Saturday, June 2, 2007

ಹೋಳಿಗೆ/ಒಬ್ಬಟ್ಟು - Holige / Obbattu

ತೊಗರಿಬೇಳೆ ಹೋಳಿಗೆ:

"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು”ಹೋಳಿಗೆ’ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಅದರಲ್ಲಿ ತುಂಬಾ ಹೆಸರಾಗಿರುವುದು ಬೇಳೆ ಹೋಳಿಗೆ. ಅದನ್ನು ತಯಾರಿಸುವ ರೀತಿ ತಿಳಿಯೋಣ.

ತೊಗರಿಬೇಳೆ ಹೋಳಿಗೆ:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಅರ್ಧ ಕೆಜಿ
ತೆಂಗಿನಕಾಯಿ ತುರಿ - ಒಂದು ಬಟ್ಟಲು
ಬೆಲ್ಲ ರುಚಿಗೆ - ಕುಟ್ಟಿರುವುದು
ಏಲಕ್ಕಿ ಪುಡಿ ಸ್ವಲ್ಪ
ಮೈದಾಹಿಟ್ಟು - ಎರಡು ಬಟ್ಟಲು
ಚಿರೋಟಿ ರವೆ - ಕಾಲು ಕಪ್
ಹಾಲು - ಕಾಲು ಕಪ್
ತುಪ್ಪ - ಎರಡು ಚಮಚ
ಚಿಟಿಕೆ ಅರಿಸಿನ
ಉಪ್ಪು ಚಿಟಿಕೆ
ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ,ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು. ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ. ಉಪಯೋಗಿಸುವಾಗ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ, ಹೀಗೆ ಕಲೆಸಿರುವ ಹಿಟ್ಟನ್ನು "ಕಣಕ" ಎಂದು ಕರೆಯುತ್ತೀವಿ.

ನಂತರ ತೊಗರಿಬೇಳೆಯನ್ನು, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಹೆಚ್ಚು ನೀರು ಹಾಕಿ ಬೇಯಿಸಿಕೊಳ್ಳಿ. ಆಗ ಅದಕ್ಕೆ ಒಂದು ಇಂಚು ಶುಂಠಿ ಹಾಕಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಾಗಲೇ ತೆಗೆಯಬೇಕು. ಆಗಾಗಿ ಬೇಳೆ ಬೇಯುವಾಗ ನೋಡುತ್ತಿರಿ. ನೀರು ಹೆಚ್ಚಾಗಿ ಹಾಕಿ, ಆ ಬಸಿದ ರಸದಿಂದ ಸಾರು ತಯಾರಿಸಬಹುದು. ಅಂಚು ಒಡೆದು ಬೆಂದಿದೆ ಎನಿಸಿದ ಮೇಲೆ ಬೆಂದ ತೊಗರಿಬೇಳೆಯ ನೀರನ್ನು ಬಸಿದುಕೊಳ್ಳಿ. ಶುಂಠಿಯನ್ನು ತೆಗೆದುಹಾಕಿ. ಆಮೇಲೆ ಬಸಿದ ಬೇಳೆಗೆ ಕುಟ್ಟಿದ ಬೆಲ್ಲ ಸೇರಿಸಿ, ಬೆಂದ ಬೇಳೆಯ ಅಳತೆಗೆ ಅರ್ಧದಷ್ಟು ಬೆಲ್ಲವನ್ನು ಸರಿಯಾಗಿ ಹಾಕಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಎಲ್ಲವನ್ನು ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಎಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಬೆಲ್ಲ ಮತ್ತು ಬೇಳೆ ಹೊಂದಿದ ಮೇಲೆ ಸ್ಟೌವ್ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ಈ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೇರಿಸದೆ ರುಬ್ಬಬೇಕು. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ "ಹೂರಣ"ವೆಂದು ಕರೆಯುತ್ತೇವೆ.

--ಇಲ್ಲಿಯವರೆಗೂ ಕಣಕ ಮತ್ತು ಹೂರಣವನ್ನು ತಯಾರಿಸಿಕೊಂಡಿದ್ದಾಯಿತು.

•ಈಗ ಹೋಳಿಗೆ ಹೇಗೆ ಮಾಡೋದು ತಿಳಿಯೋಣ:
•ಮೈದಾ ಮಿಶ್ರಣವನ್ನು ದಪ್ಪ ಗೋಲಿಗಾತ್ರದ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
•ಹೂರಣದ ಮಿಶ್ರಣವನ್ನು ಕಿತ್ತಳೆ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.
•ಬಾಳೆ ಎಲೆ/ಅಲ್ಯುಮಿನಿಯಂ ಫಾಯಿಲ್/ ಪ್ಲಾಸ್ಟಿಕ್ ಕವರ್/ ಹೋಳಿಗೆ ತಟ್ಟುವ ಕವರ್ -ನಿಮಗೆ ಯಾವುದು ಬೇಕೋ ಅದು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮೊದಲು ಕಣಕವನ್ನು ಇಟ್ಟು ಸ್ವಲ್ಪ ಸಣ್ಣ ಪೂರಿ ಅಳತೆಗೆ ಒತ್ತಿಕೊಳ್ಳಿ. ಆಗೇ ಕೈನಲ್ಲಿಯೇ ತಟ್ಟಬಹುದು. ಅದರ ಮಧ್ಯ ಭಾಗಕ್ಕೆ ಬೇಳೆ ಹೂರಣವನ್ನು ಇಟ್ಟು ಒಂದು ಬದಿಯಿಂದ ಹಿಟ್ಟನ್ನು ತೆಗೆದು ಮೇಲೆ ಹಾಕುತ್ತಾ ಸ್ವಲ್ಪ ಸ್ವಲ್ಪವೇ ಹಾಕಿ,ಹೀಗೆ ಎಲ್ಲವನ್ನು ಅಂದರೆ ಹೂರಣವು ಕಾಣಿಸದಂತೆ ಒಳಭಾಗಕ್ಕೆ ಮುಚ್ಚಿ.

ಆಮೇಲೆ ಹೂರಣವನ್ನು ಕವರ್ ಮಾಡಿರುವ ತುದಿಯನ್ನು ಕೆಳಭಾಗಕ್ಕೆ ಹಾಕಿ, ಎಣ್ಣೆ ಸವರಿಕೊಂಡು ಮತ್ತೆ ಲಘುವಾಗಿ ಅದನ್ನು ಹಾಗೆಯೇ ತಟ್ಟಿ.

ನಿಮಗೆ ಯಾವ ಅಳತೆ ಅಗಲ ಬೇಕೋ ಅಷ್ಟು ತಟ್ಟಿಕೊಂಡು,ಕಾಯಿಸುವ ತವಾ ಮೇಲೆ ಎಣ್ಣೆ ಹಚ್ಚಿ ಹೋಳಿಗೆಯನ್ನು ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಬದಿಯು ತಿರುವಿ ಹಾಕಿ ಎಣ್ಣೆ ಹಾಕಿ ಬೇಯಿಸಿ.

ಅಗಲವಾದ ತಟ್ಟೆಯಲ್ಲಿ ಹಾಕಿ. ಇದೇ ರೀತಿ ಎಲ್ಲಾ ಹೋಳಿಗೆಗಳನ್ನು ತಯಾರಿಸಿ, ಒಂದರ ಮೇಲೆ ಒಂದು ಹಾಕಬೇಡಿ,ಪಕ್ಕಕ್ಕೆ ಜೋಡಿಸಿಕೊಳ್ಳಿ. ಹೋಳಿಗೆಯನ್ನು ತುಪ್ಪ ಹಾಕಿ,ತಿನ್ನಬಹುದು. ಜೊತೆಗೆ ಬೇಕಾದರೆ ಹಾಲನ್ನು ಕೂಡ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಾದ ಮತ್ತು ನಮ್ಮ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರು ತಯಾರಿಸುವ,ಪ್ರಸಿದ್ಧಿ ಪಡೆದಿರುವ ಅಡಿಗೆ.


•ಕೆಲವರಿಗೆ ಹೋಳಿಗೆ ದಪ್ಪ ಇಷ್ಟಪಡುತ್ತಾರೆ. ಆಗ ತಟ್ಟುವಾಗ ಹೂರಣ ಜಾಸ್ತಿ ತುಂಬಿ, ಸ್ವಲ್ಪ ಚಿಕ್ಕದಾಗಿ ತಟ್ಟಿ.
•ತೆಳುವಾಗಿ ಇಷ್ಟಪಡುವವರು ತೆಳ್ಳಗೆ ತಟ್ಟಿಕೊಂಡು ಬೇಯಿಸಿ.
•ಹೂರಣ ತುಂಬಿ ಕವರ್ ಮಾಡುವಾಗ ಸರಿಯಾಗಿ ಮುಚ್ಚಿ. (ಸ್ಟಫ್ ಮಾಡಿಕೊಳ್ಳಿ)
•ಎಣ್ಣೆಯನ್ನು ಸವರಿಕೊಳ್ಳುತ್ತಾ ಇರಬೇಕಾಗುತ್ತದೆ. ಆಗ ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
•ಬೇಯಿಸುವಾಗಲೂ ಅಷ್ಟೇ ಹುಷಾರಾಗಿ ಬೇಯಿಸಿ. ಹೋಳಿಗೆಗಳು ಎರಡು ದಿನ ಹಾಳಾಗದೆ ಚೆನ್ನಾಗಿ ಇರುತ್ತವೆ.
•ಬೇಳೆ ಬಸಿದ ನೀರನ್ನು ಚೆಲ್ಲದೆ ಅದನ್ನು ಹೋಳಿಗೆ ಸಾರಿನಂತೆ ಉಪಯೋಗಿಸಿ,ಈ ಸಾರು ತುಂಬಾ ರುಚಿ ಮತ್ತು ಪೌಷ್ಠಿಕ ವಾಗಿರುತ್ತದೆ. ಏಕೆಂದರೆ ರಸವೆಲ್ಲ ಇದರಲ್ಲೆ ಇರುವುದರಿಂದ ಬರೀ ಬೇಳೆಯಲ್ಲಿ ಏನು ಇರುವುದಿಲ್ಲ.
• ಸಾರಿನ ರೆಸಿಪಿ ಕೂಡ ತಿಳಿಸಿದ್ದೇನೆ,ಹೋಳಿಗೆ ಸಾರು -ಸಾಂಬಾರ್ ಲೇಬಲ್ ನಲ್ಲಿದೆ.

No comments:

Popular Posts