ನಮ್ಮ ಪ್ರೀತಿಯ ದೇವ ಶ್ರೀ ಗಣೇಶನಿಗೆ ಪ್ರಿಯವಾದದ್ದು ಕಡುಬು. ಯಾವುದೇ ಅಡುಗೆ ಮಾಡಲಿ ಗಣೇಶ ಚತುರ್ಥಿಗೆ ಕಡುಬಂತೂ ಇರಲೇಬೇಕು. ಕಡುಬು ಮಾಡಿಟ್ಟು ಅದನ್ನು ಅವನಿಗೆ ನೈವೇದ್ಯ ಕೊಟ್ಟರೆ ಅವತ್ತಿನ ಗಣೇಶನ ಹಬ್ಬ ಆದಂತೆ.ಅವನಿಗೆ ಇಷ್ಟವಾದ ಕಡುಬನ್ನು ಸುಮಾರು ರೀತಿ ತಯಾರಿಸುತ್ತಾರೆ. ಒಬ್ಬೊಬ್ಬರದು ಒಂದೊಂದು ತರಹ ಆಚರಣೆ ಇರುತ್ತೆ. ಅದಕ್ಕೆ ಆ ಪದ್ಧತಿಗೆ ತಕ್ಕಂತೆ ಕಡುಬುಗಳನ್ನು ಮಾಡಿಕೊಳ್ಳುತ್ತಾರೆ. ಸಿಹಿ ಕಡುಬು,ಖಾರ ಕಡುಬು, ಬೇಳೆ ಕಡುಬು, ಎಳ್ಳಿನ ಕಡುಬು,ಹೂರಣದ ಕರಿಗಡುಬು, ಕರಿಗಡುಬು, ಕರ್ಜಿಕಾಯಿ ಅಂತ ಹೀಗೆ ವಿವಿಧ ರೀತಿಗಳಿವೆ. ಈಗ ಇಲ್ಲಿ ಹೆಸರುಬೇಳೆಯ ಖಾರದ ಕಡುಬು ತಯಾರಿಸುವ ವಿಧಾನವಿದೆ.
ಹೆಸರುಬೇಳೆ ಕಡುಬು / ಖಾರ ಕಡುಬು:
ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ - ಒಂದು ಬಟ್ಟಲು
ಹಸಿಮೆಣಸಿನಕಾಯಿ ರುಚಿಗೆ
ಕೊತ್ತುಂಬರಿಸೊಪ್ಪು ಸ್ವಲ್ಪ
ಪುದೀನ ಸೊಪ್ಪು ಬೇಕಾದರೆ
ಒಂದು ಇಂಚು ಚೂರು ಶುಂಠಿ
ಒಂದೆರಡು ಚೆಕ್ಕೆ ಮತ್ತು ಲವಂಗ
ಉಪ್ಪು ರುಚಿಗೆ
ತಯಾರಿಸುವ ವಿಧಾನ:
ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ. ಅರ್ಧ/ಒಂದು ಗಂಟೆಯಾದರು ನೆನೆಯಬೇಕು.
ನೆನೆಸಿದ ಹೆಸರುಬೇಳೆಯ ಜೊತೆ, ಹಸಿಮೆಣಸಿನಕಾಯಿ,ಶುಂಠಿ,ಚೆಕ್ಕೆ,ಲವಂಗ,ಕೊತ್ತುಂಬರಿಸೊಪ್ಪನ್ನು ಮತ್ತು ಉಪ್ಪನ್ನು ಹಾಕಿ ಸ್ವಲ್ಪ ತರಿ-ತರಿಯಾಗಿ ರುಬ್ಬಿಕೊಳ್ಳಿ, ನೀರು ಸೇರಿಸಬಾರದು, ಆಗೇ ರುಬ್ಬಬೇಕು. ಇದನ್ನು ಹೂರಣ (ಫಿಲ್ಲಿಂಗ್) ಎನ್ನುತ್ತೇವೆ.
ಈಗ ಇದನ್ನು ಸ್ಟಫ್ ಮಾಡಬೇಕು. ಅದಕ್ಕಾಗಿ ಹಿಟ್ಟನ್ನು ತಯಾರಿಸಬೇಕು.
ಅಕ್ಕಿಹಿಟ್ಟು ಅಥವಾ ಮುದ್ದೆಯನ್ನು ತಯಾರಿಸುವ ರೀತಿ:
ಕಡುಬಿನ ಹಿಟ್ಟು ತಯಾರಿಸುವ ರೀತಿ:
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು - ಒಂದು ಬಟ್ಟಲು
ಕಾಲು ಚಮಚ ಉಪ್ಪು
ಎಣ್ಣೆ - ಒಂದು ಚಮಚ
ನೀರು ಅಗತ್ಯವಿದ್ದಷ್ಟು- ಎರಡು/ಮೂರು ಬಟ್ಟಲು
ವಿಧಾನ:
ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುತ್ತಿರುವಾಗ ಅಕ್ಕಿ ಹಿಟ್ಟನ್ನು ಮಧ್ಯಕ್ಕೆ ಹಾಕಿ, ಎಣ್ಣೆ ಮತ್ತು ಉಪ್ಪು ಹಾಕಿಡಿ. ಅದನ್ನು ಚೆನ್ನಾಗಿ ಬೇಯಸಿ, ಹಿಟ್ಟನ್ನು ಏನು ಕಲಕದೇ ಬೇಯಲು ಬಿಟ್ಟು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಒಂದು ಹಿಟ್ಟಿನ ಕೋಲು ಅಥವಾ ಸೌಟ್ ನಿಂದ ಹಿಟ್ಟನ್ನು ತಿರುಗಿಸಿ, ತಿರುಗಿಸುವಾಗ ಗಂಟು ಆಗದಂತೆ ಎಚ್ಚರಿಕೆವಹಿಸಿ. ಎಲ್ಲಾ ಕಡೆಯ ಹಿಟ್ಟನ್ನು ನೀರಿನಲ್ಲಿ ಕಲಕಿ, ಅದೆಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಸ್ವಲ್ಪ ಗಟ್ಟಿ ಎನಿಸಿದರೆ, ಬಿಸಿನೀರು ಕಾಯಿಸಿಕೊಂಡು ಮತ್ತೆ ಚೆನ್ನಾಗಿ ತಿರುಗಿಸಿ. ಇದನ್ನು ಅಂದರೆ ಈ ರೀತಿ ಹಿಟ್ಟು ಅಥವ ಮುದ್ದೆಯನ್ನು ತಯಾರಿಸುವಾಗ ಹುಷಾರಾಗಿ ನೋಡಿಕೊಂಡು ಹದವಾಗಿ ತಿರುಗಿಸಬೇಕಾಗುತ್ತದೆ. ಇದಕ್ಕೆ ಹಿಟ್ಟು ತೊಳೆಸುವುದು ಅಥವ ಹಿಟ್ಟು ಕೂಡಿಸುವುದು ಅಥವ ಹಿಟ್ಟು ತಿರುಗಿಸುವುದು ಎಂದು ಒಂದೊಂದು ರೀತಿ ಕರೆಯುತ್ತಾರೆ. ಅದೇನೇ ಕರೆದರು ತಯಾರಿಸುವ ರೀತಿ ಒಂದೇ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ತಿರುಗಿಸಿ, ಹಿಟ್ಟನ್ನು ತಟ್ಟೆ / ಮಣೆ/ ಕಟ್ಟಿಂಗ್ ಬೋರ್ಡ್ ಮೇಲೆ ಹಾಕಿಕೊಂಡು ಚೆನ್ನಾಗಿ ನಾದಿ. ಬಿಸಿಯಿರುವಾಗಲೇ ಇದನ್ನೆಲ್ಲಾ ಮಾಡಿಕೊಳ್ಳಬೇಕು. ನಾದಿಟ್ಟ ಮೇಲೆ ಅದರಿಂದ ಪುಟ್ಟ ಪುಟ್ಟ ಉಂಡೆ ಮಾಡಿಕೊಳ್ಳಿ. ಇದು ಸ್ವಲ್ಪ ಕಷ್ಟದ ಕೆಲಸ. ರಾಗಿಮುದ್ದೆ ಮಾಡುವವರಿಗೆ ಇದನ್ನು ತಯಾರಿಸಲು ಸುಲಭ ಮತ್ತು ಯಾವ ಹದದಲ್ಲಿ ತಯಾರಿಸಬೇಕು ಅಂತ ಗೊತ್ತಾಗುತ್ತೆ. ಯಾವಾಗಲೂ ಸರಿಯಾಗಿಯೇ ಬರುತ್ತದೆ ಎಂದು ಹೇಳಕ್ಕೆ ಆಗಲ್ಲ. ಏಕೆಂದರೆ ಈಗ ನಾವು ತರುವ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.ಕೆಲವು ಹಿಟ್ಟು ಬಾಯ್ಲ್ಡ್ ರೈಸ್ ನಿಂದ ಮಾಡಿರುತ್ತಾರೆ. ಅದಕ್ಕೆ ಸ್ವಲ್ಪ ನೀರು ಜಾಸ್ತಿ ಬೇಕಾಗುತ್ತೆ ಮತ್ತು ಬೇಗ ಹಿಟ್ಟು ಗಟ್ಟಿಯಾಗುತ್ತೆ ಸಹ. ಅದಕ್ಕಾಗಿ ಸ್ವಲ್ಪ ಹದ ತಿಳಿದು, ತಯಾರಿಸುವುದು ಉತ್ತಮ. ಈ ತರಹದ ಕಡುಬುಗಳಿಗೆ ಅಕ್ಕಿಯನ್ನು ತೊಳೆದು, ನೆರಳಲ್ಲಿ ಒಣಗಿಸಿ,ಮಿಲ್ ಗೆ ಹಾಕಿಸುವಂತ ನಾವೇ ತಯಾರಿಸಿದ ಅಕ್ಕಿ ಹಿಟ್ಟನ್ನು ಉಪಯೋಗಿಸಿದರೆ ತುಂಬ ಚೆನ್ನಾಗಿ ಅಕ್ಕಿಹಿಟ್ಟು/ಮುದ್ದೆ ಬರುತ್ತದೆ.
ಕಡುಬನ್ನು ತಯಾರಿಸುವ ರೀತಿ:
ಈ ರೀತಿ ತಯಾರಿಸಿದಂತ ಮುದ್ದೆ ಅಥವ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿಯಂತೆ ಲಟ್ಟಿಸಿ, ಅದರೊಳಗೆ ಹೆಸರುಬೇಳೆ ಹೂರಣವನ್ನು ತುಂಬ ಬೇಕು. ಮಧ್ಯಕ್ಕೆ ಅಂದರೆ ಅರ್ಧ ಭಾಗಕ್ಕೆ ಮಡಿಚಿ ಅಂಚುಗಳನ್ನು ಒತ್ತಿ ಮುಚ್ಚಬೇಕು. ಅರ್ಧ ವೃತ್ತಾಕಾರವಾಗಿ ಮಡಿಚಿ, ಅಂಚುಗಳನ್ನು ಸರಿಯಾಗಿ ಸೇರಿಸಿ, ಅದುಮಿ,ಬಿಟ್ಟುಕೊಳ್ಳದಂತೆ ಸರಿಯಾಗಿ ಅದು ಅಂಟಿಕೊಂಡಿದೆಯಾ ಎಂದು ಪರೀಕ್ಷಿಸಿ, ಚಿತ್ತಾರ ಮಾಡಲು ಬಂದರೆ ಆ ತರ ಮಡಿಸಿ, ಇಲ್ಲವೆಂದರೆ ಹೆಚ್ಚಿನ ಭಾಗದ ಹಿಟ್ಟನ್ನು ಕತ್ತರಿಸಿ. (ಎಡ್ಜ್ ಕಟ್ ಮಾಡಿ, ಅದರಿಂದ ಬರುವ ಎಕ್ಸ್ಟ್ರಾ ಹಿಟ್ಟನ್ನು ತೆಗೆದು ಮತ್ತೆ ಉಪಯೋಗಿಸಿ)ಅದನ್ನು ತೆಗೆದಿಡಿ. ಮತ್ತೆ ಉಪಯೋಗಿಸಿ. ಹೀಗೆ ಎಲ್ಲವನ್ನು ತಯಾರಿಸಿಕೊಂಡು, ಹಬೆಯಲ್ಲಿ ಹತ್ತು ಅಥವ ಹದಿನೈದು ನಿಮಿಷಗಳು ಬೇಯಿಸಿ. ಖಾರದ ಕಡುಬು ಅಥವಾ ಹೆಸರುಬೇಳೆ ಕಡುಬುಗಳನ್ನು ಹಬೆಯಲ್ಲಿ ಬೇಯಿಸಬೇಕು. ಇದನ್ನು ಬೇಯಿಸಿಯೇ ತಿನ್ನಬೇಕು, ಬೇಯಿಸಿದ ನಂತರ ತೆಗೆದು ತುಪ್ಪ ಹಾಕಿ ತಿನ್ನಲು ಕೊಡಿ. ಬಿಸಿ-ಬಿಸಿ ಕಡುಬು ರುಚಿ ಇರುತ್ತದೆ. ಅಲ್ಲದೇ ತಣ್ಣಗಾದ ಮೇಲು ಸಹ ತುಂಬಾನೇ ಚೆನ್ನಾಗಿರುತ್ತದೆ, ಯಾವ ರೀತಿ ಬೇಕಾದರೂ ,ಯಾವಾಗ ಬೇಕಾದರೂ ಓಡಾಡಿಕೊಂಡು ತಿನ್ನಬಹುದು. ತುಪ್ಪದ ಜೊತೆ, ತೆಂಗಿನಕಾಯಿ ಚಟ್ನಿ ಒಳ್ಳೆಯ ಸೂಪರ್ ಕಾಂಬಿನೇಷನ್.
*ಹಬೆಯಲ್ಲಿ ಬೇಯಿಸಲು ಕುಕ್ಕರ್ / ಇಡ್ಲಿ ಬೇಯಿಸುವ ಪಾತ್ರೆ/ ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ , ಕಡುಬು ಜೋಡಿಸಿದ ತಟ್ಟೆ ಅಥವಾ ಬಟ್ಟಲನ್ನು ಅದರಲ್ಲಿ ಇಟ್ಟು ಬೇಯಿಸಿ. ತುಂಬಾ ಹೊತ್ತು ಬೇಯಿಸಿದರೆ ಕಡುಬುಗಳು ತುಂಬಾ ಗಟ್ಟಿಯಾಗುತ್ತವೆ. ಬೇಗ ತೆಗೆದರೆ ಒಳಗೆ ಬೆಂದಿರುವುದಿಲ್ಲ. ಆಗಾಗಿ ಸರಿಯಾಗಿ ಬೇಯಿಸಿಕೊಳ್ಳಿ.