
ಬೇಕಾಗುವ ಸಾಮಾನುಗಳು:
ಹಿಟ್ಟು ಅಥವಾ ಮುದ್ದೆಗೆ:ಅಕ್ಕಿ ಹಿಟ್ಟು - ಎರಡು ಬಟ್ಟಲು
ಅರ್ಧ ಚಮಚ ಉಪ್ಪು
ಹೂರಣಕ್ಕೆ:
ಹುರಿಗಡಲೆ -ಬೇಕಾಗುವಷ್ಟು
ಗಸಗಸೆ ಸ್ವಲ್ಪ
ಎಳ್ಳು ಸ್ವಲ್ಪ
ಬೆಲ್ಲ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಕಾಯಿತುರಿ - ಒಂದು ಕಾಯಿ
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ಉಪ್ಪು ಹಾಕಿಡಿ. ಅದು ಚೆನ್ನಾಗಿ ಬೇಯಸಿ, ಅದನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.
ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಈ ಕಡುಬುಗಳನ್ನು ಹಬೆಯಲ್ಲಿ ಕೆಲವರು ಬೇಯಿಸಿ ತಿನ್ನುತ್ತಾರೆ, ಕೆಲವರು ಹಾಗೇ ಇಷ್ಟಪಡುತ್ತಾರೆ.ಸಿಹಿ ಕಡುಬುಗಳನ್ನಾದರೆ ಬೇಯಿಸದೆ ತಿನ್ನಬಹುದು. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬು ತಯಾರಿಸಿದರೆ ಹಬೆಯಲ್ಲಿ ಬೇಯಿಸಬೇಕು.ಇದಿಷ್ಟು ಕಡುಬಿನ ಹಿಟ್ಟಿನ ಬಗ್ಗೆ.
ಹೂರಣ ತಯಾರಿಸಲು:
ಹುರಿಗಡಲೆಯನ್ನು ಪುಡಿ ಮಾಡಿಕೊಳ್ಳಿ, ಗಸಗಸೆ ಮತ್ತು ಎಳ್ಳನ್ನು ಹುರಿದುಕೊಂಡು ಪುಡಿ ಮಾಡಿ, ಬೆಲ್ಲವನ್ನು ಸಹ ಸಣ್ಣ ಪುಡಿ ಮಾಡಿಕೊಂಡು ಅದಕ್ಕೆ ಹುರಿಗಡಲೆ ಪುಡಿ, ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ, ಎಲ್ಲವನ್ನು ಚೆನ್ನಾಗಿ ಹೊಂದಿಕೊಳ್ಳುವಂತೆ ಕೈನಲ್ಲಿ ಬೆರೆಸಿ. ಇದನ್ನು ಕಡುಬಿಗೆ ತುಂಬುವ ಹೂರಣ ಎನ್ನುತ್ತೇವೆ. ಕಡುಬು ತಯಾರಿಸುವಾಗ ಇದಕ್ಕೆ ಹಸಿ ಕಾಯಿತುರಿಯನ್ನು ಹಾಕಬೇಕು ಮತ್ತು ಚೆನ್ನಾಗಿ ಬೆರೆಸಬೇಕು, ಕಾಯಿತುರಿ ಜಾಸ್ತಿ ಇದ್ದಷ್ಟು ರುಚಿ ಜಾಸ್ತಿ. ಅದಕ್ಕೆ ಪುಡಿ ಅಂದರೆ ಹೂರಣ ತಯಾರಿಸುವಾಗ ಬೆಲ್ಲವನ್ನು ಸ್ವಲ್ಪ ಜಾಸ್ತಿಯೇ ಹಾಕಬೇಕು. ಅದು ಕಾಯಿತುರಿ ಹಾಕಿದಾಗ ಸರಿಯಾಗುತ್ತದೆ.
ಅಕ್ಕಿ ಹಿಟ್ಟು ಅಥವ ಮುದ್ದೆಯಿಂದ ಸಣ್ಣ ಉಂಡೆಯನ್ನು ತೆಗೆದುಕೊಂಡು ಅದನ್ನು ಬಟ್ಟಲಿನ ಆಕಾರ ಅಥವಾ ಪೂರಿಯಂತೆ ತಟ್ಟಿಕೊಂಡು ಅದರೊಳಗೆ ಕಡ್ಲೆಮಿಶ್ರಣದ ಹೂರಣವನ್ನು ತುಂಬಿ, ಮಧ್ಯ/ಅರ್ಧ ಭಾಗಕ್ಕೆ ಮಡಿಸಿಕೊಂಡು ಎರಡು ಬದಿಯ ಅಂಚನ್ನು ಒಂದಕ್ಕೊಂದು ನೀರು/ಹಾಲು/ತೆಂಗಿನಹಾಲು ಯಾವುದಾದರೂ ಉಪಯೋಗಿಸಿ ಅಂಟಿಸಿ. ಅಂಚು ಕತ್ತರಿಸಿ/ಡಿಸೈನ್ ಮಾಡಿ. ಇದೇರೀತಿ ಎಲ್ಲವನ್ನು ತಯಾರಿಸಿ, ಸಿಹಿಕಡುಬು ತಿನ್ನಲು ತಯಾರಾಗುತ್ತದೆ.
* ಹೂರಣವನ್ನು ಹಿಂದಿನ ದಿನ/ ಮೊದಲೆ ತಯಾರಿಸಿಕೊಳ್ಳಬಹುದು, ಇದಕ್ಕೆ ನೀರು ಸೇರಿಸದೆ ಇರುವುದರಿಂದ ಹೂರಣ ಅಂದರೆ ಕಡ್ಲೆಮಿಶ್ರಣ ಪುಡಿಯೂ ಸುಮಾರು ದಿನ ಇರುತ್ತದೆ. ತಯಾರಿಸಿಟ್ಟುಕೊಂಡಿದ್ದರೆ ಯಾವಾಗ ಬೇಕೋ ಆಗ ಕಡುಬನ್ನು ಮಾಡಿಕೊಳ್ಳಬಹುದು.
*ಗಸಗಸೆ,ಎಳ್ಳು ಹುರಿದು, ಅದರ ಜೊತೆ ಕಡ್ಲೆ ಮತ್ತು ಬೆಲ್ಲವನ್ನು ಸೇರಿಸಿ, ಒಟ್ಟಿಗೆ ಎಲ್ಲವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು.
* ಕಡುಬು ತಯಾರಿಸುವಾಗ ಹಸಿ ತೆಂಗಿನಕಾಯಿ ತುರಿಯನ್ನು ಮರೆಯದೆ ಸೇರಿಸಿ,ಬೆರೆಸಿ. ಅದೇ ತೆಂಗಿನ ತುರಿಯಿಂದ ಸ್ವಲ್ಪ ಹಾಲು ಹಿಂಡಿಕೊಳ್ಳಿ. ಅಂಚುಗಳನ್ನು ಅಂಟಿಸುವಾಗ ಉಪಯೋಗಿಸಲು ಬೇಕು.
*ಯಾವ ರೀತಿಯ ಕಡುಬುಗಳನ್ನೆ ಆಗಲಿ ತಯಾರಿಸುವಾಗ ಅಂಚುಗಳನ್ನು ಸರಿಯಾಗಿ ಅಂಟಿಸಿ, ಬಿಟ್ಟುಕೊಳ್ಳುತ್ತವೆ ಕೆಲವೊಮ್ಮೆ, ಆಗ ಹೂರಣವೆಲ್ಲಾ ಚೆಲ್ಲುತ್ತದೆ/ಆಚೆ ಬರುತ್ತದೆ.
* ಇದೇ ರೀತಿ ಮೋದಕವನ್ನು ತಯಾರಿಸಲು ಅಕ್ಕಿ ಹಿಟ್ಟಿನಿಂದ ಪುಟ್ಟ ಬಟ್ಟಲಿನ ಆಕಾರ ಮಾಡಿ ಅದಕ್ಕೆ ಹೂರಣ ತುಂಬಿ, ಮೇಲ್ಭಾಗದಲ್ಲಿ ಎಲ್ಲಾ ಅಂಚುಗಳನ್ನು ಮೇಲಕ್ಕೆ ತಗೊಂಡು ಮುಚ್ಚಿ, ಈ ಮೋದಕ ಸಿಹಿಯು ನಮ್ಮ ಗಣಪನಿಗೆ ಬಹಳ ಅಚ್ಚುಮೆಚ್ಚು.
* ಈ ಕಡುಬುಗಳನ್ನು ಹಾಗೇಯೇ ತಿನ್ನಬಹುದು, ಆವಿಯಲ್ಲಿ ಬೇಯಿಸುವ ಅಗತ್ಯವಿಲ್ಲ. ಕೆಲವರು ಮಾತ್ರ ಬೇಯಿಸಿ ತಿನ್ನುತಾರೆ. ಸಾಮನ್ಯವಾಗಿ ಹಾಗೇ ತಿನ್ನುತ್ತಾರೆ, ತಿನ್ನುವಾಗ ಕಡುಬುಗಳ ಮೇಲೆ ತುಪ್ಪ ಹಾಕಿಕೊಂಡು ತಿನ್ನಬೇಕು.
ಕಡುಬುಗಳನ್ನು ಭೀಮನ ಅಮವಾಸ್ಯೆ ಮತ್ತು ಗಣೇಶ ಚತುರ್ಥಿ ಹಬ್ಬದಲ್ಲಿ ಖಾಯಂ ಆಗಿ ತಯಾರಿಸುತ್ತಾರೆ
No comments:
Post a Comment