ಕಡ್ಲೆಕಾಳು ಹುಳಿ / Sprouted Channa Masala Curry


ಕಡ್ಲೆಕಾಳಿನ ಮಸಾಲೆ ಸಾರು/ ಕಡ್ಲೆಕಾಳು ಹುಳಿ:

ಬೇಕಾಗುವ ಸಾಮಗ್ರಿಗಳು:

ಕಪ್ಪು / ಕೆಂಪು ಕಡಲೆಕಾಳು- ಒಂದು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ (ಬೇಕಾದರೆ- ಆಲೂಗೆಡ್ಡೆ,ಬದನೆಕಾಯಿ,ಹೂಕೋಸು)
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕಡಲೆಕಾಳನ್ನು ಚೆನ್ನಾಗಿ ತೊಳೆದು,ಹಿಂದಿನ ರಾತ್ರಿ ನೆನೆಸಿ,ಮಾರನೆ ದಿನ ಮತ್ತೆ ಚೆನ್ನಾಗಿ ತೊಳೆದು ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಅಥವ ಜಾಲರಿಗೆ ಹಾಕಿ ಮುಚ್ಚಿಟ್ಟರೆ ಸಹ ಮೊಳಕೆ ಬರುತ್ತದೆ. ನಮ್ಮ ಅಜ್ಜಿ,ಅಮ್ಮ ಮಾಡುತ್ತಿದ್ದ ತರಹ ಒಂದು ಕಾಟನ್ ಬಟ್ಟೆಯಲ್ಲಿ ಕಾಳನ್ನು ಹಾಕಿ ಗಂಟು ಕಟ್ಟಿ ಇಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ). ಈಗ ಮೊಳಕೆ/ಮೊಳೆತ ಕಾಳು ರೆಡಿ.
*ಮೊಳಕೆ ಕಾಳು,ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.

ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ.ಕಡ್ಲೆಕಾಳು ಹುಳಿ ತಯಾರಾಗುತ್ತದೆ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಜೀರಾ ರೈಸ್ ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.
* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ. ಮಕ್ಕಳಿಗೆ ಈ ಕಡ್ಲೆಕಾಳು ಸಾರು ತುಂಬಾ ಇಷ್ಟವಾಗುತ್ತದೆ.

0 comments:

Popular Posts

 
  • Adige Recipes-ಅಡಿಗೆ ಸವಿರುಚಿ © 2012 | Designed by Designer Link, in collaboration with Web Hosting , Blogger Templates and WP Themes