Tuesday, October 23, 2007

Tomato Juice - ಟಮೋಟೋಹಣ್ಣಿನ ಶರಬತ್ತು:

ಟಮೋಟೋಹಣ್ಣಿನ ಶರಬತ್ತು:

ಸಾಮಗ್ರಿಗಳು:
ಟಮೋಟ ಹಣ್ಣುಗಳು
ನೀರು
ಚಿಟಿಕೆ ಉಪ್ಪು
ಸಕ್ಕರೆ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಜೇನುತುಪ್ಪ- ಅರ್ಧ ಚಮಚ

ವಿಧಾನ:

ನೀರಿಗೆ ಟಮೋಟೋ ಹಣ್ಣು,ಸಕ್ಕರೆ,ಉಪ್ಪು,ಜೇನುತುಪ್ಪ ಮತು ಏಲಕ್ಕಿ ಪುಡಿಯನ್ನು ಸೇರಿಸಿ,ಚೆನ್ನಾಗಿ ರುಬ್ಬಿಕೊಂಡು ಅದನ್ನು ಸೋಸಿದರೆ,ಟಮೋಟ ಶರಬತ್ತು/ಪಾನೀಯ ತಯಾರಾಗುತ್ತದೆ.
*ತಣ್ಣಗೆ ಇಷ್ಟಪಡುವವರು ತಣ್ಣನೆಯ ನೀರು ಬಳಸಿ ಅಥವಾ ಐಸ್ ಕ್ಯುಬ್ಸ್ ಹಾಕಿ. ಇದು ಆರೋಗ್ಯಕ್ಕೆ ಹಿತಕರ ಮತ್ತು ತಂಪು ಹಾಗೂ ಬಾಯಾರಿಕೆಗಳನ್ನು ನಿವಾರಿಸುತ್ತದೆ. ದಣಿವು ಆರಿಸುತ್ತದೆ. ತಯಾರಿಸಲು ಸಹ ಸುಲಭ. ಅಲ್ಲದೇ ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ಇದ್ದೇ ಇರುತ್ತವೆ. ನಮ್ಮಲ್ಲಿ ಮೊದಲಿಂದಲೂ ಯಾರ ಮನೆಗಾದರೂ ಬಿಸಿಲಿನಲ್ಲಿ ಹೋದ ತಕ್ಷಣ ಪಾನಕ, ಶರಬತ್ತು ಅಥವಾ ಮಜ್ಜಿಗೆ ಕೊಡುವ ವಾಡಿಕೆ ಇದೆ ಅಲ್ಲವೇ!ಅದೊಂದು ತರಹ ಸಂಪ್ರದಾಯವೇ ಆಗಿತ್ತು ಆಗ. ಆಯಾಸಕ್ಕೆ ಪರಿಹಾರ ನೀಡುವ ಅಂಶ ಅದರಲ್ಲಿದೆ.
*ಇದಕ್ಕೆ ಸ್ವಲ್ಪ ಕಾಳುಮೆಣಸಿನಪುಡಿ ಬೆರೆಸಿ ಕುಡಿದರೆ ಇನ್ನೂ ರುಚಿಯಾಗಿರುತ್ತದೆ.ಟಮೋಟದಲ್ಲಿ ಶಕ್ತಿವರ್ಧಕ ಅಂಶ ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಮತ್ತು ದೇಹಕ್ಕೂ ಒಳ್ಳೆಯದು.

Monday, October 22, 2007

Groundnut Burfi-ಕಡ್ಲೆಕಾಯಿ ಮಿಠಾಯಿ /ಬರ್ಫಿ

ಕಡ್ಲೆಕಾಯಿ ಬರ್ಫಿ:

ಸಾಮಗ್ರಿಗಳು:
ಒಂದು ಬಟ್ಟಲು ಕಡ್ಲೆಕಾಯಿಬೀಜ
ಒಂದು ಬಟ್ಟಲು ಅಥವಾ ರುಚಿಗೆ -ಬೆಲ್ಲ/ಸಕ್ಕರೆ

ವಿಧಾನ:
ಕಡ್ಲೆಕಾಯಿಬೀಜಗಳನ್ನು ಹುರಿದು, ತರಿ / ಸ್ವಲ್ಪ ದಪ್ಪಗೆ ಪುಡಿ ಮಾಡಿಕೊಳ್ಳಿ.
ಪಾತ್ರೆಗೆ ಸ್ವಲ್ಪ ನೀರು ಹಾಕಿ, ಬೆಲ್ಲ ಅಥವಾ ಸಕ್ಕರೆ ಹಾಕಿ, ಸ್ವಲ್ಪ ಎಳೆಪಾಕ ಬರುವಾಗ, ಕಡ್ಲೆಕಾಯಿಬೀಜದ ಪುಡಿಯನ್ನು ಹಾಕಿ, ಗೊಟಾಯಿಸುತ್ತಿರಿ, ಕೈ ಬಿಡದೇ ತಿರುಗಿಸಿ. ಗಟ್ಟಿಯಾಗುತ್ತಿದೆ ಎನಿಸಿದಾಗ, ಜಿಡ್ಡು ಸವರಿದ ತಟ್ಟೆ ಅಥವಾ ಮಣೆ ಮೇಲೆ ಹಾಕಿ, ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

Tuesday, October 16, 2007

Cucumber Simple Salad/ ಸೌತೆಕಾಯಿ ಸಲಾಡ್

ಸೌತೆಕಾಯಿ ಸಲಾಡ್:

ಸೌತೆಕಾಯಿಯನ್ನು ಹೇಗೆ ಬೇಕೋ ಆಗೆ ಹೆಚ್ಚಿಕೊಂಡು, ಅದಕ್ಕೆ ಉಪ್ಪು ಮತ್ತು ಮೆಣಸಿನಪುಡಿ ಉದುರಿಸಿ.

********************************

ಸೌತೆಕಾಯಿ ಸ್ಲೈಸ್:

ಹಸಿಮೆಣಸಿನಕಾರ ತಯಾರಿಸಲು-
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ರುಬ್ಬಿಕೊಳ್ಳಿ.

ಸೌತೆಕಾಯಿ ಉದ್ದಕ್ಕೆ ಸೀಳಿಕೊಂಡು ಉದ್ದಕ್ಕೆ ಕತ್ತರಿಸಿ. ಅದಕ್ಕೆ ಉಪ್ಪು ಮತ್ತು ಹಸಿಮೆಣಸಿನಕಾರವನ್ನು ಹಚ್ಚಿ. ಮೇಲೆ ನಿಂಬೆರಸ ಹಿಂಡಿ.
*ವೇಳೆ ಕೂಡ ಜಾಸ್ತಿ ತೆಗೆದುಕೊಳ್ಳುವುದಿಲ್ಲ,ತಯಾರಿಸುವುದು ಸುಲಭವಾದರೂ ರುಚಿ ಮಾತ್ರ ಬಹಳ ಚೆನ್ನಾಗಿರುತ್ತವೆ.

Aloo Peas Curry /ಆಲೂ-ಬಟಾಣಿ ಮಸಾಲೆ:


ಆಲೂ-ಬಟಾಣಿ ಮಸಾಲೆ:
ಬೇಕಾಗುವ ಸಾಮಗ್ರಿಗಳು;
ಬಟಾಣಿ
ಆಲೂಗೆಡ್ಡೆಯನ್ನು ಹೆಚ್ಚಿಕೊಳ್ಳಿ
ಹೆಚ್ಚಿದ ಈರುಳ್ಳಿ
ಒಂದು ಹಸಿಮೆಣಸಿನಕಾಯಿ
ಅಚ್ಚಖಾರದಪುಡಿ
ಧನಿಯ
ಜೀರಿಗೆಪುಡಿ
ಗರಂಮಸಾಲಾ
ಕೊತ್ತುಂಬರಿಸೊಪ್ಪು
ಎಣ್ಣೆ, ಜೀರಿಗೆ, ಕರಿಬೇವು
ಉಪ್ಪು ರುಚಿಗೆ

ವಿಧಾನ;
ಪಾತ್ರೆಗೆ ಎಣ್ಣೆಯನ್ನು ಹಾಕಿ, ಜೀರಿಗೆ ಹಾಕಿ ಚಟಪಟ ಅಂದಾಗ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ. ಎರಡು ನಿಮಿಷದ ನಂತರ ಆಲೂಗೆಡ್ಡೆಯನ್ನು ಹಾಕಿ. ಒಂದೆರಡು ನಿಮಿಷ ಹುರಿದು ಬಟಾಣಿ ಕಾಳುಗಳನ್ನು ಹಾಕಿ,ಅದರ ಜೊತೆಗೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಐದಾರು ನಿಮಿಷ ಹುರಿದು,ಕಾರದಪುಡಿ,ಧನಿಯ ಮತ್ತು ಜೀರಿಗೆಪುಡಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ. ಎಷ್ಟು ಅಗತ್ಯವೋ ಅಷ್ಟು ಮಾತ್ರ ನೀರನ್ನು ಹಾಕಿ,ಬಟಾಣಿ ಮತ್ತು ಆಲೂಗೆಡ್ಡೆ ಬೇಯುವವರೆಗೆ ಬೇಯಿಸಿ, ಕೊನೆಯಲ್ಲಿ ಕೊತ್ತುಂಬರಿಸೊಪ್ಪು ಮತ್ತು ಗರಂಮಸಾಲ ಬೆರೆಸಿ. ಒಂದು ನಿಮಿಷದ ನಂತರ ಇಳಿಸಿ,ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ,ಈ ಮಸಾಲೆಯನ್ನು ಚಪಾತಿ ಮತ್ತು ಪರೋಟದೊಂದಿಗೆ ನೀಡಬಹುದು.
* ಹಸಿಬಟಾಣಿ ಉಪಯೋಗಿಸುವವರು ನೇರವಾಗಿ ಒಗ್ಗರಣೆಗೆ ಸೇರಿಸಿ.
* ಒಣಗಿದ ಬಟಾಣಿ ಉಪಯೋಗಿಸುವವರು ನಾಲ್ಕು-ಐದು ಗಂಟೆ ನೆನೆಸಿ.

Friday, October 12, 2007

Chapathi - ಚಪಾತಿ

ಚಪಾತಿ:

ಸಾಮಗ್ರಿಗಳು:
ಗೋಧಿಹಿಟ್ಟು
ಸ್ವಲ್ಪ ಹಾಲು
ಎಣ್ಣೆ ಎರಡು ಚಮಚ
ಉಪ್ಪು

ವಿಧಾನ:

ಗೋಧಿಹಿಟ್ಟಿಗೆ, ಉಪ್ಪು , ಎಣ್ಣೆ ಹಾಕಿ ಬೆರೆಸಿ, ಅದಕ್ಕೆ ಹಾಲು ಮತ್ತು ಬೇಕಾಗುವಷ್ಟು ಮಾತ್ರ ನೀರನ್ನು ಹಾಕಿಕೊಂಡು ಕಲೆಸಿ. ಅರ್ಧ/ ಒಂದು ಗಂಟೆ ಬಿಟ್ಟು ಚಪಾತಿ ಲಟ್ಟಿಸಿ. ಕಾದ ತವಾ ಮೇಲೆ ಬೇಯಿಸಿ, ಎರಡು ಬದಿಯೂ ಎಣ್ಣೆ ಹಾಕಿ. ಇದು ಎಲ್ಲಾ ತರಹದ ಗೊಜ್ಜು, ಸಾರು, ಚಟ್ನಿ ಮತ್ತು ಪಲ್ಯ ಎಲ್ಲಕ್ಕೂ ಸೇರಿಸಿಕೊಂಡು ತಿನ್ನಲು ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ಹಿತಕರ ಮತ್ತು ಪೌಷ್ಠಿಕವಾಗಿಯೂ ಇರುತ್ತದೆ.

Thursday, October 11, 2007

Baadam Puris/almond puris/ಬಾದಾಮಿ ಸಿಹಿ ಪೂರಿ

ಬಾದಾಮಿ ಸಿಹಿ ಪೂರಿ:
ಸಾಮಗ್ರಿಗಳು:

ಬಾದಾಮಿ - ಒಂದು ಕಪ್
ಮೈದಾಹಿಟ್ಟು - ಒಂದು ಬಟ್ಟಲು
ಡಾಲ್ಡ / ಬೆಣ್ಣೆ / ತುಪ್ಪ- ಸ್ವಲ್ಪ
ಕೇಸರಿಬಣ್ಣ ಚಿಟಿಕೆ
ಚಿಟಿಕೆ ಉಪ್ಪು
ಸಕ್ಕರೆ - ಎರಡು ಕಪ್
ಕೊಬ್ಬರಿತುರಿ ಸ್ವಲ್ಪ
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

-ಮೊದಲು ಬಾದಾಮಿಯನ್ನು ಪೇಸ್ಟ್ ತರಹ ತಯಾರಿಸಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬಬೇಡಿ.
-ಬೇರೆ ಪಾತ್ರೆಯಲ್ಲಿ ಸಕ್ಕರೆ ಮತ್ತು ಒಂದು ಲೋಟ ನೀರು ಹಾಕಿ, ಅದನ್ನು ಕುದಿಸಿ, ಸ್ವಲ್ಪ ಗಟ್ಟಿ ಪಾಕ ಬಂದ ನಂತರ ಅದನ್ನು ತೆಗೆದಿಡಿ.
-ಮೈದಾ,ಡಾಲ್ಡ,ಕೇಸರಿಬಣ್ಣ ಮತ್ತು ಉಪ್ಪು ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಅರ್ಧಗಂಟೆ ಮುಚ್ಚಿಡಿ. ನಂತರ ಹಿಟ್ಟಿನಿಂದ ದಪ್ಪನೆಲ್ಲಿಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಪೂರಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಅದಕ್ಕೆ ಬಾದಾಮಿ ಪೇಸ್ಟ್ ಅನ್ನು ಸವರಿ ಪೂರಿಯನ್ನು ಮೊದಲು ಮಧ್ಯಕ್ಕೆ ಮಡಿಸಿ,ಮತ್ತೆ ಮಡಿಸಿ ಅಂದರೆ ಅದು ತ್ರಿಕೋನಾಕಾರದಲ್ಲಿ ಬರಬೇಕು.ಅದಕ್ಕೆ ತುದಿಗೆ ಒಂದು ಲವಂಗ ಸಿಕ್ಕಿಸಿ, ಆಮೇಲೆ ಅದನ್ನು ಕಾದಿರುವ ಎಣ್ಣೆಯಲ್ಲಿ ತೆಗೆದು ಹಾಕಿ.ಬೇಯಿಸಿ, ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ಬೇಗ ಬೇಯುತ್ತದೆ, ಆಗಾಗಿ ಉರಿ ನೋಡಿಕೊಳ್ಳಿ. ಎರಡು ಬದಿ ಚೆನ್ನಾಗಿ ಬೇಯಿಸಿ, ಬಂಗಾರದ ಬಣ್ಣ ಬಂದ ನಂತರ ಬೇಗ ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ತಕ್ಷಣವೇ ಸಕ್ಕರೆ ಪಾಕಕ್ಕೆ ಹಾಕಿ ತೆಗೆದು, ದೊಡ್ಡ ತಟ್ಟೆಯಲ್ಲಿ ಜೋಡಿಸಿ. ತಕ್ಷಣ ಹಾಕಿದರೆ ಸಕ್ಕರೆಪಾಕವನ್ನು ಅದು ಹೀರಿಕೊಳ್ಳುತ್ತದೆ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ತಿನ್ನಬಹುದು ಅಥವಾ ಬಿಸಿ ಇರುವಾಗಲು ನೀಡಬಹುದು, ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.
*ಕೊಬ್ರಿ ತುರಿಗೆ ಬಣ್ಣ ಸೇರಿಸಿ ಕಲರ್ ಫುಲ್ ಆಗಿಯೂ ತಯಾರಿಸಬಹುದು. ಕೊಬ್ಬರಿತುರಿ ಬೇಕಾದರೆ ಹಾಕಬಹುದು ನಿಮ್ಮಿಷ್ಟ.
*ಪೂರಿಯ ಮೇಲೆ ಬೇಕೆನಿಸಿದರೆ ಒಂದೊಂದು ಬಾದಾಮಿ ಇಟ್ಟು ಸರ್ವ್ ಮಾಡಬಹುದು.
*ಇದು ಬೇಗ ಹಾಳಾಗುವುದಿಲ್ಲ. ತಕ್ಷಣವೇ ತಿನ್ನಬೇಕು ಅಂತ ಇಲ್ಲ. ಎರಡು-ಮೂರು ದಿನ ಕೂಡ ಇಟ್ಟು ತಿನ್ನಬಹುದು.

Wednesday, October 10, 2007

Karbujahannina Seekarane /Muskmelon delight

ಕರಬೂಜಹಣ್ಣಿನ ಸೀಕರಣೆ:
ಬೇಕಾಗುವ ಸಾಮಗ್ರಿಗಳು:
ಕರಬೂಜಹಣ್ಣು
ಬೆಲ್ಲದಪುಡಿ ರುಚಿಗೆ
ಅವಲಕ್ಕಿ -2 ಟೇಬಲ್ ಚಮಚ
ಹಾಲು - 1/2 ಕಪ್
ತೆಂಗಿನಹಾಲು-1/2 ಕಪ್
ಏಲಕ್ಕಿಪುಡಿ- ಸ್ವಲ್ಪ
ಜೇನುತುಪ್ಪ-2ಟೇಬಲ್ ಚಮಚ

ವಿಧಾನ:
ಕರಬೂಜ ಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಅವಲಕ್ಕಿ,ಬೆಲ್ಲದಪುಡಿ,ತೆಂಗಿನಗಟ್ಟಿಹಾಲು,ಹಾಲು,ಏಲಕ್ಕಿಪುಡಿ ಮತ್ತು ಜೇನುತುಪ್ಪವನ್ನು ಹಾಕಿ, ಚೆನ್ನಾಗಿ ಬೆರೆಸಿ, ಸರ್ವ್ ಮಾಡಿ. ತಣ್ಣಗೆ ಇಷ್ಟಪಡುವವರು ಫ್ರಿಡ್ಜ್ ನಲ್ಲಿಟ್ಟು ತಿನ್ನಬಹುದು.

Popular Posts