Saturday, October 31, 2009

Onion Pakoda / Erulli pakoda-ಈರುಳ್ಳಿ ಪಕೋಡ:

ಈರುಳ್ಳಿ ಪಕೋಡ:



ಬೇಕಾಗುವ ಸಾಮಗ್ರಿಗಳು:

ಈರುಳ್ಳಿ - ಎರಡು ದೊಡ್ಡದು
ಕಡ್ಲೆಹಿಟ್ಟು - ಒಂದು ಕಪ್
ಖಾರದ ಪುಡಿ ( ಅಚ್ಚ ಮೆಣಸಿನ ಪುಡಿ) - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಓಮಕಾಳು - ಅರ್ಧ ಚಮಚ( ಬೇಕಾದರೆ)
ಚಿಟಿಕೆ ಅಡಿಗೆ ಸೋಡಾ
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಉದ್ದಕ್ಕೆ ಹೆಚ್ಚಿಕೊಳ್ಳಿ ಅಥವಾ ಮಧ್ಯಕ್ಕೆ ಕತ್ತರಿಸಿ ಸ್ಲೈಸ್ ಮಾಡಿಕೊಂಡು ಅದನ್ನು ಬೇರ್ಪಡಿಸಿಟ್ಟುಕೊಳ್ಳಿ.
ನಂತರ ಒಂದು ಪಾತ್ರೆಗೆ ಕಡ್ಲೆಹಿಟ್ಟು, ಖಾರದ ಪುಡಿ, ಓಮಕಾಳು, ಸೋಡಾ ಮತ್ತು ಉಪ್ಪು ಹಾಕಿ ಬೆರೆಸಿ, ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮತ್ತು ಒಂದೆರಡು ಚಮಚ ಕಾದ ಎಣ್ಣೆಯನ್ನು ಹಾಕಿ, ಚೆನ್ನಾಗಿ ಕಲೆಸಿ. ನೀರು ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಹಾಕಿಕೊಳ್ಳಿ, ಯಾಕೆಂದರೆ ಈರುಳ್ಳಿಯು ಕಲೆಸಿದಾಗ ನೀರು ಬಿಡುತ್ತದೆ. ತುಂಬಾ ತೆಳ್ಳಗೆ ಹಿಟ್ಟನ್ನು ಕಲೆಸಬೇಡಿ, ಕೈ ಅಥವ ಚಮಚದಲ್ಲಿ ತೆಗೆದುಕೊಳ್ಳುವಷ್ಟು ಕಲೆಸಿಕೊಳ್ಳಿ. ನಂತರ ಈ ಕಲೆಸಿದ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಸ್ವಲ್ಪ ತೆಳುವಾಗಿ ಸ್ವಲ್ಪ ಸ್ವಲ್ಪವೇ ಹಿಟ್ಟು ಪಕೋಡಾ ತರಹ ಹಾಕಿ ಕರಿಯಿರಿ. ತುಂಬಾ ದಪ್ಪ ಮಿಶ್ರಣ ಹಾಕಿದರೆ ಒಳಗೆ ಹಿಟ್ಟು ಬೇಯುವುದಿಲ್ಲ, ಅದಕ್ಕೆ ತೆಳುವಾಗಿ ಹಾಕಿ. ಗೊಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವವರೆಗು ಕರಿದು, ಪೇಪರ್ ಟವಲ್ ಮೇಲೆ ಹಾಕಿ, ಹೆಚ್ಚುವರಿ ಎಣ್ಣೆ ಕಮ್ಮಿ ಆಗುತ್ತದೆ, ನಂತರ ತಿನ್ನಲು ನೀಡಿ. ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಊಟಕ್ಕೆ ನೆಂಚಿಕೊಳ್ಳಲು / ಕಾಫಿ ಹೊತ್ತಿಗೆ ಅಥವ ಯಾರಾದರೂ ಅತಿಥಿಗಳಿಗೆ ನೀಡಲು ತಕ್ಷಣ ತಯಾರಿಸಿಕೊಳ್ಳಬಹುದು. ಇದಕ್ಕೆ ಚಟ್ನಿಯ ಅವಶ್ಯಕತೆ ಇಲ್ಲ, ಬೇಕಾದರೆ ತಯಾರಿಸಿಕೊಳ್ಳಬಹುದು.

No comments:

Popular Posts