Sunday, March 28, 2010

Firni - ಫಿರಣಿ /ಫಿರನಿ/ಫಿರ್ನಿ ( Rice Pudding )

ಫಿರಣಿ /ಫಿರನಿ:

ಬೇಕಾಗುವ ಸಾಮಗ್ರಿಗಳು:

ಅಕ್ಕಿಹಿಟ್ಟು - ಎರಡು ದೊಡ್ಡ ಚಮಚ
ಹಾಲು - ಒಂದು ಬಟ್ಟಲು
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ಕೋವಾ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಕೇಸರಿ ದಳಗಳು ಸ್ವಲ್ಪ (ಬೇಕಾದರೆ)
ಸಕ್ಕರೆ ರುಚಿಗೆ ತಕ್ಕಷ್ಟು
ಡ್ರೈ ಫ್ರೂಟ್ಸ್ (ಬಾದಾಮಿ,ಗೋಡಂಬಿ,ಪಿಸ್ತ)

ತಯಾರಿಸುವ ವಿಧಾನ:

ಮೊದಲು ಹಾಲು ಕಾಯಿಸಿ,ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಮತ್ತು ಸಕ್ಕರೆಯನ್ನು ಸೇರಿಸಿ,ತಿರುಗಿಸಿ. ಮೂರ್ನಾಲ್ಕು ಚಮಚ ಹಾಲಿನೊಂದಿಗೆ ಅಕ್ಕಿಹಿಟ್ಟನ್ನು ಗಂಟಿಲ್ಲದಂತೆ ಕಲೆಸಿಕೊಂಡು ಅದನ್ನು ಕುದಿಯುತ್ತಿರುವ ಹಾಲಿಗೆ ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸಿ. ಬೇಗ ತಳಹತ್ತುತ್ತದೆ,ಕೈ ಬಿಡದೆ ತಿರುಗಿಸುತ್ತಿರಬೇಕು. ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಕೋವಾವನ್ನು ಬೆರೆಸಿ,ಏಲಕ್ಕಿ ಪುಡಿ,ಡ್ರೈ ಫ್ರೂಟ್ಸ್ ಮತ್ತು ಕೇಸರಿ ದಳಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸುತ್ತಿದ್ದು,ಅದು ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ಗಟ್ಟಿಯಾದಂತೆ ಎನಿಸಿದಾಗ ಇಳಿಸಿ. ಇದನ್ನು ಒಂದೆರಡು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿ ಅಥವಾ ತಣ್ಣಗಾದ ಮೇಲೆ ತಿನ್ನಲು ಕೊಡಿ. ಇದು ತುಂಬಾ ರುಚಿಯಾಗಿರುತ್ತದೆ.

* ಅಕ್ಕಿ ಹಿಟ್ಟಿನ ಬದಲು ಅಕ್ಕಿ ರವೆಯನ್ನು ಉಪಯೋಗಿಸಬಹುದು. ಇದನ್ನು ಪೂರ್ತಿ ಹಾಲಿನಲ್ಲಿಯೇ ಬೇಯಿಸಬೇಕು.
* ಕೇಸರಿ ದಳಗಳನ್ನು ಬಳಸುವಾಗ ಯಾವಾಗಲೂ ಒಂದೆರಡು ಚಮಚ ಹಾಲಿನಲ್ಲಿ ನೆನೆಸಿಡಿ.

Friday, March 26, 2010

Panaka / Paniya / Juice- Shri RamaNavami paanaka

ಶ್ರೀ ರಾಮನವಮಿಯಲ್ಲಿ ತಯಾರಿಸುವ ಪಾನಕ:

ಶ್ರೀ ರಾಮನವಮಿ ಹಬ್ಬದಲ್ಲಿ ಬೇರೆ ತಿನಿಸುಗಳಿಗಿಂತ ಪಾನಕ ಮತ್ತು ಕೋಸುಂಬರಿ ತುಂಬಾ ಪ್ರಸಿದ್ಧವಾಗಿವೆ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪಾನಕವನ್ನು ತಯಾರಿಸುತ್ತಾರೆ. ಕೆಲವರು ಇದಕ್ಕೆ ಕರಬೂಜ ಹಣ್ಣನ್ನು ಸೇರಿಸುತ್ತಾರೆ. ಇದನ್ನು ಸೇರಿಸಿದಾಗ ಇನ್ನೂ ಹೆಚ್ಚಿನ ರುಚಿಯನ್ನು ಕೊಡುತ್ತದೆ.

ಬೇಕಾಗುವ ಸಾಮಗ್ರಿಗಳು:

ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಕರಬೂಜ ಹಣ್ಣು ಸ್ವಲ್ಪ
ಒಣಶುಂಠಿ ಸ್ವಲ್ಪ
ಮೆಣಸಿನಕಾಳು ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು


ತಯಾರಿಸುವ ವಿಧಾನ:

ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ಇದರ ಜೊತೆಯಲ್ಲಿಯೇ ಕರಬೂಜ ಹಣ್ಣಿನ ಚೂರುಗಳನ್ನು ಸೇರಿಸಿ, ಕೈನಿಂದ ಹಣ್ಣನ್ನು ಚೆನ್ನಾಗಿ ಅದುಮಿ, ಹಣ್ಣು ಸ್ವಲ್ಪ ಸ್ವಲ್ಪ ಚೂರು ಇರುವಂತೆ ಬಿಡಿ.
*ಕರಬೂಜ ಹಣ್ಣನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಸೇರಿಸಬೇಡಿ. ಹಣ್ಣನ್ನು ಕೈನಲ್ಲಿಯೇ ಹಿಸುಕಿದರೆ, ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ. ಪಾನಕ ಕುಡಿಯುವಾಗ ಹಣ್ಣಿನ ಸಣ್ಣ ಸಣ್ಣ ಚೂರುಗಳು ಬಾಯಿಗೆ ಸಿಕ್ಕಿದರೆ ಚೆನ್ನ. ನಂತರ ಅದಕ್ಕೆ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಇದೆಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈನಿಂದ ಹಿಸುಕಿ ಬೆರೆಸಿ. ಈಗ ಪಾನಕ ತಯಾರಾಯಿತು.
ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ತಯಾರಿಸುತ್ತಾರೆ. ಈ ತರಹ ಭಾಕಿ ದಿನಗಳಲ್ಲಿ ಮಾಡಿಕೊಂಡು ಕುಡಿದರೂ ಅದೇನೋ ಹಬ್ಬದ ದಿನ ಅದೊಂದು ತರಹ ಹೊಸ ರುಚಿಯೇನೋ ಎನಿಸುತ್ತೆ.

Tuesday, March 23, 2010

Paanaka / ಪಾನಕ:

ಶ್ರೀ ರಾಮನವಮಿಯಲ್ಲಿ ತಯಾರಿಸುವ ಪಾನಕ:

ಬೇಕಾಗುವ ಸಾಮಗ್ರಿಗಳು:

ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಒಣಶುಂಠಿ ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು
ಮೆಣಸಿನಕಾಳು ಸ್ವಲ್ಪ

ತಯಾರಿಸುವ ವಿಧಾನ:

ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ನಂತರ ಅದಕ್ಕೆ ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಕೈನಲ್ಲಿಯೇ ಹಿಸುಕಿದರೆ,ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ.ನಂತರ ಪಾನಕ ತಯಾರಾಗುತ್ತದೆ. ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ದೇವಸ್ಥಾನಗಳಲ್ಲೂ ತಯಾರಿಸುತ್ತಾರೆ.

Saturday, March 20, 2010

Holige/Obbattu- Kadalebele Holige/ಹೋಳಿಗೆ/ಒಬ್ಬಟ್ಟು

ಪ್ರತಿ ಹಬ್ಬದಲ್ಲಿಯೂ ತೊಗರಿಬೇಳೆಯ ಹೋಳಿಗೆ ತಯಾರಿಸುತ್ತೇವೆ. ಈ ಸಾರಿ ಯಾಕೆ ಕಡ್ಲೆಬೇಳೆ ಹೋಳಿಗೆಯನ್ನು ತಯಾರಿಸಬಾರದು?!!






"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು "ಹೋಳಿಗೆ" ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಈಗ ಇಲ್ಲಿ ಕಡ್ಲೆಬೇಳೆ ಹೋಳಿಗೆಯನ್ನು ತಯಾರಿಸುವ ರೀತಿ ತಿಳಿಯೋಣ.


ಕಡ್ಲೆಬೇಳೆ ಹೋಳಿಗೆ:

ಬೇಕಾಗುವ ಸಾಮಗ್ರಿಗಳು:

ಕಡ್ಲೆಬೇಳೆ-  ಅರ್ಧ ಕೆಜಿ
ತೆಂಗಿನಕಾಯಿ ತುರಿ -  ಒಂದು ಬಟ್ಟಲು
ಬೆಲ್ಲ ರುಚಿಗೆ -  ಕುಟ್ಟಿರುವುದು
ಏಲಕ್ಕಿ ಪುಡಿ ಸ್ವಲ್ಪ
ಮೈದಾಹಿಟ್ಟು -  ಎರಡು ಬಟ್ಟಲು
ಚಿರೋಟಿ ರವೆ -  ಕಾಲು ಕಪ್
ಹಾಲು -  ಕಾಲು ಕಪ್
ತುಪ್ಪ -  ಎರಡು ಚಮಚ
ಚಿಟಿಕೆ ಅರಿಸಿನ
ಉಪ್ಪು ಚಿಟಿಕೆ
ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ, ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ಒಂದು ಅಥವಾ ಎರಡು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು. ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ. ಉಪಯೋಗಿಸುವಾಗ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ, ಹೀಗೆ ಕಲೆಸಿರುವ ಹಿಟ್ಟನ್ನು "ಕಣಕ" ಎಂದು ಕರೆಯುತ್ತೀವಿ.

ನಂತರ ಕಡ್ಲೆಬೇಳೆಯನ್ನು, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಹೆಚ್ಚು ನೀರು ಹಾಕಿ ಬೇಯಿಸಿಕೊಳ್ಳಿ. ಆಗ ಅದಕ್ಕೆ ಒಂದು ಇಂಚು ಶುಂಠಿ ಹಾಕಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಾಗಲೇ ತೆಗೆಯಬೇಕು. ಆಗಾಗಿ ಬೇಳೆ ಬೇಯುವಾಗ ನೋಡುತ್ತಿರಿ. ಅಂಚು ಒಡೆದು ಬೆಂದಿದೆ ಎನಿಸಿದ ಮೇಲೆ ಬೆಂದ ಕಡ್ಲೆಬೇಳೆಯ ನೀರನ್ನು ಬಸಿದುಕೊಳ್ಳಿ. ಶುಂಠಿಯನ್ನು ತೆಗೆದುಹಾಕಿ. ಆಮೇಲೆ ಬಸಿದ ಬೇಳೆಗೆ ಕುಟ್ಟಿದ ಬೆಲ್ಲ ಸೇರಿಸಿ, ಬೆಂದ ಬೇಳೆಯ ಅಳತೆಗೆ ಅರ್ಧದಷ್ಟು ಬೆಲ್ಲವನ್ನು ಸರಿಯಾಗಿ ಹಾಕಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಎಲ್ಲವನ್ನು ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಎಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಬೆಲ್ಲ ಮತ್ತು ಬೇಳೆ ಹೊಂದಿದ ಮೇಲೆ ಸ್ಟೌವ್ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ಈ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೇರಿಸದೆ ರುಬ್ಬಬೇಕು. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ "ಹೂರಣ"ವೆಂದು ಕರೆಯುತ್ತೇವೆ.
--ಇಲ್ಲಿಯವರೆಗೂ ಕಣಕ ಮತ್ತು ಹೂರಣವನ್ನು ತಯಾರಿಸಿಕೊಂಡಿದ್ದಾಯಿತು.

• ಈಗ ಹೋಳಿಗೆ ಹೇಗೆ ಮಾಡೋದು ತಿಳಿಯೋಣ:

• ಮೈದಾ ಮಿಶ್ರಣವನ್ನು ದಪ್ಪ ಗೋಲಿಗಾತ್ರದ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
                        • ಹೂರಣದ ಮಿಶ್ರಣವನ್ನು ಕಿತ್ತಳೆ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.




• ಬಾಳೆ ಎಲೆ/ಅಲ್ಯುಮಿನಿಯಂ ಫಾಯಿಲ್/ ಪ್ಲಾಸ್ಟಿಕ್ ಕವರ್/ ಹೋಳಿಗೆ ತಟ್ಟುವ ಕವರ್ -ನಿಮಗೆ ಯಾವುದು ಬೇಕೋ ಅದು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮೊದಲು ಕಣಕವನ್ನು ಇಟ್ಟು ಸ್ವಲ್ಪ ಸಣ್ಣ ಪೂರಿ ಅಳತೆಗೆ ಒತ್ತಿಕೊಳ್ಳಿ. ಆಗೇ ಕೈನಲ್ಲಿಯೇ ತಟ್ಟಬಹುದು. ಅದರ ಮಧ್ಯ ಭಾಗಕ್ಕೆ ಬೇಳೆ ಹೂರಣವನ್ನು ಇಟ್ಟು ಒಂದು ಬದಿಯಿಂದ ಹಿಟ್ಟನ್ನು ತೆಗೆದು ಮೇಲೆ ಹಾಕುತ್ತಾ ಸ್ವಲ್ಪ ಸ್ವಲ್ಪವೇ ಹಾಕಿ, ಹೀಗೆ ಎಲ್ಲವನ್ನು ಅಂದರೆ ಹೂರಣವು ಕಾಣಿಸದಂತೆ ಒಳಭಾಗಕ್ಕೆ ಮುಚ್ಚಿದ ಮೇಲೆ ಅದನ್ನು ಕವರ್ ಮಾಡಿರುವ ತುದಿಯನ್ನು ಕೆಳಭಾಗಕ್ಕೆ ಹಾಕಿ, ಎಣ್ಣೆ ಸವರಿಕೊಂಡು ಮತ್ತೆ ಲಘುವಾಗಿ ಅದನ್ನು ಹಾಗೆಯೇ ತಟ್ಟಿ. ನಿಮಗೆ ಯಾವ ಅಳತೆ ಅಗಲ ಬೇಕೋ ಅಷ್ಟು ತಟ್ಟಿಕೊಂಡು, ಕಾಯಿಸುವ ತವಾ ಮೇಲೆ ಎಣ್ಣೆ ಹಚ್ಚಿ ಹೋಳಿಗೆಯನ್ನು ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಬದಿಯು ತಿರುವಿ ಹಾಕಿ ಎಣ್ಣೆ ಹಾಕಿ ಬೇಯಿಸಿ. ಅಗಲವಾದ ತಟ್ಟೆಯಲ್ಲಿ ಹಾಕಿ. ಇದೇ ರೀತಿ ಎಲ್ಲಾ ಹೋಳಿಗೆಗಳನ್ನು ತಯಾರಿಸಿ, ಒಂದರ ಮೇಲೆ ಒಂದು ಹಾಕಬೇಡಿ, ಪಕ್ಕಕ್ಕೆ ಜೋಡಿಸಿಕೊಳ್ಳಿ. ಹೋಳಿಗೆಯನ್ನು ತುಪ್ಪ ಹಾಕಿ, ತಿನ್ನಬಹುದು. ಜೊತೆಗೆ ಬೇಕಾದರೆ ಹಾಲನ್ನು ಕೂಡ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಾದ ಮತ್ತು ನಮ್ಮ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರು ತಯಾರಿಸುವ ಅಡಿಗೆ.

• ಕೆಲವರಿಗೆ ಹೋಳಿಗೆ ದಪ್ಪ ಇಷ್ಟಪಡುತ್ತಾರೆ. ಆಗ ತಟ್ಟುವಾಗ ಹೂರಣ ಜಾಸ್ತಿ ತುಂಬಿ, ಸ್ವಲ್ಪ ಚಿಕ್ಕದಾಗಿ ತಟ್ಟಿ.
• ತೆಳುವಾಗಿ ಇಷ್ಟಪಡುವವರು ತೆಳ್ಳಗೆ ತಟ್ಟಿಕೊಂಡು ಬೇಯಿಸಿ.
• ಹೂರಣ ತುಂಬಿ ಕವರ್ ಮಾಡುವಾಗ ಸರಿಯಾಗಿ ಮುಚ್ಚಿ. (ಸ್ಟಫ್ ಮಾಡಿಕೊಳ್ಳಿ)
• ಎಣ್ಣೆಯನ್ನು ಸವರಿಕೊಳ್ಳುತ್ತಾ ಇರಬೇಕಾಗುತ್ತದೆ. ಆಗ ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
• ಬೇಯಿಸುವಾಗಲೂ ಅಷ್ಟೇ ಹುಷಾರಾಗಿ ಬೇಯಿಸಿ. ಹೋಳಿಗೆಗಳು ಎರಡು ದಿನ ಹಾಳಾಗದೆ ಚೆನ್ನಾಗಿ ಇರುತ್ತವೆ.

Monday, March 1, 2010

Raagi Mudde

ರಾಗಿ ಮುದ್ದೆ:
ಬೇಕಾಗಿರುವ ಸಾಮಗ್ರಿಗಳು:
೧ ಲೋಟ ರಾಗಿ ಹಿಟ್ಟು
೨ ಲೋಟ ನೀರು

ವಿಧಾನ:
 ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ, ನೀರು ಚೆನ್ನಾಗಿ ಕುದಿಯುವಾಗ ರಾಗಿಹಿಟ್ಟನ್ನು ಹಾಕಿ, ೧೦ ನಿಮಿಷ ಹಾಗೆ ಕುದಿಯಲು ಇಡಬೇಕು, ಅದನ್ನು ತಿರುಗಿಸಬಾರದು, ಹಿಟ್ಟು ಹೇಗೆ ಹಾಕಿರುತ್ತಿರೋ ಹಾಗೆ ಕುದಿಯಬೇಕು. ೧೦ ಅಥವ ೧೫ ನಿಮಿಷದ ನಂತರ ಒಂದು ಕೋಲು ಅಥವಾ ಒಂದು ಸೌಟನ್ನು ತೆಗೆದುಕೊಂಡು ಮಧ್ಯಭಾಗದಿಂದ ಆ ಹಿಟ್ಟನ್ನು ಒಡೆದುಕೊಂಡು ಹಾಗೆ ಮೆಲ್ಲಗೆ ಗಂಟುಗಳು ಬರದಂತೆ ಚೆನ್ನಾಗಿ ಗೊಟಾಯಿಸಿಕೊಂಡು ತಿರುಗಿಸಬೇಕು. ಮಧ್ಯೆ ಸ್ವಲ್ಪ ನೀರು ಸೇರಿಸಿಕೊಳ್ಳಿ ಬೇಕೆನಿಸಿದರೆ, ಸ್ವಲ್ಪ ತೆಳು ಆದರೆ ಹಿಟ್ಟು ಸೇರಿಸಿ, ಗಟ್ಟಿಯಾದರೆ ನೀರು ಸೇರಿಸಿಕೊಂಡು ಗಂಟಿಲ್ಲದಂತೆ ತಿರುಗಿಸಿ, ನಂತರ ಒಲೆಯ ಮೇಲಿಂದ ಇಳಿಸಿಕೊಂಡು ಹಿಟ್ಟು ಬಿಸಿಯಿರುವಾಗಲೆ ಅದನ್ನು ಕಟ್ಟಬೇಕು.ಕೈಯನ್ನು ನೀರು ಅಥವ ತುಪ್ಪದಲ್ಲಿ ಅದ್ದಿಕೊಂಡು ಚೆನ್ನಾಗಿ ನಾದಿಕೊಂಡು ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ಶಕ್ತಿಯುತವಾದ ರಾಗಿಮುದ್ದೆ ತಯಾರಾಗುತ್ತದೆ,
ಇದು ನಮ್ಮ ಕರ್ನಾಟಕದಲ್ಲಿ ತುಂಬಾ ಪ್ರಸಿಧ್ದವಾದ ಆಹಾರವಾಗಿದೆ. ಇದು ಮೊದಲು ತಯಾರಿಸುವಾಗ ಸ್ವಲ್ಪ ಕಷ್ಟ ಎನಿಸಬಹುದು, ಒಮ್ಮೆ ಕೆಟ್ಟು ಹೋದರು ಪರವಾಗಿಲ್ಲ, ಪ್ರಯತ್ನಪಡಿ, ಆಮೇಲೆ ಸರಿಯಾಗಿ ಬರುತ್ತದೆ, ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಹಿಟ್ಟನ್ನು ಹಾಕಿ ಹದವಾಗಿ ಬೇಯಿಸಿಕೊಂಡು ನಂತರ ಉಂಡೆಮಾಡಿಕೊಳ್ಳಿ, ಇದನ್ನು ಸೊಪ್ಪಿನ ಬಸ್ಸಾರು, ಬೇಳೆಸಾರು, ಮಸಾಲೆ ಸಾರಿನೊಂದಿಗೆ ಪುಟ್ಟ ಪುಟ್ಟ ಉಂಡೆ ಮಾಡಿಕೊಂಡು ಸವಿಯಿರಿ.
ರಾಗಿಯಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ, ಆಗಾಗಿ ಇದನ್ನು ಪ್ರತಿನಿತ್ಯವೂ ಸೇವಿಸುವುದರಿಂದ ಬಹಳ ಒಳ್ಳೆಯದು. ಶಕ್ತಿಯುತವಾದ ಆಹಾರ ಇದು. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತು ಪ್ರತೀತಿಯಲ್ಲಿದೆ.


ರಾಗಿಮುದ್ದೆಯ ರೆಸಿಪಿಯನ್ನು ತಯಾರಿಸುವ ವಿಧಾನವನ್ನು ರಾಗಿಮುದ್ದೆ ಲೇಬಲ್ ನಲ್ಲಿ ನೋಡಿ. ಈ ರಾಗಿಮುದ್ದೆಯು ಮೊಳಕೆಕಾಳುಗಳ ಮಸಾಲೆ ಸಾರು, ಬಸ್ಸಾರುಗಳೊಂದಿಗೆ ತುಂಬಾ ರುಚಿಯಾಗಿರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಆಹಾರ, ಇಂಥ ಸ್ವಾದಿಷ್ಟವಾದ ಆಹಾರವು ನಮ್ಮ ಕರ್ನಾಟಕದ್ದು ಎಂದು ಹೇಳಲು ಹೆಮ್ಮೆಯಾಗುತ್ತದೆ, ಇದರಿಂದ ಅನೇಕ ಖಾಯಿಲೆಗಳು ಗುಣಮುಖವಾಗುತ್ತದೆ. ಆದ್ದರಿಂದ ಪ್ರತಿನಿತ್ಯವು ರಾಗಿಯನ್ನು ಬಳಸುವುದು ಒಳ್ಳೆಯದು.

Popular Posts