Showing posts with label Kheeru / Payasa/ ಖೀರು/ಪಾಯಸ. Show all posts
Showing posts with label Kheeru / Payasa/ ಖೀರು/ಪಾಯಸ. Show all posts

Sunday, March 28, 2010

Firni - ಫಿರಣಿ /ಫಿರನಿ/ಫಿರ್ನಿ ( Rice Pudding )

ಫಿರಣಿ /ಫಿರನಿ:

ಬೇಕಾಗುವ ಸಾಮಗ್ರಿಗಳು:

ಅಕ್ಕಿಹಿಟ್ಟು - ಎರಡು ದೊಡ್ಡ ಚಮಚ
ಹಾಲು - ಒಂದು ಬಟ್ಟಲು
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ಕೋವಾ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಕೇಸರಿ ದಳಗಳು ಸ್ವಲ್ಪ (ಬೇಕಾದರೆ)
ಸಕ್ಕರೆ ರುಚಿಗೆ ತಕ್ಕಷ್ಟು
ಡ್ರೈ ಫ್ರೂಟ್ಸ್ (ಬಾದಾಮಿ,ಗೋಡಂಬಿ,ಪಿಸ್ತ)

ತಯಾರಿಸುವ ವಿಧಾನ:

ಮೊದಲು ಹಾಲು ಕಾಯಿಸಿ,ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಮತ್ತು ಸಕ್ಕರೆಯನ್ನು ಸೇರಿಸಿ,ತಿರುಗಿಸಿ. ಮೂರ್ನಾಲ್ಕು ಚಮಚ ಹಾಲಿನೊಂದಿಗೆ ಅಕ್ಕಿಹಿಟ್ಟನ್ನು ಗಂಟಿಲ್ಲದಂತೆ ಕಲೆಸಿಕೊಂಡು ಅದನ್ನು ಕುದಿಯುತ್ತಿರುವ ಹಾಲಿಗೆ ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸಿ. ಬೇಗ ತಳಹತ್ತುತ್ತದೆ,ಕೈ ಬಿಡದೆ ತಿರುಗಿಸುತ್ತಿರಬೇಕು. ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಕೋವಾವನ್ನು ಬೆರೆಸಿ,ಏಲಕ್ಕಿ ಪುಡಿ,ಡ್ರೈ ಫ್ರೂಟ್ಸ್ ಮತ್ತು ಕೇಸರಿ ದಳಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸುತ್ತಿದ್ದು,ಅದು ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ಗಟ್ಟಿಯಾದಂತೆ ಎನಿಸಿದಾಗ ಇಳಿಸಿ. ಇದನ್ನು ಒಂದೆರಡು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿ ಅಥವಾ ತಣ್ಣಗಾದ ಮೇಲೆ ತಿನ್ನಲು ಕೊಡಿ. ಇದು ತುಂಬಾ ರುಚಿಯಾಗಿರುತ್ತದೆ.

* ಅಕ್ಕಿ ಹಿಟ್ಟಿನ ಬದಲು ಅಕ್ಕಿ ರವೆಯನ್ನು ಉಪಯೋಗಿಸಬಹುದು. ಇದನ್ನು ಪೂರ್ತಿ ಹಾಲಿನಲ್ಲಿಯೇ ಬೇಯಿಸಬೇಕು.
* ಕೇಸರಿ ದಳಗಳನ್ನು ಬಳಸುವಾಗ ಯಾವಾಗಲೂ ಒಂದೆರಡು ಚಮಚ ಹಾಲಿನಲ್ಲಿ ನೆನೆಸಿಡಿ.

Sunday, December 27, 2009

Carrot Payasa - ಕ್ಯಾರೆಟ್ ಪಾಯಸ/ಖೀರು:

ಕ್ಯಾರೆಟ್ ಪಾಯಸ/ಖೀರು:

ಬೇಕಾಗುವ ಸಾಮಗ್ರಿಗಳು:

ಕ್ಯಾರೆಟ್ - ಒಂದು ಬಟ್ಟಲು ಹೆಚ್ಚಿದ್ದು
ಸಕ್ಕರೆ ರುಚಿಗೆ
ಹಾಲು - ಅಗತ್ಯವಿದ್ದಷ್ಟು
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು
ಗುಲಾಬಿ ನೀರು (ರೋಸ್ ವಾಟರ್)
ತುಪ್ಪ

ವಿಧಾನ:

ಮೊದಲು ಕ್ಯಾರೆಟ್ ಅನ್ನು ಬೇಯಿಸಿಕೊಂಡು, ಸ್ವಲ್ಪ ನೀರು ಅಥವ ಹಾಲು ಹಾಕಿಕೊಂಡು ಅದನ್ನು ರುಬ್ಬಿಕೊಳ್ಳಿ. ಕೇಸರಿಯನ್ನು ಸ್ವಲ್ಪ ಹಾಲಿನಲ್ಲಿ ನೆನೆಹಾಕಿ.
ಒಂದು ಪಾತ್ರೆಗೆ ತುಪ್ಪ ಹಾಕಿ , ಕರಗಿದ ತುಪ್ಪದಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು, ಅದಕ್ಕೆ ಹಾಲನ್ನು ಹಾಕಿ, ರುಬ್ಬಿದ ಕ್ಯಾರೆಟ್ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಕುದಿ ಬರುವಾಗ ಸಕ್ಕರೆ ಮತ್ತು ಕೇಸರಿಹಾಲನ್ನು ಸೇರಿಸಿ. ಸಕ್ಕರೆ ಕರಗುವಂತೆ ಕ್ಯಾರೆಟ್ ಮಿಶ್ರಣವನ್ನು ಚೆನ್ನಾಗಿ ಕುದಿಸಿ.ಇಳಿಸಿ. ಇದಕ್ಕೆ ಒಂದು ಚಮಚ ಗುಲಾಬಿ ನೀರು ಹಾಕಿ. ಇದೀಗ ಪೌಷ್ಠಿಕರವಾದ, ನೋಡಲು ಸುಂದರವಾದ, ಕುಡಿಯಲು ರುಚಿಯಾದ ಆರೋಗ್ಯಕ್ಕೆ ಹಿತಕರವಾದ ಕ್ಯಾರೆಟ್ ಪಾಯಸ/ಖೀರು ತಯಾರಾಗಿದೆ.

Monday, August 24, 2009

Dates Laddu/Ladu - ಖರ್ಜೂರದ ಉಂಡೆ:

ಖರ್ಜೂರದ ಉಂಡೆ:
ಖರ್ಜೂರವೂ ಒಣಗಿದ ಹಣ್ಣು(ಡ್ರೈ ಫ್ರೂಟ್ಸ್)ಗಳಲ್ಲೆಲ್ಲಾ ತುಂಬಾ ರುಚಿಯಾದ ಹಣ್ಣು. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಈ ಹಣ್ಣು ತುಂಬಾ ಉಷ್ಣ.
ಇದನ್ನು ತುಪ್ಪದ ಜೊತೆ ತಿಂದರೆ ಒಳ್ಳೆಯದು. ಖರ್ಜೂರದಲ್ಲಿ ಹಲವು ಬಗೆಗಳಿವೆ. ಖರ್ಜೂರವನ್ನು ಕಾಯಿಯಿಂದ ಹಿಡಿದು ಕೂಡ ಹಂತ ಹಂತವಾಗಿ ಬೆಳೆಯುತ್ತಿರುವ ಯಾವುದನ್ನು ತಿಂದರೂ,ಚೆನ್ನಾಗಿ ಹಣ್ಣಾಗಿರುವವರೆಗೂ ಕೂಡ ಒಂದೊಂದು ತರಹ ರುಚಿ ಕೊಡುತ್ತದೆ. ಒಂದೊಂದು ಹಂತದಲ್ಲಿ ಒಂದೊಂದು ರುಚಿ ಕೊಡುತ್ತದೆ. ಕಾಯಿಯಿಂದ ಹಣ್ಣಾಗುವವರೆಗಿನ ಯಾವ ಸಮಯದಲ್ಲಾದರೂ ಕಿತ್ತು ತಿನ್ನಬಹುದಾದಂತಹ ಹಣ್ಣು ಖರ್ಜೂರ. ಚೆನ್ನಾಗಿ ಹಣ್ಣಾದ ಮೇಲೂ ಕೂಡ ಅದು ಉಪಯೋಗಕ್ಕೆ ಬರುತ್ತದೆ,ಮುಂದೆ ಅದನ್ನೇ ಒಣಗಿಸಿ,'ಉತ್ತತ್ತಿ' ಅಂತ ತಯಾರಿಸುತ್ತಾರೆ. ಅದಂತೂ ವರುಷಗಟ್ಟಲೆ ಹಾಳಾಗದೆ ಇರುವುದರಿಂದ,ಯಾವಾಗಲೂ ಮನೆಯಲ್ಲಿ ಇಟ್ಟುಕೊಳ್ಳಬಹುದು. ಇದನ್ನು ಪಾಯಸ ಮತ್ತು ಇತರೆ ಉಂಡೆ ಮತ್ತು ಸಿಹಿಗಳಿಗೆ ಬೇಕಾದಾಗ ಉಪಯೋಗಿಸುತ್ತೇವೆ. ಈಗ ಇಲ್ಲಿ ಖರ್ಜೂರದಿಂದ ಉಂಡೆ/ಉಂಡಿಯನ್ನು ತಯಾರಿಸೋಣ.

ಬೇಕಾಗುವ ಸಾಮಗ್ರಿಗಳು:

ಖರ್ಜೂರ - ಒಂದು ಬಟ್ಟಲು
ಬೆಲ್ಲ - ರುಚಿಗೆ
ತುಪ್ಪ ಅಥವ ಬೆಣ್ಣೆ - ಎರಡು ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ಏಲಕ್ಕಿ ಪುಡಿ

ತಯಾರಿಸುವ ರೀತಿ:

ಮೊದಲಿಗೆ ಬಾಣಲೆಗೆ ತುಪ್ಪ/ಬೆಣ್ಣೆಯನ್ನು ಹಾಕಿ ಅದಕ್ಕೆ ಖರ್ಜೂರ ಮತ್ತು ಬೆಲ್ಲವನ್ನು ಹಾಕಿ,ಚೆನ್ನಾಗಿ ಕೆದಕಿ,ಅದನ್ನು ಹಾಗೇ ಐದು ನಿಮಿಷ ತಿರುಗಿಸುತ್ತಿರಿ. ಖರ್ಜೂರವೂ ಮೆತ್ತಾಗಾಗಿ ಮತ್ತು ಬೆಲ್ಲವೆಲ್ಲಾ ಕರಗಿ ಸ್ವಲ್ಪ ಉಂಡೆ ಹದಕ್ಕೆ ಬಂದಿದೆ ಎನಿಸಿದಾಗ, ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು,ಏಲಕ್ಕಿ ಪುಡಿಯನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ತುಂಬಾ ಗಟ್ಟಿಯಾಗುವ ಮೊದಲೇ ಒಲೆಯಿಂದ ಕೆಳಗಿಳಿಸಿ. ಸ್ವಲ್ಪ ಆರಿದ ನಂತರ ಚಿಕ್ಕ ಚಿಕ್ಕ ಉಂಡೆ ಕಟ್ಟಿ. ಈಗ ಪೌಷ್ಠಿಕವಾಗಿರುವಂತ ಖರ್ಜೂರದ ಉಂಡೆ ತಯಾರಾಗುತ್ತದೆ. ಮಕ್ಕಳಿಗೆ ತುಂಬಾ ಒಳ್ಳೆಯದು.

Thursday, July 30, 2009

Sabbakki Shyavige Payasa /ಸಬ್ಬಕ್ಕಿ-ಶ್ಯಾವಿಗೆ ಪಾಯಸ

ಸಬ್ಬಕ್ಕಿ-ಶ್ಯಾವಿಗೆ ಪಾಯಸ:

ಸಾಮಗ್ರಿಗಳು:

ಸಬ್ಬಕ್ಕಿ - ಒಂದು ಕಪ್
ಶ್ಯಾವಿಗೆ - ಅರ್ಧ ಕಪ್
ಹಾಲು - ಒಂದು ಕಪ್
ಸಕ್ಕರೆ ಅಥವ ಬೆಲ್ಲ ರುಚಿಗೆ
ದ್ರಾಕ್ಷಿ ಮತ್ತು ಗೋಡಂಬಿ
ತುಪ್ಪ
ಏಲಕ್ಕಿ ಪುಡಿ

ತಯಾರಿಸುವ ರೀತಿ:

ಒಂದೆರಡು ಚಮಚ ತುಪ್ಪವನ್ನು ಕಾಯಿಸಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ. ಅದೇ ತುಪ್ಪದಲ್ಲಿ ಶ್ಯಾವಿಗೆಯನ್ನು ಹಾಕಿ ಚೆನ್ನಾಗಿ ಹುರಿದಿಡಿ. ಅದಕ್ಕೆ ಸಬ್ಬಕ್ಕಿಯನ್ನು ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಅರ್ಧ ಬೆಂದಿದೆ ಎನಿಸಿದಾಗ ಹಾಲು ಮತ್ತು ಸಕ್ಕರೆ ಸೇರಿಸಿ ಕುದಿಸಿ. ಸಬ್ಬಕ್ಕಿ ಮತ್ತು ಶ್ಯಾವಿಗೆ ಎರಡು ಚೆನ್ನಾಗಿ ಬೇಯಿಸಿ, ಅದಕ್ಕೆ ಏಲಕ್ಕಿ ಪುಡಿ,ಮತ್ತೆ ಒಂದೆರಡು ಚಮಚ ತುಪ್ಪ ಸೇರಿಸಿ.ಬೆರೆಸಿ. ಸಬ್ಬಕ್ಕಿಯು ದುಂಡಾಗಿ ಆಗಿ ಬೆಂದಿದೆ ಎನಿಸಿದ ಮೇಲೆ ಇಳಿಸಿ. ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ. ಕೇಸರಿ ದಳಗಳನ್ನು ಹಾಲಿನಲ್ಲಿ ನೆನೆಸಿ ಹಾಕಬಹುದು ಬೇಕಾದರೆ. ಅಥವ ನಿಮಗೆ ಇಷ್ಟವಾದ ಎಸೆನ್ಸ್ ಹಾಕಿಕೊಳ್ಳಬಹುದು. ಬರೀ ಶ್ಯಾವಿಗೆ ಪಾಯಸ ತಯಾರಿಸುವ ಬದಲು,ಈ ತರಹ ಬೇರೆ ರೀತಿಯಲ್ಲಿ ತಯಾರಿಸಬಹುದು. ಸಬ್ಬಕ್ಕಿ-ಶ್ಯಾವಿಗೆ ಪಾಯಸ ತಯಾರ್.
* ಸಬ್ಬಕ್ಕಿ ಮತ್ತು ಶ್ಯಾವಿಗೆಯನ್ನು ಮೊದಲೇ ಬೇಯಿಸಿ ಕೂಡ ಇಟ್ಟುಕೊಳ್ಳಬಹುದು.
* ಸಬ್ಬಕ್ಕಿಯಲ್ಲಿ ಕೆಲವು ತರ ಇದೆ. ನೀವು ಉಪಯೋಗಿಸುವ ಸಬ್ಬಕ್ಕಿ ಯಾವುದೆಂದು ತಿಳಿದು,ಅದಕ್ಕೆ ಯಾವ ರೀತಿ ತಯಾರಿಸಬೇಕೋ. ಆ ರೀತಿ ತಯಾರಿಸಿ.ಸಬ್ಬಕ್ಕಿ ಬೇಗ ಬೇಯುತ್ತದೆ. ಬೆಂದ ಮೇಲೆ ನೋಡಲು ಚೆನ್ನಾಗಿ ಕಾಣುತ್ತದೆ.

Tuesday, June 9, 2009

Bread Butter Pudding / ಬ್ರೆಡ್ ಬಟರ್ ಪುಡ್ಡಿಂಗ್:

ಬ್ರೆಡ್ ಬಟರ್ ಪುಡ್ಡಿಂಗ್:

ಬೇಕಾಗುವ ಸಾಮಗ್ರಿಗಳು:1 ಪೌಂಡ್ ಬ್ರೆಡ್ ಅಥವ 12 ಪೀಸಸ್, ಅಂಚು ಕತ್ತರಿಸಿಟ್ಟುಕೊಳ್ಳಿ.
1 ಲೀಟರ್ ಹಾಲು
7-8 ಮೊಟ್ಟೆ - ಒಡೆದು, ಬಟ್ಟಲಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿಡಿ (ಬ್ಲೆಂಡ್ ಮಾಡಿ)
1/4 ಕೆಜಿ ಸಕ್ಕರೆ
50 ಗ್ರಾಂ ಬೆಣ್ಣೆ
1/2 ಚಮಚ ಜಾಯಿಕಾಯಿ ರಸ (ತೇದಿದ್ದು)
ಸ್ವಲ್ಪ ಗೋಡಂಬಿ - ದ್ರಾಕ್ಷಿ
ಬಾದಾಮಿ ಬೇಕಾದರೆ
1ಚಮಚ ತುಪ್ಪ ( ಇದರಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಇಟ್ಟುಕೊಳ್ಳಿ)

ತಯಾರಿಸುವ ವಿಧಾನ:

ಹಾಲು ಚೆನ್ನಾಗಿ ಕಾಯಿಸಿ, ಅದಕ್ಕೆ ಸಕ್ಕರೆ, ಬೀಟ್ ಮಾಡಿದ ಮೊಟ್ಟೆ ಹಾಕಿ, ಕೈ ಬಿಡದೇ ತಳ ಹತ್ತದಂತೆ ಚೆನ್ನಾಗಿ ತಿರುವುತ್ತಿರಿ, ಮದ್ಯೆ ಜಾಯಿಕಾಯಿ ರಸ ಹಾಕಿ, ತಿರುವಿ. ಹಾಲಿನ ಮಿಶ್ರಣ ಅರ್ಧ ಭಾಗದಷ್ಟು ಆದಾಗ ಅದನ್ನು ಕೆಳಗಿಳಿಸಿ. ಕಾವಲಿ ಅಥವ ಒಂದು ಅಗಲವಾದ ಬಟ್ಟಲಿಗೆ ಬೆಣ್ಣೆಯನ್ನು ಸವರಿ, ಅದರಲ್ಲಿ ಬ್ರೆಡ್ ತುಂಡುಗಳನ್ನು ಜೋಡಿಸಿಟ್ಟು, ಅದರ ಮೇಲೆ ಈ ಹಾಲಿನ ಮಿಶ್ರಣವನ್ನು ಸುರಿದು ಸಮನಾಗಿ ಹರಡಿ, ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿಯಿಂದ ಅಲಂಕರಿಸಿ, ಈ ಬಟ್ಟಲನ್ನು ಕುಕ್ಕರ್ ಅಥವ ದೊಡ್ಡ ಪಾತ್ರೆಗೆ ನೀರು ಹಾಕಿ, ಅದರಲ್ಲಿ ಇಟ್ಟು, ಮುಚ್ಚುಳ ಮುಚ್ಚಿ ಡಬ್ಬಲ್ ಬಾಯ್ಲರ್ ರೀತಿ ಆವಿಯಲ್ಲಿ, ಮ೦ದ ಉರಿಯಲ್ಲಿ 45 ನಿಮಿಷ ಬೇಯಿಸಿ. ನಂತರ ತಣ್ಣಗಾದ ಮೇಲೆ ತಿನ್ನಲು ರೆಡಿಯಾಗಿರಿ. ಇದು ತುಂಬಾ ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟ ವಾಗುತ್ತದೆ ಮತ್ತು ಪೌಷ್ಠಿಕವಾಗಿಯೂ ಇರುತ್ತದೆ.
* ಮನೆಯಲ್ಲಿ ಒವನ್ ಇದ್ದರೆ, ಹಾಲಿನ ಮಿಶ್ರಣವನ್ನು ಜಿಡ್ಡು ಸವರಿದ ಬೇಕಿಂಗ್ ಡಿಶ್ ಗೆ ಹಾಕಿ 20 ರಿಂದ 25 ನಿಮಿಷ ಬೇಕ್ ಮಾಡಿ. ಅಥವಾ ತೆಳುವಾದ ಕಂದು ಬಣ್ಣ ( ಗೋಲ್ಡನ್ ಬ್ರೌನ್ ) ಬಂದ ನಂತರ ತೆಗೆಯಿರಿ.

Wednesday, January 23, 2008

Shavige Payasa

ಶ್ಯಾವಿಗೆ ಖೀರು

ಸಾಮಗ್ರಿಗಳು :

ಶ್ಯಾವಿಗೆ - 1 ಕಪ್,
ಬಾದಾಮಿ - 7-8
ಅಕ್ಕಿ - 1 ಚಮಚ,
ತೆಂಗಿನಕಾಯಿ - ಸ್ವಲ್ಪ
ಏಲಕ್ಕಿ - 5,
ಸಕ್ಕರೆ - ರುಚಿಗೆ ತಕ್ಕಷ್ಟು
ತುಪ್ಪ - 2 ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ :

ಶ್ಯಾವಿಗೆಯನ್ನು ಸ್ವಲ್ಪ ಕೆಂಪಾಗುವವರೆಗೂ ಹುರಿಯಿರಿ.
ಮೊದಲೇ1 ಟೀ ಚಮಚ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ.1 ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ತೆಂಗಿನ ಕಾಯಿ ಹಾಲನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಡುವಿಲ್ಲ ಅರ್ಜೆಂಟ್ ಆಗಿ ಪಾಯಸ ಮಾಡಬೇಕಾದರೆ ಮಾಮುಲಿ ಗಟ್ಟಿ ಹಾಲನ್ನು ಬಳಸಿ. ಇದು ನಿಮ್ಮ ಅವಶ್ಯಕತೆಗೆ ಸೇರಿದ್ದು. ಹಾಲು ಬೇರೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ.
[ಕಾಯಿತುರಿ /ಒಣಗಿದ ಕೊಬ್ಬರಿ ತುರಿಯನ್ನು ರುಬ್ಬುವಾಗ ಉಪಯೋಗಿಸಬಹುದು,ಅಥವಾ ರೆಡಿಮೇಡ್ ಕೊಕೋನಟ್ ಮಿಲ್ಕ್ ಉಪಯೋಗಿಸಬಹುದು].

ಮಾಡುವ ವಿಧಾನ : ಬಾದಾಮಿ, ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಮಿಕ್ಸಿಗೆ ಹಾಕಿರುವ ಪದಾರ್ಥ, ತೆಂಗಿನ ಹಾಲು ಅಥವಾ(ಕಾಯಿಸಿದ ಹಾಲು)ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಸಣ್ಣ ಹುರಿಯಲ್ಲಿ ಕುದಿಸಬೇಕು. ಕುದಿಯುತ್ತಿರುವಾಗಲೆ ಶ್ಯಾವಿಗೆಯನ್ನು ಹಾಕಿ ಬೇಯಿಸಿ, ಸಕ್ಕರೆ ಸೇರಿಸಿ ಮಧ್ಯೆ ಮಧ್ಯೆ ಕಲಕುತ್ತಿರಬೇಕು ಇಲ್ಲವಾದರೆ ತಳ ಹಿಡಿಯುತ್ತದೆ. ಬೇಕಾದರೆ ಕುದಿಯುವಾಗ 3-4 ಲವಂಗ ಹಾಕಬಹುದು. ಜೊತೆಯಲ್ಲಿ ಕೇಸರಿ ದಳಗಳನ್ನು 2 ಚಮಚ ಹಾಲಿನಲ್ಲಿ ನೆನಸಿ, ಕುದಿಯುವಾಗ ಹಾಕಿ, ತಳಹತ್ತದಂತೆ ಚೆನ್ನಾಗಿ ಒಂದೆರಡು ಕುದಿ ಕುದಿಸಿ, ಶ್ಯಾವಿಗೆ ಬೆಂದ ನಂತರ ಒಲೆಯಿಂದ ಇಳಿಸಿ . ನಂತರ ಅದಕ್ಕೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿ ಹಾಗು ಬಾದಾಮಿಗಳನ್ನು ಹಾಕಬಹುದು. ರುಚಿಯಾದ ಶ್ಯಾವಿಗೆ ಪಾಯಸ ಸಿದ್ಧ.

Monday, July 2, 2007

Poha Uppittu /ಅವಲಕ್ಕಿ ಒಗ್ಗರಣೆ

ಅವಲಕ್ಕಿ ಒಗ್ಗರಣೆ:

ತೊಳೆದು ನೆನೆಸಿದ ಅವಲಕ್ಕಿ
ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ, ಕರಿಬೇವು
ಕಡ್ಲೆಬೇಳೆ, ಉದ್ದಿನಬೇಳೆ
ಅರಿಶಿನ,ಉಪ್ಪು
ಕಡಲೆಕಾಯಿಬೀಜಗಳು
ಕಾಯಿತುರಿ ಮತ್ತು
ಕೊತ್ತುಂಬರಿ ಸೊಪ್ಪು
ನಿಂಬೆರಸ/ಹುಣಸೆರಸ

ವಿಧಾನ:

ಅವಲಕ್ಕಿಯನ್ನು ನೆನೆಸುವ ಕಾಲವೂ ಅವಲಕ್ಕಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಅವಲಕ್ಕಿಯಲ್ಲಿ ಸುಮಾರು ವಿಧಗಳಿವೆ. ಅದಕ್ಕಾಗಿ ಅದು ಯಾವುದು ಉಪಯೋಗಿಸುತ್ತೀರೋ ಅದನ್ನು ನೋಡಿ ನೆನೆಸಿ. ನೀರಿನಲ್ಲಿ ತೊಳೆದು ಇಟ್ಟರೆ ಸಾಕು ನೆನೆಯುತ್ತದೆ.
ಮೊದಲು ಪಾತ್ರೆ ಅಥವ ಬಾಣಲೆಗೆ ಅವಶ್ಯಕತೆ ಇದ್ದಷ್ಟು ಎಣ್ಣೆ ಹಾಕಿ,ಸಾಸಿವೆ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಸರಿಯಾಗಿ ಹದವಾಗಿ, ಹುರಿದುಕೊಂಡು,ಕಡ್ಲೆಬೇಳೆ,ಉದ್ದಿನಬೇಳೆಯನ್ನು ಹುರಿದ ನಂತರ ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ ನಾಲ್ಕೈದು ನಿಮಿಷ ಹುರಿದು ಅದಕ್ಕೆ ಅರಿಶಿನ ಮತ್ತು ಉಪ್ಪು ಹಾಕಿ,ನೆನೆಸಿದ ಅವಲಕ್ಕಿಯನ್ನು ಹಾಕಿ,ಇಳಿಸಿ.ಬೆರೆಸಿ,ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ತಿರುಗಿಸಿ,ಕಲೆಸಿ.
*ಹುಣಸೆರಸ ಹಾಕುವುದಾದರೆ ಒಗ್ಗರಣೆಯಲ್ಲಿಯೇ ಹಾಕಿ, ಬೆರೆಸಿ

Saturday, June 23, 2007

Gasagase Payasa / Khuskhus Kheer




ಗಸಗಸೆ ಪಾಯಸ

ಸಾಮಗ್ರಿಗಳು :

ಗಸಗಸೆ - 1 ಕಪ್,
ಬಾದಾಮಿ - 7-8
ಅಕ್ಕಿ - 1 ಚಮಚ,
ತೆಂಗಿನಕಾಯಿ - 1 ಅಥವ ( ಹಾಲು 5-6 ಕಪ್ )
ಏಲಕ್ಕಿ - 5,
ಸಕ್ಕರೆ/ಬೆಲ್ಲ - 21/2 ಕಪ್
ತುಪ್ಪ - 2 ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ :

ಒಂದು ಕಪ್ ಗಸಗಸೆಯನ್ನು ಘಂ ಎಂದು ಚಟಚಟ ಅನ್ನುವವರೆಗೆ ಹುರಿಯಿರಿ. ಅದಕ್ಕೆ ಬಾದಾಮಿಯನ್ನು ಹಾಕಿ ಹುರಿದುಕೊಳ್ಳಿ. ಮೊದಲೇ1 ಟೀ ಚಮಚ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ.1 ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ತೆಂಗಿನ ಕಾಯಿ ಹಾಲನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಡುವಿಲ್ಲ ಅರ್ಜೆಂಟ್ ಆಗಿ ಪಾಯಸ ಮಾಡಬೇಕಾದರೆ ಮಾಮುಲಿ ಗಟ್ಟಿ ಹಾಲನ್ನು ಬಳಸಿ. ಇದು ನಿಮ್ಮ ಅವಶ್ಯಕತೆಗೆ ಸೇರಿದ್ದು. ಹಾಲು ಬೇರೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ.
ತೆಂಗಿನಹಾಲು ತೆಗೆಯಲು ಕಷ್ಟ ಎನಿಸಿದರೆ ಒಣಗಿದ ಕೊಬ್ಬರಿ ತುರಿಯನ್ನು ರುಬ್ಬುವಾಗ ಉಪಯೋಗಿಸಬಹುದು,ಅಥವಾ ರೆಡಿಮೇಡ್ ಕೊಕೋನಟ್ ಮಿಲ್ಕ್ ಉಪಯೋಗಿಸಬಹುದು.

ಮಾಡುವ ವಿಧಾನ : ಗಸಗಸೆ, ಬಾದಾಮಿ, ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಮಿಕ್ಸಿಗೆ ಹಾಕಿರುವ ಪದಾರ್ಥ, ತೆಂಗಿನ ಹಾಲು ಅಥವಾ(ಕಾಯಿಸಿದ ಹಾಲು)ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಸಣ್ಣ ಹುರಿಯಲ್ಲಿ ಕುದಿಸಬೇಕು. ಕುದಿಯುತ್ತಿರುವಾಗಲೆ ಬೆಲ್ಲ ಅಥವ ಸಕ್ಕರೆ ಸೇರಿಸಿ(ಸಕ್ಕರೆ ಹಾಕಿದರೆ ರುಚಿ ಚೆನ್ನಾಗಿರುತ್ತದೆ), ಮಧ್ಯೆ ಮಧ್ಯೆ ಕಲಕುತ್ತಿರಬೇಕು ಇಲ್ಲವಾದರೆ ಗಂಟು ಆಗುತ್ತದೆ ಮತ್ತು ತಳ ಹಿಡಿಯುತ್ತದೆ. ಬೇಕಾದರೆ ಕುದಿಯುವಾಗ ಒಂದು ಚಿಕ್ಕಚೂರು ಜಾಕಾಯಿ ಅಥವ ಜಾಯಿಕಾಯಿ ರಸ ಮತ್ತು 3-4 ಲವಂಗ ಹಾಕಬಹುದು. ಜೊತೆಯಲ್ಲಿ ಕೇಸರಿ ದಳಗಳನ್ನು 2 ಚಮಚ ಹಾಲಿನಲ್ಲಿ ನೆನಸಿ, ಕುದಿಯುವಾಗ ಹಾಕಿ, ತಳಹತ್ತದಂತೆ ಚೆನ್ನಾಗಿ ಒಂದೆರಡು ಕುದಿ ಕುದಿಸಿ, ಇಳಿಸಿ. ನಂತರ ಅದಕ್ಕೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿ ಹಾಗು ಬಾದಾಮಿಗಳನ್ನು ಹಾಕಬಹುದು. ಇದು ತುಂಬಾ ರುಚಿಯಾದ ಮತ್ತು ಶಕ್ತಿದಾಯಕ ಪಾಯಸವೂ ಹೌದು. ಮಕ್ಕಳಿಗೆ ಇದೊಂದು ಒಳ್ಳೆಯ ಪೌಷ್ಠಿಕ ಪಾನೀಯ.

Friday, June 15, 2007

Hesarubele Payasa / Moongdal Kheer

ಹೆಸರುಬೇಳೆ ಪಾಯಸ:

ಸಾಮಗ್ರಿಗಳು :

ಹೆಸರುಬೇಳೆ- 1 ಕಪ್,
ಬಾದಾಮಿ - 7-8
ಅಕ್ಕಿ - 1 ಚಮಚ,
ತೆಂಗಿನಕಾಯಿ - 1 ಅಥವ ( ಹಾಲು 5-6 ಕಪ್ )
ಏಲಕ್ಕಿ - 5,
ಸಕ್ಕರೆ/ಬೆಲ್ಲ - 21/2 ಕಪ್
ತುಪ್ಪ - 2 ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ :

ಒಂದು ಕಪ್ ಹೆಸರುಬೇಳೆಯನ್ನು ಒಂದು ಚಮಚ ತುಪ್ಪ ಹಾಕಿ ಘಂ ಎಂದು ಸ್ವಲ್ಪ ಕೆಂಪಗೆ ಆಗುವವರೆಗೂ ಹುರಿಯಿರಿ. ಮೊದಲೇ1 ಟೀ ಚಮಚ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ.1 ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ತೆಂಗಿನ ಕಾಯಿ ಹಾಲನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಡುವಿಲ್ಲ ಅರ್ಜೆಂಟ್ ಆಗಿ ಪಾಯಸ ಮಾಡಬೇಕಾದರೆ ಮಾಮುಲಿ ಗಟ್ಟಿ ಹಾಲನ್ನು ಬಳಸಿ. ಇದು ನಿಮ್ಮ ಅವಶ್ಯಕತೆಗೆ ಸೇರಿದ್ದು. ಹಾಲು ಬೇರೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ.
ತೆಂಗಿನಹಾಲು ತೆಗೆಯಲು ಕಷ್ಟ ಎನಿಸಿದರೆ ಒಣಗಿದ ಕೊಬ್ಬರಿ ತುರಿಯನ್ನು ರುಬ್ಬುವಾಗ ಉಪಯೋಗಿಸಬಹುದು,ಅಥವಾ ರೆಡಿಮೇಡ್ ಕೊಕೋನಟ್ ಮಿಲ್ಕ್ ಉಪಯೋಗಿಸಬಹುದು.

ಮಾಡುವ ವಿಧಾನ :

ಬಾದಾಮಿ, ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಮಿಕ್ಸಿಗೆ ಹಾಕಿರುವ ಪದಾರ್ಥ, ತೆಂಗಿನ ಹಾಲು ಅಥವಾ(ಕಾಯಿಸಿದ ಹಾಲು)ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಹುರಿದ ಹೆಸರುಬೇಳೆಯನ್ನು ಸೇರಿಸಿ ಬೇಳೆ ಬೇಯಲು ಎರಡು ಬಟ್ಟಲು ನೀರು ಹಾಕಿ ಕುದಿಸಬೇಕು. ಹೆಸರುಬೇಳೆ ಬೇಯುವವರೆಗೂ ಚೆನ್ನಾಗಿ ಬೇಯಿಸಿ. ಕುದಿಯುತ್ತಿರುವಾಗಲೆ ಬೆಲ್ಲ ಅಥವ ಸಕ್ಕರೆ ಸೇರಿಸಿ(ಸಕ್ಕರೆ ಹಾಕಿದರೆ ರುಚಿ ಚೆನ್ನಾಗಿರುತ್ತದೆ), ಮಧ್ಯೆ ಮಧ್ಯೆ ಕಲಕುತ್ತಿರಬೇಕು. ಬೇಕಾದರೆ ಕುದಿಯುವಾಗ ಒಂದು ಚಿಕ್ಕಚೂರು ಜಾಕಾಯಿ ಅಥವ ಜಾಯಿಕಾಯಿ ರಸ ಮತ್ತು 3-4 ಲವಂಗ ಹಾಕಬಹುದು. ಜೊತೆಯಲ್ಲಿ ಕೇಸರಿ ದಳಗಳನ್ನು 2 ಚಮಚ ಹಾಲಿನಲ್ಲಿ ನೆನಸಿ, ಕುದಿಯುವಾಗ ಹಾಕಿ, ತಳಹತ್ತದಂತೆ ಚೆನ್ನಾಗಿ ಒಂದೆರಡು ಕುದಿ ಕುದಿಸಿ, ಇಳಿಸಿ. ನಂತರ ಅದಕ್ಕೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿ ಹಾಗು ಬಾದಾಮಿಗಳನ್ನು ಹಾಕಬಹುದು. ಇದು ತುಂಬಾ ರುಚಿಯಾದ,ತಂಪು ಮತ್ತು ಶಕ್ತಿದಾಯಕ ಪಾಯಸವೂ ಹೌದು.ಇದೊಂದು ಒಳ್ಳೆಯ ಪೌಷ್ಠಿಕ ಪಾನೀಯ.

Monday, April 16, 2007

Roasted Vermicilli Upma / ಶ್ಯಾವಿಗೆ ಉಪ್ಪಿಟ್ಟು


ಶ್ಯಾವಿಗೆ ಉಪ್ಪಿಟ್ಟು:
ಸಾಮಗ್ರಿಗಳು:

ಶ್ಯಾವಿಗೆ - ಒಂದು ಬಟ್ಟಲು
ನೀರು - ಎರಡು ಬಟ್ಟಲು
ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ
ಟಮೋಟ ಹೆಚ್ಚಿದ್ದು ಸ್ವಲ್ಪ
ಎಣ್ಣೆ, ಸಾಸಿವೆ, ಕರಿಬೇವು
ಕಡ್ಲೆಬೇಳೆ, ಉದ್ದಿನಬೇಳೆ
ಅರಿಶಿನ,ಉಪ್ಪು
ನಿಂಬೆರಸ
ಕಾಯಿತುರಿ ಮತ್ತು
ಕೊತ್ತುಂಬರಿ ಸೊಪ್ಪು

ವಿಧಾನ:

ಶ್ಯಾವಿಗೆಯನ್ನು ಮೊದಲೆ ಬೇರೆ ಬೇಯಿಸಿಟ್ಟುಕೊಳ್ಳಿ.

ಮೊದಲು ಪಾತ್ರೆ ಅಥವ ಬಾಣಲೆಗೆ ಅವಶ್ಯಕತೆ ಇದ್ದಷ್ಟು ಎಣ್ಣೆ ಹಾಕಿ,ಸಾಸಿವೆ ಹಾಕಿ,ಕಡ್ಲೆಬೇಳೆ,ಉದ್ದಿನಬೇಳೆಯನ್ನು ಹಾಕಿ ಹುರಿದ ನಂತರ ಕರಿಬೇವು, ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ,ಟಮೋಟ ಹಾಕಿ ನಾಲ್ಕೈದು ನಿಮಿಷ ಹುರಿದು ಅದಕ್ಕೆ ಚಿಟಿಕೆ ಅರಿಶಿನ ಮತ್ತು ಉಪ್ಪು ಹಾಕಿ,ಟಮೋಟ ಬೆಂದಿದೆ ಎನಿಸಿದಾಗ ಬೇಯಿಸಿದ ಶ್ಯಾವಿಗೆಯನ್ನು ಹಾಕಿ,ಚೆನ್ನಾಗಿ ತಿರುಗಿಸಿ.ಒಗ್ಗರಣೆಯೊಂದಿಗೆ ಶ್ಯಾವಿಗೆಯನ್ನು ಸರಿಯಾಗಿ ಬೆರೆಸಿದ ಮೇಲೆ ಅದಕ್ಕೆ ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ತಿರುಗಿಸಿ,ಇಳಿಸಿ.

* ಮೈಕ್ರೋವೇವ್ ನಲ್ಲಿಟ್ಟು ಬೇಯಿಸಿಕೊಳ್ಳಬಹುದು.ಇದು ತುಂಬಾ ಸುಲಭ ಮತ್ತು ಶ್ಯಾವಿಗೆ ಕೂಡ ಬಿಡಿ ಬಿಡಿಯಾಗಿ ಬರುತ್ತದೆ.
* ನೇರವಾಗಿ ಬೇಯುಸುವುದಾದರೆ ಒಗ್ಗರಣೆಗೆ ನೀರು ಹಾಕಿ ಅದು ಕುದಿ ಬಂದ ಮೇಲೆ ಶ್ಯಾವಿಗೆಯನ್ನು ಹಾಕಿ,ಅದು ಬೇಯುವ ತನಕ ಬೇಯಿಸಿ,ಕೊನೆಗೆ ಮಿಕ್ಕಿದ್ದು ಬೆರೆಸಿ,ಶ್ಯಾವಿಗೆ ಉಪ್ಪಿಟ್ಟು ರೆಡಿ. ಶ್ಯಾವಿಗೆ ಉಪ್ಪಿಟ್ಟು ತಯಾರಾಗುತ್ತದೆ.

* ಇದನ್ನು ಬೆಳಗ್ಗೆ ಅಥವಾ ಸಂಜೆಯ ತಿಂಡಿಗಾಗಿ ತಯಾರಿಸಬಹುದು.

Tuesday, April 10, 2007

Haalu Kheeru - ಹಾಲು ಖೀರು:


ಹಾಲು ಖೀರು:

ಬೇಕಾಗುವ ಸಾಮಗ್ರಿಗಳು:

ತೆಂಗಿನಕಾಯಿ / ಕೊಬ್ಬರಿ - ಅರ್ಧಕಪ್
ಗಸಗಸೆ - ಒಂದು ದೊಡ್ಡ ಚಮಚ
ಬಾದಾಮಿ - ಏಳು/ಎಂಟು
ಶ್ಯಾವಿಗೆ - ಕಾಲು ಕಪ್
ಚಿರೋಟಿ ರವೆ - ಎರಡು ಟೇಬಲ್ ಚಮಚ
ಸಕ್ಕರೆ ಅಥವ ಬೆಲ್ಲ ರುಚಿಗೆ ತಕ್ಕಷ್ಟು
ತುಪ್ಪ - ಮೂರು ದೊಡ್ಡ ಚಮಚ
ಹಾಲು -ಅರ್ಧ ಲೀಟರ್
ಗುಲಾಬಿ ನೀರು - ಒಂದು ಚಮಚ
ಏಲಕ್ಕಿ ಪುಡಿ ಸ್ವಲ್ಪ
ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ

ತಯಾರಿಸುವ ರೀತಿ:

ಮೊದಲು ಶ್ಯಾವಿಗೆ ಮತ್ತು ರವೆಯನ್ನು ತುಪ್ಪ ಹಾಕಿ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಗೋಡಂಬಿ ಮತ್ತು ದ್ರಾಕ್ಷಿಯನ್ನು ಕೂಡ ಹುರಿದುಕೊಂಡು ಇಟ್ಟುಕೊಳ್ಳಿ.
ನಂತರ ತೆಂಗಿನಕಾಯಿ ಮತ್ತು ಹದವಾಗಿ ಹುರಿದ ಗಸಗಸೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ ,ಸ್ವಲ್ಪ ನೀರು ಸೇರಿಸಿ ರುಬ್ಬಿ. ಅದರ ಜೊತೆಯಲ್ಲಿಯೇ ಬಾದಾಮಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಸ್ವಲ್ಪ ದಪ್ಪ ತಳವಿರುವ ಪಾತ್ರೆ ಅಥವ ನಾನ್ ಸ್ಟಿಕ್ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ, ಅದು ಕರಗಿದ ನಂತರ ರುಬ್ಬಿದ ತೆಂಗಿನಕಾಯಿ,ಗಸಗಸೆ ಮಿಶ್ರಣವನ್ನು ಹಾಕಿ, ಅದು ಹಸಿವಾಸನೆ ಹೋಗುವವರೆಗೂ ಕುದಿಸಿ, ಬೇಕೆನಿಸಿದರೆ ಕುದಿಯುವಾಗ ಸ್ವಲ್ಪ ನೀರು ಸೇರಿಸಿ . ಆಮೇಲೆ ಅದಕ್ಕೆ ಶ್ಯಾವಿಗೆ ಮತ್ತು ರವೆಯನ್ನು ಹಾಕಿ, ಅದು ಸ್ವಲ್ಪ ಬೆಂದ ಮೇಲೆ ಹಾಲು ಸೇರಿಸಿ, ಸಕ್ಕರೆ ಅಥವಾ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ, ತಳಹತ್ತದಂತೆ ತಿರುವುತ್ತಿರಿ, ಇಲ್ಲವೆಂದರೆ ತಳ ಹತ್ತಿ ಸೀದ ವಾಸನೆ ಬರುತ್ತದೆ ಪಾಯಸ, ಆಗಾಗಿ ಎಲ್ಲವನ್ನು ಸೇರಿಸಿದ ಮೇಲು ಚೆನ್ನಾಗಿ ತಿರುಗಿಸುತ್ತಿರಿ. ಶ್ಯಾವಿಗೆ ಬೆಂದ ನಂತರ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ. ಒಂದು ಕುದಿ ಕುದಿಸಿ ಇಳಿಸಿ. ಗುಲಾಬಿ ನೀರನ್ನು ಬಳಸುವುದಾದರೆ ಸ್ವಲ್ಪ ತಣ್ಣಗಾದ ಮೇಲೆ ಸೇರಿಸಿ, ಇದು ತುಂಬಾ ಒಳ್ಳೆಯ ಪರಿಮಳವನ್ನೂ ನೀಡುತ್ತದೆ. ಈಗ ಹಾಲು ಖೀರು ಸವಿಯಲು ಸಿದ್ಧ. ತುಪ್ಪವನ್ನು ನಿಮ್ಮ ಇಷ್ಟದಂತೆ ಹಾಕಿಕೊಳ್ಳಬಹುದು.

*ಹಾಲು ಮತ್ತು ನೀರನ್ನು ಎಷ್ಟು ಪ್ರಮಾಣ ಬೇಕೋ ಅಷ್ಟನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೇರಿಸಿಕೊಳ್ಳಿ.
*ಖೀರು ತೆಳ್ಳಗೆ ಬೇಕೋ / ಗಟ್ಟಿಯಾಗಿ ಬೇಕೋ ಅದನ್ನು ತಯಾರಿಸುವ ರೀತಿ ನಿಮ್ಮ ಇಷ್ಟದಂತೆ.

Popular Posts