Tuesday, January 4, 2011

ಡ್ರೈ ಫ್ರೂಟ್ಸ್ ಉಂಡೆ : Dry Fruits Ball/Unde


ಡ್ರೈ ಫ್ರೂಟ್ಸ್ ಉಂಡೆ :


ಬೇಕಾಗುವ ಸಾಮಗ್ರಿಗಳು:

ಗೋಡಂಬಿ- ಒಂದು ಬಟ್ಟಲು
ಬಾದಾಮಿ - ಒಂದು ಬಟ್ಟಲು
ದ್ರಾಕ್ಷಿ - ಒಂದು ಬಟ್ಟಲು
ಖರ್ಜೂರ - ಒಂದು ಬಟ್ಟಲು
ಒಣ ಕೊಬ್ಬರಿ ತುರಿ - ಒಂದು ಬಟ್ಟಲು
ಗಸಗಸೆ - ಎರಡು ದೊಡ್ಡ ಚಮಚ
ಎಳ್ಳು - ಎರಡು ದೊಡ್ಡ ಚಮಚ
ಬೆಲ್ಲ - ರುಚಿಗೆ ತಕ್ಕಂತೆ
ತುಪ್ಪ - ಸ್ವಲ್ಪ

ತಯಾರಿಸುವ ವಿಧಾನ:

ಗೋಡಂಬಿ,ಬಾದಾಮಿ ಮತ್ತು ಖರ್ಜೂರವನ್ನು ಚೂರು ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿ.
ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು,ಆಮೇಲೆ ದ್ರಾಕ್ಷಿ ಹೀಗೆ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ, ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ. ಒಣಕೊಬ್ಬರಿ ತುರಿ ಸಹ ಹುರಿದು ಬಾದಾಮಿ,ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಎಳ್ಳು ಮತ್ತು ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ ಮತ್ತು ಸೀದಿಸಬೇಡಿ. ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಂಡ ನಂತರ ಬೆಲ್ಲದ ಪಾಕವನ್ನು ತಯಾರಿಸಬೇಕು.

ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ:

ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ ನೋಡಿ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ತುಂಬಾ ಹೊತ್ತು ಸಹ ತಣ್ಣಗಾಗಲು ಬಿಡದಿರಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು ದಿನವಿಡಬಹುದು.
ಬೆಲ್ಲದ ಪಾಕ ತೆಗೆಯುವಾಗ ತುಂಬಾ ಎಚ್ಚರಿಕೆಯಿಂದ ತೆಗೆಯಬೇಕು, ಒಂದೆಳೆ ಪಾಕವನ್ನು ಗಮನಿಸಿ ತೆಗೆಯಬೇಕು, ಪಾಕ ಗಟ್ಟಿಯಾದರೆ ಉಂಡೆ ತಯಾರಿಸಿದ ಮೇಲೆ ಉಂಡೆಗಳು ತುಂಬಾ ಗಟ್ಟಿಯಾಗುತ್ತವೆ. ಪಾಕ ತೆಗೆಯುವಾಗ ಒಂದು ತಟ್ಟೆಗೆ ಸ್ವಲ್ಪ ನೀರು ಹಾಕಿ, ಅದಕ್ಕೆ ಒಂದೆರಡು ಹನಿ ಪಾಕವನ್ನು ಹಾಕಿದಾಗ ಅದು ತೇಲಿ ಬರುತ್ತದೆ. ಆಗ ಪಾಕ ತಯಾರಾಗಿದೆ ಎಂದು ಗೊತ್ತಾಗುತ್ತದೆ. ಪಾಕ ನೀರಿನಲ್ಲಿ ತಕ್ಷಣವೇ ಕರಗಿದರೆ, ಇನ್ನು ಸ್ವಲ್ಪ ಹೊತ್ತು ಬಿಡಿ. ಪಾಕ ಮಾತ್ರ ಹದವಾಗಿ ತೆಗೆಯಿರಿ.


* ಖರ್ಜೂರವನ್ನು ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಕೊಬ್ಬರಿ ಗಿಟುಕಿನಿಂದ ನೀವೇ ತಕ್ಷಣವೇ ತುರಿದ ಕೊಬ್ಬರಿ ತುರಿ ಉಪಯೋಗಿಸಬೇಕು. ಆಗ ರುಚಿ ಚೆನ್ನಾಗಿರುತ್ತದೆ.
* ಹುರಿಯುವಾಗ ತಾಳ್ಮೆಯಿಂದ ಹುರಿಯಬೇಕು, ಬೇಗ ಆಗಲಿ ಎಂದು ತುಂಬಾ ಉರಿ ಹಾಕಿ ಹುರಿಯುವುದರಿಂದ ಸಾಮಗ್ರಿಗಳು ಸೀದು ಹೋಗುತ್ತವೆ ಮತ್ತು ರುಚಿಯೂ ಹಾಳಾಗುತ್ತದೆ.ಪ್ರತಿಯೊಂದನ್ನು ಬೇರೆ-ಬೇರೆಯಾಗಿ ಹದವಾಗಿ ಹುರಿಯಿರಿ.
* ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಉಂಡೆ.
 
 

 

 

No comments:

Popular Posts