ಕರಬೂಜ ಹಣ್ಣಿನ ಪಾನಕ/Musk Melon sharabath

ಪಾನಕ ಅಂದ ತಕ್ಷಣ ನೆನಪಿಗೆ ಬರುವುದೇ ನಮ್ಮ ಹಬ್ಬ ’ರಾಮನವಮಿಯ ಪಾನಕ’. ಅವತ್ತಿನ ದಿನ ಮಾಡಿದ ಪಾನಕದ ರುಚಿಯೇ ಒಂಥರ! ರಾಮನವಮಿಗೆ ಪಾನಕ ಕೋಸುಂಬರಿಗಳು ಸರ್ವೇಸಾಮಾನ್ಯ. ನಮ್ಮ ಅಜ್ಜಿ ಮತ್ತು ಅಮ್ಮ ಎಲ್ಲಾ ಮಾಡುತ್ತಿದ್ದಂತ ಪಾನಕ, ಆಗ ನಾವು ಚಿಕ್ಕವರಿದ್ದಾಗ ಅದೇನು ರುಚಿ ಇರುತ್ತಿತ್ತು. ಬಹಳ ಸೊಗಸಾಗಿರುತ್ತಿತ್ತು ಪಾನಕ.ಅವತ್ತಿನ ದಿನವೆಲ್ಲಾ ಪಾನಕವನ್ನು ಕುಡಿಯುವುದೇ ಒಂದು ಕೆಲಸ. ಅವತ್ತು ಮನೆಯೆಲ್ಲಾ ಪಾನಕದ್ದೆ ಸುವಾಸನೆ, ಶುಂಠಿ-ಮೆಣಸಿನ ಪರಿಮಳ ತುಂಬಿರುತ್ತಿತ್ತು.ಅದೇನೋ ನಾವು ಅದೇ ರೀತಿ ಮಾಡಿದರೂ ಆಗಿನ ರುಚಿ ಬರಲ್ಲವೇನೋ? ಆ ಕಾಲದಲ್ಲಿ ಆಹಾರ ಪದಾರ್ಥಗಳು ಸಹ ಚೆನ್ನಾಗಿರುತ್ತಿತ್ತು. ಈಗ ಶುಂಠಿಯನ್ನು ಜಜ್ಜಿದರೂ ಅದರ ವಾಸನೆ ಬರುವುದೇ ಇಲ್ಲ. ಅದರ ಘಾಟು ಕೂಡ ಇರುವುದಿಲ್ಲ. ಹೇಗೋ ಕಾಲಕ್ಕೆ ತಕ್ಕಂತೆ ತಯಾರಿಸಿದರಾಯಿತು. ಪಾನಕ ತಯಾರಿಸುವ ಬಗೆ ತಿಳಿಯೋಣ.
*ಕೆಲವರು ಬೆಲ್ಲದ ಪಾನಕದ ತರಹವೇ ತಯಾರಿಸಿ ಅದಕ್ಕೆ ಕರಬೂಜ ಹಣ್ಣನ್ನು ಕೂಡ ಸೇರಿಸುತ್ತಾರೆ. ಇದು ಸಹ ತುಂಬಾ ರುಚಿಯಾಗಿಯೇ ಇರುತ್ತದೆ. ಇದು ನಮ್ಮ ಮನೆಯಲ್ಲಿ (ಅತ್ತೆ ಮನೆ ಕಡೆ) ಮಾಡುವ ಪಾನಕ. ಕರಬೂಜದ ವಾಸನೆಯೂ ಸೇರಿ ಪಾನಕವೂ ಇನ್ನೂ ಚೆನ್ನಾಗಿರುತ್ತದೆ.

ಕರಬೂಜ ಹಣ್ಣಿನ ಪಾನಕ:

ಸಾಮಗ್ರಿಗಳು:
ಕರಬೂಜ ಹಣ್ಣು
ಬೆಲ್ಲ ರುಚಿಗೆ
ಒಣಶುಂಠಿ - ಒಂದೆರಡು
ಕಾಳು ಮೆಣಸು-ಅರ್ಧ ಚಮಚ
ಚಿಟಿಕೆ ಉಪ್ಪು
ಏಲಕ್ಕಿ ಪುಡಿ ಸ್ವಲ್ಪ
ನೀರು

ವಿಧಾನ:
ಬೆಲ್ಲವನ್ನು ಕುಟ್ಟಿಕೊಂಡು ಪುಡಿ ಮಾಡಿಕೊಳ್ಳಿ. ಒಣಶುಂಠಿಯನ್ನು ಸಹ ಚಚ್ಚಿಕೊಳ್ಳಿ,ಕಾಳು ಮೆಣಸನ್ನು ಸ್ವಲ್ಪ ಸ್ವಲ್ಪ ತರಿಯಾಗಿ,ದಪ್ಪವಾಗಿ ಕುಟ್ಟಿ.
ಪಾತ್ರೆಗೆ ನೀರು ಹಾಕಿ, ಅದಕ್ಕೆ ಕುಟ್ಟಿದ ಎಲ್ಲಾ ಸಾಮಾನುಗಳನ್ನು ಹಾಕಿ,ಚೆನ್ನಾಗಿ ಕೈನಲ್ಲಿಯೇ ಕಿವುಚಿ. ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣನ್ನು ಸಹ ಸೇರಿಸಿ, ಅದನ್ನು ಆಗೆಯೇ ನುಣ್ಣಗಾಗುವಂತೆ ಕೈನಲ್ಲಿಯೇ ಹಿಸುಕಿ. ಬೆಲ್ಲ ಕರಗಿದ ನಂತರ ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿ. ಇದನ್ನು ತಣ್ಣಗೂ /ಆಗೇಯೇ ಸೇವಿಸಬಹುದು.
*ಹಣ್ಣಿನ ತೀರ ಚಿಕ್ಕದಾದ ತುಣುಕುಗಳು ಇರುತ್ತವೆ. ಅದು ಪಾನಕ ಕುಡಿಯುವಾಗ ಸಿಗುತ್ತದೆ. ಹಣ್ಣನ್ನು ಜೊತೆಯಲ್ಲಿ ತಿಂದರೆ ಅದು ಚೆನ್ನಾಗಿರುತ್ತದೆ.

0 comments:

Popular Posts

 
  • Adige Recipes-ಅಡಿಗೆ ಸವಿರುಚಿ © 2012 | Designed by Designer Link, in collaboration with Web Hosting , Blogger Templates and WP Themes