Monday, March 21, 2011

Rasam Powder - ರಸಂ ಪುಡಿ / ರಸಂ ಪೌಡರ್

ರಸಂ ಪುಡಿ / ರಸಂ ಪೌಡರ್  

ಬೇಕಾಗುವ ಪದಾರ್ಥಗಳು:


ಒಣ ಮೆಣಸಿನ ಕಾಯಿ - ಒಂದು ಬಟ್ಟಲು
ಧನಿಯಾ ಬೀಜ - ಅರ್ಧ ಬಟ್ಟಲು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಒಂದು ದೊಡ್ಡ ಚಮಚ
ಮೆಂತ್ಯ - ದೊಡ್ಡ ಚಮಚದಲ್ಲಿ ಅರ್ಧ
ಕರಿಬೇವು - ಒಂದು ಬಟ್ಟಲು
ಅರಿಶಿಣ - ಒಂದು ಚಿಕ್ಕ ಚಮಚ
ಇಂಗು - ಒಂದು ಚಿಕ್ಕ ಚಮಚ
ಎಣ್ಣೆ - ಅರ್ಧ ಚಮಚ

ತಯಾರಿಸುವ ವಿಧಾನ:


ಬಾಣಲೆಗೆ ಮೆಣಸಿನಕಾಯಿ, ಧನಿಯಾ, ಜೀರಿಗೆ,ಮೆಂತ್ಯ,ಮೆಣಸು ಮತ್ತು ಕರಿಬೇವು ಹಾಕಿ ಕಡಿಮೆ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಹುರಿಯಿರಿ, ಹೀಗೆ ಹುರಿದ ನಂತರ ಮೆಣಸಿನಕಾಯಿಯನ್ನು ಮುರಿದು ಪರೀಕ್ಷೆ ಮಾಡಿ, ಅದು ಗರಿಗರಿಯಾಗಿದ್ದು ಅದುಮಿದ ತಕ್ಷಣ ಮುರಿದುಕೊಂಡರೆ ಹುರಿದಿದ್ದು ಸಾಕು, ನಂತರ ಅದಕ್ಕೆ ಅರಿಶಿಣ/ಅರಿಶಿನ , ಇಂಗು ಮತ್ತು ಎಣ್ಣೆ ಹಾಕಿ, ಸ್ಟೌವ್ ಆರಿಸಿ, ಈಗ ಎಲ್ಲವನ್ನು ಚೆನ್ನಾಗಿ ಬೆರೆಸಿ. ಸ್ವಲ್ಪ ಹೊತ್ತು ಹಾಗೆಯೇ ತಣ್ಣಗಾಗಲು ಬಿಡಿ.  ಬಾಣಲೆಯಲ್ಲಿರುವ ಸಾಮಗ್ರಿಗಳು ತಣ್ಣಗಾದ ಬಳಿಕ, ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.ಘಮ ಘಮ ರಸಂ ಪುಡಿ ಸಿದ್ಧವಾಗುತ್ತದೆ.
ನಂತರ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಒಂದು ದಿನ ಶ್ರಮವಹಿಸಿ ಪುಡಿಯನ್ನು ತಯಾರಿಸಿಟ್ಟುಕೊಂಡರೆ, ಬೇಕಾದಾಗ ರುಚಿಯಾದ ರಸಂ ಅನ್ನು ತಯಾರಿಸಬಹುದು.

# ಗಮನಿಸಬೇಕಾದ ಅಂಶಗಳು:

*  ಒಣ ಮೆಣಸಿನಕಾಯಿಯನ್ನು ಅರ್ಧಕ್ಕೆ ಮುರಿದು ಬಟ್ಟಲಿಗೆ ಹಾಕಿ, ಒಂದು ಪ್ರಮಾಣದಲ್ಲಿ ಮೆಣಸಿನಕಾಯಿ ತೆಗೆದುಕೊಂಡರೆ, ಅದರ ಅರ್ಧದಷ್ಟು ಪ್ರಮಾಣದಲ್ಲಿ ಧನಿಯಾ ಬೀಜಗಳನ್ನು ತೆಗೆದುಕೊಳ್ಳಿ.

*  2:1 ಪ್ರಮಾಣದಲ್ಲಿ ಮೆಣಸಿನಕಾಯಿ ಮತ್ತು ಧನಿಯಾ ತೆಗೆದುಕೊಳ್ಳಿ.

*  ಖಾರವು ಮೆಣಸಿನಕಾಯಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಒಂದೊಂದು ಮೆಣಸಿನಕಾಯಿ ಒಂದೊಂದು ರೀತಿಯ   ಕಾರವನ್ನು ಹೊಂದಿರುತ್ತದೆ. ಬಣ್ಣ ಸಹ. ಆಗಾಗಿ ನಿಮಗೆ ಸರಿ ಎನಿಸಿದ ಮೆಣಸಿನಕಾಯಿಗಳನ್ನು ಹಾಕಿ.

ಬಣ್ಣ ಕೊಡುವ ಮೆಣಸಿನಕಾಯಿ, ಕಾರ ಕೊಡುವ ಮೆಣಸಿನಕಾಯಿ,ಬ್ಯಾಡಗಿ ಮೆಣಸಿನಕಾಯಿ ಹೀಗೆ ಮೆಣಸಿನಕಾಯಿಯಲ್ಲಿ ನಾನಾ ವಿಧವಿರುವುದರಿಂದ ನಿಮಗೆ ಬೇಕಾದ ಮೆಣಸಿನಕಾಯಿ ಬಳಸಿ. ಇಲ್ಲವೆಂದರೆ ಎರಡು ಅರ್ಧ-ಅರ್ಧ ಹಾಕಬಹುದು.

* ಕರಿಬೇವು ಸಹ ಇಲ್ಲಿ ಮುಖ್ಯವಾಗಿರುತ್ತದೆ.

*  ಪದಾರ್ಥಗಳನ್ನು ಹುರಿಯುವಾಗ ಸರಿಯಾದ ಹದದಲ್ಲಿ ಹುರಿಯಿರಿ, ಸೀದಿಸಬೇಡಿ. ತಣ್ಣಗಾದ ನಂತರವೇ ಮಿಕ್ಸಿಗೆ ಹಾಕಬೇಕು.


Friday, March 11, 2011

Tomato Chitranna Gojju:ಟೊಮೋಟೊ ಚಿತ್ರಾನ್ನ ಗೊಜ್ಜು:





ಟೊಮೋಟೊ ಚಿತ್ರಾನ್ನ ಗೊಜ್ಜು:

ಬೇಕಾಗುವ ಸಾಮಗ್ರಿಗಳು:


ಟೊಮೋಟೊ- ನಾಲ್ಕು ಮಧ್ಯಮ ಗಾತ್ರದ್ದು
ಈರುಳ್ಳಿ - ಒಂದೆರಡು
ಹಸಿಮೆಣಸಿನಕಾಯಿ - ಎರಡು
ಎಣ್ಣೆ - ಒಗ್ಗರಣೆಗೆ
ಕಡ್ಲೆಬೇಳೆ - ಒಂದು ಚಮಚ
ಉದ್ದಿನ ಬೇಳೆ - ಒಂದು ಚಮಚ
ಸಾಸಿವೆ - ಕಾಲು ಚಮಚ
ಜೀರಿಗೆ - ಕಾಲು ಚಮಚ
ಅರಿಶಿಣ - ಚಿಟಿಕೆ
ಕರಿಬೇವು ಸ್ವಲ್ಪ
ಕೊತ್ತುಂಬರಿ ಸೊಪ್ಪು
ಅಚ್ಚ ಕಾರದ ಪುಡಿ ಮತ್ತು ಉಪ್ಪು - ರುಚಿಗೆ ತಕ್ಕಷ್ಟು


ತಯಾರಿಸುವ ವಿಧಾನ:

ಟೊಮೋಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಕೊಳ್ಳಿ. ಕೊತ್ತುಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ.
ಒಗ್ಗರಣೆಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಕ್ರಮವಾಗಿ ಹಾಕಿ. ನಂತರ ಈರುಳ್ಳಿ,ಕರಿಬೇವು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಈರುಳ್ಳಿ ಬೇಯುವವರೆಗೂ ತಿರುಗಿಸಿ.ಹೆಚ್ಚಿದ ಟೊಮೆಟೊ ಅನ್ನು ಹಾಕಿ,ಬೆರೆಸಿ. ನಾಲ್ಕರಿಂದ ಐದು ನಿಮಿಷ ಬೇಯಿಸಿ. ನಂತರ ಅದಕ್ಕೆ ಅರಿಶಿಣ, ಕಾರದಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ, ಒಂದೆರಡು ನಿಮಿಷದ ನಂತರ ಒಲೆಯಿಂದ ಇಳಿಸಿ. ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.
ಈ ಒಗ್ಗರಣೆ ಗೊಜ್ಜನ್ನು ಅನ್ನಕ್ಕೆ ಕಲಸಿ, ಚೆನ್ನಾಗಿ ಬೆರೆಸಿ, ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸಹ ಬೆರೆಸಿದರೆ. ಟೊಮೋಟೊ ಚಿತ್ರಾನ್ನ ತಯಾರಾಗುತ್ತದೆ.

Wednesday, March 9, 2011

ಕರದಂಟು / ಅಂಟಿನ ಉಂಡೆ : Karadantu / Antunde

ಕರದಂಟು ಅಥವಾ ಅಂಟಿನ ಉಂಡೆ ಇದು ನಮ್ಮ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ತುಂಬಾ ಪ್ರಸಿದ್ಧಿಯಾದ ಸಿಹಿ ತಿನಿಸು. ಬೆಳಗಾಂ ಎಂದರೆ ಮೊದಲು ನೆನಪಿಗೆ ಬರುವುದೆ ಕರದಂಟು. ಇಲ್ಲೆಲ್ಲ ನಾವು ಅವರ ತರಹ ರೆಸಿಪಿಯಲ್ಲೇ ತಯಾರಿಸಿದರು ಸಹ, ಅವರು ತಯಾರಿಸುವ ಕರದಂಟಿನ ರುಚಿಯೇ ಅದ್ಭುತ. ಅದಕ್ಕಾಗಿಯೇ ಅಲ್ಲವೆ ಬೆಳಗಾವಿಗೂ ಕರದಂಟಿಗೂ ನೆಂಟು. ಅಂಟುಂಡೆ ಎಂದು ಕೆಲವರು ಕರೆಯುತ್ತಾರೆ. ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರದಲ್ಲಿ ಉಂಡೆ ಕಟ್ಟುವುದರಿಂದ ಕರದಂಟು ಎಂತಲೂ ಅಥವಾ ಅಂಟನ್ನು ಕರಿದು ಅರ್ಥಾತ್ ಹುರಿದು ತಯಾರಿಸುವುದರಿಂದಲೂ ಈ ಹೆಸರು ಬಂದಿರಬಹುದೇನೋ ಎಂದು ನನ್ನ ಅನಿಸಿಕೆ. ಯಾವುದರಿಂದಲಾದರೂ ಹೆಸರು ಬರಲಿ ಈ ಉತ್ತಮವಾದ ಉಂಡೆಯಂತೂ ತಿನ್ನಲು ಬಲು ರುಚಿ ಮತ್ತು ನಮ್ಮ ಆರೋಗ್ಯಕ್ಕೂ ಸಹ ಅಷ್ಟೇ ಉತ್ತಮ. ಇದನ್ನು ಋತುಮತಿಯಾದವರಿಗೆ ಮತ್ತು ಬಾಣಂತಿಯರಿಗೆ ತಿನ್ನಲು ನೀಡಿದರೆ ತುಂಬಾ ಒಳ್ಳೆಯದು. ಈ ಕರದಂಟು ಉಂಡೆಯನ್ನು ಅವರು ತಿನ್ನುವುದರಿಂದ ಅವರಿಗೆ ಆ ಸಮಯದಲ್ಲಿ ಅವರಿಗೆ ಬೇಕಾದ ಶಕ್ತಿ ಮತ್ತು ಎಲ್ಲಾ ಪೌಷ್ಠಿಕಾಂಶಗಳು ದೊರೆಯುತ್ತವೆ. ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಉಂಡೆ.


ಕರದಂಟು / ಅಂಟಿನ ಉಂಡೆ :

ಬೇಕಾಗುವ ಸಾಮಗ್ರಿಗಳು:

ಖರ್ಜೂರ - ಒಂದು ಬಟ್ಟಲು
ಬಾದಾಮಿ - ಒಂದು ಬಟ್ಟಲು
ಗೋಡಂಬಿ- ಒಂದು ಬಟ್ಟಲು
ದ್ರಾಕ್ಷಿ - ಒಂದು ಬಟ್ಟಲು
ಒಣ ಕೊಬ್ಬರಿ ತುರಿ - ಒಂದು ಬಟ್ಟಲು
ಗಸಗಸೆ - ಎರಡು ದೊಡ್ಡ ಚಮಚ
ಅಂಟು - ಕಾಲು ಬಟ್ಟಲು / ಸ್ವಲ್ಪ
ಬೆಲ್ಲ - ರುಚಿಗೆ ತಕ್ಕಂತೆ
ತುಪ್ಪ - ಸ್ವಲ್ಪ


ತಯಾರಿಸುವ ವಿಧಾನ:

ಖರ್ಜೂರ,ಬಾದಾಮಿ ಮತ್ತು ಗೋಡಂಬಿಯನ್ನು ಚೂರು ಮಾಡಿಟ್ಟುಕೊಳ್ಳಿ. ಅಂಟನ್ನು ಸಹ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಪುಡಿ ಮಾಡಿ, ಮೊದಲು ಇಷ್ಟನ್ನು ತಯಾರಿಸಿಟ್ಟು ಕೊಂಡರೆ ಉಂಡೆ ತಯಾರಿಸುವಾಗ ಸುಲಭವಾಗುತ್ತದೆ.
ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು,ಆಮೇಲೆ ದ್ರಾಕ್ಷಿ ಹೀಗೆ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ, ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ. ಒಣಕೊಬ್ಬರಿ ತುರಿ ಮತ್ತು ಅಂಟು ಸಹ ಹುರಿದು ಬಾದಾಮಿ,ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ ಮತ್ತು ಸೀದಿಸಬೇಡಿ. ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಂಡ ನಂತರ ಬೆಲ್ಲದ ಪಾಕವನ್ನು ತಯಾರಿಸಬೇಕು.

ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ:

ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ ನೋಡಿ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ತುಂಬಾ ಹೊತ್ತು ಸಹ ತಣ್ಣಗಾಗಲು ಬಿಡದಿರಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು ದಿನವಿಡಬಹುದು.


* ಹುರಿಯುವಾಗ ತಾಳ್ಮೆಯಿಂದ ಹುರಿಯಬೇಕು, ಬೇಗ ಆಗಲಿ ಎಂದು ತುಂಬಾ ಉರಿ ಹಾಕಿ ಹುರಿಯುವುದರಿಂದ ಸಾಮಗ್ರಿಗಳು ಸೀದು ಹೋಗುತ್ತವೆ ಮತ್ತು ರುಚಿಯೂ ಹಾಳಾಗುತ್ತದೆ.
* ಪ್ರತಿಯೊಂದನ್ನು ಬೇರೆ-ಬೇರೆಯಾಗಿ ಹದವಾಗಿ ಹುರಿಯಿರಿ.
* ಅಂಟನ್ನು ಹುರಿದುಕೊಳ್ಳಿ. ಚಿಕ್ಕ ಚಿಕ್ಕ ಚೂರು ಮಾಡಿಕೊಂಡು ಹುರಿದರೆ, ಚೆನ್ನಾಗಿರುತ್ತದೆ, ಇಲ್ಲವೆಂದರೆ ತಿನ್ನುವಾಗ ಒಂದೇ ಕಡೆ ಸಿಗುತ್ತದೆ.
* ಖರ್ಜೂರವನ್ನು ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಇದರಲ್ಲಿ ಬೆಲ್ಲದ ಪಾಕ ತೆಗೆಯುವಾಗ ತುಂಬಾ ಎಚ್ಚರಿಕೆಯಿಂದ ತೆಗೆಯಬೇಕು, ಒಂದೆಳೆ ಪಾಕವನ್ನು ಗಮನಿಸಿ ತೆಗೆಯಬೇಕು, ಪಾಕ ಗಟ್ಟಿಯಾದರೆ ಉಂಡೆ ತಯಾರಿಸಿದ ಮೇಲೆ ಉಂಡೆಗಳು ತುಂಬಾ ಗಟ್ಟಿಯಾಗುತ್ತವೆ. ಪಾಕ ತೆಗೆಯುವಾಗ ಒಂದು ತಟ್ಟೆಗೆ ಸ್ವಲ್ಪ ನೀರು ಹಾಕಿ, ಅದಕ್ಕೆ ಒಂದೆರಡು ಹನಿ ಪಾಕವನ್ನು ಹಾಕಿದಾಗ ಅದು ತೇಲಿ ಬರುತ್ತದೆ. ಆಗ ಪಾಕ ತಯಾರಾಗಿದೆ ಎಂದು ಗೊತ್ತಾಗುತ್ತದೆ. ಪಾಕ ನೀರಿನಲ್ಲಿ ತಕ್ಷಣವೇ ಕರಗಿದರೆ, ಇನ್ನು ಸ್ವಲ್ಪ ಹೊತ್ತು ಬಿಡಿ. ಪಾಕ ಮಾತ್ರ ಹದವಾಗಿ ತೆಗೆಯಿರಿ.
* ಕೊಬ್ಬರಿ ತುರಿ ಅಂಗಡಿಯಲ್ಲಿ ಸಿಗುವ ಡೆಸಿಕೆಟೆಡ್ ಕೊಕೋನಟ್ ಪೌಡರ್/ ರೆಡಿಮೇಡ್ ಕೊಬ್ರಿ ತುರಿ ಹಾಕಿದರೆ ಚೆನ್ನಾಗಿರುವುದಿಲ್ಲ. ಕೊಬ್ಬರಿ ಗಿಟುಕಿನಿಂದ ನೀವೇ ತಕ್ಷಣವೇ ತುರಿದ ಕೊಬ್ಬರಿ ತುರಿ ಉಪಯೋಗಿಸಬೇಕು. ಆಗ ರುಚಿ ಚೆನ್ನಾಗಿರುತ್ತದೆ.

Monday, March 7, 2011

ಕ್ಯಾರೆಟ್-ಎಲೆಕೋಸು ಸಲಾಡ್: Carrot-Cabbage Salad

ಕ್ಯಾರೆಟ್-ಎಲೆಕೋಸು ಸಲಾಡ್:

ಬೇಕಾಗುವ ಸಾಮಗ್ರಿಗಳು:

ಕ್ಯಾರೆಟ್ ತುರಿ - ಒಂದು ಬಟ್ಟಲು
ಎಲೆಕೋಸು ತುರಿ - ಒಂದು ಬಟ್ಟಲು
ಉಪ್ಪು ಮತ್ತು ಕರಿ ಮೆಣಸಿನ ಪುಡಿ - ರುಚಿಗೆ ತಕ್ಕಂತೆ
ಮಯೊನೈಸ್ (Mayonnaise) - ಎರಡು ದೊಡ್ಡ ಚಮಚ
ಕೊತ್ತುಂಬರಿ ಸೊಪ್ಪು ಸ್ವಲ್ಪ



ತಯಾರಿಸುವ ವಿಧಾನ:

ಕ್ಯಾರೆಟ್ ಮತ್ತು ಎಲೆಕೋಸು ತುರಿಯನ್ನು ಬೆರೆಸಿ, ಅದಕ್ಕೆ ಮಯೊನೈಸ್,ಉಪ್ಪು ಮತ್ತು ಮೆಣಸಿನಪುಡಿಯನ್ನು ಸೇರಿಸಿ, ಅದು ಎಲ್ಲಾ ಕಡೆ ಸರಿಯಾಗಿ ಬೆರೆತುಕೊಳ್ಳುವಂತೆ ಚೆನ್ನಾಗಿ ಬೆರೆಸಿ, ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ.
ತರಕಾರಿ ಶುಚಿಗೊಳಿಸಿ ತುರಿದಿಟ್ಟುಕೊಂಡಿದ್ದರೆ ತಯಾರಿಸಲು ತುಂಬಾ ಸರಳವಿದು. ಪಾರ್ಟಿಗಳಿಗೂ ಒಪ್ಪುವ ಸಲಾಡ್.

*  ತುರಿಯನ್ನು ಮತ್ತು ಮಯೊನೈಸ್ ಅನ್ನು ಮೊದಲು ಬೆರೆಸಿಕೊಂಡು, ಸಲಾಡ್ ಉಪಯೋಗಿಸುವಾಗ ಉಪ್ಪು ಮತ್ತು ಪೆಪ್ಪರ್ ಸೇರಿಸಬಹುದು.
ತಿನ್ನುವಾಗ ಮಾತ್ರ ಉಪ್ಪು ಬೆರೆಸಿ, ಮೊದಲೇ ಬೆರೆಸಿದರೆ ಸಲಾಡ್ ನೀರು ಬಿಡುತ್ತದೆ. ಆಗ ರುಚಿ ಚೆನ್ನಾಗಿರುವುದಿಲ್ಲ.
*  ಬೆರೆಸಿದ ತಕ್ಷಣ ತಿನ್ನುವುದರಿಂದ ರುಚಿ ತುಂಬಾ ಚೆನ್ನಾಗಿರುತ್ತದೆ. ಐದು-ಹತ್ತು ನಿಮಿಷಗಳು ಪರವಾಗಿಲ್ಲ.
*  ಹಸಿಯಾಗಿ ತರಕಾರಿ ತಿನ್ನದಿರುವ ಮಕ್ಕಳಿಗೆ ಇದನ್ನು ತಯಾರಿಸಿಕೊಟ್ಟರೆ ಬೇಡಾ ಎನ್ನದೆ ಇಷ್ಟಪಟ್ಟು ತಿನ್ನುತ್ತಾರೆ ಕೆಲವು ಮಕ್ಕಳು.
*  ಪರಿಮಳಕ್ಕಾಗಿ ಬೇಕಾದರೆ ಒಂದೇಒಂದು ಹಸಿಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿ ಹಾಕಬಹುದು.
ಕ್ಯಾರೆಟ್ ಅನ್ನು ಹಸಿಯಾಗಿ ತಿನ್ನುವುದರಿಂದ ಕಣ್ಣಿಗೆ ಬಹಳ ಒಳ್ಳೆಯದೆಂದು ಎಲ್ಲರಿಗು ತಿಳಿದಿರುವ ವಿಷಯ.
*  ಎಲೆಕೋಸು ಫ಼ೈಬರ್ ಹೊಂದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

Popular Posts