Showing posts with label Kadubu /Karigadubu - ಕಡುಬು/ಕರ್ಜೀಕಾಯಿ/ಕರಿಗಡುಬು. Show all posts
Showing posts with label Kadubu /Karigadubu - ಕಡುಬು/ಕರ್ಜೀಕಾಯಿ/ಕರಿಗಡುಬು. Show all posts

Wednesday, August 17, 2011

Kadubu-ಕಡುಬು

ಕಡುಬು ತಯಾರಿಸುವ ವಿಧಾನವನ್ನು ತಿಳಿಯಲು ಲೇಬಲ್ಸ್ ನಲ್ಲಿ ಕಡುಬು ಕ್ಲಿಕ್ ಮಾಡಿನೋಡಿ.

Wednesday, December 23, 2009

Karjikaayi - ಕರ್ಜಿಕಾಯಿ:

ಕರ್ಜಿಕಾಯಿ:

ಬೇಕಾಗುವ  ಸಾಮಗ್ರಿಗಳು:

ಮೈದಾಹಿಟ್ಟು - ಒಂದು ಬಟ್ಟಲು
ಚಿಟಿಕೆ ಉಪ್ಪು
ಎರಡು ಚಮಚ ತುಪ್ಪ
ಕಡ್ಲೆ - ಒಂದು ಬಟ್ಟಲು
ಕೊಬ್ಬರಿತುರಿ
ಸಕ್ಕರೆಪುಡಿ
ಏಲಕ್ಕಿ ಪುಡಿ
ಗಸಗಸೆ
ಎಳ್ಳು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಗಸಗಸೆಯನ್ನು ಸ್ವಲ್ಪ ಹುರಿದು, ಕುಟ್ಟಿಕೊಳ್ಳಿ.

ಮೊದಲು ಮೈದಾಹಿಟ್ಟಿಗೆ,ಚಿಟಿಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ. ಇದನ್ನು ’ಕಣಕ’ ಎನ್ನುತ್ತಾರೆ.

ಕಡ್ಲೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಸಕ್ಕರೆಪುಡಿ,ಕೊಬ್ಬರಿತುರಿ,ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಸರಿಯಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಬೆರೆಸಿಡಿ. ಇದನ್ನು’ಹೂರಣ’ ಎನ್ನುತ್ತಾರೆ.

ನಂತರ ಮೈದಾಹಿಟ್ಟಿನ ಕಣಕದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು, ಅದರಿಂದ ಪುಟ್ಟ ಪುಟ್ಟ ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಕಡ್ಲೆ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ, ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ, ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ , ಸರಿಯಾಗಿ ಎಲ್ಲಾ ಕಡೆಯೂ ಅದನ್ನು ಕ್ಲೋಸ್ ಮಾಡಿ, ಅಂಚು ಮಡಿಸುವ ವಿಧಾನ ತಿಳಿದಿರುವವರು ಅದನ್ನು ಸುತ್ತಿ ಸುತ್ತಿ ಅಂಚಿಗೆ ಚಿತ್ತಾರ ಮಾಡಬಹುದು. ಅದು ಬರದೇ ಇರುವವರು ಚೆನ್ನಾಗಿ ಅದುಮಿ ಮುಚ್ಚಿದ ಅಂಚಿನ ತುದಿ ಭಾಗ ಮಾತ್ರ ಕಟ್ಟರ್ ನಿಂದ ಕಟ್ ಮಾಡಬಹುದು. ಕಟ್ಟರ್ ಸಿಗುತ್ತದೆ ಅದರಿಂದ ಕಟ್ ಮಾಡಿದ ಮೇಲೆ ಮತ್ತೆ ಎಲ್ಲಾ ಕಡೆ ಅಂಟಿಕೊಂಡಿದೆಯಾ ಪರೀಕ್ಷಿಸಿ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಎಣ್ಣೆಯಲ್ಲಿ ಪುಡಿಯಲ್ಲ ಆಚೆ ಬರುತ್ತದೆ. ಇದನ್ನು ತಯಾರಿಸುವಾಗ ನೋಡಿಕೊಂಡು ಸರಿಯಾಗಿ ತಯಾರಿಸಿಕೊಳ್ಳಿ, ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ, ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ನಂತರ ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ, ಇದು ಸುಮಾರು ದಿನ ಹಾಳಾಗದೇ ಚೆನ್ನಾಗಿಯೇ ಇರುತ್ತದೆ. ಬೇಕಾದಾಗ ತಿನ್ನಬಹುದು. ಊಟಕ್ಕು ಸಿಹಿ ತರಹ ನೀಡಬಹುದು.

* ಪೂರಿಯೊಳಗೆ ಪುಡಿಯನ್ನು ತುಂಬುವಾಗ ಸರಿಯಾಗಿ ನೋಡಿ,ಆ ಕಡೆ-ಈ ಕಡೆ ಬರದಂತೆ ಮಧ್ಯಭಾಗದಲ್ಲಿ ಮಾತ್ರ ಇರುವಂತೆ ಹಾಕಿ ಮಡಿಸಿಕೊಳ್ಳಬೇಕು

Monday, August 17, 2009

Mysore Paak / ಮೈಸೂರ್ ಪಾಕ್

ಮೈಸೂರ್ ಪಾಕ್:
ಬೇಕಾಗುವ ಸಾಮಾಗ್ರಿಗಳು:
ಕಡಲೆಹಿಟ್ಟು-ಒಂದು ಕಪ್
ಸಕ್ಕರೆ - ಒಂದುವರೆ ಕಪ್
ನೀರು - ಎರಡು ಕಪ್
ತುಪ್ಪ - ಎರಡು ಕಪ್

ತಯಾರಿಸುವ ವಿಧಾನ:
ಮೊದಲಿಗೆ ಪಾಕವನ್ನು ತಯಾರಿಸಬೇಕು. ದಪ್ಪ ತಳದ ಪಾತ್ರೆಗೆ ಸಕ್ಕರೆಯನ್ನು ಹಾಕಿ ನೀರಿನೊಂದಿಗೆ ಬೆರೆಸಿ, ಕರಗಿ ಅದು ಎಳೆಪಾಕ ಬರುವವರೆಗೂ ಕುದಿಸಿ. ಎರಡು ಬೆರಳುಗಳ ಮದ್ಯೆ ಒಂದುಹನಿ ಪಾಕ ತೆಗೆದುಕೊಂಡು ನೋಡಿ ಪಾಕ ಬೆರಳುಗಳ ಮದ್ಯೆ ಎಳೆಯಂತೆ ಅಥವಾ ನಾರಿನಂತೆ ಬಂದ ತಕ್ಷಣ ಸ್ವಲ್ಪ ಸಣ್ಣ ಉರಿ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟು ಮತ್ತು ತುಪ್ಪವನ್ನು ಜೊತೆಯಲ್ಲಿಯೇ ಹಾಕುತ್ತಾ ಕೈ ಬಿಡದಂತೆ ತಿರುಗಿಸುತ್ತಿರಿ, ಗಂಟು ಗಂಟಾಗದಂತೆ ನೋಡಿಕೊಳ್ಳಿ. ಇದೇ ರೀತಿ ಎಲ್ಲಾ ಹಿಟ್ಟು ಮತ್ತು ತುಪ್ಪವನ್ನು ಹಾಕಿ, ಚೆನ್ನಾಗಿ ತಿರುಗಿಸುತ್ತಿರಿ. ಈ ಮಿಶ್ರಣವೂ ಗಟ್ಟಿಯಾಗುತ್ತಾ ಗೂಡು ಗೂಡಿನಂತೆ ಬಂದು ಪಾತ್ರೆಯ ತಳ ಬಿಡುತ್ತಾ ಬಂದ ತಕ್ಷಣ ಹದ ನೋಡಿಕೊಂಡು ಜಿಡ್ಡು ಸವರಿದ ತಟ್ಟೆಗೆ ಸುರಿದು ಆಯುತಾಕಾರವಾಗಿ ಅಥವಾ ಚೌಕಾಕಾರವಾಗಿ ಕತ್ತರಿಸಿ. ತಣ್ಣಗಾಗುವ ಮೊದಲೆ ಕತ್ತರಿಸಿ, ನಂತರ ಗಟ್ಟಿಯಾಗುತ್ತದೆ. ಒಮ್ಮೊಮ್ಮೆ ಹದ ಸರಿಯಾಗಿ ಬರದೇ ಇದ್ದಾಗ ಮೈಸೂರ್ ಪಾಕ್ ಗಟ್ಟಿಯಾಗಿ ಅಥವಾ ಮೆತ್ತಗೂ ಬರಬಹುದು, ಆದರೂ ತಿನ್ನಲು ರುಚಿಯಂತು ಇರುತ್ತದೆ. ಸವಿಯಾದ ಮೈಸೂರ್ ಪಾಕ್ ಸವಿಯಲು ಸಿದ್ದ.

Friday, November 16, 2007

Maddur Vada / ಮದ್ದೂರು ವಡೆ

ಮದ್ದೂರು ವಡೆ:

"ಮದ್ದೂರು" ಬೆಂಗಳೂರು ಮತ್ತು ಮೈಸೂರು ಮಧ್ಯೆ ಬರುವಂತ ಒಂದು ಊರಿನ ಹೆಸರು. ಈ ಊರಿನಲ್ಲಿ ತಯಾರಿಸಿದಂತ ವಡೆ ಇದು. ಅದಕ್ಕೆ ಒಂದು ಪುಟ್ಟ ಕಥೆ ಇದೆ. ಅಂದು ವಿಧಿಯಿಲ್ಲದೇ ತಯಾರಿಸಿದಂತ ವಡೆಗೆ ಬಹಳ ಬೇಡಿಕೆ ಬಂತು ,ಆಗಾಗಿ ಅವತ್ತಿನಿಂದ ಇದು ಒಂದು ಹೋಟೆಲ್ ಮೆನುನಲ್ಲಿ ಸೇರಿಕೊಂಡಿತು. ಅದು ದಿನಕಳೆದಂತೆ ಈ ವಡೆ ಪ್ರಸ್ಧಿದ್ಧಿಯಾಯಿತೆಂತು ಹೀಗೆ ಎಲ್ಲೋ ಓದಿದ ನೆನಪು. ಕೊನೆಗೆ ಆ ವಡೆಗೆ ಮದ್ದೂರು ವಡೆ ಅಂತನೆ ನಾಮಕರಣವಾಗಿ, ಅದು ನಮ್ಮ ಕರ್ನಾಟಕದ ಎಲ್ಲರ ಮನೆ ಮಾತಾಯಿತು. ಮದ್ದೂರು ಊರನ್ನು ಹಾದು ಹೋಗುವಾಗ ಅಲ್ಲಿಯ ಮದ್ದೂರು ವಡೆಯ ಸವಿಯನ್ನು ಸಾಮಾನ್ಯವಾಗಿ ಎಲ್ಲರು ನೋಡಿರುತ್ತಾರೆ. ಅದಂತೂ ಈಗ ಸುಮಾರು ವರುಷಗಳಿಂದ ಎಲ್ಲಾ ಊರಿನ ಹೋಟೆಲ್ ಮತ್ತು ಮನೆಗಳಲ್ಲೂ ತಯಾರಿಸುವಂತ ವಡೆಯಾಗಿಬಿಟ್ಟಿದೆ. ಈ ಇತಿಹಾಸ ಇರುವ ಮದ್ದೂರು ವಡೆಯನ್ನು ನಮಗೆ ಬಂದ ರೀತಿಯಲ್ಲಿ ತಯಾರಿಸೋಣ.

ಬೇಕಾಗುವ ಸಾಮಗ್ರಿಗಳು:

ಒಂದು ಬಟ್ಟಲು ಅಕ್ಕಿಹಿಟ್ಟು
ಕಾಲು ಬಟ್ಟಲು ಚಿರೋಟಿ ರವೆ
ಕಾಲು ಬಟ್ಟಲು ಮೈದಾಹಿಟ್ಟು
ಎರಡು ಚಮಚ ಕಾಯಿಸಿದ ಎಣ್ಣೆ
ಸಣ್ಣಗೆ ಹೆಚ್ಚಿದ ಈರುಳ್ಳಿ
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ
ಕೊತ್ತುಂಬರಿಸೊಪ್ಪು
ಕರಿಬೇವು
ಉಪ್ಪು
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

ಮೊದಲಿಗೆ ಅಕ್ಕಿಹಿಟ್ಟು,ಮೈದಾಹಿಟ್ಟು,ರವೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ,ಈರುಳ್ಳಿ,ಹಸಿಮೆಣಸಿನಕಾಯಿ,ಕಾಯಿಸಿರುವ ಎಣ್ಣೆ,ಹೆಚ್ಚಿದ ಕೊತ್ತುಂಬರಿ ಮತ್ತು ಕರಿಬೇವಿನ ಸೊಪ್ಪುಗಳನ್ನು ಹಾಕಿ, ಸ್ವಲ್ಪ ನೀರು ನೋಡಿ ಹಾಕಿಕೊಂಡು ಗಟ್ಟಿಯಾಗಿ ಕಲೆಸಿಕೊಂಡು ಚಿಕ್ಕ, ಚಿಕ್ಕ ಉಂಡೆ ಮಾಡಿ,ಎಣ್ಣೆ ಸವರಿದ ಕವರ್ ಮೇಲೆ ಪುಟ್ಟ ಪೂರಿಯಂತೆ ತಟ್ಟಿ, ಕಾದಿರುವ ಎಣ್ಣೆಯಲ್ಲಿ ಹಾಕಿ,ಎರಡು ಕಡೆಯು ಬೇಯಿಸಿ,ಹೊಂಬಣ್ಣ ಬರುವವರೆಗೆ ಅಥವಾ ಬೆಂದಿದೆ ಎನಿಸಿದ ನಂತರ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ಇದು ಬಿಸಿಯಾಗಿಯೂ ತಿನ್ನಲು ಚೆನ್ನಾಗಿರುತ್ತದೆ. ತಣ್ಣಗಾದರೂ ಚೆನ್ನ. ಈ ವಡೆಯನ್ನು ಹಾಗೆಯೇ ತಿನ್ನಬಹುದು. ಆದರೂ ಕಾಯಿಚಟ್ನಿಯೊಂದಿಗೆ ತುಂಬಾನೇ ರುಚಿಯಾಗಿರುತ್ತದೆ.

* ಮದ್ದೂರುವಡೆಯನ್ನು ಸ್ವಲ್ಪ ದಪ್ಪ ತಟ್ಟಿಕೊಂಡು ಸಹ ತಯಾರಿಸಿ. ಉಪ್ಪು ಮತ್ತು ಕಾರ ನಿಮಗೆ ಸೇರಿದ್ದು.
* ಕೆಲವರು ತೆಳುವಾಗಿ ತಯಾರಿಸುತ್ತಾರೆ. ದಪ್ಪ,ತೆಳು,ದೊಡ್ಡದು,ಚಿಕ್ಕದು ಎಲ್ಲಾ ನಿಮಗೆ ಹೇಗೇ ಬೇಕೋ ಆಗೆ ತಯಾರಿಸಿಕೊಳ್ಳಬಹುದು. ಆದರೆ ಹೇಗೇ ತಯಾರಿಸಿದರೂ ಕಲೆಸುವ ಹದ ಮತ್ತು ಎಣ್ಣೆಯಲ್ಲಿ ಕರಿಯುವ ಹದ ತಿಳಿದುಕೊಂಡರೆ ವಡೆಗಳು ಚೆನ್ನಾಗಿ ಬರುತ್ತವೆ.
* ಈರುಳ್ಳಿಯನ್ನು ಹೆಚ್ಚಾಗಿ ಹಾಕಿ.ನೀರನ್ನು ನೋಡಿಕೊಂಡು ಹಾಕಿ,ಏಕೆಂದರೆ ಈರುಳ್ಳಿಯು ನೀರು ಬಿಡುತ್ತದೆ. ಒಂದೊಂದು ಸಾರಿ ಅದೇ ಸಾಕಾಗುತ್ತದೆ.
ರುಚಿಕರವಾದ ಮದ್ದೂರುವಡೆಯನ್ನು ತಯಾರಿಸುವಾಗ ಡಯಟಿಂಗ್ ಮಾಡಬೇಡಿ. ಈ ವಡೆಗಳು ಮೂರ್ನಾಲ್ಕು ದಿನಗಳು ಕೆಡದೆ ಚೆನ್ನಾಗಿ ಇರುತ್ತದೆ.ಈ ವಡೆಗಳು ಹೇಗೆ ತಯಾರಿಸಿದರು ರುಚಿ ಚೆನ್ನಾಗಿಯೇ ಇರುತ್ತವೆ.

Tuesday, June 26, 2007

Kadubu- ಕಡುಬು:ಸಿಹಿ ಕಡುಬು

ಕಡುಬು:
ಬೇಕಾಗುವ ಸಾಮಾನುಗಳು:

ಹಿಟ್ಟು ಅಥವಾ ಮುದ್ದೆಗೆ:ಅಕ್ಕಿ ಹಿಟ್ಟು - ಎರಡು ಬಟ್ಟಲು
ಅರ್ಧ ಚಮಚ ಉಪ್ಪು

ಹೂರಣಕ್ಕೆ:

ಹುರಿಗಡಲೆ -ಬೇಕಾಗುವಷ್ಟು
ಗಸಗಸೆ ಸ್ವಲ್ಪ
ಎಳ್ಳು ಸ್ವಲ್ಪ
ಬೆಲ್ಲ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಕಾಯಿತುರಿ - ಒಂದು ಕಾಯಿ

ತಯಾರಿಸುವ ವಿಧಾನ:

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ಉಪ್ಪು ಹಾಕಿಡಿ. ಅದು ಚೆನ್ನಾಗಿ ಬೇಯಸಿ, ಅದನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.
ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಈ ಕಡುಬುಗಳನ್ನು ಹಬೆಯಲ್ಲಿ ಕೆಲವರು ಬೇಯಿಸಿ ತಿನ್ನುತ್ತಾರೆ, ಕೆಲವರು ಹಾಗೇ ಇಷ್ಟಪಡುತ್ತಾರೆ.ಸಿಹಿ ಕಡುಬುಗಳನ್ನಾದರೆ ಬೇಯಿಸದೆ ತಿನ್ನಬಹುದು. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬು ತಯಾರಿಸಿದರೆ ಹಬೆಯಲ್ಲಿ ಬೇಯಿಸಬೇಕು.ಇದಿಷ್ಟು ಕಡುಬಿನ ಹಿಟ್ಟಿನ ಬಗ್ಗೆ.

ಹೂರಣ ತಯಾರಿಸಲು:

ಹುರಿಗಡಲೆಯನ್ನು ಪುಡಿ ಮಾಡಿಕೊಳ್ಳಿ, ಗಸಗಸೆ ಮತ್ತು ಎಳ್ಳನ್ನು ಹುರಿದುಕೊಂಡು ಪುಡಿ ಮಾಡಿ, ಬೆಲ್ಲವನ್ನು ಸಹ ಸಣ್ಣ ಪುಡಿ ಮಾಡಿಕೊಂಡು ಅದಕ್ಕೆ ಹುರಿಗಡಲೆ ಪುಡಿ, ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ, ಎಲ್ಲವನ್ನು ಚೆನ್ನಾಗಿ ಹೊಂದಿಕೊಳ್ಳುವಂತೆ ಕೈನಲ್ಲಿ ಬೆರೆಸಿ. ಇದನ್ನು ಕಡುಬಿಗೆ ತುಂಬುವ ಹೂರಣ ಎನ್ನುತ್ತೇವೆ. ಕಡುಬು ತಯಾರಿಸುವಾಗ ಇದಕ್ಕೆ ಹಸಿ ಕಾಯಿತುರಿಯನ್ನು ಹಾಕಬೇಕು ಮತ್ತು ಚೆನ್ನಾಗಿ ಬೆರೆಸಬೇಕು, ಕಾಯಿತುರಿ ಜಾಸ್ತಿ ಇದ್ದಷ್ಟು ರುಚಿ ಜಾಸ್ತಿ. ಅದಕ್ಕೆ ಪುಡಿ ಅಂದರೆ ಹೂರಣ ತಯಾರಿಸುವಾಗ ಬೆಲ್ಲವನ್ನು ಸ್ವಲ್ಪ ಜಾಸ್ತಿಯೇ ಹಾಕಬೇಕು. ಅದು ಕಾಯಿತುರಿ ಹಾಕಿದಾಗ ಸರಿಯಾಗುತ್ತದೆ.
ಅಕ್ಕಿ ಹಿಟ್ಟು ಅಥವ ಮುದ್ದೆಯಿಂದ ಸಣ್ಣ ಉಂಡೆಯನ್ನು ತೆಗೆದುಕೊಂಡು ಅದನ್ನು ಬಟ್ಟಲಿನ ಆಕಾರ ಅಥವಾ ಪೂರಿಯಂತೆ ತಟ್ಟಿಕೊಂಡು ಅದರೊಳಗೆ ಕಡ್ಲೆಮಿಶ್ರಣದ ಹೂರಣವನ್ನು ತುಂಬಿ, ಮಧ್ಯ/ಅರ್ಧ ಭಾಗಕ್ಕೆ ಮಡಿಸಿಕೊಂಡು ಎರಡು ಬದಿಯ ಅಂಚನ್ನು ಒಂದಕ್ಕೊಂದು ನೀರು/ಹಾಲು/ತೆಂಗಿನಹಾಲು ಯಾವುದಾದರೂ ಉಪಯೋಗಿಸಿ ಅಂಟಿಸಿ. ಅಂಚು ಕತ್ತರಿಸಿ/ಡಿಸೈನ್ ಮಾಡಿ. ಇದೇರೀತಿ ಎಲ್ಲವನ್ನು ತಯಾರಿಸಿ, ಸಿಹಿಕಡುಬು ತಿನ್ನಲು ತಯಾರಾಗುತ್ತದೆ.

* ಹೂರಣವನ್ನು ಹಿಂದಿನ ದಿನ/ ಮೊದಲೆ ತಯಾರಿಸಿಕೊಳ್ಳಬಹುದು, ಇದಕ್ಕೆ ನೀರು ಸೇರಿಸದೆ ಇರುವುದರಿಂದ ಹೂರಣ ಅಂದರೆ ಕಡ್ಲೆಮಿಶ್ರಣ ಪುಡಿಯೂ ಸುಮಾರು ದಿನ ಇರುತ್ತದೆ. ತಯಾರಿಸಿಟ್ಟುಕೊಂಡಿದ್ದರೆ ಯಾವಾಗ ಬೇಕೋ ಆಗ ಕಡುಬನ್ನು ಮಾಡಿಕೊಳ್ಳಬಹುದು.
*ಗಸಗಸೆ,ಎಳ್ಳು ಹುರಿದು, ಅದರ ಜೊತೆ ಕಡ್ಲೆ ಮತ್ತು ಬೆಲ್ಲವನ್ನು ಸೇರಿಸಿ, ಒಟ್ಟಿಗೆ ಎಲ್ಲವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು.
* ಕಡುಬು ತಯಾರಿಸುವಾಗ ಹಸಿ ತೆಂಗಿನಕಾಯಿ ತುರಿಯನ್ನು ಮರೆಯದೆ ಸೇರಿಸಿ,ಬೆರೆಸಿ. ಅದೇ ತೆಂಗಿನ ತುರಿಯಿಂದ ಸ್ವಲ್ಪ ಹಾಲು ಹಿಂಡಿಕೊಳ್ಳಿ. ಅಂಚುಗಳನ್ನು ಅಂಟಿಸುವಾಗ ಉಪಯೋಗಿಸಲು ಬೇಕು.
*ಯಾವ ರೀತಿಯ ಕಡುಬುಗಳನ್ನೆ ಆಗಲಿ ತಯಾರಿಸುವಾಗ ಅಂಚುಗಳನ್ನು ಸರಿಯಾಗಿ ಅಂಟಿಸಿ, ಬಿಟ್ಟುಕೊಳ್ಳುತ್ತವೆ ಕೆಲವೊಮ್ಮೆ, ಆಗ ಹೂರಣವೆಲ್ಲಾ ಚೆಲ್ಲುತ್ತದೆ/ಆಚೆ ಬರುತ್ತದೆ.
* ಇದೇ ರೀತಿ ಮೋದಕವನ್ನು ತಯಾರಿಸಲು ಅಕ್ಕಿ ಹಿಟ್ಟಿನಿಂದ ಪುಟ್ಟ ಬಟ್ಟಲಿನ ಆಕಾರ ಮಾಡಿ ಅದಕ್ಕೆ ಹೂರಣ ತುಂಬಿ, ಮೇಲ್ಭಾಗದಲ್ಲಿ ಎಲ್ಲಾ ಅಂಚುಗಳನ್ನು ಮೇಲಕ್ಕೆ ತಗೊಂಡು ಮುಚ್ಚಿ, ಈ ಮೋದಕ ಸಿಹಿಯು ನಮ್ಮ ಗಣಪನಿಗೆ ಬಹಳ ಅಚ್ಚುಮೆಚ್ಚು.
* ಈ ಕಡುಬುಗಳನ್ನು ಹಾಗೇಯೇ ತಿನ್ನಬಹುದು, ಆವಿಯಲ್ಲಿ ಬೇಯಿಸುವ ಅಗತ್ಯವಿಲ್ಲ. ಕೆಲವರು ಮಾತ್ರ ಬೇಯಿಸಿ ತಿನ್ನುತಾರೆ. ಸಾಮನ್ಯವಾಗಿ ಹಾಗೇ ತಿನ್ನುತ್ತಾರೆ, ತಿನ್ನುವಾಗ ಕಡುಬುಗಳ ಮೇಲೆ ತುಪ್ಪ ಹಾಕಿಕೊಂಡು ತಿನ್ನಬೇಕು.

ಕಡುಬುಗಳನ್ನು ಭೀಮನ ಅಮವಾಸ್ಯೆ ಮತ್ತು ಗಣೇಶ ಚತುರ್ಥಿ ಹಬ್ಬದಲ್ಲಿ ಖಾಯಂ ಆಗಿ ತಯಾರಿಸುತ್ತಾರೆ

Monday, June 25, 2007

Kadubina Hittu/Mudde - ಅಕ್ಕಿಹಿಟ್ಟು/ಮುದ್ದೆ

ಕಡುಬುಗಳನ್ನು ಭೀಮನ ಅಮವಾಸ್ಯೆ ಮತ್ತು ಗಣೇಶ ಚತುರ್ಥಿ ಹಬ್ಬದಲ್ಲಿ ಖಾಯಂ ಆಗಿ ತಯಾರಿಸುತ್ತಾರೆ. ಕಡುಬಿನಹಿಟ್ಟು ಬಗ್ಗೆ ಒಂದಿಷ್ಟು ಮಾಹಿತಿ.

ಕಡುಬಿನ ಹಿಟ್ಟು ತಯಾರಿಸುವ ರೀತಿ:

ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು
ಕಾಲು ಚಮಚ ಉಪ್ಪು
ಎಣ್ಣೆ - ಒಂದು ಚಮಚ
ನೀರು

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ,ಎಣ್ಣೆ ಮತ್ತು ಉಪ್ಪು ಹಾಕಿಡಿ. ಹಿಟ್ಟನ್ನು ಚೆನ್ನಾಗಿ ಬೇಯಸಿ, ಅದನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.

ಕಡುಬನ್ನು ತಯಾರಿಸುವ ರೀತಿ:

ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಈ ಕಡುಬುಗಳನ್ನು ಹಬೆಯಲ್ಲಿ ಕೆಲವರು ಬೇಯಿಸಿ ತಿನ್ನುತ್ತಾರೆ, ಕೆಲವರು ಹಾಗೇ ಇಷ್ಟಪಡುತ್ತಾರೆ.ಸಿಹಿ ಕಡುಬುಗಳನ್ನಾದರೆ ಬೇಯಿಸದೆ ತಿನ್ನಬಹುದು. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬು ತಯಾರಿಸಿದರೆ ಹಬೆಯಲ್ಲಿ ಬೇಯಿಸಬೇಕು.ಇದಿಷ್ಟು ಕಡುಬಿನ ಬಗ್ಗೆ ಮಾಹಿತಿ.

* ಇದೇ ರೀತಿ ಮೋದಕವನ್ನು ತಯಾರಿಸಲು ಅಕ್ಕಿ ಹಿಟ್ಟಿನಿಂದ ಪುಟ್ಟ ಬಟ್ಟಲಿನ ಆಕಾರ ಮಾಡಿ ಅದಕ್ಕೆ ಹೂರಣ ತುಂಬಿ, ಮೇಲ್ಭಾಗದಲ್ಲಿ ಎಲ್ಲಾ ಅಂಚುಗಳನ್ನು ಮೇಲಕ್ಕೆ ತಗೊಂಡು ಮುಚ್ಚಿ, ಈ ಮೋದಕ ಸಿಹಿಯು ನಮ್ಮ ಗಣಪನಿಗೆ ಬಹಳ ಅಚ್ಚುಮೆಚ್ಚು.

ಕಡುಬುಗಳಲ್ಲಿ ವಿವಿಧ ರೀತಿ, ಹಲವು ಬಗೆ, ಒಬ್ಬೊಬ್ಬರು ಒಂದೊಂದು ರೀತಿ ತಯಾರಿಸುತ್ತಾರೆ. ಕೆಲವು ರೆಸಿಪಿಗಳನ್ನು ತಿಳಿಸಿರುವೆ, ಕಡುಬಿನ ಲೇಬಲ್ ನಲ್ಲಿ ನೋಡಿ

Sunday, May 20, 2007

Kodubale / Spicy Rings - ಕೋಡುಬಳೆ

ಕೋಡುಬಳೆ:

ಕುರುಕಲು ತಿಂಡಿ ಎಂದರೆ ನೆನಪಾಗೋದೇ ಅಮ್ಮ ಮಾಡುತ್ತಿದ್ದ ತಿಂಡಿಗಳು. ಈಗ ನಾವುಗಳು ಎಷ್ಟೇ ತಿಂಡಿ ಅವರು ತಯಾರಿಸುತ್ತಿದ ರೀತಿಯೇ ಮನೆಯಲ್ಲಿ ಮಾಡಿದರು ಸಹ ಮತ್ತು ಈಗೆಲ್ಲಾ ಬೇಕರಿಗಳಲ್ಲೂ ತುಂಬಾ ಚೆನ್ನಾಗಿ ಅದೇ ತರಹ ತಿಂಡಿಗಳು ಸಿಕ್ಕುತ್ತವೆ, ಅದನ್ನು ತಗೊಂಡು ಬಂದು ತಿಂದರು ಕೂಡ ಅಜ್ಜಿ ಮತ್ತು ಅಮ್ಮ ಮಾಡಿದ ತಿಂಡಿಗಳ ನೆನಪು ಮರೆಯಲಾಗದು ಅಂತ ನನಗನ್ನಿಸುತ್ತೆ. ನಮ್ಮ ಅಮ್ಮಂದಿರು ಕುರುಕಲು ತಿಂಡಿ ತಯಾರಿಸುವಾಗ ಅದಕ್ಕೆ ಹೆಚ್ಚು ಗಮನ ಕೊಟ್ಟು ತಯಾರಿಸುತ್ತಿದ್ದರು,ಅಕ್ಕಿಯಿಂದ ತಯಾರಿಸುವ ತಿಂಡಿಗಳಿಗಂತೂ ಅದಕ್ಕೆಂದೇ ಅಕ್ಕಿಯನ್ನು ತೊಳೆದು,ನೆರಳಲ್ಲಿ ಒಣಗಿಸಿ,ಮಿಲ್ ನಲ್ಲಿ ನೀಟಾಗಿ ಹಿಟ್ಟು ಹಾಕಿಸಿಕೊಂಡು ಬರುತ್ತಿದ್ದರು. ಆ ರೀತಿ ಅಕ್ಕಿಹಿಟ್ಟಿನಿಂದ ತಯಾರಿಸಿದ ತಿಂಡಿಗಳಂತೂ ಬಹಳ ರುಚಿ. ನಾವುಗಳೋ ಈಗ ರೆಡಿಮೇಡ್ ಅಕ್ಕಿ ಹಿಟ್ಟು ತಂದು ತಯಾರಿಸುವುದು. ಅದರಲ್ಲಿ ತಯಾರಿಸೋದೇ ಕಷ್ಟ. ಇನ್ನು ತೊಳೆದು,ಒಣಗಿಸಿ,ಮಿಷನ್ ಗೆ ಹಾಕಿಸಿಕೊಂಡು ಬರುವಷ್ಟು ತಾಳ್ಮೆ ನಮಗೆಲ್ಲಿ ಬರಬೇಕು ಅಲ್ವಾ? ಆದರೂ ಹೇಗೋ ಈಗ ಸಧ್ಯ ನಮ್ಮಂತವರಿಗೆ ಅಂತ ಈ ರೀತಿ ಒಳ್ಳೆಯ ಅಕ್ಕಿಹಿಟ್ಟು ಸಿಗುವುದು ನಮ್ಮ ಪುಣ್ಯ. ಆದರೂ ಅಮ್ಮ ತಯಾರಿಸಿದ ಕುರುಕಲು ತಿಂಡಿ ತಿನ್ನುವಾಗ ತುಂಬಾ ರುಚಿ,ಈಗ ನಾವು ತಯಾರಿಸುವಾಗ ಹಿಟ್ಟು ಮಾಡಿಸುವ ಕೆಲಸ ಒಂದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ಎಲ್ಲಾ ಕೆಲಸಗಳು ಮಾಮುಲಿ. ಕುರುಕಲು ಅಥವಾ ಯಾವುದೇ ಎಣ್ಣೆ ತಿಂಡಿಗಳನ್ನು ತಯಾರಿಸುವಾಗ ಸ್ವಲ್ಪ ಕಷ್ಟನೇ,ಒಂದೇ ಒಂದು ದಿನ ಕಷ್ಟಪಟ್ಟರೆ ರುಚಿಯಾದ ತಿಂಡಿ ತಯಾರುಮಾಡಿಟ್ಟುಕೊಂಡು ಬೇಕಾದಾಗ ಉಪಯೋಗಿಸಬಹುದು. ಈಗ ಇಲ್ಲಿ ಕೋಡುಬಳೆ ತಯಾರಿಸೋಣ.ಕೋಡುಬಳೆಯನ್ನು ತಯಾರಿಸುವುದರಲ್ಲೂ ಅನೇಕ ವಿಧಗಳಿವೆ,ಅವುಗಳಲ್ಲಿ ಇದು ಒಂದು.

ಬೇಕಾಗುವ ಸಾಮಾಗ್ರಿಗಳು:

೪ ಕಪ್ ಅಕ್ಕಿಹಿಟ್ಟು
೧ ಕಪ್ ಮೈದಾ ಹಿಟ್ಟು
೧ ಕಪ್ ಚಿರೋಟಿ ರವೆ
೧ ಕಪ್ ಹುರಿಗಡಲೆ ಹಿಟ್ಟು /ಪುಡಿ
ಜೀರಿಗೆ ೧ ಟೇಬಲ್ ಸ್ಪೂನ್
ಎಳ್ಳು ೧ ಟೇಬಲ್ ಸ್ಪೂನ್
ಇಂಗಿನ ಪುಡಿ ೧ ಟೀ ಸ್ಪೂನ್
೪ ಟೇಬಲ್ ಸ್ಪೂನ್ ಕಾಯಿಸಿದ ಎಣ್ಣೆ
ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು (ಬೇಕಿದ್ದರೆ)
ಅಚ್ಚಖಾರದ ಪುಡಿ ಮತ್ತು ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ಎಲ್ಲಾ ಸಾಮಾಗ್ರಿಗಳನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ,ಎಷ್ಟು ಅಗತ್ಯವೊ ಅಷ್ಟು ಮಾತ್ರ ನೀರನ್ನು ಹಾಕಿಕೊಂಡು ಹಿಟ್ಟನ್ನು ಗಟ್ಟಿಯಾಗಿ ಕಲೆಸಿಕೊಳ್ಳಿ, ಸ್ವಲ್ಪ ಮೆದುವಾಗಿರುವಂತೆ ಕಲೆಸಿಕೊಳ್ಳಿ, ತುಂಬಾ ಗಟ್ಟಿಯಾಗಿರಬಾರದು. ನಂತರ ಅದರಿಂದ ಚಿಕ್ಕಚಿಕ್ಕ ಉಂಡೆ ತೆಗೆದುಕೊಂಡು,ಮಣೆಯ ಮೇಲೆ ಅದನ್ನು ಕೋಡುಬಳೆ ಆಕಾರದಲ್ಲಿ ರಿಂಗ್ ತರಹ ಮಾಡಿಕೊಂಡು ಕಾದಿರುವ ಎಣ್ಣೆಯಲ್ಲಿ ಕರಿಯಿರಿ, ಉರಿ ತುಂಬಾ ಇರಬಾರದು,ಒಳಗೆ ಹಿಟ್ಟು ಬೇಯುವುದಿಲ್ಲ, ಮೀಡಿಯಂ ಅಥವಾ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗು ಗರಿಗರಿಯಾಗಿ ಕರಿಯಿರಿ, ಇದೇ ರೀತಿ ಎಲ್ಲಾ ಕರಿದಿಟ್ಟು,ಚೆನ್ನಾಗಿ ತಣ್ಣಗಾದ ಮೇಲೆ ಗಾಳಿ ಆಡದ ಡಬ್ಬದಲ್ಲಿ ತುಂಬಿಡಿ,ಇದು ಸುಮಾರು ದಿನ ಚೆನ್ನಾಗಿ ಇರುತ್ತದೆ. ಈ ಕುರುಕು ತಿಂಡಿ ಕಾಫಿ ,ಟೀ,ಎಲ್ಲದಕ್ಕೂ ಸೈ.

Tuesday, April 10, 2007

Karjikaayi/Karigadubu - ಕರ್ಜೀಕಾಯಿ/ಕರಿಗಡುಬು


ಕರ್ಜೀಕಾಯಿ/ಕರಿಗಡುಬು:

ಬೇಕಾಗುವ ಸಾಮಗ್ರಿಗಳು:

ಮೈದಾಹಿಟ್ಟು - ಒಂದು ಬಟ್ಟಲು
ಚಿಟಿಕೆ ಉಪ್ಪು
ಎರಡು ಚಮಚ ತುಪ್ಪ
ಕಡ್ಲೆ - ಒಂದು ಬಟ್ಟಲು
ಕೊಬ್ಬರಿತುರಿ
ಸಕ್ಕರೆಪುಡಿ
ಏಲಕ್ಕಿ ಪುಡಿ
ಗಸಗಸೆ
ಎಳ್ಳು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:


-ಮೊದಲು ಮೈದಾಹಿಟ್ಟಿಗೆ,ಚಿಟಿಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ.ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ.ಇದನ್ನು ’ಕಣಕ’ಎನ್ನುತ್ತಾರೆ.

-ಗಸಗಸೆಯನ್ನು ಸ್ವಲ್ಪ ಹುರಿದು,ಕುಟ್ಟಿಕೊಳ್ಳಿ.
-ಕಡ್ಲೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಸಕ್ಕರೆಪುಡಿ,ಕೊಬ್ಬರಿತುರಿ,ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಸರಿಯಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಬೆರೆಸಿಡಿ.ಇದನ್ನು’ಹೂರಣ’ಎನ್ನುತ್ತಾರೆ.

-ನಂತರ ಮೈದಾಹಿಟ್ಟಿನ ಕಣಕದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು,ಅದರಿಂದ ಪುಟ್ಟ ಪುಟ್ಟ ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಕೊಬ್ಬರಿ-ಕಡ್ಲೆ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ,ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ,ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ,ಸರಿಯಾಗಿ ಎಲ್ಲಾ ಕಡೆಯೂ ಅದನ್ನು ಕ್ಲೋಸ್ ಮಾಡಿ,ಅಂಚು ಮಡಿಸುವ ವಿಧಾನ ತಿಳಿದಿರುವವರು ಅದನ್ನು ಸುತ್ತಿ ಸುತ್ತಿ ಅಂಚಿಗೆ ಚಿತ್ತಾರ ಮಾಡಬಹುದು. ಅದು ಬರದೇ ಇರುವವರು ಚೆನ್ನಾಗಿ ಅದುಮಿ ಮುಚ್ಚಿದ ಅಂಚಿನ ತುದಿ ಭಾಗ ಮಾತ್ರ ಕಟ್ಟರ್ ನಿಂದ (ಕತ್ತರಿಸಿ)ಕಟ್ ಮಾಡಬಹುದು.ಕತ್ತರಿಸಿ ತೆಗೆದ ಹೆಚ್ಚಿನ ಹಿಟ್ಟನ್ನು ತೆಗೆದಿಟ್ಟು ಕಣಕಕ್ಕೆ ಹಾಕಿ. ಕಟ್ಟರ್ ಸಿಗುತ್ತದೆ ಅದರಿಂದ ಕಟ್ ಮಾಡಿದ ಮೇಲೆ ಮತ್ತೆ ಎಲ್ಲಾ ಕಡೆ ಅಂಟಿಕೊಂಡಿದೆಯಾ ಪರೀಕ್ಷಿಸಿ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಎಣ್ಣೆಯಲ್ಲಿ ಪುಡಿಯೆಲ್ಲಾ ಆಚೆ ಬರುತ್ತದೆ. ಇದನ್ನು ತಯಾರಿಸುವಾಗ ನೋಡಿಕೊಂಡು ಸರಿಯಾಗಿ ತಯಾರಿಸಿಕೊಳ್ಳಿ, ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ,ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ.ಕರ್ಜೀಕಾಯಿಗಳು ತಯಾರಾಗುತ್ತದೆ.ನಂತರ ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ,ಇದು ಸುಮಾರು ದಿನ ಹಾಳಾಗದೇ ಚೆನ್ನಾಗಿಯೇ ಇರುತ್ತದೆ. ಬೇಕಾದಾಗ ತಿನ್ನಬಹುದು. ಊಟಕ್ಕೂ ಸಿಹಿ ತರಹ ನೀಡಬಹುದು.

* ಪೂರಿಯೊಳಗೆ ಪುಡಿಯನ್ನು ತುಂಬುವಾಗ ಸರಿಯಾಗಿ ನೋಡಿ,ಆ ಕಡೆ-ಈ ಕಡೆ ಬರದಂತೆ ಮಧ್ಯಭಾಗದಲ್ಲಿ ಮಾತ್ರ ಇರುವಂತೆ ಹಾಕಿ ಮಡಿಸಿಕೊಳ್ಳಬೇಕು.

Karigadubu - ಕರಿಗಡುಬು:

ಕರಿಗಡುಬು:

ಕಡುಬು ಮತ್ತು ಮೋದಕ ಎಂದರೆ ನೆನಪಾಗುವುದೇ ನಮ್ಮ ಮುದ್ದು ಗಣಪನ ಹಬ್ಬ ಅಲ್ಲವೇ!!!!!!
ಕಡುಬು ಎಂದರೆ ಹೂರಣವನ್ನು(ಫಿಲ್ಲಿಂಗ್) ಅಕ್ಕಿಹಿಟ್ಟು ಅಥವಾ ಮೈದಾಹಿಟ್ಟಿನಲ್ಲಿ ತಯಾರಿಸಿದ ಕಣಕದ ಪುಟ್ಟ ಪೂರಿಯ ಎಲೆಯ ನಡುವೆ/ಮಧ್ಯ ಭಾಗಕ್ಕೆ ತುಂಬಿ, ಅದನ್ನು ಮಧ್ಯಭಾಗಕ್ಕೆ ಅರ್ಧಕ್ಕೆ ಸರಿಯಾಗಿ ಮಡಿಚಿ,ಅರ್ಧ ವೃತ್ತಾಕಾರವಾಗಿ ಬರುವುದನ್ನು,ಎರಡು ಬದಿ/ಅಂಚುಗಳನ್ನು ಅಂಟಿಸಿ ಚೆನ್ನಾಗಿ ಒತ್ತಿ ಅದರ ಅಂಚುಗಳನ್ನು ಚಿತ್ತಾರ ಮಾಡಿ ಅಥವ ಅಂಚನ್ನು ಅದೇ ಆಕಾರದಲ್ಲಿ ಕಟ್ಟರ್ ನಿಂದ ಕತ್ತರಿಸಿ,ಬಂದ ಹೆಚ್ಚಾದ ಹಿಟ್ಟನ್ನು ತೆಗೆಯಿರಿ. ಅವಶ್ಯಕತೆ ಇದ್ದರೆ ಅಂಚು ಅಂಟಿಸಲು ನೀರು ಅಥವಾ ಹಾಲನ್ನು ಉಪಯೋಗಿಸಬಹುದು. ಅಂಚು ಬಿಟ್ಟುಕೊಳ್ಳದಂತೆ ಸರಿಯಾಗಿ ಅದುಮಿ,ಇದು ಕಡುಬನ್ನು ತಯಾರಿಸುವ ರೀತಿ, ಅದು ಯಾವ ರೀತಿಯ ಕಡುಬು ಆಗಿರಲಿ ತಯಾರಿಸುವ ರೀತಿ ಒಂದೇ ತರಹ.
ಈ ಕಡಬುಗಳನ್ನು ಅಕ್ಕಿಹಿಟ್ಟಿನಲ್ಲಿ ತಯಾರಿಸಿರುವುದನ್ನು ಹಬೆಯಲ್ಲಿ ಬೇಯಿಸಬೇಕು.ಇದನ್ನು ಕಡುಬು ಎನ್ನುತ್ತೇವೆ.
ಮೈದಾಹಿಟ್ಟಿನಲ್ಲಿ ತಯಾರಿಸಿರುವುದನ್ನು ಎಣ್ಣೆಯಲ್ಲಿ ಕರಿಯಬೇಕು. ಎಣ್ಣೆಯಲ್ಲಿ ಕರಿಯುವುದರಿಂದ ಇದನ್ನು ಕರಿದ ಕಡುಬು ಅಥವಾ ಕರ್ಜೀಕಾಯಿ ಎನ್ನುತ್ತೇವೆ.
ಕಡುಬಿನಲ್ಲಿ ವಿವಿಧ ರೀತಿಗಳಿವೆ.
ಕರಿಗಡುಬು ಅಂದರೆ ಹೂರಣವನ್ನು ಕರ್ಜೀಕಾಯಿ ತಯಾರಿಸುವ ರೀತಿಯಲ್ಲಿ ತಯಾರಿಸಿ,ಎಣ್ಣೆಯಲ್ಲಿ ಕರಿಯುವುದರಿಂದ ಕರಿದ ಕಡುಬು ಆಡುಭಾಷೆಯಲ್ಲಿ ಕರಿಗಡುಬು ಎಂದಾಗಿದೆ. ಇದನ್ನು ಹೆಚ್ಚಾಗಿ ನಮ್ಮ ಪ್ರೀತಿಯ ಶ್ರೀ ಗಣೇಶನ ಹಬ್ಬದಲ್ಲಿ ತಯಾರಿಸುತ್ತಾರೆ. ಕೆಲವರು ಕಡ್ಲೆ-ಕೊಬ್ಬರಿಯ ಹೂರಣದ ಕರ್ಜೀಕಾಯಿ/ಕರಿಗಡುಬು ಮಾಡುವರು. ಮತ್ತೆ ಕೆಲವರು ಈ ರೀತಿಯ ಹೂರಣದ ಕಡುಬನ್ನು ತಯಾರಿಸುತ್ತಾರೆ. ಕೆಲವರು ಹೋಳಿಗೆಯನ್ನು,ಕೆಲವರು ಹೆಸರುಬೇಳೆ ಕಡುಬು, ಮತ್ತೆ ಕೆಲವರು ಸಿಹಿಕಡುಬು ತಯಾರಿಸುತ್ತಾರೆ. ಅವರವರ ಮನೆ ಪದ್ಧತಿಯಂತೆ ನಡೆಸಿಕೊಂಡು ಬರುತ್ತಾರೆ. ಕಡುಬನ್ನು ಯಾವ ರೀತಿ ತಯಾರಿಸಿದರೂ ನಮ್ಮ ಗಣೇಶನಿಗೆ ಮಾತ್ರ ಯಾವುದೋ ಒಂದು ಕಡುಬಂತೂ ಅವತ್ತಿನ ಹಬ್ಬದೂಟದಲ್ಲಿ ಇರಲೇಬೇಕು. ಅವನು ಆ ಕಡುಬು-ಈ ಕಡುಬು ಅಂತ ಕೇಳುತ್ತಾನೆಯೇ ನಮ್ಮ ನಮ್ಮ ಬಾಯಿರುಚಿಗಳಿಗೆ ಈ ಹಬ್ಬಗಳು ಒಂದು ನೆಪ ಅಷ್ಟೇ. ಮಾಮುಲಿನಂತೆ ವಿಶೇಷ ಅಡಿಗೆ ಮಾಡಿಕೊಂಡು ತಿನ್ನಲು ಸೋಮಾರಿಗಳು ನಾವು. ಹೀಗೆ ಹಬ್ಬದ ಹೆಸರಲ್ಲಿ ಭರ್ಜರಿ ಊಟ ತಯಾರಿಸಿದರಾಯಿತು. ಬರೀತಾ ಹೋದರೆ ಮುಗಿಯೋದೇ ಇಲ್ಲ ಎನಿಸುತ್ತೆ. ಸರಿ ಸಧ್ಯಕ್ಕೆ ಇಲ್ಲಿ ಕರಿಗಡುಬು ತಯಾರಿಸೋಣ.

ಬೇಕಾಗುವ ಸಾಮನುಗಳು:

ಮೈದಾಹಿಟ್ಟು - ಒಂದು ಬಟ್ಟಲು
ಚಿರೋಟಿ ರವೆ - ಎರಡು ಚಮಚ
ಚಿಟಿಕೆ ಉಪ್ಪು
ಎರಡು ಚಮಚ ತುಪ್ಪ
ಬೇಳೆ ಹೂರಣ
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟಿಗೆ,ಚಿಟಿಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ. ಇದನ್ನು ’ಕಣಕ’ ಎನ್ನುತ್ತೇವೆ.
ತೊಗರಿಬೇಳೆಯನ್ನು ಬೇಯಿಸಿಕೊಂಡು, ಅದರ ನೀರು ಬಸಿದ ಮೇಲೆ ಬರುವ ಬೇಳೆಯನ್ನು,ಬೆಲ್ಲ ಮತ್ತು ಏಲಕ್ಕಿಯನ್ನು ಸೇರಿಸಿ,ಒಲೆಯ ಮೇಲಿಟ್ಟು,ಚೆನ್ನಾಗಿ ಬೆರೆಸಿ, ಅದನ್ನು ನುಣ್ಣಗೆ ರುಬ್ಬಿಕೊಂಡ ನಂತರ ಅದನ್ನು’ಹೂರಣ’ ಎನ್ನುತ್ತೇವೆ.

ನಂತರ ಮೈದಾಹಿಟ್ಟಿನ ಕಣಕದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು,ಅದರಿಂದ ಪುಟ್ಟ ಪುಟ್ಟ ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಬೇಳೆಬೆಲ್ಲ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ, ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ,ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ ,ಸರಿಯಾಗಿ ಎಲ್ಲಾ ಕಡೆಯೂ ಅದನ್ನು ಮುಚ್ಚಿ,ತೆರೆದುಕೊಳ್ಳದಂತೆ ಗಟ್ಟಿಯಾಗಿ ಮುಚ್ಚಬೇಕು. ಅಂಚು ಮಡಿಸುವ ವಿಧಾನ ತಿಳಿದಿರುವವರು ಅದನ್ನು ಸುತ್ತಿ ಸುತ್ತಿ ಅಂಚಿಗೆ ಚಿತ್ತಾರ ಮಾಡಬಹುದು. ಅದು ಬರದೇ ಇರುವವರು ಚೆನ್ನಾಗಿ ಅದುಮಿ ಮುಚ್ಚಿದ ಅಂಚಿನ ತುದಿ ಭಾಗ ಮಾತ್ರ ಕಟ್ಟರ್ ನಿಂದ ಕಟ್ ಮಾಡಬಹುದು. ಕತ್ತರಿಸಿದಾಗ ಬರುವ ಹೆಚ್ಚಿನ ಹಿಟ್ಟನ್ನು ತೆಗೆದುಹಾಕಿ,ಅದನ್ನು ಮತ್ತೆ ಉಪಯೋಗಿಸಬಹುದು. ಕಟ್ಟರ್ ಸಿಗುತ್ತದೆ ಅದರಿಂದ ಕಟ್ ಮಾಡಿದ ಮೇಲೆ ಮತ್ತೆ ಎಲ್ಲಾ ಕಡೆ ಅಂಟಿಕೊಂಡಿದೆಯಾ ಪರೀಕ್ಷಿಸಿ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಎಣ್ಣೆಯಲ್ಲಿ ಪುಡಿಯೆಲ್ಲಾ ಆಚೆ ಬರುತ್ತದೆ. ಇದನ್ನು ತಯಾರಿಸುವಾಗ ನೋಡಿಕೊಂಡು ಸರಿಯಾಗಿ ತಯಾರಿಸಿಕೊಳ್ಳಿ, ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ, ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ಬೇಳೆ ಹೂರಣದ ಕರಿಗಡುಬು ತಯಾರಾಗುತ್ತದೆ.
* ಪೂರಿಯೊಳಗೆ ಹೂರಣವನ್ನು ತುಂಬುವಾಗ ಸರಿಯಾಗಿ ನೋಡಿ,ಆ ಕಡೆ-ಈ ಕಡೆ ಬರದಂತೆ ಮಧ್ಯಭಾಗದಲ್ಲಿ ಮಾತ್ರ ಇರುವಂತೆ ಹಾಕಿ ಮಡಿಸಿಕೊಳ್ಳಬೇಕು.
* ಬೇಳೆ ಹೂರಣ ತಯಾರಿಸುವ ರೀತಿಯನ್ನು "ಹೋಳಿಗೆ" ರೆಸಿಪಿಯಲ್ಲಿ ನೋಡಬಹುದು.

Popular Posts