ರಾಗಿ ಮುದ್ದೆ:
ಬೇಕಾಗುವ ಸಾಮಗ್ರಿಗಳು:
ರಾಗಿಹಿಟ್ಟು - ಒಂದು ಬಟ್ಟಲು
ನೀರು - ಎರಡು-ಮೂರು ಬಟ್ಟಲು
ಚಿಟಿಕೆ ಉಪ್ಪು
ತಯಾರಿಸುವ ವಿಧಾನ:
ಮೊದಲು ಸ್ವಲ್ಪ ಆಳ ಮತ್ತು ಅಗಲವಾಗಿರುವ ಪಾತ್ರೆಯಲ್ಲಿ ಅಳತೆ ನೀರನ್ನು ಮತ್ತು ಉಪ್ಪು ಹಾಕಿ ಅದು ಚೆನ್ನಾಗಿ ಕುದಿಯಲು ಬಿಡಿ. ನಂತರ ನಿಧಾನವಾಗಿ ರಾಗಿಹಿಟ್ಟನ್ನು ನೀರಿನ ಮಧ್ಯ ಭಾಗಕ್ಕೆ ಬರುವಂತೆ ಹಾಗೆ ಒಟ್ಟಿಗೆ ಹಾಕಿ, ಹಿಟ್ಟನ್ನು ಮತ್ತೆ ಮುಟ್ಟದೆ ಅದು ಚೆನ್ನಾಗಿ ಹತ್ತರಿಂದ ಹದಿನೈದು ನಿಮಿಷ ಬೇಯಲು ಬಿಟ್ಟು. ಅದು ಬೆಂದಿದೆ ಎನಿಸಿದ ತಕ್ಷಣ ಒಂದು ಸೌಟ್ ಅಥವಾ ಮರದ ಕೋಲಿನಿಂದ ಹಿಟ್ಟಿನ ಮಧ್ಯದಿಂದ ಹಾಗೇ ಒಂದೇಸಾರಿ ಎಲ್ಲಾ ಹಿಟ್ಟನ್ನು ಚೆನ್ನಾಗಿ ಕೈ ಆಡಿಸಿ. ಪೂರ್ತಿ ಹಿಟ್ಟು ಮತ್ತು ನೀರನ್ನು ಸರಿಯಾಗಿ ಬೆರೆಸಿ, ಗಂಟಿಲ್ಲದಂತೆ ಬೆರೆಸಿ. ಸ್ವಲ್ಪ ಗಟ್ಟಿ ಎನಿಸಿದರೆ ಮತ್ತೆ ಸ್ವಲ್ಪ ನೀರು ಹಾಕಿಕೊಂಡು ಬೆರೆಸಿ. ನಂತರ ಬೆರೆಸಿದ ಪೂರ್ತಿ ರಾಗಿಹಿಟ್ಟನ್ನು ತಟ್ಟೆ ಅಥವಾ ಚಾಪಿಂಗ್ ಬೋರ್ಡ್ ಅಥವಾ ಮರದ ಮಣೆ, ಮೇಲೆ ಹಾಕಿಕೊಂಡು, ಸ್ವಲ್ಪ ಲಘುವಾಗಿ ನಾದಿ ನಿಮಗೆ ಎಷ್ಟು ಬೇಕೋ ಅಷ್ಟು ಗಾತ್ರದ ಉಂಡೆಯನ್ನು ತಯಾರಿಸಿಕೊಳ್ಳಿ. ಕೈಗೆ ಸ್ವಲ್ಪ ತುಪ್ಪ ಮತ್ತು ನೀರನ್ನು ಸವರಿಕೊಂಡು ನಾದಿ. ಹೀಗೆ ತಯಾರಿಸಿದಾಗ ರಾಗಿಮುದ್ದೆ ತಯಾರಾಗುತ್ತದೆ. ಈ ರಾಗಿಮುದ್ದೆಯನ್ನು ಸೊಪ್ಪಿನ ಬಸ್ಸಾರು ಅಥವ ಮಸಾಲೆಸಾರು ಅಥವ ನಾನ್ ವೆಜ್ ಸಾರುಗಳೊಂದಿಗೆ ಸರ್ವ್ ಮಾಡಿ. ನಮ್ಮ ಕರ್ನಾಟಕದಲ್ಲಿ ರಾಗಿಮುದ್ದೆ ಬಸ್ಸಾರು ತುಂಬಾ ಪ್ರಸಿಧ್ಧವಾಗಿದೆ.ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವುದು ಮತ್ತು ರೋಗಗಳಿಗೆ ಮದ್ದಾಗಿರುವುದು ಈ ರಾಗಿಮುದ್ದೆ.
*ಕೆಲವರು ಮೊದಲೆ ನೀರಿಗೆ ಸ್ವಲ್ಪವೇ ಅಂದರೆ ಒಂದೆರಡು ಚಮಚ ರಾಗಿಹಿಟ್ಟನ್ನು ಕಲಸಿ,ಒಲೆಯ ಮೇಲೆ ಇಟ್ಟು ಅದನ್ನು ತಿರುಗಿಸುತ್ತಿದ್ದು,ನೀರು ಕುದಿ ಬಂದ ನಂತರ ಉಳಿದ ಎಲ್ಲಾ ಹಿಟ್ಟನ್ನು ಒಮ್ಮೆಲೆ ಹಾಕಿ,ಬೇಯಿಸಿ,ನಂತರ ಬೆರೆಸುತ್ತಾರೆ.ಹಾಗೂ ತಯಾರಿಸಬಹುದು.
No comments:
Post a Comment