Sunday, July 8, 2007

Kesari Bhath / Shira - ಕೇಸರಿ ಭಾತ್ / ಶಿರಾ

ಕೇಸರಿ ಭಾತ್:

ಬೇಕಾಗುವ ಸಾಮಗ್ರಿಗಳು:

ರವೆ (ಸಣ್ಣ ರವೆ/ಚಿರೋಟಿ ರವೆ)-ಒಂದು ಕಪ್
ಸಕ್ಕರೆ ರುಚಿಗೆ
ತುಪ್ಪ -ಎರಡು ಚಮಚ
ರಿಫೈಂಡ್ ಆಯಿಲ್ -ಎರಡು ಚಮಚ
ಹಾಲು - ಅರ್ಧ ಕಪ್
ಕೇಸರಿ ದಳಗಳು ಸ್ವಲ್ಪ
ಏಲಕ್ಕಿ ಪುಡಿ
ದ್ರಾಕ್ಷಿ ಮತ್ತು ಗೋಡಂಬಿ

ತಯಾರಿಸುವ ರೀತಿ:

ಒಂದೆರಡು ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಿ.
ಮೊದಲು ರವೆಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ, ಹಸಿವಾಸನೆ ಹೋಗಿ ಘಂ ಎನ್ನುವ ವಾಸನೆ ಬರುವವರೆಗೂ ರವೆಯನ್ನು ಸೀದಿಸದೆ ಹುರಿದುಕೊಳ್ಳಿ.
ಪಾತ್ರೆಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿಯಿರಿ, ಅದಕ್ಕೆ ಹಾಲು ಮತ್ತು ಸ್ವಲ್ಪ ನೀರು ನಿಮಗೆ ಬೇಕಾದ ಅಳತೆ ಹಾಕಿಕೊಂಡು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಿ ಕುದಿ ಬರುತ್ತಿರುವಾಗ ಏಲಕ್ಕಿ ಪುಡಿ ಮತ್ತು ಹಾಲಿನಲ್ಲಿ ನೆನೆಸಿದ ಕೇಸರಿದಳ ಹಾಕಿ, ಮತ್ತೆರಡು ಚಮಚ ತುಪ್ಪ ಹಾಕಿ, ಆಮೇಲೆ ಹುರಿದಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟು ಕಟ್ಟದಂತೆ ಎಲ್ಲ ಬೆರೆತುಕೊಳ್ಳುವಂತೆ ಚೆನ್ನಾಗಿ ತಿರುಗಿಸಿ. ಕೆಳಗಿಳಿಸಿ,ಮುಚ್ಚಿಡಿ. ಕೇಸರಿಭಾತ್ ತಯಾರಿಸುವಾಗ ಸ್ವಲ್ಪ ತೆಳುವಾಗಿ ತಯಾರಿಸಿ, ನಂತರ ತಣ್ಣಗಾದ ಮೇಲೆ ಅದು ತುಂಬಾ ಗಟ್ಟಿಯಾಗುತ್ತದೆ. ತುಪ್ಪ ಸ್ವಲ್ಪ ಜಾಸ್ತಿ ಹಾಕಿ. ಬಿಸಿಬಿಸಿಯಾದ ಕೇಸರಿಭಾತ್ ತಿನ್ನಲು ತಯಾರಾಗಿದೆ. ಬಿಸಿಯಾದ ಕೇಸರಿಭಾತ್ ಬಹಳ ಚೆನ್ನಾಗಿರುತ್ತದೆ.

* ರವೆಯನ್ನು ಹುರಿಯುವಾಗ ತುಂಬಾ ಹುಷಾರಾಗಿ ಹುರಿಯಬೇಕು.
* ಕೇಸರಿಭಾತ್ ಗೆ ಬರೀ ನೀರನ್ನು ಹಾಕದೆ ಹಾಲನ್ನು ಸೇರಿಸಿದರೆ ರುಚಿ ಹೆಚ್ಚು.
* ತುಪ್ಪದ ಜೊತೆ ಎಣ್ಣೆಯನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವುದಿಲ್ಲ.
* ಕೆಲವರು ಕೇಸರಿಬಣ್ಣ ಹಾಕುತ್ತಾರೆ, ಇದರಿಂದ ಕೇಸರಿಭಾತ್ ಬಣ್ಣ ಚೆನ್ನಾಗಿ ಆಕರ್ಷಕವಾಗಿ ಬರುತ್ತದೆ. ಆದರೆ ಕೇಸರಿ ದಳಗಳು ಆರೋಗ್ಯಕ್ಕೆ ಒಳ್ಳೆಯದು, ಆಗಾಗಿ ಅದನ್ನು ಉಪಯೋಗಿಸಿ. ಬಣ್ಣ ಹಾಕಲೇ ಬೇಕೆನಿಸಿದವರು ಒಳ್ಳೆಯ ಪ್ರಾಡಕ್ಟ್ ಬಣ್ಣವನ್ನು ತನ್ನಿ.ಅದು ಚಿಟಿಕೆ ಹಾಕಿದರೆ ಸಾಕು.
* ಇದು ಬೇಗನೇ ತಯಾರಿಸಬಹುದಾದಂತಹ ಸಿಹಿ. ಕೆಲವರು ಈ ಸಿಹಿತಿಂಡಿಗೆ "ಶಿರಾ" ಎಂದು ಕೂಡ ಕರೆಯುತ್ತಾರೆ.

No comments:

Popular Posts