Friday, November 16, 2007

Maddur Vada / ಮದ್ದೂರು ವಡೆ

ಮದ್ದೂರು ವಡೆ:

"ಮದ್ದೂರು" ಬೆಂಗಳೂರು ಮತ್ತು ಮೈಸೂರು ಮಧ್ಯೆ ಬರುವಂತ ಒಂದು ಊರಿನ ಹೆಸರು. ಈ ಊರಿನಲ್ಲಿ ತಯಾರಿಸಿದಂತ ವಡೆ ಇದು. ಅದಕ್ಕೆ ಒಂದು ಪುಟ್ಟ ಕಥೆ ಇದೆ. ಅಂದು ವಿಧಿಯಿಲ್ಲದೇ ತಯಾರಿಸಿದಂತ ವಡೆಗೆ ಬಹಳ ಬೇಡಿಕೆ ಬಂತು ,ಆಗಾಗಿ ಅವತ್ತಿನಿಂದ ಇದು ಒಂದು ಹೋಟೆಲ್ ಮೆನುನಲ್ಲಿ ಸೇರಿಕೊಂಡಿತು. ಅದು ದಿನಕಳೆದಂತೆ ಈ ವಡೆ ಪ್ರಸ್ಧಿದ್ಧಿಯಾಯಿತೆಂತು ಹೀಗೆ ಎಲ್ಲೋ ಓದಿದ ನೆನಪು. ಕೊನೆಗೆ ಆ ವಡೆಗೆ ಮದ್ದೂರು ವಡೆ ಅಂತನೆ ನಾಮಕರಣವಾಗಿ, ಅದು ನಮ್ಮ ಕರ್ನಾಟಕದ ಎಲ್ಲರ ಮನೆ ಮಾತಾಯಿತು. ಮದ್ದೂರು ಊರನ್ನು ಹಾದು ಹೋಗುವಾಗ ಅಲ್ಲಿಯ ಮದ್ದೂರು ವಡೆಯ ಸವಿಯನ್ನು ಸಾಮಾನ್ಯವಾಗಿ ಎಲ್ಲರು ನೋಡಿರುತ್ತಾರೆ. ಅದಂತೂ ಈಗ ಸುಮಾರು ವರುಷಗಳಿಂದ ಎಲ್ಲಾ ಊರಿನ ಹೋಟೆಲ್ ಮತ್ತು ಮನೆಗಳಲ್ಲೂ ತಯಾರಿಸುವಂತ ವಡೆಯಾಗಿಬಿಟ್ಟಿದೆ. ಈ ಇತಿಹಾಸ ಇರುವ ಮದ್ದೂರು ವಡೆಯನ್ನು ನಮಗೆ ಬಂದ ರೀತಿಯಲ್ಲಿ ತಯಾರಿಸೋಣ.

ಬೇಕಾಗುವ ಸಾಮಗ್ರಿಗಳು:

ಒಂದು ಬಟ್ಟಲು ಅಕ್ಕಿಹಿಟ್ಟು
ಕಾಲು ಬಟ್ಟಲು ಚಿರೋಟಿ ರವೆ
ಕಾಲು ಬಟ್ಟಲು ಮೈದಾಹಿಟ್ಟು
ಎರಡು ಚಮಚ ಕಾಯಿಸಿದ ಎಣ್ಣೆ
ಸಣ್ಣಗೆ ಹೆಚ್ಚಿದ ಈರುಳ್ಳಿ
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ
ಕೊತ್ತುಂಬರಿಸೊಪ್ಪು
ಕರಿಬೇವು
ಉಪ್ಪು
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

ಮೊದಲಿಗೆ ಅಕ್ಕಿಹಿಟ್ಟು,ಮೈದಾಹಿಟ್ಟು,ರವೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ,ಈರುಳ್ಳಿ,ಹಸಿಮೆಣಸಿನಕಾಯಿ,ಕಾಯಿಸಿರುವ ಎಣ್ಣೆ,ಹೆಚ್ಚಿದ ಕೊತ್ತುಂಬರಿ ಮತ್ತು ಕರಿಬೇವಿನ ಸೊಪ್ಪುಗಳನ್ನು ಹಾಕಿ, ಸ್ವಲ್ಪ ನೀರು ನೋಡಿ ಹಾಕಿಕೊಂಡು ಗಟ್ಟಿಯಾಗಿ ಕಲೆಸಿಕೊಂಡು ಚಿಕ್ಕ, ಚಿಕ್ಕ ಉಂಡೆ ಮಾಡಿ,ಎಣ್ಣೆ ಸವರಿದ ಕವರ್ ಮೇಲೆ ಪುಟ್ಟ ಪೂರಿಯಂತೆ ತಟ್ಟಿ, ಕಾದಿರುವ ಎಣ್ಣೆಯಲ್ಲಿ ಹಾಕಿ,ಎರಡು ಕಡೆಯು ಬೇಯಿಸಿ,ಹೊಂಬಣ್ಣ ಬರುವವರೆಗೆ ಅಥವಾ ಬೆಂದಿದೆ ಎನಿಸಿದ ನಂತರ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ಇದು ಬಿಸಿಯಾಗಿಯೂ ತಿನ್ನಲು ಚೆನ್ನಾಗಿರುತ್ತದೆ. ತಣ್ಣಗಾದರೂ ಚೆನ್ನ. ಈ ವಡೆಯನ್ನು ಹಾಗೆಯೇ ತಿನ್ನಬಹುದು. ಆದರೂ ಕಾಯಿಚಟ್ನಿಯೊಂದಿಗೆ ತುಂಬಾನೇ ರುಚಿಯಾಗಿರುತ್ತದೆ.

* ಮದ್ದೂರುವಡೆಯನ್ನು ಸ್ವಲ್ಪ ದಪ್ಪ ತಟ್ಟಿಕೊಂಡು ಸಹ ತಯಾರಿಸಿ. ಉಪ್ಪು ಮತ್ತು ಕಾರ ನಿಮಗೆ ಸೇರಿದ್ದು.
* ಕೆಲವರು ತೆಳುವಾಗಿ ತಯಾರಿಸುತ್ತಾರೆ. ದಪ್ಪ,ತೆಳು,ದೊಡ್ಡದು,ಚಿಕ್ಕದು ಎಲ್ಲಾ ನಿಮಗೆ ಹೇಗೇ ಬೇಕೋ ಆಗೆ ತಯಾರಿಸಿಕೊಳ್ಳಬಹುದು. ಆದರೆ ಹೇಗೇ ತಯಾರಿಸಿದರೂ ಕಲೆಸುವ ಹದ ಮತ್ತು ಎಣ್ಣೆಯಲ್ಲಿ ಕರಿಯುವ ಹದ ತಿಳಿದುಕೊಂಡರೆ ವಡೆಗಳು ಚೆನ್ನಾಗಿ ಬರುತ್ತವೆ.
* ಈರುಳ್ಳಿಯನ್ನು ಹೆಚ್ಚಾಗಿ ಹಾಕಿ.ನೀರನ್ನು ನೋಡಿಕೊಂಡು ಹಾಕಿ,ಏಕೆಂದರೆ ಈರುಳ್ಳಿಯು ನೀರು ಬಿಡುತ್ತದೆ. ಒಂದೊಂದು ಸಾರಿ ಅದೇ ಸಾಕಾಗುತ್ತದೆ.
ರುಚಿಕರವಾದ ಮದ್ದೂರುವಡೆಯನ್ನು ತಯಾರಿಸುವಾಗ ಡಯಟಿಂಗ್ ಮಾಡಬೇಡಿ. ಈ ವಡೆಗಳು ಮೂರ್ನಾಲ್ಕು ದಿನಗಳು ಕೆಡದೆ ಚೆನ್ನಾಗಿ ಇರುತ್ತದೆ.ಈ ವಡೆಗಳು ಹೇಗೆ ತಯಾರಿಸಿದರು ರುಚಿ ಚೆನ್ನಾಗಿಯೇ ಇರುತ್ತವೆ.

No comments:

Popular Posts