Monday, April 30, 2007

Nippattu - ನಿಪ್ಪಟ್ಟು

ನಿಪ್ಪಟ್ಟು:

ನನ್ನ ಅಮ್ಮ ತುಂಬಾ ಚೆನ್ನಾಗಿ ನಿಪ್ಪಟ್ಟು ಮಾಡುತ್ತಿದ್ದರು. ಅವರು ನಮ್ಮ ತರಹ ರೆಡಿಮೇಡ್ ಅಕ್ಕಿಹಿಟ್ಟು ಬಳಸದೆ,ಅದಕ್ಕಾಗಿಯೇ ಅಕ್ಕಿ ತೊಳೆದು ಹಾಕಿ, ಒಣಗಿಸಿ,ಉದ್ದಿನಬೇಳೆ,ಕಡಲೆ ಎಲ್ಲಾ ಹಾಕಿ ಮಿಲ್ ಮಾಡಿಸುತ್ತಿದ್ದರು. ಅವರ ನಿಪ್ಪಟ್ಟನ್ನು ತಿಂದವರೆಲ್ಲರು ಹೊಗಳುತ್ತಿದ್ದರು. ನಿಪ್ಪಟ್ಟು ಮಾಡುವುದಕ್ಕೆ ಅದೆಷ್ಟೋ ವೇಳೆ ತೆಗೆದು ಕೊಳ್ಳುತ್ತಾ ಅದರ ಕಡೆಯೇ ನಿಗಾವಹಿಸುತ್ತಿದ್ದರು. ಅದರ ಹದ ಯಾವಾಗಲೂ ಸರಿಯಾಗಿಯೇ ಇರಬೇಕು. ಒಂದು ಹೇಳಬೇಕೆಂದರೆ ನಮ್ಮಗಳನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಎಲ್ಲವನ್ನು ತಾನೇ ಮಾಡಿಕೊಳ್ಳುತ್ತಿದ್ದರು. ಈ ರೀತಿ ಅವರಿಗೆ ಎಲ್ಲದರಲ್ಲು ಫರ್ಫೆಕ್ಟ್ ಆಗಿರಬೇಕು. ಆದರೆ ಅಮ್ಮನ ನಿಪ್ಪಟ್ಟು ರುಚಿ ನನಗೆ ಇದುವರೆಗೂ ಬಂದಿಲ್ಲ. ನನ್ನ ಅಮ್ಮ ಮಾಡುತ್ತಿದ್ದ ನಿಪ್ಪಟ್ಟು ರುಚಿನೇ ರುಚಿ,ಮತ್ತೆಲ್ಲು ತಿಂದಿಲ್ಲ ಎನಿಸುತ್ತೆ. ಎಷ್ಟುಬಾರಿ ತಯಾರಿಸಿದರು,ಆ ರೀತಿ ನಿಪ್ಪಟ್ಟು ನನಗೆ ಮಾಡಲು ಆಗಿಲ್ಲ. ಆದರೂ ಇದು ನಾನು ತಯಾರಿಸುವ ರೀತಿ ಬರೆದಿದ್ದೇನೆ.ನಿಪ್ಪಟ್ಟು ಅಂತ ರುಚಿ ಸಿಗುತ್ತೆ.
ಬೇಕಾಗುವ ಸಾಮಗ್ರಿಗಳು:

ಅಕ್ಕಿ ಹಿಟ್ಟು - ಒಂದು ಬಟ್ಟಲು
ಹುರಿಗಡಲೆ ಹಿಟ್ಟು - ಎರಡು ದೊಡ್ಡ ಚಮಚ
ಕಡಲೆ ಹಿಟ್ಟು - ಒಂದೆರಡು ಚಮಚ
ಮೈದಾ ಹಿಟ್ಟು - ಅರ್ಧ ಬಟ್ಟಲು
ಕರಿಬೇವಿನಸೊಪ್ಪು-ಸಣ್ಣಗೆ ಮುರಿದಿದ್ದು
ಕಡ್ಲೆಕಾಯಿ ಬೀಜಗಳು - ಸ್ವಲ್ಪ
ಹುರಿಗಡಲೆ- ಸ್ವಲ್ಪ
ಎಳ್ಳು ಸ್ವಲ್ಪ
ಅಚ್ಚಕಾರದ ಪುಡಿ ರುಚಿಗೆ
ಉಪ್ಪು ರುಚಿಗೆ

ತಯಾರಿಸುವ ವಿಧಾನ:

ಅಕ್ಕಿಹಿಟ್ಟು,ಮೈದಾಹಿಟ್ಟು,ಹುರಿಗಡಲೆ ಹಿಟ್ಟು,ಕಡ್ಲೆಹಿಟ್ಟು,ಕಡ್ಲೆಕಾಯಿಬೀಜ (ಕಡ್ಲೆಕಾಯಿಬೀಜಗಳನ್ನು ಸ್ವಲ್ಪ ದಪ್ಪವಾಗಿ ಕುಟ್ಟಿಹಾಕಿ),ಹುರಿಗಡಲೆ, ಕರಿಬೇವು,ಎಳ್ಳು,ಉಪ್ಪು,ಕಾರದ ಪುಡಿ ಮತ್ತು ಕಾಯಿಸಿರುವ ಎರಡು ಚಮಚ ಎಣ್ಣೆಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಿ. ಅದಕ್ಕೆ ನೀರು ಹಾಕಿ ಮೃದುವಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟನ್ನು ಚೆನ್ನಾಗಿ ನಾದಿ. ಅದರಿಂದ ದಪ್ಪ ಗೋಲಿ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಕವರ್ ಅಥವಾ ಬಾಳೆದೆಲೆ / ಅಲ್ಯುಮಿನಿಯಂ ಫಾಯಿಲ್ ಮೇಲೆ ಉಂಡೆಗಳನ್ನು ಸಣ್ಣ ಪೂರಿಯಂತೆ,ಕೈನಿಂದಲೇ ಅದುಮಿಕೊಂಡು ಪುಟ್ಟ ಪುಟ್ಟದಾಗಿ ತಟ್ಟಿ. ಸ್ವಲ್ಪ ದಪ್ಪವಿರಲಿ, ಅದೇ ರೀತಿ ಎಲ್ಲವನ್ನು ತಯಾರಿಸಿಕೊಳ್ಳುತ್ತಾ. ಹಾಗೆ ಕಾದಿರುವ ಎಣ್ಣೆಗೆ ಹಾಕಿ ಎರಡು ಬದಿ ಬೇಯಿಸಿ. ಹೊಂಬಣ್ಣ ಬರುವವರೆಗೂ ಕರಿಯಿರಿ. ಹದವಾಗಿ ಕರಿದು. ಆಮೇಲೆ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ. ನಿಪ್ಪಟ್ಟುಗಳು ತುಂಬಾ ರುಚಿಯಾಗಿರುತ್ತವೆ. ಯಾವ ಸಮಯದಲ್ಲಾದರೂ ತಿನ್ನಲು ಚೆಂದ. ತಿಂದಷ್ಟು ರುಚಿ ಕೊಡುವ ನಿಪ್ಪಟ್ಟು ತಯಾರಿಸಿ,ಎಷ್ಟು ದಿನ ಬೇಕಾದರೂ ಇಟ್ಟುಕೊಳ್ಳಬಹುದು. ಆದರೆ ಅದು ಖಾಲಿಯಾಗದೆ ಇರಬೇಕಲ್ಲಾ ಸ್ಟೋರ್ ಮಾಡಿಟ್ಟು ಕೊಳ್ಳಲು ಅಲ್ವಾ!!


* ಕೊಬ್ಬರಿ ತುರಿ ಸಹ ಕುಟ್ಟಿ ಹಾಕಬಹುದು.
* ಕಡಲೆ ಹಿಟ್ಟು ಸಹ ಹಾಕಬಹುದು.ಪೂರ್ತಿ ಕಡಲೆಹಿಟ್ಟು ಹಾಕಿದರೆ,ಅದು ಸ್ವಲ್ಪ ಗಟ್ಟಿಯಾಗಿ ಬರುತ್ತದೆ.
* ನಿಪ್ಪಟ್ಟು ತಯಾರಿಸುವಾಗ ಹಿಟ್ಟನ್ನು ಹದವಾಗಿ ಕಲೆಸಿಕೊಳ್ಳಿ. ಸ್ವಲ್ಪ ಸ್ವಲ್ಪ ಹಿಟ್ಟನ್ನು ಕಲೆಸಿ ಮಾಡಿದರೆ ಇನ್ನು ಚೆನ್ನಾಗಿರುತ್ತದೆ.
* ಬೇಯಿಸುವಾಗಲೂ ಅಷ್ಟೇ ಸರಿಯಾಗಿ ಎಣ್ಣೆ ಕಾಯಿಸಿ,ಸರಿಯಾದ ಉರಿಯಲ್ಲಿ ಬೇಯಿಸಿ,ಬೇಗ ತೆಗೆದರೆ ಒಳಗೆ ಬೇಯುವುದಿಲ್ಲ. ಉರಿ ಹೆಚ್ಚಿಸಿದರೆ ಬೇಗ ಕಂದು ಬಣ್ಣ ಬರುತ್ತದೆ, ರುಚಿಯೂ ಕೆಡುತ್ತದೆ.
* ತಟ್ಟುವಾಗಲೂ ಸಹ ಸರಿಯಾಗಿ ಒಂದೇ ಸಮ ತಟ್ಟಿ.ಅಂಚು ಕತ್ತರಿಸದಂತೆ ತಟ್ಟಿಕೊಳ್ಳಿ.
* ಜಾಸ್ತಿ ಕಡಲೆ ಹಿಟ್ಟು ಅಥವಾ ಹಿಟ್ಟು ತುಂಬಾ ಮೆತ್ತಗಾದರೆ /ಕಲೆಸಿದ ರೀತಿ ಸರಿಯಿಲ್ಲವೆಂದರೆ ಎಣ್ಣೆ ಜಾಸ್ತಿ ಹೀರಿಕೊಳ್ಳುತ್ತದೆ / ಕರಗುತ್ತದೆ.
* ಒಂದೊಂದೆ ಎಣ್ಣೆಗೆ ಬಿಡಬೇಕು ಅಂತ ಏನು ಇಲ್ಲ,ನಾಲ್ಕೈದು ಒಟ್ಟಿಗೆ ಹಾಕಿ ಬೇಯಿಸಬಹುದು.
* ಇದೇನಪ್ಪಾ ನಿಪ್ಪಟ್ಟು ತಯಾರಿಸಲು, ಇಷ್ಟೊಂದು ಕಷ್ಟನಾ! ಅನ್ಕೊಬೇಡಿ. ಮೊದಲು ಎಲ್ಲಾ ಅಡಿಗೆಗಳು ಹೀಗೆ. ಆದರೂ ಎಣ್ಣೆಯಲ್ಲಿ ಕರಿದ ತಿಂಡಿಗಳು ಹೇಗಿದ್ರು ರುಚಿಯಾಗಿರುತ್ತವೆ.ಒಮ್ಮೆ ಕೆಟ್ಟರೆ ಬಿಡದೇ ಮತ್ತೆ ಪ್ರಯತ್ನಿಸಿ.

No comments:

Popular Posts