Tuesday, April 10, 2007

Karigadubu - ಕರಿಗಡುಬು:

ಕರಿಗಡುಬು:

ಕಡುಬು ಮತ್ತು ಮೋದಕ ಎಂದರೆ ನೆನಪಾಗುವುದೇ ನಮ್ಮ ಮುದ್ದು ಗಣಪನ ಹಬ್ಬ ಅಲ್ಲವೇ!!!!!!
ಕಡುಬು ಎಂದರೆ ಹೂರಣವನ್ನು(ಫಿಲ್ಲಿಂಗ್) ಅಕ್ಕಿಹಿಟ್ಟು ಅಥವಾ ಮೈದಾಹಿಟ್ಟಿನಲ್ಲಿ ತಯಾರಿಸಿದ ಕಣಕದ ಪುಟ್ಟ ಪೂರಿಯ ಎಲೆಯ ನಡುವೆ/ಮಧ್ಯ ಭಾಗಕ್ಕೆ ತುಂಬಿ, ಅದನ್ನು ಮಧ್ಯಭಾಗಕ್ಕೆ ಅರ್ಧಕ್ಕೆ ಸರಿಯಾಗಿ ಮಡಿಚಿ,ಅರ್ಧ ವೃತ್ತಾಕಾರವಾಗಿ ಬರುವುದನ್ನು,ಎರಡು ಬದಿ/ಅಂಚುಗಳನ್ನು ಅಂಟಿಸಿ ಚೆನ್ನಾಗಿ ಒತ್ತಿ ಅದರ ಅಂಚುಗಳನ್ನು ಚಿತ್ತಾರ ಮಾಡಿ ಅಥವ ಅಂಚನ್ನು ಅದೇ ಆಕಾರದಲ್ಲಿ ಕಟ್ಟರ್ ನಿಂದ ಕತ್ತರಿಸಿ,ಬಂದ ಹೆಚ್ಚಾದ ಹಿಟ್ಟನ್ನು ತೆಗೆಯಿರಿ. ಅವಶ್ಯಕತೆ ಇದ್ದರೆ ಅಂಚು ಅಂಟಿಸಲು ನೀರು ಅಥವಾ ಹಾಲನ್ನು ಉಪಯೋಗಿಸಬಹುದು. ಅಂಚು ಬಿಟ್ಟುಕೊಳ್ಳದಂತೆ ಸರಿಯಾಗಿ ಅದುಮಿ,ಇದು ಕಡುಬನ್ನು ತಯಾರಿಸುವ ರೀತಿ, ಅದು ಯಾವ ರೀತಿಯ ಕಡುಬು ಆಗಿರಲಿ ತಯಾರಿಸುವ ರೀತಿ ಒಂದೇ ತರಹ.
ಈ ಕಡಬುಗಳನ್ನು ಅಕ್ಕಿಹಿಟ್ಟಿನಲ್ಲಿ ತಯಾರಿಸಿರುವುದನ್ನು ಹಬೆಯಲ್ಲಿ ಬೇಯಿಸಬೇಕು.ಇದನ್ನು ಕಡುಬು ಎನ್ನುತ್ತೇವೆ.
ಮೈದಾಹಿಟ್ಟಿನಲ್ಲಿ ತಯಾರಿಸಿರುವುದನ್ನು ಎಣ್ಣೆಯಲ್ಲಿ ಕರಿಯಬೇಕು. ಎಣ್ಣೆಯಲ್ಲಿ ಕರಿಯುವುದರಿಂದ ಇದನ್ನು ಕರಿದ ಕಡುಬು ಅಥವಾ ಕರ್ಜೀಕಾಯಿ ಎನ್ನುತ್ತೇವೆ.
ಕಡುಬಿನಲ್ಲಿ ವಿವಿಧ ರೀತಿಗಳಿವೆ.
ಕರಿಗಡುಬು ಅಂದರೆ ಹೂರಣವನ್ನು ಕರ್ಜೀಕಾಯಿ ತಯಾರಿಸುವ ರೀತಿಯಲ್ಲಿ ತಯಾರಿಸಿ,ಎಣ್ಣೆಯಲ್ಲಿ ಕರಿಯುವುದರಿಂದ ಕರಿದ ಕಡುಬು ಆಡುಭಾಷೆಯಲ್ಲಿ ಕರಿಗಡುಬು ಎಂದಾಗಿದೆ. ಇದನ್ನು ಹೆಚ್ಚಾಗಿ ನಮ್ಮ ಪ್ರೀತಿಯ ಶ್ರೀ ಗಣೇಶನ ಹಬ್ಬದಲ್ಲಿ ತಯಾರಿಸುತ್ತಾರೆ. ಕೆಲವರು ಕಡ್ಲೆ-ಕೊಬ್ಬರಿಯ ಹೂರಣದ ಕರ್ಜೀಕಾಯಿ/ಕರಿಗಡುಬು ಮಾಡುವರು. ಮತ್ತೆ ಕೆಲವರು ಈ ರೀತಿಯ ಹೂರಣದ ಕಡುಬನ್ನು ತಯಾರಿಸುತ್ತಾರೆ. ಕೆಲವರು ಹೋಳಿಗೆಯನ್ನು,ಕೆಲವರು ಹೆಸರುಬೇಳೆ ಕಡುಬು, ಮತ್ತೆ ಕೆಲವರು ಸಿಹಿಕಡುಬು ತಯಾರಿಸುತ್ತಾರೆ. ಅವರವರ ಮನೆ ಪದ್ಧತಿಯಂತೆ ನಡೆಸಿಕೊಂಡು ಬರುತ್ತಾರೆ. ಕಡುಬನ್ನು ಯಾವ ರೀತಿ ತಯಾರಿಸಿದರೂ ನಮ್ಮ ಗಣೇಶನಿಗೆ ಮಾತ್ರ ಯಾವುದೋ ಒಂದು ಕಡುಬಂತೂ ಅವತ್ತಿನ ಹಬ್ಬದೂಟದಲ್ಲಿ ಇರಲೇಬೇಕು. ಅವನು ಆ ಕಡುಬು-ಈ ಕಡುಬು ಅಂತ ಕೇಳುತ್ತಾನೆಯೇ ನಮ್ಮ ನಮ್ಮ ಬಾಯಿರುಚಿಗಳಿಗೆ ಈ ಹಬ್ಬಗಳು ಒಂದು ನೆಪ ಅಷ್ಟೇ. ಮಾಮುಲಿನಂತೆ ವಿಶೇಷ ಅಡಿಗೆ ಮಾಡಿಕೊಂಡು ತಿನ್ನಲು ಸೋಮಾರಿಗಳು ನಾವು. ಹೀಗೆ ಹಬ್ಬದ ಹೆಸರಲ್ಲಿ ಭರ್ಜರಿ ಊಟ ತಯಾರಿಸಿದರಾಯಿತು. ಬರೀತಾ ಹೋದರೆ ಮುಗಿಯೋದೇ ಇಲ್ಲ ಎನಿಸುತ್ತೆ. ಸರಿ ಸಧ್ಯಕ್ಕೆ ಇಲ್ಲಿ ಕರಿಗಡುಬು ತಯಾರಿಸೋಣ.

ಬೇಕಾಗುವ ಸಾಮನುಗಳು:

ಮೈದಾಹಿಟ್ಟು - ಒಂದು ಬಟ್ಟಲು
ಚಿರೋಟಿ ರವೆ - ಎರಡು ಚಮಚ
ಚಿಟಿಕೆ ಉಪ್ಪು
ಎರಡು ಚಮಚ ತುಪ್ಪ
ಬೇಳೆ ಹೂರಣ
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟಿಗೆ,ಚಿಟಿಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ. ಇದನ್ನು ’ಕಣಕ’ ಎನ್ನುತ್ತೇವೆ.
ತೊಗರಿಬೇಳೆಯನ್ನು ಬೇಯಿಸಿಕೊಂಡು, ಅದರ ನೀರು ಬಸಿದ ಮೇಲೆ ಬರುವ ಬೇಳೆಯನ್ನು,ಬೆಲ್ಲ ಮತ್ತು ಏಲಕ್ಕಿಯನ್ನು ಸೇರಿಸಿ,ಒಲೆಯ ಮೇಲಿಟ್ಟು,ಚೆನ್ನಾಗಿ ಬೆರೆಸಿ, ಅದನ್ನು ನುಣ್ಣಗೆ ರುಬ್ಬಿಕೊಂಡ ನಂತರ ಅದನ್ನು’ಹೂರಣ’ ಎನ್ನುತ್ತೇವೆ.

ನಂತರ ಮೈದಾಹಿಟ್ಟಿನ ಕಣಕದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು,ಅದರಿಂದ ಪುಟ್ಟ ಪುಟ್ಟ ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಬೇಳೆಬೆಲ್ಲ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ, ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ,ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ ,ಸರಿಯಾಗಿ ಎಲ್ಲಾ ಕಡೆಯೂ ಅದನ್ನು ಮುಚ್ಚಿ,ತೆರೆದುಕೊಳ್ಳದಂತೆ ಗಟ್ಟಿಯಾಗಿ ಮುಚ್ಚಬೇಕು. ಅಂಚು ಮಡಿಸುವ ವಿಧಾನ ತಿಳಿದಿರುವವರು ಅದನ್ನು ಸುತ್ತಿ ಸುತ್ತಿ ಅಂಚಿಗೆ ಚಿತ್ತಾರ ಮಾಡಬಹುದು. ಅದು ಬರದೇ ಇರುವವರು ಚೆನ್ನಾಗಿ ಅದುಮಿ ಮುಚ್ಚಿದ ಅಂಚಿನ ತುದಿ ಭಾಗ ಮಾತ್ರ ಕಟ್ಟರ್ ನಿಂದ ಕಟ್ ಮಾಡಬಹುದು. ಕತ್ತರಿಸಿದಾಗ ಬರುವ ಹೆಚ್ಚಿನ ಹಿಟ್ಟನ್ನು ತೆಗೆದುಹಾಕಿ,ಅದನ್ನು ಮತ್ತೆ ಉಪಯೋಗಿಸಬಹುದು. ಕಟ್ಟರ್ ಸಿಗುತ್ತದೆ ಅದರಿಂದ ಕಟ್ ಮಾಡಿದ ಮೇಲೆ ಮತ್ತೆ ಎಲ್ಲಾ ಕಡೆ ಅಂಟಿಕೊಂಡಿದೆಯಾ ಪರೀಕ್ಷಿಸಿ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಎಣ್ಣೆಯಲ್ಲಿ ಪುಡಿಯೆಲ್ಲಾ ಆಚೆ ಬರುತ್ತದೆ. ಇದನ್ನು ತಯಾರಿಸುವಾಗ ನೋಡಿಕೊಂಡು ಸರಿಯಾಗಿ ತಯಾರಿಸಿಕೊಳ್ಳಿ, ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ, ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ಬೇಳೆ ಹೂರಣದ ಕರಿಗಡುಬು ತಯಾರಾಗುತ್ತದೆ.
* ಪೂರಿಯೊಳಗೆ ಹೂರಣವನ್ನು ತುಂಬುವಾಗ ಸರಿಯಾಗಿ ನೋಡಿ,ಆ ಕಡೆ-ಈ ಕಡೆ ಬರದಂತೆ ಮಧ್ಯಭಾಗದಲ್ಲಿ ಮಾತ್ರ ಇರುವಂತೆ ಹಾಕಿ ಮಡಿಸಿಕೊಳ್ಳಬೇಕು.
* ಬೇಳೆ ಹೂರಣ ತಯಾರಿಸುವ ರೀತಿಯನ್ನು "ಹೋಳಿಗೆ" ರೆಸಿಪಿಯಲ್ಲಿ ನೋಡಬಹುದು.

No comments:

Popular Posts