Wednesday, December 30, 2009

Wheat Flour Laddu / Godhi Hittina Unde

ಗೋಧಿಹಿಟ್ಟಿನ ಉಂಡೆ:

ಗೋಧಿಹಿಟ್ಟು - ಒಂದು ಬಟ್ಟಲು
ಬೆಲ್ಲದಪುಡಿ- ಒಂದು ಬಟ್ಟಲು
ದ್ರಾಕ್ಷಿ ಮತ್ತು ಗೋಡಂಬಿ
ಏಲಕ್ಕಿ
ತುಪ್ಪ

ತಯಾರಿ:

ನಾನ್ ಸ್ಟಿಕ್ ಪ್ಯಾನ್/ ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು ಆ ಕಡೆ ಇಡಿ.
ಅದೇ ಬಾಣಲೆಯಲ್ಲಿ ಗೋಧಿಹಿಟ್ಟಿಗೆ ಸ್ವಲ್ಪ ತುಪ್ಪ ಹಾಕಿ ಹಸಿವಾಸನೆ ಹೋಗುವವರೆಗೂ ಅಂದರೆ ಹಿಟ್ಟಿನ ಬಣ್ಣ ತೆಳು ಕಂದು ಬಣ್ಣ ಬರುವವರೆಗೂ ಹುರಿದುಕೊಂಡು ಅದಕ್ಕೆ ಬೆಲ್ಲದಪುಡಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಅದೆಲ್ಲವನ್ನು ಕೈ ಬಿಡದೇ ತಳ ಹತ್ತದಂತೆ ಐದು ನಿಮಿಷ ಹುರಿದು, ಮತ್ತೆರಡು ಚಮಚ ತುಪ್ಪ ಹಾಕಿ ,ಬೆರೆಸಿ, ಒಲೆಯಿಂದ ಇಳಿಸಿ. ಇದನ್ನು ತಯಾರಿಸುವಾಗ ಹಾಲು / ನೀರು ಏನನ್ನು ಬೆರೆಸುವುದಿಲ್ಲ. ಹಿಟ್ಟು ಮತ್ತು ಬೆಲ್ಲ ಮಾತ್ರ. ಇದು ಸ್ವಲ್ಪ ತಣ್ಣಗಾದ ಬಳಿಕ (ತುಂಬಾ ತಣ್ಣಗಾಗಬಾರದು) ಇನ್ನೂ ಸ್ವಲ್ಪ ಬಿಸಿ ಇರುವಾಗಲೇ ತುಪ್ಪ ಅಥವಾ ಹಾಲಿನಲ್ಲಿ ಕೈಯನ್ನು ಸವರಿಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಉಂಡೆಯನ್ನು ತಯಾರಿಸಿಕೊಂಡು, ತಣ್ಣಗಾದ ಮೇಲೆ ಡಬ್ಬಿಯಲ್ಲಿ ಹಾಕಿಡಬಹುದು, ಸುಮಾರು ದಿನ ಚೆನ್ನಾಗಿ ಇರುತ್ತದೆ. ಇದು ತುಂಬಾ ಆರೋಗ್ಯಕರವಾದ ಉಂಡೆ. ಇದನ್ನು ತಯಾರಿಸಲು ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ

Sunday, December 27, 2009

Carrot Payasa - ಕ್ಯಾರೆಟ್ ಪಾಯಸ/ಖೀರು:

ಕ್ಯಾರೆಟ್ ಪಾಯಸ/ಖೀರು:

ಬೇಕಾಗುವ ಸಾಮಗ್ರಿಗಳು:

ಕ್ಯಾರೆಟ್ - ಒಂದು ಬಟ್ಟಲು ಹೆಚ್ಚಿದ್ದು
ಸಕ್ಕರೆ ರುಚಿಗೆ
ಹಾಲು - ಅಗತ್ಯವಿದ್ದಷ್ಟು
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು
ಗುಲಾಬಿ ನೀರು (ರೋಸ್ ವಾಟರ್)
ತುಪ್ಪ

ವಿಧಾನ:

ಮೊದಲು ಕ್ಯಾರೆಟ್ ಅನ್ನು ಬೇಯಿಸಿಕೊಂಡು, ಸ್ವಲ್ಪ ನೀರು ಅಥವ ಹಾಲು ಹಾಕಿಕೊಂಡು ಅದನ್ನು ರುಬ್ಬಿಕೊಳ್ಳಿ. ಕೇಸರಿಯನ್ನು ಸ್ವಲ್ಪ ಹಾಲಿನಲ್ಲಿ ನೆನೆಹಾಕಿ.
ಒಂದು ಪಾತ್ರೆಗೆ ತುಪ್ಪ ಹಾಕಿ , ಕರಗಿದ ತುಪ್ಪದಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು, ಅದಕ್ಕೆ ಹಾಲನ್ನು ಹಾಕಿ, ರುಬ್ಬಿದ ಕ್ಯಾರೆಟ್ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಕುದಿ ಬರುವಾಗ ಸಕ್ಕರೆ ಮತ್ತು ಕೇಸರಿಹಾಲನ್ನು ಸೇರಿಸಿ. ಸಕ್ಕರೆ ಕರಗುವಂತೆ ಕ್ಯಾರೆಟ್ ಮಿಶ್ರಣವನ್ನು ಚೆನ್ನಾಗಿ ಕುದಿಸಿ.ಇಳಿಸಿ. ಇದಕ್ಕೆ ಒಂದು ಚಮಚ ಗುಲಾಬಿ ನೀರು ಹಾಕಿ. ಇದೀಗ ಪೌಷ್ಠಿಕರವಾದ, ನೋಡಲು ಸುಂದರವಾದ, ಕುಡಿಯಲು ರುಚಿಯಾದ ಆರೋಗ್ಯಕ್ಕೆ ಹಿತಕರವಾದ ಕ್ಯಾರೆಟ್ ಪಾಯಸ/ಖೀರು ತಯಾರಾಗಿದೆ.

Wednesday, December 23, 2009

Karjikaayi - ಕರ್ಜಿಕಾಯಿ:

ಕರ್ಜಿಕಾಯಿ:

ಬೇಕಾಗುವ  ಸಾಮಗ್ರಿಗಳು:

ಮೈದಾಹಿಟ್ಟು - ಒಂದು ಬಟ್ಟಲು
ಚಿಟಿಕೆ ಉಪ್ಪು
ಎರಡು ಚಮಚ ತುಪ್ಪ
ಕಡ್ಲೆ - ಒಂದು ಬಟ್ಟಲು
ಕೊಬ್ಬರಿತುರಿ
ಸಕ್ಕರೆಪುಡಿ
ಏಲಕ್ಕಿ ಪುಡಿ
ಗಸಗಸೆ
ಎಳ್ಳು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಗಸಗಸೆಯನ್ನು ಸ್ವಲ್ಪ ಹುರಿದು, ಕುಟ್ಟಿಕೊಳ್ಳಿ.

ಮೊದಲು ಮೈದಾಹಿಟ್ಟಿಗೆ,ಚಿಟಿಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ. ಇದನ್ನು ’ಕಣಕ’ ಎನ್ನುತ್ತಾರೆ.

ಕಡ್ಲೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಸಕ್ಕರೆಪುಡಿ,ಕೊಬ್ಬರಿತುರಿ,ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಸರಿಯಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಬೆರೆಸಿಡಿ. ಇದನ್ನು’ಹೂರಣ’ ಎನ್ನುತ್ತಾರೆ.

ನಂತರ ಮೈದಾಹಿಟ್ಟಿನ ಕಣಕದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು, ಅದರಿಂದ ಪುಟ್ಟ ಪುಟ್ಟ ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಕಡ್ಲೆ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ, ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ, ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ , ಸರಿಯಾಗಿ ಎಲ್ಲಾ ಕಡೆಯೂ ಅದನ್ನು ಕ್ಲೋಸ್ ಮಾಡಿ, ಅಂಚು ಮಡಿಸುವ ವಿಧಾನ ತಿಳಿದಿರುವವರು ಅದನ್ನು ಸುತ್ತಿ ಸುತ್ತಿ ಅಂಚಿಗೆ ಚಿತ್ತಾರ ಮಾಡಬಹುದು. ಅದು ಬರದೇ ಇರುವವರು ಚೆನ್ನಾಗಿ ಅದುಮಿ ಮುಚ್ಚಿದ ಅಂಚಿನ ತುದಿ ಭಾಗ ಮಾತ್ರ ಕಟ್ಟರ್ ನಿಂದ ಕಟ್ ಮಾಡಬಹುದು. ಕಟ್ಟರ್ ಸಿಗುತ್ತದೆ ಅದರಿಂದ ಕಟ್ ಮಾಡಿದ ಮೇಲೆ ಮತ್ತೆ ಎಲ್ಲಾ ಕಡೆ ಅಂಟಿಕೊಂಡಿದೆಯಾ ಪರೀಕ್ಷಿಸಿ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಎಣ್ಣೆಯಲ್ಲಿ ಪುಡಿಯಲ್ಲ ಆಚೆ ಬರುತ್ತದೆ. ಇದನ್ನು ತಯಾರಿಸುವಾಗ ನೋಡಿಕೊಂಡು ಸರಿಯಾಗಿ ತಯಾರಿಸಿಕೊಳ್ಳಿ, ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ, ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ನಂತರ ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ, ಇದು ಸುಮಾರು ದಿನ ಹಾಳಾಗದೇ ಚೆನ್ನಾಗಿಯೇ ಇರುತ್ತದೆ. ಬೇಕಾದಾಗ ತಿನ್ನಬಹುದು. ಊಟಕ್ಕು ಸಿಹಿ ತರಹ ನೀಡಬಹುದು.

* ಪೂರಿಯೊಳಗೆ ಪುಡಿಯನ್ನು ತುಂಬುವಾಗ ಸರಿಯಾಗಿ ನೋಡಿ,ಆ ಕಡೆ-ಈ ಕಡೆ ಬರದಂತೆ ಮಧ್ಯಭಾಗದಲ್ಲಿ ಮಾತ್ರ ಇರುವಂತೆ ಹಾಕಿ ಮಡಿಸಿಕೊಳ್ಳಬೇಕು

Monday, December 21, 2009

Habbada aduge - ಹಬ್ಬದ ಊಟ

Saagu/Vegetable masala-ಮಸಾಲಾ/ಕುರ್ಮಾ



ತರಕಾರಿ ಸಾಗು ಅಥವ ಕೂಟು ಎಲ್ಲವುದಕ್ಕು ಹೊಂದಿಕೊಳ್ಳುವಂತಹದ್ದು. ಅಂದರೆ ಇದನ್ನು ದೋಸೆ, ಚಪಾತಿ,ಪರೋಟ,ರೊಟ್ಟಿ,ಪೂರಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಜೊತೆಯಲ್ಲಿ ಪೌಷ್ಠಿಕವಾಗಿಯೂ ಆರೋಗ್ಯಕ್ಕೆ ಉತ್ತಮವಾಗಿಯೂ ಇರುತ್ತದೆ.

ಸಾಗು ರೆಸಿಪಿಯನ್ನು ಮಸಾಲಾ/ಕುರ್ಮಾ ಲೇಬಲ್ ನಲ್ಲಿ ನೋಡಬಹುದು.

palakpaneer

ಪಾಲಕ್ ಪನ್ನೀರು ಮಕ್ಕಳಿಗೆ ಇಷ್ಟವಾಗುವಂತದ್ದು, ಸೊಪ್ಪು ಪೇಸ್ಟ್ ಮಾಡುವುದರಿಂದ ಸೊಪ್ಪು ತಿನ್ನಲು ಹಿಂಜರಿಯುವ ಮಕ್ಕಳಿಗೆ ಹೀಗೆ ತಯಾರಿಸಿ ಕೊಡುವುದರಿಂದ ಖುಷಿಯಿಂದ ತಿನ್ನುತ್ತಾರೆ. ಅದರ ಜೊತೆ ಪನ್ನೀರು ಒಂದು ರುಚಿ ಕೊಡುತ್ತದೆ. ಇದು ಚಪಾತಿ, ಪರೋಟ, ನಾನ್,ಕುಲ್ಚ, ಬಟರ್ ನಾನ್, ತಂದೂರಿ ರೋಟಿ ಮತ್ತು ಪೂರಿ ಎಲ್ಲಕ್ಕೂ ಸೈ.

huli

ಮೂಲಂಗಿ ಹುಳಿ:

ತೊಗರಿಬೇಳೆ

ಮೂಲಂಗಿ, ಹೆಚ್ಚಿದ್ದು

ಈರುಳ್ಳಿ ಸ್ವಲ್ಪ

ಕಾಯಿತುರಿ ಸ್ವಲ್ಪ

ಸಾರಿನ ಪುಡಿ

ಹುಣಸೇರಸ - ೧ ಚಮಚ

ಅರಿಶಿಣದ ಪುಡಿ

ಎಣ್ಣೆ

ಉಪ್ಪು



ತೊಗರಿಬೇಳೆಗೆ ಅರಿಶಿಣ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು ಅದಕ್ಕೆ ಮೂಲಂಗಿ ಮತ್ತು ಟಮೋಟ ಹಾಕಿ, ಮೂಲಂಗಿ ಬೇಯುವವರೆಗೂ ಬೇಯಿಸಿ, ನಂತರ ಸಾರಿನಪುಡಿ, ಹುಣಸೇರಸ ,ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿ, ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ಒಗ್ಗರಣೆ ಸೇರಿಸಿ. ಇಳಿಸಿ.

*ರುಬ್ಬಲು - ಕಾಯಿತುರಿ, ಈರುಳ್ಳಿ ಮತ್ತು ಸಾರಿನಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.

*ಒಗ್ಗರಣೆ - ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಮತ್ತು ಚುಟುಕ ಈರುಳ್ಳಿ ಹಾಕಿ ಬಾಡಿಸಿ.

* - ರುಬ್ಬಿಕೊಳ್ಳಲು ವೇಳೆ/ಬಿಡುವು ಇಲ್ಲದವರು ಕಾಯಿತುರಿ ರುಬ್ಬಿಕೊಳ್ಳದೆ ಆಗೆ ಕೂಡ ಸಾಂಬಾರ್ ತಯಾರಿಸಿಕೊಳ್ಳಬಹುದು. ಆಗ ಸಾರಿಗೆ ರುಬ್ಬಿದ ಮಿಶ್ರಣದ ಹಾಕುವ ಬದಲು ಬರೀ ಸಾರಿನ ಪುಡಿ ಹಾಕಿ ಕುದಿಸಿದರೆ ಆಯಿತು. ಈ ಸಾಂಬಾರ್ ಕೂಡ ರುಚಿಯಾಗಿಯೇ ಇರುತ್ತದೆ.

* ಮೂಲಂಗಿ ಜೊತೆ ಹುರುಳಿಕಾಯಿ/ಆಲೂಗೆಡ್ಡೆ/ಕ್ಯಾರೆಟ್ ಸಹ ಸೇರಿಸಿ ತಯಾರಿಸಬಹುದು.



DoodPeda:



usali

ಹುರುಳೀಕಾಯಿಕಾಳು ಉಸಲಿ:

ನಮ್ಮ ದೇಶದಲ್ಲಿ ಹುರುಳೀಕಾಯಿಕಾಳು ಸುಮಾರು ಬಣ್ಣಗಳಲ್ಲಿ ಬರುತ್ತದೆ. ಇದು ಹುರುಳಿಕಾಯಿಯಲ್ಲಿ ಸಿಗುತ್ತದೆ, ಇದು ಸಿಪ್ಪೆ ಸಮೇತ ಸಿಗುತ್ತದೆ. ಅಲ್ಲದೇ ಒಣಗಿದ ಕಾಳುಗಳು ಸಿಗುತ್ತವೆ ಮತ್ತು ಈಗ ಕ್ಯಾನ್ ನಲ್ಲಿ ಸಹ ಸಿಗುತ್ತದೆ.ಎಲ್ಲಕ್ಕಿಂತ ಹಸಿಕಾಳಿನಕಾಯಿ ತಂದು ಕಾಳು ಬಿಡಿಸಿ ಮಾಡುವುದು ಹೆಚ್ಚು ರುಚಿಯಾಗಿರುತ್ತದೆ ಮತ್ತು ಬೇಗ ಬೇಯುತ್ತದೆ. ಕ್ಯಾನ್ ನಲ್ಲಿ ಕೂಡ ಬಿಳಿ ಕಿಡ್ನಿ ಬೀನ್ಸ್ ಮತ್ತು ಕೆಂಪು ಕಿಡ್ನಿ ಬೀನ್ಸ್ ಗಳು ಸಿಗುತ್ತವೆ.

ಸಾಮಗ್ರಿಗಳು:

ಹುರುಳೀಕಾಯಿಕಾಳು ಒಂದು ಬಟ್ಟಲು

ಹೆಚ್ಚಿದ ಈರುಳ್ಳಿ ಸ್ವಲ್ಪ

ಹೆಚ್ಚಿದ ಹಸಿಮೆಣಸಿನಕಾಯಿ

ಎಣ್ಣೆ, ಸಾಸಿವೆ

ಕರಿಬೇವು

ಉಪ್ಪು ರುಚಿಗೆ

ಕೊತ್ತುಂಬರಿಸೊಪ್ಪು

ಕಾಯಿತುರಿ

ವಿಧಾನ:

ಹುರುಳೀಕಾಳನ್ನು ಬಿಡಿಸಿಕೊಂಡು ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ, ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.

ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ , ಬೇಯಿಸಿರುವ ಕಾಳನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ, ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ, ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.

Sunday, December 20, 2009

dosehittu



Vegetable Saagu


ತರಕಾರಿ ಸಾಗು:

ಸಾಮಗ್ರಿಗಳು:

ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು, ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ಼್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು

ವಿಧಾನ:
ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು, ಹೆಚ್ಚಿದ ತರಕಾರಿಗಳನ್ನು ಹಾಕಿ, ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ, ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ, ಚೆನ್ನಾಗಿ ತಿರುಗಿಸಿ, ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ, ಗರಂಮಸಾಲ ಸಹ ಹಾಕಿ ತಿರುಗಿಸಿ. ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು. ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ. ಇದನ್ನು ಚಪಾತಿ,ಪೂರಿ,ಪರೋಟ ಮತ್ತು ದೋಸೆಯೊಂದಿಗೆ ಸಹ ತಿನ್ನಬಹುದು. ಅನ್ನಕ್ಕು ತುಂಬಾ ಚೆನ್ನಾಗಿರುತ್ತದೆ. ಮಕ್ಕಳಿಗೆ ಸಾಗು ಅನ್ನ ಇಷ್ಟವಾಗುತ್ತದೆ. ಯಾವುದಕ್ಕಾದರೂ ಸರಿ ಇಲ್ಲವೆಂದರೆ ಊಟಕ್ಕೂ ಕೂಡ ನೆಂಚಿಕೊಳ್ಳಬಹುದು.

*ಎಲ್ಲಾ ತರಕಾರಿಗಳು ಬೇಕೇಬೇಕು ಅಂತ ಏನು ಇಲ್ಲ. ಕೆಲವು ನಿಮಗೆ ಬೇಕೆನಿಸಿದಂತೆ ಹಾಕಿಕೊಳ್ಳಬಹುದು.

Saturday, December 19, 2009

Dose/Dosa Saagu- ದೋಸೆ ಸಾಗು:


ದೋಸೆ ಸಾಗು:
ಸಾಮಗ್ರಿಗಳು:
ಅಕ್ಕಿ - ನಾಲ್ಕು ಕಪ್
ಕುಸುಬಲಕ್ಕಿ- ಅರ್ಧಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ

ವಿಧಾನ:

ಅಕ್ಕಿಯನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ,ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ /ಎಣ್ಣೆ ಹಾಕಿ ಸವರಿ,ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ,ಬೇಯಿಸಿ ತೆಗೆಯಿರಿ. ಇದೇ ರೀತಿ ಎಷ್ಟು ಬೇಕೋ ತಯಾರಿಸಿಕೊಳ್ಳಿ. ದೋಸೆಯೊಂದಿಗೆ ಸಾಗು ತುಂಬಾ ಚೆನ್ನಾಗಿರುತ್ತದೆ.
***********************************
ಸಾಗು ತಯಾರಿಸುವ ಬಗೆ;

ತರಕಾರಿ ಸಾಗು:

ಸಾಮಗ್ರಿಗಳು:

ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು, ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು

ವಿಧಾನ:

ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು, ಹೆಚ್ಚಿದ ತರಕಾರಿಗಳನ್ನು ಹಾಕಿ, ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ, ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ, ಚೆನ್ನಾಗಿ ತಿರುಗಿಸಿ, ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ, ಗರಂಮಸಾಲ ಸಹ ಹಾಕಿ ತಿರುಗಿಸಿ. ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು. ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ.

ಈ ದೋಸೆಗಳ ಜೊತೆ ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯನ್ನು ಕೊಡಿ.

Monday, December 14, 2009

ಜೀರಿಗೆ ಮತ್ತು ಶುಂಠಿ ಪಾನೀಯ/ CuminGinger juice

ಜೀರಿಗೆ ಮತ್ತು ಶುಂಠಿ ಎರಡು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ. ಅದರ ಪಾನೀಯವನ್ನು ಆಗಾಗ್ಗೆ ಸೇವಿಸುವುದರಿಂದ ಅನೇಕ ತೊಂದರೆಗಳಿಗೆ ಅನುಕೂಲವಾಗುತ್ತದೆ.

ಜೀರಿಗೆ ಮತ್ತು ಶುಂಠಿ ಪಾನೀಯ /ಪಾನಕ;

ಸಾಮಾನುಗಳು:
ಕುಟ್ಟಿದ ಜೀರಿಗೆ ಸ್ವಲ್ಪ
ಜಜ್ಜಿದ ಶುಂಠಿ ಸ್ವಲ್ಪ
ನಿಂಬೆರಸ ಒಂದು ಚಮಚ
ಜೇನುತುಪ್ಪ

ವಿಧಾನ:
ಒಂದು ಲೋಟ ನೀರಿಗೆ ಜಜ್ಜಿದ ಶುಂಠಿ ಮತ್ತು ಕುಟ್ಟಿದ ಜೀರಿಗೆ ಹಾಕಿ ಕುದಿಸಿ, ಸೋಸಿ, ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ. ಸೇವಿಸಿ.
*ಕಾಳು ಮೆಣಸಿನ ಪುಡಿ ಬೇಕಾದವರು ಸೇರಿಸಿಕೊಳ್ಳಬಹುದು.

Wednesday, December 2, 2009

Kidney Beans Masala Curry - ಬೀನ್ಸ್ ಕಾಳು ಸಾರು:

ಹುರುಳೀಕಾಯಿ ಕಾಳುಗಳು ಹಸಿಯಾಗಿಯೂ ಸಿಗುತ್ತವೆ . ಒಣಗಿದ ಕಾಳುಗಳು ಸಿಗುತ್ತವೆ. ಅದರಲ್ಲಿ ವಿವಿಧ ಬಣ್ಣಗಳಿವೆ, ಬಿಳಿ ಮತ್ತು ಕೆಂಪು ಹೆಚ್ಚಾಗಿವೆ. ಈ ಕಾಳುಗಳು ಹುರುಳಿಕಾಯಿ ಎಂದು ಮಾರ್ಕೆಟ್ ಗಳಲ್ಲಿ ಸಿಗುತ್ತವೆ. ಹಸಿಕಾಳುಗಳು ತುಂಬಾ ರುಚಿಯಾಗಿರುತ್ತವೆ. ಒಣಗಿದ ಕಾಳುಗಳು ಪರವಾಗಿಲ್ಲ. ಒಣಗಿದ ಕಾಳುಗಳು ಉಪಯೋಗಿಸುವುದಾದರೆ ಚೆನ್ನಾಗಿ ನೆನೆಸಿಡಬೇಕು.

ಬೀನ್ಸ್ ಕಾಳು ಸಾರು:

ಬೇಕಾಗುವ ಸಾಮಗ್ರಿಗಳು:

ಹುರುಳೀಕಾಯಿ ಕಾಳು (ಬೀನ್ಸ್ ಕಾಳು)- ಎರಡು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ-
ಆಲೂಗೆಡ್ಡೆ,ಬದನೆಕಾಯಿ,ಹೂಕೋಸು
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:
ಹುರುಳೀಕಾಯಿಕಾಳು (ಬೀನ್ಸ್ ಕಾಳು) ತಾಜಾ ಅಥವ ಕ್ಯಾನ್ ಅಥವ ಫ್ರೋಜನ್ ಕಾಳುಗಳಾದರೆ, ಆಗೇ ತಯಾರಿಸಬಹುದು, ಆದರೆ ಒಣಗಿದ ಕಾಳುಗಳಾದರೆ, ಹಿಂದಿನ ರಾತ್ರಿಯೇ ನೆನೆಸಿಡಬೇಕು.

ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ,ಅದಕ್ಕೆ ಚಿಟಿಕೆ ಸಾಸಿವೆ ಹಾಕಿ,ಚಟಪಟ ಅಂದ ಮೇಲೆ ತರಕಾರಿ ಹಾಕಿ,ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ ಬೀನ್ಸ್ ಕಾಳು ಸಾರು ತಯಾರಾಗುತ್ತದೆ. ಇದನ್ನು ಬಿಳಿಅನ್ನ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.ಈ ಮಸಾಲೆ ಸಾರಿಗೆ ರಾಗಿಮುದ್ದೆ ಕೂಡಾ ಚೆನ್ನಾಗಿರುತ್ತದೆ. ಈ ರೀತಿ ಮಸಾಲೆ ಸಾರುಗಳು ಸ್ವಲ್ಪ ಖಾರವಾಗಿದ್ದರೆ ತುಂಬಾ ಚೆನ್ನಾಗಿರುತ್ತದೆ.

* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು.ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು.ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ.ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ..

Popular Posts