Showing posts with label Paratha / Parota -ಪರೋಟ. Show all posts
Showing posts with label Paratha / Parota -ಪರೋಟ. Show all posts

Saturday, March 20, 2010

Holige/Obbattu- Kadalebele Holige/ಹೋಳಿಗೆ/ಒಬ್ಬಟ್ಟು

ಪ್ರತಿ ಹಬ್ಬದಲ್ಲಿಯೂ ತೊಗರಿಬೇಳೆಯ ಹೋಳಿಗೆ ತಯಾರಿಸುತ್ತೇವೆ. ಈ ಸಾರಿ ಯಾಕೆ ಕಡ್ಲೆಬೇಳೆ ಹೋಳಿಗೆಯನ್ನು ತಯಾರಿಸಬಾರದು?!!






"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು "ಹೋಳಿಗೆ" ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಈಗ ಇಲ್ಲಿ ಕಡ್ಲೆಬೇಳೆ ಹೋಳಿಗೆಯನ್ನು ತಯಾರಿಸುವ ರೀತಿ ತಿಳಿಯೋಣ.


ಕಡ್ಲೆಬೇಳೆ ಹೋಳಿಗೆ:

ಬೇಕಾಗುವ ಸಾಮಗ್ರಿಗಳು:

ಕಡ್ಲೆಬೇಳೆ-  ಅರ್ಧ ಕೆಜಿ
ತೆಂಗಿನಕಾಯಿ ತುರಿ -  ಒಂದು ಬಟ್ಟಲು
ಬೆಲ್ಲ ರುಚಿಗೆ -  ಕುಟ್ಟಿರುವುದು
ಏಲಕ್ಕಿ ಪುಡಿ ಸ್ವಲ್ಪ
ಮೈದಾಹಿಟ್ಟು -  ಎರಡು ಬಟ್ಟಲು
ಚಿರೋಟಿ ರವೆ -  ಕಾಲು ಕಪ್
ಹಾಲು -  ಕಾಲು ಕಪ್
ತುಪ್ಪ -  ಎರಡು ಚಮಚ
ಚಿಟಿಕೆ ಅರಿಸಿನ
ಉಪ್ಪು ಚಿಟಿಕೆ
ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ, ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ಒಂದು ಅಥವಾ ಎರಡು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು. ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ. ಉಪಯೋಗಿಸುವಾಗ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ, ಹೀಗೆ ಕಲೆಸಿರುವ ಹಿಟ್ಟನ್ನು "ಕಣಕ" ಎಂದು ಕರೆಯುತ್ತೀವಿ.

ನಂತರ ಕಡ್ಲೆಬೇಳೆಯನ್ನು, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಹೆಚ್ಚು ನೀರು ಹಾಕಿ ಬೇಯಿಸಿಕೊಳ್ಳಿ. ಆಗ ಅದಕ್ಕೆ ಒಂದು ಇಂಚು ಶುಂಠಿ ಹಾಕಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಾಗಲೇ ತೆಗೆಯಬೇಕು. ಆಗಾಗಿ ಬೇಳೆ ಬೇಯುವಾಗ ನೋಡುತ್ತಿರಿ. ಅಂಚು ಒಡೆದು ಬೆಂದಿದೆ ಎನಿಸಿದ ಮೇಲೆ ಬೆಂದ ಕಡ್ಲೆಬೇಳೆಯ ನೀರನ್ನು ಬಸಿದುಕೊಳ್ಳಿ. ಶುಂಠಿಯನ್ನು ತೆಗೆದುಹಾಕಿ. ಆಮೇಲೆ ಬಸಿದ ಬೇಳೆಗೆ ಕುಟ್ಟಿದ ಬೆಲ್ಲ ಸೇರಿಸಿ, ಬೆಂದ ಬೇಳೆಯ ಅಳತೆಗೆ ಅರ್ಧದಷ್ಟು ಬೆಲ್ಲವನ್ನು ಸರಿಯಾಗಿ ಹಾಕಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಎಲ್ಲವನ್ನು ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಎಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಬೆಲ್ಲ ಮತ್ತು ಬೇಳೆ ಹೊಂದಿದ ಮೇಲೆ ಸ್ಟೌವ್ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ಈ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೇರಿಸದೆ ರುಬ್ಬಬೇಕು. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ "ಹೂರಣ"ವೆಂದು ಕರೆಯುತ್ತೇವೆ.
--ಇಲ್ಲಿಯವರೆಗೂ ಕಣಕ ಮತ್ತು ಹೂರಣವನ್ನು ತಯಾರಿಸಿಕೊಂಡಿದ್ದಾಯಿತು.

• ಈಗ ಹೋಳಿಗೆ ಹೇಗೆ ಮಾಡೋದು ತಿಳಿಯೋಣ:

• ಮೈದಾ ಮಿಶ್ರಣವನ್ನು ದಪ್ಪ ಗೋಲಿಗಾತ್ರದ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
                        • ಹೂರಣದ ಮಿಶ್ರಣವನ್ನು ಕಿತ್ತಳೆ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.




• ಬಾಳೆ ಎಲೆ/ಅಲ್ಯುಮಿನಿಯಂ ಫಾಯಿಲ್/ ಪ್ಲಾಸ್ಟಿಕ್ ಕವರ್/ ಹೋಳಿಗೆ ತಟ್ಟುವ ಕವರ್ -ನಿಮಗೆ ಯಾವುದು ಬೇಕೋ ಅದು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮೊದಲು ಕಣಕವನ್ನು ಇಟ್ಟು ಸ್ವಲ್ಪ ಸಣ್ಣ ಪೂರಿ ಅಳತೆಗೆ ಒತ್ತಿಕೊಳ್ಳಿ. ಆಗೇ ಕೈನಲ್ಲಿಯೇ ತಟ್ಟಬಹುದು. ಅದರ ಮಧ್ಯ ಭಾಗಕ್ಕೆ ಬೇಳೆ ಹೂರಣವನ್ನು ಇಟ್ಟು ಒಂದು ಬದಿಯಿಂದ ಹಿಟ್ಟನ್ನು ತೆಗೆದು ಮೇಲೆ ಹಾಕುತ್ತಾ ಸ್ವಲ್ಪ ಸ್ವಲ್ಪವೇ ಹಾಕಿ, ಹೀಗೆ ಎಲ್ಲವನ್ನು ಅಂದರೆ ಹೂರಣವು ಕಾಣಿಸದಂತೆ ಒಳಭಾಗಕ್ಕೆ ಮುಚ್ಚಿದ ಮೇಲೆ ಅದನ್ನು ಕವರ್ ಮಾಡಿರುವ ತುದಿಯನ್ನು ಕೆಳಭಾಗಕ್ಕೆ ಹಾಕಿ, ಎಣ್ಣೆ ಸವರಿಕೊಂಡು ಮತ್ತೆ ಲಘುವಾಗಿ ಅದನ್ನು ಹಾಗೆಯೇ ತಟ್ಟಿ. ನಿಮಗೆ ಯಾವ ಅಳತೆ ಅಗಲ ಬೇಕೋ ಅಷ್ಟು ತಟ್ಟಿಕೊಂಡು, ಕಾಯಿಸುವ ತವಾ ಮೇಲೆ ಎಣ್ಣೆ ಹಚ್ಚಿ ಹೋಳಿಗೆಯನ್ನು ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಬದಿಯು ತಿರುವಿ ಹಾಕಿ ಎಣ್ಣೆ ಹಾಕಿ ಬೇಯಿಸಿ. ಅಗಲವಾದ ತಟ್ಟೆಯಲ್ಲಿ ಹಾಕಿ. ಇದೇ ರೀತಿ ಎಲ್ಲಾ ಹೋಳಿಗೆಗಳನ್ನು ತಯಾರಿಸಿ, ಒಂದರ ಮೇಲೆ ಒಂದು ಹಾಕಬೇಡಿ, ಪಕ್ಕಕ್ಕೆ ಜೋಡಿಸಿಕೊಳ್ಳಿ. ಹೋಳಿಗೆಯನ್ನು ತುಪ್ಪ ಹಾಕಿ, ತಿನ್ನಬಹುದು. ಜೊತೆಗೆ ಬೇಕಾದರೆ ಹಾಲನ್ನು ಕೂಡ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಾದ ಮತ್ತು ನಮ್ಮ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರು ತಯಾರಿಸುವ ಅಡಿಗೆ.

• ಕೆಲವರಿಗೆ ಹೋಳಿಗೆ ದಪ್ಪ ಇಷ್ಟಪಡುತ್ತಾರೆ. ಆಗ ತಟ್ಟುವಾಗ ಹೂರಣ ಜಾಸ್ತಿ ತುಂಬಿ, ಸ್ವಲ್ಪ ಚಿಕ್ಕದಾಗಿ ತಟ್ಟಿ.
• ತೆಳುವಾಗಿ ಇಷ್ಟಪಡುವವರು ತೆಳ್ಳಗೆ ತಟ್ಟಿಕೊಂಡು ಬೇಯಿಸಿ.
• ಹೂರಣ ತುಂಬಿ ಕವರ್ ಮಾಡುವಾಗ ಸರಿಯಾಗಿ ಮುಚ್ಚಿ. (ಸ್ಟಫ್ ಮಾಡಿಕೊಳ್ಳಿ)
• ಎಣ್ಣೆಯನ್ನು ಸವರಿಕೊಳ್ಳುತ್ತಾ ಇರಬೇಕಾಗುತ್ತದೆ. ಆಗ ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
• ಬೇಯಿಸುವಾಗಲೂ ಅಷ್ಟೇ ಹುಷಾರಾಗಿ ಬೇಯಿಸಿ. ಹೋಳಿಗೆಗಳು ಎರಡು ದಿನ ಹಾಳಾಗದೆ ಚೆನ್ನಾಗಿ ಇರುತ್ತವೆ.

Tuesday, January 19, 2010

Aloo Paratha - ಆಲೂ ಪರೋಟ

ಆಲೂ ಪರೋಟ:

ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು:

ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು
ಅಚ್ಚ ಖಾರದ ಪುಡಿ-ಕಾಲು ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಚಾಟ್ ಮಸಾಲಾ-ಕಾಲು ಚಮಚ
ಜೀರಿಗೆ ಪುಡಿ-ಅರ್ಧ ಚಮಚ
ಧನಿಯ ಪುಡಿ - ಅರ್ಧ ಚಮಚ

ಕಣಕದ ಸಾಮಗ್ರಿಗಳು:

ಮೈದಾಹಿಟ್ಟು
ಚಿಟಿಕೆ ಅರಿಸಿನ
ಕಾಲು ಚಮಚ ಉಪ್ಪು
ಒಂದು ಚಮಚ ಡಾಲ್ಡ

ತಯಾರಿಸುವ ವಿಧಾನ:

ಕಣಕಕ್ಕೆ ತಿಳಿಸಿರುವ ಸಾಮಗ್ರಿಗಳನ್ನು ಬೆರೆಸಿ, ಪೂರಿ ಹಿಟ್ಟಿನ ಹದಕ್ಕೆ ಕಲೆಸಿ, ಕಾಲು ಗಂಟೆ ನೆನೆಯಲು ಬಿಡಿ.
ಬೇಯಿಸಿದ ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ (ಮ್ಯಾಶ್), ಸಾಮಾನ್ಯವಾಗಿ ನುಣ್ಣಗೆ ಮಾಡಿಕೊಳ್ಳಿ, ಅದಕ್ಕೆ ಕಾರದಪುಡಿ, ಉಪ್ಪು,ಚಾಟ್ ಮಸಾಲಾ, ಜೀರಿಗೆ ಪುಡಿ ಮತ್ತು ಧನಿಯ ಪುಡಿಯನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತು ಕೊಳ್ಳುವಂತೆ, ಕಲೆಸಿ, ಜೊತೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ ಸರಿಯಾಗಿ ಕಲೆಸಿ ಪುಟ್ಟ ಪುಟ್ಟ ಉಂಡೆ ತಯಾರಿಸಿಡಿ.
ಕಣಕವನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ. ಒಂದೊಂದಾಗಿ ಚಿಕ್ಕ ಮೈದಾ ಹಿಟ್ಟಿನ ಉಂಡೆ ತೆಗೆದುಕೊಂಡು ಅದನ್ನು ಎಣ್ಣೆ ಹಚ್ಚಿದ ಪ್ಲಾಸ್ಟಿಕ ಹಾಳೆ/ಅಲ್ಯುಮಿನಿಯಂ ಫಾಯಿಲ್/ಬಾಳೆದೆಲೆಯ ಮೇಲೆ ಇಟ್ಟು ಚಿಕ್ಕ ಪೂರಿಯಂತೆ ಒತ್ತಿ ಅದರಲ್ಲಿ ಆಲೂ ಮಸಾಲ ಮಿಶ್ರಣವನ್ನು(ಹೂರಣವನ್ನು) ಇಟ್ಟು ಪೂರ್ತಿ ಕಣಕದಿಂದ ಮುಚ್ಚಿ.

ಕಣಕದಿಂದ ಆಲೂ ಮಸಾಲಾ ಮಿಶ್ರಣವನ್ನು (ಹೂರಣವನ್ನು) ಮುಚ್ಚಿ ತಯಾರಿಸಿದ ಉಂಡೆಗೆ ಎಣ್ಣೆ ಸವರಿಕೊಂಡು ಮೆಲ್ಲಗೆ ಪೂರಿಗಿಂತ ಸ್ವಲ್ಪ ದೊಡ್ಡದಾಗಿ ತಟ್ಟಿ {ದಪ್ಪ ಮತ್ತು ಅಳತೆ ನಿಮಗೆ ಬೇಕಾದಂತೆ ತಟ್ಟಿಕೊಳ್ಳಬಹುದು}, ಅದನ್ನು ಕಾದಿರುವ ತವಾ ಮೇಲೆ ಹಾಕಿ, ಎಣ್ಣೆ ಹಾಕಿ ಎರಡು ಬದಿ ಬೇಯಿಸಿ. ಚಪಾತಿ ತರಹ ಬೇಯಿಸಿ. ತೆಗೆಯಿರಿ, ಇದೇ ರೀತಿ ಮಿಕ್ಕ ಎಲ್ಲಾ ಉಂಡೆಗಳಿಂದ ಪರೋಟ ತಯಾರಿಸಿ. ಆಲೂಗೆಡ್ಡೆ ಪರೋಟ ತಿನ್ನಲು ತಯಾರಾಗುತ್ತದೆ. ಬೇಕೆನಿಸಿದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು. ಇಲ್ಲವೆಂದರೆ ಹಾಗೆ ತಿನ್ನಬಹುದು. ಮಕ್ಕಳು ಕೆಚಪ್ ಮತ್ತು ಸಾಸ್ ಜೊತೆ ಇಷ್ಟಪಡುತ್ತಾರೆ. ಇದನ್ನು ಮಕ್ಕಳಿಗೆ ಬಿಸಿಬಿಸಿಯಾಗಿ ಮಾಡಿಕೊಟ್ಟಾಗ ಖುಷಿಯಿಂದ ತಿನ್ನುತ್ತಾರೆ. ಇದರಲ್ಲಿ ಈರುಳ್ಳಿ ಉಪಯೋಗಿಸಿಲ್ಲ ಆಗಾಗಿ ಈರುಳ್ಳಿ ಸಿಗುತ್ತೆ ಅನ್ನುವಂತ ಮಕ್ಕಳಿಗೆ ಇದರಲ್ಲಿ ಈರುಳ್ಳಿ ಸಿಗದೇ ಇರುವುದರಿಂದ ತೊಂದರೆ ಇಲ್ಲದೆ ತಿನ್ನುತ್ತಾರೆ. ಕಾಯಿಚಟ್ನಿ ಜೊತೆ ತುಂಬಾ ಚೆನ್ನಾಗಿರುತ್ತದೆ.



* ಆಲೂಗೆಡ್ಡೆಯನ್ನು ಮ್ಯಾಶ್ ಮಾಡುವಾಗ ತುಂಬಾ ದಪ್ಪ ಬಿಟ್ಟರೆ,ಅದು ತಟ್ಟುವಾಗ ಹಿಟ್ಟಿನಿಂದ ಆಚೆ ಬರುತ್ತದೆ. ಅದಕ್ಕೆ ಸ್ವಲ್ಪ ಚೆನ್ನಾಗಿ ಮ್ಯಾಶ್ ಮಾಡಿ.
* ಪರೋಟ ಸ್ವಲ್ಪ ದಪ್ಪ ಬೇಕೆನಿಸಿದರೆ, ಹಿಟ್ಟು ಮತ್ತು ಹೂರಣವನ್ನು ಜಾಸ್ತಿ ತೆಗೆದುಕೊಂಡು ತಯಾರಿಸಿ. ತೆಳು ಅಥವ ದಪ್ಪ ಹೇಗೆ ತಯಾರಿಸಿದರು ಚೆನ್ನಾಗಿರುತ್ತದೆ.

Monday, November 2, 2009

Kidney Beans Sabji - ಹುರುಳೀಕಾಯಿಕಾಳು ಉಸಲಿ:

ಹುರುಳೀಕಾಯಿಕಾಳು ಉಸಲಿ:
ನಮ್ಮ ದೇಶದಲ್ಲಿ ಹುರುಳೀಕಾಯಿಕಾಳು ಸುಮಾರು ಬಣ್ಣಗಳಲ್ಲಿ ಬರುತ್ತದೆ. ಇದು ಹುರುಳಿಕಾಯಿಯಲ್ಲಿ ಸಿಗುತ್ತದೆ, ಇದು ಸಿಪ್ಪೆ ಸಮೇತ ಸಿಗುತ್ತದೆ. ಅಲ್ಲದೇ ಒಣಗಿದ ಕಾಳುಗಳು ಸಿಗುತ್ತವೆ ಮತ್ತು ಈಗ ಕ್ಯಾನ್ ನಲ್ಲಿ ಸಹ ಸಿಗುತ್ತದೆ.ಎಲ್ಲಕ್ಕಿಂತ ಹಸಿಕಾಳಿನಕಾಯಿ ತಂದು ಕಾಳು ಬಿಡಿಸಿ ಮಾಡುವುದು ಹೆಚ್ಚು ರುಚಿಯಾಗಿರುತ್ತದೆ ಮತ್ತು ಬೇಗ ಬೇಯುತ್ತದೆ. ಕ್ಯಾನ್ ನಲ್ಲಿ ಕೂಡ ಬಿಳಿ ಕಿಡ್ನಿ ಬೀನ್ಸ್ ಮತ್ತು ಕೆಂಪು ಕಿಡ್ನಿ ಬೀನ್ಸ್ ಗಳು ಸಿಗುತ್ತವೆ.

ಸಾಮಗ್ರಿಗಳು:

ಹುರುಳೀಕಾಯಿಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ

ವಿಧಾನ:

ಹುರುಳೀಕಾಳನ್ನು ಬಿಡಿಸಿಕೊಂಡು ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ.ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ,ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ,ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.

Popular Posts