Wednesday, April 20, 2011

Beans Palya - ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಹುರುಳಿಕಾಯಿ /ಬೀನ್ಸ್ ನಲ್ಲಿ ಬಲಿತಿರುವ ಕಾಯಿ ತೆಗೆದುಕೊಂಡರೆ ಅದರಲ್ಲಿ ನಾರು ಹೆಚ್ಚಾಗಿರುತ್ತದೆ,ಅದು ಚೆನ್ನಾಗಿರುವುದಿಲ್ಲ. ಆದ್ದರಿಂದ ನೋಡಿ ಎಳೆಯ ಮತ್ತು ಹಸಿರಾಗಿರುವ ಕಾಯಿಯನ್ನು ತೆಗೆದುಕೊಳ್ಳಿ. ಹುರುಳಿಕಾಯಿಯಲ್ಲಿ ನಾರಿನ ಅಂಶವಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಲ್ಯ,ಸಾರು,ಸಾಗು ಯಾವುದಕ್ಕೆ ಬೇಕಾದರೂ ಇದನ್ನು ಬಳಸಬಹುದು. ಇದು ಎಲ್ಲದಕ್ಕು ಹೊಂದಿಕೊಳ್ಳುತ್ತದೆ. ಇಲ್ಲಿ ಬರೆದಿರುವ ಸಿಂಪಲ್ ಪಲ್ಯದಲ್ಲಿಯೇ ತುಂಬಾ ರುಚಿ ಜಾಸ್ತಿಯಾಗಿರುತ್ತದೆ. ಈ ಪಲ್ಯ ಸೈಡ್ ಡಿಶ್ ಅಥವಾ ಚಪಾತಿ,ಪೂರಿ,ಪರೋಟ ಮತ್ತು ಬ್ರೆಡ್ ಜೊತೆ ಸಹ ಚೆನ್ನಾಗಿರುತ್ತದೆ. ಮಕ್ಕಳಿಗೂ ಇಷ್ಟವಾಗುವ ಪಲ್ಯ. ಎಲ್ಲರಿಗೂ ತಿಳಿದಿರುವಂತೆ ಹುರುಳಿಕಾಯಿ ಪಲ್ಯದ ಪಫ್ ನಲ್ಲಿ ಅಂತೂ ಹೆಚ್ಚಿನ ರುಚಿ ಇರುತ್ತದೆ. ಪಫ್ ತಯಾರಿಸುವಾಗ ಆಲೂಗೆಡ್ಡೆ ಪಲ್ಯದ ಬದಲು, ಈ ಪಲ್ಯಕ್ಕೆ ಸ್ವಲ್ಪ ಮಸಾಲೆ ಹಾಕಿ ಬಳಸಬಹುದು.

ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಬೇಕಾಗುವ ಪದಾರ್ಥಗಳು;

ಹುರುಳಿಕಾಯಿ - ಅರ್ಧ ಕಿಲೋ
ಈರುಳ್ಳಿ - ಒಂದು, ಸಣ್ಣಗೆ ಹೆಚ್ಚಿ,
ಹಸಿಮೆಣಸಿನಕಾಯಿ -ರುಚಿಗೆ, ಉದ್ದಕ್ಕೆ ಸೀಳಿಕೊಂಡರೆ ಉತ್ತಮ
ಎಣ್ಣೆ - ಅವಶ್ಯಕತೆ ಇದ್ದಷ್ಟು
ಸಾಸಿವೆ ಸ್ವಲ್ಪ
ಕರಿಬೇವು- ಒಂದು ಗರಿ, ಆಗೇ ಕೈಯಲ್ಲಿ ಮುರಿದುಕೊಳ್ಳಿ.
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದು ಚಮಚ
ಅರಿಶಿನ ಚಿಟಿಕೆ
ಉಪ್ಪು ರುಚಿಗೆ
ಕಾಯಿತುರಿ ಸ್ವಲ್ಪ ಜಾಸ್ತಿ ಇರಲಿ
ಕೊತ್ತುಂಬರಿಸೊಪ್ಪು ಸಣ್ಣಗೆ ಹೆಚ್ಚಿದ್ದು.

ವಿಧಾನ:

ಮೊದಲು ಹುರುಳಿಕಾಯಿಯನ್ನು ಚೆನ್ನಾಗಿ ತೊಳೆದು, ನಾರು ತೆಗೆದು ಬಿಡಿಸಿಕೊಂಡು, ಕಾಯಿಯನ್ನು ಸಣ್ಣಗೆ ಒಂದೇ ಸಮನಾಗಿ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ, ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಬಾಡಿಸಿ, ಕರಿಬೇವು, ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹೆಚ್ಚಿದ ಹುರುಳಿಕಾಯಿಯನ್ನು ಸೇರಿಸಿ, ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ಸ್ವಲ್ಪ ನೀರು ಚಿಮುಕಿಸಿ,ಮುಚ್ಚಿಟ್ಟು, ಕಾಯಿ ಬೇಯುವವರೆಗು ಬೇಯಿಸಿ. ಇದು ಸ್ವಲ್ಪ ಬೇಗ ಬೇಯುತ್ತದೆ. ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಎಳೆಯದಾಗಿದ್ದರೆ ಬೇಗ ಬೇಯುವುದು, ಬಲಿತಿದ್ದರೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಚಪಾತಿ ಮಧ್ಯೆ ಸ್ಯಾಂಡ್ ವಿಚ್ ತರಹ ರೋಲ್ ಮಾಡಿಕೊಂಡು ತಿನ್ನಲು ಕೂಡ ಚೆನ್ನಾಗಿರುತ್ತದೆ. ಎರಡು ಬ್ರೆಡ್ ಗಳ ಮಧ್ಯೆಯೂ ಪಲ್ಯ ಇಟ್ಟು ತಿನ್ನಬಹುದು, ಪಫ್ ತರಹ ರುಚಿಯಾಗಿರುತ್ತದೆ.

* ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಬೇಯಿಸುವುದು ಕಷ್ಟ ಮತ್ತು ಬೇಯಲು ಬಹಳ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ.

2 comments:

ragat paradise said...

nice..blog

visit my blog @ http://ragat-paradise.blogspot.com

RAGHU

hsks said...

Thank you!

Popular Posts