Monday, August 24, 2009

Dates Laddu/Ladu - ಖರ್ಜೂರದ ಉಂಡೆ:

ಖರ್ಜೂರದ ಉಂಡೆ:
ಖರ್ಜೂರವೂ ಒಣಗಿದ ಹಣ್ಣು(ಡ್ರೈ ಫ್ರೂಟ್ಸ್)ಗಳಲ್ಲೆಲ್ಲಾ ತುಂಬಾ ರುಚಿಯಾದ ಹಣ್ಣು. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಈ ಹಣ್ಣು ತುಂಬಾ ಉಷ್ಣ.
ಇದನ್ನು ತುಪ್ಪದ ಜೊತೆ ತಿಂದರೆ ಒಳ್ಳೆಯದು. ಖರ್ಜೂರದಲ್ಲಿ ಹಲವು ಬಗೆಗಳಿವೆ. ಖರ್ಜೂರವನ್ನು ಕಾಯಿಯಿಂದ ಹಿಡಿದು ಕೂಡ ಹಂತ ಹಂತವಾಗಿ ಬೆಳೆಯುತ್ತಿರುವ ಯಾವುದನ್ನು ತಿಂದರೂ,ಚೆನ್ನಾಗಿ ಹಣ್ಣಾಗಿರುವವರೆಗೂ ಕೂಡ ಒಂದೊಂದು ತರಹ ರುಚಿ ಕೊಡುತ್ತದೆ. ಒಂದೊಂದು ಹಂತದಲ್ಲಿ ಒಂದೊಂದು ರುಚಿ ಕೊಡುತ್ತದೆ. ಕಾಯಿಯಿಂದ ಹಣ್ಣಾಗುವವರೆಗಿನ ಯಾವ ಸಮಯದಲ್ಲಾದರೂ ಕಿತ್ತು ತಿನ್ನಬಹುದಾದಂತಹ ಹಣ್ಣು ಖರ್ಜೂರ. ಚೆನ್ನಾಗಿ ಹಣ್ಣಾದ ಮೇಲೂ ಕೂಡ ಅದು ಉಪಯೋಗಕ್ಕೆ ಬರುತ್ತದೆ,ಮುಂದೆ ಅದನ್ನೇ ಒಣಗಿಸಿ,'ಉತ್ತತ್ತಿ' ಅಂತ ತಯಾರಿಸುತ್ತಾರೆ. ಅದಂತೂ ವರುಷಗಟ್ಟಲೆ ಹಾಳಾಗದೆ ಇರುವುದರಿಂದ,ಯಾವಾಗಲೂ ಮನೆಯಲ್ಲಿ ಇಟ್ಟುಕೊಳ್ಳಬಹುದು. ಇದನ್ನು ಪಾಯಸ ಮತ್ತು ಇತರೆ ಉಂಡೆ ಮತ್ತು ಸಿಹಿಗಳಿಗೆ ಬೇಕಾದಾಗ ಉಪಯೋಗಿಸುತ್ತೇವೆ. ಈಗ ಇಲ್ಲಿ ಖರ್ಜೂರದಿಂದ ಉಂಡೆ/ಉಂಡಿಯನ್ನು ತಯಾರಿಸೋಣ.

ಬೇಕಾಗುವ ಸಾಮಗ್ರಿಗಳು:

ಖರ್ಜೂರ - ಒಂದು ಬಟ್ಟಲು
ಬೆಲ್ಲ - ರುಚಿಗೆ
ತುಪ್ಪ ಅಥವ ಬೆಣ್ಣೆ - ಎರಡು ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ಏಲಕ್ಕಿ ಪುಡಿ

ತಯಾರಿಸುವ ರೀತಿ:

ಮೊದಲಿಗೆ ಬಾಣಲೆಗೆ ತುಪ್ಪ/ಬೆಣ್ಣೆಯನ್ನು ಹಾಕಿ ಅದಕ್ಕೆ ಖರ್ಜೂರ ಮತ್ತು ಬೆಲ್ಲವನ್ನು ಹಾಕಿ,ಚೆನ್ನಾಗಿ ಕೆದಕಿ,ಅದನ್ನು ಹಾಗೇ ಐದು ನಿಮಿಷ ತಿರುಗಿಸುತ್ತಿರಿ. ಖರ್ಜೂರವೂ ಮೆತ್ತಾಗಾಗಿ ಮತ್ತು ಬೆಲ್ಲವೆಲ್ಲಾ ಕರಗಿ ಸ್ವಲ್ಪ ಉಂಡೆ ಹದಕ್ಕೆ ಬಂದಿದೆ ಎನಿಸಿದಾಗ, ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು,ಏಲಕ್ಕಿ ಪುಡಿಯನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ತುಂಬಾ ಗಟ್ಟಿಯಾಗುವ ಮೊದಲೇ ಒಲೆಯಿಂದ ಕೆಳಗಿಳಿಸಿ. ಸ್ವಲ್ಪ ಆರಿದ ನಂತರ ಚಿಕ್ಕ ಚಿಕ್ಕ ಉಂಡೆ ಕಟ್ಟಿ. ಈಗ ಪೌಷ್ಠಿಕವಾಗಿರುವಂತ ಖರ್ಜೂರದ ಉಂಡೆ ತಯಾರಾಗುತ್ತದೆ. ಮಕ್ಕಳಿಗೆ ತುಂಬಾ ಒಳ್ಳೆಯದು.

Wednesday, August 19, 2009

Peas Pulao/Palav - ಬಟಾಣಿ ಪಲಾವ್


ಬಟಾಣಿ ಪಲಾವ್

ಸಾಮಗ್ರಿಗಳು:

ಬಟಾಣಿ
ಈರುಳ್ಳಿ ಹೆಚ್ಚಿದ್ದು
ಹಸಿಮೆಣಸಿನಕಾಯಿ -ರುಚಿಗೆ
ಜೀರಿಗೆ
ಚೆಕ್ಕೆ, ಲವಂಗ,ಏಲಕ್ಕಿ ಮತ್ತು ಪತ್ರೆ
ಕಾಯಿತುರಿ
ಅಕ್ಕಿ - ನೆನೆಸಿದ್ದು
ಕೊತ್ತುಂಬರಿ ಸೊಪ್ಪು
ನಿಂಬೆರಸ
ಉಪ್ಪು
ಎಣ್ಣೆ
ಗೋಡಂಬಿ ಅಲಂಕರಿಸಲು

ತಯಾರಿಸುವ ವಿಧಾನ:

ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಕಾದ ಮೇಲೆ ಜೀರಿಗೆ, ಚೆಕ್ಕೆ,ಲವಂಗ,ಪತ್ರೆ ಮತ್ತು ಏಲಕ್ಕಿ ಹಾಕಿ, ಕೆದಕಿ,ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಈರುಳ್ಳಿ ಸ್ವಲ್ಪ ಕೆಂಪಾಗುವವರೆಗೂ ಬಾಡಿಸಿ, ಬಟಾಣಿ ಕಾಳುಗಳನ್ನು ಹಾಕಿ ಅದನ್ನು ಒಂದೆರಡು ನಿಮಿಷ ಹುರಿದು, ಅದಕ್ಕೆ ಉಪ್ಪು, ಕಾಯಿತುರಿ ಮತ್ತು ಅಳತೆ ನೀರನ್ನು ಹಾಕಿ, ನೆನೆಸಿದ ಅಕ್ಕಿಯನ್ನು ಹಾಕಿ, ನಿಂಬೆರಸ ಮತ್ತು ಕೊತ್ತುಂಬರಿ ಸೊಪ್ಪು ಹಾಕಿ, ಚೆನ್ನಾಗಿ ಬೆರೆಸಿ, ಮುಚ್ಚಿಟ್ಟು ಒಂದು ವಿಷ್ಹಲ್ ಕೂಗಿಸಿ ಒಲೆಯಿಂದ ಇಳಿಸಿ. ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ. ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಹಾಕಿ.ಅಲಂಕರಿಸಿ. ಮೊಸರಿನ ರಾಯತದೊಂದಿಗೆ ಬಡಿಸಿ.

Monday, August 17, 2009

Mysore Paak / ಮೈಸೂರ್ ಪಾಕ್

ಮೈಸೂರ್ ಪಾಕ್:
ಬೇಕಾಗುವ ಸಾಮಾಗ್ರಿಗಳು:
ಕಡಲೆಹಿಟ್ಟು-ಒಂದು ಕಪ್
ಸಕ್ಕರೆ - ಒಂದುವರೆ ಕಪ್
ನೀರು - ಎರಡು ಕಪ್
ತುಪ್ಪ - ಎರಡು ಕಪ್

ತಯಾರಿಸುವ ವಿಧಾನ:
ಮೊದಲಿಗೆ ಪಾಕವನ್ನು ತಯಾರಿಸಬೇಕು. ದಪ್ಪ ತಳದ ಪಾತ್ರೆಗೆ ಸಕ್ಕರೆಯನ್ನು ಹಾಕಿ ನೀರಿನೊಂದಿಗೆ ಬೆರೆಸಿ, ಕರಗಿ ಅದು ಎಳೆಪಾಕ ಬರುವವರೆಗೂ ಕುದಿಸಿ. ಎರಡು ಬೆರಳುಗಳ ಮದ್ಯೆ ಒಂದುಹನಿ ಪಾಕ ತೆಗೆದುಕೊಂಡು ನೋಡಿ ಪಾಕ ಬೆರಳುಗಳ ಮದ್ಯೆ ಎಳೆಯಂತೆ ಅಥವಾ ನಾರಿನಂತೆ ಬಂದ ತಕ್ಷಣ ಸ್ವಲ್ಪ ಸಣ್ಣ ಉರಿ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟು ಮತ್ತು ತುಪ್ಪವನ್ನು ಜೊತೆಯಲ್ಲಿಯೇ ಹಾಕುತ್ತಾ ಕೈ ಬಿಡದಂತೆ ತಿರುಗಿಸುತ್ತಿರಿ, ಗಂಟು ಗಂಟಾಗದಂತೆ ನೋಡಿಕೊಳ್ಳಿ. ಇದೇ ರೀತಿ ಎಲ್ಲಾ ಹಿಟ್ಟು ಮತ್ತು ತುಪ್ಪವನ್ನು ಹಾಕಿ, ಚೆನ್ನಾಗಿ ತಿರುಗಿಸುತ್ತಿರಿ. ಈ ಮಿಶ್ರಣವೂ ಗಟ್ಟಿಯಾಗುತ್ತಾ ಗೂಡು ಗೂಡಿನಂತೆ ಬಂದು ಪಾತ್ರೆಯ ತಳ ಬಿಡುತ್ತಾ ಬಂದ ತಕ್ಷಣ ಹದ ನೋಡಿಕೊಂಡು ಜಿಡ್ಡು ಸವರಿದ ತಟ್ಟೆಗೆ ಸುರಿದು ಆಯುತಾಕಾರವಾಗಿ ಅಥವಾ ಚೌಕಾಕಾರವಾಗಿ ಕತ್ತರಿಸಿ. ತಣ್ಣಗಾಗುವ ಮೊದಲೆ ಕತ್ತರಿಸಿ, ನಂತರ ಗಟ್ಟಿಯಾಗುತ್ತದೆ. ಒಮ್ಮೊಮ್ಮೆ ಹದ ಸರಿಯಾಗಿ ಬರದೇ ಇದ್ದಾಗ ಮೈಸೂರ್ ಪಾಕ್ ಗಟ್ಟಿಯಾಗಿ ಅಥವಾ ಮೆತ್ತಗೂ ಬರಬಹುದು, ಆದರೂ ತಿನ್ನಲು ರುಚಿಯಂತು ಇರುತ್ತದೆ. ಸವಿಯಾದ ಮೈಸೂರ್ ಪಾಕ್ ಸವಿಯಲು ಸಿದ್ದ.

Saturday, August 8, 2009

Hayagreeva / ಹಯಗ್ರೀವ

ಹಯಗ್ರೀವ :
ಬೇಕಾಗುವ ಪದಾರ್ಥಗಳು:
ಕಡಲೆಬೇಳೆ 1 ಕಪ್
ಬೆಲ್ಲ 11/2 ಕಪ್
ಶುಂಠಿ -ಅರ್ಧ ಇಂಚು
ಎಣ್ಣೆ - 1 ಚಮಚ
ಅರಿಶಿಣ - 1/2ಚಮಚ
ಚಿಟಿಕೆ ಉಪ್ಪು
ಗಸಗಸೆ 2ಟೇಬಲ್ ಚಮಚ
ಕೊಬ್ಬರಿ ತುರಿ ಸ್ವಲ್ಪ
ಗೋಡಂಬಿ
ಒಣದ್ರಾಕ್ಷಿ
ಬಾದಾಮಿ ಮತ್ತು ಪಿಸ್ತ(ಬೇಕಾದರೆ)
ಲವಂಗ 5-6
ತುಪ್ಪ
ಏಲಕ್ಕಿ ಪುಡಿ

ತಯಾರಿಸುವ ವಿಧಾನ:
ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಬೇಯಲು ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಹಾಕಿ, ಎಣ್ಣೆ, ಅರಿಶಿಣ,ಚಿಟಿಕೆ ಉಪ್ಪು ಮತ್ತು ಶುಂಠಿ ಹಾಕಿ ಬೇಯಿಸಿಟ್ಟುಕೊಳ್ಳ ಬೇಕು. ತುಂಬಾ ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಂತೆ ಬೇಯಿಸಿ (ಅಂಚು ಒಡೆದು ಬೇಯೋದು ಅಂತರಲ್ಲಾ ಹಾಗೆ) ಅಕಸ್ಮಾತ್ ನೀರು ಜಾಸ್ತಿ ಆಯಿತು ಎನಿಸಿದರೆ ಬೇಳೆಯನ್ನು ಬಸಿದುಕೊಳ್ಳಿ. ಬೆಂದ ಮೇಲೆ ಶುಂಠಿಯನ್ನು ಹೊರಗೆ ತೆಗೆದು ಹಾಕಿ.
ನಂತರ ಬೇರೆ ಪಾತ್ರೆಯಲ್ಲಿ ಕುಟ್ಟಿದ ಬೆಲ್ಲದ ಪುಡಿ ಮತ್ತು ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿ ಸಣ್ಣ ಪಾಕ ಬಂದ ನಂತರ ಅದಕ್ಕೆ ಬೇಯಿಸಿದ ಕಡಲೆಬೇಳೆಯನ್ನು ಹಾಕಿ ಬೆಲ್ಲ ಮತ್ತು ಬೇಳೆ ಚೆನ್ನಾಗಿ ಹೊಂದಿಕೊಳ್ಳುವವರೆಗೂ ತಿರುಗಿಸುತ್ತಿರಿ, ಕೈ ಬಿಡದೇ ತಿರುಗಿಸುತ್ತಾ ತಳ ಹತ್ತದಂತೆ ನೋಡಿಕೊಳ್ಳಿ. ಬೇಗ ತಳ ಹತ್ತುತ್ತದೆ. ನಂತರ ಅದಕ್ಕೆ ಒಣಕೊಬ್ಬರಿತುರಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಮತ್ತು ಲವಂಗವನ್ನು ಹಾಕಿ,ಬಾದಾಮಿ,ಪಿಸ್ತ ಹಾಕುವುದಾದರೆ ಅದನ್ನು ಹಾಕಿ. ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಗಸಗಸೆಯನ್ನು ಸೇರಿಸಿ ಮತ್ತೆ ಚೆನ್ನಾಗಿ ಬೆರೆಸಿ,ಇಳಿಸಿ. ಮೇಲೆ ಒಂದೆರಡು ಚಮಚ ತುಪ್ಪ ಹಾಕಿ. ಸವಿಸವಿಯಾದ,ರುಚಿರುಚಿಯಾದ,ಗುರುರಾಯರಿಗೆ ಪ್ರಿಯವಾದ ಹಯಗ್ರೀವ ಸಿದ್ದ.

Thursday, August 6, 2009

Raagi Mudde /ರಾಗಿ ಮುದ್ದೆ


ರಾಗಿ ಮುದ್ದೆ:

ಬೇಕಾಗುವ ಸಾಮಗ್ರಿಗಳು:

ರಾಗಿಹಿಟ್ಟು - ಒಂದು ಬಟ್ಟಲು
ನೀರು - ಎರಡು-ಮೂರು ಬಟ್ಟಲು
ಚಿಟಿಕೆ ಉಪ್ಪು

ತಯಾರಿಸುವ ವಿಧಾನ:

ಮೊದಲು ಸ್ವಲ್ಪ ಆಳ ಮತ್ತು ಅಗಲವಾಗಿರುವ ಪಾತ್ರೆಯಲ್ಲಿ ಅಳತೆ ನೀರನ್ನು ಮತ್ತು ಉಪ್ಪು ಹಾಕಿ ಅದು ಚೆನ್ನಾಗಿ ಕುದಿಯಲು ಬಿಡಿ. ನಂತರ ನಿಧಾನವಾಗಿ ರಾಗಿಹಿಟ್ಟನ್ನು ನೀರಿನ ಮಧ್ಯ ಭಾಗಕ್ಕೆ ಬರುವಂತೆ ಹಾಗೆ ಒಟ್ಟಿಗೆ ಹಾಕಿ, ಹಿಟ್ಟನ್ನು ಮತ್ತೆ ಮುಟ್ಟದೆ ಅದು ಚೆನ್ನಾಗಿ ಹತ್ತರಿಂದ ಹದಿನೈದು ನಿಮಿಷ ಬೇಯಲು ಬಿಟ್ಟು. ಅದು ಬೆಂದಿದೆ ಎನಿಸಿದ ತಕ್ಷಣ ಒಂದು ಸೌಟ್ ಅಥವಾ ಮರದ ಕೋಲಿನಿಂದ ಹಿಟ್ಟಿನ ಮಧ್ಯದಿಂದ ಹಾಗೇ ಒಂದೇಸಾರಿ ಎಲ್ಲಾ ಹಿಟ್ಟನ್ನು ಚೆನ್ನಾಗಿ ಕೈ ಆಡಿಸಿ. ಪೂರ್ತಿ ಹಿಟ್ಟು ಮತ್ತು ನೀರನ್ನು ಸರಿಯಾಗಿ ಬೆರೆಸಿ, ಗಂಟಿಲ್ಲದಂತೆ ಬೆರೆಸಿ. ಸ್ವಲ್ಪ ಗಟ್ಟಿ ಎನಿಸಿದರೆ ಮತ್ತೆ ಸ್ವಲ್ಪ ನೀರು ಹಾಕಿಕೊಂಡು ಬೆರೆಸಿ. ನಂತರ ಬೆರೆಸಿದ ಪೂರ್ತಿ ರಾಗಿಹಿಟ್ಟನ್ನು ತಟ್ಟೆ ಅಥವಾ ಚಾಪಿಂಗ್ ಬೋರ್ಡ್ ಅಥವಾ ಮರದ ಮಣೆ, ಮೇಲೆ ಹಾಕಿಕೊಂಡು, ಸ್ವಲ್ಪ ಲಘುವಾಗಿ ನಾದಿ ನಿಮಗೆ ಎಷ್ಟು ಬೇಕೋ ಅಷ್ಟು ಗಾತ್ರದ ಉಂಡೆಯನ್ನು ತಯಾರಿಸಿಕೊಳ್ಳಿ. ಕೈಗೆ ಸ್ವಲ್ಪ ತುಪ್ಪ ಮತ್ತು ನೀರನ್ನು ಸವರಿಕೊಂಡು ನಾದಿ. ಹೀಗೆ ತಯಾರಿಸಿದಾಗ ರಾಗಿಮುದ್ದೆ ತಯಾರಾಗುತ್ತದೆ. ಈ ರಾಗಿಮುದ್ದೆಯನ್ನು ಸೊಪ್ಪಿನ ಬಸ್ಸಾರು ಅಥವ ಮಸಾಲೆಸಾರು ಅಥವ ನಾನ್ ವೆಜ್ ಸಾರುಗಳೊಂದಿಗೆ ಸರ್ವ್ ಮಾಡಿ. ನಮ್ಮ ಕರ್ನಾಟಕದಲ್ಲಿ ರಾಗಿಮುದ್ದೆ ಬಸ್ಸಾರು ತುಂಬಾ ಪ್ರಸಿಧ್ಧವಾಗಿದೆ.ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವುದು ಮತ್ತು ರೋಗಗಳಿಗೆ ಮದ್ದಾಗಿರುವುದು ಈ ರಾಗಿಮುದ್ದೆ.

*ಕೆಲವರು ಮೊದಲೆ ನೀರಿಗೆ ಸ್ವಲ್ಪವೇ ಅಂದರೆ ಒಂದೆರಡು ಚಮಚ ರಾಗಿಹಿಟ್ಟನ್ನು ಕಲಸಿ,ಒಲೆಯ ಮೇಲೆ ಇಟ್ಟು ಅದನ್ನು ತಿರುಗಿಸುತ್ತಿದ್ದು,ನೀರು ಕುದಿ ಬಂದ ನಂತರ ಉಳಿದ ಎಲ್ಲಾ ಹಿಟ್ಟನ್ನು ಒಮ್ಮೆಲೆ ಹಾಕಿ,ಬೇಯಿಸಿ,ನಂತರ ಬೆರೆಸುತ್ತಾರೆ.ಹಾಗೂ ತಯಾರಿಸಬಹುದು.

Popular Posts