Sunday, June 3, 2007

Holige/Obbattu Saaru - ಹೋಳಿಗೆ/ಒಬ್ಬಟ್ಟಿನ ಸಾರು:


ಹೋಳಿಗೆ /ಒಬ್ಬಟ್ಟಿನ ಸಾರು:

ಬೇಳೆ ಕಟ್ಟು ತೆಗೆಯುವ ವಿಧಾನವು ಹೋಳಿಗೆ ರೆಸಿಪಿಯಲ್ಲಿ ಇದೆ. ಬೇಳೆಯನ್ನು ತುಂಬಾ ನೀರು ಹಾಕಿ ಬೇಯಿಸಿಕೊಳ್ಳಬೇಕು.ಬೇಳೆಯೂ ಕರಗದಂತೆ ಬೇಯಿಸಿ,ಗಟ್ಟಿಯಿರುವಾಗಲೆ ಅದನ್ನು ಇಳಿಸಿ ನೀರು ಸೋಸಿ ಬಸಿದುಕೊಳ್ಳಿ.ಅದರಿಂದ ಬರುವ ನೀರನ್ನೆ "ಬೇಳೆ ಕಟ್ಟು"ಎನ್ನುತ್ತೇವೆ. ಬಸಿದಾಗ ಬಂದಿರುವ ಬೇಳೆಗೆ ಬೆಲ್ಲ ಮತ್ತು ಏಲಕ್ಕಿ ಹಾಕಿ,ಬೆರೆಸಿ,ಒಲೆ ಮೇಲಿಟ್ಟು ಕುದಿಸಿ,ರುಬ್ಬಿಕೊಳ್ಳುವ ಮಿಶ್ರಣವೇ "ಹೂರಣ".
ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ ಬೇಯಿಸಿ ಬಸಿದು ತೆಗೆದ ಬೇಳೆಕಟ್ಟು
ಕರಿಬೇವು ಎಸಳು - ಎರಡು
ಹೂರಣ (ಬೇಳೆ-ಬೆಲ್ಲದ ರುಬ್ಬಿದ ಮಿಶ್ರಣ)- ಎರಡು ಚಮಚ
ಈರುಳ್ಳಿ - ಒಂದು
ಬೆಳ್ಳುಳ್ಳಿ ಐದಾರು ಎಸಳು
ತೆಂಗಿನಕಾಯಿ ತುರಿ ಸ್ವಲ್ಪ
ಹುಣಸೇಹಣ್ಣು / ಹುಣಸೇರಸ(ಪಲ್ಪ್)
ಕೊತ್ತುಂಬರಿಸೊಪ್ಪು ಸ್ವಲ್ಪ
ಎಣ್ಣೆ / ತುಪ್ಪ
ಸಾಸಿವೆ, ಕರಿಬೇವು
ಇಂಗು,ಜೀರಿಗೆ
ಉಪ್ಪು

ಹುರಿದು ಮಸಾಲೆಪುಡಿ ಮಾಡಿಕೊಳ್ಳಬೇಕಾದ ಸಾಮಗ್ರಿಗಳು:

ಒಣಮೆಣಸಿನಕಾಯಿ ರುಚಿಗೆ
ಧನಿಯಾ - ಎರಡು ದೊಡ್ಡ ಚಮಚಗಳು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಕಾಲು ಚಮಚ
ಮೆಂತ್ಯ - ಕಾಲು ಚಮಚ
ಸಾಸಿವೆ - ಕಾಲು ಚಮಚ
ಚೆಕ್ಕೆ - ಚಿಕ್ಕ ಚೂರು,ಲವಂಗ -ಒಂದು

ತಯಾರಿಸುವ ರೀತಿ:

ಬೇಳೆ ಬಸಿದುಕೊಂಡ ಕಟ್ಟು ನೀರಿಗೆ ಅದು ಬಿಸಿಯಾಗಿರುವಾಗಲೆ ಒಂದೆರಡು ಎಸಳು ತೊಳೆದಿರುವ ಕರಿಬೇವಿನಸೊಪ್ಪು ಹಾಕಿಡಿ.
ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೂರು ಎಣ್ಣೆ ಹಾಕಿ ಹುರಿದುಕೊಳ್ಳಿ.
ಹುರಿದುಕೊಂಡು ಪುಡಿ ಮಾಡಲು ಹೇಳಿರುವ ಸಾಮಾನುಗಳನ್ನೆಲ್ಲಾ ಹುರಿದು ಪುಡಿಮಾಡಿಕೊಳ್ಳಿ.
ತೆಂಗಿನಕಾಯಿ ತುರಿಗೆ,ಹುರಿದಿರುವ ಈರುಳ್ಳಿ,ಬೆಳ್ಳುಳ್ಳಿ,ಮಸಾಲೆಪುಡಿ,ಹುಣಸೇಹಣ್ಣು,ಬೇಳೆ ಹೂರಣ,ಕೊತ್ತುಂಬರಿಸೊಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ಒಂದು ಚಮಚ ತುಪ್ಪ ಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಇಂಗು ಮತ್ತು ಒಂದು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು,ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಮತ್ತು ಬೇಳೆ ಕಟ್ಟು ಕೂಡ ಸೇರಿಸಿ,ಎರಡನ್ನು ಚೆನ್ನಾಗಿ ಬೆರೆಸಿ,ಕುದಿಯಲು ಬಿಡಿ.ರುಚಿಗೆ ತಕ್ಕ ಉಪ್ಪು ಮತ್ತು ಕಾರ ಸೇರಿಸಿಕೊಳ್ಳಿ.ಒಂದು ಕುದಿ ಮಾತ್ರ ಕುದಿಸಿ ಇಳಿಸಿ.ಹೋಳಿಗೆ ಸಾರು ತಯಾರಾಗುತ್ತದೆ.
* ಈ ಹೋಳಿಗೆ ಸಾರನ್ನು ಮೊದಲ ಸಾರಿ ಮಾತ್ರ ಒಂದು ಸಾರಿ ಕುದಿಸಿದರೆ ಸಾಕು.
* ಈ ಸಾರು ಮಾರನೇದಿನ ತುಂಬಾ ರುಚಿಯಾಗಿರುತ್ತದೆ,ಕುದಿಸಿ,ಕುದಿಸಿ,ಸ್ವಲ್ಪ ಗಟ್ಟಿ ಬಂದಾಗ ಇನ್ನೂ ರುಚಿ ಜಾಸ್ತಿಯಾಗುತ್ತದೆ.

No comments:

Popular Posts