Friday, November 30, 2007

Gulab Jamun - ಗುಲಾಬ್ ಜಾಮೂನು

"ಜಾಮೂನು" ಎಂದರೆ ಎಲ್ಲರಿಗೂ ಇಷ್ಟವಾಗುವ ಸಿಹಿ. ಏನೇ ಪಾರ್ಟಿಗಳನ್ನು ಮಾಡುವಾಗ ಏನು ಸ್ವೀಟ್ ಮಾಡೋದು ಅಂತ ಯೋಚಿಸುವಾಗ ಮೊದಲು ತಲೆಗೆ ಹೊಳೆಯುವುದು ಜಾಮೂನು. ಹೀಗೆ ಇದಕ್ಕೆ ಸಿಹಿಗಳಲ್ಲೆ ಮೊದಲ ಸ್ಥಾನ ಎನಿಸುತ್ತೆ. ಜಾಮೂನುಗಳನ್ನು ವಿವಿಧ ರೀತಿಯಾಗಿ ತಯಾರಿಸುತ್ತೇವೆ. ರೆಡಿಮೇಡ್ ಕಂಪನಿಗಳಂತೂ ಸುಮಾರು ಬಂದಿದೆ ಈಗ. ನಾವು ಚಿಕ್ಕವರಿದ್ದಾಗ ಒಂದೆರಡು ಮಾತ್ರ ಹೆಸರಾಂತ ಬ್ರಾಂಡ್ ಮಾತ್ರ ಇತ್ತು. ಆಗ ನಮ್ಮಮ್ಮ ಮಾಡುತ್ತಿದ್ದ ಜಾಮೂನ್ ಈಗಲೂ ನಾನು ಜಾಮೂನು ತಯಾರಿಸುವಾಗಲೆಲ್ಲ ನೆನಪು ಬರುತ್ತದೆ. ಅದೊಂಥರ ಚೆನ್ನ ಆಗ. ಜಾಮೂನು ನೆನೆದ ತಕ್ಷಣ ತಿನ್ನುವ ಆಸೆ, ಕಾಯುತ್ತಿದ್ದೆವು. ಇವರ ಮನೇಲಿ ಜಾಮೂನು ಇವತ್ತು ಅಂತ ಗೊತ್ತಾಗುತ್ತಿತ್ತು ಆಗ. ಅಷ್ಟು ಜಾಮೂನಿನ ಸುವಾಸನೆ ಮನೆಯೆಲ್ಲಾ ಹರಡಿರುತ್ತಿತ್ತು. ಅಮ್ಮ ರಾತ್ರಿ ಜಾಮೂನು ಮಾಡಿಟ್ಟರೆ, ಬೆಳಗ್ಗೆ ಯಾವಾಗಾಗುತ್ತೋ ಅಂತ ಆಸೆ.ಅಮ್ಮ ಬೌಲ್ ನಲ್ಲಿ ಜಾಮೂನುಗಳನ್ನು ಹಾಕಿ ಕೊಟ್ಟಾಗ ಅದನ್ನು ತಿನ್ನುವಾಗಿನ ಖುಷಿನೇ ಒಂದು ತರಹ, ಅದೆಲ್ಲ ಈಗ ಎಲ್ಲ ನೆನಪು ಅಷ್ಟೇ. ಈಗ ಇಲ್ಲಿ ಜಾಮೂನು ಪ್ಯಾಕೆಟ್ ತಂದು ತಯಾರಿಸುವ ಬದಲು ಮನೆಯಲ್ಲಿಯೇ ಜಾಮೂನು ಮಾಡುವ ಬಗೆ ಇದೆ. ನೀವು ತಯಾರಿಸಿ.


ಗುಲಾಬ್ ಜಾಮೂನು:
ಬೇಕಾಗುವ ಸಾಮಗ್ರಿಗಳು:

ಮೈದಾಹಿಟ್ಟು - ಮೂರು ದೊಡ್ಡ ಚಮಚ
ಕೋವಾ - ಒಂದು ಬಟ್ಟಲು
ಮಿಲ್ಕ್ ಪೌಡರ್ - ಎರಡು ದೊಡ್ಡ ಚಮಚ
ಚಿಟಿಕೆ ಅಡಿಗೆ ಸೋಡ

ಸಕ್ಕರೆ ಪಾಕಕ್ಕೆ:
ಸಕ್ಕರೆ - ಐದು ಕಪ್
ಏಲಕ್ಕಿ ಪುಡಿ
ಗುಲಾಬಿ ನೀರು - ಅರ್ಧ ಚಮಚ
ಕೇಸರಿ ದಳಗಳು ಸ್ವಲ್ಪ

ಎಣ್ಣೆ ಅಥವಾ ತುಪ್ಪ ಕರಿಯಲು

ಸಕ್ಕರೆ ಪಾಕ ತಯಾರಿಸುವ ವಿಧಾನ:

ಸಕ್ಕರೆಯನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ, ಎರಡು ಕಪ್ ನೀರು ಹಾಕಿ,ಚೆನ್ನಾಗಿ ಕುದಿಸಿ,ಅದು ಸಕ್ಕರೆ ಕರಗಿ ಎಳೆಪಾಕ ಬರುವವರೆಗೂ ಕುದಿಸಿ ಅಥವಾ ಹತ್ತು ನಿಮಿಷ ಕುದಿಸಿ. ತುಂಬಾ ಗಟ್ಟಿಯಾಗಿರಬಾರದು ಪಾಕ. ಸರಿಯಾಗಿ ನೋಡಿಕೊಂಡು ಪಾಕ ಇಳಿಸಿ. ಏಲಕ್ಕಿಪುಡಿ,ಮಿಕ್ಕಿರುವ ಕೇಸರಿ ಮತ್ತು ಗುಲಾಬಿ ನೀರು ಹಾಕಿ ಪಾಕಕ್ಕೆ ಹಾಕಿ ಬೆರೆಸಿಡಿ.ಸಕ್ಕರೆಪಾಕ ತಯಾರಾಯಿತು,ಇದು ಸ್ವಲ್ಪ ಬಿಸಿಯಾಗಿಯೇ ಇರಲಿ.

• ಮಿಲ್ಕ್ ಪೌಡರ್ ಮತ್ತು ಕೋವಾ ಎರಡನ್ನು ಸೇರಿಸಿ,ಚೆನ್ನಾಗಿ ಮಸೆಯಿರಿ/ ಕೈನಲ್ಲಿ ನಾದಿಕೊಳ್ಳಿ. ಇದಕ್ಕೆ ಮೈದಾಹಿಟ್ಟು,ಚೂರು ಕೇಸರಿ ದಳಗಳು, ಸೋಡಾ ಮತ್ತು ಚಿಟಿಕೆ ಏಲಕ್ಕಿ ಪುಡಿ ಹಾಕಿ. ಚೆನ್ನಾಗಿ ಬೆರೆಸಿ,ಸ್ವಲ್ಪ ನೀರು ಹಾಕಿ ಮೃದುವಾಗಿ ಹಿಟ್ಟಿನಂತೆ ಕಲೆಸಿಕೊಳ್ಳಿ. ಇದನ್ನು ತುಂಬಾ ಗಟ್ಟಿಯಾಗಿ ನಾದಿಕೊಳ್ಳಬೇಡಿ. ಸರಿಯಾಗಿ ಗಂಟಿಲ್ಲದಂತೆ ಕಲೆಸಿ,ಹತ್ತರಿಂದ-ಹದಿನೈದು ನಿಮಿಷ ನೆನೆಯಲು ಬಿಡಿ.
• ನಂತರ ಕಲೆಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಗೋಲಿ ಗಾತ್ರದಲ್ಲಿ ಉಂಡೆ ಮಾಡಿಕೊಂಡು,ಅದನ್ನು ಅಂಗೈನಲ್ಲಿ ಇಟ್ಟುಕೊಂಡು ಮೆತ್ತಗೆ ಅದುಮಿ ಉಂಡೆ ಮಾಡಿಕೊಳ್ಳಿ.


• ಈ ರೀತಿ ಮಾಡಿಕೊಂಡ ಉಂಡೆಗಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ಕರಿಯಿರಿ. ತುಂಬಾ ಎಚ್ಚರಿಕೆಯಿಂದ ಕರಿಯಬೇಕು. ಎಣ್ಣೆ ತುಂಬಾ ಕಾಯಿಸಿದರೆ / ಕಾಯಿಸಿದೇ ಇದ್ದರೆ ಕೂಡ ಜಾಮೂನು ಚೆನ್ನಾಗಿ ಬರುವುದಿಲ್ಲ. ಆದ್ದರಿಂದ ಎಣ್ಣೆಯನ್ನು ಕಾಯಿಸಿ, ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಇಟ್ಟು ಅದರಲ್ಲಿ ಉಂಡೆಗಳನ್ನು ಅದರಲ್ಲಿ ಹಾಕಿ,ತೆಳು ಕಂದು ಬಣ್ಣ ಅಥವಾ ಹೊಂಬಣ್ಣ ಬರುವವರೆಗೂ ಕರಿಯಿರಿ.
• ತಕ್ಷಣವೇ ಕರಿದಿರುವ ಜಾಮೂನುಗಳನ್ನು ಮೊದಲೇ ತಯಾರಿಸಿ ಇಟ್ಟುಕೊಂಡಿರುವ ಬಿಸಿ ಸಕ್ಕರೆ ಪಾಕದಲ್ಲಿ ಹಾಕಿಡಿ. ಅದನ್ನು ಕಲಕಬೇಡಿ. ಸುಮಾರು ಒಂದು ಗಂಟೆಯಾದರೂ ನೆನೆಯಲು ಬಿಡಿ. ಅಥವಾ ರಾತ್ರಿ ಮಾಡಿಟ್ಟು ಮಾರನೇದಿನ ಉಪಯೋಗಿಸಿದರೆ ಇನ್ನೂ ಚೆನ್ನಾಗಿರುತ್ತದೆ.

* ಮಕ್ಕಳಿಂದ-ಮುದುಕರವರೆಗೆ ಇಷ್ಟವಾಗುವ ಜಾಮೂನು ತಯಾರಾಗುತ್ತದೆ.
• ಜಾಮೂನುಗಳನ್ನು ಸಕ್ಕರೆ ಪಾಕ ಸ್ವಲ್ಪ ಹಾಕಿ ತಿನ್ನಲು ನೀಡಿ,ಈ ಜಾಮೂನು ಅನ್ನು ಬಿಸಿ ಅಥವ ತಣ್ಣಗೆ ಕೂಡ ಸೇವಿಸಬಹುದು.
• ಇನ್ನೂ ಹೆಚ್ಚಿನ ರುಚಿ ಬೇಕೆನಿಸಿದವರೂ ಜಾಮೂನು ಜೊತೆ ಐಸ್ ಕ್ರೀಮ್ ಅಥವಾ ರೆಡಿಮೇಡ್ ಕ್ರೀಮ್ ಸಹ ಹಾಕಿ ಕೊಡಬಹುದು.

Wednesday, November 21, 2007

ಚಕ್ಕುಲಿ / Chakkuli / Chakli

ಚಕ್ಕುಲಿ:

ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು- ಎರಡು ಬಟ್ಟಲು
ಕಡ್ಲೆಹಿಟ್ಟು - ಅರ್ಧ ಬಟ್ಟಲು
ಅಚ್ಚಕಾರದ ಪುಡಿ - ಎರಡು ಚಮಚ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆ
ಎಳ್ಳು ಸ್ವಲ್ಪ
ಉಪ್ಪು ರುಚಿಗೆ
ಬೆಣ್ಣೆ - ಎರಡು ದೊಡ್ಡ ಚಮಚ
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

ಅಕ್ಕಿಹಿಟ್ಟು,ಕಡ್ಲೆಹಿಟ್ಟು,ಕಾರದಪುಡಿ,ಜೀರಿಗೆ,ಎಳ್ಳು,ಇಂಗು,ಉಪ್ಪು ಎಲ್ಲಾ ಚೆನ್ನಾಗಿ ಬೆರೆಸಿ, ಅದಕ್ಕೆ ಬೆಣ್ಣೆಯನ್ನು ಮತ್ತು ನೀರನ್ನು ಹಾಕಿ ಕಲೆಸಿ, ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಿರಲಿ. ಚೆನ್ನಾಗಿ ನಾದಿ, ಹದವಾಗಿ ಕಲೆಸಿ.


ಚಕ್ಕುಲಿಯ ಒರಳಿಗೆ ಹಿಟ್ಟನ್ನು ತುಂಬಿ ಚಕ್ಕುಲಿಯನ್ನು ತಯಾರಿಸಿ.

ಕಾದ ಎಣ್ಣೆಗೆ ಒಂದೊಂದಾಗಿ ಹಾಕಿ, ಅದಾಗೆ ಮೇಲೆ ಬರುತ್ತದೆ. ಮಧ್ಯ ಉರಿಯಲ್ಲಿಡಿ, ಎಣ್ಣೆ ಚೆನ್ನಾಗಿ ಕಾದಿರಬೇಕು. ನಂತರ ತಿರುವಿ ಹಾಕಿ, ಬಂಗಾರದ ಅಥವಾ ಚಕ್ಕುಲಿಯ ಬಣ್ಣ ಬಂದ ತಕ್ಷಣ ತೆಗೆಯಿರಿ.


ತಣ್ಣಗಾಗಲು ಬಿಟ್ಟು , ಆಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿ, ಯಾವ ಕಾಲದಲ್ಲಿಯಾದರೂ ಚಕ್ಕುಲಿ ರುಚಿ ಚೆನ್ನ. ಸಂಜೆ ಕಾಫಿಗೆ/ಕುರುಕು ತಿನ್ನಲು/ಅಥಿತಿಗಳು ಬಂದಾಗ ಉಪಯೋಗಿಸಬಹುದು.

Tuesday, November 20, 2007

Bread Custard Pudding -ಬ್ರೆಡ್ ಕಸ್ಟರ್ಡ್ ಪುಡ್ಡಿಂಗ್:


ಬ್ರೆಡ್ ಕಸ್ಟರ್ಡ್ ಪುಡ್ಡಿಂಗ್:

ಸಾಮಗ್ರಿಗಳು:
ಬ್ರೆಡ್ - 5-6
ಸಕ್ಕರೆ ರುಚಿಗೆ - ಕಾಲು ಕಪ್
ಕಸ್ಟರ್ಡ್ ಪೌಡರ್ - ಎರಡು ದೊಡ್ಡ ಚಮಚ
ಹಾಲು ಅಗತ್ಯವಿದ್ದಷ್ಟು- ಅರ್ಧ ಲೀಟರ್
ಏಲಕ್ಕಿ ಪುಡಿ
ತುಪ್ಪ ಕರಿಯಲು
ಗುಲಾಬಿ ನೀರು (ರೋಸ್ ವಾಟರ್)
ದ್ರಾಕ್ಷಿ ಮತ್ತು ಗೋಡಂಬಿ

ತಯಾರಿಸುವ ವಿಧಾನ:


ಮೊದಲು ಬ್ರೆಡ್ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು, ತುಪ್ಪದಲ್ಲಿ ಹೊಂಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವಂತೆ ಕರಿದಿಟ್ಟುಕೊಳ್ಳಿ.
ನಂತರ ಹಾಲನ್ನು ಕಾಯಲು ಇಟ್ಟು,ಅದು ಕುದಿಯುವ ಹಂತಕ್ಕೆ ಬಂದಾಗ ಸಕ್ಕರೆಯನ್ನು ಹಾಕಿ ಬೆರೆಸಿ. ಆಮೇಲೆ ಕಸ್ಟರ್ಡ್ ಪೌಡರ್ ಅನ್ನು ಸ್ವಲ್ಪ ಹಾಲಿನಲ್ಲಿ ಗಂಟಿಲ್ಲದಂತೆ ಕಲೆಸಿ,ಈ ಮಿಶ್ರಣವನ್ನು ಕುದಿಯುತ್ತಿರುವ ಹಾಲಿಗೆ ಹಾಕಿ,ಕೈ ಬಿಡದೇ ತಿರುಗಿಸುತ್ತಿರಿ,ತಳ ಹತ್ತುತ್ತದೆ. ಆಗಾಗಿ ಸರಿಯಾಗಿ ಎಲ್ಲಾ ಮಿಶ್ರಣವೂ ಚೆನ್ನಾಗಿ ಬೆರೆಯುವಂತೆ ಎರಡು ಅಥವಾ ಮೂರು ನಿಮಿಷಗಳವರೆಗೆ / ಸ್ವಲ್ಪ ಗಟ್ಟಿಯಾಗುವವರೆಗೆ ತಿರುಗಿಸುತ್ತಲೇ ಇರಬೇಕು. ಅದು ಸರಿಯಾಗಿದೆ ಎನಿಸಿದ ತಕ್ಷಣ ಕೆಳಗಿಳಿಸಿ,ಅದಕ್ಕೆ ಏಲಕ್ಕಿ ಪುಡಿ ಮತ್ತು ಗುಲಾಬಿನೀರು ಹಾಕಿ ಬೆರೆಸಿ.
ಕರಿದಿರುವ ಬ್ರೆಡ್ ಅನ್ನು ಅಗಲವಾದ ತಟ್ಟೆ / ಪಾತ್ರೆಗೆ ಜೋಡಿಸಿ, ಅದರ ಮೇಲೆ ಹಾಲು ಮತ್ತು ಕಸ್ಟರ್ಡ್ ಮಿಶ್ರಣವನ್ನು ಸುರಿಯಿರಿ, ಎಲ್ಲಾ ಬ್ರೆಡ್ ಮೇಲೆ ಸಮನಾಗಿ ಬರುವಂತೆ ಹಾಕಿ, ಅದರ ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಅಲಂಕರಿಸಿ,ಅರ್ಧ/ಒಂದು ಗಂಟೆ ಬಿಟ್ಟು ತಿನ್ನಲು ಕೊಡಿ. ಅಷ್ಟರಲ್ಲಿ ಅದು ಚೆನ್ನಾಗಿ ನೆಂದಿರುತ್ತದೆ. ಬಿಸಿಯಾಗಿಯೂ ಕೊಡಬಹುದು. ಆದರೆ ಇನ್ನೂ ಬ್ರೆಡ್ ನೆಂದಿರುವುದಿಲ್ಲ. ನೆನೆದರೆ ತುಂಬಾ ರುಚಿಯಾಗಿರುತ್ತದೆ. ಈ ಪುಡ್ಡಿಂಗ್ ಮಕ್ಕಳಿಗೆ ತುಂಬ ಪ್ರಿಯವಾಗುತ್ತದೆ. ಸದ್ದಿಲ್ಲದೇ ಇಷ್ಟಪಟ್ಟು ತಿನ್ನುತ್ತಾರೆ.
* ತುಪ್ಪ ತುಂಬಾ ಜಾಸ್ತಿಯಾಯ್ತು ಎನ್ನುವವರು, ಎಣ್ಣೆಯಲ್ಲಿ ಬ್ರೆಡ್ ಕರಿಯಬಹುದು.
* ಅದು ಹೆವಿ ಅಂದರೆ ತುಪ್ಪದಲ್ಲಿ ತವಾ ಮೇಲೆ ಫ್ರೈ ಮಾಡಿಕೊಳ್ಳಬಹುದು. ಆದರೆ ಇದು ಸ್ವಲ್ಪ ರುಚಿ ಕಮ್ಮಿಯಾಗುತ್ತದೆ. ಅಷ್ಟೇನು ಚೆನ್ನಾಗಿ ಬರಲ್ಲ.ok,ಪರವಾಗಿಲ್ಲ.

Fenugreek dosa/ Menthe dose-ಮೆಂತ್ಯದ ದೋಸೆ


ಮೆಂತ್ಯದ ದೋಸೆ:

ಸಾಮಗ್ರಿಗಳು:
ಅಕ್ಕಿ - ಒಂದು ಕಪ್
ಮೆಂತ್ಯ - ಎರಡು ದೊಡ್ಡ ಚಮಚ
ಚಿಟಿಕೆ ಉಪ್ಪು
ಚಿಟಿಕೆ ಸೋಡ

ವಿಧಾನ;
ಅಕ್ಕಿ ಮತ್ತು ಮೆಂತ್ಯೆಯನ್ನು ಮೂರ್ನಾಲ್ಕು ಗಂಟೆ ನೆನೆಸಿ, ಅದನ್ನು ಮೆಂತ್ಯದೊಂದಿಗೆ ರುಬ್ಬಿಕೊಳ್ಳಿ. ಉಪ್ಪು ಮತ್ತು ಸೋಡ ಸೇರಿಸಿ, ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು, ಕಾಯಿಸಿ, ತುಪ್ಪ / ಎಣ್ಣೆ ಹಾಕಿ ಸವರಿ, ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ, ಬೇಯಿಸಿ , ತೆಗೆಯಿರಿ. ತುಪ್ಪ ಹಾಕಿ ತಿನ್ನಲು ಕೊಡಿ. ಇದು ತಿನ್ನಲು ರುಚಿಯಾಗಿರುತ್ತದೆ. ಮೆಂತ್ಯದ ಪರಿಮಳ ತುಂಬಾ ಚೆನ್ನಾಗಿರುತ್ತದೆ. ಇದಕ್ಕೆ ತೆಂಗಿನಕಾಯಿ ಅಥವ ಯಾವ ಚಟ್ನಿಯ ಜೊತೆಗಾದರು ತಿನ್ನಲು ನೀಡಬಹುದು.
* ಇದು ಸಕ್ಕರೆ ಖಾಯಿಲೆಯವರಿಗೆ ತುಂಬಾ ಉಪಯುಕ್ತ.
* ಮೆಂತ್ಯೆಯನ್ನು ಇನ್ನು ಜಾಸ್ತಿ ಸೇರಿಸಿಕೊಳ್ಳಬಹುದು.

Saturday, November 17, 2007

Tamarind Chitranna - ಹುಳಿ ಚಿತ್ರಾನ್ನ

ಹುಳಿ ಚಿತ್ರಾನ್ನ ತಯಾರಿಸಿದಂತೆ ತಯಾರಿಸಿ,ಹುರಿದು ಪುಡಿ ಮಾಡಿದ ಮಸಾಲೆ ಹಾಕಿ ತಯಾರಿಸುವುದು-ಈ ಚಿತ್ರಾನ್ನ. ಇದು ಎಲ್ಲಾ ಚಿತ್ರಾನ್ನಗಳಿಗಿಂತ ತುಂಬಾ ರುಚಿಯಾಗಿರುತ್ತದೆ. ಸ್ವಲ್ಪ ಜಾಸ್ತಿ ತಿಂದರೂ ಗೊತ್ತಾಗಲ್ಲ. ನನ್ನ ಅಜ್ಜಿ ತುಂಬಾ ಚೆನ್ನಾಗಿ ಮಾಡುತ್ತಿದ್ದರು ಇದನ್ನು.ಅಮ್ಮ ಸಹ. ಆಗಿನ ಕಾಲದ ರುಚಿಗಳು ಈಗ ಇಲ್ಲ.ಅವರು ಕಡ್ಲೆಕಾಯಿಬೀಜದ ಬದಲಿಗೆ ಕಡ್ಲೆಕಾಳು ಹಾಕುತ್ತಿದ್ದರು.ತಿನ್ನುವಾಗ ಕಡ್ಲೆಕಾಳು ಸಿಕ್ಕಿದಾಗ ಅದೊಂಥರ ತುಂಬಾ ರುಚಿಯಾಗಿರುತ್ತಿತ್ತು. ಅಜ್ಜಿ ಮತ್ತು ಅಮ್ಮನ ನೆನಪಿನೊಂದಿಗೆ ಈ ರೆಸಿಪಿ ಬರೆದಿರುವೆ.
ಮಸಾಲೆ ಹುಳಿ ಚಿತ್ರಾನ್ನ:

ಬೇಕಾಗುವ ಸಾಮಗ್ರಿಗಳು;
ಅನ್ನ- ಎರಡು ಬಟ್ಟಲು,
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್)-ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ಹುರಿದು ಪುಡಿ ಮಾಡಿಕೊಳ್ಳಲು ಪದಾರ್ಥಗಳು:

ಜೀರಿಗೆ - ಎರಡು ಚಮಚ
ಮೆಂತ್ಯ- ಅರ್ಧ ಚಮಚ
ಸಾಸಿವೆ- ಒಂದು ಚಮಚ
ಎಳ್ಳು- ಎರಡು ಚಮಚ

ಇದಿಷ್ಟನ್ನು ಎಣ್ಣೆ ಹಾಕದೆ ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ. ಎಳ್ಳನ್ನು ತರಿತರಿಯಾಗಿ ಪುಡಿ ಮಾಡಿ.

ತಯಾರಿಸುವ ವಿಧಾನ:ಉದುರು ಉದುರಾಗಿ ಮಾಡಿಕೊಂಡಿರುವ ಅನ್ನವನ್ನು ಅಗಲವಾದ ಪಾತ್ರೆಗೆ ಹಾಕಿ,ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು , ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ, ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಪದಾರ್ಥಗಳನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ. ಇದನ್ನು ತಯಾರಿಸದ ತಕ್ಷಣವೇ ತಿನ್ನುವುದಕ್ಕಿಂತ ಸ್ವಲ್ಪ ಸಮಯದ ನಂತರ ತಿಂದರೆ ಒಂದು ರೀತಿ ರುಚಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ಮಸಾಲೆ ಹುಳಿ ಚಿತ್ರಾನ್ನ ತಯಾರಾಗುತ್ತದೆ.

Friday, November 16, 2007

Maddur Vada / ಮದ್ದೂರು ವಡೆ

ಮದ್ದೂರು ವಡೆ:

"ಮದ್ದೂರು" ಬೆಂಗಳೂರು ಮತ್ತು ಮೈಸೂರು ಮಧ್ಯೆ ಬರುವಂತ ಒಂದು ಊರಿನ ಹೆಸರು. ಈ ಊರಿನಲ್ಲಿ ತಯಾರಿಸಿದಂತ ವಡೆ ಇದು. ಅದಕ್ಕೆ ಒಂದು ಪುಟ್ಟ ಕಥೆ ಇದೆ. ಅಂದು ವಿಧಿಯಿಲ್ಲದೇ ತಯಾರಿಸಿದಂತ ವಡೆಗೆ ಬಹಳ ಬೇಡಿಕೆ ಬಂತು ,ಆಗಾಗಿ ಅವತ್ತಿನಿಂದ ಇದು ಒಂದು ಹೋಟೆಲ್ ಮೆನುನಲ್ಲಿ ಸೇರಿಕೊಂಡಿತು. ಅದು ದಿನಕಳೆದಂತೆ ಈ ವಡೆ ಪ್ರಸ್ಧಿದ್ಧಿಯಾಯಿತೆಂತು ಹೀಗೆ ಎಲ್ಲೋ ಓದಿದ ನೆನಪು. ಕೊನೆಗೆ ಆ ವಡೆಗೆ ಮದ್ದೂರು ವಡೆ ಅಂತನೆ ನಾಮಕರಣವಾಗಿ, ಅದು ನಮ್ಮ ಕರ್ನಾಟಕದ ಎಲ್ಲರ ಮನೆ ಮಾತಾಯಿತು. ಮದ್ದೂರು ಊರನ್ನು ಹಾದು ಹೋಗುವಾಗ ಅಲ್ಲಿಯ ಮದ್ದೂರು ವಡೆಯ ಸವಿಯನ್ನು ಸಾಮಾನ್ಯವಾಗಿ ಎಲ್ಲರು ನೋಡಿರುತ್ತಾರೆ. ಅದಂತೂ ಈಗ ಸುಮಾರು ವರುಷಗಳಿಂದ ಎಲ್ಲಾ ಊರಿನ ಹೋಟೆಲ್ ಮತ್ತು ಮನೆಗಳಲ್ಲೂ ತಯಾರಿಸುವಂತ ವಡೆಯಾಗಿಬಿಟ್ಟಿದೆ. ಈ ಇತಿಹಾಸ ಇರುವ ಮದ್ದೂರು ವಡೆಯನ್ನು ನಮಗೆ ಬಂದ ರೀತಿಯಲ್ಲಿ ತಯಾರಿಸೋಣ.

ಬೇಕಾಗುವ ಸಾಮಗ್ರಿಗಳು:

ಒಂದು ಬಟ್ಟಲು ಅಕ್ಕಿಹಿಟ್ಟು
ಕಾಲು ಬಟ್ಟಲು ಚಿರೋಟಿ ರವೆ
ಕಾಲು ಬಟ್ಟಲು ಮೈದಾಹಿಟ್ಟು
ಎರಡು ಚಮಚ ಕಾಯಿಸಿದ ಎಣ್ಣೆ
ಸಣ್ಣಗೆ ಹೆಚ್ಚಿದ ಈರುಳ್ಳಿ
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ
ಕೊತ್ತುಂಬರಿಸೊಪ್ಪು
ಕರಿಬೇವು
ಉಪ್ಪು
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

ಮೊದಲಿಗೆ ಅಕ್ಕಿಹಿಟ್ಟು,ಮೈದಾಹಿಟ್ಟು,ರವೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ,ಈರುಳ್ಳಿ,ಹಸಿಮೆಣಸಿನಕಾಯಿ,ಕಾಯಿಸಿರುವ ಎಣ್ಣೆ,ಹೆಚ್ಚಿದ ಕೊತ್ತುಂಬರಿ ಮತ್ತು ಕರಿಬೇವಿನ ಸೊಪ್ಪುಗಳನ್ನು ಹಾಕಿ, ಸ್ವಲ್ಪ ನೀರು ನೋಡಿ ಹಾಕಿಕೊಂಡು ಗಟ್ಟಿಯಾಗಿ ಕಲೆಸಿಕೊಂಡು ಚಿಕ್ಕ, ಚಿಕ್ಕ ಉಂಡೆ ಮಾಡಿ,ಎಣ್ಣೆ ಸವರಿದ ಕವರ್ ಮೇಲೆ ಪುಟ್ಟ ಪೂರಿಯಂತೆ ತಟ್ಟಿ, ಕಾದಿರುವ ಎಣ್ಣೆಯಲ್ಲಿ ಹಾಕಿ,ಎರಡು ಕಡೆಯು ಬೇಯಿಸಿ,ಹೊಂಬಣ್ಣ ಬರುವವರೆಗೆ ಅಥವಾ ಬೆಂದಿದೆ ಎನಿಸಿದ ನಂತರ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ಇದು ಬಿಸಿಯಾಗಿಯೂ ತಿನ್ನಲು ಚೆನ್ನಾಗಿರುತ್ತದೆ. ತಣ್ಣಗಾದರೂ ಚೆನ್ನ. ಈ ವಡೆಯನ್ನು ಹಾಗೆಯೇ ತಿನ್ನಬಹುದು. ಆದರೂ ಕಾಯಿಚಟ್ನಿಯೊಂದಿಗೆ ತುಂಬಾನೇ ರುಚಿಯಾಗಿರುತ್ತದೆ.

* ಮದ್ದೂರುವಡೆಯನ್ನು ಸ್ವಲ್ಪ ದಪ್ಪ ತಟ್ಟಿಕೊಂಡು ಸಹ ತಯಾರಿಸಿ. ಉಪ್ಪು ಮತ್ತು ಕಾರ ನಿಮಗೆ ಸೇರಿದ್ದು.
* ಕೆಲವರು ತೆಳುವಾಗಿ ತಯಾರಿಸುತ್ತಾರೆ. ದಪ್ಪ,ತೆಳು,ದೊಡ್ಡದು,ಚಿಕ್ಕದು ಎಲ್ಲಾ ನಿಮಗೆ ಹೇಗೇ ಬೇಕೋ ಆಗೆ ತಯಾರಿಸಿಕೊಳ್ಳಬಹುದು. ಆದರೆ ಹೇಗೇ ತಯಾರಿಸಿದರೂ ಕಲೆಸುವ ಹದ ಮತ್ತು ಎಣ್ಣೆಯಲ್ಲಿ ಕರಿಯುವ ಹದ ತಿಳಿದುಕೊಂಡರೆ ವಡೆಗಳು ಚೆನ್ನಾಗಿ ಬರುತ್ತವೆ.
* ಈರುಳ್ಳಿಯನ್ನು ಹೆಚ್ಚಾಗಿ ಹಾಕಿ.ನೀರನ್ನು ನೋಡಿಕೊಂಡು ಹಾಕಿ,ಏಕೆಂದರೆ ಈರುಳ್ಳಿಯು ನೀರು ಬಿಡುತ್ತದೆ. ಒಂದೊಂದು ಸಾರಿ ಅದೇ ಸಾಕಾಗುತ್ತದೆ.
ರುಚಿಕರವಾದ ಮದ್ದೂರುವಡೆಯನ್ನು ತಯಾರಿಸುವಾಗ ಡಯಟಿಂಗ್ ಮಾಡಬೇಡಿ. ಈ ವಡೆಗಳು ಮೂರ್ನಾಲ್ಕು ದಿನಗಳು ಕೆಡದೆ ಚೆನ್ನಾಗಿ ಇರುತ್ತದೆ.ಈ ವಡೆಗಳು ಹೇಗೆ ತಯಾರಿಸಿದರು ರುಚಿ ಚೆನ್ನಾಗಿಯೇ ಇರುತ್ತವೆ.

Sunday, November 11, 2007

Shankara Poli / ಖಾರದ ಶಂಕರ ಪೋಳಿ

ಖಾರದ ಶಂಕರ ಪೋಳಿ:

ಸಾಮಗ್ರಿಗಳು:

ಮೈದಾಹಿಟ್ಟು - ಒಂದು ಬಟ್ಟಲು
ಅಚ್ಚಖಾರದ ಪುಡಿ ರುಚಿಗೆ /ಒಂದು ಟೀ ಚಮಚ
ಉಪ್ಪು ರುಚಿಗೆ

ವಿಧಾನ:

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಹದಿನೈದು ನಿಮಿಷ ಮುಚ್ಚಿಡಿ. ನಂತರ ಹಿಟ್ಟಿನಿಂದ ಕಿತ್ತಳೆಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಚಪಾತಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಆಮೇಲೆ ಅದನ್ನು ಚಾಕು ಅಥವಾ ಕಟ್ಟರ್ ನಿಂದ ಡೈಮಂಡ್ ಆಕಾರಕ್ಕೆ ಕತ್ತರಿಸಿ. ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ತೆಗೆದು ಹಾಕಿ. ಬಾಣಲೆಗೆ ಎಷ್ಟು ಹಿಡಿಸುತ್ತದೋ ಅಷ್ಟು ಹಾಕಿ, ಅವೆಲ್ಲವೂ ಚೆನ್ನಾಗಿ ಬೆಂದು ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ತೆಳು ಕಂದು ಬಣ್ಣ ಬಂದ ನಂತರ ಬೇಗ ಎಲ್ಲವನ್ನು ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ. ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ.

Wednesday, November 7, 2007

Cucumber Lassi-ಸೌತೆಕಾಯಿ ಲಸ್ಸಿ:

ಸೌತೆಕಾಯಿ ಲಸ್ಸಿ:

ಸಾಮಗ್ರಿಗಳು;
ಸೌತೆಕಾಯಿ
ಕಾಳುಮೆಣಸಿನಪುಡಿ
ಉಪ್ಪು
ಕೊತ್ತುಂಬರಿಸೊಪ್ಪು
ನಿಂಬೆರಸ
ಮೊಸರು

ವಿಧಾನ:

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ರುಬ್ಬಿದರೆ ಸೌತೆಕಾಯಿ ಲಸ್ಸಿ ರೆಡಿಯಾಗುತ್ತದೆ.
*ಬ್ಲೆಂಡರ್ ನಲ್ಲಿ ಬ್ಲೆಂಡ್ ಮಾಡಿದರೂ ಸಾಕು.

Friday, November 2, 2007

Massoppu Saaru - ಕಾಳು ಮಸ್ಸೊಪ್ಪು ಸಾರು:

* ಈ ಮಸ್ಸೊಪ್ಪು ಸಾರು ತುಂಬಾ ರುಚಿಯಾಗಿರುತ್ತದೆ. ವಿವಿಧ ಕಾಳುಗಳು ಅದರಲ್ಲೂ ಮೊಳಕೆ ಕಾಳುಗಳು ಸೇರಿರುವುದರಿಂದ ಬಹಳ ಪೌಷ್ಟಿಕವಾಗಿಯೂ, ಆರೋಗ್ಯಕರವಾಗಿಯೂ ತುಂಬಾನೇ ಸೊಗಸಾಗಿರುತ್ತದೆ. ನಮ್ಮ ಅಜ್ಜಿ ಇದನ್ನು ನಾನು ಚಿಕ್ಕವಳಿದ್ದಾಗ ಹೆಚ್ಚಾಗಿ ತಯಾರಿಸುತ್ತಿದ್ದರು. ಇದಕ್ಕೆ ರೊಟ್ಟಿ ತುಂಬಾ ಚೆನ್ನಾಗಿ ಹೊಂದುತ್ತದೆ. ಮುದ್ದೆ ಸಹ. ಆಗ ಅಜ್ಜಿ ಮಾಡುತ್ತಿದ್ದ ರುಚಿ ಈಗ ಬರಲ್ಲ. ಈಗಿನ ಕಾಳುಗಳೆಲ್ಲಾ ಹೈಬ್ರೀಡ್ ಆಗಿರುವುದರಿಂದ ಅಜ್ಜಿ ತಯಾರಿಸುತ್ತಿದ್ದ ಅಡುಗೆಗಳು ಈಗ ನಾವು ಹೇಗೆ ತಯಾರಿಸಿದರು ಪರವಾಗಿಲ್ಲ ಎನಿಸುತ್ತೆ. ಆಗಿನ ಕಾಲದಲ್ಲಿ ಎಲ್ಲಾ ನಾಟಿ ಬೆಳೆಗಳನ್ನು ಬೆಳೆಯುತ್ತಿದ್ದುದರಿಂದ ಅದರಲ್ಲಿ ಪೌಷ್ಠಿಕಾಂಶಗಳು,ಖನಿಜ,ಲವಣ,ವಿಟಮಿನ್ ಗಳು ಎಲ್ಲಾ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಇರುತ್ತಿತ್ತು. ಅದಕ್ಕೆ ನಮ್ಮಗಳಿಗೆ ಆಗಿನ ಕಾಲದ ಅಡುಗೆಗಳೇ ಹೆಚ್ಚು ಇಷ್ಟವಾಗುತ್ತವೆ ಏನೋ ಅನಿಸುತ್ತೆ. ಇಷ್ಟೆಲ್ಲಾ ಒಂದೇ ಅಡುಗೆಗಳಿಗೆ ಹಾಕಿ ಆಗಿನ ಕಾಲದಲ್ಲಿ ಅಡುಗೆಗಳನ್ನು ತಯಾರಿಸುತ್ತಿದ್ದುದಕ್ಕೆ ಇರಬೇಕು ಅವರುಗಳು ಅಷ್ಟು ವಯಸ್ಸಾದರೂ ಏನು ಕಾಯಿಲೆಗಳು ಬರದೇ,ಓಡಾಡಿಕೊಂಡು ಗಟ್ಟಿಮುಟ್ಟಾಗಿ ಚೆನ್ನಾಗಿದ್ದರೇನೋ ಅಲ್ವಾ!! ಈ ಮಸ್ಸೊಪ್ಪಿಗೂ ನಾವು ಒಂದು ಚೂರು ಬೇಳೆಗೆ ಒಂದು ರೀತಿದು ಯಾವುದೋ ಒಂದು ಸೊಪ್ಪು ಹಾಕಿ,ತಯಾರಿಸಿದ ಮಸ್ಸೊಪ್ಪು ರುಚಿಗೂ ಬಹಳ ವ್ಯತ್ಯಾಸವಿದೆ. ಬೇಯಿಸಿದ ಕಾಳುಗಳನ್ನು ಮಸೆದು ತಯಾರಿಸಿದಾಗ ಅದು ಇನ್ನು ರುಚಿ ಹೆಚ್ಚು. ತಯಾರಿಸಿ ನೋಡಿ,ಈಗಿನ ದೀಡೀರ್ ಮಸ್ಸೊಪ್ಪಿನ ಸಾರಿಗೂ ,ನಮ್ಮ ಅಜ್ಜಿ ಕಾಲದ ಮಸ್ಸೊಪ್ಪು ಸಾರಿಗೂ ಇರುವ ವ್ಯತ್ಯಾಸವನ್ನು!!!! ಈ ಮಸ್ಸೊಪ್ಪು ಸಾರು ಕುದಿಸಿದಷ್ಟು,ಅಂದರೆ ಹಳೆಯದಾದರೆ ರುಚಿ ಇನ್ನೂ ಜಾಸ್ತಿಯಾಗುತ್ತದೆ. ಮಾರನೇದಿನಕ್ಕೆ ತುಂಬಾ ರುಚಿ.

ಕಾಳು ಮಸ್ಸೊಪ್ಪು ಸಾರು:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಒಂದು ಕಪ್
ಮೊಳಕೆ ಕಡ್ಲೆಕಾಳು
ಮೊಳಕೆ ಹುರುಳಿಕಾಳು
ಹೆಸರುಕಾಳು
ಹಲಸಂದೆಕಾಳು
ಹರಿವೆ ಸೊಪ್ಪು
ದಂಟುಸೊಪ್ಪು
ಬೆರೆಕೆ ಸೊಪ್ಪು
ಸಾರಿನಪುಡಿ /ಸಾಂಬಾರ್ ಪುಡಿ
ಈರುಳ್ಳಿ
ಬೆಳ್ಳುಳ್ಳಿ
ಅರಿಸಿನ
ಇಂಗು
ಕರಿಬೇವು
ಎಣ್ಣೆ,ಸಾಸಿವೆ
ಉಪ್ಪು
ಕಾಯಿತುರಿ
ಹುಣಸೇರಸ

ತಯಾರಿಸುವ ರೀತಿ:

ಎಲ್ಲಾ ಕಾಳುಗಳನ್ನು ಕ್ರಮವಾಗಿ ಕಾಲು ಬಟ್ಟಲು ತೆಗೆದುಕೊಳ್ಳಿ, ಎಲ್ಲಾ ಕಾಳುಗಳನ್ನು ನೀರು,ಉಪ್ಪು,ಅರಿಸಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ಇದರ ಜೊತೆಗೆ ತೊಗರಿಬೇಳೆಯನ್ನು ಬೇಯಿಸಿಕೊಂಡು ಅದಕ್ಕೆ ತೊಳೆದು,ಕತ್ತರಿಸಿದ ಎಲ್ಲಾ ಸೊಪ್ಪುಗಳನ್ನು ಹಾಕಿ, ಅದಕ್ಕೆ ಒಂದೆರಡು ಅಳಕು ಬೆಳ್ಳುಳ್ಳಿಯನ್ನು ಹಾಕಿ,ಟಮೋಟ ಕೂಡ ಹಾಕಿ ಸೊಪ್ಪು ಬೇಯುವವರೆಗು ಬೇಯಿಸಿ. ಬೆಂದ ನಂತರ ಕಾಳು-ಬೇಳೆ-ಸೊಪ್ಪಿನ ಮಿಶ್ರಣವನ್ನು ಸ್ವಲ್ಪ ಮಸೆದುಕೊಳ್ಳಿ.
ಈ ಕಡೆ ಕಾಯಿತುರಿ,ಸ್ವಲ್ಪ ಈರುಳ್ಳಿ,ಸಾರಿನಪುಡಿ,ಒಂದು ಅಳಕುಬೆಳ್ಳುಳ್ಳಿಯನ್ನು ಸೇರಿಸಿ ಒಟ್ಟಿಗೆ ರುಬ್ಬಿಕೊಳ್ಳಿ.
ನಂತರ ಪಾತ್ರೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ,ಸಾಸಿವೆ,ಕರಿಬೇವು,ಇಂಗು ಜಜ್ಜಿದ ಬೆಳ್ಳುಳ್ಳಿ ಮತ್ತು ರುಬ್ಬಿದ ಮಿಶ್ರಣ ಹಾಕಿ,ಕುದಿಸಿ,ಉಪ್ಪು ಸೇರಿಸಿ,ಮಸೆದಿರುವ ಕಾಳು,ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಹಾಕಿ,ಹುಣಸೇಹುಳಿ ಸೇರಿಸಿ,ಒಂದು ಬಾರಿ ಕುದಿಸಿ.ಕೆಳಗಿಳಿಸಿ.ಈ ಸಾರನ್ನು ಮುದ್ದೆ ಮತ್ತು ಅನ್ನದೊಂದಿಗೆ ನೀಡಬೇಕು. ಇದು ಚಪಾತಿ ಮತ್ತು ರೊಟ್ಟಿಗೂ ಚೆನ್ನಾಗಿರುತ್ತದೆ. ಆದರೆ ಗಟ್ಟಿಯಾಗಿ ತಯಾರಿಸಬೇಕು.
* ಕಾಳು ಮತ್ತು ಸೊಪ್ಪುಗಳನ್ನು ನಿಮಗೆ ಬೇಕಾದ ಅಳತೆಯಲ್ಲಿ ಹಾಕಿಕೊಳ್ಳಿ. ಎಲ್ಲಾ ಹಾಕುವುದು ಕಷ್ಟ ಎನಿಸಿದರೆ,ನಿಮಗೆ ಬೇಕಾದ ಕಾಳು ಮತ್ತು ಸೊಪ್ಪನ್ನು ಹಾಕಿಕೊಳ್ಳಿ.

Popular Posts