Thursday, April 5, 2007

Soji Laddu/Rava Unde - ರವೆಉಂಡೆ:

ರವೆಉಂಡೆಗೆ ಅದರದ್ದೇ ಆದ ಸ್ಥಾನವಿದೆ. ಹಬ್ಬಗಳಲ್ಲಿ,ಅದರಲ್ಲೂ ಶಿವರಾತ್ರಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಗಳಲ್ಲಿ ಇದು ಇರಲೇಬೇಕು. ಅಲ್ಲದೆ ಅಜ್ಜಿ ಮನೆಗಳಲ್ಲಿ ಇದು ಯಾವಾಗಲು ಸ್ಟಾಕ್ ಇರುತ್ತದೆ. ಇತ್ತೀಚೆಗೆ ರವೆಯಿಂದ ಸುಮಾರು ಸಿಹಿತಿಂಡಿ ತಯಾರಿಸುತ್ತೇವೆ. ಆದರೂ ಅದೆಲ್ಲವು ರವೆಉಂಡೆಯಷ್ಟು ರುಚಿ ಬರುವುದಿಲ್ಲ. ಒಲ್ಡ್ ಈಸ್ ಗೋಲ್ಡ್ ಎನ್ನುವಂತೆ ಈ ಉಂಡೆಯನ್ನು ಎಲ್ಲರು ಇಷ್ಟಪಡುತ್ತಾರೆ. ಅದನ್ನು ತಯಾರಿಸುವ ಬಗೆ ತಿಳಿಯೋಣ ಬನ್ನಿ.

ರವೆಉಂಡೆ:
ಬೇಕಾಗುವ ಸಾಮನುಗಳು:
ರವೆ - ಎರಡು ಕಪ್
ಸಕ್ಕರೆಪುಡಿ - ಎರಡು ಕಪ್
ಕೊಬ್ಬರಿ ತುರಿ- ಒಂದು ಕಪ್
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ಬಾದಾಮಿ ಬೇಕಿದ್ದರೆ
ಏಲಕ್ಕಿ ಪುಡಿ ಸ್ವಲ್ಪ
ಹಾಲು - ಅರ್ಧ ಕಪ್
ತುಪ್ಪ - ನಾಲ್ಕು ಚಮಚ

ತಯಾರಿಸುವ ರೀತಿ:

ದಪ್ಪ ತಳದ ಅಥವಾ ನಾನ್ ಸ್ಟಿಕ್ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಿ. ಹದವಾದ ಉರಿಯಲ್ಲಿ ಹುರಿದರೆ ಒಳ್ಳೆಯದು. ಇಲ್ಲವೆಂದರೆ ರವೆ ಸೀದು ಹೋಗುತ್ತದೆ.
ಅದಕ್ಕೆ ಸಕ್ಕರೆಪುಡಿ ಸೇರಿಸಿ,ಬೆರೆಸಿ,ಕೊಬ್ರಿತುರಿ ಕೂಡ ಹಾಕಿ,ದ್ರಾಕ್ಷಿ,ಗೋಡಂಬಿ,ಬಾದಾಮಿ ಮತ್ತು ಏಲಕ್ಕಿ ಪುಡಿ ಸೇರಿಸಿ,ಚೆನ್ನಾಗಿ ಬೆರೆಸಿ. ಅದಕ್ಕೆ ತುಪ್ಪ ಮತ್ತು ಕಾಲು ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ,ತಿರುವುತ್ತಿದ್ದು,ಒಲೆಯಿಂದ ಕೆಳಗಿಳಿಸಿ.ಸ್ವಲ್ಪ ತಣ್ಣಗಾದ ಮೇಲೆ ಹಾಲಿನ /ತುಪ್ಪದಲ್ಲಿ ಕೈ ಸವರಿಕೊಂಡು ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು,ನಿಮಗೆ ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ತಯಾರಿಸಿ. ರುಚಿಕರವಾದ ರವೆಉಂಡೆ ಸವಿಯಲು ತಯಾರಾಗುತ್ತದೆ. ಈ ಉಂಡೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ.

*ರವೆಯನ್ನು ಸೀದಿಸಿಕೊಂಡು ಹುರಿಯಬೇಡಿ.
*ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಂಡು ಬೇಕಾದರು ಸೇರಿಸಬಹುದು.
*ರವೆಯ ಮಿಶ್ರಣವನ್ನು ತುಂಬಾ ತೆಳುವಾಗಿ /ಪುಡಿ ಪುಡಿಯಾಗಿ ತಯಾರಿಸದೆ,ಸರಿಯಾದ ಹದದಲ್ಲಿ ತಯಾರಿಸಿದರೆ ಉಂಡೆಗಳನ್ನು ಕಟ್ಟಲು ಸುಲಭವಾಗುತ್ತದೆ.

No comments:

Popular Posts