Sunday, April 27, 2008

Greengram Bassaru-ಹೆಸರುಕಾಳು ತರಕಾರಿ ಬಸ್ಸಾರು ಮತ್ತು ಪಲ್ಯ



ಹೆಸರುಕಾಳು ತರಕಾರಿ ಬಸ್ಸಾರು ಮತ್ತು ಪಲ್ಯ

ಸಾರಿಗೆ ಬೇಕಾಗುವ ಸಾಮಾಗ್ರಿಗಳು:


ಹೆಸರುಕಾಳು -ಎರಡು ಕಪ್
ಹುರುಳಿಕಾಯಿ/ಬೀನ್ಸ್
ಎಲೆಕೋಸು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಕಾಳು -ಐದಾರು
ಅರಿಸಿನದಪುಡಿ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕಾಯಿತುರಿ/ಕೊಬ್ರಿತುರಿ ಸ್ವಲ್ಪ-ಎರಡು ಚಮಚ
ಹುಣಸೆಹಣ್ಣು ಅಥವಾ ಹುಣಸೆರಸ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಎಣ್ಣೆ

ತಯಾರಿಸುವವಿಧಾನ:
ಮೊದಲು ಹುರುಳಿಕಾಯಿ ಮತ್ತು ಎಲೆಕೋಸನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ಹೆಸರುಕಾಳು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಕಾಳನ್ನು ಬೇಯಿಸಿ, ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ತರಕಾರಿ ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ತರಕಾರಿ ಬೇಯುವವರೆಗೂ ಬೇಯಿಸಿ, ಕಾಳು ಕರಗದಂತೆ ಬೇಯಿಸಿಕೊಳ್ಳಿ.ತುಂಬಾ ನುಣ್ಣಗೆ ಬೇಯಿಸಬೇಡಿ, ನಂತರ ಕಾಳು ಮತ್ತು ತರಕಾರಿ ಮಿಶ್ರಣವನ್ನು ಜಾಲರಿಯಲ್ಲಿ (ಕೊಲಾಂಡರ್/ಸ್ಟ್ರೈನರ್) ಸೋಸಿಕೊಂಡು,ಸಾರಿನ ಕಟ್ಟು ಮತ್ತು ತರಕಾರಿ ಕಾಳು ಮಿಶ್ರಣವನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.

ಸಾರಿಗೆ ರುಬ್ಬಿಕೊಳ್ಳಲು:
ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆಎರಡು ಚಮಚ ಬೇಯಿಸಿ ಬಸಿದ ಕಾಳು-ತರಕಾರಿ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.

ಸಾರಿನ ಒಗ್ಗರಣೆಗೆ-
ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಕಾಳುತರಕಾರಿ ಮಿಶ್ರಣದ ಸಾರಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಬಸ್ಸಾರು ತಯಾರು.

ಈಗ ಕಾಳು-ತರಕಾರಿ ಪಲ್ಯಕ್ಕೆ:
ಒಗ್ಗರಣೆಗೆ -
ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಚಿಟಿಕೆ ಉಪ್ಪನ್ನು ಹಾಕಿ. ಅದನ್ನು ಹುರಿದುಕೊಂಡ ನಂತರ ತರಕಾರಿ-ಕಾಳು ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಪಲ್ಯ ತಯಾರು.

* ಹುಣಸೇಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೇರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ, ಕುದಿಸಿ, ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
* ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು, ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
* ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು, ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
* ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
* ಜಾಲರಿ ಎಂದರೆ colander / strainer ಇದನ್ನು ಉಪಯೋಗಿಸಿ ಕಟ್ಟು ಬಸಿದುಕೊಳ್ಳಿ.
* ಬಸ್ಸಾರು ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ಬಸ್ಸಾರುಗಳಿಗೆ ಸಾಮಾನ್ಯವಾಗಿ ರಾಗಿಮುದ್ದೆ ಇದ್ದೇಇರುತ್ತದೆ.

Thursday, April 17, 2008

GreenChillies Paste - ಹಸಿಮೆಣಸಿನಕಾಯಿಕಾರ

ಹಸಿಮೆಣಸಿನಕಾರ ತಯಾರಿಸಲು-

ಸಾಮಗ್ರಿಗಳು:

ಹಸಿಮೆಣಸಿನಕಾಯಿ
ಕೊತ್ತುಂಬರಿಸೊಪ್ಪು
ಉಪ್ಪು
ವಿನಿಗರ್ ಒಂದು ಚಮಚ

ವಿಧಾನ:

ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ವಿನಿಗರ್ ಮತ್ತು ಉಪ್ಪು ರುಬ್ಬಿಕೊಳ್ಳಿ.
ಇದನ್ನು ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಫ್ರಿಡ್ಜ್ ನಲ್ಲಿ ಕೆಲವು ದಿನ ಕೆಡದೆ ಇರುತ್ತದೆ.

Tuesday, April 15, 2008

KempuDantuSoppina Palya - ದಂಟುಸೊಪ್ಪಿನ ಪಲ್ಯ:


ದಂಟುಸೊಪ್ಪಿನ ಪಲ್ಯ:
ಸಾಮಾನುಗಳು:
ದಂಟಿನ ಸೊಪ್ಪು
ಹೆಚ್ಚಿದ ಈರುಳ್ಳಿ
ಜಜ್ಜಿದ ಬೆಳ್ಳುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಕಡ್ಲೆಬೇಳೆ
ಉದ್ದಿನಬೇಳೆ
ಸಾಸಿವೆ
ಜೀರಿಗೆ
ಎಣ್ಣೆ
ಉಪ್ಪು ರುಚಿಗೆ
ಕಾಯಿತುರಿ
ಕೊತ್ತುಂಬರಿಸೊಪ್ಪು

ವಿಧಾನ:
ಸೊಪ್ಪನ್ನು ಚೆನ್ನಾಗಿ ಶುಚಿಗೊಳಿಸಿ, ತೊಳೆದು, ಸಣ್ಣಗೆ ಹೆಚ್ಚಿ ತಯಾರು ಮಾಡಿಟ್ಟುಕೊಳ್ಳಿ.
ಒಗ್ಗರಣೆಗೆ -
ಎಣ್ಣೆಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಜಜ್ಜಿದ ಬೆಳ್ಳುಳ್ಳಿ,ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ,ಚಿಟಿಕೆ ಉಪ್ಪನ್ನು ಹಾಕಿ. ಅದನ್ನು ಹುರಿದುಕೊಂಡ ನಂತರ ಸೊಪ್ಪನ್ನು ಹಾಕಿ,ಚೆನ್ನಾಗಿ ಬೆರೆಸಿ.ಉಪ್ಪು ಸ್ವಲ್ಪ ಹಾಕಿ,ಒಂದೆರಡು ಚಮಚ ನೀರು ಸೇರಿಸಿ,ಮುಚ್ಚಳ ಮುಚ್ಚಿ,ಬೇಯಿಸಿ. ಸೊಪ್ಪಿನಲ್ಲಿರುವ ನೀರಿನ ಅಂಶ ಮತ್ತು ಆವಿಯಲ್ಲಿ ಬರುವ ನೀರಿನಿಂದಲೇ ಸೊಪ್ಪು ಬೇಯುತ್ತದೆ,ಸ್ವಲ್ಪ ಬೇಯಿಸಿದರೆ ಸಾಕು. ಕೆಳಗಿಳಿಸಿ ಕೊತ್ತುಂಬರಿ ಸೊಪ್ಪು ಹಾಗೂ ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ದಂಟಿನಸೊಪ್ಪಿನ ಪಲ್ಯ ತಯಾರು.

*ಸೊಪ್ಪುಗಳು ಬೇಯಲು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ.
*ಅದನ್ನು ತುಂಬಾ ಬೇಯಿಸಬಾರದು, ಆಗ ಎಲ್ಲಾ ಪೌಷ್ಠಿಕಾಂಶಗಳು ಹಾಳಾಗುತ್ತವೆ.
* ಸೊಪ್ಪಿನ ಪಲ್ಯವನ್ನು ಯಾವುದಕ್ಕೆ ಬೇಕಾದರೂ ನೆಂಜಿಕೊಳ್ಳಲು ಕೊಡಬಹುದು.

Monday, April 14, 2008

Jeera Pani - ಜೀರಿಗೆ ಶರಬತ್ತು/ಜೀರಿಗೆ ಪಾನೀಯ

ಜೀರಿಗೆ ಶರಬತ್ತು:

ಜೀರಿಗೆ - ಎರಡು ಚಮಚ
ಒಣಮೆಣಸಿನಕಾಯಿ -ಒಂದೆರಡು
ಪುದೀನ ಸೊಪ್ಪು ಸ್ವಲ್ಪ
ಸಕ್ಕರೆ - ಒಂದು ಚಮಚ
ನಿಂಬೆರಸ - ಒಂದು ಚಮಚ /ರುಚಿಗೆ
ಉಪ್ಪು -ರುಚಿಗೆ

ವಿಧಾನ:

ಜೀರಿಗೆಯನ್ನು ಎಣ್ಣೆ ಹಾಕದೇ ಆಗೇ ಸ್ವಲ್ಪ ಕಂದು ಬಣ್ಣ ಬರುವಂತೆ ಹುರಿದುಕೊಂಡು,ಸ್ವಲ್ಪ ಕುಟ್ಟಿಕೊಳ್ಳಿ. ಒಂದು ಪಾತ್ರೆಗೆ ನೀರು ಹಾಕಿ ಅದರಲ್ಲಿ ಈ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಮೆಣಸಿನಕಾಯಿ, ಪುದೀನ,ಸಕ್ಕರೆ ಮತ್ತು ಉಪ್ಪು ಹಾಕಿ ಬೆರೆಸಿ. ಹತ್ತು / ಹದಿನೈದು ನಿಮಿಷಗಳವರೆಗೆ ಕುದಿಸಿ. ನಿಂಬೆರಸ ಸೇರಿಸಿ ಇಳಿಸಿ. ತಣ್ಣಗಾದ ಮೇಲೆ ಸೋಸಿಟ್ಟರೆ ಜೀರಿಗೆ ಶರಬತ್ತು ತಯಾರಾಗುತ್ತದೆ.
* ಇದನ್ನು ಊಟಕ್ಕೆ ಮುಂಚೆ ಕುಡಿದರೆ ಒಳ್ಳೆಯದು ಅಥವಾ ಊಟ ಮಾಡುವಾಗಲೂ ಸೇವಿಸಬಹುದು.

Sunday, April 13, 2008

ಮೊಸರನ್ನ / Mosaranna/Curd Rice


ಮೊಸರನ್ನ:
ಅನ್ನ - ಒಂದು ಬಟ್ಟಲು
ಮೊಸರು ಬೇಕಾಗುವಷ್ಟು
ಎಣ್ಣೆ, ಸಾಸಿವೆ, ಜೀರಿಗೆ
ಕಡ್ಲೆಬೇಳೆ, ಉದ್ದಿನಬೇಳೆ
ಕರಿಬೇವು, ಇಂಗು
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ
ಹಸಿ ಶುಂಠಿ ತುರಿದಿದ್ದು ಸ್ವಲ್ಪ
ಉಪ್ಪು ರುಚಿಗೆ, ಸ್ವಲ್ಪ ಹಾಲು
ಕೊತ್ತುಂಬರಿಸೊಪ್ಪು
ಬಿಳಿ ದ್ರಾಕ್ಷಿ ಮತ್ತು ದಾಳಿಂಬೆಕಾಳುಗಳು
ಗೋಡಂಬಿ ಹುರಿದಿದ್ದು

ತಯಾರಿಸುವ ವಿಧಾನ:
ಮೊದಲು ಒಂದೆರಡು ಚಮಚ ಎಣ್ಣೆಯನ್ನು ಪ್ಯಾನ್ ನಲ್ಲಿ ಬಿಸಿ ಮಾಡಿ,ಅದಕ್ಕೆ ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಕರಿಬೇವು,ಇಂಗು, ಹಸಿಮೆಣಸಿನಕಾಯಿ,ಒಣಮೆಣಸಿನಕಾಯಿ,ಹಸಿ ಶುಂಠಿ ತುರಿದಿದ್ದು ಸ್ವಲ್ಪ ಹಾಕಿ ಎಲ್ಲವನ್ನು ಒಂದೆರಡು ನಿಮಿಷ ಹುರಿಯಿರಿ.ಇಳಿಸಿ .ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಒಗ್ಗರಣೆಗೆ.
ನಂತರ ತಣ್ಣಗಾಗಿರುವ ಅನ್ನಕ್ಕೆ ಮೊಸರು ಮತ್ತು ಹಾಲು ಹಾಗೂ ಈ ಒಗ್ಗರಣೆಯನ್ನು ಹಾಕಿ ಚೆನ್ನಾಗಿ ಕಲೆಸಿ,ಉಪ್ಪು ನೋಡಿ ಮತ್ತೆ ಹಾಕಿಕೊಂಡು ಬೆರೆಸಿ. ದಾಳಿಂಬೆಕಾಳುಗಳು ಮತ್ತು ದ್ರಾಕ್ಷಿಯನ್ನು ಹಾಕಿ ಬೆರೆಸಿ.ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ.ತುಪ್ಪದಲ್ಲಿ ಕರಿದ ಗೋಡಂಬಿಗಳನ್ನು ಹಾಕಿ.ರುಚಿ ಹೆಚ್ಚುತ್ತದೆ. ರುಚಿಕರವಾದ,ತಂಪಾದ ಮೊಸರನ್ನ ತಿನ್ನಲು ತಯಾರಾಗುತ್ತದೆ.
* ಯಾವಾಗಲೂ ಮೊಸರನ್ನವನ್ನು ಸ್ವಲ್ಪ ತೆಳುವಾಗಿಯೇ ಕಲೆಸಿಡ ಬೇಕು. ಅದು ಸ್ವಲ್ಪ ಹೊತ್ತಿನಲ್ಲಿಯೇ ಗಟ್ಟಿಯಾಗುತ್ತದೆ. ಅದಕ್ಕೆ ಸ್ವಲ್ಪ ಹಾಲು ಕೂಡ ಹಾಕಿರುವುದು. ಹಾಲು ಹಾಕಿದರೆ ಮೊಸರನ್ನ ಬೇಗ ಹುಳಿ ಬರುವುದಿಲ್ಲ.
* ದ್ರಾಕ್ಷಿಗಳು ತುಂಬಾ ದಪ್ಪವಿದ್ದರೆ ಅರ್ಧಕ್ಕೆ ಕತ್ತರಿಸಿ ಹಾಕಿ.
* ಉಪ್ಪು ಮತು ಕಾರ ನಿಮ್ಮ ರುಚಿಗೆ ತಕ್ಕಂತೆ ಹಾಕಿ.

ಪಾಲಕ್ ಸೊಪ್ಪಿನ ಚಪಾತಿ/ಪರೋಟ - Green paratha

ಪಾಲಕ್ ಸೊಪ್ಪಿನ ಪರೋಟ :

ಸಾಮಗ್ರಿಗಳು:

ಗೋಧಿಹಿಟ್ಟು
ಪಾಲಕ್ ಸೊಪ್ಪು
ಹಸಿಮೆಣಸಿನಕಾಯಿ - ಒಂದೆರಡು
ಜೀರಿಗೆ ಸ್ವಲ್ಪ
ಶುಂಠಿ ಸ್ವಲ್ಪ
ಸ್ವಲ್ಪ ಹಾಲು
ಸಕ್ಕರೆ- ಒಂದು ಚಮಚ
ಎಣ್ಣೆ- ಎರಡು ಚಮಚ
ಉಪ್ಪು

ವಿಧಾನ:

ಪಾಲಕ್ ಸೊಪ್ಪನ್ನು ಶುಚಿಗೊಳಿಸಿ,ಚೆನ್ನಾಗಿ ತೊಳೆದು,ಅದರ ಜೊತೆ ಹಸಿಮೆಣಸಿನಕಾಯಿ,ಜೀರಿಗೆ,ಶುಂಠಿ ಸೇರಿಸಿ,ಪೇಸ್ಟ್ ತರಹ ಮಾಡಿಕೊಳ್ಳಿ. ಈ ಮಿಶ್ರಣವನ್ನು ಗೋಧಿಹಿಟ್ಟಿಗೆ ಹಾಕಿ,ಅದರ ಜೊತೆ ಉಪ್ಪು,ಸಕ್ಕರೆ ,ಎಣ್ಣೆ ಹಾಕಿ ಬೆರೆಸಿ,ಅದಕ್ಕೆ ಹಾಲು ಮತ್ತು ಬೇಕಾಗುವಷ್ಟು ಮಾತ್ರ ನೀರನ್ನು ಹಾಕಿಕೊಂಡು ಕಲೆಸಿ. ಅರ್ಧ/ ಒಂದು ಗಂಟೆ ಬಿಟ್ಟು ಚಪಾತಿ ಲಟ್ಟಿಸಿ. ಕಾದ ತವಾ ಮೇಲೆ ಬೇಯಿಸಿ, ಎರಡು ಬದಿಯೂ ಎಣ್ಣೆ ಹಾಕಿ. ಇದು ಎಲ್ಲಾ ತರಹದ ಗೊಜ್ಜು, ಸಾರು,ಚಟ್ನಿ ಮತ್ತು ಪಲ್ಯ ಎಲ್ಲಕ್ಕೂ ಸೇರಿಸಿಕೊಂಡು ತಿನ್ನಲು ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ಹಿತಕರ ಮತ್ತು ಪೌಷ್ಠಿಕವಾಗಿಯೂ ಇರುತ್ತದೆ.

* ನೀರು ನೋಡಿ ಹಾಕಿಕೊಳ್ಳಿ,ಏಕೆಂದರೆ ಪೇಸ್ಟ್,ಹಾಲು ಇರುವುದರಿಂದ. ಸ್ವಲ್ಪ ಮಾತ್ರ ನೀರು ಬೇಕಾಗುತ್ತದೆ ಅಥವಾ ಅಷ್ಟೇ ಸಾಕಾಗಬಹುದು.
* ಮಾಮುಲಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ.

Popular Posts