Raagi Halwa / Raagi kilasa - ರಾಗಿ ಹಲ್ವ / ರಾಗಿ ಕೀಲಸ

ರಾಗಿ ಹಲ್ವ / ರಾಗಿ ಕೀಲಸ


ಕೀಲಸ ಎಂಬ ಪದ ನಿಮಗೆಲ್ಲಾ ಅಥವ ಕೆಲವರಿಗೆ ಹೊಸದಾಗಿ ಎನಿಸುತ್ತಿರಬೇಕು ಅಲ್ಲವೇ? ಇದು ನನ್ನ ಅಜ್ಜಿಯ ಕಾಲದಲ್ಲಿ ಬಳಸುತ್ತಿದ್ದ ಪದ. ಈಗಲೂ ಕೆಲವು ಕಡೆ ರೂಢಿಯಲ್ಲಿದೆ. ನನ್ನ ಅಜ್ಜಿಯ ನೆನಪಿಗಾಗಿ ನಾನು ಅದೇ ಪದವನ್ನು ಬಳಸುತ್ತೇನೆ ಯಾವಾಗಲೂ, ನನ್ನ ಮಕ್ಕಳಿಗೂ ಕೂಡ ”ರಾಗಿ ಕೀಲಸ’ ಎಂದೇ ಹೇಳುತ್ತೇನೆ ಹೊರತು ರಾಗಿ ಹಲ್ವ ಅಂತ ಹೇಳಲ್ಲ. ಇಲ್ಲ ಅಂದರೆ ಹಳೆಯ ಕಾಲದ ಕೆಲವು ಅಪರೂಪದ ಪದಗಳು ನಮಗೆ ಗೊತ್ತಿಲ್ಲದೆ ಕಣ್ಮರೆಯಾಗುತ್ತವೆ. ಈಗೆಲ್ಲ ಸುಮಾರು ಪದಗಳು ಹೆಸರಿಲ್ಲದೆ ಕಣ್ಮರೆಯಾಗಿದೆ. ಕೆಲವರಂತೂ ಹಳೆಯ ಕಾಲದ ಸಾಂಪ್ರದಾಯಿಕ ಪದಗಳನ್ನು ಬಳಸಿದರೆ ಅಥವಾ ಹೇಳಿದರೆ ಮರ್ಯಾದೆ ಹೋಗುತ್ತೆ ಅನ್ನೋ ತರಹ ಆಡುತ್ತಾರೆ. ಆ ಪದಗಳನ್ನು ಉಪಯೋಗಿಸಿದರೆ ಎಲ್ಲಿ ಹಳ್ಳಿಗುಗ್ಗು ಅನ್ಕೋತಾರೋ ಅಂತ ಅಂಜುತ್ತಾರೆ. ಹಳೆ ಪದಗಳಲ್ಲಿ ಇರುವ ಸೊಗಡು ಈಗಿನ ಆಧುನಿಕ ಭಾಷೆಯಲ್ಲಿ ಎಲ್ಲಿದೆ ಅಲ್ಲವೇ? ಅದರಲ್ಲಿ ನಮ್ಮ ಹಿರಿಯರ ಭಾವನೆ, ಅದು ಬಳಸುತ್ತಿದ್ದ ರೀತಿ ಎಲ್ಲವೂ ಚೆನ್ನ. ಹಾಯ್, ಬಾಯ್ ಹೇಳುವ ಈ ಕಾಲವೆಲ್ಲಿ, ಆ ಕಾಲವೆಲ್ಲಿ. ಸಧ್ಯ ನಮ್ಮ ಕಾಲದಲ್ಲಿ ಅಷ್ಟಾದರೂ ಇನ್ನು ಹಳೆಯ ಕಂಪು ಇತ್ತಲ್ಲ, ಅದನ್ನು ನಾವು ತಿಳಿದಿದ್ದೇವಲ್ಲ ಅನ್ನುವುದೇ ಹೆಮ್ಮೆಯ ವಿಷಯವಾಗಿದೆ,ಅದಕ್ಕಾಗಿ ಸಂತೋಷ ಪಡಬೇಕು ಅಷ್ಟೇ . ನನಗಂತೂ ಈ ರಾಗಿಯ ಕೀಲಸವೆಂದರೆ ಅಚ್ಚುಮೆಚ್ಚು. ಇದನ್ನು ತಯಾರಿಸಲು ಯಾವಾಗಲೂ ನನ್ನ ಪ್ರೀತಿಯ ಅಜ್ಜಿಗೆ ನಾನು ಸದಾ ಕೇಳುತ್ತಿದ್ದೆ, ಅನ್ನುವುದಕ್ಕಿಂತ ಕೀಲಸ ಮಾಡಿಕೊಡು ಅಂತ ಕಾಟ ಮಾಡುತ್ತಿದ್ದೆ ಅನ್ನುವ ಪದವೇ ಸೂಕ್ತ ಎನಿಸುತ್ತೆ. ಆಗ ಅಜ್ಜಿ ತಯಾರಿಸುತ್ತಿದ್ದ ರೀತೀಯೇ ಬೇರೆ. ಅವರು ಒಳ್ಳೆಯ ಆರಿಸಿದ ರಾಗಿಯನ್ನು ತೊಳೆದು, ಜಾಲಿಸಿ, ನೆನೆಹಾಕಿ, ಅದನ್ನು ಒರಳು ಕಲ್ಲಿನಲ್ಲಿ ರುಬ್ಬುತ್ತಿದ್ದರು, ಅಷ್ಟು ನುಣ್ಣಗೆ ರಾಗಿಯನ್ನು ರುಬ್ಬಿ, ಒಳ್ಳೆಯ ಬಿಳಿ ಮಲ್ ಪಂಚೆಯಲ್ಲಿ ಸೋಸಿ,ಸೋಸಿ ರಾಗಿಹಾಲನ್ನು ತೆಗೆದು, ಅದನ್ನು ಪಾತ್ರೆಗೆ ಹಾಕಿ , ಬೇಯಿಸಿ ತೆಗೆಯುತ್ತಿದ್ದರು. ರುಬ್ಬುವುದು ಮತ್ತು ಸೋಸುವುದು ಎರಡು ಕಷ್ಟದ ಕೆಲಸ. ಆ ರೀತೀ ತಯಾರಿಸಿದ ನಮ್ಮ ಅಜ್ಜಿ ಮಾಡುತ್ತಿದ್ದ ಆ ಕೀಲಸಕ್ಕೂ , ಈಗಿನ ನಮ್ಮ ಕೀಲಸಕ್ಕೂ ತುಂಬಾನೇ ವ್ಯತ್ಯಾಸ. ಒರಳಲ್ಲಿ ರುಬ್ಬಿದರೆ ರುಚಿ ಹೆಚ್ಚು. ನಮಗೆ ಆಗ ಅಷ್ಟು ಕಷ್ಟ ಅಂತ ಗೊತ್ತಾಗುತ್ತಿರಲಿಲ್ಲ. ಕೇಳುತ್ತಿದ್ದೆವು. ಅವರು ಸಹ ಇಲ್ಲ ಅನ್ನದೇ ಮಾಡಿಕೊಡುತ್ತಿದ್ದರು. ಈಗ ನಮ್ಮ ಕಾಲದಲ್ಲಿ ನಾವು ಅಡುಗೆಗಳನ್ನು ಮಾಡುವಾಗ ತಿಳಿಯುತ್ತದೆ. ಆಗ ನಮ್ಮ ಅಜ್ಜಿ ಎಷ್ಟು ಕಷ್ಟಪಟ್ಟು ಮಾಡಿಕೊಡುತ್ತಿದ್ದರು ಅಂತ. ಈಗ ನಾವು ತಯಾರಿಸೋದೆಲ್ಲ ಒಂಥರ ಇನ್ ಸ್ಟಂಟ್ ಆಗಿರಬೇಕು. ಕಷ್ಟ ಆಗಿರಬಾರದು. ಎಷ್ಟು ವ್ಯತ್ಯಾಸ ಅಲ್ಲವೇ? ಈಗ ನಾವುಗಳು ಏನೇ ಮಿಕ್ಸಿ /ಫುಡ್ ಪ್ರೊಸೆಸರ್ / ಬ್ಲೆಂಡರ್ / ಮಿಕ್ಸರ್ / ಬೀಟರ್ ಅಂತ ಯಾವ್ಯಾವುದೋ ಅಂಗಡಿಗೆ ಬಂದಿದ್ದೆಲ್ಲಾ ತಂದು ಉಪಯೋಗಿಸುತ್ತಾ,ಪ್ರದರ್ಶನಕ್ಕೆ ಇಟ್ಟು ಸಮಯ ಉಳಿಸುತ್ತೇವೆ ಅಂತ ಅನ್ಕೊತೀವಿ. ಬೊಜ್ಜು ಕರಗಿಸಲು ಎಷ್ಟು ಸಮಯ ಹಾಳು ಮಾಡುತ್ತೀವಿ ಅಂತ ಯೋಚಿಸೋದೇ ಇಲ್ಲ. ಅವುಗಳಿಗೂ ಅಷ್ಟೇ ಸಮಯ ತಗೊಳ್ಳುತ್ತೆ ಗೊತ್ತಾಗಲ್ಲ ಅಷ್ಟೇ. ಬರೀ ಸ್ವಿಚ್ ಹಾಕಿದರೆ ಎಷ್ಟು ಸುಲಭ ಅನ್ಕೋತೀವಿ, ಆದರೆ ಅದರ ಹಿಂದೆ ಮಾಡಿಕೊಳ್ಳು ಪ್ರಿಪರೇಶನ್ (ತಯಾರಿಕೆ)ಗೆ ಕೊಟ್ಟ ಸಮಯದ ಅರಿವು ಇರೋದಿಲ್ಲ. ಆಗಿನ ಕಾಲದಲ್ಲಿ ಅವರಿಗೆ ಅದೆಲ್ಲಾ ಮನೆಕೆಲಸದ ಜೊತೆ ರುಬ್ಬುವುದು,ಕುಟ್ಟುವುದು, ನಿಗಾವಹಿಸಿ ಅಡುಗೆ ಮಾಡುವುದು, ಇದೇ ಅವರಿಗೆ ವ್ಯಾಯಾಮವಾಗುತ್ತಿತ್ತು. ನಮ್ಮ ಅಜ್ಜಿ ಒಳ್ಳೆಯ ಕೆಂಪನೆಯ ರಾಗಿಯಲ್ಲಿ ,ರುಬ್ಬಿ,ಸೋಸಿ ತಯಾರಿಸುತ್ತಿದ್ದ ರಾಗಿ ಕೀಲಸಕ್ಕೆ ಸಮನಾಗಿ ಅಲ್ಲದಿದ್ದರು, ಈಗಿನ ನಮ್ಮ ಪ್ರಕಾರಕ್ಕೆ ಈ ಹಲ್ವವನ್ನು ನಾನು ತಯಾರಿಸುತ್ತಿರುತ್ತೇನೆ. ಅಜ್ಜಿ ಮಾಡುತ್ತಿದ್ದ ಕೀಲಸದ ಮುಂದೆ ಇದೇನು ಅಲ್ಲ. ಆ ರೀತಿಯ ಒಳ್ಳೆಯ ರುಚಿಯಾದ ಆಹಾರವನ್ನು ನಾವು ತಿಂದು ಬೆಳೆದಿದೀವಲ್ಲಾ ಅನ್ನುವುದೇ ಖುಷಿಯ ಸಂಗತಿ, ಆಗಾಗಿ ಇದನ್ನೆಲ್ಲಾ ಬರೆದಿರುವೆ.
ಇದೇನಪ್ಪಾ ತಯಾರಿಸುವ ರೀತಿಗಿಂತ ಪೀಠಿಕೆಯೇ ದೊಡ್ಡದಾಗಿದೆ ಅನ್ಕೋತೀರಾ!! ಆಶ್ಚರ್ಯವಿಲ್ಲ! ಏಕೆಂದರೆ ಆಗ ಹೇಗೆ ತಯಾರಿಸುತ್ತಿದ್ದರೆಂದು ತಿಳಿಯವುದಕ್ಕೋಸ್ಕರ ಬರೆದಿರುವೆ.ಅಷ್ಟೊಂದು ಕಷ್ಟಪಟ್ಟು ಅಡಿಗೆ ಮಾಡಿಕೊಡುತ್ತಿದ್ದ ನನ್ನ ಅಜ್ಜಿಗೆ ಇದರಿಂದಲಾದರೂ ಒಂದು ಕೃತಘ್ನತೆಯನ್ನು,ಧನ್ಯವಾದವನ್ನು ತಿಳಿಸೋಣ ಅಂತ ಬರೆದಿರುವೆ. ಕೆಲವರಿಗೆ ಕೀಲಸ ಅನ್ನುವ ಪದ ಗೊತ್ತಿರುವುದಿಲ್ಲ ಅದಕ್ಕಾಗಿ ಇಲ್ಲಿ ರಾಗಿ ಹಲ್ವ ಅಂತ ಕೂಡ ತಿಳಿಸಿರುವೆ.

ಬೇಕಾಗುವ ಸಾಮಾಗ್ರಿಗಳು:


ರಾಗಿ -ಒಂದು ಕಪ್
ಹಾಲು - ಒಂದು ಕಪ್
ಸಕ್ಕರೆ ಅಥವಾ ಬೆಲ್ಲ ರುಚಿಗೆ ತಕ್ಕಷ್ಟು
ಒಂದೆರಡು ಚಮಚ ತುಪ್ಪ
ಏಲಕ್ಕಿ ಪುಡಿ
ಗಸಗಸೆ ಮತ್ತು ಕೊಬ್ರಿ (ಬೇಕಾದರೆ - ಅಲಂಕರಿಸಲು)
ಗೋಡಂಬಿ ಸ್ವಲ್ಪ( ಬೇಕಾದರೆ)

ತಯಾರಿಸುವ ವಿಧಾನ:

ರಾಗಿಯನ್ನು ಹಿಂದಿನ ದಿನ ರಾತ್ರಿಯೇ ನೀರಿನಲ್ಲಿ ಚೆನ್ನಾಗಿ ತೊಳೆದು, ನೆನೆಸಿಡಿ, ಮಾರನೇ ದಿನ ಅದನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಸೋಸಿಕೊಂಡು, ಸೋಸಿದಾಗ ಬರುವಂತ ರಾಗಿ ಪುಡಿಗೆ ಮತ್ತೆ ನೀರು ಸೇರಿಸಿ ರುಬ್ಬಿ, ಸೋಸಿಕೊಳ್ಳಿ. ರಾಗಿಯ ಹಾಲು ಬರುವವರೆಗು ಹೀಗೆ ಒಂದೆರಡು ಬಾರಿ ರುಬ್ಬಿ.ಸೋಸಿಕೊಳ್ಳಿ. ರಾಗಿಯ ಹಾಲು ಗಟ್ಟಿಯಾಗಿ ತೆಗೆದುಕೊಂಡ ನಂತರ ಅದರ ತಿರುಳನ್ನು ಬಿಸಾಕಿ, ತೆಗೆದ ಹಾಲಿಗೆ,ಬೆಲ್ಲ ಮತ್ತು ಹಸಿಹಾಲು ಹಾಕಿ ಒಲೆಯ ಮೇಲೆ ದಪ್ಪ ತಳದ ಪಾತ್ರೆಗೆ ಹಾಕಿ ಕುದಿಯಲು ಇಟ್ಟು, ಅದನ್ನು ಕೈ ಬಿಡದೆ ತಿರುಗಿಸುತ್ತಿರಿ,ಕೈಗೆ ಸಿಡಿಯುತ್ತದೆ ಹುಷಾರಾಗಿರಿ,ಸ್ವಲ್ಪ ಉದ್ದವಿರುವ ಸೌಟ್ ತೆಗೆದುಕೊಳ್ಳಿ ತಿರುವಲು. ಇದನ್ನು ಚೆನ್ನಾಗಿ ಬೇಯಿಸಬೇಕು. ನೋಡು ನೋಡುತ್ತಿದ್ದಂತೆ ಬೇಗ ಗಟ್ಟಿಯಾಗುತ್ತದೆ. ಹಾಗೂ ಬೇಗ ತಳ ಹಿಡಿಯುತ್ತದೆ ಸಹ. ಆಗಾಗಿ ಮೊದಲೆ ಒಂದು ತಟ್ಟೆಗೆ ತುಪ್ಪ ಸವರಿಟ್ಟು ಕೊಂಡಿರಿ. ತಿರುವುತ್ತಿರುವಾಗಲೇ ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ, ಈ ಮಿಶ್ರಣವು ಹಲ್ವದ ಹದಕ್ಕೆ ಬಂದ ತಕ್ಷಣ ಜಿಡ್ಡು ಸವರಿದ ತಟ್ಟೆಗೆ ಸುರಿದು,ಮೇಲೆ ಗಸಗಸೆ,ಕೊಬ್ಬರಿತುರಿ ಮತ್ತು ಗೋಡಂಬಿಯಿಂದ ಅಲಂಕರಿಸಿ. ನಿಮಗೆ ಯಾವ ರೀತಿ ಬೇಕೋ ಆ ತರಹ ಕತ್ತರಿಸಿ, ಅಲಂಕರಿಸಿ. ತಿನ್ನಲು ರುಚಿಯಾದ ಮತ್ತು ತಂಪಾದ ರಾಗಿಯ ಹಲ್ವ ತಯಾರ್. ಇದನ್ನು ಸ್ವಲ್ಪ ತಣ್ಣಗಾದ ಮೇಲೆ ತಿನ್ನಬೇಕು. ರಾತ್ರಿ ಕೀಲಸ ತಯಾರಿಸಿಟ್ಟು ಬೆಳಗ್ಗೆ ತಿಂದರೆ ಇನ್ನೂ ಚೆನ್ನಾಗಿರುತ್ತದೆ. ಆರೋಗ್ಯಕರವಾದ,ಪೌಷ್ಠಿಕಾಂಶಗಳಿರುವ ಅನಾರೋಗ್ಯಕ್ಕೆ ರಾಮಬಾಣವಾದ ರಾಗಿಯಲ್ಲಿ ತಯಾರಿಸಿದ ರಾಗಿಯ ಕೀಲಸ ಅಥವ ರಾಗಿಯ ಹಲ್ವ ಸಿದ್ಧವಾಗುತ್ತದೆ.

* ರಾಗಿಯ ಹಿಟ್ಟಿನಲ್ಲೂ ತಯಾರಿಸಬಹುದು, ಆದರೆ ಅದು ರಾಗಿಯನ್ನು ರುಬ್ಬಿ ತಯಾರಿಸಿದಷ್ಟು ರುಚಿಯಿರುವುದಿಲ್ಲ.
* ರಾಗಿಯ ಹಾಲನ್ನು ತೆಗೆದಿಟ್ಟುಕೊಂಡರೆ ನಂತರದ ಕೆಲಸ ಸುಲಭ.
* ಬೆಲ್ಲವನ್ನು ಹಾಕಿದರೆ ಹೆಚ್ಚು ರುಚಿಯಾಗಿರುತ್ತದೆ.
* ಗಸಗಸೆಯನ್ನು ತಿರುವುತ್ತಿರುವಾಗಲೂ ಕೂಡ ಸೇರಿಸಬಹುದು.
* ರೆಫ್ರಿಜರೇಟರ್ ನಲ್ಲಿ ಇಟ್ಟರೆ ಮೂರರಿಂದ ನಾಲ್ಕು ದಿನ ಚೆನ್ನಾಗಿ ಇರುತ್ತದೆ. ಆಚೆ ಕಡೆ ಒಂದು ದಿನ ಮಾತ್ರ ಚೆನ್ನಾಗಿರುತ್ತದೆ.

0 comments:

Popular Posts

 
  • Adige Recipes-ಅಡಿಗೆ ಸವಿರುಚಿ © 2012 | Designed by Designer Link, in collaboration with Web Hosting , Blogger Templates and WP Themes