Saturday, January 22, 2011

Horse Gram Sprouts Bassaru-ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಪಲ್ಯ:



ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಸೊಪ್ಪಿನ ಪಲ್ಯ:


ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ಮೊಳಕೆ ಹುರುಳಿಕಾಳು - ಒಂದು ಬಟ್ಟಲು
ಹಸಿರು / ಕೆಂಪು ದಂಟಿನಸೊಪ್ಪು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಶಿಣ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಹಸಿಮೆಣಸಿನಕಾಯಿ
ಉಪ್ಪು
ಎಣ್ಣೆ

ತಯಾರಿಸುವವಿಧಾನ:

ಮೊದಲು ಸೊಪ್ಪನ್ನು ಚೆನ್ನಾಗಿ ಬಿಡಿಸಿಕೊಂಡು, ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ನೀರು ಹಾಕಿ, ಅದಕ್ಕೆ ಮೊಳಕೆ ಹುರುಳಿಕಾಳುಗಳನ್ನು ಹಾಕಿ ಚೆನ್ನಾಗಿ ಬೇಯಿಸಿ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಕಾಳು ಬೇಯಲು ಬಿಡಿ.ಹುರುಳೀಕಾಳು ಬೇಯುವುದು ನಿಧಾನ. ಅದಕ್ಕೆ ಅದನ್ನು ಒಂದು ವಿಷ್ಹಲ್ ಬರುವಷ್ಟು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ, ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ಸೊಪ್ಪು ಬೇಯುವವರೆಗೂ ಬೇಯಿಸಿ, ಹುರುಳಿಕಾಳು ಕರಗದಂತೆ ಬೇಯಿಸಿಕೊಳ್ಳಿ. ನಂತರ ಹುರುಳಿಕಾಳು ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು,ಬೇಯಿಸಿದ ಸೊಪ್ಪು-ಕಾಳಿನ ಕಟ್ಟು ಮತ್ತು ಸೊಪ್ಪುಕಾಳನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.

ಸಾರಿಗೆ ರುಬ್ಬಿಕೊಳ್ಳಲು:

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಕಾಳುಮತ್ತು ಸೊಪ್ಪಿನ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.

ಸಾರಿನ ಒಗ್ಗರಣೆಗೆ-

ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಸೊಪ್ಪುಕಾಳಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಹುರುಳಿಕಾಳುಸೊಪ್ಪಿನ ಬಸ್ಸಾರು ತಯಾರು.

ಈಗ ಸೊಪ್ಪಿನ ಪಲ್ಯಕ್ಕೆ:

ಒಗ್ಗರಣೆಗೆ -


ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಅದನ್ನು ಹುರಿದುಕೊಂಡ ನಂತರ ಸೊಪ್ಪುಕಾಳಿನ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಹುರುಳಿಕಾಳುಸೊಪ್ಪಿನ ಪಲ್ಯ ತಯಾರು.

ಈ ಸಾರಿನ ಬಣ್ಣ ಸ್ವಲ್ಪ ಕಂದು ಬಣ್ಣವಿರುತ್ತದೆ.ಹುರುಳಿಕಾಳು ಮತ್ತು ದಂಟು ಎರಡು ಸೇರಿರುವ ಈ ಬಸ್ಸಾರು ಚೆನ್ನಾಗಿರುತ್ತದೆ.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ,ಕುದಿಸಿ,ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
*ಸೊಪ್ಪಿನ ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು,ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
*ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು,ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
*ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
*ಈ ರೀತಿಯ ಬಸ್ಸಾರು, ಪಲ್ಯ ಮತ್ತು ರಾಗಿಮುದ್ದೆ ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ರೋಗಕ್ಕೆ ರಾಮಬಾಣ ರಾಗಿಮುದ್ದೆ.
*ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು,ಏಳೆಂಟು ಗಂಟೆ ನೆನೆಸಿ. ನೀರು ಸೋಸಿ,ಕಾಳುಗಳನ್ನು ಬಟ್ಟೆ ಕಟ್ಟಿಡಿ ಅಥವಾ ಕೊಲಾಂಡರ್ (ಸ್ಟ್ರೈನರ್)ನಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿಡಿ. ಮಾರನೇದಿನ ಸ್ವಲ್ಪ ಮತ್ತು ಮತ್ತೊಂದು ದಿನ ಬಿಟ್ಟರೆ ತುಂಬಾ ಚೆನ್ನಾಗಿ, ಉದ್ದವಾಗಿ ಮೊಳಕೆ ಬಂದಿರುತ್ತವೆ. ಮೊಳಕೆ ಕಾಳುಗಳು ತುಂಬಾ ಒಳ್ಳೆಯದು.
*ಸೊಪ್ಪನ್ನು ಎಷ್ಟು ಬೇಕೋ ಅಷ್ಟು ಹಾಕಿ, ಸೊಪ್ಪು ಎಷ್ಟಾಕಿದರೂ ಬೆಂದ ನಂತರ ಸ್ವಲ್ಪವೇ ಆಗುತ್ತದೆ. ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Wednesday, January 12, 2011

Snakegourd chutney - ಪಡುವಲಕಾಯಿ ತಿರುಳಿನ ಚಟ್ನಿ:

ಕೆಲವು ತರಕಾರಿಗಳ ಕಾಯಿಯ ತಿರುಳನ್ನು ಸಹ ಎಸೆಯದೆ ನಾವು ಅದನ್ನು ಅಡಿಗೆಯಲ್ಲಿ ಉಪಯೋಗಿಸಬಹುದು. ತಿರುಳಿನಲ್ಲು ಸಹ ಒಳ್ಳೆಯ ಅಂಶಗಳಿರುತ್ತವೆ. ಕೆಲವು ತರಕಾರಿಗಳ ಸಿಪ್ಪೆ, ತಿರುಳು ಮತ್ತು ಸೊಪ್ಪು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುತ್ತದೆ.  ಆಗಾಗಿ ಉಪಯೋಗಿಸಬಹುದಾದಂತ ತರಕಾರಿಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಪಡುವಲ ಕಾಯಿಯಲ್ಲಿ ಯಾವುದನ್ನು ಬಿಸಾಡುವಂತಿಲ್ಲ. ಪಡುವಲಕಾಯಿಯನ್ನು ದಿನನಿತ್ಯದ ಅಡಿಗೆಯಲ್ಲಿ ಬಳಸಿದರೆ ಬಿ.ಪಿ ಇರುವವರಿಗೆ ತುಂಬಾ ಉಪಯುಕ್ತವಾಗುತ್ತದೆ. ಅದರಲ್ಲಿ ತಿರುಳಿನಲ್ಲಿ ಚಟ್ನಿ. ಸಿಪ್ಪೆಯಲ್ಲಿ ಸಹ ಮತ್ತು ಒಳಗಿನ ಕಾಯಿಯಿಂದ ಹುಳಿ,ಸಾರು ಮತ್ತು ಪಲ್ಯವನ್ನು ತಯಾರಿಸುತ್ತೇವೆ. ಈಗ ಇಲ್ಲಿ ಪಡುವಲಕಾಯಿಯ ತಿರುಳಿನ ಚಟ್ನಿಯನ್ನು ತಯಾರಿಸೋಣ.

ಪಡುವಲಕಾಯಿ ತಿರುಳಿನ ಚಟ್ನಿ:

ಪಡುವಲಕಾಯಿ ತಿರುಳು
ಸ್ವಲ್ಪ ಕಾಯಿತುರಿ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ
ಉದ್ದಿನಬೇಳೆ - ಒಂದು ಚಮಚ
ಉಪ್ಪು ರುಚಿಗೆ
ಒಗ್ಗರಣೆಗೆ;
ಎಣ್ಣೆ, ಜೀರಿಗೆ,ಸಾಸಿವೆ,ಕರಿಬೇವು

ತಯಾರಿಸುವ ರೀತಿ:

ಉದ್ದಿನಬೇಳೆಯನ್ನು ಸ್ವಲ್ಪ ಹುರಿದುಕೊಂಡು ಅದಕ್ಕೆ ತೆಂಗಿನತುರಿ,ಉಪ್ಪು,ಹುಣಸೇಹಣ್ಣು,ಹಸಿಮೆಣಸಿನಕಾಯಿ ಮತ್ತು ಉದ್ದಿನಕಾಳು ಹಾಕಿ ನುಣ್ಣಗೆ ರುಬ್ಬಿ.
ಒಗ್ಗರಣೆಗೆ ಎಣ್ಣೆ ಹಾಕಿ ಕಾದಬಳಿಕ ಜೀರಿಗೆ, ಸಾಸಿವೆ ಮತ್ತು ಕರಿಬೇವು ಹಾಕಿ, ಒಗ್ಗರಣೆಯನ್ನು ರುಬ್ಬಿದ ಚಟ್ನಿಗೆ ಸೇರಿಸಿ, ಬೆರೆಸಿ. ಇದು ತುಂಬಾ ರುಚಿಯಾಗಿರುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು.

Moongdal Halwa - ಹೆಸರುಬೇಳೆ ಹಲ್ವ:

ಹೆಸರುಬೇಳೆ ಹಲ್ವ:
ಹೆಸರುಬೇಳೆ - ಒಂದು ಕಪ್
ಸಕ್ಕರೆ - ಒಂದು ಕಪ್
ಕೋವಾ - ಕಾಲು ಕಪ್
ತುಪ್ಪ - ಕಾಲು ಕಪ್
ಏಲಕ್ಕಿ ಪುಡಿ ಸ್ವಲ್ಪ
ಗೋಡಂಬಿ ಮತ್ತು ಬಾದಾಮಿ

ತಯಾರಿಸುವ ರೀತಿ:
ಮೊದಲಿಗೆ ಹೆಸರು ಬೇಳೆಯನ್ನು ಸ್ವಲ್ಪ ಅಂದರೆ ಹಸಿ ವಾಸನೆ ಹೋಗುವಂತೆ  ಹುರಿದುಕೊಳ್ಳಿ. ಹುರಿದ ಬೇಳೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.
ಸಕ್ಕರೆ ಮತ್ತು ನೀರನ್ನು ಹಾಕಿ ಒಂದೆಳೆ ಪಾಕವನ್ನು ತಯಾರಿಸಿಕೊಂಡು ಅದಕ್ಕೆ ಹುರಿದಿಟ್ಟುಕೊಂಡಿರುವ ಹೆಸರುಬೇಳೆ ಪುಡಿಯನ್ನು ಹಾಕಿ ಮತ್ತು ಕೋವವನ್ನು ಸೇರಿಸಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಒಂದೆರಡು ಚಮಚ ತುಪ್ಪವನ್ನು ಸೇರಿಸಿ, ತಿರುಗಿಸುತ್ತಿರಿ, ಹಲ್ವ ಹದಕ್ಕೆ ಬಂದ ತಕ್ಷಣ ಇಳಿಸಿ, ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಬೆರೆಸಿ. ರುಚಿಯಾದ ಹೆಸರುಬೇಳೆ ಹಲ್ವ ತಯಾರಾಗುತ್ತದೆ. ಇದು ತಂಪು, ಬೇಸಿಗೆಗಾಲದಲ್ಲಿ ಒಳ್ಳೆಯದು.

Tuesday, January 4, 2011

ಡ್ರೈ ಫ್ರೂಟ್ಸ್ ಉಂಡೆ : Dry Fruits Ball/Unde


ಡ್ರೈ ಫ್ರೂಟ್ಸ್ ಉಂಡೆ :


ಬೇಕಾಗುವ ಸಾಮಗ್ರಿಗಳು:

ಗೋಡಂಬಿ- ಒಂದು ಬಟ್ಟಲು
ಬಾದಾಮಿ - ಒಂದು ಬಟ್ಟಲು
ದ್ರಾಕ್ಷಿ - ಒಂದು ಬಟ್ಟಲು
ಖರ್ಜೂರ - ಒಂದು ಬಟ್ಟಲು
ಒಣ ಕೊಬ್ಬರಿ ತುರಿ - ಒಂದು ಬಟ್ಟಲು
ಗಸಗಸೆ - ಎರಡು ದೊಡ್ಡ ಚಮಚ
ಎಳ್ಳು - ಎರಡು ದೊಡ್ಡ ಚಮಚ
ಬೆಲ್ಲ - ರುಚಿಗೆ ತಕ್ಕಂತೆ
ತುಪ್ಪ - ಸ್ವಲ್ಪ

ತಯಾರಿಸುವ ವಿಧಾನ:

ಗೋಡಂಬಿ,ಬಾದಾಮಿ ಮತ್ತು ಖರ್ಜೂರವನ್ನು ಚೂರು ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿ.
ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು,ಆಮೇಲೆ ದ್ರಾಕ್ಷಿ ಹೀಗೆ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ, ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ. ಒಣಕೊಬ್ಬರಿ ತುರಿ ಸಹ ಹುರಿದು ಬಾದಾಮಿ,ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಎಳ್ಳು ಮತ್ತು ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ ಮತ್ತು ಸೀದಿಸಬೇಡಿ. ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಂಡ ನಂತರ ಬೆಲ್ಲದ ಪಾಕವನ್ನು ತಯಾರಿಸಬೇಕು.

ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ:

ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ ನೋಡಿ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ತುಂಬಾ ಹೊತ್ತು ಸಹ ತಣ್ಣಗಾಗಲು ಬಿಡದಿರಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು ದಿನವಿಡಬಹುದು.
ಬೆಲ್ಲದ ಪಾಕ ತೆಗೆಯುವಾಗ ತುಂಬಾ ಎಚ್ಚರಿಕೆಯಿಂದ ತೆಗೆಯಬೇಕು, ಒಂದೆಳೆ ಪಾಕವನ್ನು ಗಮನಿಸಿ ತೆಗೆಯಬೇಕು, ಪಾಕ ಗಟ್ಟಿಯಾದರೆ ಉಂಡೆ ತಯಾರಿಸಿದ ಮೇಲೆ ಉಂಡೆಗಳು ತುಂಬಾ ಗಟ್ಟಿಯಾಗುತ್ತವೆ. ಪಾಕ ತೆಗೆಯುವಾಗ ಒಂದು ತಟ್ಟೆಗೆ ಸ್ವಲ್ಪ ನೀರು ಹಾಕಿ, ಅದಕ್ಕೆ ಒಂದೆರಡು ಹನಿ ಪಾಕವನ್ನು ಹಾಕಿದಾಗ ಅದು ತೇಲಿ ಬರುತ್ತದೆ. ಆಗ ಪಾಕ ತಯಾರಾಗಿದೆ ಎಂದು ಗೊತ್ತಾಗುತ್ತದೆ. ಪಾಕ ನೀರಿನಲ್ಲಿ ತಕ್ಷಣವೇ ಕರಗಿದರೆ, ಇನ್ನು ಸ್ವಲ್ಪ ಹೊತ್ತು ಬಿಡಿ. ಪಾಕ ಮಾತ್ರ ಹದವಾಗಿ ತೆಗೆಯಿರಿ.


* ಖರ್ಜೂರವನ್ನು ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಕೊಬ್ಬರಿ ಗಿಟುಕಿನಿಂದ ನೀವೇ ತಕ್ಷಣವೇ ತುರಿದ ಕೊಬ್ಬರಿ ತುರಿ ಉಪಯೋಗಿಸಬೇಕು. ಆಗ ರುಚಿ ಚೆನ್ನಾಗಿರುತ್ತದೆ.
* ಹುರಿಯುವಾಗ ತಾಳ್ಮೆಯಿಂದ ಹುರಿಯಬೇಕು, ಬೇಗ ಆಗಲಿ ಎಂದು ತುಂಬಾ ಉರಿ ಹಾಕಿ ಹುರಿಯುವುದರಿಂದ ಸಾಮಗ್ರಿಗಳು ಸೀದು ಹೋಗುತ್ತವೆ ಮತ್ತು ರುಚಿಯೂ ಹಾಳಾಗುತ್ತದೆ.ಪ್ರತಿಯೊಂದನ್ನು ಬೇರೆ-ಬೇರೆಯಾಗಿ ಹದವಾಗಿ ಹುರಿಯಿರಿ.
* ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಉಂಡೆ.
 
 

 

 

Popular Posts