Wednesday, November 19, 2008

Seemebadanekaayi Sabji - ಸೀಮೆಬದನೆಕಾಯಿ ಪಲ್ಯ

ಸೀಮೆಬದನೆಕಾಯಿ ಪಲ್ಯ:

ಸಾಮಗ್ರಿಗಳು:
ಸೀಮೆಬದನೆಕಾಯಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ಮೊದಲು ಸೀಮೆಬದನೆಕಾಯಿಯನ್ನು ತುರಿದುಕೊಳ್ಳಿ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಸೀಮೆಬದನೆಕಾಯಿತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಇದು ಬೇಗ ಬೇಯುವುದರಿಂದ ಒಂದೆರಡು ಚಮಚ ಮಾತ್ರ ನೀರು ಚಿಮುಕಿಸಿ. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Sunday, November 16, 2008

Cucumber Green Salad/ಸೌತೆಕಾಯಿ ಗ್ರೀನ್ ಸಲಾಡ್

ಸೌತೆಕಾಯಿ ಗ್ರೀನ್ ಸಲಾಡ್:

ಸೌತೆಕಾಯಿ
ನಿಂಬೆರಸ
ಹಸಿಮೆಣಸಿನಕಾರ
ಕೊತ್ತುಂಬರಿಸೊಪ್ಪು
ಉಪ್ಪು

ವಿಧಾನ:
ಹಸಿಮೆಣಸಿನಕಾರ ತಯಾರಿಸಲು-
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ರುಬ್ಬಿಕೊಳ್ಳಿ.


ಸೌತೆಕಾಯಿಯನ್ನು ದಪ್ಪ ಚೂರುಗಳಾಗಿ ಹೆಚ್ಚಿಕೊಂಡು,ಅದಕ್ಕೆ ನಿಂಬೆರಸ,ಉಪ್ಪು,ಕೊತ್ತುಂಬರಿಸೊಪ್ಪು ಮತ್ತು ಹಸಿಮೆಣಸಿನಕಾರ ಹಾಕಿ ಚೆನ್ನಾಗಿ ಬೆರೆಸಿ. ತಕ್ಷಣ ತಿನ್ನಿ.

Wednesday, November 12, 2008

Tamarind gojju / ಹುಣಸೆಗೊಜ್ಜು


ಹುಣಸೆಹಣ್ಣಿನ ಹುಳಿಗೊಜ್ಜು:

ಸಾಮಗ್ರಿಗಳು:

ಹುಣಸೆಹಣ್ಣಿನರಸ - ಒಂದು ಬಟ್ಟಲು
ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ
ಹಸಿಮೆಣಸಿನಕಾಯಿ -ಒಂದು ಉದ್ದಕ್ಕೆ ಹೆಚ್ಚಿ
ಕಾರದ ಪುಡಿ ರುಚಿಗೆ
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು

ವಿಧಾನ:
ಹುಣಸೆಹಣ್ಣಿನ ರಸವನ್ನು ಸ್ವಲ್ಪ ನೀರು ಹಾಕಿ ಬೆರೆಸಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ,ಕಾರದ ಪುಡಿ,ಉಪ್ಪು ಮತ್ತು ಕೊತ್ತುಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಿವುಚಿ. ಸ್ವಲ್ಪ ಸಾರಿನ ಪುಡಿ ಬೇಕಾದರೂ ಹಾಕಬಹುದು. ಹುಣಸೆಗೊಜ್ಜು ರೆಡಿ. ಇದು ಉಪ್ಪಿಟ್ಟಿನ ಜೊತೆ ಒಳ್ಳೆಯ ಜೊತೆ. ಅದಕ್ಕೆ ಕಲಸಿಕೊಂಡು ತಿನ್ನಬಹುದು. ಅನ್ನಕ್ಕೂ ಸೈ. ಅರುಚಿ ಆದವರಿಗೂ ಮತ್ತು ಪಿತ್ತಕ್ಕೂ ಒಳ್ಳೆಯದು.

Friday, November 7, 2008

Sugar Puris / ಸಿಹಿ ಪೂರಿ

ಸಿಹಿ ಪೂರಿ

ಸಾಮಗ್ರಿಗಳು:
ಮೈದಾಹಿಟ್ಟು - ಒಂದು ಬಟ್ಟಲು
ಡಾಲ್ಡ / ಬೆಣ್ಣೆ / ತುಪ್ಪ- ಸ್ವಲ್ಪ
ಸಕ್ಕರೆ ಪುಡಿ ಎರಡು ದೊಡ್ಡ ಚಮಚ
ಕೊಬ್ಬರಿತುರಿ ಸ್ವಲ್ಪ
ಸಕ್ಕರೆಪುಡಿ ಸ್ವಲ್ಪ
ಎಣ್ಣೆ ಕರಿಯಲು


ತಯಾರಿಸುವ ವಿಧಾನ:

ಮೈದಾ, ಸಕ್ಕರೆಪುಡಿ ಮತ್ತು ಡಾಲ್ಡ ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಹದಿನೈದು ನಿಮಿಷ ಮುಚ್ಚಿಡಿ. ನಂತರ ಹಿಟ್ಟಿನಿಂದ ದಪ್ಪನೆಲ್ಲಿಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಪೂರಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಆಮೇಲೆ ಅದನ್ನು ಕಾದಿರುವ ಎಣ್ಣೆಯಲ್ಲಿ ತೆಗೆದು ಹಾಕಿ. ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ಬೇಗ ಬೇಯುತ್ತದೆ, ಆಗಾಗಿ ಉರಿ ನೋಡಿಕೊಳ್ಳಿ. ಬಂಗಾರದ ಬಣ್ಣ ಬಂದ ನಂತರ ಬೇಗ ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ತಕ್ಷಣವೇ ಅದರ ಎರಡು ಕಡೆಗೂ ಸಕ್ಕರೆಪುಡಿ ಮತ್ತು ಕೊಬ್ಬರಿ ತುರಿ ಉದುರಿಸಿ, ಬಿಸಿ ಇರುವಾಗಲೆ ಉದುರಿಸಿದರೆ, ತಕ್ಷಣ ಸಕ್ಕರೆ ಹೀರಿಕೊಳ್ಳುತ್ತದೆ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ತಿನ್ನಬಹುದು ಅಥವಾ ಬಿಸಿ ಇರುವಾಗಲು ನೀಡಬಹುದು, ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.
*ಸಕ್ಕರೆ ಉದುರಿಸುವ ಬದಲು ಸಕ್ಕರೆ ಪಾಕ ಮಾಡಿಕೊಂಡು ಅದರಲ್ಲಿ ಅದ್ದಿ ತೆಗೆದು ಕೊಬ್ಬರಿ ಉದುರಿಸಬಹುದು.
*ಕೊಬ್ರಿ ತುರಿಗೆ ಬಣ್ಣ ಸೇರಿಸಿ ಕಲರ್ ಫುಲ್ ಆಗಿಯೂ ತಯಾರಿಸಬಹುದು. ಕೊಬ್ಬರಿತುರಿ ಬೇಕಾದರೆ ಹಾಕಬಹುದು ನಿಮ್ಮಿಷ್ಟ.

Popular Posts