Friday, December 21, 2007

Bassaru /ಸೊಪ್ಪಿನ ಬಸ್ಸಾರು ಮತ್ತು ಸೊಪ್ಪಿನ ಪಲ್ಯ


ಬಸ್ಸಾರು ಮತ್ತು ಸೊಪ್ಪಿನ ಪಲ್ಯ:

ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ತೊಗರಿಬೇಳೆ - ಒಂದು ಕಪ್
ಸಬ್ಬಸ್ಸಿಗೆ ಸೊಪ್ಪು/ಬೆರೆಕೆಸೊಪ್ಪು/ದಂಟಿನಸೊಪ್ಪು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಶಿಣ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಎಣ್ಣೆ
ತಯಾರಿಸುವವಿಧಾನ:
ಮೊದಲು ಸೊಪ್ಪನ್ನು ಚೆನ್ನಾಗಿ ಬಿಡಿಸಿಕೊಂಡು, ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ತೊಗರೆಬೇಳೆಯನ್ನು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಬೇಳೆ ಬೇಯಲು ಬಿಡಿ.ಬೇಳೆಯನ್ನು ತುಂಬಾ ನುಣ್ಣಗೆ ಬೇಯಿಸಬೇಡಿ, ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ಸೊಪ್ಪು ಬೇಯುವವರೆಗೂ ಬೇಯಿಸಿ, ಬೇಳೆ ಕರಗದಂತೆ ಬೇಯಿಸಿಕೊಳ್ಳಿ. ನಂತರ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು,ಸೊಪ್ಪಿನ ಕಟ್ಟು ಮತ್ತು ಸೊಪ್ಪನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.
ಸಾರಿಗೆ ರುಬ್ಬಿಕೊಳ್ಳಲು:
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
ಸಾರಿನ ಒಗ್ಗರಣೆಗೆ-
ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಸೊಪ್ಪಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಬಸ್ಸಾರು ತಯಾರು.
ಈಗ ಸೊಪ್ಪಿನ ಪಲ್ಯಕ್ಕೆ:
ಒಗ್ಗರಣೆಗೆ -
ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಅದನ್ನು ಹುರಿದುಕೊಂಡ ನಂತರ ಸೊಪ್ಪುಬೇಳೆ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಸೊಪ್ಪಿನ ಪಲ್ಯ ತಯಾರು.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ, ಕುದಿಸಿ, ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
*ಸೊಪ್ಪಿನ ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು, ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
*ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು, ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
*ಸೊಪ್ಪಿನಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
*ಈ ರೀತಿಯ ಸೊಪ್ಪಿನ ಬಸ್ಸಾರು, ಪಲ್ಯ ಮತ್ತು ರಾಗಿಮುದ್ದೆ ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ರೋಗಕ್ಕೆ ರಾಮಬಾಣ ರಾಗಿಮುದ್ದೆ.

Chick Peas Sabji - ಕಡ್ಲೆಕಾಳು ಉಸಲಿ:

ಕಡ್ಲೆಕಾಳು ಉಸಲಿ:

ಸಾಮಗ್ರಿಗಳು:

ಕಡ್ಲೆಕಾಳು - ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಒಂದು ಟೀ ಬ್ಯಾಗ್
ಎಣ್ಣೆ, ಸಾಸಿವೆ
ಕರಿಬೇವು
ಚಿಟಿಕೆ ಇಂಗು
ಹುಣಸೇಹುಳಿ ರಸ/ನಿಂಬೆರಸ-ಕಾಲು ಚಮಚ
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ

ವಿಧಾನ:

ಹಿಂದಿನ ದಿನ ರಾತ್ರಿ ಕಡ್ಲೆಕಾಳನ್ನು ಚೆನ್ನಾಗಿ ತೊಳೆದು,ನೀರು ಹಾಕಿ ನೆನೆಸಿಡಿ. ಬೆಳಗ್ಗೆ ಮತ್ತೆ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಒಂದು ಟೀ ಬ್ಯಾಗ್,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಚಿಟಿಕೆ ಇಂಗು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ ,ಬೇಯಿಸಿರುವ ಕಡ್ಲೆಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಇದನ್ನು ಸಂಜೆ ಕಾಫಿಯೊಂದಿಗೆ ಸ್ನಾಕ್ ತರಹ ಸರ್ವ್ ಮಾಡಿ. ಈ ಕಡ್ಲೆಕಾಳು ಉಸಲಿಯನ್ನು ಸರ್ವ್ ಮಾಡುವಾಗ ಸ್ವಲ್ಪ ಕತ್ತರಿಸಿದ ಹಸಿ ಈರುಳ್ಳಿಯನ್ನು ಮೇಲೆ ಹಾಕಿ ಕೊಡಿ.
*ನಿಂಬೆರಸ ಹಾಕುವುದಾದರೆ ಕೊನೆಯಲ್ಲಿ ಬೆರೆಸಿ / ಹುಣಸೇರಸ ಹಾಕುವುದಾದರೆ ಒಗ್ಗರಣೆಯಲ್ಲಿ ಹಾಕಿ.

Wednesday, December 19, 2007

Cabbage-Bengalgram kurma-ಎಲೆಕೋಸು ಕಡ್ಲೆಬೇಳೆ ಕೂಟು:


ಎಲೆಕೋಸು ಕಡ್ಲೆಬೇಳೆ ಕೂಟು:

ಸಾಮಾಗ್ರಿಗಳು:
ಕಡ್ಲೆಬೇಳೆ - ಒಂದು ಬಟ್ಟಲು
ಹೆಚ್ಚಿದ ಎಲೆಕೋಸು - ಒಂದು ಬಟ್ಟಲು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಒಂದು ಹಸಿಮೆಣಸಿನ ಕಾಯಿ ಮದ್ಯಕ್ಕೆ ಸೀಳಿದ್ದು
ಎಣ್ಣೆ, ಸಾಸಿವೆ, ಕರಿಬೇವು
ಚೆಕ್ಕೆ,ಲವಂಗ
ಅರಿಶಿಣದ ಪುಡಿ
ಧನಿಯಾಪುಡಿ
ಖಾರದಪುಡಿ
ಸಾಂಬಾರ್ ಪುಡಿ (ಸಾರಿನ ಪುಡಿ)
ಉಪ್ಪು
ತೆಂಗಿನತುರಿ ಬೇಕಾದರೆ
ಕೊತ್ತುಂಬರಿಸೊಪ್ಪು

ವಿಧಾನ:

ಕಡ್ಲೆಬೇಳೆಯನ್ನು,ಎಣ್ಣೆ ಒಂದು ಚಮಚ,ಸ್ವಲ್ಪ ಅರಿಶಿಣ ಹಾಕಿ,ನೀರು ಹಾಕಿ ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು,(ಕಡ್ಲೆಬೇಳೆಯನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ಎಲೆಕೋಸು,ಸಾರಿನಪುಡಿ,ಖಾರದಪುಡಿ,ಧನಿಯಾಪುಡಿ,ಉಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ, ಚೆನ್ನಾಗಿ ಬೆರೆಸಿ, ಎಲೆಕೋಸು ಬೇಯುವವರೆಗೂ ಬೇಯಿಸಿಕೊಳ್ಳಿ.ಕೋಸು ಬೇಗ ಬೇಯುವುದು.ಈ ಸಮಯದಲ್ಲಿ ಬೇಳೆ ಹದವಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಕುದಿಸಿ,ಇಳಿಸಿ. ಇದನ್ನು ಊಟಕ್ಕೆ ಅಥವಾ ಚಪಾತಿ,ರೊಟ್ಟಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ.

* ಒಗ್ಗರಣೆ - ಎಣ್ಣೆಯನ್ನು ಬಿಸಿಮಾಡಿ,ಸಾಸಿವೆ,ಚೆಕ್ಕೆ,ಲವಂಗ,ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ.

*ಕುಕ್ಕರ್ ನಲ್ಲಿ ತಯಾರಿಸುವುದಾದರೆ ಬೇಳೆಯನ್ನು ಮೊದಲು 5-10 ನಿಮಿಷ ಬೇಯಿಸಿಕೊಂಡು, ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.ಒಗ್ಗರಣೆ ಬೆರೆಸಿ,ಸರಿಯಾಗಿ ಕಲೆಸಿ,ಕಡ್ಲೆಬೇಳೆ ಎಲೆಕೋಸುಕೂಟು ರೆಡಿಯಾಗುತ್ತದೆ.

Thursday, December 13, 2007

ಚಟ್ನಿಪುಡಿ


ಚಟ್ನಿಪುಡಿ:

ಸಾಮಗ್ರಿಗಳು:

ಉದ್ದಿನಬೇಳೆ - ಒಂದು ಬಟ್ಟಲು
ಕಡಲೆಬೇಳೆ - ಒಂದು ಬಟ್ಟಲು
ಒಣ
ಒಣಕೊಬ್ಬರಿ ತುರಿ - ಒಂದು ಕಪ್
ಹುಣಸೇಹಣ್ಣು ಸ್ವಲ್ಪ ಹುಳಿಗೆ
ಬೆಲ್ಲ ಸ್ವಲ್ಪ
ಜೀರಿಗೆ
ಕರಿಬೇವು
ಉಪ್ಪು

ವಿಧಾನ:

ಉದ್ದಿನಬೇಳೆ ಮತ್ತು ಕಡಲೆಬೇಳೆಯನ್ನು ಸ್ವಲ್ಪ ಕೆಂಪಾಗುವವರೆಗೆ, ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಮೆಣಸಿನಕಾಯಿ,ಕರಿಬೇವು,ಹುಣಸೇಹಣ್ಣು ಎಲ್ಲವನ್ನು ಹುರಿದುಕೊಂಡು, ಕೊಬ್ಬರಿಯನ್ನು ಕೂಡ ಸ್ವಲ್ಪ ಹುರಿದು, ಹುರಿದಿಟ್ಟ ಎಲ್ಲಾ ಸಾಮನುಗಳನ್ನು ಸೇರಿಸಿ ಅದರ ಜೊತೆ ಬೆಲ್ಲ ಮತ್ತು ಉಪ್ಪು ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.
ಒಣ
ಮೆಣಸಿನಕಾಯಿ - ರುಚಿಗೆ

Wednesday, December 12, 2007

ಪುದೀನ ಸೊಪ್ಪಿನ ಚಟ್ನಿ/ಗೊಜ್ಜು / Mint chutney

ಸಾಮಗ್ರಿಗಳು:

ಪುದೀನಸೊಪ್ಪು - ಒಂದು ಕಟ್ಟು
ಕೊತ್ತುಂಬರಿಸೊಪ್ಪು ಸ್ವಲ್ಪ
ಒಣಮೆಣಸಿನಕಾಯಿಗಳು ರುಚಿಗೆ
ಎಣ್ಣೆ, ಸಾಸಿವೆ, ಜೀರಿಗೆ
ಕಡ್ಲೆಬೇಳೆ, ಉದ್ದಿನಬೇಳೆ
ಹುಣಸೆ ಹಣ್ಣು - ಒಂದಿಂಚು ಚೂರು
ಉಪ್ಪು ರುಚಿಗೆ
ನಿಂಬೆರಸ ಸ್ವಲ್ಪ

ವಿಧಾನ:
ಮೊದಲು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಒಣಮೆಣಸಿನಕಾಯಿ ಮತ್ತು ಹುಣಸೆಹಣ್ಣನ್ನು ಎಲ್ಲವನ್ನು ಒಂದೊಂದಾಗಿ ಹಾಕಿ,ಹುರಿದಿಟ್ಟುಕೊಂಡು ತೆಗೆದಿಡಿ. ಅದೇ ಬಾಣಲೆಗೆ ಪುದೀನ ಸೊಪ್ಪನ್ನು ಹಾಕಿ ಹುರಿದುಕೊಳ್ಳಿ.ನಂತರ ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬ ಬೇಕು ಅಂತೇನು ಇಲ್ಲ. ಸ್ವಲ್ಪ ತರಿತರಿಯಾಗಿ ರುಬ್ಬಿಕೊಂಡರೆ ಸಾಕು,ಇದು ಅನ್ನ/ಚಪಾತಿ/ಪೂರಿ ಎಲ್ಲಕ್ಕು ಚೆನ್ನಾಗಿರುತ್ತದೆ.

Tuesday, December 11, 2007

Roasted Gram salad / ಹುರಿಗಡಲೆ ಕೋಸುಂಬರಿ

ಹುರಿಗಡಲೆ ಕೋಸುಂಬರಿ,:

ಹುರಿಗಡಲೆ/ಕಡ್ಲೆ/ಪುಟಾಣಿ
ಈರುಳ್ಳಿ
ಕ್ಯಾರೆಟ್ ತುರಿ
ಕಾಯಿತುರಿ
ಕಾರದ ಪುಡಿ
ಕೊತ್ತುಂಬರಿಸೊಪ್ಪು
ಉಪ್ಪು

ವಿಧಾನ:
ಸಣ್ಣಗೆ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಕೊತ್ತುಂಬರಿಸೊಪ್ಪು, ಉಪ್ಪು ಮತ್ತು ಕಾರದ ಪುಡಿ, ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ಹುರಿಗಡಲೆ ಸೇರಿಸಿ ಎಲ್ಲವನ್ನು ಚೆನ್ನಾಗಿ ಬೆರೆಸಿ. ಇದು ದಿಡೀರ್ ತಯಾರಿಸುವ ಕೋಸುಂಬರಿ,ತಯಾರಿಸುವುದು ಸುಲಭ,ವೇಳೆ ಕೂಡ ಜಾಸ್ತಿ ತೆಗೆದುಕೊಳ್ಳುವುದಿಲ್ಲ.

*ಹುರಿಗಡಲೆ ಬಿಟ್ಟು ಎಲ್ಲ ಪದಾರ್ಥಗಳನ್ನು ಮೊದಲೇ ಬೆರೆಸಿಟ್ಟು ಕೊಂಡಿದ್ದು, ಬಡಿಸುವಾಗ ಹುರಿಗಡಲೆ ಸೇರಿಸಿ. ಮೊದಲೆ ಸೇರಿಸಿದರೆ ಕಡ್ಲೆ ಮೆತ್ತಗೆ ಆಗುತ್ತದೆ.

Monday, December 10, 2007

Bell Pepper bajji - ಮೆಣಸಿನಕಾಯಿ ಬಜ್ಜಿ:

ಮೆಣಸಿನಕಾಯಿ ಬಜ್ಜಿ:

ಮೆಣಸಿನಕಾಯಿಗಳಲ್ಲಿ ಹಲವು ವಿಧ. ಅದರಲ್ಲಿ ತುಂಬಾ ಖಾರ ಇರುತ್ತವೆ ಕೆಲವು. ಬಜ್ಜಿ ಮೆಣಸಿನಕಾಯಿಗಳನ್ನು ಮಾತ್ರ ತನ್ನಿ.

ಬೇಕಾಗುವ ಸಾಮಗ್ರಿಗಳು:

ದಪ್ಪ/ದೊಣ್ಣೆ ಮೆಣಸಿನ ಕಾಯಿ
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಓಮಕಾಳು - ಕಾಲು ಚಮಚ
ಚಿಟಿಕೆ ಸೋಡ
ಅಚ್ಚಖಾರದ ಪುಡಿ
ಉಪ್ಪು
ಕಾದ ಎಣ್ಣೆ - ಒಂದು ಚಮಚ
ಕಲೆಸಲು ಬೇಕಾಗುವಷ್ಟು ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:
* ದಪ್ಪಮೆಣಸಿನಕಾಯಿಗಳನ್ನು ಮಧ್ಯಕ್ಕೆ ಸೀಳಿ ಅಥವಾ ತುದಿಯನ್ನು ಕತ್ತರಿಸಿ. ಅದರೊಳಗೆ ಇರುವ ಬೀಜಗಳನ್ನು ತೆಗೆಯಿರಿ. ಉದ್ದಕ್ಕೆ ಕತ್ತರಿಸಿ. ನಾಲ್ಕು ಭಾಗ ಮಾಡಿ.
ಕಡ್ಲೆಹಿಟ್ಟು,ಅಕ್ಕಿಹಿಟ್ಟು,ಓಮಕಾಳು,ಉಪ್ಪು,ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ,ಅದಕ್ಕೆ ಕಾದಿರುವ ಎಣ್ಣೆ ಹಾಕಿ,ಜೊತೆಯಲ್ಲಿ ನೀರು ಹಾಕಿ,ಕಲೆಸಿಕೊಳ್ಳಿ,ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ,ಹೆಚ್ಚಿರುವ ಮೆಣಸಿನಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ,ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಮೆಣಸಿನಕಾಯಿ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಬೇಕಾದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು.
ಊಟದೊಂದಿಗೆ ನೆಂಚಿಕೊಳ್ಳಲು /ಕಾಫಿ,ಟೀ ಜೊತೆಗೆ ಒಳ್ಳೆಯ ಕಾಂಬಿನೇಷನ್.
* ಒಂದೊಂದು ಮೆಣಸಿನಕಾಯಿ ಒಂದೊಂದು ಗಾತ್ರ ಬರುವುದರಿಂದ ನೋಡಿ ಕತ್ತರಿಸಿಕೊಳ್ಳಿ. ತುಂಬಾ ಪುಟ್ಟ ಪುಟ್ಟ ಮೆಣಸಿನಕಾಯಿಗಳು ಆದರೆ ಅವುಗಳನ್ನು ಬೀಜಗಳನ್ನು ಮತ್ರ ತೆಗೆದು, ಹಿಡಿಹಿಡಿಯಾಗಿ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ. ಪುಟ್ಟ ಬಜ್ಜಿಗಳು ನೋಡಲು ಚೆನ್ನಾಗಿ ಕಾಣುತ್ತವೆ.

Wednesday, December 5, 2007

ಆಲೂಗೆಡ್ಡೆ ಪಲಾವ್

ಆಲೂಗೆಡ್ಡೆ ಪಲಾವ್

ಸಾಮಗ್ರಿಗಳು:
ಈರುಳ್ಳಿ ಹೆಚ್ಚಿದ್ದು
ಹಸಿಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಜೀರಿಗೆ
ಅರಿಶಿಣದ ಪುಡಿ
ಚೆಕ್ಕೆ, ಲವಂಗ,ಏಲಕ್ಕಿ ಮತ್ತು ಪತ್ರೆ
ಕಾಯಿತುರಿ
ಅಕ್ಕಿ - ನೆನೆಸಿದ್ದು
ಕೊತ್ತುಂಬರಿ ಸೊಪ್ಪು
ನಿಂಬೆರಸ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಕಾದ ಮೇಲೆ ಜೀರಿಗೆ,ಚೆಕ್ಕೆ,ಲವಂಗ,ಪತ್ರೆ ಮತ್ತು ಏಲಕ್ಕಿ ಹಾಕಿ,ಕೆದಕಿ,ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಈರುಳ್ಳಿ ಸ್ವಲ್ಪ ಕೆಂಪಾಗುವವರೆಗೂ ಬಾಡಿಸಿ,ಶುಂಠಿ,ಬೆಳ್ಳುಳ್ಳಿ ಪೇಸ್ಟ್ ಮತ್ತು ಆಲೂಗೆಡ್ಡೆಯನ್ನು ಹಾಕಿ,ಅದನ್ನು ಒಂದೆರಡು ನಿಮಿಷ ಹುರಿದು,ಅದಕ್ಕೆ ಅರಿಶಿಣ, ಉಪ್ಪು, ಕಾಯಿತುರಿ ಮತ್ತು ನೀರನ್ನು ಹಾಕಿ,ನೆನೆಸಿದ ಅಕ್ಕಿಯನ್ನು ಹಾಕಿ,ನಿಂಬೆರಸ ಮತ್ತು ಕೊತ್ತುಂಬರಿ ಸೊಪ್ಪು ಹಾಕಿ,ಚೆನ್ನಾಗಿ ಬೆರೆಸಿ, ಮುಚ್ಚಿಟ್ಟು ಒಂದು ವಿಷ್ಹಲ್ ಕೂಗಿಸಿ ಒಲೆಯಿಂದ ಇಳಿಸಿ.ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ.ಮೊಸರಿನ ರಾಯತದೊಂದಿಗೆ ಬಡಿಸಿ ಮತ್ತು ತರಕಾರಿ ಸಲಾಡ್ ಜೊತೆ ಸರ್ವ್ ಮಾಡಿ.

Tuesday, December 4, 2007

Vangibhat - ವಾಂಗೀಭಾತ್:

ವಾಂಗೀಭಾತ್:

ಸಾಮಗ್ರಿಗಳು:ಬದನೆಕಾಯಿ
ಅನ್ನ- ಎರಡು ಬಟ್ಟಲು
ಉದ್ದಕ್ಕೆ ಹೆಚ್ಚಿದ ಈರುಳ್ಳಿ
ಒಣಮೆಣಸಿನಕಾಯಿ-ರುಚಿಗೆ
ಧನಿಯ-ಎರಡು ಚಮಚ
ಮೆಣಸು-ಸ್ವಲ್ಪ
ಕಡ್ಲೆಬೇಳೆ-ಒಂದು ಚಮಚ
ಉದ್ದಿನಬೇಳೆ-ಅರ್ಧ ಚಮಚ
ಇಂಗು ಸ್ವಲ್ಪ,ಅರಿಶಿನ
ಎಣ್ಣೆ, ಸಾಸಿವೆ
ಕರಿಬೇವು,ಇಂಗು ಚಿಟಿಕೆ
ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ
ಉಪ್ಪು ರುಚಿಗೆ
ಹುಣಸೇರಸ -ಅರ್ಧಚಮಚ
ಕಾಯಿತುರಿ ಮತ್ತು ಕೊಬ್ಬರಿ ಸ್ವಲ್ಪ
ಕೊತ್ತುಂಬರಿ ಸೊಪ್ಪು

ತಯಾರಿಸುವ ವಿಧಾನ:

ಮೊದಲು ಉದುರುಉದುರಾಗಿ ಅನ್ನ ಮಾಡಿಟ್ಟಿರುವುದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬೆರೆಸಿ,ತಣ್ಣಗಾಗಲು ಬಿಡಿ.
ಒಣಮೆಣಸಿನಕಾಯಿ,ಧನಿಯ,ಮೆಣಸು,ಕಡ್ಲೆಬೇಳೆ,ಉದ್ದಿನಬೇಳೆ ಎಲ್ಲವನ್ನು ಹುರಿದುಕೊಂಡು ಇಂಗು ಮತ್ತು ಕೊಬ್ಬರಿ ತುರಿಯೊಂದಿಗೆ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ.
ಬದನೆಕಾಯಿ ಹೆಚ್ಚಿಕೊಂಡು ಉಪ್ಪು ನೀರಿಗೆ ಹಾಕಿಡಿ.
ಒಂದು ಪಾತ್ರೆಗೆ ಸಾಕಾಷ್ಟು ಎಣ್ಣೆ ಹಾಕಿ,ಅದಕ್ಕೆ ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ,ಕರಿಬೇವು,ಇಂಗು ಎಲ್ಲವನ್ನು ಹಾಕಿ ಒಂದು ನಿಮಿಷ ಹುರಿಯಿರಿ.ಈರುಳ್ಳಿಯನ್ನು ಹಾಕಿ,ಒಂದೆರಡು ನಿಮಿಷ ಹುರಿದು,ನಂತರ ಅದಕ್ಕೆ ಬದನೆಕಾಯಿ ಹಾಕಿ,ಅದರಲ್ಲಿಯೇ ಹುರಿಯಿರಿ,ಎಲ್ಲಾ ಬದನೆಕಾಯಿ ಹೋಳುಗಳು ಚೆನ್ನಾಗಿ ಫ್ರೈ ಮಾಡಿಕೊಂಡು,ಅದು ಬೆಂದಿದೆ ಎನಿಸಿದ ಮೇಲೆ,ಅದಕ್ಕೆ ಅರಿಶಿನ,ಹುರಿದು ಪುಡಿ ಮಾಡಿದ ಮಸಾಲೆಯನ್ನು ಮತ್ತು ಹುಣಸೇರಸ ಹಾಕಿ,ಬಾಡಿಸಿ.ಉಪ್ಪು ಹಾಕಿ. ನೀರು ಹಾಕಬಾರದು. ಎಲ್ಲ ಮಸಾಲೆ ಚೆನ್ನಾಗಿ ಬೆರೆಯುವಂತೆ ಕೆದಕುತ್ತಿರಿ. ನಂತರ ಅದನ್ನು ಇಳಿಸಿ. ಎಷ್ಟು ಬೇಕೋ ಅಷ್ಟು ಮಾತ್ರ ಮಸಾಲೆ ತೆಗೆದುಕೊಂಡು ಅನ್ನಕ್ಕೆ ಹಾಕಿ,ಚೆನ್ನಾಗಿ ಕಲೆಸಿ,ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಎಲ್ಲವೂ ಸರಿಯಾಗಿ ಬೆರೆಯುವಂತೆ ಕಲೆಸಿ. ವಾಂಗೀಭಾತ್ ತಯಾರಾಗುತ್ತದೆ. ಇದನ್ನು ರಾಯಿತ/ಚಟ್ನಿ ಜೊತೆ ಸರ್ವ್ ಮಾಡಿ.

* ಬದನೆಕಾಯಿ ಬೇಯಲು ನೀರು ಹಾಕಬಾರದು.
* ಒಗ್ಗರಣೆಗೆ ಎಣ್ಣೆ ಜಾಸ್ತಿ ಹಾಕಿ, ಅದರಲ್ಲಿಯೇ ಬದನೆ ಬೇಯುತ್ತದೆ.
* ಕಲೆಸುವಾಗ ಉಪ್ಪು-ಕಾರ ನೋಡಿಕೊಳ್ಳಿ.
* ತಕ್ಷಣ ತಿನ್ನುವುದಕ್ಕಿಂತ ಸ್ವಲ್ಪ ಹೊತ್ತಿನ ಬಳಿಕ ತಿಂದರೆ ಹೆಚ್ಚು ರುಚಿಯಾಗಿರುತ್ತದೆ. ಇದನ್ನು ತಿಂಡಿ/ಊಟ ಯಾವುದಕ್ಕಾದರೂ ಬಳಸಬಹುದು.
* ವಾಂಗೀಭಾತ್ ಮಸಾಲೆ ಎಷ್ಟು ಬೇಕೋ ಅಷ್ಟು ಮಾತ್ರ ಕಲೆಸಿ,ಮಿಕ್ಕಿದ್ದು ಎತ್ತಿಡಬಹುದು. ಯಾವಾಗ ಬೇಕಾದರೂ ಉಪಯೋಗಿಸಬಹುದು.

Popular Posts