Wednesday, December 2, 2009

Kidney Beans Masala Curry - ಬೀನ್ಸ್ ಕಾಳು ಸಾರು:

ಹುರುಳೀಕಾಯಿ ಕಾಳುಗಳು ಹಸಿಯಾಗಿಯೂ ಸಿಗುತ್ತವೆ . ಒಣಗಿದ ಕಾಳುಗಳು ಸಿಗುತ್ತವೆ. ಅದರಲ್ಲಿ ವಿವಿಧ ಬಣ್ಣಗಳಿವೆ, ಬಿಳಿ ಮತ್ತು ಕೆಂಪು ಹೆಚ್ಚಾಗಿವೆ. ಈ ಕಾಳುಗಳು ಹುರುಳಿಕಾಯಿ ಎಂದು ಮಾರ್ಕೆಟ್ ಗಳಲ್ಲಿ ಸಿಗುತ್ತವೆ. ಹಸಿಕಾಳುಗಳು ತುಂಬಾ ರುಚಿಯಾಗಿರುತ್ತವೆ. ಒಣಗಿದ ಕಾಳುಗಳು ಪರವಾಗಿಲ್ಲ. ಒಣಗಿದ ಕಾಳುಗಳು ಉಪಯೋಗಿಸುವುದಾದರೆ ಚೆನ್ನಾಗಿ ನೆನೆಸಿಡಬೇಕು.

ಬೀನ್ಸ್ ಕಾಳು ಸಾರು:

ಬೇಕಾಗುವ ಸಾಮಗ್ರಿಗಳು:

ಹುರುಳೀಕಾಯಿ ಕಾಳು (ಬೀನ್ಸ್ ಕಾಳು)- ಎರಡು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ-
ಆಲೂಗೆಡ್ಡೆ,ಬದನೆಕಾಯಿ,ಹೂಕೋಸು
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:
ಹುರುಳೀಕಾಯಿಕಾಳು (ಬೀನ್ಸ್ ಕಾಳು) ತಾಜಾ ಅಥವ ಕ್ಯಾನ್ ಅಥವ ಫ್ರೋಜನ್ ಕಾಳುಗಳಾದರೆ, ಆಗೇ ತಯಾರಿಸಬಹುದು, ಆದರೆ ಒಣಗಿದ ಕಾಳುಗಳಾದರೆ, ಹಿಂದಿನ ರಾತ್ರಿಯೇ ನೆನೆಸಿಡಬೇಕು.

ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ,ಅದಕ್ಕೆ ಚಿಟಿಕೆ ಸಾಸಿವೆ ಹಾಕಿ,ಚಟಪಟ ಅಂದ ಮೇಲೆ ತರಕಾರಿ ಹಾಕಿ,ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ ಬೀನ್ಸ್ ಕಾಳು ಸಾರು ತಯಾರಾಗುತ್ತದೆ. ಇದನ್ನು ಬಿಳಿಅನ್ನ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.ಈ ಮಸಾಲೆ ಸಾರಿಗೆ ರಾಗಿಮುದ್ದೆ ಕೂಡಾ ಚೆನ್ನಾಗಿರುತ್ತದೆ. ಈ ರೀತಿ ಮಸಾಲೆ ಸಾರುಗಳು ಸ್ವಲ್ಪ ಖಾರವಾಗಿದ್ದರೆ ತುಂಬಾ ಚೆನ್ನಾಗಿರುತ್ತದೆ.

* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು.ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು.ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ.ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ..

No comments:

Popular Posts