Monday, November 30, 2009

Nuggekaayi saaru/ Drumstick samber


ನುಗ್ಗೆಕಾಯಿ ಸಾರು/ಸಾಂಬಾರ್:

ಬೇಕಾಗುವ ಸಾಮಗ್ರಿಗಳು:

ನುಗ್ಗೆಕಾಯಿ - 2 ಅಥವ 3 ಇಂಚಿನಷ್ಟು ಕತ್ತರಿಸಿಕೊಳ್ಳಿ
ತೊಗರಿಬೇಳೆ - 1 ಬಟ್ಟಲು
ಈರುಳ್ಳಿ ಹೆಚ್ಚಿದ್ದು ಸ್ವಲ್ಪ
ಟಮೋಟ ಹೆಚ್ಚಿದ್ದು ಸ್ವಲ್ಪ
ಹುಣಸೆರಸ ಒಂದು ಚಮಚ
ಸಾಂಬಾರ್ / ಸಾರಿನ ಪುಡಿ ರುಚಿಗೆ
ಉಪ್ಪು ರುಚಿಗೆ
ಎಣ್ಣೆ, ಸಾಸಿವೆ
ಅರಿಶಿಣ
ಇಂಗು ಕರಿಬೇವಿನ ಸೊಪ್ಪು
ತಯಾರಿಸುವ ರೀತಿ:
ಮೊದಲು ತೊಗರಿಬೇಳೆಯನ್ನು ನೀರು ,ಅರಿಶಿಣ ಮತ್ತು ಒಂದು ಚಮಚ ಎಣ್ಣೆ ಹಾಕಿ,ಬೇಯಿಸಿಕೊಂಡು ಅದಕ್ಕೆ ನುಗ್ಗೆಕಾಯಿ, ಟಮೋಟ, ಹುಣಸೆರಸ, ಸಾಂಬಾರ್ ಪುಡಿ ಮತ್ತು ಉಪ್ಪು ಹಾಕಿ ನುಗ್ಗೆಕಾಯಿ ಬೇಯುವವರೆಗೂ ಬೇಯಿಸಿ, ಸಾರಿನ ಹದಕ್ಕೆ ತಕ್ಕಂತೆ ನೀರು ಬೆರೆಸಿಕೊಳ್ಳಿ. ಕಾಯಿ ಸ್ವಲ್ಪ ಗಟ್ಟಿಯಾಗಿರುವಾಗಲೆ ಇಳಿಸಿ. ಇದಕ್ಕೆ ಒಗ್ಗರಣೆ ಹಾಕಿ ಬೆರೆಸಿ.
ಒಗ್ಗರಣೆಗೆ- ಪುಟ್ಟ ಪಾತ್ರೆಯಲ್ಲಿ ಒಂದೆರಡು ಚಮಚ ಎಣ್ಣೆಯನ್ನು ಬಿಸಿಮಾಡಿ ಸಾಸಿವೆ ಹಾಕಿ ಚಟಪಟ ಸಿಡಿದ ನಂತರ ಕರಿಬೇವು, ಇಂಗು ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಬೆರೆಸಿ. ಒಂದೆರಡು ನಿಮಿಷ ಬಾಡಿಸಿದ ನಂತರ ಅದನ್ನು ಸಾರಿಗೆ ಬೆರೆಸಿ. ನುಗ್ಗೆಕಾಯಿ ಸಾರು ಸಿದ್ಧ. ಇದನ್ನು ಅನ್ನದ ಜೊತೆ ಕೊಡಿ.

*-ನುಗ್ಗೆಕಾಯಿಯನ್ನು ಮೊದಲೆ ಬೇರೆ ಪಾತ್ರೆಯಲ್ಲಿ ಬೇಯಿಸಿ ಕೂಡ ಹಾಕಬಹುದು, ಇದು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೈಕ್ರೋವೆವ್ ಇರುವವರು ಅದರಲ್ಲಿ ಬೇಯಿಸಿಕೊಳ್ಳಬಹುದು, ಇದು ಬಹಳ ಸುಲಭ ಮತ್ತು ಬೇಗ ಆಗುತ್ತದೆ. ತುಂಬಾ ಕುಕ್ ಮಾಡಿದರೆ ನುಗ್ಗೆಕಾಯಿಗಳು ಒಡೆದು ಹೋಗುತ್ತವೆ. ನೋಡಿಕೊಂಡು ಬೇಯಿಸಿಕೊಳ್ಳಿ.
*- ಕಾಯಿ ಬೇಯಿಸಿ ಹಾಕಿದರೆ ಬೇಳೆ ಜೊತೆ ಹಾಕಿದಾಗ ಒಂದೆರಡು ಕುದಿ ಕುದ್ದ ಮೇಲೆ ಸ್ಟೌವ್ ಆಫ್ ಮಾಡಿ.

Thursday, November 26, 2009

Carrot Salad / carrot kosumabari-ಕ್ಯಾರೆಟ್ ಕೋಸುಂಬರಿ

ಕ್ಯಾರೆಟ್ ಕೋಸುಂಬರಿ:


ಸಾಮಗ್ರಿಗಳು:

ಕ್ಯಾರೆಟ್ ತುರಿದಿದ್ದು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಹಸಿಮೆಣಸಿನ ಕಾಯಿ ಪೇಸ್ಟ್ ಅಥವ ಸಣ್ಣಗೆ ಹೆಚ್ಚಿದ್ದು
ಕಾಯಿತುರಿ ಬೇಕಾದರೆ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಉಪ್ಪು ರುಚಿಗೆ

ತಯಾರಿಸುವ ವಿಧಾನ:
ಉಪ್ಪು ಮಾತ್ರ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ಉಪ್ಪನ್ನು ನೀಡುವಾಗ ಬೆರೆಸಿ ಕೊಡಿ. ಇದು ಅತೀ ಸುಲಭ ಕೋಸುಂಬರಿ ಮತ್ತು ರುಚಿ ಕೂಡ ಹಾಗೂ ಹಸಿಯಾಗಿ ಕ್ಯಾರೆಟ್ ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ.

Cucumber Lassi-ಸೌತೆಕಾಯಿ ಲಸ್ಸಿ

ಸೌತೆಕಾಯಿ ಲಸ್ಸಿ / ಪಾನೀಯ:

ಬೇಕಾಗುವ ಸಾಮಗ್ರಿಗಳು:

ಒಂದು ಸೌತೆಕಾಯಿ ತುರಿದಿದ್ದು/ ಹೆಚ್ಚಿದ್ದು - ಎರಡು ಚಮಚ
ಒಂದು ಬಟ್ಟಲು ಮೊಸರು
ಹಸಿಮೆಣಸಿನಕಾಯಿ - ಒಂದು
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಜೀರಿಗೆ ಕಾಲು ಚಮಚ
ಉಪ್ಪು ರುಚಿಗೆ

ತಯಾರಿಸುವ ರೀತಿ:

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ, ರುಬ್ಬಿ.
ತಂಪಾದ ಪಾನೀಯ ತಯಾರಾಗುತ್ತದೆ. ಇದು ರುಚಿಯಾಗಿ ಕೂಡ ಇರುತ್ತದೆ. ಆರೋಗ್ಯಕ್ಕೂ ಒಳ್ಳೆಯದು.

Monday, November 23, 2009

Puris / ಪೂರಿ


ಪೂರಿ:


ಬೇಕಾಗುವ ಸಾಮಗ್ರಿಗಳು:

ಮೈದಾ ಹಿಟ್ಟು - ಒಂದು ಬಟ್ಟಲು
ಗೋಧಿಹಿಟ್ಟು - ಒಂದು ಬಟ್ಟಲು
ಸ್ವಲ್ಪ ಉಪ್ಪು
ಡಾಲ್ಡ ಅಥವ ವೆಜಿಟಬಲ್ ತುಪ್ಪ- ಒಂದು ದೊಡ್ಡ ಚಮಚ

ತಯಾರಿಸುವ ರೀತಿ:

ಮೈದಾಹಿಟ್ಟು,ಗೋಧಿಹಿಟ್ಟು,ಉಪ್ಪು ಮತ್ತು ಡಾಲ್ಡ ಹಾಕಿ, ಎಲ್ಲವನ್ನೂ ಚೆನ್ನಾಗಿ ಬೆರೆಸಿ,ಅವಶ್ಯಕತೆ ಇರುವಷ್ಟು ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ,ಚೆನ್ನಾಗಿ ನಾದಿ,ಹದಿನೈದು ನಿಮಿಷ ಬಿಡಿ. ನಂತರ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪುಟ್ಟ ಪುಟ್ಟ ಚಪಾತಿಯಂತೆ ಲಟ್ಟಿಸಿ, ಅದನ್ನು ಮಧ್ಯಮ ಉರಿಯಲ್ಲಿ ಕಾಯಿಸಿರುವ ಎಣ್ಣೆಯಲ್ಲಿ ಬೇಯಿಸಿ.ಹೊಂಬಣ್ಣ ಬರುವವರೆಗೂ ಕರಿಯಿರಿ ಅಥವಾ ಬೆಂದಿದೆ ಎನಿಸಿದ ತಕ್ಷಣ ಎಣ್ಣೆಯಿಂದ ತೆಗೆದು ಅಗಲವಾದ ತಟ್ಟೆಗೆ ಹಾಕಿ. ಪೂರಿಯನ್ನು ಯಾವುದಾದರು ಗೊಜ್ಜು / ಚಟ್ನಿ / ಪಲ್ಯ ಜೊತೆ ತಿನ್ನಲು ನೀಡಿ. ಮಕ್ಕಳಿಗೆ ಪ್ರಿಯವಾದ ಪೂರಿ ತಯಾರ್.

Monday, November 2, 2009

Kidney Beans Sabji - ಹುರುಳೀಕಾಯಿಕಾಳು ಉಸಲಿ:

ಹುರುಳೀಕಾಯಿಕಾಳು ಉಸಲಿ:
ನಮ್ಮ ದೇಶದಲ್ಲಿ ಹುರುಳೀಕಾಯಿಕಾಳು ಸುಮಾರು ಬಣ್ಣಗಳಲ್ಲಿ ಬರುತ್ತದೆ. ಇದು ಹುರುಳಿಕಾಯಿಯಲ್ಲಿ ಸಿಗುತ್ತದೆ, ಇದು ಸಿಪ್ಪೆ ಸಮೇತ ಸಿಗುತ್ತದೆ. ಅಲ್ಲದೇ ಒಣಗಿದ ಕಾಳುಗಳು ಸಿಗುತ್ತವೆ ಮತ್ತು ಈಗ ಕ್ಯಾನ್ ನಲ್ಲಿ ಸಹ ಸಿಗುತ್ತದೆ.ಎಲ್ಲಕ್ಕಿಂತ ಹಸಿಕಾಳಿನಕಾಯಿ ತಂದು ಕಾಳು ಬಿಡಿಸಿ ಮಾಡುವುದು ಹೆಚ್ಚು ರುಚಿಯಾಗಿರುತ್ತದೆ ಮತ್ತು ಬೇಗ ಬೇಯುತ್ತದೆ. ಕ್ಯಾನ್ ನಲ್ಲಿ ಕೂಡ ಬಿಳಿ ಕಿಡ್ನಿ ಬೀನ್ಸ್ ಮತ್ತು ಕೆಂಪು ಕಿಡ್ನಿ ಬೀನ್ಸ್ ಗಳು ಸಿಗುತ್ತವೆ.

ಸಾಮಗ್ರಿಗಳು:

ಹುರುಳೀಕಾಯಿಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ

ವಿಧಾನ:

ಹುರುಳೀಕಾಳನ್ನು ಬಿಡಿಸಿಕೊಂಡು ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ.ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ,ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ,ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.

Capsicum Aloo Masala / ಆಲೂಗೆಡ್ಡೆ ಮಸಾಲೆ:

ದಪ್ಪಮೆಣಸಿನಕಾಯಿ ಮತ್ತು ಆಲೂಗೆಡ್ಡೆ ಮಸಾಲೆ:

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - ಸಣ್ಣಗೆ ಹೆಚ್ಚಿದ್ದು
ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ - 1 ಚಮಚ
ಆಲೂಗೆಡ್ಡೆ ಮತ್ತು ದಪ್ಪ ಮೆಣಸಿನಕಾಯಿ - ಹೆಚ್ಚಿಕೊಳ್ಳಿ( ಸ್ವಲ್ಪ ದಪ್ಪ ಇರಲಿ-ಪೀಸ್ ಗಳು)
ಟೋಮೋಟೋ ಪ್ಯೂರಿ -2 ಚಮಚ
ಗೋಡಂಬಿ ಪೇಸ್ಟ್ ಸ್ವಲ್ಪ
ದಪ್ಪ ಮೆಣಸಿನಕಾಯಿ ಹೋಳುಗಳು ಸ್ವಲ್ಪ
ಧನಿಯಾಪುಡಿ - 2 ಚಮಚ
ಅಚ್ಚಕಾರದ ಪುಡಿ
ಗರಂ ಮಸಾಲ - 1 ಚಮಚ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು
ಉಪ್ಪು
ಎಣ್ಣೆ - 2ಚಮಚ

ತಯಾರಿಸುವ ರೀತಿ:

ಮೊದಲು ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಕಾದ ಮೇಲೆ ಈರುಳ್ಳಿ ಹಾಕಿ ಬಾಡಿಸಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಒಂದೆರಡು ನಿಮಿಷ ಹುರಿದು ಧನಿಯಾಪುಡಿ,ಗರಂಮಸಾಲಾ ಮತ್ತು ಟಮೋಟ ಫ್ಯೂರಿ ಹಾಕಿ ಬಾಡಿಸಿ, ಆಲೂಗೆಡ್ಡೆ ತುಂಡುಗಳನ್ನು ಹಾಕಿ, ಐದಾರು ನಿಮಿಷ ಚೆನ್ನಾಗಿ ಬಾಡಿಸಿ ಮತ್ತು ಗೋಡಂಬಿ ಪೇಸ್ಟ್, ದಪ್ಪ ಮೆಣಸಿನಕಾಯಿ ಹಾಕಿ ಒಂದೆರಡು ನಿಮಿಷ ಹುರಿದು ನಂತರ ಅಚ್ಚಮೆಣಸಿನಪುಡಿ,ಉಪ್ಪು, ಕೊತ್ತುಂಬರಿ ಸೊಪ್ಪು ಸ್ವಲ್ಪ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ, ಕಾಲು ಕಪ್ ನೀರು ಹಾಕಿ ಬೇಯಲು ಬಿಡಿ. ಆಲೂ ಮತ್ತು ಮೆಣಸಿನಕಾಯಿ ಬೆಂದು ಅದರ ನೀರು ಎಲ್ಲಾ ಡ್ರೈ ಆದ ಮೇಲೆ ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ, ಚೆನ್ನಾಗಿ ಬೆರೆಸಿ.ಇದನ್ನು ಚಪಾತಿ,ಪೂರಿ,ಪರೋಟ ಅಥವಾ ಊಟಕ್ಕೆ ನೆಂಚಿಕೊಳ್ಳಲು ನೀಡಬಹುದು.

* ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಂತೆ ಬೆರೆಸಿಕೊಳ್ಳಿ.
* ಈ ಮಸಾಲ ತುಂಬಾ ತೆಳ್ಳಗೆ ಇರುವುದಿಲ್ಲ. ಮಸಾಲೆ ಸ್ವಲ್ಪ ಗಟ್ಟಿಯಾಗಿದ್ದರೆ ಚೆನ್ನಾಗಿರುತ್ತದೆ.
* ತರಕಾರಿಗಳನ್ನು ಬಹಳ ಬೇಯಿಸಬಾರದು.

Popular Posts