ಕರದಂಟು ಅಥವಾ ಅಂಟಿನ ಉಂಡೆ ಇದು ನಮ್ಮ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ತುಂಬಾ ಪ್ರಸಿದ್ಧಿಯಾದ ಸಿಹಿ ತಿನಿಸು. ಬೆಳಗಾಂ ಎಂದರೆ ಮೊದಲು ನೆನಪಿಗೆ ಬರುವುದೆ ಕರದಂಟು. ಇಲ್ಲೆಲ್ಲ ನಾವು ಅವರ ತರಹ ರೆಸಿಪಿಯಲ್ಲೇ ತಯಾರಿಸಿದರು ಸಹ, ಅವರು ತಯಾರಿಸುವ ಕರದಂಟಿನ ರುಚಿಯೇ ಅದ್ಭುತ. ಅದಕ್ಕಾಗಿಯೇ ಅಲ್ಲವೆ ಬೆಳಗಾವಿಗೂ ಕರದಂಟಿಗೂ ನೆಂಟು. ಅಂಟುಂಡೆ ಎಂದು ಕೆಲವರು ಕರೆಯುತ್ತಾರೆ. ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರದಲ್ಲಿ ಉಂಡೆ ಕಟ್ಟುವುದರಿಂದ ಕರದಂಟು ಎಂತಲೂ ಅಥವಾ ಅಂಟನ್ನು ಕರಿದು ಅರ್ಥಾತ್ ಹುರಿದು ತಯಾರಿಸುವುದರಿಂದಲೂ ಈ ಹೆಸರು ಬಂದಿರಬಹುದೇನೋ ಎಂದು ನನ್ನ ಅನಿಸಿಕೆ. ಯಾವುದರಿಂದಲಾದರೂ ಹೆಸರು ಬರಲಿ ಈ ಉತ್ತಮವಾದ ಉಂಡೆಯಂತೂ ತಿನ್ನಲು ಬಲು ರುಚಿ ಮತ್ತು ನಮ್ಮ ಆರೋಗ್ಯಕ್ಕೂ ಸಹ ಅಷ್ಟೇ ಉತ್ತಮ. ಇದನ್ನು ಋತುಮತಿಯಾದವರಿಗೆ ಮತ್ತು ಬಾಣಂತಿಯರಿಗೆ ತಿನ್ನಲು ನೀಡಿದರೆ ತುಂಬಾ ಒಳ್ಳೆಯದು. ಈ ಕರದಂಟು ಉಂಡೆಯನ್ನು ಅವರು ತಿನ್ನುವುದರಿಂದ ಅವರಿಗೆ ಆ ಸಮಯದಲ್ಲಿ ಅವರಿಗೆ ಬೇಕಾದ ಶಕ್ತಿ ಮತ್ತು ಎಲ್ಲಾ ಪೌಷ್ಠಿಕಾಂಶಗಳು ದೊರೆಯುತ್ತವೆ. ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಉಂಡೆ.
ಕರದಂಟು / ಅಂಟಿನ ಉಂಡೆ :
ಬೇಕಾಗುವ ಸಾಮಗ್ರಿಗಳು:
ಖರ್ಜೂರ - ಒಂದು ಬಟ್ಟಲು
ಬಾದಾಮಿ - ಒಂದು ಬಟ್ಟಲು
ಗೋಡಂಬಿ- ಒಂದು ಬಟ್ಟಲು
ದ್ರಾಕ್ಷಿ - ಒಂದು ಬಟ್ಟಲು
ಒಣ ಕೊಬ್ಬರಿ ತುರಿ - ಒಂದು ಬಟ್ಟಲು
ಗಸಗಸೆ - ಎರಡು ದೊಡ್ಡ ಚಮಚ
ಅಂಟು - ಕಾಲು ಬಟ್ಟಲು / ಸ್ವಲ್ಪ
ಬೆಲ್ಲ - ರುಚಿಗೆ ತಕ್ಕಂತೆ
ತುಪ್ಪ - ಸ್ವಲ್ಪ
ತಯಾರಿಸುವ ವಿಧಾನ:
ಖರ್ಜೂರ,ಬಾದಾಮಿ ಮತ್ತು ಗೋಡಂಬಿಯನ್ನು ಚೂರು ಮಾಡಿಟ್ಟುಕೊಳ್ಳಿ. ಅಂಟನ್ನು ಸಹ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಪುಡಿ ಮಾಡಿ, ಮೊದಲು ಇಷ್ಟನ್ನು ತಯಾರಿಸಿಟ್ಟು ಕೊಂಡರೆ ಉಂಡೆ ತಯಾರಿಸುವಾಗ ಸುಲಭವಾಗುತ್ತದೆ.
ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು,ಆಮೇಲೆ ದ್ರಾಕ್ಷಿ ಹೀಗೆ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ, ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ. ಒಣಕೊಬ್ಬರಿ ತುರಿ ಮತ್ತು ಅಂಟು ಸಹ ಹುರಿದು ಬಾದಾಮಿ,ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ ಮತ್ತು ಸೀದಿಸಬೇಡಿ. ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಂಡ ನಂತರ ಬೆಲ್ಲದ ಪಾಕವನ್ನು ತಯಾರಿಸಬೇಕು.
ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ:
ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ ನೋಡಿ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ತುಂಬಾ ಹೊತ್ತು ಸಹ ತಣ್ಣಗಾಗಲು ಬಿಡದಿರಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು ದಿನವಿಡಬಹುದು.
* ಹುರಿಯುವಾಗ ತಾಳ್ಮೆಯಿಂದ ಹುರಿಯಬೇಕು, ಬೇಗ ಆಗಲಿ ಎಂದು ತುಂಬಾ ಉರಿ ಹಾಕಿ ಹುರಿಯುವುದರಿಂದ ಸಾಮಗ್ರಿಗಳು ಸೀದು ಹೋಗುತ್ತವೆ ಮತ್ತು ರುಚಿಯೂ ಹಾಳಾಗುತ್ತದೆ.
* ಪ್ರತಿಯೊಂದನ್ನು ಬೇರೆ-ಬೇರೆಯಾಗಿ ಹದವಾಗಿ ಹುರಿಯಿರಿ.
* ಅಂಟನ್ನು ಹುರಿದುಕೊಳ್ಳಿ. ಚಿಕ್ಕ ಚಿಕ್ಕ ಚೂರು ಮಾಡಿಕೊಂಡು ಹುರಿದರೆ, ಚೆನ್ನಾಗಿರುತ್ತದೆ, ಇಲ್ಲವೆಂದರೆ ತಿನ್ನುವಾಗ ಒಂದೇ ಕಡೆ ಸಿಗುತ್ತದೆ.
* ಖರ್ಜೂರವನ್ನು ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಇದರಲ್ಲಿ ಬೆಲ್ಲದ ಪಾಕ ತೆಗೆಯುವಾಗ ತುಂಬಾ ಎಚ್ಚರಿಕೆಯಿಂದ ತೆಗೆಯಬೇಕು, ಒಂದೆಳೆ ಪಾಕವನ್ನು ಗಮನಿಸಿ ತೆಗೆಯಬೇಕು, ಪಾಕ ಗಟ್ಟಿಯಾದರೆ ಉಂಡೆ ತಯಾರಿಸಿದ ಮೇಲೆ ಉಂಡೆಗಳು ತುಂಬಾ ಗಟ್ಟಿಯಾಗುತ್ತವೆ. ಪಾಕ ತೆಗೆಯುವಾಗ ಒಂದು ತಟ್ಟೆಗೆ ಸ್ವಲ್ಪ ನೀರು ಹಾಕಿ, ಅದಕ್ಕೆ ಒಂದೆರಡು ಹನಿ ಪಾಕವನ್ನು ಹಾಕಿದಾಗ ಅದು ತೇಲಿ ಬರುತ್ತದೆ. ಆಗ ಪಾಕ ತಯಾರಾಗಿದೆ ಎಂದು ಗೊತ್ತಾಗುತ್ತದೆ. ಪಾಕ ನೀರಿನಲ್ಲಿ ತಕ್ಷಣವೇ ಕರಗಿದರೆ, ಇನ್ನು ಸ್ವಲ್ಪ ಹೊತ್ತು ಬಿಡಿ. ಪಾಕ ಮಾತ್ರ ಹದವಾಗಿ ತೆಗೆಯಿರಿ.
* ಕೊಬ್ಬರಿ ತುರಿ ಅಂಗಡಿಯಲ್ಲಿ ಸಿಗುವ ಡೆಸಿಕೆಟೆಡ್ ಕೊಕೋನಟ್ ಪೌಡರ್/ ರೆಡಿಮೇಡ್ ಕೊಬ್ರಿ ತುರಿ ಹಾಕಿದರೆ ಚೆನ್ನಾಗಿರುವುದಿಲ್ಲ. ಕೊಬ್ಬರಿ ಗಿಟುಕಿನಿಂದ ನೀವೇ ತಕ್ಷಣವೇ ತುರಿದ ಕೊಬ್ಬರಿ ತುರಿ ಉಪಯೋಗಿಸಬೇಕು. ಆಗ ರುಚಿ ಚೆನ್ನಾಗಿರುತ್ತದೆ.
Wednesday, March 9, 2011
Subscribe to:
Post Comments (Atom)
Popular Posts
-
ತರಕಾರಿ ಸಾಗು ಅಥವ ಕೂಟು ಎಲ್ಲವುದಕ್ಕು ಹೊಂದಿಕೊಳ್ಳುವಂತಹದ್ದು. ಅಂದರೆ ಇದನ್ನು ದೋಸೆ, ಚಪಾತಿ,ಪರೋಟ,ರೊಟ್ಟಿ,ಪೂರಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಜೊತೆಯಲ್ಲ...
-
ಆಲೂ ಪರೋಟ: ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು ಅಚ್ಚ ಖಾರದ ಪುಡಿ-ಕಾಲು ಚಮಚ ಉಪ್ಪು ರುಚಿಗೆ ತಕ್ಕಷ್ಟು ಚಾಟ್ ಮಸಾಲಾ-ಕಾಲು ಚಮಚ ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: ಟಮೋಟ - ಅರ್ಧ ಕೆ.ಜಿ ಈರುಳ್ಳಿ - ಎರಡು ಬೆಳ್ಳುಳ್ಳಿ - ಹತ್ತು ಎಸಳು ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು ಹುಣಸೆಹಣ್ಣು -...
-
ಬಿಸಿಬೇಳೆ ಭಾತ್ ಪುಡಿ: ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು ಧನಿಯ- ಎರಡು ಚಮಚ ಮೆಂತ್ಯ -ಅರ್ಧ ಚಮಚ ಜೀರಿಗೆ-ಒಂದು ಚ...
-
ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ. ಗೋಳ...
-
ರಸಂ ಪುಡಿ / ರಸಂ ಪೌಡರ್ ಬೇಕಾಗುವ ಪದಾರ್ಥಗಳು: ಒಣ ಮೆಣಸಿನ ಕಾಯಿ - ಒಂದು ಬಟ್ಟಲು ಧನಿಯಾ ಬೀಜ - ಅರ್ಧ ಬಟ್ಟಲು ಜೀರಿಗೆ - ಒಂದು ದೊಡ್ಡ ಚಮಚ ಮೆಣಸು - ಒಂದು ದೊಡ...
-
ಈರುಳ್ಳಿ ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: 1. ಈರುಳ್ಳಿ- 2 2. ಟೊಮೆಟೊ- 4-5 3. ಹಸಿಮೆಣಸಿನ ಕಾಯಿ- 2 4. ಉಪ್ಪು- ರುಚಿಗೆ ತಕ್ಕಷ್ಟು 5. ಅಚ್ಚ ಖಾರದ ಪ...
2 comments:
A good recipe easy to understand. And make. Thanks
A very good recipe easy to understand and make.
Post a Comment