Monday, April 30, 2007

Nippattu - ನಿಪ್ಪಟ್ಟು

ನಿಪ್ಪಟ್ಟು:

ನನ್ನ ಅಮ್ಮ ತುಂಬಾ ಚೆನ್ನಾಗಿ ನಿಪ್ಪಟ್ಟು ಮಾಡುತ್ತಿದ್ದರು. ಅವರು ನಮ್ಮ ತರಹ ರೆಡಿಮೇಡ್ ಅಕ್ಕಿಹಿಟ್ಟು ಬಳಸದೆ,ಅದಕ್ಕಾಗಿಯೇ ಅಕ್ಕಿ ತೊಳೆದು ಹಾಕಿ, ಒಣಗಿಸಿ,ಉದ್ದಿನಬೇಳೆ,ಕಡಲೆ ಎಲ್ಲಾ ಹಾಕಿ ಮಿಲ್ ಮಾಡಿಸುತ್ತಿದ್ದರು. ಅವರ ನಿಪ್ಪಟ್ಟನ್ನು ತಿಂದವರೆಲ್ಲರು ಹೊಗಳುತ್ತಿದ್ದರು. ನಿಪ್ಪಟ್ಟು ಮಾಡುವುದಕ್ಕೆ ಅದೆಷ್ಟೋ ವೇಳೆ ತೆಗೆದು ಕೊಳ್ಳುತ್ತಾ ಅದರ ಕಡೆಯೇ ನಿಗಾವಹಿಸುತ್ತಿದ್ದರು. ಅದರ ಹದ ಯಾವಾಗಲೂ ಸರಿಯಾಗಿಯೇ ಇರಬೇಕು. ಒಂದು ಹೇಳಬೇಕೆಂದರೆ ನಮ್ಮಗಳನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಎಲ್ಲವನ್ನು ತಾನೇ ಮಾಡಿಕೊಳ್ಳುತ್ತಿದ್ದರು. ಈ ರೀತಿ ಅವರಿಗೆ ಎಲ್ಲದರಲ್ಲು ಫರ್ಫೆಕ್ಟ್ ಆಗಿರಬೇಕು. ಆದರೆ ಅಮ್ಮನ ನಿಪ್ಪಟ್ಟು ರುಚಿ ನನಗೆ ಇದುವರೆಗೂ ಬಂದಿಲ್ಲ. ನನ್ನ ಅಮ್ಮ ಮಾಡುತ್ತಿದ್ದ ನಿಪ್ಪಟ್ಟು ರುಚಿನೇ ರುಚಿ,ಮತ್ತೆಲ್ಲು ತಿಂದಿಲ್ಲ ಎನಿಸುತ್ತೆ. ಎಷ್ಟುಬಾರಿ ತಯಾರಿಸಿದರು,ಆ ರೀತಿ ನಿಪ್ಪಟ್ಟು ನನಗೆ ಮಾಡಲು ಆಗಿಲ್ಲ. ಆದರೂ ಇದು ನಾನು ತಯಾರಿಸುವ ರೀತಿ ಬರೆದಿದ್ದೇನೆ.ನಿಪ್ಪಟ್ಟು ಅಂತ ರುಚಿ ಸಿಗುತ್ತೆ.
ಬೇಕಾಗುವ ಸಾಮಗ್ರಿಗಳು:

ಅಕ್ಕಿ ಹಿಟ್ಟು - ಒಂದು ಬಟ್ಟಲು
ಹುರಿಗಡಲೆ ಹಿಟ್ಟು - ಎರಡು ದೊಡ್ಡ ಚಮಚ
ಕಡಲೆ ಹಿಟ್ಟು - ಒಂದೆರಡು ಚಮಚ
ಮೈದಾ ಹಿಟ್ಟು - ಅರ್ಧ ಬಟ್ಟಲು
ಕರಿಬೇವಿನಸೊಪ್ಪು-ಸಣ್ಣಗೆ ಮುರಿದಿದ್ದು
ಕಡ್ಲೆಕಾಯಿ ಬೀಜಗಳು - ಸ್ವಲ್ಪ
ಹುರಿಗಡಲೆ- ಸ್ವಲ್ಪ
ಎಳ್ಳು ಸ್ವಲ್ಪ
ಅಚ್ಚಕಾರದ ಪುಡಿ ರುಚಿಗೆ
ಉಪ್ಪು ರುಚಿಗೆ

ತಯಾರಿಸುವ ವಿಧಾನ:

ಅಕ್ಕಿಹಿಟ್ಟು,ಮೈದಾಹಿಟ್ಟು,ಹುರಿಗಡಲೆ ಹಿಟ್ಟು,ಕಡ್ಲೆಹಿಟ್ಟು,ಕಡ್ಲೆಕಾಯಿಬೀಜ (ಕಡ್ಲೆಕಾಯಿಬೀಜಗಳನ್ನು ಸ್ವಲ್ಪ ದಪ್ಪವಾಗಿ ಕುಟ್ಟಿಹಾಕಿ),ಹುರಿಗಡಲೆ, ಕರಿಬೇವು,ಎಳ್ಳು,ಉಪ್ಪು,ಕಾರದ ಪುಡಿ ಮತ್ತು ಕಾಯಿಸಿರುವ ಎರಡು ಚಮಚ ಎಣ್ಣೆಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಿ. ಅದಕ್ಕೆ ನೀರು ಹಾಕಿ ಮೃದುವಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟನ್ನು ಚೆನ್ನಾಗಿ ನಾದಿ. ಅದರಿಂದ ದಪ್ಪ ಗೋಲಿ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಕವರ್ ಅಥವಾ ಬಾಳೆದೆಲೆ / ಅಲ್ಯುಮಿನಿಯಂ ಫಾಯಿಲ್ ಮೇಲೆ ಉಂಡೆಗಳನ್ನು ಸಣ್ಣ ಪೂರಿಯಂತೆ,ಕೈನಿಂದಲೇ ಅದುಮಿಕೊಂಡು ಪುಟ್ಟ ಪುಟ್ಟದಾಗಿ ತಟ್ಟಿ. ಸ್ವಲ್ಪ ದಪ್ಪವಿರಲಿ, ಅದೇ ರೀತಿ ಎಲ್ಲವನ್ನು ತಯಾರಿಸಿಕೊಳ್ಳುತ್ತಾ. ಹಾಗೆ ಕಾದಿರುವ ಎಣ್ಣೆಗೆ ಹಾಕಿ ಎರಡು ಬದಿ ಬೇಯಿಸಿ. ಹೊಂಬಣ್ಣ ಬರುವವರೆಗೂ ಕರಿಯಿರಿ. ಹದವಾಗಿ ಕರಿದು. ಆಮೇಲೆ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ. ನಿಪ್ಪಟ್ಟುಗಳು ತುಂಬಾ ರುಚಿಯಾಗಿರುತ್ತವೆ. ಯಾವ ಸಮಯದಲ್ಲಾದರೂ ತಿನ್ನಲು ಚೆಂದ. ತಿಂದಷ್ಟು ರುಚಿ ಕೊಡುವ ನಿಪ್ಪಟ್ಟು ತಯಾರಿಸಿ,ಎಷ್ಟು ದಿನ ಬೇಕಾದರೂ ಇಟ್ಟುಕೊಳ್ಳಬಹುದು. ಆದರೆ ಅದು ಖಾಲಿಯಾಗದೆ ಇರಬೇಕಲ್ಲಾ ಸ್ಟೋರ್ ಮಾಡಿಟ್ಟು ಕೊಳ್ಳಲು ಅಲ್ವಾ!!


* ಕೊಬ್ಬರಿ ತುರಿ ಸಹ ಕುಟ್ಟಿ ಹಾಕಬಹುದು.
* ಕಡಲೆ ಹಿಟ್ಟು ಸಹ ಹಾಕಬಹುದು.ಪೂರ್ತಿ ಕಡಲೆಹಿಟ್ಟು ಹಾಕಿದರೆ,ಅದು ಸ್ವಲ್ಪ ಗಟ್ಟಿಯಾಗಿ ಬರುತ್ತದೆ.
* ನಿಪ್ಪಟ್ಟು ತಯಾರಿಸುವಾಗ ಹಿಟ್ಟನ್ನು ಹದವಾಗಿ ಕಲೆಸಿಕೊಳ್ಳಿ. ಸ್ವಲ್ಪ ಸ್ವಲ್ಪ ಹಿಟ್ಟನ್ನು ಕಲೆಸಿ ಮಾಡಿದರೆ ಇನ್ನು ಚೆನ್ನಾಗಿರುತ್ತದೆ.
* ಬೇಯಿಸುವಾಗಲೂ ಅಷ್ಟೇ ಸರಿಯಾಗಿ ಎಣ್ಣೆ ಕಾಯಿಸಿ,ಸರಿಯಾದ ಉರಿಯಲ್ಲಿ ಬೇಯಿಸಿ,ಬೇಗ ತೆಗೆದರೆ ಒಳಗೆ ಬೇಯುವುದಿಲ್ಲ. ಉರಿ ಹೆಚ್ಚಿಸಿದರೆ ಬೇಗ ಕಂದು ಬಣ್ಣ ಬರುತ್ತದೆ, ರುಚಿಯೂ ಕೆಡುತ್ತದೆ.
* ತಟ್ಟುವಾಗಲೂ ಸಹ ಸರಿಯಾಗಿ ಒಂದೇ ಸಮ ತಟ್ಟಿ.ಅಂಚು ಕತ್ತರಿಸದಂತೆ ತಟ್ಟಿಕೊಳ್ಳಿ.
* ಜಾಸ್ತಿ ಕಡಲೆ ಹಿಟ್ಟು ಅಥವಾ ಹಿಟ್ಟು ತುಂಬಾ ಮೆತ್ತಗಾದರೆ /ಕಲೆಸಿದ ರೀತಿ ಸರಿಯಿಲ್ಲವೆಂದರೆ ಎಣ್ಣೆ ಜಾಸ್ತಿ ಹೀರಿಕೊಳ್ಳುತ್ತದೆ / ಕರಗುತ್ತದೆ.
* ಒಂದೊಂದೆ ಎಣ್ಣೆಗೆ ಬಿಡಬೇಕು ಅಂತ ಏನು ಇಲ್ಲ,ನಾಲ್ಕೈದು ಒಟ್ಟಿಗೆ ಹಾಕಿ ಬೇಯಿಸಬಹುದು.
* ಇದೇನಪ್ಪಾ ನಿಪ್ಪಟ್ಟು ತಯಾರಿಸಲು, ಇಷ್ಟೊಂದು ಕಷ್ಟನಾ! ಅನ್ಕೊಬೇಡಿ. ಮೊದಲು ಎಲ್ಲಾ ಅಡಿಗೆಗಳು ಹೀಗೆ. ಆದರೂ ಎಣ್ಣೆಯಲ್ಲಿ ಕರಿದ ತಿಂಡಿಗಳು ಹೇಗಿದ್ರು ರುಚಿಯಾಗಿರುತ್ತವೆ.ಒಮ್ಮೆ ಕೆಟ್ಟರೆ ಬಿಡದೇ ಮತ್ತೆ ಪ್ರಯತ್ನಿಸಿ.

Chow Chow Bhath - ಚೌಚೌ ಭಾತ್

ಖಾರಾಭಾತ್ ಮತ್ತು ಕೇಸರಿಭಾತ್ ಎರಡನ್ನು ಜೊತೆಯಲ್ಲಿ ಕೊಟ್ಟರೆ ಅದನ್ನು "ಚೌಚೌ ಭಾತ್" ಎನ್ನುತ್ತಾರೆ. ಈಗ ಅವೆರಡನ್ನು ತಯಾರಿಸುವ ರೀತಿ ತಿಳಿಯೋಣ.

ಖಾರಾ ಭಾತ್:

ಬೇಕಾಗುವ ಸಾಮಗ್ರಿಗಳು:

ರವೆ
ಎಣ್ಣೆ
ಸಾಸಿವೆ
ಹೆಚ್ಚಿದ ಹಸಿಮೆಣಸಿನಕಾಯಿ
ಹೆಚ್ಚಿದ ಈರುಳ್ಳಿ
ಕರಿಬೇವು ಸ್ವಲ್ಪ
ಕಡ್ಲೆಬೇಳೆ
ಉದ್ದಿನಬೇಳೆ
ಶುಂಠಿ ತುರಿ - ಒಂದು ಚಮಚ
ತರಕಾರಿಗಳು- ಒಂದು ಬಟ್ಟಲು
ಕ್ಯಾರೆಟ್,ಬೀನ್ಸ್,
ಆಲೂ,ಬಟಾಣಿ
ಉಪ್ಪು
ಕಾಯಿತುರಿ ಸ್ವಲ್ಪ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:

ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು/ಆರು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ.ಶುಂಠಿ ತುರಿ ಮತ್ತು ಈರುಳ್ಳಿಯನ್ನು ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ನಂತರ ತರಕಾರಿಗಳನ್ನು ಹಾಕಿ,ಹುರಿದು. ಕೆಲವು ನಿಮಿಷ ಬೇಯಿಸಿದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೆ ಈ ತರಕಾರಿ ಉಪ್ಪಿಟ್ಟನ್ನು ತಿನ್ನಿ.
* ಫ್ರೊಜ಼ನ್ ತರಕಾರಿಗಳನ್ನು ಉಪಯೋಗಿಸಬಹುದು. ಮಿಕ಼್ಸೆಡ್ ವೆಜೆಟಬಲ್ಸ್ ತಗೊಂಡರೆ ಅನುಕೂಲ.ಇದು ಬೇಗ ಮತ್ತು ಸುಲಭವಾಗುತ್ತದೆ.
* ತರಕಾರಿ ಹೆಚ್ಚಿಕೊಳ್ಳುವ ಸಮಯ ಉಳಿಯುತ್ತದೆ ಹಾಗೂ ತರಕಾರಿ ಸಹ ಫ಼್ರೆಶ್ ಇರುತ್ತದೆ.

*******************************
ಕೇಸರಿ ಭಾತ್:

ಬೇಕಾಗುವ ಸಾಮಗ್ರಿಗಳು:

ರವೆ (ಸಣ್ಣ ರವೆ/ಚಿರೋಟಿ ರವೆ)-ಒಂದು ಕಪ್
ಸಕ್ಕರೆ ರುಚಿಗೆ
ತುಪ್ಪ -ಎರಡು ಚಮಚ
ರಿಫೈಂಡ್ ಆಯಿಲ್ -ಎರಡು ಚಮಚ
ಹಾಲು - ಅರ್ಧ ಕಪ್
ಕೇಸರಿ ದಳಗಳು ಸ್ವಲ್ಪ
ಏಲಕ್ಕಿ ಪುಡಿ
ದ್ರಾಕ್ಷಿ ಮತ್ತು ಗೋಡಂಬಿ

ತಯಾರಿಸುವ ರೀತಿ:

ಒಂದೆರಡು ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಿ.
ಮೊದಲು ರವೆಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ, ಹಸಿವಾಸನೆ ಹೋಗಿ ಘಂ ಎನ್ನುವ ವಾಸನೆ ಬರುವವರೆಗೂ ರವೆಯನ್ನು ಸೀದಿಸದೆ ಹುರಿದುಕೊಳ್ಳಿ.
ಪಾತ್ರೆಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿಯಿರಿ, ಅದಕ್ಕೆ ಹಾಲು ಮತ್ತು ಸ್ವಲ್ಪ ನೀರು ನಿಮಗೆ ಬೇಕಾದ ಅಳತೆ ಹಾಕಿಕೊಂಡು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಿ ಕುದಿ ಬರುತ್ತಿರುವಾಗ ಏಲಕ್ಕಿ ಪುಡಿ ಮತ್ತು ಹಾಲಿನಲ್ಲಿ ನೆನೆಸಿದ ಕೇಸರಿದಳ ಹಾಕಿ, ಮತ್ತೆರಡು ಚಮಚ ತುಪ್ಪ ಹಾಕಿ, ಆಮೇಲೆ ಹುರಿದಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟು ಕಟ್ಟದಂತೆ ಎಲ್ಲ ಬೆರೆತುಕೊಳ್ಳುವಂತೆ ಚೆನ್ನಾಗಿ ತಿರುಗಿಸಿ. ಕೆಳಗಿಳಿಸಿ,ಮುಚ್ಚಿಡಿ. ಕೇಸರಿಭಾತ್ ತಯಾರಿಸುವಾಗ ಸ್ವಲ್ಪ ತೆಳುವಾಗಿ ತಯಾರಿಸಿ, ನಂತರ ತಣ್ಣಗಾದ ಮೇಲೆ ಅದು ತುಂಬಾ ಗಟ್ಟಿಯಾಗುತ್ತದೆ. ತುಪ್ಪ ಸ್ವಲ್ಪ ಜಾಸ್ತಿ ಹಾಕಿ. ಬಿಸಿಬಿಸಿಯಾದ ಕೇಸರಿಭಾತ್ ತಿನ್ನಲು ತಯಾರಾಗಿದೆ. ಬಿಸಿಯಾದ ಕೇಸರಿಭಾತ್ ಬಹಳ ಚೆನ್ನಾಗಿರುತ್ತದೆ.

* ರವೆಯನ್ನು ಹುರಿಯುವಾಗ ತುಂಬಾ ಹುಷಾರಾಗಿ ಹುರಿಯಬೇಕು.
* ಕೇಸರಿಭಾತ್ ಗೆ ಬರೀ ನೀರನ್ನು ಹಾಕದೆ ಹಾಲನ್ನು ಸೇರಿಸಿದರೆ ರುಚಿ ಹೆಚ್ಚು.
* ತುಪ್ಪದ ಜೊತೆ ಎಣ್ಣೆಯನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವುದಿಲ್ಲ.
* ಕೆಲವರು ಕೇಸರಿಬಣ್ಣ ಹಾಕುತ್ತಾರೆ, ಇದರಿಂದ ಕೇಸರಿಭಾತ್ ಬಣ್ಣ ಚೆನ್ನಾಗಿ ಆಕರ್ಷಕವಾಗಿ ಬರುತ್ತದೆ. ಆದರೆ ಕೇಸರಿ ದಳಗಳು ಆರೋಗ್ಯಕ್ಕೆ ಒಳ್ಳೆಯದು, ಆಗಾಗಿ ಅದನ್ನು ಉಪಯೋಗಿಸಿ. ಬಣ್ಣ ಹಾಕಲೇ ಬೇಕೆನಿಸಿದವರು ಒಳ್ಳೆಯ ಪ್ರಾಡಕ್ಟ್ ಬಣ್ಣವನ್ನು ತನ್ನಿ.ಅದು ಚಿಟಿಕೆ ಹಾಕಿದರೆ ಸಾಕು.
* ಇದು ಬೇಗನೇ ತಯಾರಿಸಬಹುದಾದಂತಹ ಸಿಹಿ. ಕೆಲವರು ಈ ಸಿಹಿತಿಂಡಿಗೆ "ಶಿರಾ"ಎಂದು ಕೂಡ ಕರೆಯುತ್ತಾರೆ.

Sunday, April 22, 2007

ಪುದೀನ ಸೊಪ್ಪಿನ ಚಟ್ನಿ/ Mint chutney

ಪುದೀನ ಸೊಪ್ಪಿನ ಚಟ್ನಿ:

ಸಾಮಗ್ರಿಗಳು:
ಪುದೀನಸೊಪ್ಪು - ಒಂದು ಕಟ್ಟು
ಕೊತ್ತುಂಬರಿಸೊಪ್ಪು ಸ್ವಲ್ಪ
ಹಸಿರುಮೆಣಸಿನಕಾಯಿಗಳು ರುಚಿಗೆ
ಉಪ್ಪು ರುಚಿಗೆ
ನಿಂಬೆರಸ ಸ್ವಲ್ಪ

ವಿಧಾನ:
ಪುದೀನ ಮತ್ತು ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ಬಿಡಿಸಿ, ತೊಳೆದು ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ನಿಂಬೆರಸ ಹಾಕಿ ಬೆರೆಸಿ. ಪುದೀನ ಚಟ್ನಿ ತಯಾರಾಗುತ್ತದೆ.

Friday, April 20, 2007

Badam Puris - ಬಾದಾಮಿ ಸಿಹಿ ಪೂರಿ

ಬಾದಾಮಿ ಸಿಹಿ ಪೂರಿ:
ಸಾಮಗ್ರಿಗಳು:

ಬಾದಾಮಿ - ಒಂದು ಕಪ್
ಮೈದಾಹಿಟ್ಟು - ಒಂದು ಬಟ್ಟಲು
ಡಾಲ್ಡ / ಬೆಣ್ಣೆ / ತುಪ್ಪ- ಸ್ವಲ್ಪ
ಕೇಸರಿಬಣ್ಣ ಚಿಟಿಕೆ
ಚಿಟಿಕೆ ಉಪ್ಪು
ಸಕ್ಕರೆ - ಎರಡು ಕಪ್
ಕೊಬ್ಬರಿತುರಿ ಸ್ವಲ್ಪ
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

-ಮೊದಲು ಬಾದಾಮಿಯನ್ನು ಪೇಸ್ಟ್ ತರಹ ತಯಾರಿಸಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬಬೇಡಿ.
-ಬೇರೆ ಪಾತ್ರೆಯಲ್ಲಿ ಸಕ್ಕರೆ ಮತ್ತು ಒಂದು ಲೋಟ ನೀರು ಹಾಕಿ, ಅದನ್ನು ಕುದಿಸಿ, ಸ್ವಲ್ಪ ಗಟ್ಟಿ ಪಾಕ ಬಂದ ನಂತರ ಅದನ್ನು ತೆಗೆದಿಡಿ.
-ಮೈದಾ,ಡಾಲ್ಡ,ಕೇಸರಿಬಣ್ಣ ಮತ್ತು ಉಪ್ಪು ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಅರ್ಧಗಂಟೆ ಮುಚ್ಚಿಡಿ. ನಂತರ ಹಿಟ್ಟಿನಿಂದ ದಪ್ಪನೆಲ್ಲಿಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಪೂರಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಅದಕ್ಕೆ ಬಾದಾಮಿ ಪೇಸ್ಟ್ ಅನ್ನು ಸವರಿ ಪೂರಿಯನ್ನು ಮೊದಲು ಮಧ್ಯಕ್ಕೆ ಮಡಿಸಿ,ಮತ್ತೆ ಮಡಿಸಿ ಅಂದರೆ ಅದು ತ್ರಿಕೋನಾಕಾರದಲ್ಲಿ ಬರಬೇಕು.ಅದಕ್ಕೆ ತುದಿಗೆ ಒಂದು ಲವಂಗ ಸಿಕ್ಕಿಸಿ, ಆಮೇಲೆ ಅದನ್ನು ಕಾದಿರುವ ಎಣ್ಣೆಯಲ್ಲಿ ತೆಗೆದು ಹಾಕಿ.ಬೇಯಿಸಿ, ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ಬೇಗ ಬೇಯುತ್ತದೆ, ಆಗಾಗಿ ಉರಿ ನೋಡಿಕೊಳ್ಳಿ. ಎರಡು ಬದಿ ಚೆನ್ನಾಗಿ ಬೇಯಿಸಿ, ಬಂಗಾರದ ಬಣ್ಣ ಬಂದ ನಂತರ ಬೇಗ ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ತಕ್ಷಣವೇ ಸಕ್ಕರೆ ಪಾಕಕ್ಕೆ ಹಾಕಿ ತೆಗೆದು, ದೊಡ್ಡ ತಟ್ಟೆಯಲ್ಲಿ ಜೋಡಿಸಿ. ತಕ್ಷಣ ಹಾಕಿದರೆ ಸಕ್ಕರೆಪಾಕವನ್ನು ಅದು ಹೀರಿಕೊಳ್ಳುತ್ತದೆ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ತಿನ್ನಬಹುದು ಅಥವಾ ಬಿಸಿ ಇರುವಾಗಲು ನೀಡಬಹುದು, ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.
*ಕೊಬ್ರಿ ತುರಿಗೆ ಬಣ್ಣ ಸೇರಿಸಿ ಕಲರ್ ಫುಲ್ ಆಗಿಯೂ ತಯಾರಿಸಬಹುದು. ಕೊಬ್ಬರಿತುರಿ ಬೇಕಾದರೆ ಹಾಕಬಹುದು ನಿಮ್ಮಿಷ್ಟ.
*ಪೂರಿಯ ಮೇಲೆ ಬೇಕೆನಿಸಿದರೆ ಒಂದೊಂದು ಬಾದಾಮಿ ಇಟ್ಟು ಸರ್ವ್ ಮಾಡಬಹುದು.
*ಇದು ಬೇಗ ಹಾಳಾಗುವುದಿಲ್ಲ. ತಕ್ಷಣವೇ ತಿನ್ನಬೇಕು ಅಂತ ಇಲ್ಲ. ಎರಡು-ಮೂರು ದಿನ ಕೂಡ ಇಟ್ಟು ತಿನ್ನಬಹುದು.

Monday, April 16, 2007

Roasted Vermicilli Upma / ಶ್ಯಾವಿಗೆ ಉಪ್ಪಿಟ್ಟು


ಶ್ಯಾವಿಗೆ ಉಪ್ಪಿಟ್ಟು:
ಸಾಮಗ್ರಿಗಳು:

ಶ್ಯಾವಿಗೆ - ಒಂದು ಬಟ್ಟಲು
ನೀರು - ಎರಡು ಬಟ್ಟಲು
ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ
ಟಮೋಟ ಹೆಚ್ಚಿದ್ದು ಸ್ವಲ್ಪ
ಎಣ್ಣೆ, ಸಾಸಿವೆ, ಕರಿಬೇವು
ಕಡ್ಲೆಬೇಳೆ, ಉದ್ದಿನಬೇಳೆ
ಅರಿಶಿನ,ಉಪ್ಪು
ನಿಂಬೆರಸ
ಕಾಯಿತುರಿ ಮತ್ತು
ಕೊತ್ತುಂಬರಿ ಸೊಪ್ಪು

ವಿಧಾನ:

ಶ್ಯಾವಿಗೆಯನ್ನು ಮೊದಲೆ ಬೇರೆ ಬೇಯಿಸಿಟ್ಟುಕೊಳ್ಳಿ.

ಮೊದಲು ಪಾತ್ರೆ ಅಥವ ಬಾಣಲೆಗೆ ಅವಶ್ಯಕತೆ ಇದ್ದಷ್ಟು ಎಣ್ಣೆ ಹಾಕಿ,ಸಾಸಿವೆ ಹಾಕಿ,ಕಡ್ಲೆಬೇಳೆ,ಉದ್ದಿನಬೇಳೆಯನ್ನು ಹಾಕಿ ಹುರಿದ ನಂತರ ಕರಿಬೇವು, ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ,ಟಮೋಟ ಹಾಕಿ ನಾಲ್ಕೈದು ನಿಮಿಷ ಹುರಿದು ಅದಕ್ಕೆ ಚಿಟಿಕೆ ಅರಿಶಿನ ಮತ್ತು ಉಪ್ಪು ಹಾಕಿ,ಟಮೋಟ ಬೆಂದಿದೆ ಎನಿಸಿದಾಗ ಬೇಯಿಸಿದ ಶ್ಯಾವಿಗೆಯನ್ನು ಹಾಕಿ,ಚೆನ್ನಾಗಿ ತಿರುಗಿಸಿ.ಒಗ್ಗರಣೆಯೊಂದಿಗೆ ಶ್ಯಾವಿಗೆಯನ್ನು ಸರಿಯಾಗಿ ಬೆರೆಸಿದ ಮೇಲೆ ಅದಕ್ಕೆ ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ತಿರುಗಿಸಿ,ಇಳಿಸಿ.

* ಮೈಕ್ರೋವೇವ್ ನಲ್ಲಿಟ್ಟು ಬೇಯಿಸಿಕೊಳ್ಳಬಹುದು.ಇದು ತುಂಬಾ ಸುಲಭ ಮತ್ತು ಶ್ಯಾವಿಗೆ ಕೂಡ ಬಿಡಿ ಬಿಡಿಯಾಗಿ ಬರುತ್ತದೆ.
* ನೇರವಾಗಿ ಬೇಯುಸುವುದಾದರೆ ಒಗ್ಗರಣೆಗೆ ನೀರು ಹಾಕಿ ಅದು ಕುದಿ ಬಂದ ಮೇಲೆ ಶ್ಯಾವಿಗೆಯನ್ನು ಹಾಕಿ,ಅದು ಬೇಯುವ ತನಕ ಬೇಯಿಸಿ,ಕೊನೆಗೆ ಮಿಕ್ಕಿದ್ದು ಬೆರೆಸಿ,ಶ್ಯಾವಿಗೆ ಉಪ್ಪಿಟ್ಟು ರೆಡಿ. ಶ್ಯಾವಿಗೆ ಉಪ್ಪಿಟ್ಟು ತಯಾರಾಗುತ್ತದೆ.

* ಇದನ್ನು ಬೆಳಗ್ಗೆ ಅಥವಾ ಸಂಜೆಯ ತಿಂಡಿಗಾಗಿ ತಯಾರಿಸಬಹುದು.

Sunday, April 15, 2007

Snake Gourd Chutney - ಪಡುವಲಕಾಯಿ ತಿರುಳಿನ ಚಟ್ನಿ:

ಕೆಲವು ತರಕಾರಿಗಳ ಕಾಯಿಯ ತಿರುಳನ್ನು ಸಹ ಎಸೆಯದೆ ನಾವು ಅದನ್ನು ಅಡಿಗೆಯಲ್ಲಿ ಉಪಯೋಗಿಸಬಹುದು. ಆ ತಿರುಳಿನಲ್ಲು ಸಹ ಒಳ್ಳೆಯ ಅಂಶಗಳಿರುತ್ತವೆ. ಕೆಲವು ತರಕಾರಿಗಳ ಸಿಪ್ಪೆ,ತಿರುಳು ಮತ್ತು ಸೊಪ್ಪು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುತ್ತದೆ. ಆಗಾಗಿ ಉಪಯೋಗಿಸಬಹುದಾದಂತ ತರಕಾರಿಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಪಡುವಲ ಕಾಯಿಯಲ್ಲಿ ಯಾವುದನ್ನು ಬಿಸಾಡುವಂತಿಲ್ಲ. ಪಡುವಲಕಾಯಿಯನ್ನು ದಿನನಿತ್ಯದ ಅಡಿಗೆಯಲ್ಲಿ ಬಳಸಿದರೆ ಬಿ.ಪಿ ಇರುವವರಿಗೆ ತುಂಬಾ ಉಪಯುಕ್ತವಾಗುತ್ತದೆ. ಅದರಲ್ಲಿ ತಿರುಳಿನಲ್ಲಿ ಚಟ್ನಿ. ಸಿಪ್ಪೆಯಲ್ಲಿ ಸಹ ಮತ್ತು ಒಳಗಿನ ಕಾಯಿಯಿಂದ ಹುಳಿ,ಸಾರು ಮತ್ತು ಪಲ್ಯವನ್ನು ತಯಾರಿಸುತ್ತೇವೆ. ಈಗ ಇಲ್ಲಿ ಪಡುವಲಕಾಯಿಯ ತಿರುಳಿನ ಚಟ್ನಿಯನ್ನು ತಯಾರಿಸೋಣ.

ಪಡುವಲಕಾಯಿ ತಿರುಳಿನ ಚಟ್ನಿ:

ಪಡುವಲಕಾಯಿ ತಿರುಳು
ಸ್ವಲ್ಪ ಕಾಯಿತುರಿ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ
ಉದ್ದಿನಬೇಳೆ - ಒಂದು ಚಮಚ
ಉಪ್ಪು ರುಚಿಗೆ

ಒಗ್ಗರಣೆಗೆ;
ಎಣ್ಣೆ, ಜೀರಿಗೆ,ಸಾಸಿವೆ,ಕರಿಬೇವು

ತಯಾರಿಸುವ ರೀತಿ:

ಉದ್ದಿನಬೇಳೆಯನ್ನು ಸ್ವಲ್ಪ ಹುರಿದುಕೊಂಡು ಅದಕ್ಕೆ ತೆಂಗಿನತುರಿ,ಉಪ್ಪು,ಹುಣಸೇಹಣ್ಣು,ಹಸಿಮೆಣಸಿನಕಾಯಿ ಮತ್ತು ಉದ್ದಿನಕಾಳು ಹಾಕಿ ನುಣ್ಣಗೆ ರುಬ್ಬಿ.
ಒಗ್ಗರಣೆಗೆ ಎಣ್ಣೆ ಹಾಕಿ ಕಾದ ಬಳಿಕ ಜೀರಿಗೆ,ಸಾಸಿವೆ ಮತ್ತು ಕರಿಬೇವು ಹಾಕಿ,ಈ ಒಗ್ಗರಣೆಯನ್ನು ರುಬ್ಬಿದ ಚಟ್ನಿಗೆ ಸೇರಿಸಿ,ಬೆರೆಸಿ. ಇದು ತುಂಬಾ ರುಚಿಯಾಗಿರುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು.

Tuesday, April 10, 2007

Haalu Kheeru - ಹಾಲು ಖೀರು:


ಹಾಲು ಖೀರು:

ಬೇಕಾಗುವ ಸಾಮಗ್ರಿಗಳು:

ತೆಂಗಿನಕಾಯಿ / ಕೊಬ್ಬರಿ - ಅರ್ಧಕಪ್
ಗಸಗಸೆ - ಒಂದು ದೊಡ್ಡ ಚಮಚ
ಬಾದಾಮಿ - ಏಳು/ಎಂಟು
ಶ್ಯಾವಿಗೆ - ಕಾಲು ಕಪ್
ಚಿರೋಟಿ ರವೆ - ಎರಡು ಟೇಬಲ್ ಚಮಚ
ಸಕ್ಕರೆ ಅಥವ ಬೆಲ್ಲ ರುಚಿಗೆ ತಕ್ಕಷ್ಟು
ತುಪ್ಪ - ಮೂರು ದೊಡ್ಡ ಚಮಚ
ಹಾಲು -ಅರ್ಧ ಲೀಟರ್
ಗುಲಾಬಿ ನೀರು - ಒಂದು ಚಮಚ
ಏಲಕ್ಕಿ ಪುಡಿ ಸ್ವಲ್ಪ
ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ

ತಯಾರಿಸುವ ರೀತಿ:

ಮೊದಲು ಶ್ಯಾವಿಗೆ ಮತ್ತು ರವೆಯನ್ನು ತುಪ್ಪ ಹಾಕಿ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಗೋಡಂಬಿ ಮತ್ತು ದ್ರಾಕ್ಷಿಯನ್ನು ಕೂಡ ಹುರಿದುಕೊಂಡು ಇಟ್ಟುಕೊಳ್ಳಿ.
ನಂತರ ತೆಂಗಿನಕಾಯಿ ಮತ್ತು ಹದವಾಗಿ ಹುರಿದ ಗಸಗಸೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ ,ಸ್ವಲ್ಪ ನೀರು ಸೇರಿಸಿ ರುಬ್ಬಿ. ಅದರ ಜೊತೆಯಲ್ಲಿಯೇ ಬಾದಾಮಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಸ್ವಲ್ಪ ದಪ್ಪ ತಳವಿರುವ ಪಾತ್ರೆ ಅಥವ ನಾನ್ ಸ್ಟಿಕ್ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ, ಅದು ಕರಗಿದ ನಂತರ ರುಬ್ಬಿದ ತೆಂಗಿನಕಾಯಿ,ಗಸಗಸೆ ಮಿಶ್ರಣವನ್ನು ಹಾಕಿ, ಅದು ಹಸಿವಾಸನೆ ಹೋಗುವವರೆಗೂ ಕುದಿಸಿ, ಬೇಕೆನಿಸಿದರೆ ಕುದಿಯುವಾಗ ಸ್ವಲ್ಪ ನೀರು ಸೇರಿಸಿ . ಆಮೇಲೆ ಅದಕ್ಕೆ ಶ್ಯಾವಿಗೆ ಮತ್ತು ರವೆಯನ್ನು ಹಾಕಿ, ಅದು ಸ್ವಲ್ಪ ಬೆಂದ ಮೇಲೆ ಹಾಲು ಸೇರಿಸಿ, ಸಕ್ಕರೆ ಅಥವಾ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ, ತಳಹತ್ತದಂತೆ ತಿರುವುತ್ತಿರಿ, ಇಲ್ಲವೆಂದರೆ ತಳ ಹತ್ತಿ ಸೀದ ವಾಸನೆ ಬರುತ್ತದೆ ಪಾಯಸ, ಆಗಾಗಿ ಎಲ್ಲವನ್ನು ಸೇರಿಸಿದ ಮೇಲು ಚೆನ್ನಾಗಿ ತಿರುಗಿಸುತ್ತಿರಿ. ಶ್ಯಾವಿಗೆ ಬೆಂದ ನಂತರ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ. ಒಂದು ಕುದಿ ಕುದಿಸಿ ಇಳಿಸಿ. ಗುಲಾಬಿ ನೀರನ್ನು ಬಳಸುವುದಾದರೆ ಸ್ವಲ್ಪ ತಣ್ಣಗಾದ ಮೇಲೆ ಸೇರಿಸಿ, ಇದು ತುಂಬಾ ಒಳ್ಳೆಯ ಪರಿಮಳವನ್ನೂ ನೀಡುತ್ತದೆ. ಈಗ ಹಾಲು ಖೀರು ಸವಿಯಲು ಸಿದ್ಧ. ತುಪ್ಪವನ್ನು ನಿಮ್ಮ ಇಷ್ಟದಂತೆ ಹಾಕಿಕೊಳ್ಳಬಹುದು.

*ಹಾಲು ಮತ್ತು ನೀರನ್ನು ಎಷ್ಟು ಪ್ರಮಾಣ ಬೇಕೋ ಅಷ್ಟನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೇರಿಸಿಕೊಳ್ಳಿ.
*ಖೀರು ತೆಳ್ಳಗೆ ಬೇಕೋ / ಗಟ್ಟಿಯಾಗಿ ಬೇಕೋ ಅದನ್ನು ತಯಾರಿಸುವ ರೀತಿ ನಿಮ್ಮ ಇಷ್ಟದಂತೆ.

Karjikaayi/Karigadubu - ಕರ್ಜೀಕಾಯಿ/ಕರಿಗಡುಬು


ಕರ್ಜೀಕಾಯಿ/ಕರಿಗಡುಬು:

ಬೇಕಾಗುವ ಸಾಮಗ್ರಿಗಳು:

ಮೈದಾಹಿಟ್ಟು - ಒಂದು ಬಟ್ಟಲು
ಚಿಟಿಕೆ ಉಪ್ಪು
ಎರಡು ಚಮಚ ತುಪ್ಪ
ಕಡ್ಲೆ - ಒಂದು ಬಟ್ಟಲು
ಕೊಬ್ಬರಿತುರಿ
ಸಕ್ಕರೆಪುಡಿ
ಏಲಕ್ಕಿ ಪುಡಿ
ಗಸಗಸೆ
ಎಳ್ಳು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:


-ಮೊದಲು ಮೈದಾಹಿಟ್ಟಿಗೆ,ಚಿಟಿಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ.ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ.ಇದನ್ನು ’ಕಣಕ’ಎನ್ನುತ್ತಾರೆ.

-ಗಸಗಸೆಯನ್ನು ಸ್ವಲ್ಪ ಹುರಿದು,ಕುಟ್ಟಿಕೊಳ್ಳಿ.
-ಕಡ್ಲೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಸಕ್ಕರೆಪುಡಿ,ಕೊಬ್ಬರಿತುರಿ,ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಸರಿಯಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಬೆರೆಸಿಡಿ.ಇದನ್ನು’ಹೂರಣ’ಎನ್ನುತ್ತಾರೆ.

-ನಂತರ ಮೈದಾಹಿಟ್ಟಿನ ಕಣಕದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು,ಅದರಿಂದ ಪುಟ್ಟ ಪುಟ್ಟ ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಕೊಬ್ಬರಿ-ಕಡ್ಲೆ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ,ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ,ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ,ಸರಿಯಾಗಿ ಎಲ್ಲಾ ಕಡೆಯೂ ಅದನ್ನು ಕ್ಲೋಸ್ ಮಾಡಿ,ಅಂಚು ಮಡಿಸುವ ವಿಧಾನ ತಿಳಿದಿರುವವರು ಅದನ್ನು ಸುತ್ತಿ ಸುತ್ತಿ ಅಂಚಿಗೆ ಚಿತ್ತಾರ ಮಾಡಬಹುದು. ಅದು ಬರದೇ ಇರುವವರು ಚೆನ್ನಾಗಿ ಅದುಮಿ ಮುಚ್ಚಿದ ಅಂಚಿನ ತುದಿ ಭಾಗ ಮಾತ್ರ ಕಟ್ಟರ್ ನಿಂದ (ಕತ್ತರಿಸಿ)ಕಟ್ ಮಾಡಬಹುದು.ಕತ್ತರಿಸಿ ತೆಗೆದ ಹೆಚ್ಚಿನ ಹಿಟ್ಟನ್ನು ತೆಗೆದಿಟ್ಟು ಕಣಕಕ್ಕೆ ಹಾಕಿ. ಕಟ್ಟರ್ ಸಿಗುತ್ತದೆ ಅದರಿಂದ ಕಟ್ ಮಾಡಿದ ಮೇಲೆ ಮತ್ತೆ ಎಲ್ಲಾ ಕಡೆ ಅಂಟಿಕೊಂಡಿದೆಯಾ ಪರೀಕ್ಷಿಸಿ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಎಣ್ಣೆಯಲ್ಲಿ ಪುಡಿಯೆಲ್ಲಾ ಆಚೆ ಬರುತ್ತದೆ. ಇದನ್ನು ತಯಾರಿಸುವಾಗ ನೋಡಿಕೊಂಡು ಸರಿಯಾಗಿ ತಯಾರಿಸಿಕೊಳ್ಳಿ, ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ,ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ.ಕರ್ಜೀಕಾಯಿಗಳು ತಯಾರಾಗುತ್ತದೆ.ನಂತರ ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ,ಇದು ಸುಮಾರು ದಿನ ಹಾಳಾಗದೇ ಚೆನ್ನಾಗಿಯೇ ಇರುತ್ತದೆ. ಬೇಕಾದಾಗ ತಿನ್ನಬಹುದು. ಊಟಕ್ಕೂ ಸಿಹಿ ತರಹ ನೀಡಬಹುದು.

* ಪೂರಿಯೊಳಗೆ ಪುಡಿಯನ್ನು ತುಂಬುವಾಗ ಸರಿಯಾಗಿ ನೋಡಿ,ಆ ಕಡೆ-ಈ ಕಡೆ ಬರದಂತೆ ಮಧ್ಯಭಾಗದಲ್ಲಿ ಮಾತ್ರ ಇರುವಂತೆ ಹಾಕಿ ಮಡಿಸಿಕೊಳ್ಳಬೇಕು.

Karigadubu - ಕರಿಗಡುಬು:

ಕರಿಗಡುಬು:

ಕಡುಬು ಮತ್ತು ಮೋದಕ ಎಂದರೆ ನೆನಪಾಗುವುದೇ ನಮ್ಮ ಮುದ್ದು ಗಣಪನ ಹಬ್ಬ ಅಲ್ಲವೇ!!!!!!
ಕಡುಬು ಎಂದರೆ ಹೂರಣವನ್ನು(ಫಿಲ್ಲಿಂಗ್) ಅಕ್ಕಿಹಿಟ್ಟು ಅಥವಾ ಮೈದಾಹಿಟ್ಟಿನಲ್ಲಿ ತಯಾರಿಸಿದ ಕಣಕದ ಪುಟ್ಟ ಪೂರಿಯ ಎಲೆಯ ನಡುವೆ/ಮಧ್ಯ ಭಾಗಕ್ಕೆ ತುಂಬಿ, ಅದನ್ನು ಮಧ್ಯಭಾಗಕ್ಕೆ ಅರ್ಧಕ್ಕೆ ಸರಿಯಾಗಿ ಮಡಿಚಿ,ಅರ್ಧ ವೃತ್ತಾಕಾರವಾಗಿ ಬರುವುದನ್ನು,ಎರಡು ಬದಿ/ಅಂಚುಗಳನ್ನು ಅಂಟಿಸಿ ಚೆನ್ನಾಗಿ ಒತ್ತಿ ಅದರ ಅಂಚುಗಳನ್ನು ಚಿತ್ತಾರ ಮಾಡಿ ಅಥವ ಅಂಚನ್ನು ಅದೇ ಆಕಾರದಲ್ಲಿ ಕಟ್ಟರ್ ನಿಂದ ಕತ್ತರಿಸಿ,ಬಂದ ಹೆಚ್ಚಾದ ಹಿಟ್ಟನ್ನು ತೆಗೆಯಿರಿ. ಅವಶ್ಯಕತೆ ಇದ್ದರೆ ಅಂಚು ಅಂಟಿಸಲು ನೀರು ಅಥವಾ ಹಾಲನ್ನು ಉಪಯೋಗಿಸಬಹುದು. ಅಂಚು ಬಿಟ್ಟುಕೊಳ್ಳದಂತೆ ಸರಿಯಾಗಿ ಅದುಮಿ,ಇದು ಕಡುಬನ್ನು ತಯಾರಿಸುವ ರೀತಿ, ಅದು ಯಾವ ರೀತಿಯ ಕಡುಬು ಆಗಿರಲಿ ತಯಾರಿಸುವ ರೀತಿ ಒಂದೇ ತರಹ.
ಈ ಕಡಬುಗಳನ್ನು ಅಕ್ಕಿಹಿಟ್ಟಿನಲ್ಲಿ ತಯಾರಿಸಿರುವುದನ್ನು ಹಬೆಯಲ್ಲಿ ಬೇಯಿಸಬೇಕು.ಇದನ್ನು ಕಡುಬು ಎನ್ನುತ್ತೇವೆ.
ಮೈದಾಹಿಟ್ಟಿನಲ್ಲಿ ತಯಾರಿಸಿರುವುದನ್ನು ಎಣ್ಣೆಯಲ್ಲಿ ಕರಿಯಬೇಕು. ಎಣ್ಣೆಯಲ್ಲಿ ಕರಿಯುವುದರಿಂದ ಇದನ್ನು ಕರಿದ ಕಡುಬು ಅಥವಾ ಕರ್ಜೀಕಾಯಿ ಎನ್ನುತ್ತೇವೆ.
ಕಡುಬಿನಲ್ಲಿ ವಿವಿಧ ರೀತಿಗಳಿವೆ.
ಕರಿಗಡುಬು ಅಂದರೆ ಹೂರಣವನ್ನು ಕರ್ಜೀಕಾಯಿ ತಯಾರಿಸುವ ರೀತಿಯಲ್ಲಿ ತಯಾರಿಸಿ,ಎಣ್ಣೆಯಲ್ಲಿ ಕರಿಯುವುದರಿಂದ ಕರಿದ ಕಡುಬು ಆಡುಭಾಷೆಯಲ್ಲಿ ಕರಿಗಡುಬು ಎಂದಾಗಿದೆ. ಇದನ್ನು ಹೆಚ್ಚಾಗಿ ನಮ್ಮ ಪ್ರೀತಿಯ ಶ್ರೀ ಗಣೇಶನ ಹಬ್ಬದಲ್ಲಿ ತಯಾರಿಸುತ್ತಾರೆ. ಕೆಲವರು ಕಡ್ಲೆ-ಕೊಬ್ಬರಿಯ ಹೂರಣದ ಕರ್ಜೀಕಾಯಿ/ಕರಿಗಡುಬು ಮಾಡುವರು. ಮತ್ತೆ ಕೆಲವರು ಈ ರೀತಿಯ ಹೂರಣದ ಕಡುಬನ್ನು ತಯಾರಿಸುತ್ತಾರೆ. ಕೆಲವರು ಹೋಳಿಗೆಯನ್ನು,ಕೆಲವರು ಹೆಸರುಬೇಳೆ ಕಡುಬು, ಮತ್ತೆ ಕೆಲವರು ಸಿಹಿಕಡುಬು ತಯಾರಿಸುತ್ತಾರೆ. ಅವರವರ ಮನೆ ಪದ್ಧತಿಯಂತೆ ನಡೆಸಿಕೊಂಡು ಬರುತ್ತಾರೆ. ಕಡುಬನ್ನು ಯಾವ ರೀತಿ ತಯಾರಿಸಿದರೂ ನಮ್ಮ ಗಣೇಶನಿಗೆ ಮಾತ್ರ ಯಾವುದೋ ಒಂದು ಕಡುಬಂತೂ ಅವತ್ತಿನ ಹಬ್ಬದೂಟದಲ್ಲಿ ಇರಲೇಬೇಕು. ಅವನು ಆ ಕಡುಬು-ಈ ಕಡುಬು ಅಂತ ಕೇಳುತ್ತಾನೆಯೇ ನಮ್ಮ ನಮ್ಮ ಬಾಯಿರುಚಿಗಳಿಗೆ ಈ ಹಬ್ಬಗಳು ಒಂದು ನೆಪ ಅಷ್ಟೇ. ಮಾಮುಲಿನಂತೆ ವಿಶೇಷ ಅಡಿಗೆ ಮಾಡಿಕೊಂಡು ತಿನ್ನಲು ಸೋಮಾರಿಗಳು ನಾವು. ಹೀಗೆ ಹಬ್ಬದ ಹೆಸರಲ್ಲಿ ಭರ್ಜರಿ ಊಟ ತಯಾರಿಸಿದರಾಯಿತು. ಬರೀತಾ ಹೋದರೆ ಮುಗಿಯೋದೇ ಇಲ್ಲ ಎನಿಸುತ್ತೆ. ಸರಿ ಸಧ್ಯಕ್ಕೆ ಇಲ್ಲಿ ಕರಿಗಡುಬು ತಯಾರಿಸೋಣ.

ಬೇಕಾಗುವ ಸಾಮನುಗಳು:

ಮೈದಾಹಿಟ್ಟು - ಒಂದು ಬಟ್ಟಲು
ಚಿರೋಟಿ ರವೆ - ಎರಡು ಚಮಚ
ಚಿಟಿಕೆ ಉಪ್ಪು
ಎರಡು ಚಮಚ ತುಪ್ಪ
ಬೇಳೆ ಹೂರಣ
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟಿಗೆ,ಚಿಟಿಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ. ಇದನ್ನು ’ಕಣಕ’ ಎನ್ನುತ್ತೇವೆ.
ತೊಗರಿಬೇಳೆಯನ್ನು ಬೇಯಿಸಿಕೊಂಡು, ಅದರ ನೀರು ಬಸಿದ ಮೇಲೆ ಬರುವ ಬೇಳೆಯನ್ನು,ಬೆಲ್ಲ ಮತ್ತು ಏಲಕ್ಕಿಯನ್ನು ಸೇರಿಸಿ,ಒಲೆಯ ಮೇಲಿಟ್ಟು,ಚೆನ್ನಾಗಿ ಬೆರೆಸಿ, ಅದನ್ನು ನುಣ್ಣಗೆ ರುಬ್ಬಿಕೊಂಡ ನಂತರ ಅದನ್ನು’ಹೂರಣ’ ಎನ್ನುತ್ತೇವೆ.

ನಂತರ ಮೈದಾಹಿಟ್ಟಿನ ಕಣಕದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು,ಅದರಿಂದ ಪುಟ್ಟ ಪುಟ್ಟ ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಬೇಳೆಬೆಲ್ಲ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ, ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ,ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ ,ಸರಿಯಾಗಿ ಎಲ್ಲಾ ಕಡೆಯೂ ಅದನ್ನು ಮುಚ್ಚಿ,ತೆರೆದುಕೊಳ್ಳದಂತೆ ಗಟ್ಟಿಯಾಗಿ ಮುಚ್ಚಬೇಕು. ಅಂಚು ಮಡಿಸುವ ವಿಧಾನ ತಿಳಿದಿರುವವರು ಅದನ್ನು ಸುತ್ತಿ ಸುತ್ತಿ ಅಂಚಿಗೆ ಚಿತ್ತಾರ ಮಾಡಬಹುದು. ಅದು ಬರದೇ ಇರುವವರು ಚೆನ್ನಾಗಿ ಅದುಮಿ ಮುಚ್ಚಿದ ಅಂಚಿನ ತುದಿ ಭಾಗ ಮಾತ್ರ ಕಟ್ಟರ್ ನಿಂದ ಕಟ್ ಮಾಡಬಹುದು. ಕತ್ತರಿಸಿದಾಗ ಬರುವ ಹೆಚ್ಚಿನ ಹಿಟ್ಟನ್ನು ತೆಗೆದುಹಾಕಿ,ಅದನ್ನು ಮತ್ತೆ ಉಪಯೋಗಿಸಬಹುದು. ಕಟ್ಟರ್ ಸಿಗುತ್ತದೆ ಅದರಿಂದ ಕಟ್ ಮಾಡಿದ ಮೇಲೆ ಮತ್ತೆ ಎಲ್ಲಾ ಕಡೆ ಅಂಟಿಕೊಂಡಿದೆಯಾ ಪರೀಕ್ಷಿಸಿ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಎಣ್ಣೆಯಲ್ಲಿ ಪುಡಿಯೆಲ್ಲಾ ಆಚೆ ಬರುತ್ತದೆ. ಇದನ್ನು ತಯಾರಿಸುವಾಗ ನೋಡಿಕೊಂಡು ಸರಿಯಾಗಿ ತಯಾರಿಸಿಕೊಳ್ಳಿ, ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ, ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ಬೇಳೆ ಹೂರಣದ ಕರಿಗಡುಬು ತಯಾರಾಗುತ್ತದೆ.
* ಪೂರಿಯೊಳಗೆ ಹೂರಣವನ್ನು ತುಂಬುವಾಗ ಸರಿಯಾಗಿ ನೋಡಿ,ಆ ಕಡೆ-ಈ ಕಡೆ ಬರದಂತೆ ಮಧ್ಯಭಾಗದಲ್ಲಿ ಮಾತ್ರ ಇರುವಂತೆ ಹಾಕಿ ಮಡಿಸಿಕೊಳ್ಳಬೇಕು.
* ಬೇಳೆ ಹೂರಣ ತಯಾರಿಸುವ ರೀತಿಯನ್ನು "ಹೋಳಿಗೆ" ರೆಸಿಪಿಯಲ್ಲಿ ನೋಡಬಹುದು.

Friday, April 6, 2007

Seemebadanekaayi bajji-ಸೀಮೆಬದನೆಕಾಯಿ ಬಜ್ಜಿ:


ಸೀಮೆಬದನೆಕಾಯಿ ಬಜ್ಜಿ:

ಬೇಕಾಗುವ ಸಾಮಗ್ರಿಗಳು:

ಸೀಮೆಬದನೆಕಾಯಿ
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಅಚ್ಚಖಾರದ ಪುಡಿ
ಉಪ್ಪು
ಕಾದ ಎಣ್ಣೆ - ಒಂದು ಚಮಚ
ಚಿಟಿಕೆ ಸೋಡ
ಕಲೆಸಲು ಬೇಕಾಗುವಷ್ಟು ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಸೀಮೆಬದನೆಕಾಯಿ ಸಿಪ್ಪೆ ತೆಗೆದು, ತೆಳುವಾಗಿ ಹೆಚ್ಚಿಕೊಂಡು ಇಟ್ಟುಕೊಳ್ಳಿ.ಕಾಯಿ ಹೇಗಿದೆಯೋ ಅದೇ ರೀತಿಯಲ್ಲಿ ಸ್ಲೈಸ್ ಮಾಡಿಕೊಂಡರೆ ನೋಡಲು ಚೆನ್ನಾಗಿ ಕಾಣುತ್ತದೆ. ಅದನ್ನು ಉದ್ದವಾಗಿ/ಗುಂಡಾಗಿಯೂ ಸ್ಲೈಸ್ ಮಾಡಿಕೊಳ್ಳಬಹುದು.
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ,ಉಪ್ಪು, ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಕಾದಿರುವ ಎಣ್ಣೆ ಹಾಕಿ, ಜೊತೆಯಲ್ಲಿ ನೀರು ಹಾಕಿ, ಕಲೆಸಿಕೊಳ್ಳಿ, ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ, ಹೆಚ್ಚಿರುವ ಸೀಮೆಬದನೆಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಒಂದೊಂದಾಗಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ, ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಸೀಮೆಬದನೆಕಾಯಿ ಬಜ್ಜಿ ತಯಾರ್. ಇದನ್ನು ಬಿಸಿ-ಬಿಸಿಯಾಗಿ ತಿಂದರೆ ರುಚಿ ತುಂಬಾ ಚೆನ್ನಾಗಿ ಇರುತ್ತದೆ. ತಣ್ಣಗಾದ ಮೇಲೆ ಸ್ವಲ್ಪ ಮೆತ್ತಗೆ ಆಗುತ್ತದೆ. ಚಟ್ನಿ/ಸಾಸ್ ನೊಂದಿಗೆ ಸರ್ವ್ ಮಾಡಬಹುದು.

Thursday, April 5, 2007

Soji Laddu/Rava Unde - ರವೆಉಂಡೆ:

ರವೆಉಂಡೆಗೆ ಅದರದ್ದೇ ಆದ ಸ್ಥಾನವಿದೆ. ಹಬ್ಬಗಳಲ್ಲಿ,ಅದರಲ್ಲೂ ಶಿವರಾತ್ರಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಗಳಲ್ಲಿ ಇದು ಇರಲೇಬೇಕು. ಅಲ್ಲದೆ ಅಜ್ಜಿ ಮನೆಗಳಲ್ಲಿ ಇದು ಯಾವಾಗಲು ಸ್ಟಾಕ್ ಇರುತ್ತದೆ. ಇತ್ತೀಚೆಗೆ ರವೆಯಿಂದ ಸುಮಾರು ಸಿಹಿತಿಂಡಿ ತಯಾರಿಸುತ್ತೇವೆ. ಆದರೂ ಅದೆಲ್ಲವು ರವೆಉಂಡೆಯಷ್ಟು ರುಚಿ ಬರುವುದಿಲ್ಲ. ಒಲ್ಡ್ ಈಸ್ ಗೋಲ್ಡ್ ಎನ್ನುವಂತೆ ಈ ಉಂಡೆಯನ್ನು ಎಲ್ಲರು ಇಷ್ಟಪಡುತ್ತಾರೆ. ಅದನ್ನು ತಯಾರಿಸುವ ಬಗೆ ತಿಳಿಯೋಣ ಬನ್ನಿ.

ರವೆಉಂಡೆ:
ಬೇಕಾಗುವ ಸಾಮನುಗಳು:
ರವೆ - ಎರಡು ಕಪ್
ಸಕ್ಕರೆಪುಡಿ - ಎರಡು ಕಪ್
ಕೊಬ್ಬರಿ ತುರಿ- ಒಂದು ಕಪ್
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ಬಾದಾಮಿ ಬೇಕಿದ್ದರೆ
ಏಲಕ್ಕಿ ಪುಡಿ ಸ್ವಲ್ಪ
ಹಾಲು - ಅರ್ಧ ಕಪ್
ತುಪ್ಪ - ನಾಲ್ಕು ಚಮಚ

ತಯಾರಿಸುವ ರೀತಿ:

ದಪ್ಪ ತಳದ ಅಥವಾ ನಾನ್ ಸ್ಟಿಕ್ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಿ. ಹದವಾದ ಉರಿಯಲ್ಲಿ ಹುರಿದರೆ ಒಳ್ಳೆಯದು. ಇಲ್ಲವೆಂದರೆ ರವೆ ಸೀದು ಹೋಗುತ್ತದೆ.
ಅದಕ್ಕೆ ಸಕ್ಕರೆಪುಡಿ ಸೇರಿಸಿ,ಬೆರೆಸಿ,ಕೊಬ್ರಿತುರಿ ಕೂಡ ಹಾಕಿ,ದ್ರಾಕ್ಷಿ,ಗೋಡಂಬಿ,ಬಾದಾಮಿ ಮತ್ತು ಏಲಕ್ಕಿ ಪುಡಿ ಸೇರಿಸಿ,ಚೆನ್ನಾಗಿ ಬೆರೆಸಿ. ಅದಕ್ಕೆ ತುಪ್ಪ ಮತ್ತು ಕಾಲು ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ,ತಿರುವುತ್ತಿದ್ದು,ಒಲೆಯಿಂದ ಕೆಳಗಿಳಿಸಿ.ಸ್ವಲ್ಪ ತಣ್ಣಗಾದ ಮೇಲೆ ಹಾಲಿನ /ತುಪ್ಪದಲ್ಲಿ ಕೈ ಸವರಿಕೊಂಡು ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು,ನಿಮಗೆ ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ತಯಾರಿಸಿ. ರುಚಿಕರವಾದ ರವೆಉಂಡೆ ಸವಿಯಲು ತಯಾರಾಗುತ್ತದೆ. ಈ ಉಂಡೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ.

*ರವೆಯನ್ನು ಸೀದಿಸಿಕೊಂಡು ಹುರಿಯಬೇಡಿ.
*ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಂಡು ಬೇಕಾದರು ಸೇರಿಸಬಹುದು.
*ರವೆಯ ಮಿಶ್ರಣವನ್ನು ತುಂಬಾ ತೆಳುವಾಗಿ /ಪುಡಿ ಪುಡಿಯಾಗಿ ತಯಾರಿಸದೆ,ಸರಿಯಾದ ಹದದಲ್ಲಿ ತಯಾರಿಸಿದರೆ ಉಂಡೆಗಳನ್ನು ಕಟ್ಟಲು ಸುಲಭವಾಗುತ್ತದೆ.

Tuesday, April 3, 2007

:ಊಟ ಮಾಡುವಾಗ ಹೇಳಬೇಕಾದ ಮಂತ್ರ:

:ಊಟ ಮಾಡುವಾಗ ಹೇಳಬೇಕಾದ ಮಂತ್ರ:

ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣವಲ್ಲಭೇ|
ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹೀಂ ಚ ಪಾರ್ವತಿ||

ಓಂ ಮಹಾ ಘಂ ಗಣಪತೆಯೇ ನಮಃ

       ಓಂ ಮಹಾ ಘಂ ಗಣಪತೆಯೇ ನಮಃ



ಓಂ ಶ್ರೀ ಗಣೇಶಾಯ ನಮಃ


ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ

Monday, April 2, 2007

Om Shree Ganeshaya Namah:

                                                " ಓಂ ಶ್ರೀ ಮಹಾ ಘಂ ಗಣಪತೆಯೇ ನಮಃ "

Popular Posts