Sunday, October 26, 2008

Almond Burfi/badam burfi-ಬಾದಾಮಿ ಬರ್ಫಿ:


ಬಾದಾಮಿ ಬರ್ಫಿ:

ಬೇಕಾಗುವ ಸಾಮಗ್ರಿಗಳು:

ಬಾದಾಮಿ- ಒಂದು ಕಪ್
ಸಕ್ಕರೆ - ಒಂದು ಕಪ್/ರುಚಿಗೆ ತಕ್ಕಷ್ಟು
ಹಾಲು - ಅರ್ಧ ಕಪ್
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ತುಪ್ಪ - ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವ ವಿಧಾನ:
ಬಾದಾಮಿಯನ್ನು ಒಂದು ಗಂಟೆ ನೆನೆಸಿ,ಅದರ ಸಿಪ್ಪೆ ತೆಗೆದು,ನೀರು ಹಾಕದೆ ನುಣ್ಣಗೆ ಪೇಸ್ಟ್ ತರಹ ಮಾಡಿಕೊಂಡು,ಅದನ್ನು ಒಂದು ಪಾತ್ರೆಗೆ ಹಾಕಿ, ಸ್ವಲ್ಪ ಉರಿಯಲ್ಲಿ ಇಟ್ಟು ಹಸಿವಾಸನೆ ಹೋಗುವವರೆಗೂ ಕೈಆಡಿಸುತ್ತಿರಿ,ಅದರ ಬಣ್ಣ ಸ್ವಲ್ಪ ಬದಲಾದ ಮೇಲೆ ಅದಕ್ಕೆ ಸಕ್ಕರೆ ಮತ್ತು ಕಂಡೆನ್ಸ್ಡ್ ಮಿಲ್ಕ್ ಹಾಕಿ ಬೆರೆಸಿ,ಮಧ್ಯೆ ಬಿಟ್ಟು ಬಿಟ್ಟು ಕೆದಕುತ್ತಿರಿ,ಸ್ವಲ್ಪ ಹೊತ್ತಿನ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಕೈ ಬಿಡದೇ ಚೆನ್ನಾಗಿ ಕೆದಕುತ್ತಿರಿ, ತಳ ಹಿಡಿಯದಂತೆ ತಿರುಗಿಸಿ,ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ತುಪ್ಪ ಒಂದು ಕಡೆ ಬೇರೆಯಾಗುತ್ತಾ ಬರುವಾಗ,ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ, ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ಡೈಮೆಂಡ್ ಆಕಾರ ಅಥವಾ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ತಿನ್ನಲು ಬಾದಾಮಿ ಬರ್ಫಿ ತಯಾರಾಗುತ್ತದೆ. ಮಕ್ಕಳಿಗೆ ಪ್ರಿಯವಾದ ಬಾದಾಮಿ ಬರ್ಫಿಗಳು ತಯಾರು.

Thursday, October 23, 2008

Massoppu- ಮಸ್ಸೊಪ್ಪು:


ಸೊಪ್ಪನ್ನು ಮಸೆದು ತಯಾರಿಸುವ ಸಾರಿಗೆ ’ಮಸ್ಸೊಪ್ಪು’ /’ಮಸ್ಸೊಪ್ಪು ಸಾರು’ ಎಂದು ಕರೆಯುವರು.

ಮಸ್ಸೊಪ್ಪು:

ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ - ಒಂದು ಕಪ್
ಪಾಲಕ್ ಸೊಪ್ಪು/ ಮೆಂತ್ಯದ ಸೊಪ್ಪು
ಸಾರಿನಪುಡಿ /ಸಾಂಬಾರ್ ಪುಡಿ
ಈರುಳ್ಳಿ, ಬೆಳ್ಳುಳ್ಳಿ
ಕಾಯಿತುರಿ
ಹುಣಸೇರಸ
ಎಣ್ಣೆ,ಸಾಸಿವೆ
ಅರಿಸಿನ,ಇಂಗು
ಕರಿಬೇವು
ಉಪ್ಪು

ತಯಾರಿಸುವ ರೀತಿ:
ತೊಗರಿಬೇಳೆಯನ್ನು ಬೇಯಿಸಿಕೊಂಡು ಅದಕ್ಕೆ ತೊಳೆದು,ಕತ್ತರಿಸಿದ ಸೊಪ್ಪನ್ನು ಹಾಕಿ,ಅದಕ್ಕೆ ಒಂದೆರಡು ಅಳಕು ಬೆಳ್ಳುಳ್ಳಿಯನ್ನು ಹಾಕಿ,ಟಮೋಟ ಕೂಡ ಹಾಕಿ ಸೊಪ್ಪು ಬೇಯುವವರೆಗು ಬೇಯಿಸಿ. ಬೆಂದ ನಂತರ ಸ್ವಲ್ಪ ಬೇಳೆಸೊಪ್ಪಿನ ಮಿಶ್ರಣವನ್ನು ಮಸೆದುಕೊಳ್ಳಿ.
ಈ ಕಡೆ ಕಾಯಿತುರಿ,ಸ್ವಲ್ಪ ಈರುಳ್ಳಿ,ಸಾರಿನಪುಡಿ,ಒಂದು ಅಳಕುಬೆಳ್ಳುಳ್ಳಿಯನ್ನು ಸೇರಿಸಿ ಒಟ್ಟಿಗೆ ರುಬ್ಬಿಕೊಳ್ಳಿ.
ನಂತರ ಪಾತ್ರೆಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ,ಸಾಸಿವೆ,ಕರಿಬೇವು,ಇಂಗು ಜಜ್ಜಿದ ಬೆಳ್ಳುಳ್ಳಿ ಮತ್ತು ರುಬ್ಬಿದ ಮಿಶ್ರಣ ಹಾಕಿ,ಕುದಿಸಿ,ಉಪ್ಪು ಸೇರಿಸಿ,ಮಸೆದಿರುವ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಹಾಕಿ,ಹುಣಸೇಹುಳಿ ಸೇರಿಸಿ ಒಂದು ಬಾರಿ ಕುದಿಸಿ. ಕೆಳಗಿಳಿಸಿ. ಈ ಸಾರನ್ನು ಮುದ್ದೆ ಮತ್ತು ಅನ್ನದೊಂದಿಗೆ ನೀಡಬೇಕು. ಇದು ಚಪಾತಿ ಮತ್ತು ರೊಟ್ಟಿಗೂ ಚೆನ್ನಾಗಿರುತ್ತದೆ. ಆದರೆ ಗಟ್ಟಿಯಾಗಿ ತಯಾರಿಸಬೇಕು.

* ಮಸಾಲೆ ರುಬ್ಬದೇ,ಬರೀ ಸಾರಿನಪುಡಿ ಮಾತ್ರ ಹಾಕಿ ಸಹ ತಯಾರಿಸಬಹುದು,ಆಗ ತೆಂಗಿನತುರಿ ಬಿಡಬೇಕು.
* ಒಗ್ಗರಣೆ ಹಾಕಿದ ಮೇಲೆ ಅದಕ್ಕೆ ಬೇಯಿಸಿದ-ಮಸೆದ ಮಿಶ್ರಣವನ್ನು ಹಾಕಿ,ಸಾರಿನಪುಡಿ,ಉಪ್ಪು ಮತ್ತು ಹುಳಿಯನ್ನು ರುಚಿಗೆ ತಕ್ಕಷ್ಟು ಸೇರಿಸಿಕೊಂಡು ಕುದಿಸಿ.ಇಳಿಸಿ.

Monday, October 20, 2008

Sprouts Sabzi /ಮೊಳಕೆಹೆಸರುಕಾಳಿನ ಉಸಲಿ:

ಮೊಳಕೆಹೆಸರುಕಾಳಿನ ಉಸಲಿ

ಸಾಮಗ್ರಿಗಳು:

ಮೊಳಕೆ ಹೆಸರುಕಾಳು
ಹಸಿಮೆಣಸಿನಕಾಯಿ
ಬೆಲ್ಲ
ಎಣ್ಣೆ
ಜೀರಿಗೆ
ಉಪ್ಪು
ತೆಂಗಿನತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:
ಹೆಸರುಕಾಳನ್ನು ಸ್ವಲ್ಪ ಅಂದರೆ ಅರ್ಧ ಮಾತ್ರ ಬೇಯಿಸಿ.
ಎಣ್ಣೆ ಕಾಯಿಸಿ ಜೀರಿಗೆ ಹಾಕಿ,ಒಂದು ನಿಮಿಷ ಹುರಿದು,ಮೊಳಕೆ ಕಾಳುಗಳನ್ನು ಹಾಕಿ,ಹಸಿಮೆಣಸಿನಕಾಯಿ ಹಾಕಿ ಬೆರೆಸಿ,ಒಂದೆರಡು ನಿಮಿಷ ತಿರುಗಿಸಿ,ಬೆಲ್ಲ ಮತ್ತು ಉಪ್ಪು ಹಾಕಿ.ಕಾಯಿತುರಿ,ಕೊತ್ತುಂಬರಿಸೊಪ್ಪು,ನಿಂಬೆರಸ ಹಾಕಿ ಬೆರೆಸಿ. ಕೊತ್ತುಂಬರಿಸೊಪ್ಪಿನಿಂದ ಅಲಂಕರಿಸಿ.

Friday, October 17, 2008

Dates Raita / ಖರ್ಜೂರದ ರಾಯಿತ:

ಸಾಮಗ್ರಿಗಳು:

ಖರ್ಜೂರ - ಐದು/ಆರು
ಕಾಯಿತುರಿ ಸ್ವಲ್ಪ
ಕಾಳು ಮೆಣಸಿನ ಪುಡಿ
ಉಪ್ಪು
ಮೊಸರು

ವಿಧಾನ:
ಖರ್ಜೂರವನ್ನು ಮೊದಲು ಮಿಕ್ಸಿಗೆ ಹಾಕಿ, ನುಣ್ಣಗೆ ಮಾಡಿಕೊಂಡು, ಅದಕ್ಕೆ ಕಾಯಿತುರಿ,ಉಪ್ಪು ಹಾಕಿ ಸ್ವಲ್ಪವೇ ನೀರು ಹಾಕಿ ತರಿತರಿಯಾಗಿ ರುಬ್ಬಿ, ಅದಕ್ಕೆ ಮೊಸರು ಮತ್ತು ಮೆಣಸಿನ ಪುಡಿ ಸೇರಿಸಿ.
ಇದು ತುಂಬಾ ಒಳ್ಳೆಯ ಆರೋಗ್ಯಕರ ರಾಯಿತ.

Ridge Gourd sabji-ಹೀರೇಕಾಯಿ ಪಲ್ಯ:

ಹೀರೇಕಾಯಿಯನ್ನು ಕೊಂಡುಕೊಳ್ಳುವಾಗ ಯಾವಾಗಲೂ ಅದನ್ನು ಸ್ವಲ್ಪ ಜಿಗುಟಿ ಸಿಪ್ಪೆ ತೆಗೆದು ತಿಂದು ನೋಡಿ ತೆಗೆದುಕೊಳ್ಳಿ, ಕೆಲವೊಂದು ಹೀರೇಕಾಯಿಗಳು ಕಹಿಯಾಗಿರುತ್ತವೆ, ಆ ರೀತಿ ಇರುವ ಕಾಯಿಯನ್ನು ಬಳಸಿದಾಗ ಪದಾರ್ಥಗಳ ರುಚಿ ಕಹಿಯಾಗಿರುತ್ತದೆ, ಆಮೇಲೆ ಅದನ್ನು ಉಪಯೋಗಿಸಲು ಅಸಾಧ್ಯ.ಬಲಿತಿರುವ ಕಾಯಿಯಲ್ಲಿ ನಾರು ಹೆಚ್ಚಾಗಿರುತ್ತದೆ,ಅದು ಚೆನ್ನಾಗಿರುವುದಿಲ್ಲ. ಆದ್ದರಿಂದ ನೋಡಿ ಎಳೆಯ ಕಾಯಿಯನ್ನು ತೆಗೆದುಕೊಳ್ಳಿ.ಹೀರೇಕಾಯಿಯಲ್ಲಿ ನಾರಿನ ಅಂಶವಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಎಲ್ಲದಕ್ಕು ಹೊಂದಿಕೊಳ್ಳುತ್ತದೆ. ಇದರಿಂದ ಬಜ್ಜಿ, ಸಾಂಬಾರ್, ಹುಳಿ,ಪಲ್ಯ ಮತ್ತು ಸಿಪ್ಪೆಯಿಂದ ಚಟ್ನಿ ಎಲ್ಲವನ್ನು ತಯಾರಿಸಬಹುದು. ಚಪಾತಿಗಂತೂ ಒಳ್ಳೆಯ ಕಾಂಬಿನೇಷನ್.

ಹೀರೇಕಾಯಿ ಪಲ್ಯ:

ಬೇಕಾಗುವ ಪದಾರ್ಥಗಳು;

ಹೀರೇಕಾಯಿ
ಈರುಳ್ಳಿ - ಒಂದು
ಹಸಿಮೆಣಸಿನಕಾಯಿ ರುಚಿಗೆ
ಎಣ್ಣೆ,ಸಾಸಿವೆ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು ರುಚಿಗೆ
ಕಾಯಿತುರಿ,
ಕೊತ್ತುಂಬರಿಸೊಪ್ಪು
ನಿಂಬೆರಸ ಸ್ವಲ್ಪ (ಬೇಕಾದರೆ)

ವಿಧಾನ:

ಮೊದಲು ಹೀರೇಕಾಯಿಯ ಸಿಪ್ಪೆಯನ್ನು ಎರೆದು ಸಣ್ಣಗೆ ಕತ್ತರಿಸಿ.

ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ, ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ, ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ, ಬಾಡಿಸಿ, ಕರಿಬೇವು,ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹೀರೇಕಾಯಿಯನ್ನು ಸೇರಿಸಿ, ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ಸ್ವಲ್ಪ ನೀರು ಚಿಮುಕಿಸಿ,ಮುಚ್ಚಿಟ್ಟು, ಹೀರೇಕಾಯಿ ಬೇಯುವವರೆಗು ಬೇಯಿಸಿ. ಇದು ಸ್ವಲ್ಪ ಬೇಗ ಬೇಯುತ್ತದೆ. ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಹಾಗು ನಿಂಬೆರಸ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಚಪಾತಿ ಮಧ್ಯೆ ಸ್ಯಾಂಡ್ ವಿಚ್ ತರಹ ರೋಲ್ ಮಾಡಿಕೊಂಡು ತಿನ್ನಲು ಕೂಡ ಚೆನ್ನಾಗಿರುತ್ತದೆ.

* ಕಾಯಿತುರಿ ಹೆಚ್ಚಾಗಿದ್ದಷ್ಟು ರುಚಿ ಹೆಚ್ಚು.

* ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ.

Sunday, October 5, 2008

Beetroot Salad / ಬೀಟ್ ರೂಟ್ ಕೋಸುಂಬರಿ:

ಬೀಟ್ ರೂಟ್ ಕೋಸುಂಬರಿ:

ಬೀಟ್ ರೂಟ್ ತುರಿ
ಕ್ಯಾರೆಟ್ ತುರಿ
ಕಾಯಿತುರಿ
ಹುರಿದು ಪುಡಿ ಮಾಡಿದ ಕಡ್ಲೆಕಾಯಿ ಬೀಜ
ಹಸಿಮೆಣಸಿನ ಕಾಯಿ ಪೇಸ್ಟ್ ಅಥವ ಸಣ್ಣಗೆ ಹೆಚ್ಚಿದ್ದು
ಕಾಳು ಮೆಣಸಿನಪುಡಿ
ಹುರಿದ ಜೀರಿಗೆ ಪುಡಿ ಸ್ವಲ್ಪ
ನಿಂಬೆರಸ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಉಪ್ಪು ರುಚಿಗೆ

ತಯಾರಿಸುವ ರೀತಿ:
ಉಪ್ಪು ಮಾತ್ರ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ಉಪ್ಪನ್ನು ನೀಡುವಾಗ ಬೆರೆಸಿ ಕೊಡಿ. ಇದು ಅತೀ ಸುಲಭ ಕೋಸುಂಬರಿ ಮತ್ತು ರುಚಿ ಕೂಡ ಹಾಗೂ ಹಸಿಯಾಗಿ ತರಕಾರಿ ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ. ಹುರಿದ ಜೀರಿಗೆಯ ಪರಿಮಳದಿಂದ ಇನ್ನೂ ಚೆನ್ನಾಗಿ ಇರುತ್ತದೆ , ಇದರ ಜೊತೆ ಕಡ್ಲೆಕಾಯಿ ಬೀಜ ತುಂಬಾ ರುಚಿ ಹೆಚ್ಚಿಸುತ್ತದೆ.

Popular Posts