Thursday, July 12, 2007

Brinjal Sabji - ಬದನೆಕಾಯಿ ಮಸೆದ ಪಲ್ಯ/ಮಸ್ಕಾಯಿ ಪಲ್ಯ:


ಬದನೆಕಾಯಿ ಮಸೆದ ಪಲ್ಯ/ಮಸ್ಕಾಯಿ ಪಲ್ಯ:
ಸಾಮಗ್ರಿಗಳು:

ಬದನೆಕಾಯಿ - ಅರ್ಧಕೆಜಿ
ಈರುಳ್ಳಿ-ಹೆಚ್ಚಿದ್ದು
ಹಸಿಮೆಣಸಿನಕಾಯಿಗಳು - ಉದ್ದಕ್ಕೆ ಹೆಚ್ಚಿಕೊಳ್ಳಿ
ಎಣ್ಣೆ, ಸಾಸಿವೆ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ನಿಂಬೆರಸ
ಕೊತ್ತುಂಬರಿ ಸೊಪ್ಪು

ತಯಾರಿಸುವ ರೀತಿ:

ಮೊದಲು ಎಣ್ಣೆಯನ್ನು ಕಾಯಿಸಿ,ಸಾಸಿವೆ,ಕರಿಬೇವು,ಕಡ್ಲಬೇಳೆ,ಉದ್ದಿನಬೇಳೆ ಹಾಕಿ,ನಂತರ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಐದು ನಿಮಿಷ ಬಾಡಿಸಿ. ಬದನೆಕಾಯಿ ಹಾಕಿ,ಒಗ್ಗರಣೆಯಲ್ಲಿಯೇ ಕೆಲವು ನಿಮಿಷ ಬಾಡಿಸಿ. ಅದು ಸ್ವಲ್ಪ ಬೆಂದಿದೆ ಎನಿಸಿದ ತಕ್ಷಣ ಸ್ವಲ್ಪ ನೀರು ಮತ್ತು ರುಚಿಗೆ ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ. ನಿಂಬೆರಸ ಮತ್ತು ಕೊತ್ತುಂಬರಿಸೊಪ್ಪು ಸೇರಿಸಿ.ನಂತರ ಹಾಗೇ ಸ್ವಲ್ಪ ಮಸೆಯಿರಿ, ಇದೀಗ ತಯಾರಾಗುತ್ತದೆ,ಮಸ್ಕಾಯಿ ಪಲ್ಯ.
* ಕಾಯಿ ತುರಿ ಬೇಕಾದವರು,ಬದನೆ ಬೇಯಿಸುವಾಗಲೇ ಸೇರಿಸಿ.
* ಈ ಮಸ್ಕಾಯಿ ಪಲ್ಯವು ರೊಟ್ಟಿ ಮತ್ತು ಚಪಾತಿಗೆ ತುಂಬಾ ರುಚಿಯಾಗಿ ಚೆನ್ನಾಗಿರುತ್ತದೆ.
* ಇದಕ್ಕೆ ಇನ್ನ್ಯಾವುದೆ ಮಸಾಲೆ ಹಾಕುವುದಿಲ್ಲ. ಹಸಿಮೆಣಸಿನಕಾಯಿ ರುಚಿಗೆ ತಕ್ಕಷ್ಟು ಹಾಕಿ.
* ಹಸಿರು ಬದನೆಕಾಯಿಯಲ್ಲಿ ತಯಾರಿಸಿದರೆ ರುಚಿ ಹೆಚ್ಚು.

Sunday, July 8, 2007

Kesari Bhath / Shira - ಕೇಸರಿ ಭಾತ್ / ಶಿರಾ

ಕೇಸರಿ ಭಾತ್:

ಬೇಕಾಗುವ ಸಾಮಗ್ರಿಗಳು:

ರವೆ (ಸಣ್ಣ ರವೆ/ಚಿರೋಟಿ ರವೆ)-ಒಂದು ಕಪ್
ಸಕ್ಕರೆ ರುಚಿಗೆ
ತುಪ್ಪ -ಎರಡು ಚಮಚ
ರಿಫೈಂಡ್ ಆಯಿಲ್ -ಎರಡು ಚಮಚ
ಹಾಲು - ಅರ್ಧ ಕಪ್
ಕೇಸರಿ ದಳಗಳು ಸ್ವಲ್ಪ
ಏಲಕ್ಕಿ ಪುಡಿ
ದ್ರಾಕ್ಷಿ ಮತ್ತು ಗೋಡಂಬಿ

ತಯಾರಿಸುವ ರೀತಿ:

ಒಂದೆರಡು ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಿ.
ಮೊದಲು ರವೆಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ, ಹಸಿವಾಸನೆ ಹೋಗಿ ಘಂ ಎನ್ನುವ ವಾಸನೆ ಬರುವವರೆಗೂ ರವೆಯನ್ನು ಸೀದಿಸದೆ ಹುರಿದುಕೊಳ್ಳಿ.
ಪಾತ್ರೆಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿಯಿರಿ, ಅದಕ್ಕೆ ಹಾಲು ಮತ್ತು ಸ್ವಲ್ಪ ನೀರು ನಿಮಗೆ ಬೇಕಾದ ಅಳತೆ ಹಾಕಿಕೊಂಡು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಿ ಕುದಿ ಬರುತ್ತಿರುವಾಗ ಏಲಕ್ಕಿ ಪುಡಿ ಮತ್ತು ಹಾಲಿನಲ್ಲಿ ನೆನೆಸಿದ ಕೇಸರಿದಳ ಹಾಕಿ, ಮತ್ತೆರಡು ಚಮಚ ತುಪ್ಪ ಹಾಕಿ, ಆಮೇಲೆ ಹುರಿದಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟು ಕಟ್ಟದಂತೆ ಎಲ್ಲ ಬೆರೆತುಕೊಳ್ಳುವಂತೆ ಚೆನ್ನಾಗಿ ತಿರುಗಿಸಿ. ಕೆಳಗಿಳಿಸಿ,ಮುಚ್ಚಿಡಿ. ಕೇಸರಿಭಾತ್ ತಯಾರಿಸುವಾಗ ಸ್ವಲ್ಪ ತೆಳುವಾಗಿ ತಯಾರಿಸಿ, ನಂತರ ತಣ್ಣಗಾದ ಮೇಲೆ ಅದು ತುಂಬಾ ಗಟ್ಟಿಯಾಗುತ್ತದೆ. ತುಪ್ಪ ಸ್ವಲ್ಪ ಜಾಸ್ತಿ ಹಾಕಿ. ಬಿಸಿಬಿಸಿಯಾದ ಕೇಸರಿಭಾತ್ ತಿನ್ನಲು ತಯಾರಾಗಿದೆ. ಬಿಸಿಯಾದ ಕೇಸರಿಭಾತ್ ಬಹಳ ಚೆನ್ನಾಗಿರುತ್ತದೆ.

* ರವೆಯನ್ನು ಹುರಿಯುವಾಗ ತುಂಬಾ ಹುಷಾರಾಗಿ ಹುರಿಯಬೇಕು.
* ಕೇಸರಿಭಾತ್ ಗೆ ಬರೀ ನೀರನ್ನು ಹಾಕದೆ ಹಾಲನ್ನು ಸೇರಿಸಿದರೆ ರುಚಿ ಹೆಚ್ಚು.
* ತುಪ್ಪದ ಜೊತೆ ಎಣ್ಣೆಯನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವುದಿಲ್ಲ.
* ಕೆಲವರು ಕೇಸರಿಬಣ್ಣ ಹಾಕುತ್ತಾರೆ, ಇದರಿಂದ ಕೇಸರಿಭಾತ್ ಬಣ್ಣ ಚೆನ್ನಾಗಿ ಆಕರ್ಷಕವಾಗಿ ಬರುತ್ತದೆ. ಆದರೆ ಕೇಸರಿ ದಳಗಳು ಆರೋಗ್ಯಕ್ಕೆ ಒಳ್ಳೆಯದು, ಆಗಾಗಿ ಅದನ್ನು ಉಪಯೋಗಿಸಿ. ಬಣ್ಣ ಹಾಕಲೇ ಬೇಕೆನಿಸಿದವರು ಒಳ್ಳೆಯ ಪ್ರಾಡಕ್ಟ್ ಬಣ್ಣವನ್ನು ತನ್ನಿ.ಅದು ಚಿಟಿಕೆ ಹಾಕಿದರೆ ಸಾಕು.
* ಇದು ಬೇಗನೇ ತಯಾರಿಸಬಹುದಾದಂತಹ ಸಿಹಿ. ಕೆಲವರು ಈ ಸಿಹಿತಿಂಡಿಗೆ "ಶಿರಾ" ಎಂದು ಕೂಡ ಕರೆಯುತ್ತಾರೆ.

Wednesday, July 4, 2007

Radish Samber / Moolangi Saaru

ಮೂಲಂಗಿ ಹುಳಿ:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ
ಮೂಲಂಗಿ, ಹೆಚ್ಚಿದ್ದು
ಈರುಳ್ಳಿ ಸ್ವಲ್ಪ
ಕಾಯಿತುರಿ ಸ್ವಲ್ಪ
ಸಾರಿನ ಪುಡಿ
ಹುಣಸೇರಸ - ೧ ಚಮಚ
ಅರಿಶಿಣದ ಪುಡಿ
ಎಣ್ಣೆ
ಉಪ್ಪು

ತಯಾರಿಸುವ ವಿಧಾನ:

ತೊಗರಿಬೇಳೆಗೆ ಅರಿಶಿಣ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು ಅದಕ್ಕೆ ಮೂಲಂಗಿ ಮತ್ತು ಟಮೋಟ ಹಾಕಿ, ಮೂಲಂಗಿ ಬೇಯುವವರೆಗೂ ಬೇಯಿಸಿ, ನಂತರ ಸಾರಿನಪುಡಿ, ಹುಣಸೇರಸ ,ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿ, ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ಒಗ್ಗರಣೆ ಸೇರಿಸಿ. ಇಳಿಸಿ.
*ರುಬ್ಬಲು - ಕಾಯಿತುರಿ, ಈರುಳ್ಳಿ ಮತ್ತು ಸಾರಿನಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
*ಒಗ್ಗರಣೆ - ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಮತ್ತು ಚುಟುಕ ಈರುಳ್ಳಿ ಹಾಕಿ ಬಾಡಿಸಿ.
* - ರುಬ್ಬಿಕೊಳ್ಳಲು ವೇಳೆ/ಬಿಡುವು ಇಲ್ಲದವರು ಕಾಯಿತುರಿ ರುಬ್ಬಿಕೊಳ್ಳದೆ ಆಗೆ ಕೂಡ ಸಾಂಬಾರ್ ತಯಾರಿಸಿಕೊಳ್ಳಬಹುದು. ಆಗ ಸಾರಿಗೆ ರುಬ್ಬಿದ ಮಿಶ್ರಣದ ಹಾಕುವ ಬದಲು ಬರೀ ಸಾರಿನ ಪುಡಿ ಹಾಕಿ ಕುದಿಸಿದರೆ ಆಯಿತು. ಈ ಸಾಂಬಾರ್ ಕೂಡ ರುಚಿಯಾಗಿಯೇ ಇರುತ್ತದೆ.
* ಮೂಲಂಗಿ ಜೊತೆ ಹುರುಳಿಕಾಯಿ/ಆಲೂಗೆಡ್ಡೆ/ಕ್ಯಾರೆಟ್ ಸಹ ಸೇರಿಸಿ ತಯಾರಿಸಬಹುದು.

Tuesday, July 3, 2007

Bittergourd /ಹಾಗಲಕಾಯಿ ಗೊಜ್ಜು

ಹಾಗಲಕಾಯಿ ಎಷ್ಟೇ ಕಹಿ ಆಗಿದ್ದರೂ ಅದು ತುಂಬಾ ಹೆಸರುವಾಸಿಯಾಗಿದೆ. ಇದು ಮಧುಮೇಹ ರೋಗಕ್ಕೆ ರಾಮಬಾಣವಾದ್ದರಿಂದ ಎಲ್ಲರಿಗೂ ಹತ್ತಿರವಾಗುತ್ತಿದೆ. ಇದರಿಂದ ಅನೇಕ ಅಡಿಗೆಗಳನ್ನು ಮಾಡಬಹುದು. ಈ ಕಾಯಿಯ ರಸವನ್ನು ಪ್ರತಿದಿನ ಶುಗರ್ ಇರುವವರು ಕುಡಿದರೆ ಉಪಯುಕ್ತ. ಕಹಿಯಾಗಿದ್ದರೂ ಒಂದು ವಿಚಿತ್ರ ರೀತಿಯ ರುಚಿ ಕೊಡುವ ಹಾಗಲಕಾಯಿ ನೋಡಲು ಚೆಂದ. ಅದು ಬಳ್ಳಿಯಲ್ಲಿ ಕಾಯಿ ಬಿಟ್ಟಿದ್ದಾಗ ಅದೊಂದು ತರಹ ಸೊಗಸಾಗಿ ಕಾಣುತ್ತದೆ. ಕಹಿಯಾದರೂ ಅದು ಅಮೃತವಿದ್ದಂತೆ. ಈಗ ಇಲ್ಲಿ ಹಾಗಲಕಾಯಿ ಗೊಜ್ಜು ಬಗ್ಗೆ ತಿಳಿಸಿದೆ. ನೀವು ತಯಾರಿಸಿ ನೋಡಿ.


ಹಾಗಲಕಾಯಿ ಗೊಜ್ಜು:

ಬೇಕಾಗುವ ಸಾಮಗ್ರಿಗಳು:

ಹೆಚ್ಚಿದ ಹಾಗಲಕಾಯಿ - ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಅರಿಶಿಣದ ಪುಡಿ
ಬೆಲ್ಲ ಸ್ವಲ್ಪ
ಹುಣೆಸೇರಸ ಒಂದೆರಡು ಚಮಚ
ಕರಿಬೇವು
ಕಾಯಿತುರಿ ಸ್ವಲ್ಪ
ಒಂದು ಸಣ್ಣ ಈರುಳ್ಳಿ
ಅಚ್ಚ ಮೆಣಸಿನ ಪುಡಿ
ಧನಿಯಾ ಪುಡಿ
ಹೆಚ್ಚಿದ ಕೊತ್ತುಂಬರಿ ಸೊಪ್ಪು
ಉಪ್ಪು
ಎಣ್ಣೆ

ವಿಧಾನ:

ಮೊದಲು ಸಣ್ಣ ಈರುಳ್ಳಿ, ತೆಂಗಿನಕಾಯಿತುರಿ, ಕಾರದಪುಡಿ,ಧನಿಯಾಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕಾದ ಬಳಿಕ,ಸಾಸಿವೆ,ಕರಿಬೇವು,ಅರಿಶಿಣ,ಹೆಚ್ಚಿದ ಈರುಳ್ಳಿ ಹಾಕಿ,ಬಾಡಿಸಿ. ಹಾಗಲಕಾಯಿಗಳನ್ನು ಹಾಕಿ ಒಗ್ಗರಣೆಯಲ್ಲಿಯೇ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಅದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ, ಉಪ್ಪು ಮತ್ತು ಬೆಲ್ಲ ಹಾಕಿ, ನೀರು ಎಷ್ಟು ಬೇಕೋ ಅಷ್ಟನ್ನು ಹಾಕಿ, ಬೇಯಲು ಬಿಡಿ. ಬೆಂದ ನಂತರ ಇಳಿಸಿ,ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.ಮನೆಯಲ್ಲಿ ಎಲ್ಲರು ತಿನ್ನಬಹುದಾದಂತ ಹಾಗಲಕಾಯಿ ಗೊಜ್ಜು ತಯಾರಾಗಿದೆ. ಇದನ್ನು ಅನ್ನ,ಚಪಾತಿ,ರೊಟ್ಟಿಗಳೊಂದಿಗೆ ಬಡಿಸಬಹುದು. ಅನ್ನಕ್ಕೂ ತುಂಬಾ ರುಚಿಯಾಗಿರುತ್ತದೆ ಅಥವಾ ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.ಈ ಗೊಜ್ಜು ಸ್ವಲ್ಪ ದೊಡ್ಡ ಮಕ್ಕಳಿಗೆ ಸಹ ಇಷ್ಟವಾಗುತ್ತದೆ.

Monday, July 2, 2007

Poha Uppittu /ಅವಲಕ್ಕಿ ಒಗ್ಗರಣೆ

ಅವಲಕ್ಕಿ ಒಗ್ಗರಣೆ:

ತೊಳೆದು ನೆನೆಸಿದ ಅವಲಕ್ಕಿ
ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ, ಕರಿಬೇವು
ಕಡ್ಲೆಬೇಳೆ, ಉದ್ದಿನಬೇಳೆ
ಅರಿಶಿನ,ಉಪ್ಪು
ಕಡಲೆಕಾಯಿಬೀಜಗಳು
ಕಾಯಿತುರಿ ಮತ್ತು
ಕೊತ್ತುಂಬರಿ ಸೊಪ್ಪು
ನಿಂಬೆರಸ/ಹುಣಸೆರಸ

ವಿಧಾನ:

ಅವಲಕ್ಕಿಯನ್ನು ನೆನೆಸುವ ಕಾಲವೂ ಅವಲಕ್ಕಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಅವಲಕ್ಕಿಯಲ್ಲಿ ಸುಮಾರು ವಿಧಗಳಿವೆ. ಅದಕ್ಕಾಗಿ ಅದು ಯಾವುದು ಉಪಯೋಗಿಸುತ್ತೀರೋ ಅದನ್ನು ನೋಡಿ ನೆನೆಸಿ. ನೀರಿನಲ್ಲಿ ತೊಳೆದು ಇಟ್ಟರೆ ಸಾಕು ನೆನೆಯುತ್ತದೆ.
ಮೊದಲು ಪಾತ್ರೆ ಅಥವ ಬಾಣಲೆಗೆ ಅವಶ್ಯಕತೆ ಇದ್ದಷ್ಟು ಎಣ್ಣೆ ಹಾಕಿ,ಸಾಸಿವೆ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಸರಿಯಾಗಿ ಹದವಾಗಿ, ಹುರಿದುಕೊಂಡು,ಕಡ್ಲೆಬೇಳೆ,ಉದ್ದಿನಬೇಳೆಯನ್ನು ಹುರಿದ ನಂತರ ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ ನಾಲ್ಕೈದು ನಿಮಿಷ ಹುರಿದು ಅದಕ್ಕೆ ಅರಿಶಿನ ಮತ್ತು ಉಪ್ಪು ಹಾಕಿ,ನೆನೆಸಿದ ಅವಲಕ್ಕಿಯನ್ನು ಹಾಕಿ,ಇಳಿಸಿ.ಬೆರೆಸಿ,ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ತಿರುಗಿಸಿ,ಕಲೆಸಿ.
*ಹುಣಸೆರಸ ಹಾಕುವುದಾದರೆ ಒಗ್ಗರಣೆಯಲ್ಲಿಯೇ ಹಾಕಿ, ಬೆರೆಸಿ

Popular Posts