದರೂ ತಿನ್ನಬಹುದು. ಹಸಿಯಾಗಿರುವುದರಿಂದ ಆರೋಗ್ಯಕ್ಕೂ ಹಿತಕರ.

Monday, September 14, 2009

Bitter Gourd / ಹಾಗಲಕಾಯಿ ಪಲ್ಯ:


ಹಾಗಲಕಾಯಿ ಪಲ್ಯ:

ಬೇಕಾಗುವ ಪದಾರ್ಥಗಳು;

ಹಾಗಲಕಾಯಿ-ಎರಡು
ಈರುಳ್ಳಿ - ಒಂದು
ಹಸಿಮೆಣಸಿನಕಾಯಿ
ಹುಣಸೇರಸ ಸ್ವಲ್ಪ
ಬೆಲ್ಲ
ಕಾಯಿತುರಿ,ಕೊತ್ತುಂಬರಿಸೊಪ್ಪು
ಎಣ್ಣೆ,ಸಾಸಿವೆ
ಕರಿಬೇವು
ಅರಿಶಿನ
ಉಪ್ಪು

ವಿಧಾನ:
ಮೊದಲು ಹಾಗಲಕಾಯಿಯನ್ನು ಸಣ್ಣಗೆ ಅಥವ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ,ಸಾಸಿವೆ,ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ,ಬಾಡಿಸಿ,ಕರಿಬೇವು,ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹಾಗಲಕಾಯಿಯನ್ನು ಸೇರಿಸಿ,ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಹುಣಸೇರಸ ಹಾಕಿ ಚೆನ್ನಾಗಿ ತಿರುವಿ. ನೀರು ಸ್ವಲ್ಪ ಹಾಕಿ ಹಾಗಲಕಾಯಿ ಬೇಯುವವರೆಗು ಬೇಯಿಸಿ. ಸ್ವಲ್ಪ ಬೆಲ್ಲ ಹಾಕಿ,ಚೆನ್ನಾಗಿ ಬೆರೆಸಿ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎಲ್ಲವನ್ನು ಹಾಕಿ ಬೆರೆಸಿ.ಇಳಿಸಿ.

Thursday, June 11, 2009

Coriander leaves Chutney- ಕೊತ್ತುಂಬರಿಸೊಪ್ಪಿನ ಚಟ್ನಿ

ಕೊತ್ತುಂಬರಿಸೊಪ್ಪಿನ ಚಟ್ನಿ:

ಸಾಮಗ್ರಿಗಳು:
ಕೊತ್ತುಂಬರಿಸೊಪ್ಪು
ಹಸಿಮೆಣಸಿನಕಾಯಿ
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ - ನಾಲ್ಕು ಎಸಳು
ಉಪ್ಪು ರುಚಿಗೆ

ವಿಧಾನ:


ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ಬೆಳ್ಳುಳ್ಳಿ,ಹುಣಸೇಹಣ್ಣು ಮತ್ತು ಉಪ್ಪು ಸೇರಿಸಿ,ರುಬ್ಬಿಕೊಳ್ಳಿ.
ಇದನ್ನು ಸಹ ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಇದು ರಾಗಿರೊಟ್ಟಿಗೆ ತುಂಬಾ ಚೆನ್ನಾಗಿರುತ್ತದೆ.

Friday, June 5, 2009

Moolangi Salad / Radish salad

ಮೂಲಂಗಿ ಸಲಾಡ್:

ಕ್ಯಾರೆಟ್ ತುರಿ
ಮೂಲಂಗಿ ತುರಿ
ಹಸಿಮೆಣಸಿನ ಕಾಯಿ ಪೇಸ್ಟ್ ಅಥವ ಸಣ್ಣಗೆ ಹೆಚ್ಚಿದ್ದು
ಕಾಯಿತುರಿ ಬೇಕಾದರೆ
ಹುರಿದ ಜೀರಿಗೆ ಪುಡಿ ಸ್ವಲ್ಪ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಉಪ್ಪು ರುಚಿಗೆ

ಉಪ್ಪು ಮಾತ್ರ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ಉಪ್ಪನ್ನು ನೀಡುವಾಗ ಬೆರೆಸಿ ಕೊಡಿ. ಇದು ಅತೀ ಸುಲಭ ಕೋಸುಂಬರಿ ಮತ್ತು ರುಚಿ ಕೂಡ ಹಾಗೂ ಹಸಿಯಾಗಿ ಮೂಲಂಗಿ ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ. ಹುರಿದ ಜೀರಿಗೆಯ ಪರಿಮಳದಿಂದ ಇನ್ನೂ ಚೆನ್ನಾಗಿ ಇರುತ್ತದೆ.

Friday, May 8, 2009

JavaLikaayiGorikaayi Palya-ಜವಳಿಕಾಯಿ/ಗೋರಿಕಾಯಿಪಲ್ಯ:

ಜವಳಿಕಾಯಿ/ಗೋರಿಕಾಯಿಪಲ್ಯ:

ಸಾಮಗ್ರಿಗಳು:


ಜವಳಿಕಾಯಿ/ಗೋರಿಕಾಯಿ
ಈರುಳ್ಳಿ
ಹಸಿಮೆಣಸಿನಕಾಯಿ
ಕರಿಬೇವು
ಚಿಟಿಕೆ ಸಕ್ಕರೆ/ಬೆಲ್ಲ
ಕಾಯಿತುರಿ
ಕೊತ್ತುಂಬರಿಸೊಪ್ಪು
ಉಪ್ಪು
ಜೀರಿಗೆ
ಎಣ್ಣೆ

ತಯಾರಿಸುವ ರೀತಿ:

ಮೊದಲು ಜವಳಿಕಾಯಿಯನ್ನು ಬಿಡಿಸಿಕೊಂಡು,ಅದನ್ನು ಸಣ್ಣಗೆ ಹೆಚ್ಚಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ,ಹಸಿಮೆಣಸಿನಕಾಯಿ,ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ,ಬಾಡಿಸಿ. ಈರುಳ್ಳಿ ಸ್ವಲ್ಪ ಬೇಯುವವರೆಗು ಹುರಿದು,ಜವಳಿಕಾಯಿ ಹಾಕಿ ಹಾಗೇ ಹುರಿಯಿರಿ. ನಂತರ ಅದಕ್ಕೆ ಬೆಲ್ಲ ಮತ್ತು ಉಪ್ಪು ಹಾಕಿ ಕಾಲು ಲೋಟ ನೀರು ಹಾಕಿ,ನಂತರ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎರಡನ್ನು ಬೆರೆಸಿ. ಗೋರಿಕಾಯಿ ಬೇಯುವವರೆಗು ಬೇಯಿಸಿ. ಕುಕ್ಕರ್ ನಲ್ಲಿಯಾದರೆ ಒಂದು ವಿಷ್ಹಲ್ ಸಾಕು.ಒಲೆಯಿಂದ ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಅಥವ ಚಪಾತಿ ಮತ್ತು ರೊಟ್ಟಿ ಜೊತೆಯಲ್ಲಿ ತಿನ್ನಲು ಕೊಡಬಹುದು. ರೊಟ್ಟಿಗೆ ತುಂಬಾ ಚೆನ್ನಾಗಿರುತ್ತದೆ. ಕಾಯಿತುರಿಯನ್ನು ಬೇಯಿಸುವಾಗಲೇ ಹಾಕುವುದರಿಂದ ಅದರ ರಸ ಬಿಡುವುದರಿಂದ ರುಚಿ ಹೆಚ್ಚುತ್ತದೆ. ಮೇಲೆ ಮತ್ತೆ ಬೇಕಾದರೆ ಕೊತ್ತುಂಬರಿ ಮತ್ತು ಕಾಯಿತುರಿಯನ್ನು ಸೇರಿಸಬಹುದು.

Sunday, April 19, 2009

Aloo Palya/Potato bhaji - ಆಲೂಗೆಡ್ಡೆ ಪಲ್ಯ:

ಆಲೂಗೆಡ್ಡೆ ಪಲ್ಯ:

ಸಾಮಗ್ರಿಗಳು:

ಆಲೂಗೆಡ್ಡೆ
ಎಣ್ಣೆ
ಸಾಸಿವೆ
ಜೀರಿಗೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:

ಮೊದಲಿಗೆ ಆಲೂಗೆಡ್ಡೆಯನ್ನು ಸಿಪ್ಪೆ ಸಮೇತ ಬೇಯಿಸಿಕೊಳ್ಳಿ, ನಂತರ ತಣ್ಣಗಾದ ಮೇಲೆ ಸಿಪ್ಪೆ ತೆಗೆದು, ಪುಡಿ ಅಂದರೆ ಅದನ್ನು ಕೈನಲ್ಲಿಯೇ ಅದುಮಿದರೆ ಸಾಕು ಪುಡಿಯಾಗುತ್ತದೆ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಸಾಸಿವೆ,ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಮತ್ತು ಅರಿಶಿನ ಹಾಕಿ,ಪುಡಿ ಮಾಡಿದ ಆಲೂಗೆಡ್ಡೆಯನ್ನು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಅದನ್ನು ಬೆರೆಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ದೋಸೆಗೆ,ಚಪಾತಿಗೆ ಮತ್ತು ಪೂರಿಗೆ ಜೊತೆಯಾಗಿ ತಿನ್ನಲು ಉಪಯೋಗಿಸಬಹುದು.

Saturday, March 14, 2009

Snake Gourd Sabji-PaduvalaKaayi Palya

ಪಡವಲಕಾಯಿ ಪಲ್ಯ:

ಸಾಮಗ್ರಿಗಳು:
ಪಡವಲಕಾಯಿ
ಈರುಳ್ಳಿ
ಹಸಿಮೆಣಸಿನಕಾಯಿ
ಕರಿಬೇವು
ಚಿಟಿಕೆ ಸಕ್ಕರೆ/ಬೆಲ್ಲ
ಕಾಯಿತುರಿ
ಕೊತ್ತುಂಬರಿಸೊಪ್ಪು
ಉಪ್ಪು
ಜೀರಿಗೆ
ಎಣ್ಣೆ

ತಯಾರಿಸುವ ರೀತಿ:
ಮೊದಲು ಪಡವಲ ಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ,ಹಸಿಮೆಣಸಿನಕಾಯಿ,ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ, ಬಾಡಿಸಿ. ಈರುಳ್ಳಿ ಸ್ವಲ್ಪ ಬೇಯುವವರೆಗು ಹುರಿದು,ಪಡುವಲಕಾಯಿ ಹಾಕಿ ಹಾಗೇ ಹುರಿಯಿರಿ. ನಂತರ ಅದಕ್ಕೆ ಬೆಲ್ಲ ಮತ್ತು ಉಪ್ಪು ಹಾಕಿ ಒಂದೆರಡು ಚಮಚ ನೀರು ಹಾಕಿ, ಮುಚ್ಚಿಡಿ.
ಇದು ಬೇಗ ಬೇಯುತ್ತದೆ. ಬೆಂದ ನಂತರ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎರಡನ್ನು ಬೆರೆಸಿ. ಒಲೆಯಿಂದ ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಅಥವ ಚಪಾತಿ ಜೊತೆಯಲ್ಲಿ ತಿನ್ನಲು ಕೊಡಬಹುದು. ಪಡುವಲಕಾಯಿ ಆರೋಗ್ಯಕ್ಕೆ ಉತ್ತಮ.

Monday, February 2, 2009

Palak Soppina Palya /Palak sabji



ಪಾಲಕ್ ಸೊಪ್ಪಿನ ಪಲ್ಯ :
ಬೇಕಾಗುವ ಸಾಮಗ್ರಿಗಳು:

ಪಾಲಕ ಸೊಪ್ಪು ಒಂದು ಅಥವಾ ಎರಡು ಕಟ್ಟು,
ಈರುಳ್ಳಿ ಒಂದು, ಹೆಚ್ಚಿಕೊಳ್ಳಿ
ಚಿಕ್ಕ ಆಲೂಗಡ್ಡೆ ಒಂದು ಸಣ್ಣದಾಗಿ ಹೆಚ್ಚಿಕೊಳ್ಳಿ,
ಟಮೋಟ ಒಂದು ಹೆಚ್ಚಿಕೊಳ್ಳಿ,
ಹಸಿಮೆಣಸಿನಕಾಯಿ ಒಂದು ಮದ್ಯಕ್ಕೆ ಸೀಳಿದ್ದು,
ರುಚಿಗೆ ತಕ್ಕಷ್ಟು ಸಾರಿನ ಪುಡಿ ಅಥವಾ ರಸಂ ಪುಡಿ,
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಎರಡು ಚಮಚ
ಜೀರಿಗೆ,ಸಾಸಿವೆ

ಮಾಡುವ ವಿಧಾನ :

ಪಾಲಕ್ ಚೆನ್ನಾಗಿ ಶುಚಿಗೊಳಿಸಿ,ತೊಳೆದು ನಂತರ ಸಣ್ಣಗೆ ಹೆಚ್ಚಿಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಸಾಸಿವೆ ಹಾಕಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಂಡು ನಂತರ ಅದಕ್ಕೆ ಆಲೂಗಡ್ಡೆ ಹಾಕಿ ಎರಡು,ಮೂರು ನಿಮಿಷ ಹಾಗೆ ಹುರಿದು , ಟಮೋಟ ಹಾಕಿ. ಆಮೇಲೆ ಪಾಲಕ್ ಸೊಪ್ಪು ಹಾಕಿ ಚೆನ್ನಾಗಿ ಅದರಲ್ಲಿಯೇ ಬೆರೆಸಿ, ಉಪ್ಪು ,ಹಸಿಮೆಣಸಿನಕಾಯಿ ಮತ್ತು ಸಾರಿನ ಪುಡಿಹಾಕಿ ಮುಚ್ಚಿಡಿ, ನೀರು ಹಾಕುವ ಅವಶ್ಯಕತೆ ಇಲ್ಲ, ಅದು ಮುಚ್ಚಿದಾಗ ಆವಿಯಲ್ಲಿಯೇ ಬೇಯುತ್ತದೆ. ಮದ್ಯೆ ಒಮ್ಮೆ ತಿರುವಿ.ಐದು ನಿಮಿಷದಲ್ಲಿ ಬೇಯುವುದು. ನಂತರ ಕೊತ್ತಂಬರಿ ಸೊಪ್ಪು ಮತ್ತು ಕಾಯಿತುರಿ ಬೇಕಾದರೆ ಹಾಕಿಕೊಳ್ಳಿ. ಇದು ಊಟಕ್ಕೆ ಅಥವಾ ಚಪಾತಿಗೆ ನೆಂಚಿಕೊಳ್ಳಬಹುದು.

Thursday, January 29, 2009

Carrot Palya -ಕ್ಯಾರೆಟ್ ಪಲ್ಯ:

ಕ್ಯಾರೆಟ್ ಪಲ್ಯ:

ಸಾಮಗ್ರಿಗಳು:

ಕ್ಯಾರೆಟ್ ತುರಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿದ ಜೀರಿಗೆ,ಕರಿಬೇವು,ಹಸಿಮೆಣಸಿನಕಾಯಿ ಹಾಕಿ,ಕ್ಯಾರೆಟ್ ತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಕ್ಯಾರೆಟ್ ಅನ್ನು ಹಸಿಯಾಗಿಯೇ ಉಪಯೋಗಿಸುವುದರಿಂದ ಹೆಚ್ಚು ಬೇಯಿಸುವ ಅಗತ್ಯವಿಲ್ಲ.ಒಗ್ಗರಣೆಗೆ ಚೆನ್ನಾಗಿ ಬೆರೆಸಿ ಇಳಿಸಿದರೂ ಸಾಕು,ರುಚಿಯಾಗಿಯೇ ಇರುತ್ತದೆ. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Monday, January 19, 2009

Hesarukaalina kurma-ಹೆಸರುಕಾಳು ತಾಳು:

ಹೆಸರುಕಾಳು ತಾಳು:

ಸಾಮಾಗ್ರಿಗಳು:
ಹೆಸರುಕಾಳು - ಒಂದು ಬಟ್ಟಲು
ವಿವಿಧರೀತಿಯ ಹೆಚ್ಚಿದ ತರಕಾರಿಗಳು-
ಕ್ಯಾರೆಟ್, ಆಲೂಗೆಡ್ಡೆ,
ನವಿಲುಕೋಸು,
ಹೂಕೋಸು, ಸೋರೆಕಾಯಿ,
ಟಮೋಟೋ
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಎಣ್ಣೆ, ಸಾಸಿವೆ, ಕರಿಬೇವು
ಅರಿಶಿಣದ ಪುಡಿ
ಧನಿಯಾಪುಡಿ
ಕಾರದಪುಡಿ
ಸಾಂಬಾರ್ ಪುಡಿ (ಸಾರಿನ ಪುಡಿ)
ಉಪ್ಪು
ತೆಂಗಿನತುರಿ ಬೇಕಾದರೆ
ಕೊತ್ತುಂಬರಿಸೊಪ್ಪು

ವಿಧಾನ:

ಹೆಸರುಕಾಳನ್ನು,ಒಂದು ಚಮಚ ಎಣ್ಣೆ,ಸ್ವಲ್ಪ ಅರಿಶಿಣ ಹಾಕಿ,ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು(ಹೆಸರುಕಾಳನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ತರಕಾರಿಗಳು,ಸಾರಿನಪುಡಿ,ಕಾರದಪುಡಿ,ಧನಿಯಾಪುಡಿ ಮತ್ತು ಉಪ್ಪು ಚೆನ್ನಾಗಿ ಬೆರೆಸಿ,ತರಕಾರಿಗಳು ಬೇಯುವವರೆಗೂ ಬೇಯಿಸಿಕೊಳ್ಳಿ.ಈ ಸಮಯದಲ್ಲಿ ಕಾಳು ಸರಿಯಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ, ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಕುದಿಸಿ,ಇಳಿಸಿ. ಈ ಕಾಳು ಅಥವಾ ತಾಳನ್ನು ಹಬ್ಬದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.ಇದನ್ನು ಊಟಕ್ಕೆ ಅಥವಾ ಚಪಾತಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ.
* ಒಗ್ಗರಣೆ - ಎಣ್ಣೆಯನ್ನು ಬಿಸಿಮಾಡಿ, ಸಾಸಿವೆ, ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ.
*ಕುಕ್ಕರ್ ನಲ್ಲಿ ತಯಾರಿಸುವುದಾದರೆ ಮೊದಲು ಸ್ವಲ್ಪ ಕಾಳನ್ನು ಬೇಯಿಸಿ,ಒಗ್ಗರಣೆ ಮತ್ತು ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.

Saturday, January 17, 2009

Yoghurt Raita -ಮೊಸರು ರಾಯಿತ:

ಮೊಸರು ರಾಯಿತ:

ಮೊಸರಿಗೆ ,ಉಪ್ಪು,ಮೆಣಸಿನಪುಡಿ,ಹೆಚ್ಚಿದ ಕೊತ್ತುಂಬರಿಸೊಪ್ಪು ಮತ್ತು ಚಿಟಿಕೆ ಚಾಟ್ ಮಸಾಲಾ ಹಾಕಿ ಬೆರೆಸಿ. ಸಿಂಪಲ್ ರಾಯಿತ ರೆಡಿ.

****************************************

ಒಣದ್ರಾಕ್ಷಿ ಮತ್ತು ಅಂಜೂರದ ರಾಯಿತ:

ಮೊಸರಿಗೆ ದ್ರಾಕ್ಷಿಯನ್ನು ಮತ್ತು ಅಂಜೂರವನ್ನು ಪುಡಿಮಾಡಿ ಹಾಕಿ,ಉಪ್ಪು ಮತ್ತು ಮೆಣಸಿನಪುಡಿ ಉದುರಿಸಿ, ಬೆರೆಸಿ

Wednesday, November 19, 2008

Seemebadanekaayi Sabji - ಸೀಮೆಬದನೆಕಾಯಿ ಪಲ್ಯ

ಸೀಮೆಬದನೆಕಾಯಿ ಪಲ್ಯ:

ಸಾಮಗ್ರಿಗಳು:
ಸೀಮೆಬದನೆಕಾಯಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ಮೊದಲು ಸೀಮೆಬದನೆಕಾಯಿಯನ್ನು ತುರಿದುಕೊಳ್ಳಿ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಸೀಮೆಬದನೆಕಾಯಿತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಇದು ಬೇಗ ಬೇಯುವುದರಿಂದ ಒಂದೆರಡು ಚಮಚ ಮಾತ್ರ ನೀರು ಚಿಮುಕಿಸಿ. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Sunday, November 16, 2008

Cucumber Green Salad/ಸೌತೆಕಾಯಿ ಗ್ರೀನ್ ಸಲಾಡ್

ಸೌತೆಕಾಯಿ ಗ್ರೀನ್ ಸಲಾಡ್:

ಸೌತೆಕಾಯಿ
ನಿಂಬೆರಸ
ಹಸಿಮೆಣಸಿನಕಾರ
ಕೊತ್ತುಂಬರಿಸೊಪ್ಪು
ಉಪ್ಪು

ವಿಧಾನ:
ಹಸಿಮೆಣಸಿನಕಾರ ತಯಾರಿಸಲು-
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ರುಬ್ಬಿಕೊಳ್ಳಿ.


ಸೌತೆಕಾಯಿಯನ್ನು ದಪ್ಪ ಚೂರುಗಳಾಗಿ ಹೆಚ್ಚಿಕೊಂಡು,ಅದಕ್ಕೆ ನಿಂಬೆರಸ,ಉಪ್ಪು,ಕೊತ್ತುಂಬರಿಸೊಪ್ಪು ಮತ್ತು ಹಸಿಮೆಣಸಿನಕಾರ ಹಾಕಿ ಚೆನ್ನಾಗಿ ಬೆರೆಸಿ. ತಕ್ಷಣ ತಿನ್ನಿ.

Wednesday, November 12, 2008

Tamarind gojju / ಹುಣಸೆಗೊಜ್ಜು


ಹುಣಸೆಹಣ್ಣಿನ ಹುಳಿಗೊಜ್ಜು:

ಸಾಮಗ್ರಿಗಳು:

ಹುಣಸೆಹಣ್ಣಿನರಸ - ಒಂದು ಬಟ್ಟಲು
ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ
ಹಸಿಮೆಣಸಿನಕಾಯಿ -ಒಂದು ಉದ್ದಕ್ಕೆ ಹೆಚ್ಚಿ
ಕಾರದ ಪುಡಿ ರುಚಿಗೆ
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು

ವಿಧಾನ:
ಹುಣಸೆಹಣ್ಣಿನ ರಸವನ್ನು ಸ್ವಲ್ಪ ನೀರು ಹಾಕಿ ಬೆರೆಸಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ,ಕಾರದ ಪುಡಿ,ಉಪ್ಪು ಮತ್ತು ಕೊತ್ತುಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಿವುಚಿ. ಸ್ವಲ್ಪ ಸಾರಿನ ಪುಡಿ ಬೇಕಾದರೂ ಹಾಕಬಹುದು. ಹುಣಸೆಗೊಜ್ಜು ರೆಡಿ. ಇದು ಉಪ್ಪಿಟ್ಟಿನ ಜೊತೆ ಒಳ್ಳೆಯ ಜೊತೆ. ಅದಕ್ಕೆ ಕಲಸಿಕೊಂಡು ತಿನ್ನಬಹುದು. ಅನ್ನಕ್ಕೂ ಸೈ. ಅರುಚಿ ಆದವರಿಗೂ ಮತ್ತು ಪಿತ್ತಕ್ಕೂ ಒಳ್ಳೆಯದು.

Friday, October 17, 2008

Dates Raita / ಖರ್ಜೂರದ ರಾಯಿತ:

ಸಾಮಗ್ರಿಗಳು:

ಖರ್ಜೂರ - ಐದು/ಆರು
ಕಾಯಿತುರಿ ಸ್ವಲ್ಪ
ಕಾಳು ಮೆಣಸಿನ ಪುಡಿ
ಉಪ್ಪು
ಮೊಸರು

ವಿಧಾನ:
ಖರ್ಜೂರವನ್ನು ಮೊದಲು ಮಿಕ್ಸಿಗೆ ಹಾಕಿ, ನುಣ್ಣಗೆ ಮಾಡಿಕೊಂಡು, ಅದಕ್ಕೆ ಕಾಯಿತುರಿ,ಉಪ್ಪು ಹಾಕಿ ಸ್ವಲ್ಪವೇ ನೀರು ಹಾಕಿ ತರಿತರಿಯಾಗಿ ರುಬ್ಬಿ, ಅದಕ್ಕೆ ಮೊಸರು ಮತ್ತು ಮೆಣಸಿನ ಪುಡಿ ಸೇರಿಸಿ.
ಇದು ತುಂಬಾ ಒಳ್ಳೆಯ ಆರೋಗ್ಯಕರ ರಾಯಿತ.

Popular Posts