Saturday, October 31, 2009

Onion Pakoda / Erulli pakoda-ಈರುಳ್ಳಿ ಪಕೋಡ:

ಈರುಳ್ಳಿ ಪಕೋಡ:



ಬೇಕಾಗುವ ಸಾಮಗ್ರಿಗಳು:

ಈರುಳ್ಳಿ - ಎರಡು ದೊಡ್ಡದು
ಕಡ್ಲೆಹಿಟ್ಟು - ಒಂದು ಕಪ್
ಖಾರದ ಪುಡಿ ( ಅಚ್ಚ ಮೆಣಸಿನ ಪುಡಿ) - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಓಮಕಾಳು - ಅರ್ಧ ಚಮಚ( ಬೇಕಾದರೆ)
ಚಿಟಿಕೆ ಅಡಿಗೆ ಸೋಡಾ
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಉದ್ದಕ್ಕೆ ಹೆಚ್ಚಿಕೊಳ್ಳಿ ಅಥವಾ ಮಧ್ಯಕ್ಕೆ ಕತ್ತರಿಸಿ ಸ್ಲೈಸ್ ಮಾಡಿಕೊಂಡು ಅದನ್ನು ಬೇರ್ಪಡಿಸಿಟ್ಟುಕೊಳ್ಳಿ.
ನಂತರ ಒಂದು ಪಾತ್ರೆಗೆ ಕಡ್ಲೆಹಿಟ್ಟು, ಖಾರದ ಪುಡಿ, ಓಮಕಾಳು, ಸೋಡಾ ಮತ್ತು ಉಪ್ಪು ಹಾಕಿ ಬೆರೆಸಿ, ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮತ್ತು ಒಂದೆರಡು ಚಮಚ ಕಾದ ಎಣ್ಣೆಯನ್ನು ಹಾಕಿ, ಚೆನ್ನಾಗಿ ಕಲೆಸಿ. ನೀರು ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಹಾಕಿಕೊಳ್ಳಿ, ಯಾಕೆಂದರೆ ಈರುಳ್ಳಿಯು ಕಲೆಸಿದಾಗ ನೀರು ಬಿಡುತ್ತದೆ. ತುಂಬಾ ತೆಳ್ಳಗೆ ಹಿಟ್ಟನ್ನು ಕಲೆಸಬೇಡಿ, ಕೈ ಅಥವ ಚಮಚದಲ್ಲಿ ತೆಗೆದುಕೊಳ್ಳುವಷ್ಟು ಕಲೆಸಿಕೊಳ್ಳಿ. ನಂತರ ಈ ಕಲೆಸಿದ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಸ್ವಲ್ಪ ತೆಳುವಾಗಿ ಸ್ವಲ್ಪ ಸ್ವಲ್ಪವೇ ಹಿಟ್ಟು ಪಕೋಡಾ ತರಹ ಹಾಕಿ ಕರಿಯಿರಿ. ತುಂಬಾ ದಪ್ಪ ಮಿಶ್ರಣ ಹಾಕಿದರೆ ಒಳಗೆ ಹಿಟ್ಟು ಬೇಯುವುದಿಲ್ಲ, ಅದಕ್ಕೆ ತೆಳುವಾಗಿ ಹಾಕಿ. ಗೊಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವವರೆಗು ಕರಿದು, ಪೇಪರ್ ಟವಲ್ ಮೇಲೆ ಹಾಕಿ, ಹೆಚ್ಚುವರಿ ಎಣ್ಣೆ ಕಮ್ಮಿ ಆಗುತ್ತದೆ, ನಂತರ ತಿನ್ನಲು ನೀಡಿ. ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಊಟಕ್ಕೆ ನೆಂಚಿಕೊಳ್ಳಲು / ಕಾಫಿ ಹೊತ್ತಿಗೆ ಅಥವ ಯಾರಾದರೂ ಅತಿಥಿಗಳಿಗೆ ನೀಡಲು ತಕ್ಷಣ ತಯಾರಿಸಿಕೊಳ್ಳಬಹುದು. ಇದಕ್ಕೆ ಚಟ್ನಿಯ ಅವಶ್ಯಕತೆ ಇಲ್ಲ, ಬೇಕಾದರೆ ತಯಾರಿಸಿಕೊಳ್ಳಬಹುದು.

Sunday, October 11, 2009

Kadlepuri Churumuri - ಕಡ್ಲೆಪುರಿ ಚುರುಮುರಿ:

ಚುರುಮುರಿ /ಕಡ್ಲೆಪುರಿ ಚುರುಮುರಿ:

ಕಡ್ಲೆಪುರಿ ಚುರುಮುರಿಯನ್ನು ನಮ್ಮ ಅಜ್ಜಿ ತುಂಬಾ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಚುರುಮುರಿ ಮಾಡಿದರೆ ಮನೆಯೆಲ್ಲಾ ಘಂ ಎನ್ನುವ ವಾಸನೆ ಬರುತ್ತಿತ್ತು. ಅಷ್ಟು ರುಚಿಯಾಗಿ ಮಾಡುತ್ತಿದ್ದರು. ನಾವು ತಯಾರಿಸೋದು ಅದೇ ತರಹ ಇದ್ದರೂ ಸಹ ಅವರ ಕೈನಲ್ಲಿ ತಯಾರಿಸುತ್ತಿದ್ದ ರುಚಿಯೇ ಒಂಥರ ಚೆನ್ನ. ಅಜ್ಜಿ ಕೈರುಚಿ, ಅಮ್ಮನ ಕೈ ರುಚಿ ಅಂತಾರಲ್ಲ ಆಗೇ.ಈಗಲೂ ಅದೇ ಚುರುಮುರಿ ನೆನಪು ಬರುತ್ತದೆ. ಅದೆಷ್ಟು ಹದವಾಗಿ ತಯಾರಿಸುತ್ತಿದ್ದರು ಆಗಿನ ಕಾಲದಲ್ಲಿ. ತಯಾರಾದ ತಕ್ಷಣ ತಟ್ಟೆ ತುಂಬಾ ಹಾಕಿಕೊಂಡು ತಿನ್ನುವುದೇ ದೊಡ್ಡ ಕೆಲಸ ಆಗ. ಅದರ ಹಿಂದೆ ಎಷ್ಟು ಕೆಲಸ ಇರುತ್ತೆ ಅಂತ ಗೊತ್ತಾಗುತ್ತೆ ಈಗ. ಕಾರವಾಗಿದ್ದರಂತೂ ಇನ್ನು ಚೆಂದ. ಕಡ್ಲೆಪುರಿ ಚುರುಮುರಿಗೆ ಚಳಿ ಮತ್ತು ಮಳೆಗಾಲದಲ್ಲಿ ತುಂಬಾ ಡಿಮ್ಯಾಂಡ್. ಈಗಂತೂ ಹೇಗೇ ತಯಾರು ಮಾಡಿದರು ಅಜ್ಜಿ ಮಾಡುತ್ತಿದ್ದ ಚುರುಮುರಿ ಚೆನ್ನಾಗಿತ್ತೇನೋ ಎನಿಸುತ್ತೆ. ಓಕೆ ಈಗ ಇಲ್ಲಿ ನಾವು ಚುರುಮುರಿ ತಯಾರಿಸೋಣ.

ಬೇಕಾಗುವ ಸಾಮಾಗ್ರಿಗಳು:

ಕಡ್ಲೆಪುರಿ - 1 ಕೆಜಿ

ಕಡ್ಲೆಕಾಯಿಬೀಜ - 2 ಕಪ್

ಕಡ್ಲೆ-1 ಕಪ್

ಬೆಳ್ಳುಳ್ಳಿ - ಸಿಪ್ಪೆ ಸಮೇತ 1 ಹಿಡಿ

ಕೊಬ್ರಿ ಸಣ್ಣದಾಗಿ ಕತ್ತರಿಸಿದ್ದು - 1 ಕಪ್

ಕರಿಬೇವು ಸ್ವಲ್ಪ

ಅರಿಶಿಣ - 1/2 ಚಮಚ

ಅಚ್ಚಖಾರದ ಪುಡಿ - 1 ಟೀ ಚಮಚ ಅಥವ ರುಚಿಗೆ ತಕ್ಕಷ್ಟು

ಉಪ್ಪು ರುಚಿಗೆ

ಎಣ್ಣೆ 2ಟೇಬಲ್ ಚಮಚ

ಚಿಟಿಕೆ ಸಾಸಿವೆ

ತಯಾರಿಸುವ ವಿಧಾನ:

ದೊಡ್ಡದಾದ ಅಗಲವಿರುವ ಪಾತ್ರೆಯಲ್ಲಿ ಮೊದಲು ಎಣ್ಣೆಯನ್ನು ಹಾಕಿ,ಸಾಸಿವೆ ಹಾಕಿ ಸಣ್ಣ ಉರಿಯಲ್ಲಿಯೇ ಇರಲಿ, ಅದಕ್ಕೆ ಕಡ್ಲೆಕಾಯಿಬೀಜವನ್ನು ಹಾಕಿ ಅದನ್ನು ಸರಿಯಾಗಿ ಚೆನ್ನಾಗಿ ಹುರಿದುಕೊಳ್ಳಿ, ಬೆಳ್ಳುಳ್ಳಿ ಹಾಕಿ ಅದು ಸ್ವಲ್ಪ ನಸುಗೆಂಪು ಬಂದ ನಂತರ ಕೊಬ್ರಿಯನ್ನು ಹಾಕಿ ಅದು ತಿಳಿಕಂದು ಬಣ್ಣ ಬರುವವರೆಗೂ ಹುರಿದು, ತಕ್ಷಣವೇ ಕಡ್ಲೆಯನ್ನು ಹಾಕಿ ಹಾಗೆ ಸ್ವಲ್ಪ ಒಂದು ನಿಮಿಷ ಹುರಿದು, ಕರಿಬೇವು ಹಾಕಿ ಅದು ಗರಿಗರಿಯಾದ ಮೇಲೆ ಅರಿಶಿಣ, ಅಚ್ಚಖಾರದ ಪುಡಿ ಮತ್ತು ಉಪ್ಪು ಹಾಕಿ, ಚೆನ್ನಾಗಿ ಬೆರೆಸಿದ ನಂತರ ಕಡ್ಲೆಪುರಿಯನ್ನು ಹಾಕುತ್ತಾ ತಿರುಗಿಸುತ್ತಿರಿ. ಅದೇ ಸಣ್ಣ ಉರಿಯಲ್ಲಿಯೇ ಪುರಿಯನ್ನು ಚೆನ್ನಾಗಿ ಬೆರೆಸುತ್ತಾ ಇದ್ದರೆ ಮಸಾಲೆ ಸರಿಯಾಗಿ ಹೊಂದಿಕೊಳ್ಳುತ್ತದೆ ಹಾಗು ಪುರಿ ಕೂಡ ಗರಿಗರಿಯಾಗಿ ಆಗುತ್ತದೆ. ಉಪ್ಪು ಮತ್ತು ಖಾರ ನಿಮಗೆ ಸರಿ ಎನಿಸುವಷ್ಟು ಮತ್ತೆ ಸೇರಿಸಿಕೊಳ್ಳಬಹುದು ಈ ಸಮಯದಲ್ಲಿ. ಪುರಿ ಗರಿಗರಿಯಾದ ನಂತರ ಒಲೆ ಆರಿಸಿ, ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ. ಬೇಕಾದಾಗ ತಿನ್ನಬಹುದು ಅಥವಾ ಸಂಜೆ ಕಾಫಿಯೊಂದಿಗೆ ಸೊಗಸಾಗಿರುತ್ತದೆ.

ಟಿಪ್ಸ್:-* ಇನ್ನು ಹೆಚ್ಚಿನ ಕಡ್ಲೆಬೀಜವನ್ನು ಸೇರಿಸಿಕೊಳ್ಳಬಹುದು, ಹೆಚ್ಚು ಹಾಕಿದರೆ ಕೂಡ ಚೆನ್ನಾಗಿರುತ್ತದೆ.

*ಕಡ್ಲೆಬೀಜ, ಕೊಬ್ರಿ ಮತ್ತು ಬೆಳ್ಳುಳ್ಳಿ ಮೆತ್ತಗೆ ಹುರಿಯಬೇಡಿ ಅದು ಗರಿಗರಿಯಾಗಿ ಇರಬೇಕು, ಇಲ್ಲ ಅಂದರೆ ಪುರಿ ಕೂಡ ಬೇಗ ಮೆತ್ತಗೆ ಆಗುತ್ತದೆ.

Hesarukaalina chapati / Greengram paratha

ಹೆಸರುಕಾಳಿನ ಚಪಾತಿ:

ಹೆಸರುಕಾಳು - 1 ಕಪ್
ಗೋಧಿಹಿಟ್ಟು - 2 ಕಪ್
ಎಣ್ಣೆ ಬೇಕಾಗುವಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ - ಅರ್ಧ ಚಮಚ

ತಯಾರಿಸುವ ವಿಧಾನ:

ಮೊದಲು ಹೆಸರುಕಾಳನ್ನು 24 ಗಂಟೆ ನೆನೆಸಿಡಿ. ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಗೋಧಿಹಿಟ್ಟು,ಉಪ್ಪು ಮತ್ತು ಜೀರಿಗೆಪುಡಿಯೊಂದಿಗೆ ಚಪಾತಿ ಹಿಟ್ಟಿನಂತೆ ಕಲಸಿ, ಚಪಾತಿ ಮಾಡಿ ಬೇಯಿಸಿ.

ಚಟ್ನಿ ಅಥವಾ ಮಸ್ಸೊಪ್ಪು ಸಾರಿನೊಂದಿಗೆ ತಿನ್ನಲು ನೀಡಿ. ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ.

Bengalgram kootu -ಕಡ್ಲೆಬೇಳೆ ಕಾಳು /ಕಡಲೆಬೇಳೆ ತಾಳು:

ಕಡ್ಲೆಬೇಳೆ ಕಾಳು /ಕಡಲೆಬೇಳೆ ತಾಳು:

ಸಾಮಾಗ್ರಿಗಳು:

ಕಡ್ಲೆಬೇಳೆ - ಒಂದು ಬಟ್ಟಲು
ವಿವಿಧರೀತಿಯ ಹೆಚ್ಚಿದ ತರಕಾರಿಗಳು-ಕ್ಯಾರೆಟ್, ಆಲೂಗೆಡ್ಡೆ, ಪಡವಲಕಾಯಿ, ಹೂಕೋಸು, ಸೋರೆಕಾಯಿ, ಟಮೋಟೋ
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಒಂದು ಹಸಿಮೆಣಸಿನ ಕಾಯಿ ಮದ್ಯಕ್ಕೆ ಸೀಳಿದ್ದು
ಎಣ್ಣೆ, ಸಾಸಿವೆ, ಕರಿಬೇವು
ಅರಿಶಿಣದ ಪುಡಿ
ಧನಿಯಾಪುಡಿ
ಖಾರದಪುಡಿ
ಸಾಂಬಾರ್ ಪುಡಿ (ಸಾರಿನ ಪುಡಿ)
ಉಪ್ಪು
ತೆಂಗಿನತುರಿ ಬೇಕಾದರೆ
ಕೊತ್ತುಂಬರಿಸೊಪ್ಪು
ವಿಧಾನ:

ಕಡ್ಲೆಬೇಳೆಯನ್ನು,ಎಣ್ಣೆ ಒಂದು ಚಮಚ,ಸ್ವಲ್ಪ ಅರಿಶಿಣ ಹಾಕಿ,ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು(ಕಡ್ಲೆಬೇಳೆಯನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ತರಕಾರಿಗಳು,ಸಾರಿನಪುಡಿ,ಖಾರದಪುಡಿ,ಧನಿಯಾಪುಡಿ,ಉಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ,ಚೆನ್ನಾಗಿ ಬೆರೆಸಿ,ತರಕಾರಿಗಳು ಬೇಯುವವರೆಗೂ ಬೇಯಿಸಿಕೊಳ್ಳಿ.ಈ ಸಮಯದಲ್ಲಿ ಬೇಳೆ ಹದವಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಕುದಿಸಿ,ಇಳಿಸಿ. ಇದನ್ನು ಊಟಕ್ಕೆ ಅಥವಾ ಚಪಾತಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ. ಈ ಕಾಳು ಅಥವಾ ತಾಳನ್ನು ಹಬ್ಬದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.

* ಒಗ್ಗರಣೆ - ಎಣ್ಣೆಯನ್ನು ಬಿಸಿಮಾಡಿ, ಸಾಸಿವೆ, ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ.
*ಕುಕ್ಕರ್ ನಲ್ಲಿ ತಯಾರಿಸುವುದಾದರೆ ಬೇಳೆಯನ್ನು ಮೊದಲು 5-10 ನಿಮಿಷ ಬೇಯಿಸಿಕೊಂಡು, ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.

Hesarubele Kosumbari / Moongdal salad-ಹೆಸರುಬೇಳೆ ಕೋಸುಂಬರಿ:

ಹೆಸರುಬೇಳೆ ಕೋಸುಂಬರಿ:

ಸಾಮಾಗ್ರಿಗಳು:

ಹೆಸರುಬೇಳೆ - 1/4 ಕಪ್
ಸೌತೆಕಾಯಿ - ಒಂದು, ಸಣ್ಣಗೆ ಹೆಚ್ಚಿಕೊಳ್ಳಿ
ಎಣ್ಣೆ - ಒಂದು ಚಮಚ
ಸಾಸಿವೆ
ಹಸಿಮೆಣಸಿನಕಾಯಿ ರುಚಿಗೆ,ಹೆಚ್ಚಿಕೊಳ್ಳಿ
ಒಣಮೆಣಸಿನಕಾಯಿ ಒಂದೆರಡು
ಕರಿಬೇವಿನ ಸೊಪ್ಪು
ಕೊತ್ತುಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ತೆಂಗಿನತುರಿ
ಕ್ಯಾರೆಟ್ ತುರಿ (ಬೇಕಾದರೆ)

ತಯಾರಿಸುವ ವಿಧಾನ:

ಮೊದಲಿಗೆ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು,ಒಂದೆರಡು ಗಂಟೆ ನೆನೆಸಿಡಿ. ನಂತರ ಒಗ್ಗರಣೆ ಮಾಡಿಕೊಳ್ಳಿ, ಎಣ್ಣೆ ಕಾಯಿಸಿಕೊಂಡು ಅದು ಬಿಸಿಯಾದ ಮೇಲೆ ಸಾಸಿವೆ, ಮೆಣಸಿನಕಾಯಿಗಳು ಮತ್ತು ಕರಿಬೇವು ಹಾಕಿ ಒಂದು ನಿಮಿಷ ಹುರಿದು ತೆಗೆದಿಡಿ. ನೆನೆಸಿರುವ ಹೆಸರುಬೇಳೆಯನ್ನು ನೀರು ಇಲ್ಲದಂತೆ ಸೋಸಿಕೊಂಡು, ಅದಕ್ಕೆ ಈ ಒಗ್ಗರಣೆ, ಉಪ್ಪು,ಕೊತ್ತುಂಬರಿ, ಸೌತೆಕಾಯಿ ಮತ್ತು ತೆಂಗಿನತುರಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಕ್ಯಾರೆಟ್ ತುರಿ ಬೆರೆಸುವವರು ಅದನ್ನು ಬೆರೆಸಿ. ಇದನ್ನು ಯಾವ ಊಟಕ್ಕಾದರೂ ಸರ್ವ್ ಮಾಡಬಹುದು, ಯಾವಾಗ ಬೇಕಾದರೂ ತಿನ್ನಬಹುದು. ಹಸಿಯಾಗಿರುವುದರಿಂದ ಆರೋಗ್ಯಕ್ಕೂ ಹಿತಕರ.

Thursday, October 8, 2009

Raagi Halwa / Raagi kilasa - ರಾಗಿ ಹಲ್ವ / ರಾಗಿ ಕೀಲಸ

ರಾಗಿ ಹಲ್ವ / ರಾಗಿ ಕೀಲಸ


ಕೀಲಸ ಎಂಬ ಪದ ನಿಮಗೆಲ್ಲಾ ಅಥವ ಕೆಲವರಿಗೆ ಹೊಸದಾಗಿ ಎನಿಸುತ್ತಿರಬೇಕು ಅಲ್ಲವೇ? ಇದು ನನ್ನ ಅಜ್ಜಿಯ ಕಾಲದಲ್ಲಿ ಬಳಸುತ್ತಿದ್ದ ಪದ. ಈಗಲೂ ಕೆಲವು ಕಡೆ ರೂಢಿಯಲ್ಲಿದೆ. ನನ್ನ ಅಜ್ಜಿಯ ನೆನಪಿಗಾಗಿ ನಾನು ಅದೇ ಪದವನ್ನು ಬಳಸುತ್ತೇನೆ ಯಾವಾಗಲೂ, ನನ್ನ ಮಕ್ಕಳಿಗೂ ಕೂಡ ”ರಾಗಿ ಕೀಲಸ’ ಎಂದೇ ಹೇಳುತ್ತೇನೆ ಹೊರತು ರಾಗಿ ಹಲ್ವ ಅಂತ ಹೇಳಲ್ಲ. ಇಲ್ಲ ಅಂದರೆ ಹಳೆಯ ಕಾಲದ ಕೆಲವು ಅಪರೂಪದ ಪದಗಳು ನಮಗೆ ಗೊತ್ತಿಲ್ಲದೆ ಕಣ್ಮರೆಯಾಗುತ್ತವೆ. ಈಗೆಲ್ಲ ಸುಮಾರು ಪದಗಳು ಹೆಸರಿಲ್ಲದೆ ಕಣ್ಮರೆಯಾಗಿದೆ. ಕೆಲವರಂತೂ ಹಳೆಯ ಕಾಲದ ಸಾಂಪ್ರದಾಯಿಕ ಪದಗಳನ್ನು ಬಳಸಿದರೆ ಅಥವಾ ಹೇಳಿದರೆ ಮರ್ಯಾದೆ ಹೋಗುತ್ತೆ ಅನ್ನೋ ತರಹ ಆಡುತ್ತಾರೆ. ಆ ಪದಗಳನ್ನು ಉಪಯೋಗಿಸಿದರೆ ಎಲ್ಲಿ ಹಳ್ಳಿಗುಗ್ಗು ಅನ್ಕೋತಾರೋ ಅಂತ ಅಂಜುತ್ತಾರೆ. ಹಳೆ ಪದಗಳಲ್ಲಿ ಇರುವ ಸೊಗಡು ಈಗಿನ ಆಧುನಿಕ ಭಾಷೆಯಲ್ಲಿ ಎಲ್ಲಿದೆ ಅಲ್ಲವೇ? ಅದರಲ್ಲಿ ನಮ್ಮ ಹಿರಿಯರ ಭಾವನೆ, ಅದು ಬಳಸುತ್ತಿದ್ದ ರೀತಿ ಎಲ್ಲವೂ ಚೆನ್ನ. ಹಾಯ್, ಬಾಯ್ ಹೇಳುವ ಈ ಕಾಲವೆಲ್ಲಿ, ಆ ಕಾಲವೆಲ್ಲಿ. ಸಧ್ಯ ನಮ್ಮ ಕಾಲದಲ್ಲಿ ಅಷ್ಟಾದರೂ ಇನ್ನು ಹಳೆಯ ಕಂಪು ಇತ್ತಲ್ಲ, ಅದನ್ನು ನಾವು ತಿಳಿದಿದ್ದೇವಲ್ಲ ಅನ್ನುವುದೇ ಹೆಮ್ಮೆಯ ವಿಷಯವಾಗಿದೆ,ಅದಕ್ಕಾಗಿ ಸಂತೋಷ ಪಡಬೇಕು ಅಷ್ಟೇ . ನನಗಂತೂ ಈ ರಾಗಿಯ ಕೀಲಸವೆಂದರೆ ಅಚ್ಚುಮೆಚ್ಚು. ಇದನ್ನು ತಯಾರಿಸಲು ಯಾವಾಗಲೂ ನನ್ನ ಪ್ರೀತಿಯ ಅಜ್ಜಿಗೆ ನಾನು ಸದಾ ಕೇಳುತ್ತಿದ್ದೆ, ಅನ್ನುವುದಕ್ಕಿಂತ ಕೀಲಸ ಮಾಡಿಕೊಡು ಅಂತ ಕಾಟ ಮಾಡುತ್ತಿದ್ದೆ ಅನ್ನುವ ಪದವೇ ಸೂಕ್ತ ಎನಿಸುತ್ತೆ. ಆಗ ಅಜ್ಜಿ ತಯಾರಿಸುತ್ತಿದ್ದ ರೀತೀಯೇ ಬೇರೆ. ಅವರು ಒಳ್ಳೆಯ ಆರಿಸಿದ ರಾಗಿಯನ್ನು ತೊಳೆದು, ಜಾಲಿಸಿ, ನೆನೆಹಾಕಿ, ಅದನ್ನು ಒರಳು ಕಲ್ಲಿನಲ್ಲಿ ರುಬ್ಬುತ್ತಿದ್ದರು, ಅಷ್ಟು ನುಣ್ಣಗೆ ರಾಗಿಯನ್ನು ರುಬ್ಬಿ, ಒಳ್ಳೆಯ ಬಿಳಿ ಮಲ್ ಪಂಚೆಯಲ್ಲಿ ಸೋಸಿ,ಸೋಸಿ ರಾಗಿಹಾಲನ್ನು ತೆಗೆದು, ಅದನ್ನು ಪಾತ್ರೆಗೆ ಹಾಕಿ , ಬೇಯಿಸಿ ತೆಗೆಯುತ್ತಿದ್ದರು. ರುಬ್ಬುವುದು ಮತ್ತು ಸೋಸುವುದು ಎರಡು ಕಷ್ಟದ ಕೆಲಸ. ಆ ರೀತೀ ತಯಾರಿಸಿದ ನಮ್ಮ ಅಜ್ಜಿ ಮಾಡುತ್ತಿದ್ದ ಆ ಕೀಲಸಕ್ಕೂ , ಈಗಿನ ನಮ್ಮ ಕೀಲಸಕ್ಕೂ ತುಂಬಾನೇ ವ್ಯತ್ಯಾಸ. ಒರಳಲ್ಲಿ ರುಬ್ಬಿದರೆ ರುಚಿ ಹೆಚ್ಚು. ನಮಗೆ ಆಗ ಅಷ್ಟು ಕಷ್ಟ ಅಂತ ಗೊತ್ತಾಗುತ್ತಿರಲಿಲ್ಲ. ಕೇಳುತ್ತಿದ್ದೆವು. ಅವರು ಸಹ ಇಲ್ಲ ಅನ್ನದೇ ಮಾಡಿಕೊಡುತ್ತಿದ್ದರು. ಈಗ ನಮ್ಮ ಕಾಲದಲ್ಲಿ ನಾವು ಅಡುಗೆಗಳನ್ನು ಮಾಡುವಾಗ ತಿಳಿಯುತ್ತದೆ. ಆಗ ನಮ್ಮ ಅಜ್ಜಿ ಎಷ್ಟು ಕಷ್ಟಪಟ್ಟು ಮಾಡಿಕೊಡುತ್ತಿದ್ದರು ಅಂತ. ಈಗ ನಾವು ತಯಾರಿಸೋದೆಲ್ಲ ಒಂಥರ ಇನ್ ಸ್ಟಂಟ್ ಆಗಿರಬೇಕು. ಕಷ್ಟ ಆಗಿರಬಾರದು. ಎಷ್ಟು ವ್ಯತ್ಯಾಸ ಅಲ್ಲವೇ? ಈಗ ನಾವುಗಳು ಏನೇ ಮಿಕ್ಸಿ /ಫುಡ್ ಪ್ರೊಸೆಸರ್ / ಬ್ಲೆಂಡರ್ / ಮಿಕ್ಸರ್ / ಬೀಟರ್ ಅಂತ ಯಾವ್ಯಾವುದೋ ಅಂಗಡಿಗೆ ಬಂದಿದ್ದೆಲ್ಲಾ ತಂದು ಉಪಯೋಗಿಸುತ್ತಾ,ಪ್ರದರ್ಶನಕ್ಕೆ ಇಟ್ಟು ಸಮಯ ಉಳಿಸುತ್ತೇವೆ ಅಂತ ಅನ್ಕೊತೀವಿ. ಬೊಜ್ಜು ಕರಗಿಸಲು ಎಷ್ಟು ಸಮಯ ಹಾಳು ಮಾಡುತ್ತೀವಿ ಅಂತ ಯೋಚಿಸೋದೇ ಇಲ್ಲ. ಅವುಗಳಿಗೂ ಅಷ್ಟೇ ಸಮಯ ತಗೊಳ್ಳುತ್ತೆ ಗೊತ್ತಾಗಲ್ಲ ಅಷ್ಟೇ. ಬರೀ ಸ್ವಿಚ್ ಹಾಕಿದರೆ ಎಷ್ಟು ಸುಲಭ ಅನ್ಕೋತೀವಿ, ಆದರೆ ಅದರ ಹಿಂದೆ ಮಾಡಿಕೊಳ್ಳು ಪ್ರಿಪರೇಶನ್ (ತಯಾರಿಕೆ)ಗೆ ಕೊಟ್ಟ ಸಮಯದ ಅರಿವು ಇರೋದಿಲ್ಲ. ಆಗಿನ ಕಾಲದಲ್ಲಿ ಅವರಿಗೆ ಅದೆಲ್ಲಾ ಮನೆಕೆಲಸದ ಜೊತೆ ರುಬ್ಬುವುದು,ಕುಟ್ಟುವುದು, ನಿಗಾವಹಿಸಿ ಅಡುಗೆ ಮಾಡುವುದು, ಇದೇ ಅವರಿಗೆ ವ್ಯಾಯಾಮವಾಗುತ್ತಿತ್ತು. ನಮ್ಮ ಅಜ್ಜಿ ಒಳ್ಳೆಯ ಕೆಂಪನೆಯ ರಾಗಿಯಲ್ಲಿ ,ರುಬ್ಬಿ,ಸೋಸಿ ತಯಾರಿಸುತ್ತಿದ್ದ ರಾಗಿ ಕೀಲಸಕ್ಕೆ ಸಮನಾಗಿ ಅಲ್ಲದಿದ್ದರು, ಈಗಿನ ನಮ್ಮ ಪ್ರಕಾರಕ್ಕೆ ಈ ಹಲ್ವವನ್ನು ನಾನು ತಯಾರಿಸುತ್ತಿರುತ್ತೇನೆ. ಅಜ್ಜಿ ಮಾಡುತ್ತಿದ್ದ ಕೀಲಸದ ಮುಂದೆ ಇದೇನು ಅಲ್ಲ. ಆ ರೀತಿಯ ಒಳ್ಳೆಯ ರುಚಿಯಾದ ಆಹಾರವನ್ನು ನಾವು ತಿಂದು ಬೆಳೆದಿದೀವಲ್ಲಾ ಅನ್ನುವುದೇ ಖುಷಿಯ ಸಂಗತಿ, ಆಗಾಗಿ ಇದನ್ನೆಲ್ಲಾ ಬರೆದಿರುವೆ.
ಇದೇನಪ್ಪಾ ತಯಾರಿಸುವ ರೀತಿಗಿಂತ ಪೀಠಿಕೆಯೇ ದೊಡ್ಡದಾಗಿದೆ ಅನ್ಕೋತೀರಾ!! ಆಶ್ಚರ್ಯವಿಲ್ಲ! ಏಕೆಂದರೆ ಆಗ ಹೇಗೆ ತಯಾರಿಸುತ್ತಿದ್ದರೆಂದು ತಿಳಿಯವುದಕ್ಕೋಸ್ಕರ ಬರೆದಿರುವೆ.ಅಷ್ಟೊಂದು ಕಷ್ಟಪಟ್ಟು ಅಡಿಗೆ ಮಾಡಿಕೊಡುತ್ತಿದ್ದ ನನ್ನ ಅಜ್ಜಿಗೆ ಇದರಿಂದಲಾದರೂ ಒಂದು ಕೃತಘ್ನತೆಯನ್ನು,ಧನ್ಯವಾದವನ್ನು ತಿಳಿಸೋಣ ಅಂತ ಬರೆದಿರುವೆ. ಕೆಲವರಿಗೆ ಕೀಲಸ ಅನ್ನುವ ಪದ ಗೊತ್ತಿರುವುದಿಲ್ಲ ಅದಕ್ಕಾಗಿ ಇಲ್ಲಿ ರಾಗಿ ಹಲ್ವ ಅಂತ ಕೂಡ ತಿಳಿಸಿರುವೆ.

ಬೇಕಾಗುವ ಸಾಮಾಗ್ರಿಗಳು:


ರಾಗಿ -ಒಂದು ಕಪ್
ಹಾಲು - ಒಂದು ಕಪ್
ಸಕ್ಕರೆ ಅಥವಾ ಬೆಲ್ಲ ರುಚಿಗೆ ತಕ್ಕಷ್ಟು
ಒಂದೆರಡು ಚಮಚ ತುಪ್ಪ
ಏಲಕ್ಕಿ ಪುಡಿ
ಗಸಗಸೆ ಮತ್ತು ಕೊಬ್ರಿ (ಬೇಕಾದರೆ - ಅಲಂಕರಿಸಲು)
ಗೋಡಂಬಿ ಸ್ವಲ್ಪ( ಬೇಕಾದರೆ)

ತಯಾರಿಸುವ ವಿಧಾನ:

ರಾಗಿಯನ್ನು ಹಿಂದಿನ ದಿನ ರಾತ್ರಿಯೇ ನೀರಿನಲ್ಲಿ ಚೆನ್ನಾಗಿ ತೊಳೆದು, ನೆನೆಸಿಡಿ, ಮಾರನೇ ದಿನ ಅದನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಸೋಸಿಕೊಂಡು, ಸೋಸಿದಾಗ ಬರುವಂತ ರಾಗಿ ಪುಡಿಗೆ ಮತ್ತೆ ನೀರು ಸೇರಿಸಿ ರುಬ್ಬಿ, ಸೋಸಿಕೊಳ್ಳಿ. ರಾಗಿಯ ಹಾಲು ಬರುವವರೆಗು ಹೀಗೆ ಒಂದೆರಡು ಬಾರಿ ರುಬ್ಬಿ.ಸೋಸಿಕೊಳ್ಳಿ. ರಾಗಿಯ ಹಾಲು ಗಟ್ಟಿಯಾಗಿ ತೆಗೆದುಕೊಂಡ ನಂತರ ಅದರ ತಿರುಳನ್ನು ಬಿಸಾಕಿ, ತೆಗೆದ ಹಾಲಿಗೆ,ಬೆಲ್ಲ ಮತ್ತು ಹಸಿಹಾಲು ಹಾಕಿ ಒಲೆಯ ಮೇಲೆ ದಪ್ಪ ತಳದ ಪಾತ್ರೆಗೆ ಹಾಕಿ ಕುದಿಯಲು ಇಟ್ಟು, ಅದನ್ನು ಕೈ ಬಿಡದೆ ತಿರುಗಿಸುತ್ತಿರಿ,ಕೈಗೆ ಸಿಡಿಯುತ್ತದೆ ಹುಷಾರಾಗಿರಿ,ಸ್ವಲ್ಪ ಉದ್ದವಿರುವ ಸೌಟ್ ತೆಗೆದುಕೊಳ್ಳಿ ತಿರುವಲು. ಇದನ್ನು ಚೆನ್ನಾಗಿ ಬೇಯಿಸಬೇಕು. ನೋಡು ನೋಡುತ್ತಿದ್ದಂತೆ ಬೇಗ ಗಟ್ಟಿಯಾಗುತ್ತದೆ. ಹಾಗೂ ಬೇಗ ತಳ ಹಿಡಿಯುತ್ತದೆ ಸಹ. ಆಗಾಗಿ ಮೊದಲೆ ಒಂದು ತಟ್ಟೆಗೆ ತುಪ್ಪ ಸವರಿಟ್ಟು ಕೊಂಡಿರಿ. ತಿರುವುತ್ತಿರುವಾಗಲೇ ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ, ಈ ಮಿಶ್ರಣವು ಹಲ್ವದ ಹದಕ್ಕೆ ಬಂದ ತಕ್ಷಣ ಜಿಡ್ಡು ಸವರಿದ ತಟ್ಟೆಗೆ ಸುರಿದು,ಮೇಲೆ ಗಸಗಸೆ,ಕೊಬ್ಬರಿತುರಿ ಮತ್ತು ಗೋಡಂಬಿಯಿಂದ ಅಲಂಕರಿಸಿ. ನಿಮಗೆ ಯಾವ ರೀತಿ ಬೇಕೋ ಆ ತರಹ ಕತ್ತರಿಸಿ, ಅಲಂಕರಿಸಿ. ತಿನ್ನಲು ರುಚಿಯಾದ ಮತ್ತು ತಂಪಾದ ರಾಗಿಯ ಹಲ್ವ ತಯಾರ್. ಇದನ್ನು ಸ್ವಲ್ಪ ತಣ್ಣಗಾದ ಮೇಲೆ ತಿನ್ನಬೇಕು. ರಾತ್ರಿ ಕೀಲಸ ತಯಾರಿಸಿಟ್ಟು ಬೆಳಗ್ಗೆ ತಿಂದರೆ ಇನ್ನೂ ಚೆನ್ನಾಗಿರುತ್ತದೆ. ಆರೋಗ್ಯಕರವಾದ,ಪೌಷ್ಠಿಕಾಂಶಗಳಿರುವ ಅನಾರೋಗ್ಯಕ್ಕೆ ರಾಮಬಾಣವಾದ ರಾಗಿಯಲ್ಲಿ ತಯಾರಿಸಿದ ರಾಗಿಯ ಕೀಲಸ ಅಥವ ರಾಗಿಯ ಹಲ್ವ ಸಿದ್ಧವಾಗುತ್ತದೆ.

* ರಾಗಿಯ ಹಿಟ್ಟಿನಲ್ಲೂ ತಯಾರಿಸಬಹುದು, ಆದರೆ ಅದು ರಾಗಿಯನ್ನು ರುಬ್ಬಿ ತಯಾರಿಸಿದಷ್ಟು ರುಚಿಯಿರುವುದಿಲ್ಲ.
* ರಾಗಿಯ ಹಾಲನ್ನು ತೆಗೆದಿಟ್ಟುಕೊಂಡರೆ ನಂತರದ ಕೆಲಸ ಸುಲಭ.
* ಬೆಲ್ಲವನ್ನು ಹಾಕಿದರೆ ಹೆಚ್ಚು ರುಚಿಯಾಗಿರುತ್ತದೆ.
* ಗಸಗಸೆಯನ್ನು ತಿರುವುತ್ತಿರುವಾಗಲೂ ಕೂಡ ಸೇರಿಸಬಹುದು.
* ರೆಫ್ರಿಜರೇಟರ್ ನಲ್ಲಿ ಇಟ್ಟರೆ ಮೂರರಿಂದ ನಾಲ್ಕು ದಿನ ಚೆನ್ನಾಗಿ ಇರುತ್ತದೆ. ಆಚೆ ಕಡೆ ಒಂದು ದಿನ ಮಾತ್ರ ಚೆನ್ನಾಗಿರುತ್ತದೆ.

Popular Posts