Thursday, July 30, 2009

Sabbakki Shyavige Payasa /ಸಬ್ಬಕ್ಕಿ-ಶ್ಯಾವಿಗೆ ಪಾಯಸ

ಸಬ್ಬಕ್ಕಿ-ಶ್ಯಾವಿಗೆ ಪಾಯಸ:

ಸಾಮಗ್ರಿಗಳು:

ಸಬ್ಬಕ್ಕಿ - ಒಂದು ಕಪ್
ಶ್ಯಾವಿಗೆ - ಅರ್ಧ ಕಪ್
ಹಾಲು - ಒಂದು ಕಪ್
ಸಕ್ಕರೆ ಅಥವ ಬೆಲ್ಲ ರುಚಿಗೆ
ದ್ರಾಕ್ಷಿ ಮತ್ತು ಗೋಡಂಬಿ
ತುಪ್ಪ
ಏಲಕ್ಕಿ ಪುಡಿ

ತಯಾರಿಸುವ ರೀತಿ:

ಒಂದೆರಡು ಚಮಚ ತುಪ್ಪವನ್ನು ಕಾಯಿಸಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ. ಅದೇ ತುಪ್ಪದಲ್ಲಿ ಶ್ಯಾವಿಗೆಯನ್ನು ಹಾಕಿ ಚೆನ್ನಾಗಿ ಹುರಿದಿಡಿ. ಅದಕ್ಕೆ ಸಬ್ಬಕ್ಕಿಯನ್ನು ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಅರ್ಧ ಬೆಂದಿದೆ ಎನಿಸಿದಾಗ ಹಾಲು ಮತ್ತು ಸಕ್ಕರೆ ಸೇರಿಸಿ ಕುದಿಸಿ. ಸಬ್ಬಕ್ಕಿ ಮತ್ತು ಶ್ಯಾವಿಗೆ ಎರಡು ಚೆನ್ನಾಗಿ ಬೇಯಿಸಿ, ಅದಕ್ಕೆ ಏಲಕ್ಕಿ ಪುಡಿ,ಮತ್ತೆ ಒಂದೆರಡು ಚಮಚ ತುಪ್ಪ ಸೇರಿಸಿ.ಬೆರೆಸಿ. ಸಬ್ಬಕ್ಕಿಯು ದುಂಡಾಗಿ ಆಗಿ ಬೆಂದಿದೆ ಎನಿಸಿದ ಮೇಲೆ ಇಳಿಸಿ. ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ. ಕೇಸರಿ ದಳಗಳನ್ನು ಹಾಲಿನಲ್ಲಿ ನೆನೆಸಿ ಹಾಕಬಹುದು ಬೇಕಾದರೆ. ಅಥವ ನಿಮಗೆ ಇಷ್ಟವಾದ ಎಸೆನ್ಸ್ ಹಾಕಿಕೊಳ್ಳಬಹುದು. ಬರೀ ಶ್ಯಾವಿಗೆ ಪಾಯಸ ತಯಾರಿಸುವ ಬದಲು,ಈ ತರಹ ಬೇರೆ ರೀತಿಯಲ್ಲಿ ತಯಾರಿಸಬಹುದು. ಸಬ್ಬಕ್ಕಿ-ಶ್ಯಾವಿಗೆ ಪಾಯಸ ತಯಾರ್.
* ಸಬ್ಬಕ್ಕಿ ಮತ್ತು ಶ್ಯಾವಿಗೆಯನ್ನು ಮೊದಲೇ ಬೇಯಿಸಿ ಕೂಡ ಇಟ್ಟುಕೊಳ್ಳಬಹುದು.
* ಸಬ್ಬಕ್ಕಿಯಲ್ಲಿ ಕೆಲವು ತರ ಇದೆ. ನೀವು ಉಪಯೋಗಿಸುವ ಸಬ್ಬಕ್ಕಿ ಯಾವುದೆಂದು ತಿಳಿದು,ಅದಕ್ಕೆ ಯಾವ ರೀತಿ ತಯಾರಿಸಬೇಕೋ. ಆ ರೀತಿ ತಯಾರಿಸಿ.ಸಬ್ಬಕ್ಕಿ ಬೇಗ ಬೇಯುತ್ತದೆ. ಬೆಂದ ಮೇಲೆ ನೋಡಲು ಚೆನ್ನಾಗಿ ಕಾಣುತ್ತದೆ.

Tuesday, July 28, 2009

Coconut Burfi / Kobbari Mithayi - ಕೊಬ್ಬರಿ ಮಿಠಾಯಿ

ಕೊಬ್ಬರಿ ಮಿಠಾಯಿಬೇಕಾಗುವ ಸಾಮಗ್ರಿಗಳು :

ತೆಂಗಿನಕಾಯಿ ತುರಿ - 1 ಬಟ್ಟಲು ಬಿಳಿ ಭಾಗ ಮಾತ್ರ ತುರಿದಿದ್ದು
ಸಕ್ಕರೆ - 3/4 ಬಟ್ಟಲು ಅಥವ 1 ಬಟ್ಟಲು
ಹಾಲು - 1ಕಪ್
ಏಲಕ್ಕಿ ಪುಡಿ - ಒಂದು ಚಮಚ
ತುಪ್ಪ ತಟ್ಟೆಗೆ ಸವರಲು
ದ್ರಾಕ್ಷಿ ಮತ್ತು ಗೋಡಂಬಿ (ಹಾಕ ಬೇಕಾಗಿಲ್ಲ,ಬೇಕೆನಿಸಿದರೆ)

ತಯಾರಿಸುವ ವಿಧಾನ :
ಒಂದು ದಪ್ಪತಳದ ಪಾತ್ರೆಯಲ್ಲಿ ಕೊಬ್ಬರಿ ಮತ್ತು ಸಕ್ಕರೆ ಬೆರಸಿ, ನಂತರ ಹಾಲು ಕೂಡ ಹಾಕಿ ಕೆದಕುತ್ತಿರಿ. ಮೊದಲು ಚೆನ್ನಾಗಿ ಕುದಿಬರುವವರೆಗು ಸರಿಯಾದ ಉರಿಯಲ್ಲಿ ಕೈ ಬಿಡದೆ ತಿರುವುತ್ತಿರಿ, ಏಲಕ್ಕಿ ಪುಡಿ ಸೇರಿಸಿ, ದ್ರಾಕ್ಷಿ , ಗೋಡಂಬಿ ಹಾಕುವುದಿದ್ದರೆ ಈಗ ಕೂಡ ಹಾಕಬಹುದು, ಆಮೇಲೆ ಮಿಶ್ರಣ ತಳ ಬಿಡುತ್ತಾ ಬರುವಾಗ ಸಣ್ಣ ಉರಿ ಮಾಡಿಕೊಂಡು ಹಾಗೇಯೆ ತಿರುಗಿಸುತ್ತಿರಿ, ಹದ ಬಂದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಸುರಿದು ಸಮನಾಗಿ ಹರಡಿ, ದ್ರಾಕ್ಷಿ, ಗೋಡಂಬಿಯಿಂದ ಅಲಂಕರಿಸಿ . ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

Friday, July 24, 2009

Carrot Halwa / ಕ್ಯಾರೆಟ್ ಹಲ್ವ

ಕ್ಯಾರೆಟ್ ಹಲ್ವ:
ಬೇಕಾಗುವ ಸಾಮಗ್ರಿಗಳು:

ಒಂದು ಕಪ್ ಕ್ಯಾರೆಟ್ ತುರಿ,
ಎರಡು ಕಪ್ ಹಾಲು,
ಸಕ್ಕರೆ ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ,
ತುಪ್ಪ
ಸ್ವಲ್ಪ ಕೇಸರಿ ದಳ (ಬೇಕಿದ್ದರೆ)

ತಯಾರಿಸುವ ವಿಧಾನ:
ತುರಿದ ಕ್ಯಾರೆಟನ್ನು ಎರಡು ಚಮಚ ತುಪ್ಪದಲ್ಲಿ ಸ್ವಲ್ಪ ಹುರಿದುಕೊಳ್ಳಿ. ನಂತರ ಅದಕ್ಕೆ ಹಾಲು ಹಾಕಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ ತಳ ಹಿಡಿಯದಂತೆ ಮದ್ಯೆ ಮದ್ಯೆ ತಿರುವುತ್ತಿರಿ. ಬೇಗ ತಳ ಹತ್ತುತ್ತದೆ, ಸರಿಯಾಗಿ ತಿರುವುತ್ತಿರಿ, ಇಲ್ಲ ಅಂದರೆ ಹಲ್ವ ಸೀದ ವಾಸನೆ ಬರುತ್ತದೆ. ಕ್ಯಾರೆಟ್ ತುರಿ ಬೆಂದ ನಂತರ ಸಕ್ಕರೆ ಹಾಕಿ ಅದು ಕರಗುತ್ತಿದ್ದಂತೆಯೇ ಚೆನ್ನಾಗಿ ಹೊಂದಿಕೊಳ್ಳುವಂತೆ ಬೆರೆಸಿ .ಕೇಸರಿ ಹಾಕುವುದಾದರೆ ಅದನ್ನು 2 ಚಮಚ ಹಾಲಿನಲ್ಲಿ ಮೊದಲೆ ನೆನೆಸಿಟ್ಟು,ಈಗ ಹಾಕಿ. ಮತ್ತೆರಡು ಚಮಚ ತುಪ್ಪ ಸೇರಿಸಿ.ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿ.ಚೆನ್ನಾಗಿ ಬೆರೆಸಿ. ಕ್ಯಾರೆಟ್ ಹಲ್ವ ರೆಡಿ.

ಟಿಪ್ಸ್: ಮೈಕ್ರೋವೆವ್ ಇರುವವರು - ಹುರಿದ ಮೇಲೆ ಕ್ಯಾರೆಟ್ ಮತ್ತು ಹಾಲನ್ನು ಸೇಫ್ ಡಿಶ್ ಗೆ ಹಾಕಿ ಬೇಯಿಸಿಕೊಳ್ಳಿ ಮತ್ತು ಬೆಂದ ಮೇಲೆ ಅದಕ್ಕೆ ಸಕ್ಕರೆ ಹಾಕಿ ಮತ್ತೆ ಕುಕ್ ಮಾಡಿ, ಆಮೇಲೆ ತುಪ್ಪ, ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ. ಇದು ತುಂಬಾ ಸುಲಭ ತಳಹತ್ತುವ ಭಯ ಇರಲ್ಲ, ಬೇಗ ಕೂಡ ಆಗುತ್ತದೆ.
ಮೈಕ್ರೋವೆವ್ ಇಲ್ಲದಿರುವವರು- ಕುಕ್ಕರ್ ನಲ್ಲಿ ಬೇಯಿಸಿಕೊಂಡು ತಯಾರಿಸಬಹುದು.

Sunday, July 12, 2009

Ragi Roti / Rotti - ರಾಗಿರೊಟ್ಟಿ:

ರಾಗಿರೊಟ್ಟಿ:

ಸಾಮಗ್ರಿಗಳು:

ರಾಗಿಹಿಟ್ಟು - ಎರಡು ಬಟ್ಟಲು
ಗೋಧಿಹಿಟ್ಟು - ನಾಲ್ಕು ಚಮಚ
ಉಪ್ಪು ಸ್ವಲ್ಪ
ಬಿಸಿನೀರು

ವಿಧಾನ:

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ, ಬಿಸಿನೀರು ಹಾಕಿ ರೊಟ್ಟಿಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
ಕಿತ್ತಳೆ ಗಾತ್ರದಲ್ಲಿ ಉಂಡೆಗಳನ್ನು ತೆಗೆದುಕೊಂಡು, ರೊಟ್ಟಿ ತಟ್ಟಿ ತವಾ ಮೇಲೆ ಹಾಕಿ ಬೇಯಿಸಿ. ಎರಡು ಬದಿ ಸರಿಯಾಗಿ ಬೇಯಿಸಿ, ರಾಗಿರೊಟ್ಟಿ ತಯಾರಾಗುತ್ತದೆ. ಇದನ್ನು ಚಟ್ನಿಯೊಂದಿಗೆ ಸರ್ವ್ ಮಾಡಿ. ಬೆಣ್ಣೆ ಮತ್ತು ಖಾರಚಟ್ನಿ ಜೊತೆ ಸಹ ಕೊಡಬಹುದು.ಕೊತ್ತುಂಬರಿಸೊಪ್ಪಿನ ಚಟ್ನಿಯೂ ಹೊಂದುತ್ತದೆ. ಈ ಚಟ್ನಿಗೆ ಕೆಲವರು ಗೊಡ್ಡುಖಾರ ಅಂತ ಕರೆಯುತ್ತಾರೆ. ಈ ರಾಗಿರೊಟ್ಟಿ ಮತ್ತು ಗೊಡ್ಡುಖಾರ ಜೊತೆ ತಿಂದರೆ ಗಂಟಲು ನೋವಿಗೆ ಸ್ವಲ್ಪ ಉಪಶಮನ ಸಿಗುತ್ತದೆ.

* ರೊಟ್ಟಿ ತಟ್ಟುವಾಗ ಮತ್ತು ಬೇಯಿಸುವಾಗ ಎಣ್ಣೆ ಹಾಕಿಕೊಳ್ಳಬಹುದು.
* ಕಲೆಸಿಕೊಳ್ಳುವಾಗ ಅನ್ನವನ್ನು ಸಹ ಚೆನ್ನಾಗಿ ಮಿದ್ದು (ಪೇಸ್ಟ್) ಸೇರಿಸಬಹುದು.

Monday, July 6, 2009

KadleHittina Burfi-- ಕಡ್ಲೆಹಿಟ್ಟಿನ ಬರ್ಫಿ


ಕಡ್ಲೆಹಿಟ್ಟಿನ ಬರ್ಫಿ:

ಬೇಕಾಗುವ ಸಾಮಗ್ರಿಗಳು:
ಕಡ್ಲೆಹಿಟ್ಟು- ಒಂದು ಕಪ್
ಸಕ್ಕರೆ - ಒಂದು ಕಪ್/ರುಚಿಗೆ ತಕ್ಕಷ್ಟು
ಹಾಲು - ಅರ್ಧ ಕಪ್
ತುಪ್ಪ - ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವ ವಿಧಾನ:

ಕಡ್ಲೆಹಿಟ್ಟನ್ನು ಪ್ಯಾನ್ ನಲ್ಲಿ ಹಾಕಿ ಒಂದು ಚಮಚ ತುಪ್ಪ ಹಾಕಿಕೊಂಡು ಹಿಟ್ಟಿನ ಹಸಿವಾಸನೆ ಹೋಗುವವರೆಗೂ ಅಥವಾ ಸ್ವಲ್ಪ ಬಣ್ಣ ಬದಲಾಗುತ್ತದೆ,ಅಲ್ಲಿವರೆಗು ಹುರಿದು ತೆಗೆದಿಡಿ(ಹಿಟ್ಟನ್ನು ಸೀದಿಸಬೇಡಿ). ಒಂದು ಪಾತ್ರೆಗೆ ಕಡ್ಲೆಹಿಟ್ಟನ್ನು ಹಾಕಿ,ಸ್ವಲ್ಪ ಉರಿಯಲ್ಲಿ ಇಟ್ಟು ಅದಕ್ಕೆ ಸಕ್ಕರೆ ಮತ್ತು ಹಾಲು ಹಾಕಿ ಬೆರೆಸಿ,ಮಧ್ಯೆ ಬಿಟ್ಟು ಬಿಟ್ಟು ಕೆದಕುತ್ತಿರಿ, ಸ್ವಲ್ಪ ಹೊತ್ತಿನ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.ಕೈ ಬಿಡದೇ ಚೆನ್ನಾಗಿ ಕೆದಕುತ್ತಿರಿ,ತಳ ಹಿಡಿಯದಂತೆ ತಿರುಗಿಸಿ,ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ತುಪ್ಪ ಒಂದು ಕಡೆ ಬೇರೆಯಾಗುತ್ತಾ ಬರುವಾಗ,ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ, ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ಡೈಮೆಂಡ್ ಆಕಾರ ಅಥವಾ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ತಿನ್ನಲು ಕಡ್ಲೆಹಿಟ್ಟಿನ ಬರ್ಫಿ ತಯಾರಾಗುತ್ತದೆ.

Popular Posts